ರಜೆಯಲ್ಲೂ ಲಿಂಗ ತಾರತಮ್ಯ; ಬಹುತೇಕ ಭಾರತೀಯ ನಾರಿಯರಿಗೆ ಸಜೆಯಾಗುತ್ತಿದೆ ರಜೆ!

ಸಾಂದರ್ಭಿಕ ಚಿತ್ರ | Photo Credit : freepik
ಮಹಿಳೆಯರೂ ಭಾವನಾತ್ಮಕವಾಗಿ ಹೆಚ್ಚು ಪುನಶ್ಚೇತನ ಸಿಗುವಂತಹ ರಜಾ ದಿನಗಳನ್ನು ಅನುಭವಿಸಬೇಕು. ಹೆಚ್ಚು ಜವಾಬ್ದಾರಿ, ನಿರೀಕ್ಷೆಗಳು ಇರಬಾರದು. ದೈನಂದಿನ ಚಟುವಟಿಕೆಗಳಿಂದ ಮುಕ್ತಿ ಸಿಗಬೇಕು.
ರಜಾ ದಿನಗಳು ಭಾರತೀಯ ಮಹಿಳೆಯರಿಗೆ ಹೊರೆಯೇ? ಬಹಳಷ್ಟು ಭಾರತೀಯ ಮಹಿಳೆಯರಿಗೆ ರಜಾ ದಿನಗಳೆಂದರೆ ಬಾಯಲ್ಲಿ ಹೇಳಲಾಗದ, ಮೌನವಾಗಿ ಅನುಭವಿಸುವ ವಾಸ್ತವವಾಗಿರುತ್ತದೆ. ಈ ಬಗ್ಗೆ ಭಾರತೀಯ ಮಹಿಳೆಯರು ಏನು ಹೇಳುತ್ತಾರೆ?
ಪ್ರವಾಸ ರಗಳೆ ಆಗಬಾರದು
ಪ್ರವಾಸ ಒಂದು ಪ್ಯಾಶನ್ (passion). ಈ ವಿಚಾರದಲ್ಲಿ ಗಂಡ-ಹೆಂಡತಿಯ ಅಭಿರುಚಿ ಒಂದೇ ಇದ್ದಾಗ ಮಾತ್ರ ಅದು ಪ್ರವಾಸ. ಇಲ್ಲದಿದ್ದರೆ ಅದು ತ್ರಾಸ ಎಂದು ಹೇಳುತ್ತಾರೆ ಬೆಂಗಳೂರಿನ ಸರ್ಕಾರಿ ಉದ್ಯೋಗಿ ಲೀಲಾ.
“ನಮ್ಮ ಮನೆಯಲ್ಲಂತೂ ಪ್ರವಾಸದ ಆರಂಭ ಅಂದರೆ ಪ್ಲ್ಯಾನಿಂಗ್, ಬಜೆಟ್, ಬಟ್ಟೆಬರೆ, ಸಾಕ್ಸ್ ಪ್ಯಾಕ್ ಮಾಡುವುದರಿಂದ ಹಿಡಿದು ಕೊನೆಗೆ ವಾಪಸ್ ಬಂದ ನಂತರ ಅನ್ಪ್ಯಾಕ್ ಮಾಡುವವರೆಗಿನ ರಗಳೆ ನನ್ನದೇ. ಇಷ್ಟೆಲ್ಲಾ ಸಿದ್ಧತೆ ಮಾಡಿಕೊಂಡು ಗುರಿ ತಲುಪಿದ ನಂತರ ಟೂರ್ ಆಪರೇಟರ್ ಪಾತ್ರವನ್ನೂ ನಿಭಾಯಿಸಬೇಕು. ಹೋಟೆಲ್ ರೂಮ್ ಸರಿಯಿಲ್ಲದಿದ್ದರೆ, ಊಟ ಸರಿಯಾಗದಿದ್ದರೆ ಅದರ ಜವಾಬ್ದಾರಿಯನ್ನೂ ಹೊತ್ತು ಮನೆಯವರ ಮಾತು ಕೇಳಬೇಕು. ಮಕ್ಕಳನ್ನು ಕರೆದುಕೊಂಡು ಪ್ರವಾಸ ಹೋಗುವುದು ಎಂದರೆ ಮನೆಯನ್ನೇ ಬೇರೆ ಲೊಕೇಶನ್ಗೆ ಶಿಫ್ಟ್ ಮಾಡಿದಂತೆ!” ಎಂದು ತಮ್ಮ ಅನುಭವ ವಿವರಿಸಿದರು.
“ದಿನಚರಿಯಲ್ಲಿ ಅಡುಗೆ, ಮನೆಗೆಲಸ ಬಿಟ್ಟರೆ ಮಕ್ಕಳನ್ನು ಬೆಳಗ್ಗೆ ಎಬ್ಬಿಸಿ, ಸ್ನಾನದ ಟವಲ್ ಇಟ್ಟು, ಕೊಳೆಯಾದ ಬಟ್ಟೆಯನ್ನು ಬೇರೆ ಕವರ್ಗೆ ತುಂಬಿಸಿ, ಅವರಿಗೆ ತಿಂಡಿ ತಿನ್ನಿಸಿ, ರೆಡಿ ಮಾಡಿ ಹೊರಗೆ ಕರೆದುಕೊಂಡು ಹೋಗುವುದು ನನ್ನ ಟೂರ್ ಪ್ಯಾಕೇಜ್ನಲ್ಲಿ ಸೇರಿರುತ್ತದೆ. ಮಕ್ಕಳಷ್ಟೇ ಅಲ್ಲ, ಗಂಡನಿಗೂ ಪ್ರತಿಯೊಂದು ವಸ್ತುವನ್ನು ಕೈಗೆ ಹಿಡಿಯಬೇಕು. ರೂಮ್ನಿಂದ ಹೊರಟು ಹೊರಗೆ ತಿರುಗಾಡುವಾಗಲೂ ಯಾರಿಗೂ ಯಾವುದೂ ಕಮ್ಮಿಯಾಗದಂತೆ ನೋಡಿಕೊಳ್ಳಬೇಕು” ಎಂದು ಲೀಲಾ ಹೇಳುತ್ತಾರೆ.
ಅವಲಂಬನೆಯೇ ದೊಡ್ಡ ಸಮಸ್ಯೆ
ಮಂಗಳೂರಿನ ನಿವಾಸಿ ಡಿಯಾನ್ ವ್ಯಾಸ್ ಅವರ ಪ್ರಕಾರ, ಪತಿ ಅಥವಾ ಪತ್ನಿ ಬಹಳ ಅವಲಂಬಿತವಾಗಿದ್ದರೆ ಇಂತಹ ಸಮಸ್ಯೆಗಳು ಉಂಟಾಗುತ್ತವೆ. ಪತಿ ಎಲ್ಲದಕ್ಕೂ ಪತ್ನಿಯ ಮೇಲೆ ಅವಲಂಬಿತನಾಗಿದ್ದರೆ ರಜೆ ಮತ್ತು ಮನೆ ಎರಡೂ ಒಂದೇ ಆಗಿರುತ್ತದೆ.
“ಬಹಳಷ್ಟು ಬಾರಿ ನನ್ನ ಪತಿ ಬ್ಯುಸಿಯಾಗಿರುತ್ತಾರೆ. ಅವರ ಲಭ್ಯತೆಯನ್ನು ಅನುಸರಿಸಿ ನಮ್ಮ ರಜಾ ಯೋಜನೆ ಆಗುತ್ತದೆ. ಹೀಗಾಗಿ ಪ್ರತಿಬಾರಿಯೂ ನನ್ನ ಅಗತ್ಯಗಳಿಗಿಂತ ಅವರಿಗೇ ಆದ್ಯತೆ ಸಿಗುತ್ತದೆ” ಎಂದು ಡಿಯಾನ್ ಹೇಳುತ್ತಾರೆ.
ಏಕಾಂಗಿ ಪ್ರವಾಸ ಕಲಿತ ಲೀಲಾ
ಅವ್ಯವಸ್ಥೆ ಮತ್ತು ಹೊರೆಯನ್ನು ಹೊತ್ತು ಸಾಕಾಗಿರುವ ಲೀಲಾ ಈಗ ಅದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ.
“ಮನೆಯಿಂದ ಒಬ್ಬರೇ ಹೊರಗೆ ಹೋದಾಗಲೇ ಅದು ನಿಜವಾದ ಪ್ರವಾಸ ಅನ್ನಿಸುತ್ತದೆ. ಅಲ್ಲಿ ಮನೆಯ ಮುಖಗಳು ಕಾಣುವುದಿಲ್ಲ. ಯಾರ ಜವಾಬ್ದಾರಿಯೂ ಇರುವುದಿಲ್ಲ. ಒತ್ತಡರಹಿತವಾಗಿ ಅಡ್ಡಾಡುವುದೇ ನಿಜವಾದ ಪ್ರವಾಸ. ಹಾಗಾಗಿ ಸಮಾನ ಮನಸ್ಕರ ಜತೆ ಪ್ರವಾಸ ಹೋದಾಗಲೇ ಚೆನ್ನ. ಹಾಲಿ ಅಥವಾ ಮಾಜಿ ಸಹೋದ್ಯೋಗಿಗಳು, ಬಾಲ್ಯದ ಸ್ನೇಹಿತರು, ನೆರೆಹೊರೆಯವರ ಜತೆ ಪ್ರವಾಸ ಮಾಡುವುದು ಒಳ್ಳೆಯ ಐಡಿಯಾ. ಖರ್ಚೂ ಕಡಿಮೆ ಇರುತ್ತದೆ, ಜವಾಬ್ದಾರಿಯೂ ಇರುವುದಿಲ್ಲ. ವಿದೇಶ ಪ್ರವಾಸಕ್ಕೆ ಇಡೀ ಕುಟುಂಬ ಹೊರಟರೆ 6–15 ಲಕ್ಷ ರೂ. ಬೇಕಾಗುತ್ತದೆ. ಒಬ್ಬರೇ ಹೋದರೆ 1–3 ಲಕ್ಷ ರೂ.ನಲ್ಲಿ ಮುಗಿಸಬಹುದು” ಎಂದು ಲೀಲಾ ವಿವರಿಸುತ್ತಾರೆ.
ಪತಿಯ ನೆರವು ಸಿಕ್ಕರೆ ರಜಾ ಮಜಾ
ಆದರೆ ಸಬೀನಾ ಇರ್ಷಾದ್ ಅವರು ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. “ರಜೆಯಲ್ಲಷ್ಟೇ ಅಲ್ಲ, ಪ್ರತಿದಿನವೂ ಮನೆಯಲ್ಲಿನ ಕೆಲಸದ ಮುಕ್ಕಾಲು ಭಾಗವನ್ನು ಪತಿಯೇ ಮಾಡುತ್ತಾರೆ. ಅವರು ಬಹಳ ಉತ್ಸಾಹಿ. ಹೀಗಾಗಿ ಹೊರಗೆ ಹೋದಾಗಲೂ ಅವರಿಗೆ ಅದು ದಿನಚರಿಯಂತೆಯೇ ಆಗುತ್ತದೆ. ಪಾತ್ರೆ ತೊಳೆಯುವುದು, ಮಕ್ಕಳಿಗೆ ಸ್ನಾನ ಮಾಡಿಸುವುದು, ಶಾಲೆಗೆ ಕಳುಹಿಸುವುದು, ಕರೆದುಕೊಂಡು ಬರುವುದು ಎಲ್ಲವನ್ನೂ ಅವರೇ ಮಾಡುತ್ತಾರೆ. ಅಡುಗೆ ಮಾತ್ರ ನನ್ನ ಕೆಲಸ, ಅದ್ರಲ್ಲೂ ಕೆಲವೊಮ್ಮೆ ಅವರು ಸಹಾಯ ಮಾಡುತ್ತಾರೆ. ಮೀನು ತೊಳೆಯಲು ನನಗೆ ಬರಲ್ಲ, ಅದನ್ನೂ ಅವರೇ ಕಟ್ ಮಾಡಿ ಕ್ಲೀನ್ ಮಾಡಿ ಕೊಡುತ್ತಾರೆ” ಎಂದು ಅವರು ಹೇಳುತ್ತಾರೆ.
ಮಕ್ಕಳು ದೊಡ್ಡವರಾದ ಮೇಲೆ ಬದಲಾಗುವ ಜಗತ್ತು
ಅಮೆರಿಕದ ಮಿಚಿಗನ್ ನಿವಾಸಿ ಅಂಜಲಿ ಅವರಿಗೆ ಹಿಂದೆ ಇದೇ ಅನುಭವವಿತ್ತು. “ಮಕ್ಕಳು ಚಿಕ್ಕವರಿದ್ದಾಗ ಪ್ರವಾಸ ಹೋದರೆ ಹೊರೆಯಂತೆಯೇ ಅನಿಸುತ್ತಿತ್ತು. ಮಕ್ಕಳ ಆಹಾರ, ಆರೋಗ್ಯ ಎಲ್ಲವನ್ನೂ ನೋಡಿಕೊಳ್ಳಬೇಕಾಗುತ್ತಿತ್ತು. ಬಂದ ಮೇಲೂ ಕೆಲಸ ಇರುತ್ತಿತ್ತು. ಆದರೆ ಈಗ ಮಕ್ಕಳು ದೊಡ್ಡವರಾಗಿದ್ದಾರೆ. ಎಲ್ಲವನ್ನೂ ಅವರ ಜೊತೆಗೂಡಿ ಯೋಜಿಸುತ್ತೇವೆ. ಹೀಗಾಗಿ ಪರಿಸ್ಥಿತಿ ಬದಲಾಗಿದೆ. ಈಗ ಪ್ರವಾಸವನ್ನು ನಿಜವಾದ ರಜೆಯಂತೆ ಸಂಭ್ರಮಿಸುತ್ತೇನೆ. ಇತ್ತೀಚೆಗೆ ಲಾಸ್ ಏಂಜಲೀಸ್ ಗೆ ಹೋಗಿ ಬಂದಿದ್ದೆವು. ಬಹಳ ಆರಾಮವಾಗಿ ಆನಂದಿಸಿದ್ದೇನೆ. ಬಂದ ಮೇಲೂ ಮಕ್ಕಳೇ ಎಲ್ಲವನ್ನೂ ನಿಭಾಯಿಸಿ ನನಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದರು” ಎಂದು ಅಂಜಲಿ ಹೇಳುತ್ತಾರೆ.
ರಜೆಯಂತೆ ಅನಿಸದ ದಿನಗಳು
ಉಜಿರೆಯ ನಿವಾಸಿ ರೇಣುಕಾ ಸುಧೀರ್ ಅವರ ಪ್ರಕಾರ, “ರಜಾ ದಿನಗಳು ಬಂದಾಗ ಗಂಡ, ಮಕ್ಕಳು ಎಲ್ಲರೂ ವಿಶ್ರಾಂತಿ ಪಡೆಯುತ್ತಾರೆ. ಆದರೆ ಮನೆಯಾಕೆಗೆ ಮಾತ್ರ ಕೆಲಸಗಳು ಹೆಚ್ಚಾಗುತ್ತವೆ. ವಿಶ್ರಾಂತಿ ಪಡೆಯುವವರ ಎಲ್ಲ ಬೇಕು-ಬೇಡಗಳನ್ನು ಪೂರೈಸಬೇಕಾಗುತ್ತದೆ. ವಿಶೇಷ ಅಡುಗೆ, ಸಂಜೆ ಚಹಾದ ಜೊತೆ ತಿಂಡಿ, ಹಿಂದಿನ ದಿನಗಳಲ್ಲಿ ಬಾಕಿಯಾಗಿದ್ದ ಕೆಲಸಗಳನ್ನು ಮುಗಿಸುವ ಒತ್ತಡ. ಹೊರಗೆ ಹೋಗಿ ಬಂದ ನಂತರ ಮನೆಗೆ ಮರಳಿ ಎಲ್ಲವನ್ನೂ ಸಹಜ ಸ್ಥಿತಿಗೆ ತರುವುದು ದೊಡ್ಡ ಸಾಹಸ. ಮನೆಮಂದಿ ಟಿವಿ, ಸಿನಿಮಾ ನೋಡುತ್ತಾ ಸಮಯ ಕಳೆಯುವಾಗ ಮನೆಯ ಹೆಣ್ಣುಮಗಳು ಮಾತ್ರ ನಿರಂತರ ಕೆಲಸದಲ್ಲಿ ತೊಡಗಿರುತ್ತಾಳೆ. ಸ್ವಲ್ಪ ವಿಶ್ರಾಂತಿ ಪಡೆಯಬೇಕೆಂಬ ಆಸೆ ಇದ್ದರೂ ಒಂದು ಕೆಲಸ ಮುಗಿಯುವಷ್ಟರಲ್ಲಿ ಇನ್ನೊಂದು ಕೆಲಸ ಎದುರು ಕಾಣುತ್ತದೆ.”
ಹೆತ್ತವರು–ಪೋಷಕರ ಆರೈಕೆಯ ಜವಾಬ್ದಾರಿ
ಸುರತ್ಕಲ್ ನಿವಾಸಿ ಸುಮಂಗಲಾ ಅವರ ಪ್ರಕಾರ, “ರಜೆ ಎಂದರೆ ದೈನಂದಿನ ಕೆಲಸಗಳಿಂದ ಸಂಪೂರ್ಣ ಮುಕ್ತಿ ಸಿಗಬೇಕು. ಸ್ವತಂತ್ರವಾಗಿರಲು ಅವಕಾಶ ಇರಬೇಕು. ಆದರೆ ಬಹಳಷ್ಟು ಬಾರಿ ಮನೆಯಲ್ಲಿರುವ ಹೆತ್ತವರು, ಅಜ್ಜಿ ಮೊದಲಾದವರ ಆರೈಕೆ ವ್ಯವಸ್ಥೆ ಮಾಡುವ ಜವಾಬ್ದಾರಿ ಮಹಿಳೆಯರ ಮೇಲೇ ಇರುತ್ತದೆ.”
“ಕುಟುಂಬದ ಜತೆ ಪ್ರವಾಸ ಹೋಗುವುದು ಅಪರೂಪ. ಆದರೆ ಬಹಳಷ್ಟು ಮಂದಿ ಹೇಳುವ ಪ್ರಕಾರ, ಪತಿಯಂದಿರು ಕುಟುಂಬದ ಜತೆಗೆ ಹೋಗುವಾಗ ಅಗ್ಗದ ಪ್ರಯಾಣ ಮತ್ತು ವಸತಿಯನ್ನು ಆರಿಸುತ್ತಾರೆ. ಆದರೆ ಸ್ನೇಹಿತರ ಜತೆ ಹೋಗುವಾಗ ವಿಮಾನ, ಐಷಾರಾಮಿ ಹೋಟೆಲ್ಗಳನ್ನು ಆಯ್ಕೆ ಮಾಡುತ್ತಾರೆ. ಕುಟುಂಬದ ಪ್ರವಾಸವನ್ನು ವ್ಯರ್ಥ ಖರ್ಚು ಎನ್ನುವ ಮನೋಭಾವ ಹೆಚ್ಚಾಗಿದೆ” ಎಂದು ಸುಮಂಗಲಾ ಹೇಳುತ್ತಾರೆ.
ಮಾನಸಾ ಹರಿಪ್ರಸಾದ್ ಅವರ ಪ್ರಕಾರ, “ಮನೆಯಲ್ಲಿರುವ ಹಿರಿಯರ ಆರೈಕೆ, ಪತಿಯ ವರ್ತನೆ, ಮಕ್ಕಳ ಜವಾಬ್ದಾರಿ—all ಇವುಗಳ ನಡುವೆ ಮಹಿಳೆಯರು ರಜೆಯನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ. ಪ್ಯಾಕಿಂಗ್ನಿಂದ ಹಿಡಿದು ವಾಪಸ್ ಬಂದು ಅನ್ಪ್ಯಾಕ್ ಮಾಡುವವರೆಗೂ ಎಲ್ಲವೂ ಮಹಿಳೆಯರ ಹೊಣೆ. ರಜೆ ಎಂದರೂ ದೈನಂದಿನ ದಿನಚರಿಯೇ ಮುಂದುವರಿಯುತ್ತದೆ.”
ರಜಾ ಭಾವನಾತ್ಮಕವಾಗಿಯೂ ಅಗತ್ಯ
ಮುಂಬೈ ಮೂಲದ ಚಿಕಿತ್ಸಾತ್ಮಕ ಮನಶ್ಶಾಸ್ತ್ರಜ್ಞರೊಬ್ಬರ ಪ್ರಕಾರ,
“ಮಹಿಳೆಯರಿಗೆ ರಜಾ ಎಂದರೆ ವಿಶ್ರಾಂತಿಗಿಂತ ಜವಾಬ್ದಾರಿಗಳ ಪಟ್ಟಿಯೇ ಹೆಚ್ಚಾಗಿರುತ್ತದೆ. ದೈಹಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಅವರು ಸುಸ್ತಾಗುತ್ತಾರೆ. ಹೀಗಾಗಿ ಬಹಳಷ್ಟು ಮಹಿಳೆಯರು ರಜೆಯ ನಂತರವೂ ದಣಿವಿನೊಂದಿಗೆ ಮರಳುತ್ತಾರೆ.”
ಮಹಿಳೆಯರೂ ಭಾವನಾತ್ಮಕವಾಗಿ ಪುನಶ್ಚೇತನ ಪಡೆಯುವಂತಹ ರಜಾ ದಿನಗಳನ್ನು ಅನುಭವಿಸಬೇಕು. ಹೆಚ್ಚು ಜವಾಬ್ದಾರಿಗಳಿಲ್ಲದ, ನಿರೀಕ್ಷೆಗಳಿಲ್ಲದ, ದೈನಂದಿನ ಚಟುವಟಿಕೆಗಳಿಂದ ಮುಕ್ತಿ ಸಿಗುವ ರಜೆಯೇ ಭಾರತೀಯ ಮಹಿಳೆಯರ ಪಾಲಿಗೆ ನಿಜವಾದ ರಜೆ.







