Indian Railways | ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಂ ಪುನರ್ನಿರ್ಮಾಣ; ಆಗಸ್ಟ್ ನಿಂದ ಹೊಸ ವ್ಯವಸ್ಥೆ ಜಾರಿ

Photo Credit : PTI
1986ರ ನಂತರ ರೈಲ್ವೆ ಬುಕಿಂಗ್ ವ್ಯವಸ್ಥೆಯಲ್ಲಿ ಅತಿ ದೊಡ್ಡ ಬದಲಾವಣೆ ತರಲು ಮುಂದಾದ ಕೇಂದ್ರ ಸರ್ಕಾರ
ಭಾರತೀಯ ರೈಲ್ವೆ ತನ್ನ ರಿಸರ್ವೇಶನ್ ವ್ಯವಸ್ಥೆಯ ಹೊಸ ವೇದಿಕೆಯನ್ನು ಪರಿಚಯಿಸುತ್ತಿದ್ದು, 1986ರಿಂದ ಬಳಕೆಯಲ್ಲಿರುವ ವ್ಯವಸ್ಥೆಯನ್ನು ಬದಲಾಯಿಸಲಿದೆ. ರೈಲು ಟಿಕೆಟ್ ಬುಕಿಂಗ್ ಸುಧಾರಿಸುವುದು, ವ್ಯವಸ್ಥೆಯ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುವುದು ಇದರ ಉದ್ದೇಶವಾಗಿದೆ.
ಹೊಸ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ವೇಟಿಂಗ್ ಲಿಸ್ಟ್ ಮುನ್ಸೂಚನೆ ಮತ್ತು ಅತ್ಯಂತ ವೇಗದ ಟಿಕೆಟ್ ಬುಕಿಂಗ್ ಸಾಮರ್ಥ್ಯ ಇರಲಿದೆ. ಹೊಸ ವ್ಯವಸ್ಥೆಯ ಪ್ರಗತಿ ಪರಿಶೀಲನೆಯನ್ನು ಇತ್ತೀಚೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲು ಭವನಕ್ಕೆ ಭೇಟಿ ನೀಡಿ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೊಸ ವ್ಯವಸ್ಥೆಯ ಕುರಿತು ವಿವರಗಳನ್ನು ನೀಡಲಾಯಿತು.
ಭಾರತೀಯ ರೈಲ್ವೆಯ ಈ ಹೊಸ ವೇದಿಕೆಗೆ ಸಂಬಂಧಿಸಿದ ಪ್ರಮುಖ ವಿವರಗಳು ಹೀಗಿವೆ:
► ವೇಗ ಮತ್ತು ಸಾಮರ್ಥ್ಯ: 1986ರ ಹಳೆಯ ತಂತ್ರಜ್ಞಾನದ ಬದಲಿಗೆ ತರುತ್ತಿರುವ ಹೊಸ ವ್ಯವಸ್ಥೆಯಲ್ಲಿ ನಿಮಿಷಗಳಲ್ಲಿ ಲಕ್ಷಾಂತರ ಟಿಕೆಟ್ಗಳನ್ನು ಸರ್ವರ್ ಕ್ರ್ಯಾಶ್ ಆಗದೆಯೇ ನಿರ್ವಹಿಸಬಹುದು. ಪ್ರಸ್ತುತ ಬಳಕೆಯಲ್ಲಿರುವ ಪ್ರಯಾಣಿಕರ ರಿಸರ್ವೇಶನ್ ವ್ಯವಸ್ಥೆಯನ್ನು 1986ರಲ್ಲಿ ಪರಿಚಯಿಸಲಾಗಿತ್ತು. ಕಳೆದ ನಾಲ್ಕು ದಶಕಗಳಲ್ಲಿ ಈ ವ್ಯವಸ್ಥೆಗೆ ಸೀಮಿತ ಹಾಗೂ ಸಣ್ಣಪುಟ್ಟ ನವೀಕರಣಗಳನ್ನು ಮಾತ್ರ ಮಾಡಲಾಗಿತ್ತು. ಹೊಸ ವ್ಯವಸ್ಥೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪುನರ್ನಿರ್ಮಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ.
► ಕೃತಕ ಬುದ್ಧಿಮತ್ತೆ ಆಧಾರಿತ ಸೌಲಭ್ಯಗಳು: ಕೃತಕ ಬುದ್ಧಿಮತ್ತೆಯ ನೆರವಿನಿಂದ ವೇಟಿಂಗ್ ಲಿಸ್ಟ್ನಲ್ಲಿರುವ ಟಿಕೆಟ್ಗಳು ಖಚಿತಗೊಳ್ಳುವ ಸಾಧ್ಯತೆಯನ್ನು ಹೆಚ್ಚು ನಿಖರವಾಗಿ ತಿಳಿಯಬಹುದು. ಬಹಳ ಚರ್ಚೆಗೆ ಒಳಗಾಗಿರುವ ಈ ವೈಶಿಷ್ಟ್ಯದಲ್ಲಿ AI ಆಧಾರಿತ ಟಿಕೆಟ್ ಕಾಯ್ದಿರಿಸುವಿಕೆ ಕೂಡ ಸೇರಿದೆ. ಈ ವರ್ಷದ ಆರಂಭದಲ್ಲಿ ಪರಿಚಯಿಸಲಾದ ಈ ಉಪಕರಣವು ಕಾಯ್ದಿರಿಸಿದ ಟಿಕೆಟ್ ದೃಢೀಕರಣಗೊಳ್ಳುವ ಸಾಧ್ಯತೆಯನ್ನು ಅಂದಾಜು ಮಾಡುತ್ತದೆ. ರೈಲ್ವೆಯ ಪ್ರಕಾರ, ಈ ಮುನ್ಸೂಚನೆಯ ನಿಖರತೆ ಶೇ 53ರಿಂದ ಶೇ 94ಕ್ಕೆ ಏರಿಕೆಯಾಗಿದೆ.
► RailOne ಅಪ್ಲಿಕೇಶನ್: ಬಹುತೇಕ ಡಿಜಿಟಲ್ ಬುಕಿಂಗ್ಗಳಿಗಾಗಿ ರೈಲ್ವೆಯು ಬಿಡುಗಡೆ ಮಾಡಿರುವ ಮೊಬೈಲ್ ಅಪ್ಲಿಕೇಶನ್ RailOne. 2025ರ ಜುಲೈನಲ್ಲಿ ಬಿಡುಗಡೆಯಾದ ಈ ಅಪ್ಲಿಕೇಶನ್, ಒಂದು ವರ್ಷ ಪೂರ್ಣಗೊಳ್ಳುವ ಮುನ್ನವೇ 3.5 ಕೋಟಿಗೂ ಅಧಿಕ ಡೌನ್ಲೋಡ್ಗಳನ್ನು ದಾಖಲಿಸಿದೆ. ಇದರ ಮೂಲಕ ತ್ವರಿತವಾಗಿ ಟಿಕೆಟ್ ಗಳನ್ನು ಬುಕ್ ಮಾಡಬಹುದು ಹಾಗೂ ರದ್ದುಪಡಿಸಬಹುದು. ರೈಲು ಸಂಚಾರದ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಬಹುದು. ಪ್ಲಾಟ್ಫಾರ್ಮ್ ಸಂಖ್ಯೆ ಮತ್ತು ಬೋಗಿಗಳ ನಿಖರ ಮಾಹಿತಿಯನ್ನು ಪಡೆಯಬಹುದು. ಪ್ರಯಾಣದ ವೇಳೆ ಎದುರಾಗುವ ಸಮಸ್ಯೆಗಳ ಕುರಿತು ತಕ್ಷಣ ದೂರು ಸಲ್ಲಿಸುವ ವ್ಯವಸ್ಥೆಯೂ ಇದೆ.
2002ರಲ್ಲಿ ರೈಲ್ವೆಯು ಇಂಟರ್ನೆಟ್ ಆಧಾರಿತ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಆರಂಭಿಸಿದ ಬಳಿಕ ಕೌಂಟರ್ಗಳಿಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸುವ ಬದಲು ಪ್ರಯಾಣಿಕರು ಆನ್ಲೈನ್ನಲ್ಲೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಪ್ರಸ್ತುತ ಮಾಹಿತಿಯ ಪ್ರಕಾರ, ಶೇ 88ರಷ್ಟು ಟಿಕೆಟ್ಗಳು ಡಿಜಿಟಲ್ ವೇದಿಕೆಗಳ ಮೂಲಕ ಮಾರಾಟವಾಗುತ್ತಿವೆ. ಹೀಗಾಗಿ ಹೊಸ ವ್ಯವಸ್ಥೆಯು ಲಕ್ಷಾಂತರ ಪ್ರಯಾಣಿಕರಿಗೆ ಸುರಕ್ಷಿತ ಡಿಜಿಟಲ್ ಸೇವೆಯನ್ನು ಮುಂದುವರಿಸುವ ಗುರಿಯನ್ನು ಹೊಂದಿದೆ.






