ಬೆಳ್ಳಗಾಗುವ ವ್ಯಾಮೋಹಕ್ಕೆ ಬೆಲೆ ತೆತ್ತ ವಿದ್ಯಾರ್ಥಿನಿ: ಪಾದರಸಯುಕ್ತ ಫೇರ್ನೆಸ್ ಕ್ರೀಮ್ಗಳು ಜನರ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ?

ಸಾಂದರ್ಭಿಕ ಚಿತ್ರ (AI Imagined)
ಇದನ್ನು ಹಚ್ಚಿದರೆ ಇಂತಿಷ್ಟು ದಿನಗಳು ಅಥವಾ ವಾರಗಳಲ್ಲಿ ಮುಖದಲ್ಲಿರುವ ಮೊಡವೆ ಕಲೆಗಳು ಮಾಯವಾಗಿ ತ್ವಚೆ ಕಾಂತಿಯುತವಾಗುತ್ತದೆ ಎಂದು ಒಂದು ಫೇಸ್ ಕ್ರೀಮ್ ಜಾಹೀರಾತು ಭರವಸೆ ನೀಡಿದರೆ, ಮತ್ತೊಂದು ಕ್ರೀಮ್ ಹಚ್ಚಿದರೆ ಚರ್ಮ ಬೆಳ್ಳಗಾಗುತ್ತದೆ ಎಂಬ ಭರವಸೆ ನೀಡುತ್ತದೆ. ಚರ್ಮದ ಬಣ್ಣ ಕಪ್ಪಗಿದ್ದರೆ ಅದು ಸುಂದರವಾಗಿಲ್ಲ, ಬೆಳ್ಳಗಿದ್ದರೇನೇ ಸೌಂದರ್ಯ ಎಂಬ ಪೂರ್ವಗ್ರಹ ಹೊಂದಿರುವ ಸಮಾಜದಲ್ಲಿ ಫೇರ್ನೆಸ್ ಕ್ರೀಮ್ಗಳು ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತವೆ.
ಇಂತಹ ಜಾಹೀರಾತುಗಳು ಜನರಲ್ಲಿ ಕಪ್ಪು ಚರ್ಮದ ಬಗ್ಗೆ ಕೀಳರಿಮೆ ಉಂಟುಮಾಡಿ, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಜಾಹೀರಾತುಗಳಿಗೆ ಮಾರುಹೋಗಿ ಜನರು ಈ ಉತ್ಪನ್ನಗಳನ್ನು ಬಳಸಲು ಮುಂದಾಗುತ್ತಾರೆ. ಸಾಮಾಜಿಕ ಜಾಲತಾಣಗಳ ಇನ್ಫ್ಲುಯೆನ್ಸರ್ ಗಳ ವೀಡಿಯೊಗಳನ್ನು ನಂಬಿ ಫೇರ್ನೆಸ್ ಕ್ರೀಮ್ ಬಳಸಿದ 17 ವರ್ಷದ ಬಾಲಕಿಯೊಬ್ಬಳ ಕಿಡ್ನಿಗೆ ಗಂಭೀರ ಹಾನಿಯಾಗಿರುವ ಘಟನೆ ಕೇರಳಂನ ಮಲಪ್ಪುರಂ ಜಿಲ್ಲೆಯಲ್ಲಿ ವರದಿಯಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ವಿಷಕಾರಿ ಉತ್ಪನ್ನಗಳು ಮನುಷ್ಯನ ಆರೋಗ್ಯದ ಮೇಲೆ ಯಾವ ರೀತಿಯ ಗಂಭೀರ ಪರಿಣಾಮ ಬೀರುತ್ತವೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.
ಬೆಳ್ಳಗಾಗಲು ಹಚ್ಚಿದ್ದು ರೋಗಕ್ಕೆ ಕಾರಣವಾಯ್ತು
ಕೇರಳಂನ ಮಲಪ್ಪುರಂ ಜಿಲ್ಲೆಯ ಅರೀಕೋಡ್ ನ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾದ ಬಳಿಕ, ಅನಿಯಂತ್ರಿತ ಸೌಂದರ್ಯವರ್ಧಕಗಳ ಹಿಂದಿರುವ ವ್ಯವಸ್ಥಿತ ಅಪಾಯ ಬೆಳಕಿಗೆ ಬಂದಿದೆ. ಸಾಮಾನ್ಯ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ, ಈ ಯುವತಿ ಇನ್ಸ್ಟಾಗ್ರಾಮ್ ನಲ್ಲಿ ಬ್ಯೂಟಿ ಇನ್ಫ್ಲುಯೆನ್ಸರ್ ಗಳ ಭರ್ಜರಿ ಪ್ರಚಾರವನ್ನು ನಂಬಿ ಆನ್ಲೈನ್ ಮಳಿಗೆಯೊಂದರಿಂದ 'ಎಫ್ಟ್ಯೂನ್ ಫೇಸ್ ಕ್ರೀಮ್' (Ftune Face Cream) ಖರೀದಿಸಿದ್ದಳು.
ಮೊಡವೆಗಳು ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸಿ ಚರ್ಮವನ್ನು ಬೆಳ್ಳಗಾಗಿಸುತ್ತದೆ ಎಂದು ಈ ಕ್ರೀಮ್ ಭರವಸೆ ನೀಡಿತ್ತು. ಆರಂಭದಲ್ಲಿ ಚರ್ಮದ ಬಣ್ಣ ಬೆಳ್ಳಗಾದಂತೆ ಕಂಡಿದ್ದರಿಂದ ಉತ್ತೇಜಿತಳಾದ ಯುವತಿ, ಸುಮಾರು ಒಂದು ವರ್ಷದವರೆಗೆ ಇದರ ಬಳಕೆಯನ್ನು ಮುಂದುವರಿಸಿದಳು. ಆದರೆ, ಹೊರನೋಟಕ್ಕೆ ಆಕೆಯ ಸೌಂದರ್ಯ ಹೆಚ್ಚುತ್ತಿದೆ ಎಂದು ಅನಿಸಿದರೂ, ಈ ಕ್ರೀಮ್ ದೇಹದೊಳಗೆ ವಿಷವನ್ನು ತುಂಬುತ್ತಿತ್ತು.
ಇನ್ಸ್ಟಾಗ್ರಾಮ್ ಇನ್ ಫ್ಲುಯೆನ್ಸರ್ ಗಳ ಪ್ರಚಾರ ನೋಡಿ ವಾಟ್ಸಾಪ್ ಮೂಲಕ ಈಕೆ ಕ್ರೀಮ್ ತರಿಸಿಕೊಂಡಿದ್ದಳು. ಅದನ್ನು ನಿಯಮಿತವಾಗಿ ಹಚ್ಚಿಕೊಳ್ಳುತ್ತಿದ್ದಳು. ಮೊದಲ ಕೆಲವು ವಾರಗಳಲ್ಲಿ ಚರ್ಮವು ವೇಗವಾಗಿ ಬೆಳ್ಳಗಾದಂತೆ ಕಂಡಿದ್ದು, ಮತ್ತೆ ಮತ್ತೆ ಕ್ರೀಮ್ ಖರೀದಿಸಿ ದೀರ್ಘಕಾಲ ಬಳಸಲು ಪ್ರೇರೇಪಿಸಿತು. ಬಳಿಕ ಕಿಡ್ನಿ ಸಮಸ್ಯೆ ಎದುರಾಗಿ ದೇಹದಲ್ಲಿ ಊತ ಕಾಣಿಸಿಕೊಂಡಿತು. ಜೊತೆಗೆ ತಲೆಸುತ್ತಿ ಬೀಳುವಂತಾಗಿ ಆಕೆಯನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ರೋಗಲಕ್ಷಣಗಳು ಮತ್ತು ರೋಗನಿರ್ಣಯ
ತಿಂಗಳುಗಟ್ಟಲೆ ಕ್ರೀಮ್ ಬಳಸಿದ ನಂತರ ಆ ಯುವತಿಗೆ ನಿತ್ರಾಣ ಉಂಟಾಗುತ್ತಿತ್ತು. ಆಕೆಯ ಮುಖ ಮತ್ತು ಕಾಲುಗಳಲ್ಲಿ ತೀವ್ರವಾದ ಊತ ಕಾಣಿಸಿಕೊಂಡಿತು. ವಿಪರೀತ ಆಯಾಸ, ಮೂತ್ರದಲ್ಲಿ ನೊರೆ ಬರುವುದು ಹಾಗೂ ರಕ್ತದೊತ್ತಡ ದಿಢೀರ್ ಕುಸಿದು ಪ್ರಜ್ಞೆ ತಪ್ಪಿ ಬೀಳುವಂತಹ ಸಮಸ್ಯೆಗಳು ಎದುರಾದವು. ಇದರಿಂದಾಗಿ ಆಕೆಗೆ ನಡೆಯಲು ಮತ್ತು ಮೆಟ್ಟಿಲುಗಳನ್ನು ಹತ್ತಲೂ ಸಾಧ್ಯವಾಗದಂತಾಯಿತು.
ಮಲಪ್ಪುರಂ ನ ಆಸ್ಟರ್ ಮಿಮ್ಸ್ ಮದರ್ ಆಸ್ಪತ್ರೆಗೆ ದಾಖಲಾದ ಆಕೆಯನ್ನು ನೆಫ್ರಾಲಜಿಸ್ಟ್ ಡಾ. ಗೌರಿ ಎಸ್. ಅವರು ಪರೀಕ್ಷಿಸಿದಾಗ, ವಿಷಕಾರಿ ಭಾರೀ ಲೋಹದ ಸಂಪರ್ಕದಿಂದ ಉಂಟಾಗುವ 'ಮೆಂಬ್ರಾನಸ್ ನೆಫ್ರೋಪತಿ' (membranous nephropathy) ಎಂಬ ಗಂಭೀರ ಕಿಡ್ನಿ ಕಾಯಿಲೆ ಆಕೆಗೆ ತಗುಲಿರುವುದು ತಪಾಸಣೆಯಿಂದ ದೃಢಪಟ್ಟಿತು. ಬಳಿಕ ಚೆನ್ನೈನ ವಿಶೇಷ ಖಾಸಗಿ ಪ್ರಯೋಗಾಲಯದಲ್ಲಿ 'ಎಫ್ಟ್ಯೂನ್' (Ftune) ಕ್ರೀಮ್ನ ಮಾದರಿಗಳನ್ನು ಪರೀಕ್ಷಿಸಿದಾಗ, ಅದರಲ್ಲಿ ಬರೋಬ್ಬರಿ ಶೇ. 1.25ರಷ್ಟು ಅಂದರೆ 12,500 ಪಿಪಿಎಂ (ppm) ಪಾದರಸದ ಅಂಶವಿರುವುದು ಪತ್ತೆಯಾಯಿತು.
ವಿಷಕಾರಿ ಭಾರೀ ಲೋಹಗಳು ಕಿಡ್ನಿಯನ್ನು ಹೇಗೆ ಹಾಳುಮಾಡುತ್ತವೆ?
ಚರ್ಮಕ್ಕೆ ಹಚ್ಚುವ ಕ್ರೀಮ್ ಗಳು ದೇಹದ ಒಳಗಿನ ಅಂಗಗಳನ್ನು ಹೇಗೆ ನಿಷ್ಕ್ರಿಯಗೊಳಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಭಾರೀ ಲೋಹಗಳು ಮಾನವನ ದೇಹದೊಂದಿಗೆ ಹೇಗೆ ವರ್ತಿಸುತ್ತವೆ ಎಂಬುದನ್ನು ಗಮನಿಸಬೇಕು. ನಮ್ಮ ಚರ್ಮವು ಯಾವುದೇ ವಸ್ತುವನ್ನು ಒಳಬಿಡದ ತಡೆಗೋಡೆಯಲ್ಲ. ಚರ್ಮದ ಮೇಲೆ ಹಚ್ಚುವ ರಾಸಾಯನಿಕಗಳು, ಅದರಲ್ಲೂ ವಿಶೇಷವಾಗಿ ಭಾರೀ ಲೋಹದ ಲವಣಗಳು ಚರ್ಮದ ಪದರವನ್ನು ಸುಲಭವಾಗಿ ಭೇದಿಸಿ ರಕ್ತಪರಿಚಲನಾ ವ್ಯವಸ್ಥೆಯನ್ನು ಸೇರುತ್ತವೆ.
ಮೆಂಬ್ರಾನಸ್ ನೆಫ್ರೋಪತಿ ಎಂದರೇನು?
ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಪಾದರಸದ ಸಂಪರ್ಕದಿಂದ ಉಂಟಾಗುವ ಈ ಕಾಯಿಲೆಯನ್ನು 'ಸೆಕೆಂಡರಿ ಮೆಂಬ್ರಾನಸ್ ನೆಫ್ರೋಪತಿ' ಎಂದು ವರ್ಗೀಕರಿಸಲಾಗಿದೆ. ಕಿಡ್ನಿ ಹಾನಿಯಿಂದಾಗಿ ಮೂತ್ರದಲ್ಲಿ ಅತಿಯಾದ ಪ್ರೋಟೀನ್ ಹೊರಹೋಗುವುದು ಈ ರೋಗದ ಮುಖ್ಯ ಲಕ್ಷಣವಾಗಿದೆ. ಇದು ದೇಹದ ವಿವಿಧ ಭಾಗಗಳಲ್ಲಿ ಊತಕ್ಕೆ ಕಾರಣವಾಗುತ್ತದೆ.
ಮೆಂಬ್ರಾನಸ್ ನೆಫ್ರೋಪತಿ ಎಂಬುದು ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯೇ ಕಿಡ್ನಿಯ ಅತಿ ಸೂಕ್ಷ್ಮ ಶೋಧನಾ ಘಟಕಗಳಾದ 'ಗ್ಲೋಮೆರುಲಿ'ಗೆ (glomeruli) ಹಾನಿ ಮಾಡುವ ಸ್ಥಿತಿಯಾಗಿದೆ. ಇದರಿಂದ ಉಂಟಾಗುವ ಗಾಯದಿಂದಾಗಿ ರಕ್ತದಲ್ಲಿರಬೇಕಾದ ಪ್ರೋಟೀನ್ ಗಳು, ವಿಶೇಷವಾಗಿ 'ಅಲ್ಬುಮಿನ್' (albumin), ಮೂತ್ರದ ಮೂಲಕ ಸೋರಿಕೆಯಾಗಲು ಆರಂಭಿಸುತ್ತವೆ.
ಇದರಿಂದ ರೋಗಿಗಳಲ್ಲಿ 'ನೆಫ್ರೋಟಿಕ್ ಸಿಂಡ್ರೋಮ್' ಕಾಣಿಸಿಕೊಳ್ಳಬಹುದು. ಅತಿಯಾದ ಪ್ರೋಟೀನ್ ನಷ್ಟ, ರಕ್ತದಲ್ಲಿ ಅಲ್ಬುಮಿನ್ ಮಟ್ಟ ಕುಸಿಯುವುದು ಹಾಗೂ ಮುಖ, ಪಾದ ಮತ್ತು ದೇಹದ ಇತರ ಭಾಗಗಳಲ್ಲಿ ಊತ ಕಾಣಿಸಿಕೊಳ್ಳುವುದು ಇದರ ಲಕ್ಷಣಗಳಾಗಿವೆ. ರೋಗವು ತೀವ್ರವಾದರೆ ಅಥವಾ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ, ಇದು ದೀರ್ಘಕಾಲದ ಕಿಡ್ನಿ ಕಾಯಿಲೆಯಾಗಿ ಬದಲಾಗಬಹುದು ಮತ್ತು ಕಿಡ್ನಿ ವೈಫಲ್ಯಕ್ಕೂ ಕಾರಣವಾಗಬಹುದು.
ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (FDA) ಹಾಗೂ ಪಾದರಸ ನಿಯಂತ್ರಣದ ಕುರಿತಾದ 'ಮಿನಾಮಾಟಾ ಒಪ್ಪಂದ'ವು (Minamata Convention on Mercury), ಚರ್ಮವನ್ನು ಬೆಳ್ಳಗಾಗಿಸುವ ಕ್ರೀಮ್ ಗಳು ಸೇರಿದಂತೆ ಸೌಂದರ್ಯವರ್ಧಕಗಳಲ್ಲಿ ಪಾದರಸದ ಮಿತಿಯನ್ನು 1 ಪಿಪಿಎಂಗೆ (1 ppm) ನಿಗದಿಪಡಿಸಿವೆ. ಈ 1 ಪಿಪಿಎಂ ಮಿತಿಯನ್ನು ಮೀರುವ ಉತ್ಪನ್ನಗಳ ತಯಾರಿಕೆ, ಆಮದು ಮತ್ತು ರಫ್ತನ್ನು ಮಿನಾಮಾಟಾ ಒಪ್ಪಂದವು ಸಂಪೂರ್ಣವಾಗಿ ನಿಷೇಧಿಸಿದೆ.
2018ರಲ್ಲಿ ಭಾರತವೂ ಪಾದರಸದ ಕುರಿತಾದ ಈ ಮಿನಾಮಾಟಾ ಒಪ್ಪಂದಕ್ಕೆ ಸಹಿ ಹಾಕಿದೆ. ಪಾದರಸದ ಬಳಕೆ, ಅದರಿಂದಾಗುವ ಆರೋಗ್ಯದ ಅಪಾಯಗಳು ಮತ್ತು ಮಾಲಿನ್ಯದ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇದೊಂದು ಬಹುರಾಷ್ಟ್ರೀಯ ಪರಿಸರ ಒಪ್ಪಂದವಾಗಿದೆ. ಇಷ್ಟೆಲ್ಲ ಕಠಿಣ ನಿಯಮಗಳಿದ್ದರೂ, ಇಂತಹ ಅಪಾಯಕಾರಿ ಉತ್ಪನ್ನಗಳು ಇ-ಕಾಮರ್ಸ್ ತಾಣಗಳಲ್ಲಿ ಈಗಲೂ ಮಾರಾಟವಾಗುತ್ತಲೇ ಇವೆ.
ಪಾದರಸದಿಂದ ದೇಹದ ಮೇಲಾಗುವ ಇತರ ಗಂಭೀರ ಪರಿಣಾಮಗಳು
ಸೌಂದರ್ಯವರ್ಧಕಗಳಲ್ಲಿ ಪಾದರಸದ ಬಳಕೆಗೆ ನಿಯಂತ್ರಕ ಸಂಸ್ಥೆಗಳು ಕಟ್ಟುನಿಟ್ಟಿನ ಮಿತಿಗಳನ್ನು ಹೇರಿವೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (FDA) 1 ಪಿಪಿಎಂಗಿಂತ (1 ppm) ಕಡಿಮೆ, ಅಂದರೆ ಅತ್ಯಲ್ಪ ಪ್ರಮಾಣದ ಪಾದರಸಕ್ಕೆ ಮಾತ್ರ ಅನುಮತಿ ನೀಡುತ್ತದೆ. ಆದರೆ, ಮಾರುಕಟ್ಟೆಯಲ್ಲಿರುವ ಕೆಲವು ಉತ್ಪನ್ನಗಳಲ್ಲಿ ಅನುಮತಿಸಲಾದ ಮಿತಿಗಿಂತ ಎಷ್ಟೋ ಪಟ್ಟು ಹೆಚ್ಚು, ಅಂದರೆ 1,000 ಪಿಪಿಎಂಗಿಂತಲೂ ಅಧಿಕ ಪಾದರಸ ಕಂಡುಬರುತ್ತಿದೆ. ಇದರಿಂದ ಬಾಧಿತರಾದ ರೋಗಿಗಳ ಮೇಲೆ ನಡೆಸಿದ ಅಧ್ಯಯನವೊಂದರಲ್ಲಿ ನೋವು, ಕಿಡ್ನಿ ಹಾನಿ ಮತ್ತು ನ್ಯುರೋಸೈಕಾಟ್ರಿಕ್ ಸಮಸ್ಯೆಗಳು ಪ್ರಮುಖ ಲಕ್ಷಣಗಳಾಗಿ ಕಂಡುಬಂದಿವೆ.
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ವರದಿಯ ಪ್ರಕಾರ, ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ನಿಷೇಧಗಳ ನಡುವೆಯೂ ಹಾಗೂ ಆರೋಗ್ಯದ ಅಪಾಯಗಳು ತಿಳಿದಿದ್ದರೂ, ಪಾದರಸ ಹೊಂದಿರುವ ಚರ್ಮ ಬೆಳ್ಳಗಾಗಿಸುವ ಉತ್ಪನ್ನಗಳು ಪ್ರಪಂಚದಾದ್ಯಂತ ಈಗಲೂ ಮಾರಾಟಕ್ಕೆ ಲಭ್ಯವಿವೆ.
17 ವರ್ಷಗಳ ಜಾಗತಿಕ ಕಣ್ಗಾವಲಿನ ಫಲವಾಗಿ 2026ರ ನವೆಂಬರ್ ನಲ್ಲಿ ಪ್ರಕಟವಾದ ಅಧ್ಯಯನವೊಂದು, ಪಾದರಸಕ್ಕಾಗಿ ಪರೀಕ್ಷಿಸಲಾದ ಫೇರ್ನೆಸ್ ಉತ್ಪನ್ನಗಳ ಅತಿ ದೊಡ್ಡ ದತ್ತಾಂಶವನ್ನು ನೀಡಿದೆ. ಸಂಶೋಧಕರು 34 ಸ್ಥಳಗಳಿಂದ ಸಂಗ್ರಹಿಸಿದ 2,090 ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸಿದ್ದರು. ಇದರಲ್ಲಿ ಶೇ. 66ರಷ್ಟು ಮಾದರಿಗಳಲ್ಲಿ ಪಾದರಸದ ಅಂಶ ಪತ್ತೆಯಾಗಿದ್ದು, ಶೇ. 49ರಷ್ಟು ಉತ್ಪನ್ನಗಳಲ್ಲಿ ಈ ವಿಷಕಾರಿ ಅಂಶವು 1 ಪಿಪಿಎಂ ಮಿತಿಗಿಂತ ಹೆಚ್ಚಾಗಿತ್ತು.
ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಪಾದರಸದ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಭಾರತ ಔಷಧ ನಿಯಂತ್ರಕ ಮಹಾನಿರ್ದೇಶನಾಲಯ (DCGI) ರಚಿಸಿದ್ದ ಉಪಸಮಿತಿಯು ಶಿಫಾರಸು ಮಾಡಿದೆ ಎಂದು 2025ರ ಜುಲೈನಲ್ಲಿ 'ಲೈವ್ಮಿಂಟ್' (LiveMint) ವರದಿ ಮಾಡಿತ್ತು.
ಇದು ಮೊದಲ ಪ್ರಕರಣವಲ್ಲ
ಮಲಪ್ಪುರಂನಲ್ಲಿ ನಡೆದ ಈ ಘಟನೆ ಕೇವಲ ಒಂದು ಪ್ರತ್ಯೇಕ ಪ್ರಕರಣವಲ್ಲ. ವೈದ್ಯರ ಸಲಹೆಯಿಲ್ಲದೆ ಔಷಧ ಅಂಗಡಿಗಳಲ್ಲಿ ಅಥವಾ ಆನ್ಲೈನ್ನಲ್ಲಿ ಖರೀದಿಸಿದ ಫೇರ್ನೆಸ್ ಕ್ರೀಮ್ ಗಳನ್ನು ಬಳಸಿ ಅಂಗಾಂಗ ವೈಫಲ್ಯಕ್ಕೆ ತುತ್ತಾದ ಅಮಾಯಕ ಗ್ರಾಹಕರ ಸರಣಿ ಪ್ರಕರಣಗಳು ಕೇರಳದಾದ್ಯಂತ ವೈದ್ಯಕೀಯ ದಾಖಲೆಗಳಲ್ಲಿ ಕಂಡುಬರುತ್ತವೆ.
17 ವರ್ಷದ ವಿದ್ಯಾರ್ಥಿನಿಯ ಪ್ರಕರಣ ಸುದ್ದಿಯಾಗುತ್ತಿದ್ದಂತೆ, ಕೇರಳಂನ ಜನಪ್ರಿಯ ಮಾಪಿಳ್ಳಪ್ಪಾಟ್ ಗಾಯಕ ಸಲೀಂ ಕೊಡತ್ತೂರ್ ಅವರು ತಮಗಾದ ಕಾಯಿಲೆಯ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ಕ್ರೀಮ್ ಬಳಸಿದಾಗ ಆರಂಭದಲ್ಲಿ ಚರ್ಮ ವೇಗವಾಗಿ ಬೆಳ್ಳಗಾಯಿತು. ಆ ನಂತರ ಚರ್ಮ ತೀವ್ರವಾಗಿ ಕಪ್ಪಾಗಲು ಶುರುವಾಯಿತು. ನಿರಂತರ ಮೂತ್ರದ ಸೋಂಕು ಮತ್ತು ದೇಹದಾದ್ಯಂತ ಊತ ಕಾಣಿಸಿಕೊಂಡವು. ತಿಂಗಳುಗಟ್ಟಲೆ ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾದ ಬಳಿಕವಷ್ಟೇ, ಭಾರೀ ಲೋಹದ ವಿಷಪ್ರಾಶನದಿಂದ ಕಿಡ್ನಿಗೆ ಹಾನಿಯಾಗಿದೆ ಎಂಬುದನ್ನು ವೈದ್ಯರು ಪತ್ತೆಹಚ್ಚಿದರು ಎಂದು ಅವರು ಹೇಳಿದ್ದಾರೆ.
ಹೆಸರಿಲ್ಲದ ಫೇರ್ನೆಸ್ ಕ್ರೀಮ್ಗಳೂ ಒಂದು ದೊಡ್ಡ ಸಮಸ್ಯೆ
ಸಮಸ್ಯೆ ಕೇವಲ ಪಾದರಸದ ಕಲಬೆರಕೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಚರ್ಮರೋಗ ತಜ್ಞರು ಎಚ್ಚರಿಸಿದ್ದಾರೆ. 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಜತೆ ಮಾತನಾಡಿದ ಕೋಝಿಕ್ಕೋಡ್ನ 'ಅಲ್ಯೂರ್ ಸ್ಕಿನ್ ಕ್ಲಿನಿಕ್'ನ (Aluer Skin Clinic) ಚರ್ಮರೋಗ ತಜ್ಞೆ ಡಾ. ಅಲಿಶಾ ನಹಾ, ಯಾವುದೇ ಮಾಹಿತಿ ಅಥವಾ ಲೇಬಲ್ ಇಲ್ಲದ ಫೇರ್ನೆಸ್ ಕ್ರೀಮ್ಗಳನ್ನು ಬಳಸಿ ಅಡ್ಡಪರಿಣಾಮಗಳಿಗೆ ತುತ್ತಾದ ರೋಗಿಗಳು ತಮ್ಮ ಬಳಿ ಆಗಾಗ ಬರುತ್ತಿರುತ್ತಾರೆ ಎಂದು ಹೇಳಿದ್ದಾರೆ. ಈ ಕ್ರೀಮ್ಗಳು ಮೊದಲ ಒಂದು ಅಥವಾ ಎರಡು ತಿಂಗಳು ತಕ್ಷಣದ ಫಲಿತಾಂಶವನ್ನು ತೋರಿಸಬಹುದು. ನಂತರ ಬಳಕೆದಾರರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಲು ಶುರುವಾಗಿ ವೈದ್ಯರ ಬಳಿ ಬರುತ್ತಾರೆ. ಇವುಗಳನ್ನು ಬಳಸುವವರಲ್ಲಿ ಚರ್ಮ ತೆಳುವಾಗುವುದು, ಚರ್ಮದ ಮೇಲೆ ಸಣ್ಣ ರಕ್ತನಾಳಗಳು ಎದ್ದು ಕಾಣುವುದು (telangiectasia), ನಿಯಂತ್ರಿಸಲಾಗದ ಮೊಡವೆಗಳು, ಬಿಸಿಲಿಗೆ ಅತಿಯಾದ ಸಂವೇದನೆ ಮತ್ತು ತುರಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಭಾರತೀಯ ಸೌಂದರ್ಯವರ್ಧಕ ಮಾರುಕಟ್ಟೆಗೆ ಪ್ರವೇಶಿಸುವ ಉತ್ಪನ್ನಗಳ ಮೇಲೆ ಸೂಕ್ತ ನಿಯಂತ್ರಣ ಇಲ್ಲದಿರುವುದೇ ದೊಡ್ಡ ಕಳವಳಕಾರಿ ಸಂಗತಿ ಎಂದು ಡಾ. ನಹಾ ಅಭಿಪ್ರಾಯಪಟ್ಟಿದ್ದಾರೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳದೆಯೇ 'ಹೋಮ್ಮೇಡ್' (ಮನೆಯಲ್ಲಿ ತಯಾರಿಸಿದ್ದು), 'ಹ್ಯಾಂಡ್ಮೇಡ್', 'ನೈಸರ್ಗಿಕ' ಅಥವಾ 'ಸಾವಯವ' (ಆರ್ಗ್ಯಾನಿಕ್) ಎಂಬ ಹೆಸರಿನಲ್ಲಿ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಉತ್ಪನ್ನಗಳ ಮೇಲೆ ಅದರಲ್ಲಿರುವ ಪದಾರ್ಥಗಳ ಸರಿಯಾದ ಪಟ್ಟಿ ಇಲ್ಲದಿದ್ದಾಗ ಗ್ರಾಹಕರು ಸುಲಭವಾಗಿ ಮೋಸಹೋಗುತ್ತಾರೆ. ಅಲ್ಲದೆ, ಅಂತಾರಾಷ್ಟ್ರೀಯ ಸೌಂದರ್ಯವರ್ಧಕ ಬ್ರಾಂಡ್ಗಳ ನಕಲಿ ಉತ್ಪನ್ನಗಳನ್ನು ಅಸಲಿಯಂತೆಯೇ ಪ್ಯಾಕ್ ಮಾಡಿ ಆನ್ಲೈನ್ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.
ಮಲಪ್ಪುರಂನ ಮೂತ್ರಪಿಂಡ ತಜ್ಞ ಡಾ. ಇರ್ಫಾನ್ ಅಹ್ಮದ್ ಅವರು 47 ವರ್ಷದ ಮಹಿಳೆಯೊಬ್ಬರ ಪ್ರಕರಣವನ್ನು ನೆನಪಿಸಿಕೊಂಡಿದ್ದಾರೆ. ಆ ಮಹಿಳೆಯ ಎರಡೂ ಕಾಲು ಮತ್ತು ಪಾದಗಳಲ್ಲಿ ನಿರಂತರವಾಗಿ ಊತ ಕಾಣಿಸಿಕೊಂಡಿತ್ತು. ಪರೀಕ್ಷೆ ನಡೆಸಿದಾಗ ಮೂತ್ರದಲ್ಲಿ ಪ್ರೋಟೀನ್ ಸೋರಿಕೆಯಾಗುತ್ತಿರುವುದು (proteinuria) ಪತ್ತೆಯಾಯಿತು. ಕಿಡ್ನಿ ಬಯಾಪ್ಸಿ ಮಾಡಿದಾಗ 'ಮೆಂಬ್ರಾನಸ್ ನೆಫ್ರೋಪತಿ' ಇರುವುದು ದೃಢಪಟ್ಟಿತು. ಈ ಕಾಯಿಲೆಯಲ್ಲಿ ಕಿಡ್ನಿಯ ಶೋಧನಾ ಪೊರೆಗಳಿಗೆ ಹಾನಿಯಾಗಿ ಮೂತ್ರದ ಮೂಲಕ ಪ್ರೋಟೀನ್ ಹೊರಹೋಗುತ್ತದೆ.
ತನ್ನ ಚರ್ಮದ ಬಣ್ಣದ ಬಗ್ಗೆ ಅಸಮಾಧಾನ ಹೊಂದಿದ್ದ ಆ ಮಹಿಳೆ, ಸ್ಥಳೀಯ ಔಷಧ ವ್ಯಾಪಾರಿಯೊಬ್ಬರ ಸಲಹೆಯ ಮೇರೆಗೆ ಎರಡು ವರ್ಷಗಳಿಂದ ಬ್ಯೂಟಿ ಕ್ರೀಮ್ ಬಳಸುತ್ತಿದ್ದುದಾಗಿ ನಂತರ ತಿಳಿಸಿದ್ದರು. ತೋಳಿನ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಂಡ ಬಳಿಕ ಚರ್ಮರೋಗ ತಜ್ಞರ ಸಲಹೆಯಂತೆ ಆಕೆ ಕ್ರೀಮ್ ಬಳಕೆಯನ್ನು ನಿಲ್ಲಿಸಿದ್ದರು. "ಇದು ಕೇವಲ ಒಂದೇ ಒಂದು ಪ್ರಕರಣವಲ್ಲ. ಇಂತಹ ತಕ್ಷಣದ ಸೌಂದರ್ಯವರ್ಧಕ ಪರಿಹಾರಗಳ ಬೆನ್ನುಬಿದ್ದು ಈಗಾಗಲೇ ನೂರಾರು ಸಂತ್ರಸ್ತರು ಚಿಕಿತ್ಸೆ ಪಡೆದಿದ್ದಾರೆ" ಎಂದು ಡಾ. ಅಹ್ಮದ್ ಹೇಳಿದ್ದಾರೆ.
ಮೋಸಗೊಳಿಸುವ ಲೇಬಲ್ ಗಳು ಮತ್ತು ಇನ್ಫ್ಲುಯೆನ್ಸರ್ ಗಳ ಪ್ರಚಾರ
ಸಾಮಾಜಿಕ ಜಾಲತಾಣಗಳು ಮತ್ತು ಇ-ಕಾಮರ್ಸ್ನ ವೇಗದ ಬೆಳವಣಿಗೆಯು ಅಕ್ರಮ ಹಾಗೂ ಲೇಬಲ್ ಇಲ್ಲದ ಸೌಂದರ್ಯವರ್ಧಕ ತಯಾರಕರಿಗೆ ವರದಾನವಾಗಿದೆ. ಇದರ ಮೂಲಕ ಅವರು ಹದಿಹರೆಯದವರು ಮತ್ತು ಯುವಜನರನ್ನು ಸುಲಭವಾಗಿ ತಲುಪುತ್ತಿದ್ದಾರೆ.
ನಿಯಂತ್ರಣವಿಲ್ಲದ ಬ್ಯೂಟಿ ಬ್ರಾಂಡ್ ಗಳು ಸುಳ್ಳು ನಂಬಿಕೆ ಹುಟ್ಟಿಸಲು ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳನ್ನು ಬಳಸಿಕೊಳ್ಳುತ್ತವೆ. 'ಎಫ್ಟ್ಯೂನ್' (Ftune) ನಂತಹ ಉತ್ಪನ್ನಗಳನ್ನು ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಚಾನೆಲ್ಗಳ ಮೂಲಕ ಭರ್ಜರಿಯಾಗಿ ಪ್ರಚಾರ ಮಾಡಲಾಗಿತ್ತು. ಇವುಗಳ ಅಸಲಿ ರಾಸಾಯನಿಕ ಸಂಯೋಜನೆಯನ್ನು ಮರೆಮಾಚಲು ಆಕರ್ಷಕ ಭರವಸೆಗಳನ್ನು ನೀಡಲಾಗಿತ್ತು.
ನೈಸರ್ಗಿಕ ಎಂಬ ಸುಳ್ಳು ಭರವಸೆ:
ಗ್ರಾಹಕರ ಅನುಮಾನವನ್ನು ದೂರಮಾಡಲು ಈ ಉತ್ಪನ್ನಗಳನ್ನು ಸಾಂಪ್ರದಾಯಿಕ ಅಜ್ಜಿಯ ಮನೆಮದ್ದುಗಳು, ಸಾವಯವ (ಆರ್ಗ್ಯಾನಿಕ್) ಅಥವಾ ನೈಸರ್ಗಿಕ ಗಿಡಮೂಲಿಕೆ ಕ್ರೀಮ್ ಗಳು ಎಂದು ಬಿಂಬಿಸಲಾಗುತ್ತದೆ.
ಪದಾರ್ಥಗಳ ಅಪೂರ್ಣ ಮಾಹಿತಿ:
ಉತ್ಪನ್ನಗಳ ಲೇಬಲ್ ಗಳಲ್ಲಿ ನಿಯಾಸಿನಮೈಡ್, ಗ್ಲುಟಾಥಿಯೋನ್, ಕೋಜಿಕ್ ಆಸಿಡ್, ಆಲ್ಫಾ ಅರ್ಬುಟಿನ್, ಶ್ರೀಗಂಧ ಅಥವಾ ಅರಿಶಿನದಂತಹ ಸಾಮಾನ್ಯ ಪದಾರ್ಥಗಳ ಹೆಸರನ್ನು ಮಾತ್ರ ನಮೂದಿಸಲಾಗಿರುತ್ತದೆ. ಆದರೆ, ಅವುಗಳ ನಿಖರ ಪ್ರಮಾಣ ಎಷ್ಟಿದೆ ಅಥವಾ ಅವುಗಳಲ್ಲಿ ರಹಸ್ಯವಾಗಿ ಬೆರೆಸಿರುವ ವಿಷಕಾರಿ ಭಾರೀ ಲೋಹಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ.
ಮೂಲ ಪತ್ತೆಹಚ್ಚಲು ಅಸಾಧ್ಯ:
ತಯಾರಕರ ಹೆಸರು, ಬ್ಯಾಚ್ ಸಂಖ್ಯೆ, ಉತ್ಪಾದನಾ ದಿನಾಂಕ ಮತ್ತು ಅವಧಿ ಮುಗಿಯುವ ದಿನಾಂಕದಂತಹ ಕನಿಷ್ಠ ಕಾನೂನುಬದ್ಧ ವಿವರಗಳೂ ಈ ಉತ್ಪನ್ನಗಳ ಮೇಲೆ ಇರುವುದಿಲ್ಲ.
ಮೊದಲೇ ಎಚ್ಚರಿಕೆ ನೀಡಲಾಗಿತ್ತು
ಮೊಡವೆಗಳ ನಿವಾರಣೆಗೆ ಅರಿಶಿನದ ಸಾರ, ಕಪ್ಪು ಕಲೆಗಳಿಗೆ ಶ್ರೀಗಂಧ, ಸುಕ್ಕುಗಳಿಗೆ ನಿಯಾಸಿನಮೈಡ್ ಮತ್ತು ಚರ್ಮದ ಕಾಂತಿಗೆ ಗ್ಲುಟಾಥಿಯೋನ್ ಅಂಶಗಳು ತಮ್ಮ ಕ್ರೀಮ್ನಲ್ಲಿವೆ ಎಂದು 'ಎಫ್ಟ್ಯೂನ್' (Ftune) ತಯಾರಕರು ಹೇಳಿಕೊಂಡಿದ್ದರು. ಇದೇ ಪದಾರ್ಥಗಳ ಹೆಸರನ್ನು ಹಲವು ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ಗಳು ಭರ್ಜರಿಯಾಗಿ ಪ್ರಚಾರ ಮಾಡಿದ್ದರು.
ಆದರೆ, ಕಳೆದ ಆಗಸ್ಟ್ ನಲ್ಲೇ '@Dr Madhu_dermatologist' ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಈ ಕ್ರೀಮ್ ಬಳಸಬಾರದೆಂದು ತಮ್ಮ ಫಾಲೋವರ್ಸ್ಗೆ ಎಚ್ಚರಿಕೆ ನೀಡಿದ್ದರು. ವೀಡಿಯೊವೊಂದರಲ್ಲಿ ಮಾತನಾಡಿದ್ದ ಅವರು, ಈ ಉತ್ಪನ್ನವು ಚರ್ಮದ ಎಲ್ಲಾ ಸಮಸ್ಯೆಗಳನ್ನು ಒಟ್ಟಿಗೆ ಗುಣಪಡಿಸುವುದಾಗಿ ಹೇಳಿಕೊಳ್ಳುತ್ತಿರುವುದೇ ದೊಡ್ಡ ಅಪಾಯದ ಮುನ್ಸೂಚನೆ ಎಂದಿದ್ದರು. ಅಲ್ಲದೆ, ಲೇಬಲ್ ನಲ್ಲಿ ಚರ್ಮ ಬೆಳ್ಳಗಾಗಿಸುವ ನಿಯಾಸಿನಮೈಡ್, ಗ್ಲುಟಾಥಿಯೋನ್, ಕೋಜಿಕ್ ಆಸಿಡ್ ಮತ್ತು ಆಲ್ಫಾ ಅರ್ಬುಟಿನ್ನಂತಹ ಪದಾರ್ಥಗಳ ಹೆಸರನ್ನು ನಮೂದಿಸಲಾಗಿದ್ದರೂ, ಅವು ಎಷ್ಟು ಪ್ರಮಾಣದಲ್ಲಿವೆ ಎಂಬುದನ್ನು ಎಲ್ಲಿಯೂ ತಿಳಿಸಿಲ್ಲ ಎಂದಿದ್ದರು. ಯಾವುದೇ ಪ್ರಯೋಗಾಲಯದ ವರದಿಯ ಆಧಾರವಿಲ್ಲದಿದ್ದರೂ, ಈ ಕ್ರೀಮ್ ನಲ್ಲಿ ಪಾದರಸ ಇರುವ ಸಾಧ್ಯತೆಯಿದೆ ಎಂದು ಅವರು ಆ ವಿಡಿಯೊದ ಕೊನೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು ಎಂದು 'ದಿ ನ್ಯೂಸ್ ಮಿನಿಟ್' ವರದಿ ಉಲ್ಲೇಖಿಸಿದೆ.
ಇಷ್ಟೆಲ್ಲ ವಿವಾದಗಳ ನಡುವೆಯೂ 'ಎಫ್ಟ್ಯೂನ್' ಉತ್ಪನ್ನವು ಪ್ರಸ್ತುತ Amazonನಂತಹಾ ಆನ್ಲೈನ್ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.
ಸರ್ಕಾರದ ಕಠಿಣ ಕ್ರಮ ಮತ್ತು ಕಾನೂನು ಹೋರಾಟ
ಸಾರ್ವಜನಿಕರ ತೀವ್ರ ಆಕ್ರೋಶದ ಬೆನ್ನಲ್ಲೇ, ಕೇರಳಂ ಆರೋಗ್ಯ ಸಚಿವ ಕೆ. ಮುರಳೀಧರನ್ ಅವರು ಅನಿಯಂತ್ರಿತ ಸೌಂದರ್ಯವರ್ಧಕಗಳು, ಅನುಮೋದನೆಯಿಲ್ಲದ ಹೆಲ್ತ್ ಸಪ್ಲಿಮೆಂಟ್ ಗಳು ಮತ್ತು ಇಂತಹ ಉತ್ಪನ್ನಗಳನ್ನು ಪ್ರಚಾರ ಮಾಡುವ ಆನ್ಲೈನ್ ವ್ಲಾಗರ್ ಗಳ ವಿರುದ್ಧ ಸಮಗ್ರ ಕಾರ್ಯಾಚರಣೆಗೆ ಆದೇಶಿಸಿದ್ದಾರೆ. ಅಕ್ರಮ ಸೌಂದರ್ಯವರ್ಧಕಗಳನ್ನು ವಶಪಡಿಸಿಕೊಳ್ಳಲು ಮತ್ತು ಸರಬರಾಜು ಕೇಂದ್ರಗಳ ಮೇಲೆ ನಿಗಾ ಇಡಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಾಳಿ ನಡೆಸುವಂತೆ ರಾಜ್ಯ ಔಷಧ ನಿಯಂತ್ರಣ ಇಲಾಖೆಗೆ ಸೂಚಿಸಲಾಗಿದೆ. ಅದೇ ವೇಳೆ, ಅಕ್ರಮ ಫೇರ್ನೆಸ್ ಕ್ರೀಮ್ ಗಳನ್ನು ಮಾರಾಟ ಮಾಡುವ ಸಂಸ್ಥೆಗಳು, ವಿತರಕರು ಅಥವಾ ಅಂಗಡಿಗಳ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸುವುದರ ಜೊತೆಗೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಈಗಾಗಲೇ ಮಂಗಳೂರು-ಕಾಸರಗೋಡು ಪ್ರದೇಶದ ಮೂಲಕ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಸರಬರಾಜು ಮಾರ್ಗಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇದರಲ್ಲಿ ತಯಾರಕರ ಯಾವುದೇ ಲೇಬಲ್ ಗಳಿಲ್ಲದೆ ಪಾಕಿಸ್ತಾನದಿಂದ ಅಕ್ರಮವಾಗಿ ಬರುತ್ತಿರುವ ಉತ್ಪನ್ನಗಳೂ ಸೇರಿವೆ. ಅಪ್ರಾಪ್ತ ವಯಸ್ಕರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ (suo motu) ಪ್ರಕರಣ ದಾಖಲಿಸಿಕೊಂಡಿದೆ. ಮತ್ತೊಂದೆಡೆ, ಸಂತ್ರಸ್ತ ಯುವತಿಯ ದೂರಿನ ಆಧಾರದ ಮೇಲೆ ಅರೀಕೋಡ್ ಪೊಲೀಸರು FIR ದಾಖಲಿಸಿದ್ದು, ಉತ್ಪನ್ನದ ಸರಬರಾಜು ಜಾಲವನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮಧ್ಯಪ್ರದೇಶ ಸರ್ಕಾರವೂ ರಾಜ್ಯಾದ್ಯಂತ ಪಾಕಿಸ್ತಾನ ನಿರ್ಮಿತ ಫೇರ್ನೆಸ್ ಕ್ರೀಮ್ಗಳ ವಿರುದ್ಧ ಕಠಿಣ ಕಾರ್ಯಾಚರಣೆ ಆರಂಭಿಸಿತ್ತು. ಇವುಗಳ ಪೂರೈಕೆ ಜಾಲದ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಲ್ಲದೆ, ಆಹಾರ ಮತ್ತು ಔಷಧ ಆಡಳಿತವು (FDA) ಈ ಕ್ರೀಮ್ ಗಳನ್ನು ಬಳಸದಂತೆ ರಾಜ್ಯಾದ್ಯಂತ ಸಾರ್ವಜನಿಕ ಆರೋಗ್ಯ ಎಚ್ಚರಿಕೆಯನ್ನು ಹೊರಡಿಸಿತ್ತು ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಅರಿವಿನ ಕೊರತೆ
ಸಾಮಾಜಿಕ ಜಾಲತಾಣಗಳ ಸೌಂದರ್ಯದ ಟ್ರೆಂಡ್ಗಳನ್ನು ಅನುಸರಿಸುವುದು ಮತ್ತು ವೈದ್ಯರ ಚೀಟಿಯಿಲ್ಲದೆ ಆನ್ಲೈನ್ ನಲ್ಲಿ ಅಥವಾ ಔಷಧ ಅಂಗಡಿಗಳಲ್ಲಿ ಕ್ರೀಮ್ಗಳನ್ನು ಖರೀದಿಸಿ ಹಚ್ಚಿಕೊಳ್ಳುವುದರ ವಿರುದ್ಧ ಭಾರತೀಯ ಚರ್ಮರೋಗ ತಜ್ಞರ ಸಂಘದ (IADVL) ಮಾಜಿ ಅಧ್ಯಕ್ಷ ಎಂ.ಎಂ. ಫೈಜಲ್ ಎಚ್ಚರಿಕೆ ನೀಡಿದ್ದಾರೆ. 'ದಿ ಹಿಂದೂ' ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಚರ್ಮದ ಮೇಲೆ ಹಚ್ಚುವ ಕ್ರೀಮ್ಗಳು ಹೇಗೆ ರಕ್ತವನ್ನು ಸೇರುತ್ತವೆ ಎಂಬುದರ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿದೆ ಎಂದು ಹೇಳಿದ್ದಾರೆ.
"ಜನರಿಗೆ ಬೆಳ್ಳಗಾಗುವ ವ್ಯಾಮೋಹ ಹೆಚ್ಚಾಗಿದೆ. ಔಷಧ ಅಂಗಡಿಗಳಲ್ಲಿ ಸುಲಭವಾಗಿ ಸಿಗುವ ಸ್ಟೀರಾಯ್ಡ್ ಕ್ರೀಮ್ ಗಳನ್ನು ಖರೀದಿಸಿ ಮುಖಕ್ಕೆ ಹಚ್ಚಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇಂತಹ ಸ್ಟೀರಾಯ್ಡ್ ಆಧಾರಿತ ಕ್ರೀಮ್ಗಳು ಮತ್ತು ಪಾದರಸದಂತಹ ಭಾರೀ ಲೋಹಗಳನ್ನು ಹೊಂದಿರುವ ಉತ್ಪನ್ನಗಳು ನಿಮ್ಮ ಕಿಡ್ನಿಗಳನ್ನು ಸುಲಭವಾಗಿ ಹಾಳುಮಾಡಬಲ್ಲವು. ಇದನ್ನು ನಿಯಂತ್ರಿಸಲು ಸರ್ಕಾರ ಸೂಕ್ತ ವ್ಯವಸ್ಥೆ ತರಬೇಕಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹದಿಹರೆಯದವರಿಗೆ ಹೆಚ್ಚಿನ ಅಪಾಯ
ನಕಲಿ ಸೌಂದರ್ಯವರ್ಧಕಗಳನ್ನು ಅವಲಂಬಿಸುವ ಹದಿಹರೆಯದವರ ಸಂಖ್ಯೆ ಹೆಚ್ಚಾದ ಕಾರಣ, ಕೇರಳದ ಔಷಧ ನಿಯಂತ್ರಣ ಇಲಾಖೆಯು 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಾಗೃತಿ ಅಭಿಯಾನಗಳನ್ನು ಆರಂಭಿಸಿದೆ. ಆನ್ಲೈನ್ ಜಾಹೀರಾತುಗಳಿಗೆ ಈ ವಯೋಮಾನದವರು ಸುಲಭವಾಗಿ ಮರುಳಾಗುತ್ತಾರೆ. ಇಂತಹ ಕಳಪೆ ಸೌಂದರ್ಯವರ್ಧಕಗಳನ್ನು ವಶಪಡಿಸಿಕೊಳ್ಳಲು ಮಾರುಕಟ್ಟೆಗಳಲ್ಲಿ ಆಗಾಗ ತಪಾಸಣೆಯನ್ನೂ ನಡೆಸಲಾಗುತ್ತಿದೆ.
ಇಂತಹ ನಕಲಿ ಸೌಂದರ್ಯವರ್ಧಕಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೊಂದೇ ಮುಂದಿರುವ ದಾರಿ ಎಂದು ರಾಜ್ಯ ಔಷಧ ನಿಯಂತ್ರಕ ಕೆ. ಸುಜಿತ್ ಕುಮಾರ್ ಹೇಳಿರುವುದಾಗಿ 'ದಿ ಹಿಂದೂ' ವರದಿ ಉಲ್ಲೇಖಿಸಿದೆ.
"ಹೆಚ್ಚಿನ ಪ್ರಮಾಣದ ಪಾದರಸ ಹೊಂದಿರುವ ಸೌಂದರ್ಯವರ್ಧಕಗಳನ್ನು ನಾವು ಸಾಮಾನ್ಯ ಮಾರುಕಟ್ಟೆಗಳಿಂದ (ಆಫ್ಲೈನ್) ವಶಪಡಿಸಿಕೊಂಡಿದ್ದೇವೆ. ಆದರೆ, ಆನ್ಲೈನ್ ಮಾರುಕಟ್ಟೆಗಳ ಮೇಲೆ ನಿಗಾ ಇಡಲು ಅಥವಾ ಅವುಗಳನ್ನು ನಿಯಂತ್ರಿಸಲು ಯಾವುದೇ ಮಾರ್ಗವಿಲ್ಲ" ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇಂತಹ ಕ್ರೀಮ್ ಗಳನ್ನು ದೀರ್ಘಕಾಲ ಬಳಸುವುದರಿಂದ ಕಿಡ್ನಿ ಹಾನಿಯಾಗಬಹುದು ಎಂದು ಕೇರಳ ನೆಫ್ರಾಲಜಿ ಸಂಘದ ಮಾಜಿ ಕಾರ್ಯದರ್ಶಿ ಜಯಂತ್ ಥಾಮಸ್ ಮ್ಯಾಥ್ಯೂ ಹೇಳಿದ್ದಾರೆ. ಕ್ರೀಮ್ ಬಳಕೆದಾರರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಂಡ ಕೆಲವು ಪ್ರಕರಣಗಳನ್ನು ತಾವು ನೋಡಿರುವುದಾಗಿ ಅವರು ತಿಳಿಸಿದ್ದಾರೆ. ರೋಗಿಗಳಿಗೆ ರೋಗಲಕ್ಷಣಗಳ ಬಗ್ಗೆ ಅರಿವಿದ್ದ ಕಾರಣ, ಆರಂಭಿಕ ಹಂತದಲ್ಲೇ ಕಾಯಿಲೆಯನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಆ ರೋಗಿಗಳು ಫೇರ್ನೆಸ್ ಕ್ರೀಮ್ ಗಳನ್ನು ಬಳಸಿದ್ದರು ಮತ್ತು ಕಿಡ್ನಿ ಸಮಸ್ಯೆಗೆ ಸಂಬಂಧಿಸಿದ ಲಕ್ಷಣಗಳನ್ನು ಗಮನಿಸಿದ್ದರು. ಅವರಿಗೆ ಮೆಂಬ್ರಾನಸ್ ನೆಫ್ರೋಪತಿ ಇರುವ ಸಾಧ್ಯತೆಯಿತ್ತು. ಅವರು ಬಹಳ ಬೇಗನೆ ವೈದ್ಯಕೀಯ ನೆರವು ಪಡೆದಿದ್ದರಿಂದ ಚಿಕಿತ್ಸೆ ನೀಡಲು ಸಾಧ್ಯವಾಯಿತು ಎಂದು ಡಾ. ಮ್ಯಾಥ್ಯೂ ಹೇಳಿದ್ದಾರೆ.
ಗ್ರಾಹಕರ ಸುರಕ್ಷತೆಗೆ ಪ್ರಮುಖ ಮಾರ್ಗಸೂಚಿಗಳು
ವಿಷಕಾರಿ ಸೌಂದರ್ಯವರ್ಧಕಗಳ ಅಪಾಯದಿಂದ ಪಾರಾಗಲು, ಯಾವುದೇ ಚರ್ಮದ ಉತ್ಪನ್ನವನ್ನು ಖರೀದಿಸುವ ಮೊದಲು ಈ ಕೆಳಗಿನ ಅಂಶಗಳನ್ನು ಪರಿಶೀಲಿಸುವಂತೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಅಧಿಕೃತ ಅನುಮೋದನೆ ಪರಿಶೀಲಿಸಿ:
ಸೌಂದರ್ಯವರ್ಧಕದ ಪ್ಯಾಕೆಟ್ ಮೇಲೆ ತಯಾರಕರ ಅಧಿಕೃತ ಹೆಸರು, ಪೂರ್ಣ ವಿಳಾಸ, ಪರವಾನಗಿ ಸಂಖ್ಯೆ, ಬ್ಯಾಚ್ ಸಂಖ್ಯೆ ಹಾಗೂ ಉತ್ಪಾದನೆ ಮತ್ತು ಅವಧಿ ಮುಗಿಯುವ ದಿನಾಂಕಗಳು ಸ್ಪಷ್ಟವಾಗಿ ನಮೂದಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.
ಲೇಬಲ್ ಇಲ್ಲದ ಕ್ರೀಮ್ಗಳನ್ನು ತಿರಸ್ಕರಿಸಿ:
ಯಾವುದೇ ಮಾಹಿತಿಯಿಲ್ಲದ ಸಾದಾ ಡಬ್ಬಿಗಳಲ್ಲಿ, ಲೇಬಲ್ ಇಲ್ಲದ ಪಾತ್ರೆಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳ ನೇರ ಸಂದೇಶಗಳ ಮೂಲಕ ಪದಾರ್ಥಗಳ ಪೂರ್ಣ ವಿವರವಿಲ್ಲದೆ ಮಾರಾಟ ಮಾಡುವ ಯಾವುದೇ ಉತ್ಪನ್ನಗಳನ್ನು ಖರೀದಿಸಬೇಡಿ.
ತಕ್ಷಣದ 'ಮ್ಯಾಜಿಕ್' ಫಲಿತಾಂಶಗಳ ಬಗ್ಗೆ ಎಚ್ಚರವಿರಲಿ:
ಕೆಲವೇ ದಿನಗಳು ಅಥವಾ ವಾರಗಳಲ್ಲಿ ಚರ್ಮ ವೇಗವಾಗಿ ಬೆಳ್ಳಗಾಗುತ್ತದೆ ಎಂದರೆ, ಅದರಲ್ಲಿ ಅಕ್ರಮ ಭಾರೀ ಲೋಹಗಳು ಅಥವಾ ಪ್ರಬಲ ಸ್ಟೀರಾಯ್ಡ್ ಗಳನ್ನು ಬೆರೆಸಲಾಗಿದೆ ಎಂಬುದರ ಸ್ಪಷ್ಟ ಸಂಕೇತವಾಗಿದೆ.
ಆರಂಭಿಕ ಲಕ್ಷಣಗಳನ್ನು ಗುರುತಿಸಿ:
ಮುಖ ಅಥವಾ ಕಾಲುಗಳಲ್ಲಿ ಊತ, ಮೂತ್ರದಲ್ಲಿ ನೊರೆ ಬರುವುದು, ಚರ್ಮ ಕಪ್ಪಾಗುವುದು ಅಥವಾ ಯಾವುದೇ ಕಾರಣವಿಲ್ಲದೆ ತಲೆಸುತ್ತು ಕಾಣಿಸಿಕೊಂಡರೆ ತಕ್ಷಣವೇ ಆ ಉತ್ಪನ್ನದ ಬಳಕೆಯನ್ನು ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಿ.






