25ರೊಳಗಿನ ಶೇ. 40ರಷ್ಟು ಭಾರತೀಯ ಪದವೀಧರರು ನಿರುದ್ಯೋಗಿಗಳು: ವರದಿ

ಸಾಂದರ್ಭಿಕ ಚಿತ್ರ | Photo Credit : freepik
ವರದಿ ಹೇಳಿರುವ ಪ್ರಕಾರ ಯುವಜನಾಂಗದಲ್ಲಿ 26.3 ಕೋಟಿಯಷ್ಟು ಜನಸಮೂಹ ಶಿಕ್ಷಣ ಪಡೆಯುತ್ತಿಲ್ಲ ಮತ್ತು ಸಂಭಾವ್ಯ ಕಾರ್ಯಪಡೆಯ ಭಾಗವಾಗಿದ್ದಾರೆ.
ನಾಲ್ಕು ದಶಕಗಳಿಂದ ಶಿಕ್ಷಣದ ದಾಖಲಾತಿ ತೀವ್ರವಾಗಿ ಏರಿರುವ ಹೊರತಾಗಿಯೂ ನಿರುದ್ಯೋಗದ ಪ್ರಮಾಣ ಕಡಿಮೆಯಾಗಿಲ್ಲ. 15ರಿಂದ 25 ವರ್ಷದ ವಯಸ್ಸಿನವರಲ್ಲಿ ನಿರುದ್ಯೋಗವು ಸುಮಾರು ಶೇ 40ರಷ್ಟಿದ್ದರೆ, 25ರಿಂದ 29 ವರ್ಷ ವಯಸ್ಸಿನವರಲ್ಲಿ ಶೇ 20ರಷ್ಟಿದೆ ಎಂದು ಅಝೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಬಹಿರಂಗವಾಗಿದೆ.
ಅಝೀಂ ಪ್ರೇಮ್ಜಿ ಬಿಡುಗಡೆ ಮಾಡಿದ 2026ರ ವೃತ್ತಿಪರ ಭಾರತದ ಸ್ಥಿತಿ (State of Working India 2026) ವರದಿ ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಯ ನಡುವಿನ ಅಂತರವನ್ನು ಎತ್ತಿ ತೋರಿಸಿದೆ. ಭಾರತದ ಯುವ ಜನಾಂಗ ಮುಖ್ಯವಾಗಿ 15ರಿಂದ 29ರ ನಡುವಿನ ವಯಸ್ಸಿನವರು 36.7 ಕೋಟಿಯಷ್ಟಿದ್ದಾರೆ. ಅಂದರೆ ಜಾಗತಿಕ ಕಾರ್ಮಿಕ ವಯಸ್ಸಿನ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿದ್ದಾರೆ. ವರದಿ ಹೇಳಿರುವ ಪ್ರಕಾರ ಯುವಜನಾಂಗದಲ್ಲಿ 26.3 ಕೋಟಿಯಷ್ಟು ಜನಸಮೂಹ ಶಿಕ್ಷಣ ಪಡೆಯುತ್ತಿಲ್ಲ ಮತ್ತು ಸಂಭಾವ್ಯ ಕಾರ್ಯಪಡೆಯ ಭಾಗವಾಗಿದ್ದಾರೆ. 28 ವರ್ಷಗಳ ಸರಾಸರಿ ವಯಸ್ಸಿನೊಂದಿಗೆ ಭಾರತವು ಜಾಗತಿಕವಾಗಿ ಅತ್ಯಂತ ಕಿರಿಯ ಅರ್ಥವ್ಯವಸ್ಥೆಯಲ್ಲಿ ಒಂದಾಗಿದೆ. ಆದರೆ ಈ ಜನಸಂಖ್ಯಾ ಲಾಭಾಂಶವು 2030ರ ನಂತರ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಹೀಗಾಗಿ ಮುಂದಿನ ದಶಕದಲ್ಲಿ ವೇಗವಾಗಿ ಉದ್ಯೋಗ ಸೃಷ್ಟಿಯ ಅಗತ್ಯವನ್ನು ಒತ್ತಿ ಹೇಳುತ್ತದೆ.
ಶಿಕ್ಷಣದಿಂದ ಉದ್ಯೋಗದ ಕಡೆಗೆ ಬದಲಾವಣೆ ಪ್ರಮುಖ ಸವಾಲಾಗಿ ಉಳಿದಿದೆ. ವರದಿ ಹೇಳುವ ಪ್ರಕಾರ 2023ರಲ್ಲಿ 20ರಿಂದ 29ರ ವಯಸ್ಸಿನೊಳಗಿನ 6.5 ಕೋಟಿ ಪದವೀಧದರರಲ್ಲಿ 1.1 ಕೋಟಿ ಜನರು ನಿರುದ್ಯೋಗಿಗಳಾಗಿದ್ದರು. 15ರಿಂದ 25 ವರ್ಷದ ವಯಸ್ಸಿನವರಲ್ಲಿ ನಿರುದ್ಯೋಗವು ಸುಮಾರು ಶೇ 40ರಷ್ಟಿದ್ದರೆ, 25ರಿಂದ 29 ವರ್ಷ ವಯಸ್ಸಿನವರಲ್ಲಿ ಶೇ 20ರಷ್ಟಿದೆ. ಯುವ ಪುರುಷ ಪದವೀಧರರಲ್ಲಿ ಶೇ 50ರಷ್ಟು ಜನರು ನಿರುದ್ಯೋಗಿಗಳೆಂದು ವರದಿ ಮಾಡಿದ ಒಂದು ವರ್ಷದೊಳಗೆ ಉದ್ಯೋಗ ಕಂಡುಕೊಳ್ಳುತ್ತಾರೆ. ಆದರೆ, ಶೇ 7ರಷ್ಟು ಜನರು ಮಾತ್ರ ಶಾಶ್ವತ ಸಂಬಳದ ಕೆಲಸ ಪಡೆಯುತ್ತಿದ್ದಾರೆ. 1983ರಿಂದ ಪದವೀಧರ ನಿರುದ್ಯೋಗ ದರಗಳು ಶೇ 35ರಿಂದ ಶೇ 40ರ ನಡುವೆ ಹೆಚ್ಚು ಏರಿಳಿತ ಕಾಣದೆ ನಿಂತಿವೆ ಎಂದು ವರದಿ ಹೇಳಿದೆ.
ನಾಲ್ಕು ದಶಕಗಳಲ್ಲಿ ಉನ್ನತ ಶಿಕ್ಷಣ ದಾಖಲಾತಿ ತೀವ್ರವಾಗಿ ಏರಿದೆ. ಸಮಾನ ತಲಾ ಆದಾಯದ ದೇಶಗಳಿಗೆ ಹೋಲಿಸಿದರೆ, ಭಾರತದ ಶೇ 28ರಷ್ಟು ಶಿಕ್ಷಣ ದಾಖಲಾತಿ ಸಮನಾಗಿದೆ. ಯುವತಿಯರಲ್ಲಿ 1983ರಲ್ಲಿ ಶೇ 38ರಷ್ಟಿದ್ದ ದಾಖಲಾತಿ 2023ರಲ್ಲಿ ಶೇ 68ಕ್ಕೆ ಏರಿದೆ. ಆದರೆ ಅದೇ ಅವಧಿಯಲ್ಲಿ ಪುರುಷರ ದಾಖಲಾತಿ ಶೇ 49ರಿಂದ ಶೇ 74ಕ್ಕೆ ಏರಿದೆ. 2011 ಮತ್ತು 2023ರ ನಡುವೆ ಪರಿಶಿಷ್ಟ ಜಾತಿ (ಎಸ್ಸಿ) ದಾಖಲಾತಿ ಶೇ 11ರಿಂದ ಶೇ 26 ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ದಾಖಲಾತಿ ಶೇ 8ರಿಂದ ಶೇ 21ಕ್ಕೆ ಏರಿದೆ. ಆದರೆ ಎರಡೂ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ಆದರೆ ಇತ್ತೀಚೆಗೆ ಯುವಕರಲ್ಲಿ ಶಿಕ್ಷಣ ಪ್ರಮಾಣ ಕುಸಿತ ಕಾಣುತ್ತಿದೆ. 2017ರಲ್ಲಿ ಶೇ 38ರಷ್ಟು ಯುವಕರು ಶಿಕ್ಷಣ ಪಡೆದರೆ 2024ರಲ್ಲಿ ಪ್ರಮಾಣ ಶೇ 34ಕ್ಕೆ ಇಳಿದಿದೆ. ಈ ಪುರುಷರಲ್ಲಿ ಶೇ 72ರಷ್ಟು ಜನರು ತಮ್ಮ ಮನೆಯ ಆದಾಯವನ್ನು ಬೆಂಬಲಿಸುವ ಅಗತ್ಯದಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ತೊರೆದಿರುವುದು ಪತ್ತೆಯಾಗಿದೆ.
ಶಿಕ್ಷಣದ ಪ್ರಮಾಣ ಹೆಚ್ಚಾಗಲು ಖಾಸಗಿ ಸಂಸ್ಥೆಗಳ ವ್ಯಾಪಕ ಏರಿಕೆ ಮುಖ್ಯ ಕಾರಣವಾಗಿದೆ. ಉದಾರೀಕರಣದ ನಂತರ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಮಾಣ 1,644 ರಿಂದ 69,534 ಕ್ಕೇರಿದೆ. ಪ್ರತಿ ಲಕ್ಷ ಯುವಜನರಿಗೆ ಕಾಲೇಜುಗಳ ಸಾಂದ್ರತೆಯು 2010ರ 29ರಿಂದ 2021ರಲ್ಲಿ 45ಕ್ಕೆ ಏರಿದೆ. ಆದರೆ ವರದಿಯಲ್ಲಿ ಅದ್ಯಾಪಕರ ತೀವ್ರ ಕೊರತೆಯನ್ನು ಎತ್ತಿ ತೋರಿಸಿದೆ. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಆಯೋಗದ ಪ್ರಕಾರ ಪ್ರತಿ ಅಧ್ಯಾಪಕರಿಗೆ 15ರಿಂದ 20 ವಿದ್ಯಾರ್ಥಿಗಳಿರಬೇಕು. ಆದರೆ ಖಾಸಗಿ ಕಾಲೇಜುಗಳಲ್ಲಿ ಪ್ರತಿ ಶಿಕ್ಷಕರಿಗೆ 28 ವಿದ್ಯಾರ್ಥಿಗಳಿದ್ದರೆ, ಸರ್ಕಾರಿ ಕಾಲೇಜುಗಳಲ್ಲಿ 47 ವಿದ್ಯಾರ್ಥಿಗಳಿದ್ದಾರೆ.
ವೃತ್ತಿಪರ ತರಬೇತಿಯಲ್ಲೂ ಇಂತಹುದೇ ಪ್ರವೃತ್ತಿ ಕಂಡುಬಂದಿದೆ. ಕೈಗಾರಿಕಾ ತರಬೇತಿ ಕೇಂದ್ರಗಳ (ಐಟಿಐ) ಸಂಖ್ಯೆ ಶೇ 300ರಷ್ಟು ಏರಿಕೆಯಾಗಿವೆ. 2005ರಲ್ಲಿ 3,674ರಷ್ಟು ಇದ್ದ ಪ್ರಮಾಣ 2025ರಲ್ಲಿ 14,582ಕ್ಕೇರಿದೆ. ಖಾಸಗಿ ಐಟಿಐಗಳ ಸಂಖ್ಯೆ ಶೇ 80ರಷ್ಟಿದೆ. ಈ ಪ್ರಮಾಣದ ವಿಸ್ತರಣೆಯಿಂದ ಗುಣಮಟ್ಟ ಕಳಪೆಯಾಗಿದೆ. ಖಾಸಗಿ ಐಟಿಐಗಳ ಕಳಪೆ ಗುಣಮಟ್ಟದಿಂದಾಗಿ ಕಳಪೆ ಮಟ್ಟದ ಔದ್ಯೋಗಿಕ ಸಿಬ್ಬಂದಿಗಳನ್ನು ಒದಗಿಸಲಾಗುತ್ತಿದೆ.
ಉನ್ನತ ಶಿಕ್ಷಣವನ್ನು ಜನಲಭ್ಯವಾಗಿಸಲಾಗಿದ್ದರೂ ಹಣಕಾಸಿನ ಅಡೆತಡೆಗಳು ಮುಂದುವರೆದಿವೆ. ಬಡ ಕುಟುಂಬಗಳ ಉನ್ನತ ಶಿಕ್ಷಣ ವಿದ್ಯಾರ್ಥಿಗಳ ಪಾಲು 2007ರಲ್ಲಿ ಶೇ 8ರಷ್ಟಿದ್ದರೆ, 2017ಕ್ಕೆ ಶೇ 15ರಷ್ಟು ಏರಿದೆ. ವಾರ್ಷಿಕವಾಗಿ ಭಾರತದಲ್ಲಿ ವೈದ್ಯಕೀಯ ಪದವಿಗೆ 97,400 ರೂ. ವೆಚ್ಚವಾಗುತ್ತಿದ್ದರೆ, ಎಂಜಿನಿಯರಿಂಗ್ ಪದವಿಗೆ 23 ಲಕ್ಷ ರೂ. ವೆಚ್ಚವಾಗುತ್ತಿದೆ. ಈ ವೆಚ್ಚಗಳು ಬಡ ಕುಟುಂಬಗಳ ತಲಾ ವೆಚ್ಚವನ್ನು ಮೀರಿವೆ. ಹೀಗಾಗಿ ಬಡವರು ವೃತ್ತಿಪರ ಕೋರ್ಸ್ ಗಳನ್ನು ಪ್ರವೇಶಿಸುವುದು ಕಷ್ಟವಾಗುತ್ತಿದ್ದು, ಹೆಚ್ಚಿನ ವೇತನ ನೀಡುವ ವೃತ್ತಿಗಳಲ್ಲಿ ಅಸಮಾನತೆ ಬಲವಾಗುತ್ತಿದೆ.
ಸುರಕ್ಷಿತವಾದ ಪದವಿ ಪಡೆಯುವವರ ವೇತನ ಹೆಚ್ಚಿರುತ್ತದೆ. ಪದವಿ ಪಡೆದಯವರಿಗೆ ಸರಿಸುಮಾರು ದುಪ್ಪಟ್ಟು ವೇತನ ಗಳಿಸುತ್ತಾರೆ. ಜೀವಿತಾವಧಿಯಲ್ಲಿ ಈ ಅಂತರ ಹೆಚ್ಚಾಗುತ್ತ ಹೋಗುತ್ತದೆ. ಆದರೆ ಪುರುಷರಿಗೆ ನೀಡಲಾಗುವ ಪ್ರವೇಶ ಹಂತದ ವೇತನ ಶ್ರೇಣಿಯು 2011ರಿಂದ ಸ್ಥಿರವಾಗಿದೆ. ಇದಕ್ಕೆ ವಿರುದ್ಧವಾಗಿ ಪದವೀಧರರ ಗಳಿಕೆಯಲ್ಲಿದ್ದ ಲಿಂಗ ಅಸಮಾನತೆ ಕಡಿಮೆಯಾಗಿದ್ದು, ಯುವ ಮಹಿಳಾ ಪದವೀಧರರು ಪುರುಷ ಪದವೀಧರರ ಸಮಕ್ಕೆ ವೇತನ ಗಳಿಸುತ್ತಿದ್ದಾರೆ.
ಯುವಜನರ ಕೆಲಸದ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಕೃಷಿಯಿಂದ ಯುವಕರ ನಿರ್ಗಮನ ಹಿಂದಿನ ಪೀಳಿಗೆಗಿಂತ ವೇಗ ಪಡೆದುಕೊಂಡಿದೆ. ಆದರೆ 2017ರಲ್ಲಿ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಕೆಲಸದ ಪ್ರಮಾಣ ಹೆಚ್ಚಾಗಿದ್ದು, ಪುರುಷರ ಪ್ರಮಾಣ ಸ್ಥಿರವಾಗಿದೆ. ಯುವ ಮಹಿಳೆಯರು ಆಧುನಿಕ ಸೇವೆಗಳಾದ ಮಾಹಿತಿ ತಂತ್ರಜ್ಞಾನ, ಅಟೊಮೊಬೈಲ್ ಉತ್ಪಾದನೆ, ಜವಳಿ ಮತ್ತು ಉದ್ಯಮ ಬೆಂಬಲಿತ ಸೇವೆಗಳಲ್ಲಿ ಹೆಚ್ಚು ಉದ್ಯೋಗ ಗಳಿಸುತ್ತಿದ್ದಾರೆ. ವಯಸ್ಸಾದ ಮಹಿಳೆಯರು ಪ್ರಧಾನವಾಗಿ ಸಮುದಾಯ ಮತ್ತು ವ್ಯಕ್ತಿಗತ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯುವಕರಿಗೆ ಪ್ರಮುಖ ಆರಂಭಿಕ ಹಂತದ ಉದ್ಯೋಗದಾತರು ವ್ಯಾಪಾರ, ಸಾರಿಗೆ ಮತ್ತು ನಿರ್ಮಾಣ ಕ್ಷೇತ್ರಗಳಾಗಿವೆ.
ವರದಿಯು ಗಮನಿಸಿರುವ ಪ್ರಕಾರ ಜಾತಿ ಮತ್ತು ಲಿಂಗ ಆಧಾರಿತ ವೃತ್ತಿಪರ ಪ್ರತ್ಯೇಕತೆ ಕಡಿಮೆಯಾಗುತ್ತಿದೆ. ಉದಾಹರಣೆಗೆ 1983ರಲ್ಲಿ ಎಸ್ಸಿ ಮತ್ತು ಎಸ್ಟಿ ಕಾರ್ಮಿಕರು ಶೇ 40ರಷ್ಟು ಸಮುದಾಯ ಉದ್ಯೋಗಗಳಾದ ಚರ್ಮ ಮತ್ತು ಚಪ್ಪಲಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಈ ಪ್ರಮಾಣ 2013ರಲ್ಲಿ ಶೇ 24ಕ್ಕೆ ಕುಸಿದಿದೆ. ಈ ಸಮುದಾಯದವರು ಕಾಗದ, ವಾಹನಗಳು ಮತ್ತು ದೂರಸಂಪರ್ಕ ಉಪಕರಣಗಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ವಲಸೆ ಕಾರ್ಮಿಕರು ಮಾರುಕಟ್ಟೆಯಲ್ಲಿ ಶೇ 40ರಷ್ಟು ಯುವಜನರು ಅನೌಪಚಾರಿಕ ವಲಸೆ ಕಾರ್ಮಿಕರಾಗಿದ್ದಾರೆ. ಬಿಹಾರ ಮತ್ತು ಉತ್ತರ ಪ್ರದೇಶದಂತಹ ಕಿರಿಯ ವಯಸ್ಸಿನ ನೌಕರರು ಹೆಚ್ಚಿರುವ ಕಡೆಯಿಂದ ದಿಲ್ಲಿ, ಹರ್ಯಾಣ ಮತ್ತು ಪಂಜಾಬ್ಗೆ ಹೆಚ್ಚು ವಲಸೆ ಕಾರ್ಮಿಕರು ಸಿಗುತ್ತಿದ್ದಾರೆ. ಹೀಗಾಗಿ ಪ್ರಾದೇಶಿಕ ಅಸಮತೋಲನೆಯನ್ನು ಸರಿಪಡಿಸಲಾಗುತ್ತಿದೆ.
ಈ ಕ್ಷೇತ್ರದ ಸವಾಲುಗಳನ್ನು ಪರಿಹರಿಸಲು, ಉದ್ಯೋಗವಕಾಶ ಹೆಚ್ಚಿಸಲು ಶಾಲಾ ಮತ್ತು ವೃತ್ತಿಪರ ಪಠ್ಯಕ್ರಮವನ್ನು ಸಂಯೋಜಿಸುವುದು, ಕಾರ್ಮಿಕ ಮಾರುಕಟ್ಟೆಯ ಘರ್ಷಣೆ ಕಡಿಮೆ ಮಾಡಲು ರಾಷ್ಟ್ರೀಯ ವೃತ್ತಿ ಸೇವೆಗಳನ್ನು (NCS) ಬಲಪಡಿಸುವುದು ಮತ್ತು ಅನೌಪಚಾರಿಕ ವಲಯ ಮತ್ತು ವಲಸೆಯಲ್ಲಿ ಯುವ ಕಾರ್ಮಿಕರನ್ನು ಬೆಂಬಲಿಸಲು ಸಾಮಾಜಿಕ ಭದ್ರತಾ ವ್ಯವಸ್ಥೆ ವಿಸ್ತರಿಸಲು ವರದಿ ಶಿಫಾರಸು ಮಾಡಿದೆ.
“ಇಂದು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಯುವಜನರು ಹಿಂದಿಗಿಂತಲೂ ವಿದ್ಯಾವಂತರು, ಮಾಹಿತಿಯುಕ್ತರು ಮತ್ತು ಮಹತ್ವಾಕಾಂಕ್ಷೆ ಉಳ್ಳವರಾಗಿದ್ದಾರೆ. ಈ ಸಾಧನೆಗೆ ನಾವು ಹೆಮ್ಮೆ ಪಡಬೇಕಾಗಿದೆ” ಎಂದು ಅಝೀಂ ಪ್ರೇಮ್ಜಿ ಸಂಸ್ಥೆ ಹೇಳಿದೆ.
ಈ ಸಂಶೋಧನೆಯು ಯುವ ಕೆಲಸಗಾರರು ಶಿಕ್ಷಣದಿಂದ ಉದ್ಯೋಗಕ್ಕೆ ಹುಡುಕಾಟ ಮತ್ತು ಉದ್ಯೋಗ ಪಡೆಯುವ ಪಥವನ್ನು ಪತ್ತೆ ಹಚ್ಚುತ್ತದೆ. ಈ ಪರಿವರ್ತನೆಯ ಸವಾಲುಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಮತ್ತು ಸಂಘಟಿತ ನೀತಿ ನಿರೂಪಣೆ ಸಕ್ರಿಯಗೊಳಿಸಲು ಕೊಡುಗೆ ನೀಡುವ ಕೆಲವು ಮೂಲಭೂತ ಕೆಲಸಗಳನ್ನು ವರದಿ ರೂಪಿಸಲಿದೆ ಎಂದು ನಾವು ಭಾವಿಸುತ್ತೇವೆ” ಎಂದು ಸಂಸ್ಥೆ ಹೇಳಿದೆ.
ಕೃಪೆ: The Wire







