ಮೌಲ್ಯದಲ್ಲಿ ಅಲ್ಲ, ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆಯಲ್ಲಿ US ಡಾಲರ್, ಯುರೋವನ್ನು ಹಿಂದಿಕ್ಕಿದ ಭಾರತದ ರೂಪಾಯಿ

ಸಾಂದರ್ಭಿಕ ಚಿತ್ರ | Photo Credit : magnific.com
ಇಂಡೋನೇಷ್ಯಾದ ಜಕಾರ್ತದಲ್ಲಿ ಬ್ಯಾಂಕ್ ಇಂಡೋನೇಷ್ಯಾ ಆಯೋಜಿಸಿದ್ದ 'ಗ್ಲೋಬಲ್ ಕ್ಯಾಶ್ ಮ್ಯಾನೇಜ್ಮೆಂಟ್ 2026' ಸಮಾವೇಶದಲ್ಲಿ ಮಾತನಾಡಿದ RBI ಡೆಪ್ಯುಟಿ ಗವರ್ನರ್ ಶಿರೀಶ್ ಚಂದ್ರ ಮುರ್ಮು, ಭಾರತದ ರೂಪಾಯಿ ಮೌಲ್ಯದ ವಿಚಾರದಲ್ಲಲ್ಲದಿದ್ದರೂ, ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆಯಲ್ಲಿ US ಡಾಲರ್ ಹಾಗೂ ಯುರೋವನ್ನು ಹಿಂದಿಕ್ಕಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಭಾರತದಲ್ಲಿ 2 ರೂಪಾಯಿಯಿಂದ ಹಿಡಿದು 2,000 ರೂಪಾಯಿ ಮುಖಬೆಲೆಯವರೆಗೆ ಒಟ್ಟು 176 ಶತಕೋಟಿ ಬ್ಯಾಂಕ್ ನೋಟುಗಳು ಚಲಾವಣೆಯಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಾಗತಿಕ ಬ್ಯಾಂಕಿಂಗ್ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ 'ಕ್ಯಾಶ್ ಪ್ಯಾರಡಾಕ್ಸ್' ಬಗ್ಗೆ ಬೆಳಕು ಚೆಲ್ಲಿದ್ದಾರೆ. ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ದಿನನಿತ್ಯದ ವಹಿವಾಟುಗಳಲ್ಲಿ ನಗದಿನ ಬಳಕೆ ಕಡಿಮೆಯಾಗುತ್ತಿದೆ. ಹೀಗಿದ್ದರೂ, ಚಲಾವಣೆಯಲ್ಲಿರುವ ನಗದಿನ ಪ್ರಮಾಣವು ಎರಡಂಕಿಯ ದರದಲ್ಲಿ ಬೆಳೆಯುತ್ತಲೇ ಇದೆ.
ಚಲಾವಣೆಯಲ್ಲಿರುವ ಭಾರತದ ನೋಟುಗಳು ಎಷ್ಟು?
RBI ಡೆಪ್ಯುಟಿ ಗವರ್ನರ್ ಶಿರೀಶ್ ಚಂದ್ರ ಮುರ್ಮು ಅವರ ಪ್ರಕಾರ, ಭಾರತದ ರೂಪಾಯಿ ನೋಟುಗಳ ಸಂಖ್ಯೆ ಅಮೆರಿಕದ ಡಾಲರ್ ಮತ್ತು ಯುರೋ ನೋಟುಗಳ ಸಂಖ್ಯೆಗಿಂತ ಬಹಳಷ್ಟು ಹೆಚ್ಚಾಗಿದೆ. ವಿವಿಧ ಮುಖಬೆಲೆಯ ಒಟ್ಟು 176 ಶತಕೋಟಿ ನೋಟುಗಳು ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿವೆ.
"ಕಳೆದ ಕೆಲವು ವರ್ಷಗಳಿಂದ ನಾವು ವರ್ಷಕ್ಕೆ ಆರು ವಿಭಿನ್ನ ಮುಖಬೆಲೆಯ 2,800 ರಿಂದ 3,000 ಕೋಟಿ ಬ್ಯಾಂಕ್ ನೋಟುಗಳನ್ನು ಮುದ್ರಿಸುತ್ತಿದ್ದೇವೆ ಹಾಗೂ ವರ್ಷಕ್ಕೆ ಅಂದಾಜು 2,100 ಕೋಟಿ ಹಳೆಯ ನೋಟುಗಳನ್ನು ವಿಲೇವಾರಿ ಮಾಡುತ್ತಿದ್ದೇವೆ" ಎಂದಿದ್ದಾರೆ ಮುರ್ಮು.
RBI ನೀಡಿರುವ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ಚಲಾವಣೆಯಲ್ಲಿರುವ 176 ಶತಕೋಟಿ ನೋಟುಗಳಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳೇ ಅಗ್ರಸ್ಥಾನದಲ್ಲಿವೆ. ಆಗಸ್ಟ್ 7ರ ವೇಳೆಗೆ ದೇಶದಲ್ಲಿ ಒಟ್ಟು 36.29 ಲಕ್ಷ ಕೋಟಿ ರೂಪಾಯಿ ಮೌಲ್ಯದ 500 ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದವು.
500 ರೂಪಾಯಿ ನೋಟುಗಳ ನಂತರದ ಸ್ಥಾನದಲ್ಲಿ 100 ರೂಪಾಯಿ ನೋಟುಗಳಿದ್ದು, ಇವುಗಳ ಸಂಖ್ಯೆಯೂ ಹೆಚ್ಚಾಗಿದೆ. ಇನ್ನು 2,000 ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ ಎಂದು RBI ದತ್ತಾಂಶ ತಿಳಿಸಿದೆ.
ಈ ಕುರಿತು ಮಾತನಾಡಿದ ಮುರ್ಮು, "ಈ ಬೃಹತ್ ಸಂಖ್ಯೆಯು ನಾವು ಪ್ರತಿದಿನ ನಿರ್ವಹಿಸುವ ನಗದು ನಿರ್ವಹಣಾ ವ್ಯವಸ್ಥೆ ಎಷ್ಟು ದೊಡ್ಡದು ಎಂಬುದನ್ನು ತೋರಿಸುತ್ತದೆ" ಎಂದಿದ್ದಾರೆ.
ಭಾರತವು ತನ್ನ ನೋಟುಗಳನ್ನು ದೇಶದ ನಾಲ್ಕು ನಾಣ್ಯ ಮತ್ತು ನೋಟು ಮುದ್ರಣಾಲಯಗಳಲ್ಲಿ ಮುದ್ರಿಸುತ್ತದೆ. ಇವು ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿವೆ.
ಭಾರತದಲ್ಲಿ 176 ಶತಕೋಟಿ ನೋಟುಗಳು ಚಲಾವಣೆಯಲ್ಲಿದ್ದರೆ, ಅಮೆರಿಕದ ಡಾಲರ್ ನೋಟುಗಳ ಸಂಖ್ಯೆ ಅಂದಾಜು 56 ಶತಕೋಟಿ ಮಾತ್ರ ಎಂದು ಮುರ್ಮು ತಿಳಿಸಿದ್ದಾರೆ. ಅಂದರೆ ಭಾರತದ ರೂಪಾಯಿ ನೋಟುಗಳ ಸಂಖ್ಯೆ ಅಮೆರಿಕದ ಡಾಲರ್ ಗಿಂತ ಮೂರು ಪಟ್ಟು ಹೆಚ್ಚಾಗಿದೆ.
ಇನ್ನೊಂದೆಡೆ, ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ ಪ್ರಕಾರ, ಪ್ರಸ್ತುತ ಸುಮಾರು 30 ಶತಕೋಟಿ ಯುರೋ ನೋಟುಗಳು ಚಲಾವಣೆಯಲ್ಲಿವೆ. ಯುರೋ ನೋಟುಗಳಲ್ಲಿ ಎರಡು ಸರಣಿಗಳಿದ್ದು, ಮೊದಲ ಸರಣಿಯಲ್ಲಿ 5 ಯುರೋ, 10 ಯುರೋ, 20 ಯುರೋ, 50 ಯುರೋ, 100 ಯುರೋ, 200 ಯುರೋ ಮತ್ತು 500 ಯುರೋ ಸೇರಿದಂತೆ ಏಳು ಮುಖಬೆಲೆಯ ನೋಟುಗಳಿದ್ದವು. ಆದರೆ ಯುರೋಪಾ ಸರಣಿ ಎಂಬ ಎರಡನೇ ಸರಣಿಯಲ್ಲಿ 500 ಯುರೋ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದ್ದು, ಪ್ರಸ್ತುತ ಆರು ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿವೆ.
►ಅಷ್ಟಕ್ಕೂ ಇಷ್ಟೊಂದು ದೊಡ್ಡ ವ್ಯತ್ಯಾಸ ಯಾಕಿದೆ?
ಭಾರತದಲ್ಲಿ ಕಡಿಮೆ ಮುಖಬೆಲೆಯ ನೋಟುಗಳ ಬಳಕೆ ಹೆಚ್ಚಾಗಿರುವುದೇ ಈ ದೊಡ್ಡ ಸಂಖ್ಯೆಗೆ ಮುಖ್ಯ ಕಾರಣ.
"ಈ ಹೋಲಿಕೆಯಲ್ಲಿ ಒಂದು ವಿಷಯವನ್ನು ಗಮನಿಸಬೇಕು. ನಮ್ಮ ದೇಶದಲ್ಲಿ ಕಡಿಮೆ ಮೌಲ್ಯದ ನೋಟುಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಒಂದೇ ಮೌಲ್ಯದ ವಹಿವಾಟಿಗೆ ಹೆಚ್ಚಿನ ಸಂಖ್ಯೆಯ ನೋಟುಗಳು ಕೈಬದಲಾಗುತ್ತವೆ" ಎಂದು ಮುರ್ಮು ಹೇಳಿದ್ದಾರೆ.
►ಭಾರತದಲ್ಲಿ ನೋಟುಗಳ ಅಗತ್ಯವನ್ನು ನಿರ್ಧರಿಸುವುದು ಹೇಗೆ?
RBI ನೋಟುಗಳನ್ನು ಮುದ್ರಿಸಲು, ವಹಿವಾಟು ಮತ್ತು ಹಳೆಯ ನೋಟುಗಳ ಬದಲಾವಣೆಯ ಅಗತ್ಯವನ್ನು ಆಧರಿಸಿ ಪ್ರತಿ ವರ್ಷ ಮುಂದಿನ ಐದು ವರ್ಷಗಳ ನಗದು ಬೇಡಿಕೆಯ ಅಂದಾಜನ್ನು ಸಿದ್ಧಪಡಿಸುತ್ತದೆ.
"GDP ಬೆಳವಣಿಗೆ, ಬಡ್ಡಿ ದರಗಳು, ಆಹಾರ ಹಣದುಬ್ಬರ ಮತ್ತು ಡಿಜಿಟಲ್ ಪಾವತಿಗಳ ಅಳವಡಿಕೆಯ ವೇಗವನ್ನು ಆಧರಿಸಿ ವಹಿವಾಟಿನ ನಗದು ಬೇಡಿಕೆಯನ್ನು ಅಂದಾಜಿಸಲಾಗುತ್ತದೆ. ಇನ್ನು ಹಳೆಯ ನೋಟುಗಳ ಬದಲಾವಣೆಯ ಅಗತ್ಯವೇ ಬೇರೆ. ಇದು ಹರಿದ ಅಥವಾ ಹಾಳಾದ ನೋಟುಗಳನ್ನು ಹಿಂಪಡೆದು, ಸಾರ್ವಜನಿಕರ ಕೈಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ನೋಟುಗಳನ್ನಷ್ಟೇ ಉಳಿಸುವ ಪ್ರಕ್ರಿಯೆಯಾಗಿದೆ" ಎಂದು ಮುರ್ಮು ವಿವರಿಸಿದ್ದಾರೆ.
ದೇಶದಲ್ಲಿ ಒಂದು ವಿಚಿತ್ರ ವಿರೋಧಾಭಾಸ ಕಂಡುಬರುತ್ತಿದೆ. ವೈಯಕ್ತಿಕ ವಹಿವಾಟುಗಳಲ್ಲಿ ನಗದಿನ ಬಳಕೆ ಕಡಿಮೆಯಾಗುತ್ತಿದ್ದರೂ, ಚಲಾವಣೆಯಲ್ಲಿರುವ ಒಟ್ಟು ನಗದಿನ ಪ್ರಮಾಣ ಮಾತ್ರ ಎರಡಂಕಿಯ ದರದಲ್ಲಿ ಬೆಳೆಯುತ್ತಲೇ ಇದೆ.
RBI ಡೇಟಾ ಪ್ರಕಾರ, ಡಿಜಿಟಲ್ ಪಾವತಿಗಳ ಬಳಕೆ ಹೆಚ್ಚುತ್ತಿದ್ದರೂ ಚಲಾವಣೆಯಲ್ಲಿರುವ ನಗದು ಪ್ರಮಾಣ ಏರಿಕೆಯಾಗುತ್ತಲೇ ಇದೆ. 2025-26ರ ಆರ್ಥಿಕ ವರ್ಷದ ಅಂತ್ಯದಲ್ಲಿದ್ದ 41.66 ಲಕ್ಷ ಕೋಟಿ ರೂಪಾಯಿಗೆ ಹೋಲಿಸಿದರೆ, 2026 ಜುಲೈ 31ರ ವೇಳೆಗೆ ಈ ಪ್ರಮಾಣ 42.76 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವೀಸ್ ಪ್ರಕಾರ, ಚಿನ್ನಾಭರಣ ಮತ್ತು ರಿಯಲ್ ಎಸ್ಟೇಟ್ ನಂತಹ ದೊಡ್ಡ ಮಟ್ಟದ ವಹಿವಾಟುಗಳಲ್ಲಿ ಇಂದಿಗೂ ನಗದನ್ನೇ ಹೆಚ್ಚಾಗಿ ಬಳಸಲಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ.
ಸೈಬರ್ ವಂಚನೆಗಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅನೇಕ ಹಿರಿಯ ನಾಗರಿಕರು ಡಿಜಿಟಲ್ ಪಾವತಿಗಿಂತ ನಗದು ಬಳಕೆಯನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ. ಇದರ ಜೊತೆಗೆ ಪ್ರತಿ ವರ್ಷ ಚುನಾವಣೆಗಳ ಸಮಯದಲ್ಲಿ ನಗದಿಗೆ ಬೇಡಿಕೆ ಹೆಚ್ಚಾಗುವುದರಿಂದ, ಭೌತಿಕ ನೋಟುಗಳ ಅಗತ್ಯ ಹಾಗೆಯೇ ಉಳಿದುಕೊಂಡಿದೆ ಎಂದು ಸಬ್ನವೀಸ್ ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲ ಕಾರಣಗಳಿಂದಾಗಿ ಮುಂಬರುವ ದಿನಗಳಲ್ಲಿ ನಗದು ಬೇಡಿಕೆಯನ್ನು ನಿಖರವಾಗಿ ಅಂದಾಜಿಸುವುದು ಕಷ್ಟಕರವಾಗಿದ್ದು, ನೋಟುಗಳ ಮುದ್ರಣ ಮತ್ತು ವಿತರಣಾ ಸಾಮರ್ಥ್ಯದ ಯೋಜನೆಯಲ್ಲಿ RBIಗೆ ಸವಾಲುಗಳನ್ನು ತಂದೊಡ್ಡಿದೆ ಎಂದು ಮುರ್ಮು ಹೇಳಿದ್ದಾರೆ.
ಸೌಜನ್ಯ: firstpost.com






