IPS ಅಧಿಕಾರಿ ಬುಶ್ರಾ ಬಾನೊ ಅವರ ವರ್ಗಾವಣೆಗೆ ‘ಹಿಂದೂ ಲೀಗಲ್ ಫಂಡ್’ ಕಾರಣವಾಗಿದ್ದು ಹೇಗೆ?
►ಅಲಿಝಾ ನೂರ್ & ಅಲಿಝಾ ಝಿಯಾ - thequint. com ವರದಿ

IPS ಅಧಿಕಾರಿ ಬುಶ್ರಾ ಬಾನೊ | Photo Credit : facebook
IPS ಅಧಿಕಾರಿ ಬುಶ್ರಾ ಬಾನೊ ಅವರನ್ನು ಪಶ್ಚಿಮ ಬಂಗಾಳ ಸರ್ಕಾರವು ವರ್ಗಾವಣೆ ಮಾಡಲು ಕೇವಲ ಮೂರು ಅರೇಬಿಕ್ ಪದಗಳೇ ಸಾಕಾಗಿತ್ತು. ಅವರ ವರ್ಗಾವಣೆಗೂ ಮುನ್ನ ‘ಹಿಂದೂ ನೆಟ್ವರ್ಕ್ ಫೌಂಡೇಶನ್’ನ ಅಂಗಸಂಸ್ಥೆಯಾದ ‘ಹಿಂದೂ ಲೀಗಲ್ ಫಂಡ್’ (HLF) ಬಾನೊ ವಿರುದ್ಧ ದೂರು ನೀಡಿತ್ತು. ಈ ವರ್ಗಾವಣೆಯ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು, ಆದರೆ ಅವರ ವಿರುದ್ಧದ ಈ ದ್ವೇಷದ ಅಭಿಯಾನದ ಹಿಂದೆ ಯಾರಿದ್ದಾರೆ ಮತ್ತು ಯಾವ ಅಂಶಗಳಿವೆ ಎಂಬುದು ಹೆಚ್ಚಿನ ಸುದ್ದಿಗಳಲ್ಲಿ ಕಾಣೆಯಾಗಿತ್ತು. ಆ ಸಂಚಿನ ಕೇಂದ್ರಬಿಂದು HLF ಆಗಿದೆ.
ಬಾನೊ ಅವರು ಸುಮಾರು ಎರಡು ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಖರಗ್ ಪುರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದರು. ಆದರೆ ಈಗ ಅವರನ್ನು ರಾಜ್ಯ ಸಶಸ್ತ್ರ ಪೊಲೀಸರ 4ನೇ ಬೆಟಾಲಿಯನ್ ನ ಉಪ ಕಮಾಂಡೆಂಟ್ ಆಗಿ ವರ್ಗಾವಣೆ ಮಾಡಲಾಗಿದೆ.
ಸೆಪ್ಟೆಂಬರ್ 13ರಂದು ಬಾನೊ ಅವರು UPSC ಆಕಾಂಕ್ಷಿಗಳಿಗೆ ಸ್ಫೂರ್ತಿ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇವಲ ಒಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಪರೀಕ್ಷೆಗಳಿಗೆ ಸಿದ್ಧರಾಗಲು ಸಹಾಯ ಮಾಡಿದ ಅಲಿಘಡ್ ಮುಸ್ಲಿಮ್ ವಿಶ್ವವಿದ್ಯಾಲಯದ ರೆಸಿಡೆನ್ಸಿಯಲ್ ಕೋಚಿಂಗ್ ಅಕಾಡೆಮಿಯಲ್ಲಿನ (RCA) ತಮ್ಮ ಅನುಭವದ ಬಗ್ಗೆ ಮಾತನಾಡುತ್ತಾ, ಅವರು ತಮ್ಮ ವೀಡಿಯೊವನ್ನು ‘ಅಸ್ಲಾಮು ಅಲೈಕುಮ್’ನೊಂದಿಗೆ ಪ್ರಾರಂಭಿಸಿ, ‘ಇನ್ಶಾ ಅಲ್ಲಾ’ ಮತ್ತು ‘ಜಝಕಲ್ಲಾ’ ಎಂದು ಹೇಳಿದ್ದರು.
ಇದಾದ ತಕ್ಷಣವೇ, ಅವರು ಅರೇಬಿಕ್ ಪದಗಳನ್ನು ಬಳಸಿದ್ದಾರೆ ಹಾಗೂ ‘ವಂದೇ ಮಾತರಂ ಅಥವಾ ಜೈ ಹಿಂದ್ ಬಳಸಿಲ್ಲ’ ಎಂದು ಆರೋಪಿಸಿ HLF ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿತು.
►ಹಿಂದೂ ಲೀಗಲ್ ಫಂಡ್ ಎಂದರೇನು?
ಸನಾತನ ಧರ್ಮದ ಸೇವೆ ಮಾಡುವವರಿಗೆ ಬೆಂಬಲ ನೀಡಲು 1,000 ಕೋಟಿ ರೂಪಾಯಿಗಳ ನಿಧಿಯನ್ನು ಸಂಗ್ರಹಿಸುವುದೇ ಈ ಹಿಂದೂ ನಿಧಿಯ ಗುರಿಯಾಗಿದೆ ಎಂದು ಅವರ ವೆಬ್ ಸೈಟ್ನಲ್ಲಿ ಪದೇ ಪದೇ ಉಲ್ಲೇಖಿಸಲಾಗಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ. ಅವರ ವೆಬ್ ಸೈಟ್ ಪ್ರಕಾರ, ಇದು ಧರ್ಮವನ್ನು ಜಾಗೃತಗೊಳಿಸಲು, ಸಬಲೀಕರಣಗೊಳಿಸಲು ಮತ್ತು ರಕ್ಷಿಸಲು ಇರುವಂಥದ್ದಾಗಿದೆ.
HLF ಕುರಿತು ವೆಬ್ ಸೈಟ್ನಲ್ಲಿ ಹೀಗೆ ನಮೂದಿಸಲಾಗಿದೆ: “ಈ ಅಭಿಯಾನವು ಧರ್ಮದ ಹಿತಾಸಕ್ತಿಗಳನ್ನು ರಕ್ಷಿಸಲು, ದೇವಾಲಯಗಳ ಹಕ್ಕುಗಳನ್ನು ಎತ್ತಿಹಿಡಿಯಲು, ಸಾಂಪ್ರದಾಯಿಕ ಆಚರಣೆಗಳನ್ನು ಕಾಪಾಡಲು ಮತ್ತು ಸನಾತನ ಧರ್ಮದ ಕಾನೂನು ಬುನಾದಿಯನ್ನು ಬಲಪಡಿಸಲು ಕಾರ್ಯತಂತ್ರದ ಕಾನೂನು ಮಧ್ಯಸ್ಥಿಕೆಗಳನ್ನು ಬೆಂಬಲಿಸುತ್ತದೆ. ಇದು ಸಮರ್ಪಿತ ಕಾನೂನು ತಜ್ಞರು ಹಾಗೂ ತಳಮಟ್ಟದ ಪಾಲುದಾರರನ್ನು ಒಟ್ಟುಗೂಡಿಸಿ, ಸಾಂಸ್ಥಿಕ ಬೆಂಬಲದ ಕೊರತೆ ಎದುರಿಸುತ್ತಿರುವ ಸಮುದಾಯಗಳು ಮತ್ತು ವಿಚಾರಗಳ ಪರವಾಗಿ ಧ್ವನಿ ಎತ್ತುತ್ತದೆ.”
ತಮ್ಮ ‘ಕಾನೂನು ವಕಾಲತ್ತು’ ಕಾರ್ಯಗಳಿಗಾಗಿ ಈ ವರ್ಷ 2 ಲಕ್ಷ ರೂಪಾಯಿಗಳ ಮೊತ್ತವನ್ನು ಬಿಡುಗಡೆ ಮಾಡಿರುವುದಾಗಿಯೂ ವೆಬ್ ಸೈಟ್ ತಿಳಿಸಿದೆ.
►HLF ಸಂಸ್ಥಾಪಕರು ಯಾರು?
ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ ಅವರ ಹೆಸರು ರಾಹುಲ್ ದಿವಾನ್. ಅವರು ಭಾರತ ಮತ್ತು ಇಸ್ರೇಲಿ ಸ್ಟಾರ್ಟ್ಅಪ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಅಲ್ಲದೆ ‘ಸರಯು ಫೌಂಡೇಶನ್’ ಮತ್ತು ಜನಪ್ರಿಯ ಬಲಪಂಥೀಯ ಯೂಟ್ಯೂಬ್ ಚಾನೆಲ್ ‘ಸಂಗಮ್ ಟಾಕ್ಸ್’ (Sangam Talks) ಅನ್ನು ಸಹ ಸ್ಥಾಪಿಸಿದ್ದಾರೆ.
ಅವರ ಮಾತೃ ಸಂಸ್ಥೆಯಾದ ‘ಹಿಂದೂ ನೆಟ್ವರ್ಕ್ ಫೌಂಡೇಶನ್’ 2024ರ ಮಾರ್ಚ್ನಲ್ಲಿ ನೋಂದಣಿಯಾಗಿದ್ದು, ದಿವಾನ್ ಅವರು ಅದರ ನಿರ್ದೇಶಕರ ಮಂಡಳಿಯಲ್ಲೂ ಇದ್ದಾರೆ.
ಕೆಲವು ದಿನಗಳ ಹಿಂದೆ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ HLF ಕುರಿತು ಮಾತನಾಡುತ್ತಾ, HLF ಗಾಗಿ ತಮ್ಮ ಆದಾಯದ ನಿರ್ದಿಷ್ಟ ಮೊತ್ತವನ್ನು ‘ಕಾರ್ಯತಂತ್ರದ’ ರೀತಿಯಲ್ಲಿ ವಿನಿಯೋಗಿಸುವುದಾಗಿ ಹೇಳಿದ್ದಾರೆ.
“ನಾನು ನನ್ನ ಸಂಬಳವನ್ನು ತೆಗೆದಿಡುತ್ತೇನೆ. ನನ್ನ ಸಂಬಳದ ಶೇ. 7ರಷ್ಟು ಭಾಗವನ್ನು ಇಶಾ ಫೌಂಡೇಶನ್ ಗೆ ದೇಣಿಗೆ ನೀಡಿದ್ದೇನೆ. ನನ್ನ ವ್ಯಾಪಾರ ಲಾಭದ ಶೇ. 7ರಷ್ಟನ್ನು HLFಗಾಗಿ ಬಳಸಿದ್ದೇನೆ.” ಈ ಮೂಲಕ ಅವರು ‘ಸಂಗಮ್ ಟಾಕ್ಸ್’ ಹಾಗೂ ಹಿಂದೂ ಪರ ಕಾರ್ಯಗಳಿಗಾಗಿ ಕಳೆದ 10 ವರ್ಷಗಳಲ್ಲಿ ನೂರಾರು ಯೋಜನೆಗಳಿಗೆ ಹಣಕಾಸಿನ ನೆರವು ನೀಡಿರುವುದಾಗಿ ಆ ವೀಡಿಯೊದಲ್ಲಿ ತಿಳಿಸಿದ್ದಾರೆ.
ಹಲವು ವರ್ಷಗಳ ಕಾಲ ಗಂಭೀರ ಕಾನೂನು ಹೋರಾಟಗಳನ್ನು ನಡೆಸಬಲ್ಲ 25 ಕೋಟಿ ರೂಪಾಯಿ ಮೌಲ್ಯದ ಹಿಂದೂ ಕಾನೂನು ನಿಧಿಯನ್ನು ನಿರ್ಮಿಸುವುದೇ ತಮ್ಮ ಮಹತ್ವಾಕಾಂಕ್ಷೆಯಾಗಿದೆ ಎಂದು ಆ ರೀಲ್ ನ ಶೀರ್ಷಿಕೆಯಲ್ಲೂ ಬರೆಯಲಾಗಿದೆ.
ಈ ಮಧ್ಯೆ, HLF ನ ಚಟುವಟಿಕೆಗಳು ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಅದೇನೆಂದರೆ, ದಿವಾನ್ ಅವರ HLF ನಿರ್ದಿಷ್ಟವಾಗಿ ಬಾನೊ ವಿರುದ್ಧವೇ ದೂರು ದಾಖಲಿಸಿದ್ದು ಯಾಕೆ? ಅಥವಾ ಬಾನೊ ಬಳಸಿದ ಮೂರು ಸರಳ ಅರೇಬಿಕ್ ಪದಗಳು, ತಾವು ರಕ್ಷಿಸುವುದಾಗಿ ಹೇಳಿಕೊಳ್ಳುವ ಧರ್ಮದ ಆಚರಣೆಗಳಿಗೆ ಯಾವುದೇ ರೀತಿಯಲ್ಲಿ ಹೇಗೆ ಅಪಾಯಕಾರಿಯಾದವು ಅಥವಾ ಭಂಗ ತಂದವು?
ಕಾಕತಾಳೀಯವೆಂಬಂತೆ, ಬಲಪಂಥೀಯ ಸುದ್ದಿ ವೇದಿಕೆಯಾದ ‘OpIndia’ದ ಪ್ರಧಾನ ಸಂಪಾದಕಿ ನೂಪುರ್ ಶರ್ಮಾ ಅವರು ಕೂಡ HLF ನ ಸಲಹಾ ಸಮಿತಿಗೆ ಸೇರ್ಪಡೆಗೊಂಡಿದ್ದಾರೆ.
ಅವರ ಸ್ವಂತ ಲೆಕ್ಕಾಚಾರದ ಪ್ರಕಾರ, ದ್ವೇಷದ ಮಾತುಗಳು ಮತ್ತು ಧರ್ಮಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪಗಳ ಮೇರೆಗೆ FIR ದಾಖಲಿಸುವಂತೆ ಕೋರುವುದು ಸೇರಿದಂತೆ, HLF ಕಳೆದ ಕೆಲವು ತಿಂಗಳುಗಳಲ್ಲಿ 18ಕ್ಕೂ ಹೆಚ್ಚು ದೂರುಗಳು, ಮನವಿಗಳು ಮತ್ತು ಕಾನೂನು ನೋಟೀಸ್ ಗಳನ್ನು ಸಲ್ಲಿಸಿದೆ.
►ಪ್ರಸ್ತುತ ಕಾರ್ಯ ಮತ್ತು ವಿಸ್ತರಣೆ
ಈಗಾಗಲೇ 7 ರಾಜ್ಯಗಳಲ್ಲಿ ಸಕ್ರಿಯವಾಗಿದೆ: ದೆಹಲಿ, ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ಜಾರ್ಖಂಡ್.
ಗುರಿ: ಪ್ರತಿಯೊಂದು ಹೈಕೋರ್ಟ್ ಮತ್ತು ಪ್ರತಿಯೊಂದು ಜಿಲ್ಲಾ ನ್ಯಾಯಾಲಯದಿಂದಲೂ ಸಂಪರ್ಕಿಸಬಹುದಾದ ಹಿಂದೂ ಲೀಗಲ್ ಫಂಡ್ ವಕೀಲರ ಲಭ್ಯತೆ.
►ಸುದರ್ಶನ್ ಟಿವಿ ಬುಶ್ರಾ ಬಾನೊ ಅವರನ್ನು ಗುರಿಯಾಗಿಸಿದ್ದು ಮತ್ತು ಪ್ರಶ್ನಿಸಿದ್ದು ಹೇಗೆ?
ದೂರು ದಾಖಲಿಸಿದ್ದು HLF ಆದರೂ, ಸುದರ್ಶನ್ ನ್ಯೂಸ್ ನಂತಹ ಮಾಧ್ಯಮಗಳು ಬಾನೊ ವಿರುದ್ಧ ದ್ವೇಷ ಮತ್ತು ತಪ್ಪು ಮಾಹಿತಿಯನ್ನು ಹರಡುವುದರಲ್ಲಿ ಮುಂಚೂಣಿಯಲ್ಲಿದ್ದವು.
ಸುದರ್ಶನ್ ಟಿವಿಯ ಸಂಸ್ಥಾಪಕ ಸುರೇಶ್ ಚವ್ಹಾಂಕೆ ಅವರಿಗೆ ಇದು ಹೊಸದೇನಲ್ಲ. 2020ರಲ್ಲೂ ಅವರು ಮುಸ್ಲಿಮರನ್ನು ದೂಷಿಸಿ, UPSC ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮುಸ್ಲಿಮರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. “ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ IPS ಮತ್ತು IAS ಅಧಿಕಾರಿಗಳ ಸಂಖ್ಯೆ ಹೇಗೆ ಹೆಚ್ಚಾಗಿದೆ?”, “ದೇಶದಲ್ಲಿ ಜಾಮಿಯಾ ಕೆ ಜಿಹಾದಿಗಳು ಅಧಿಕಾರ ಸ್ಥಾನಕ್ಕೇರಿದರೆ ಏನಾಗುತ್ತದೆ?” ಮುಂತಾದ ಮಾತುಗಳನ್ನು ಅವರು ಆಡಿದ್ದರು.
ಯಾರಿಗೂ ಅಚ್ಚರಿಯಾಗದಂತೆ, ಚವ್ಹಾಂಕೆ ಅವರು ಬುಶ್ರಾ ಅವರ ವಿಷಯದಲ್ಲಿ ಧಾವಿಸಿ ಬಂದು ಆಕ್ರೋಶ ಮತ್ತು ಅಪಪ್ರಚಾರವನ್ನು ಸೃಷ್ಟಿಸಿದರು. “IPS ಅಧಿಕಾರಿಯಾದ ಮೇಲೂ ಬುಶ್ರಾ ಬಾನೊ ಅವರು ನೌಕರಶಾಹಿ ಜಿಹಾದ್ ಮಾಡಿದರೆ ನಾವು ಮಾತನಾಡುತ್ತೇವೆ” ಎಂದು ಹೇಳಿದರು.
ತಮ್ಮ ಒಂದು ಕಾರ್ಯಕ್ರಮದಲ್ಲೂ, ತಮ್ಮ ಪ್ರಸಾರವು ಆಕ್ರೋಶವನ್ನು ಹುಟ್ಟುಹಾಕಿದೆ ಮತ್ತು ತಮ್ಮ ವಿರುದ್ಧ ಅಧಿಕೃತ ದೂರು ದಾಖಲಿಸಲು ಕಾರಣವಾಗಿದೆ ಎಂಬುದನ್ನು ತೋರಿಸಲು ಸುದರ್ಶನ್ ಟಿವಿ ಬಾನೊ ಕುರಿತು ಮತ್ತೊಂದು ಪ್ರಸಾರ ಮಾಡಿತು. ಆನ್ಲೈನ್ ನಲ್ಲಿ ಅನೇಕ ಜನರು ಇದನ್ನು ಬೆಂಬಲಿಸಿದ್ದಾರೆ ಎಂದು ಆರೋಪಿಸಿ, ಚವ್ಹಾಂಕೆ ಅವರು ‘UPSC ಜಿಹಾದ್’ ಅನ್ನು ಮತ್ತೆ ನೆನಪಿಸಿಕೊಟ್ಟಿದ್ದಾರೆ ಎಂದು ಅವರು ಹೆಮ್ಮೆಯಿಂದ ತಿಳಿಸಿದರು.
“ಬುಶ್ರಾ ಬಾನೊ ಅವರು ಅಧಿಕಾರಿಗಳಾಗುವ ಬಗ್ಗೆ ಕೇವಲ ತಮ್ಮದೇ ಸಮುದಾಯಕ್ಕೆ ಮಾತ್ರ ಏಕೆ ಸಲಹೆ ನೀಡುತ್ತಿದ್ದರು? ಅವರು ನಿರ್ದಿಷ್ಟ ಗುಂಪಿಗೆ ಮಾತ್ರ ಪ್ರಯೋಜನ ಕಲ್ಪಿಸುವ ಪಕ್ಷದಲ್ಲಿದ್ದರೇ? ಮುಸ್ಲಿಮೇತರರು ಅಧಿಕಾರಿಗಳಾಗುವುದು ಅವರಿಗೆ ಇಷ್ಟ ಇರಲಿಲ್ಲವೇ?” ಎಂದು ಅವರ ಕಾರ್ಯಕ್ರಮದಲ್ಲಿ ಹೇಳಲಾಗಿತ್ತು.
2020ರಲ್ಲೂ ಸುದರ್ಶನ್ ಟಿವಿಯು ‘UPSC ಜಿಹಾದ್’ ನಿರೂಪಣೆಯನ್ನು ಬಿತ್ತರಿಸಿದಾಗ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅದು “ಉತ್ತಮ ಅಭಿರುಚಿಯಲ್ಲ, ಆಕ್ಷೇಪಾರ್ಹವಾಗಿದೆ ಮತ್ತು ಕೋಮು ಭಾವನೆಗಳನ್ನು ಉತ್ತೇಜಿಸುವ ಸಾಧ್ಯತೆಯಿದೆ” ಎಂದು ದಾಖಲೆಗಳಲ್ಲಿ ತಿಳಿಸಿತ್ತು. ಆದರೆ, ಆ ಕಾರ್ಯಕ್ರಮದ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ.
‘UPSC ಜಿಹಾದ್’ ಕುರಿತ ‘ಬಿಂದಾಸ್ ಬೋಲ್’ ಕಾರ್ಯಕ್ರಮದ ಉಳಿದ ಸಂಚಿಕೆಗಳನ್ನು ಪ್ರಸಾರ ಮಾಡುವಾಗ ಎಲ್ಲಾ ಕಾನೂನುಗಳನ್ನು ಪಾಲಿಸುವುದಾಗಿ ಚವ್ಹಾಂಕೆ ಸುಪ್ರೀಂ ಕೋರ್ಟ್ ನಲ್ಲಿ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ್ದರು. ಆದರೆ ಬೇರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
►IPS ಅಧಿಕಾರಿಯಾಗಲು ಬಾನೊ ನಡೆಸಿದ ಪ್ರಯಾಣವು ಸಾಮಾನ್ಯವಾದದ್ದಲ್ಲ
ಉತ್ತರ ಪ್ರದೇಶದ ಕನ್ನೌಜ್ ಮೂಲದವರಾದ ಅವರು, ಅಲಿಘಡ್ ಮುಸ್ಲಿಮ್ ವಿಶ್ವವಿದ್ಯಾಲಯದಿಂದ (AMU) ಮ್ಯಾನೇಜ್ ಮೆಂಟ್ ಸ್ಟಡೀಸ್ ನಲ್ಲಿ ಪಿಎಚ್ಡಿ ಪೂರ್ಣಗೊಳಿಸಿ, ನೆಟ್-ಜೆಆರ್ಎಫ್ (NET-JRF) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅವರು ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು ಮತ್ತು ಸೌದಿ ಅರೇಬಿಯಾದಲ್ಲಿಯೂ ಕಾರ್ಯನಿರ್ವಹಿಸಿದ್ದರು. ಆದರೆ UPSC ಪರೀಕ್ಷೆ ಬರೆಯಲು ನಂತರ ಅವರು ಭಾರತಕ್ಕೆ ವಾಪಸಾದರು.
ಭಾರತೀಯ ಪೊಲೀಸ್ ಸೇವೆಯನ್ನು (IPS) ಸೇರುವ ಮೊದಲು ಅವರು 2019 ಮತ್ತು 2021ರಲ್ಲಿ ಎರಡು ಬಾರಿ UPSC ಪರೀಕ್ಷೆ ಬರೆದು, 234ನೇ ರ್ಯಾಂ ಕ್ ಗಳಿಸಿದ್ದರು.
ಆದರೆ ಧರ್ಮದ ವಿರುದ್ಧ ದ್ವೇಷ ಹರಡುವುದಕ್ಕೆ ಮತ್ತು ಇತ್ತೀಚೆಗೆ 15 ವರ್ಷದ ಪ್ರತಿಭಟನಾಕಾರರ ವಿವರಗಳನ್ನು ಬಹಿರಂಗಪಡಿಸುವುದಕ್ಕೆ ಹೆಸರುವಾಸಿಯಾಗಿರುವ ‘ಜೈಪುರ ಡೈಲಾಗ್ಸ್’ನಂತಹ ಬಲಪಂಥೀಯ ಖಾತೆಗಳಿಗೆ ಅದು ಸಾಕಾಗಲಿಲ್ಲ.
ಬಾನೊ ಅವರನ್ನು ‘ಇಸ್ಲಾಮಿಸ್ಟ್ IPS ಅಧಿಕಾರಿ’ ಎಂದು ಕರೆದ ‘ಜೈಪುರ ಡೈಲಾಗ್ಸ್’ ಸಂಸ್ಥೆಯ ಮುಖ್ಯಸ್ಥ ಸಂಜಯ್ ದೀಕ್ಷಿತ್, ಅವರನ್ನು “ನಿಕೃಷ್ಟ” ಹುದ್ದೆಗೆ ವರ್ಗಾವಣೆ ಮಾಡುವ ರಾಜ್ಯ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು. ಬಾನೊ ಅವರು ‘ವಂದೇ ಮಾತರಂ’ ಅಥವಾ ‘ಜೈ ಹಿಂದ್’ ಹೇಳಿಲ್ಲ ಎಂದು ಜೈಪುರ ಡೈಲಾಗ್ಸ್ ಈ ಹಿಂದೆಯೂ ತಪ್ಪಾಗಿ ಬಿಂಬಿಸಿತ್ತು.
►ವಂದೇ ಮಾತರಂ ಇಲ್ಲ, ಜೈ ಹಿಂದ್ ಕೂಡ ಇಲ್ಲ
ಈ ದ್ವೇಷದ ಪರೇಡ್ ನಲ್ಲಿ ‘Megh Updates’ನಂತಹ ಇತರ ಖಾತೆಗಳು ಮಾತ್ರವಲ್ಲದೆ, ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದೊಂದಿಗೆ ಗುರುತಿಸಿಕೊಂಡಿರುವ ನಾಯಕಿ ನಾಝಿಯಾ ಇಲಾಹಿ ಖಾನ್ ಕೂಡ ಧುಮುಕಿದರು.
“ಎಡಪಂಥೀಯ ಲಾಬಿ, ಷರಿಯಾ ಬೆಂಬಲಿಗರು ಮತ್ತು ಮಮತಾ ಅವರ ಜನರು ಬುಶ್ರಾ ಬಾನೊ ಅವರ ಸಾಮಾನ್ಯ ವರ್ಗಾವಣೆಗೆ ಮೊಹರಂ ಈಗಾಗಲೇ ಬಂದಿರುವಂತೆ ಅಳುತ್ತಿದ್ದಾರೆ” ಎಂದು ನಾಝಿಯಾ ಇಲಾಹಿ ಖಾನ್ ಆನ್ಲೈನ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಮುಸ್ಲಿಂ ಅತ್ಯಾಚಾರಿಗಳಿಬ್ಬರನ್ನು ಬಂಧಿಸಿದ್ದ IPS ಅಧಿಕಾರಿ ಜ್ಞಾನಮಂತಿ ಸೇನ್ ಅವರಿಗೆ ಮಮತಾ ಬ್ಯಾನರ್ಜಿ ಏನು ಮಾಡಿದ್ದರು ಎಂಬುದನ್ನು ಅವರು ಉಲ್ಲೇಖಿಸಿ ಆರೋಪಿಸಿದ್ದಾರೆ.
ಟಿಎಂಸಿ (TMC) ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಇತರ ರಾಜಕೀಯ ನಾಯಕರು ಕೂಡ ಬುಶ್ರಾ ವಿರುದ್ಧದ ಈ ನಿರ್ದಿಷ್ಟ ದಾಳಿಯನ್ನು ಮತ್ತು ‘ಮಡಿಲ ಮಾಧ್ಯಮ’ದ ವರದಿಯನ್ನು ಖಂಡಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು, ಬಾನೊ ಅವರ ಮಾತುಗಳಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. “ಅವರು ದೇಶವನ್ನು ಬಹಿರಂಗವಾಗಿ ವೈಭವೀಕರಿಸಲಿಲ್ಲ, ಆದರೆ ತಮ್ಮ ಸಹ ನಾಗರಿಕರಿಗಾಗಿ ಪ್ರಾರ್ಥಿಸಿದ್ದಾರೆ” ಎಂದು ಅವರು ಬರೆದಿದ್ದಾರೆ.
ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮಾತನಾಡಿ, “ನಿಮ್ಮ ಮೇಲೆ ಶಾಂತಿಯಿರಲಿ, ದೇವರು ಇಚ್ಛಿಸಿದರೆ ಮತ್ತು ದೇವರನ್ನು ಸ್ತುತಿಸಲಿ ಎಂಬ ಮೂರು ಸರಳ ಪದಗಳು ಇಷ್ಟು ದೊಡ್ಡ ಮತ್ತು ಶಕ್ತಿಶಾಲಿ ಪಕ್ಷವನ್ನು ಬೆಚ್ಚಿಬೀಳಿಸುವುದು ನಿಜಕ್ಕೂ ಅಚ್ಚರಿಯ ಸಂಗತಿ” ಎಂದಿದ್ದಾರೆ.
ಇಲ್ಲಿ ಮತ್ತೊಂದು ವ್ಯತ್ಯಾಸವನ್ನೂ ಉಲ್ಲೇಖಿಸಲಾಗಿದೆ. ಬಾನೊ ಅವರು ಇಸ್ಲಾಮಿಕ್ ಪದಗಳನ್ನು ಬಳಸಿದ್ದಕ್ಕಾಗಿ ಕ್ರಮ ಎದುರಿಸಬೇಕಾಯಿತು. ಆದರೆ, ಇತರ ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಧಾರ್ಮಿಕ ಆಚರಣೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದರೂ, ಅಂತಹ ಕ್ರಮ ಎದುರಿಸಿಲ್ಲ.
ಉದಾಹರಣೆಗೆ, ಸಂಭಾಲ್ ಸರ್ಕಲ್ ಆಫೀಸರ್ ಅನುಜ್ ಚೌಧರಿ ಅವರು ಪೊಲೀಸ್ ಸಮವಸ್ತ್ರ ಧರಿಸಿ, ಕಿಷ್ಕಿಂಧಾ ರಥಯಾತ್ರೆಯ ಸಂದರ್ಭದಲ್ಲಿ ತಮ್ಮ ಭುಜದ ಮೇಲೆ ಗದೆಯನ್ನು ಹೊತ್ತುಕೊಂಡು ಕಾಣಿಸಿಕೊಂಡಿದ್ದರು ಹಾಗೂ ಅವರಿಗೆ ಬಡ್ತಿಯೂ ಸಿಕ್ಕಿದೆ.
2025ರಲ್ಲಿ ಹೋಳಿ ಹಬ್ಬವು ಶುಕ್ರವಾರದ ನಮಾಜ್ ದಿನದಂದೇ ಬಂದಾಗ, ಚೌಧರಿ ಅವರು ನೀಡಿದ್ದ ಕೋಮು ಸ್ವರೂಪದ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. “ಹೋಳಿ ವರ್ಷಕ್ಕೊಮ್ಮೆ ಬರುತ್ತದೆ, ಆದರೆ ಜುಮ್ಮಾ 52 ಬಾರಿ ಬರುತ್ತದೆ. ಹೋಳಿಯನ್ನು ತಪ್ಪಿಸಲು ಬಯಸುವವರು ಮನೆಯಲ್ಲೇ ಇರಬೇಕು” ಎಂದು ಅವರು ಹೇಳಿದ್ದರು.
ಅದೇ ರೀತಿ, ಈ ವರ್ಷದ ಮೇ ತಿಂಗಳು ಸಿ.ವಿ. ಆನಂದ್ ಅವರು ತೆಲಂಗಾಣ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದಾಗ ತಮ್ಮ ಕಚೇರಿಯಲ್ಲಿ ಪೂಜೆ ನೆರವೇರಿಸಲು ಪುರೋಹಿತರನ್ನು ಆಹ್ವಾನಿಸಿದ್ದರು. ಮತ್ತೊಬ್ಬ ಪೊಲೀಸ್ ಅಧಿಕಾರಿ ಜ್ಯೋತಿಪ್ರಿಯಾ ಸಿಂಗ್ ಕೂಡ ಕೆಲವು ದಿನಗಳ ಹಿಂದೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಆರತಿ ಮಾಡುತ್ತಿರುವುದು ಕಂಡುಬಂದಿತ್ತು.
ಗಣೇಶ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ, ಪವನ್ ದೇಸಳೆ ಎಂಬ ಪೊಲೀಸ್ ಅಧಿಕಾರಿಯೊಬ್ಬರು ಮಸೀದಿಯ ಮುಂಭಾಗದಲ್ಲಿ ಲಾಠಿಯನ್ನು ಬೀಸುತ್ತಾ ಬಿಜೆಪಿ ಕಾರ್ಯಕರ್ತರೊಂದಿಗೆ ಸಂಭ್ರಮಿಸುತ್ತಿರುವುದು ಕಂಡುಬಂದಿತ್ತು.
ಮುಸ್ಲಿಂ IPS ಅಧಿಕಾರಿಯಾದ ಬುಶ್ರಾ ಬಾನೊ ಮಾತ್ರ ದೂರುಗಳನ್ನು ಎದುರಿಸಬೇಕಾಯಿತು ಎಂಬುದು ಗಮನಾರ್ಹ ಸಂಗತಿ. ಬಾನೊ ಅವರು ತಮಗೆ ಅನುಕೂಲವಾದ ಭಾಷೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಕ್ಕಾಗಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿ, ಅತಿಯಾದ ಟ್ರೋಲ್ ಗೆ ಒಳಗಾದರು. ಬಾನೊ ಅವರಂತಹ ಅಧಿಕಾರಿಗಳು ವಾಸ್ತವದಲ್ಲಿ ಇದರ ಬೆಲೆ ತೆತ್ತಾಗ, ‘ನೌಕರಶಾಹಿ ಜಿಹಾದ್’ ಎನ್ನುವುದು ಕೇವಲ ಮಾತಷ್ಟೇ ಆಗಿ ಉಳಿಯುವುದಿಲ್ಲ.
ಸೌಜನ್ಯ: thequint.com






