ಸಿಂಧಿಯಾ ರಾಜಮನೆತನದ ‘ಗೇಮ್ ಆಫ್ ಥ್ರೋನ್ಸ್’: 40 ವರ್ಷಗಳಿಂದ ನಡೆಯುತ್ತಿದ್ದ ಆಸ್ತಿ ಜಗಳ ಈಗ ಸೌಹಾರ್ದಯುತ ರಾಜಿ ಸಂಧಾನದತ್ತ

Photo Credit : theprint.in
ಗ್ವಾಲಿಯರ್ ನ ಹಿಂದಿನ ಮರಾಠಾ ಸಿಂಧಿಯಾ ರಾಜಮನೆತನದ ವಂಶಸ್ಥ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ಅತ್ತೆಯಂದಿರಾದ ವಸುಂಧರಾ ರಾಜೇ ಸಿಂಧಿಯಾ ಹಾಗೂ ಯಶೋಧರಾ ರಾಜೇ ಸಿಂಧಿಯಾ ಅವರು ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ ನ್ಯಾಯಾಲಯಗಳಲ್ಲೂ ಯಾವಾಗಲೂ ಪರಸ್ಪರ ಎದುರಾಳಿಗಳಾಗಿಯೇ ಕಣಕ್ಕಿಳಿದಿದ್ದರು. ಆದರೆ, 2020-2021ರ ಅವಧಿಯಲ್ಲಿ ಅವರ ರಾಜಕೀಯ ಜೀವನ ಮತ್ತು ಕಾನೂನು ಹೋರಾಟ ಎರಡರಲ್ಲೂ ದೊಡ್ಡ ತಿರುವು ಕಂಡುಬಂದಿದೆ.
2020ರ ಮಾರ್ಚ್ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಅತ್ತೆಯಂದಿರಾದ ವಸುಂಧರಾ ರಾಜೇ ಮತ್ತು ಯಶೋಧರಾ ರಾಜೇ ಅವರಿದ್ದ ಪಕ್ಷವಾದ ಬಿಜೆಪಿಗೆ ಸೇರ್ಪಡೆಯಾದರು. ಇದರ ಬೆನ್ನಲ್ಲೇ, 2021ರ ಜನವರಿಯಲ್ಲಿ ಜ್ಯೋತಿರಾದಿತ್ಯ ಮತ್ತು ಅವರ ಅತ್ತೆಯಂದಿರಾದ ವಸುಂಧರಾ ರಾಜೇ, ಯಶೋಧರಾ ರಾಜೇ, ಉಷಾ ರಾಜೇ ಹಾಗೂ ದಿವಂಗತ ಪದ್ಮಾವತಿ ರಾಜೇ (ಅವರ ಪುತ್ರಿಯರ ಮೂಲಕ) ನಡುವೆ ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿದ್ದ ಆಸ್ತಿ ವಿವಾದಗಳ ಇತ್ಯರ್ಥದ ಮೊದಲ ಸೂಚನೆಗಳು ಕಾಣಿಸಿಕೊಂಡವು.
ಕಳೆದ ನಲವತ್ತು ವರ್ಷಗಳಲ್ಲಿ ಈ ಪ್ರತಿಯೊಂದು ಮೊಕದ್ದಮೆಗಳು ತಮ್ಮದೇ ಆದ ಸುದೀರ್ಘ ಇತಿಹಾಸವನ್ನು ಹೊಂದಿವೆ. ಹಳೆಯ ತಲೆಮಾರಿನ ಮೂಲ ದೂರುದಾರರು ಮತ್ತು ಪ್ರತಿವಾದಿಗಳು ಕಾಲವಾದಂತೆ, ಅವರ ಸ್ಥಾನಕ್ಕೆ ಅವರ ಗಂಡುಮಕ್ಕಳು ಅಥವಾ ಹೆಣ್ಣುಮಕ್ಕಳು ಬಂದು ಈ ಹೋರಾಟ ತಲೆಮಾರುಗಳಿಂದ ಮುಂದುವರಿದಿದೆ. ಈ ಪ್ರತಿಯೊಂದು ಮೊಕದ್ದಮೆಯೂ ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳನ್ನು ಒಳಗೊಂಡಿದ್ದು, ಕೆಲವು ಅಂದಾಜಿನ ಪ್ರಕಾರ ವಿವಾದಿತ ಆಸ್ತಿಗಳ ಒಟ್ಟು ಮೌಲ್ಯ ಸಾವಿರಾರು ಕೋಟಿ ರೂ.ಗಳಷ್ಟಿದೆ.
ರಾಜಮನೆತನದ ಅಧಿಕಾರದ ಆಟದ ಎಲ್ಲ ಲಕ್ಷಣಗಳನ್ನು ಹೊಂದಿರುವ ಈ ಮೊಕದ್ದಮೆಗಳು ಗ್ವಾಲಿಯರ್ನಿಂದ ಮುಂಬೈವರೆಗೆ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಹರಡಿಕೊಂಡಿವೆ. ತಂದೆ ಬದುಕಿರುವಾಗಲೇ ಮಗನೊಬ್ಬ ಆಸ್ತಿ ಹಕ್ಕಿಗಾಗಿ ತನ್ನ ಅಜ್ಜಿಯನ್ನೇ ನ್ಯಾಯಾಲಯಕ್ಕೆ ಎಳೆದರೆ, ಇತ್ತ ಅತ್ತೆಯಂದಿರು ತಮ್ಮ ರಾಜಮನೆತನದ ಆಸ್ತಿಯಲ್ಲಿ ಪಾಲನ್ನು ಕೋರಿ ಸ್ವಂತ ಸೋದರಳಿಯನ ವಿರುದ್ಧವೇ ಮೊಕದ್ದಮೆ ಹೂಡಿದ್ದಾರೆ. ಇದರ ನಡುವೆ ಎರಡು ವಿಭಿನ್ನ ವಿಲ್ಗಳ ಗೊಂದಲವೂ ಸೇರಿಕೊಂಡಿದೆ.
ಈ ಪ್ರತಿಯೊಂದು ಮೊಕದ್ದಮೆಯೂ ಈಗ ಅಂತಿಮವಾಗಿ ಒಂದು ತಾರ್ಕಿಕ ಅಂತ್ಯವನ್ನು ತಲುಪಬಹುದು.
ಈ ಪ್ರಕರಣಕ್ಕೆ ಸಂಬಂಧಿಸಿದ ವಕೀಲರೊಬ್ಬರು 'the print' ಜೊತೆ ಮಾತನಾಡಿದ್ದು, ರಾಜಿಗೆ ಕಾನೂನುಬದ್ಧ ಮಾನ್ಯತೆ ನೀಡುವ ಪ್ರಕ್ರಿಯೆ ಆರಂಭವಾಗಿರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೆ, ಬುಧವಾರ ಗ್ವಾಲಿಯರ್ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆಯು ಈ ನಿಟ್ಟಿನಲ್ಲಿ ಅತ್ಯಂತ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.
1961ರಲ್ಲಿ ಮಹಾರಾಜ ಜೀವಾಜಿರಾವ್ ಸಿಂಧಿಯಾ ಅವರು ನಿಧನರಾದಾಗ ಈ ವಿವಾದದ ಕಥೆ ಶುರುವಾಯಿತು. ಅವರು ತಮ್ಮ ಪತ್ನಿ ವಿಜಯಾ ರಾಜೇ ಸಿಂಧಿಯಾ, ಪುತ್ರ ಮಾಧವರಾವ್ ಸಿಂಧಿಯಾ, ಸೊಸೆ ಮಾಧವಿ ರಾಜೇ ಸಿಂಧಿಯಾ ಮತ್ತು ಪುತ್ರಿಯರಾದ ಉಷಾ ರಾಜೇ, ವಸುಂಧರಾ ರಾಜೇ, ಯಶೋಧರಾ ರಾಜೇ ಹಾಗೂ ಪದ್ಮಾವತಿ ರಾಜೇ ಅವರನ್ನು ಅಗಲಿದ್ದರು.
ಸಿಂಧಿಯಾ ಮನೆತನದ ಹಿರಿಯ ಪುತ್ರಿ ಪದ್ಮಾವತಿ ರಾಜೇ 'ಅಕ್ಕಾಸಾಹೇಬ್' ಬರ್ಮನ್ ಅವರು 1964ರಲ್ಲಿ ನಿಧನರಾದರು. ಇದೀಗ ಅವರ ಪುತ್ರಿಯರಾದ ಕನಿಕಾ ದೇವಿ ದೇವ್ ಬರ್ಮನ್ ಮತ್ತು ಪ್ರತಿಮಾ ದೇವಿ ರಾಣೆ ಬರ್ಮನ್ ಅವರು ಈ ಆಸ್ತಿ ಮೊಕದ್ದಮೆಗಳಲ್ಲಿ ತಾಯಿಯ ಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ. 1971ರಲ್ಲಿ ಜನಿಸಿದ ಜ್ಯೋತಿರಾದಿತ್ಯ ಸಿಂಧಿಯಾ, ತಮಗೆ 20 ವರ್ಷ ತುಂಬುವುದಕ್ಕೂ ಮೊದಲೇ, ಸಿಂಧಿಯಾ ಆಸ್ತಿಯ ಏಕೈಕ ಉತ್ತರಾಧಿಕಾರಿ ತಾನೇ ಎಂದು ಪ್ರತಿಪಾದಿಸಿ ತಮ್ಮ ಅಜ್ಜಿ ಮತ್ತು ತಂದೆಯ ವಿರುದ್ಧವೇ ಮೊಕದ್ದಮೆ ಹೂಡಿದ್ದರು. ಅಂದಿನಿಂದ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ಊಹೆಗೂ ನಿಲುಕದಷ್ಟು ಅಪಾರ ಸಂಪತ್ತು ಇಲ್ಲಿ ಪಣಕ್ಕಿಟ್ಟಂತಾಗಿದೆ. ಗ್ವಾಲಿಯರ್ ನ ಭವ್ಯವಾದ ಜೈ ವಿಲಾಸ್ ಪ್ಯಾಲೇಸ್, ಸಖ್ಯ ವಿಲಾಸ್, ಸುಸೇರಾ ಕೋಠಿ, ಕುಲೇತ್ ಕೋಠಿ, ಕಾಟೇಜ್ ಹಿಲ್ ಮತ್ತು ಟೇಕನ್ಪೋರ್ ರಿಟ್ರೀಟ್ ಇವುಗಳಲ್ಲಿ ಸೇರಿವೆ. 2010ರ 'India Today' ವರದಿಯ ಪ್ರಕಾರ, ಶಿವಪುರಿಯಲ್ಲಿರುವ ಮಾಧವ್ ವಿಲಾಸ್ ಪ್ಯಾಲೇಸ್, ಹ್ಯಾಪಿ ವಿಲಾಸ್ ಮತ್ತು ಜಾರ್ಜ್ ಕ್ಯಾಸಲ್, ಹಾಗೂ ಉಜ್ಜಯಿನಿಯ ಕಾಳಿಯಾದೇಹ್ ಪ್ಯಾಲೇಸ್ ಕೂಡ ಈ ಪಟ್ಟಿಯಲ್ಲಿವೆ. ಇದಲ್ಲದೆ, ದಿಲ್ಲಿಯ ಗ್ವಾಲಿಯರ್ ಹೌಸ್ ಮತ್ತು ಸಿಂಧಿಯಾ ವಿಲ್ಲಾ, ಮುಂಬೈನ ಪ್ರತಿಷ್ಠಿತ 'ಸಮುದ್ರ ಮಹಲ್'ನಲ್ಲಿರುವ ಒಂದು ಫ್ಲಾಟ್, ಪುಣೆಯ ಪದ್ಮ ವಿಲಾಸ್ ಪ್ಯಾಲೇಸ್ ಮತ್ತು ವಾರಣಾಸಿಯ ಸಿಂಧಿಯಾ ಘಾಟ್ ಕೂಡ ಈ ಕುಟುಂಬದ ಒಡೆತನದಲ್ಲಿದೆ ಎಂದು ಅದೇ ವರದಿಯಲ್ಲಿದೆ.
►ಅರಮನೆಗಳು, ಚಿನ್ನ, ಬೆಳ್ಳಿಯ ಸಿಗರೇಟ್ ಕೇಸ್ ಗಳು
ವಿಶಾಲವಾದ ಜೈ ವಿಲಾಸ್ ಪ್ಯಾಲೇಸ್ ಕಾಂಪೌಂಡ್ ಮತ್ತು ಗ್ವಾಲಿಯರ್ ನಲ್ಲಿರುವ ಇತರ ಆಸ್ತಿಗಳ ಮೌಲ್ಯ 10,000 ಕೋಟಿ ರೂ.ಗಿಂತ ಅಧಿಕವಾಗಿದೆ.
ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ರಶೀದ್ ಕಿದ್ವಾಯಿ ಅವರು ಬರೆದ, 2021ರಲ್ಲಿ ಪ್ರಕಟವಾದ ‘ದಿ ಹೌಸ್ ಆಫ್ ಸಿಂಧಿಯಾಸ್: ಎ ಸಾಗಾ ಆಫ್ ಪವರ್, ಪಾಲಿಟಿಕ್ಸ್ ಅಂಡ್ ಇಂಟ್ರಿಗ್’ (The House of Scindias: A Saga of Power, Politics and Intrigue) ಪುಸ್ತಕದಲ್ಲಿ ಉಲ್ಲೇಖಿಸಲಾದ ಭೋಪಾಲ್ ಮೂಲದ ಪತ್ರಕರ್ತ ರಾಕೇಶ್ ದೀಕ್ಷಿತ್ ಅವರ ಅಂದಾಜಿನ ಪ್ರಕಾರ ಈ ಮಾಹಿತಿ ತಿಳಿದುಬಂದಿದೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಸ್ತಿ ಮತ್ತು ಹೊಣೆಗಾರಿಕೆಗಳ ಕುರಿತಾದ ಅಫಿಡವಿಟ್ ನಲ್ಲಿ, 2024ರ ಜೂನ್ 30ರ ಅಂಕಿಅಂಶಗಳ ಪ್ರಕಾರ ಜೀವಾಜಿರಾವ್ ಸಿಂಧಿಯಾ ಅವರ ಹಿಂದೂ ಅವಿಭಕ್ತ ಕುಟುಂಬದ ಒಟ್ಟು ಆಸ್ತಿ ಹಾಗೂ ಹೊಣೆಗಾರಿಕೆಗಳನ್ನು ಪಟ್ಟಿ ಮಾಡಲಾಗಿದೆ.
ಜೈ ವಿಲಾಸ್ ಕಾಂಪೌಂಡ್ ನೊಳಗಿನ ಸಾಮಾನ್ಯ ರಸ್ತೆ ಸೇರಿದಂತೆ ಅಲ್ಲಿರುವ ಖಾಲಿ ಜಾಗದ ಮೌಲ್ಯ 198 ಕೋಟಿ ರೂ. ಎಂದು ಈ ಅಫಿಡವಿಟ್ ನಲ್ಲಿ ಉಲ್ಲೇಖಿಸಲಾಗಿದೆ. ರಾಣಿ ಮಹಲ್ 32.72 ಕೋಟಿ ರೂ., ಹಿರಣ್ವನ್ ಕೋಠಿ 28.63 ಕೋಟಿ ರೂ., ಶಾಂತಿ ನಿಕೇತನ್ 20.45 ಕೋಟಿ ರೂ. ಹಾಗೂ ವಿಜಯ್ ಭವನ 22.49 ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿವೆ.
ಇದಲ್ಲದೆ, ರಾಕೆಟ್ ಕೋರ್ಟ್ ಗಳು, ಛೋಟಿ ವಿಶ್ರಾಂತಿ (ಪಿಕ್ನಿಕ್ ತಾಣ), ರೈಲ್ವೇ ಕ್ಯಾರೇಜ್ ಅಥವಾ 'ಘಂಟಿ ಘರ್', ಎಲೆಕ್ಟ್ರಿಕ್ ಪವರ್ ಹೌಸ್ ಅಥವಾ 'ರೋಶ್ನಿ ಘರ್', ಹಾಗೂ ಕುದುರೆ ಲಾಯಗಳು ಸಹ ಈ ಆಸ್ತಿಯ ಪಟ್ಟಿಯಲ್ಲಿ ಸೇರಿವೆ. ಮಹಾರಾಷ್ಟ್ರದ ಶ್ರೀಗೊಂದಾದಲ್ಲಿ 31.79 ಲಕ್ಷ ರೂ. ಮೌಲ್ಯದ ಜಮೀನು ಇದೆ. ಜೊತೆಗೆ ಮಹಾರಾಷ್ಟ್ರದ ಲಿಂಪೆಂಗಾಂವ್ ನಲ್ಲಿ 88.27 ಲಕ್ಷ ರೂ. ಮೌಲ್ಯದ ಮತ್ತೊಂದು ಜಮೀನಿದ್ದು, ಇದು ಸದ್ಯ ಜ್ಯೋತಿರಾದಿತ್ಯ ಅವರ ವಶದಲ್ಲಿಲ್ಲ.
ಈ ಪಾರಂಪರಿಕ ಅಥವಾ ಪೂರ್ವಜರ ವಸತಿ ಗೃಹಗಳ ಒಟ್ಟು ಮಾರುಕಟ್ಟೆ ಮೌಲ್ಯವನ್ನೇ ಬರೋಬ್ಬರಿ 326 ಕೋಟಿ ರೂ. ಎಂದು ಪಟ್ಟಿ ಮಾಡಲಾಗಿದೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರ ಅಫಿಡವಿಟ್ನಲ್ಲಿ ಈ ಹಿಂದೂ ಅವಿಭಕ್ತ ಕುಟುಂಬದ ಸ್ಥಿರ ಆಸ್ತಿಗಳ ಕುರಿತು ಒಂದು ಸ್ಪಷ್ಟನೆಯನ್ನೂ ನೀಡಲಾಗಿದೆ.
ಗ್ವಾಲಿಯರ್, ಪುಣೆ ಮತ್ತು ಮುಂಬೈ ನ್ಯಾಯಾಲಯಗಳಲ್ಲಿ ಬಾಕಿ ಇರುವ ಯಾವುದೇ ಆಸ್ತಿ ಮೊಕದ್ದಮೆಗಳ ಮೇಲಿನ ಹಕ್ಕುಗಳನ್ನು ಈ ಮಾಹಿತಿಯು ಯಾವುದೇ ರೀತಿಯಲ್ಲೂ ಮುಕ್ತಾಯಗೊಳಿಸುವುದಿಲ್ಲ ಎಂದು ಅದರಲ್ಲಿ ತಿಳಿಸಲಾಗಿದೆ.
ಈ ಸ್ಪಷ್ಟನೆಯು ಕೇವಲ ಸ್ಥಿರ ಆಸ್ತಿಗಳಿಗೆ ಮಾತ್ರ ಸೀಮಿತವಾಗಿದ್ದರೂ, ಕುಟುಂಬದ ಒಡೆತನದಲ್ಲಿ 26.57 ಕೋಟಿ ರೂ. ಮೌಲ್ಯದ ಚರ ಆಸ್ತಿಗಳೂ ಇವೆ. ಇದರಲ್ಲಿ 17.10 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳು, 1.13 ಕೋಟಿ ರೂ. ಮೌಲ್ಯದ 9 ಕ್ಯಾರೆಟ್ ಚಿನ್ನದ ಕಪ್, 6.88 ಕೋಟಿ ರೂ. ಮೌಲ್ಯದ ಬೆಳ್ಳಿಯ ಪಾತ್ರೆಗಳು ಮತ್ತು 20,000 ರೂ. ಮೌಲ್ಯದ ಬೆಳ್ಳಿಯ ಸಿಗರೇಟ್ ಕೇಸ್ ಗಳು ಸೇರಿವೆ.
ಜ್ಯೋತಿರಾದಿತ್ಯ ಅವರು ತಮ್ಮ ಸ್ವಂತ ಆಸ್ತಿಗಳ ಪಟ್ಟಿಯಲ್ಲಿ ಮುಂಬೈನ ಪ್ರತಿಷ್ಠಿತ 'ಸಮುದ್ರ ಮಹಲ್'ನಲ್ಲಿರುವ ಎರಡು ಫ್ಲಾಟ್ಗಳನ್ನು ಉಲ್ಲೇಖಿಸಿದ್ದು, ಅವುಗಳಲ್ಲಿ ಒಂದನ್ನು ಪಾರಂಪರಿಕ ಆಸ್ತಿ ಎಂದು ಘೋಷಿಸಿದ್ದಾರೆ. 3,553 ಚದರ ಅಡಿ ವಿಸ್ತೀರ್ಣದ ಈ ಫ್ಲಾಟ್ಗಳ ಮಾರುಕಟ್ಟೆ ಮೌಲ್ಯವನ್ನು 35.53 ಕೋಟಿ ರೂ. ಎಂದು ಪಟ್ಟಿ ಮಾಡಲಾಗಿದೆ.
ಇದಲ್ಲದೆ, ಅಂದಿನ ಮಹಾರಾಜರ ಪತ್ನಿ ವಿಜಯಾ ರಾಜೇ ಸಿಂಧಿಯಾ ಅವರು ಸ್ಥಾಪಿಸಿದ್ದ 15 ಟ್ರಸ್ಟ್ ಗಳಿದ್ದು, ಕುಟುಂಬದ ವಿವಿಧ ಸದಸ್ಯರು ಇದರ ಟ್ರಸ್ಟಿಗಳಾಗಿದ್ದಾರೆ. ಇವುಗಳಲ್ಲಿ ಜೈ ವಿಲಾಸ್ ಟ್ರಸ್ಟ್, ಜ್ಯೋತಿರಾದಿತ್ಯ ಟ್ರಸ್ಟ್, ಮನ್ನು ಮಹಲ್ ಟ್ರಸ್ಟ್, ಮನ್ನು ರಾಜೇ ಟ್ರಸ್ಟ್, ರಂಗ್ ಮಹಲ್ ಟ್ರಸ್ಟ್, ಗೋರ್ಖಿ ಟ್ರಸ್ಟ್, ಮಹದ್ಜಿ ಟ್ರಸ್ಟ್, ಜಾಂಕೋಜಿ ರಾವ್ ಟ್ರಸ್ಟ್, ರಾಣಿ ಉಷಾ ರಾಜೇ ಚಾರಿಟೇಬಲ್ ಟ್ರಸ್ಟ್, ಚಿಂಕು ರಾಜೇ ಟ್ರಸ್ಟ್, ಪದ್ಮಾ ರಾಜೇ ಚಾರಿಟೇಬಲ್ ಟ್ರಸ್ಟ್, ಯಶೋಧರಾ ರಾಜೇ ಟ್ರಸ್ಟ್, ಕಮಲಾ ರಾಜೇ ಟ್ರಸ್ಟ್ ಮತ್ತು ವಸುಂಧರಾ ರಾಜೇ ಚಾರಿಟೇಬಲ್ ಟ್ರಸ್ಟ್ ಗಳು ಸೇರಿವೆ.
►ಯಾರಿಗೆ ಏನು ಸಿಗಲಿದೆ?
ಸಿಂಧಿಯಾ ಕುಟುಂಬದ ನಡುವಿನ ಈ ಆಸ್ತಿ ವಿವಾದವು ಮುಖ್ಯವಾಗಿ ರಾಜಮನೆತನದ ಉತ್ತರಾಧಿಕಾರಕ್ಕೆ ಅನ್ವಯಿಸಬೇಕಾದ ನಿಯಮಗಳ ಸುತ್ತ ಸುತ್ತುತ್ತದೆ.
ಮಹಾರಾಜ ಜೀವಾಜಿ ರಾವ್ ಅವರು ನಿಧನರಾಗುವ ಮುನ್ನ, 1960-61ರ ಸಾಲಿನ ತಮ್ಮ ವೆಲ್ತ್ ಟ್ಯಾಕ್ಸ್ ರಿಟರ್ನ್ಸ್ ಅನ್ನು ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ಸಲ್ಲಿಸದೆ, ಒಬ್ಬ 'ವ್ಯಕ್ತಿ'ಯ ಹೆಸರಿನಲ್ಲಿ ಸಲ್ಲಿಸಿದ್ದರು ಎಂಬುದನ್ನು ಜ್ಯೋತಿರಾದಿತ್ಯ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಮಹಾರಾಜರು ತಮ್ಮ ಜೀವಿತಾವಧಿಯಲ್ಲಿ ನಾಲ್ಕು ಪ್ರತ್ಯೇಕ ಟ್ರಸ್ಟ್ ಗಳನ್ನು ರಚಿಸಿ, ತಮ್ಮ ನಾಲ್ಕು ಪುತ್ರಿಯರು ವಯಸ್ಕರಾದ ನಂತರ ಬಳಸಿಕೊಳ್ಳಲು ತಲಾ 5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದರು. 1955ರಲ್ಲಿ ಮಹಾರಾಜರು ಗ್ವಾಲಿಯರ್ ನ ಲಷ್ಕರ್ ನಲ್ಲಿರುವ 'ಸಖ್ಯ ವಿಲಾಸ್' ಆಸ್ತಿಯನ್ನು ತಮ್ಮ ಪುತ್ರಿ ಯಶೋಧರಾ ರಾಜೇ ಅವರಿಗೆ ಗಿಫ್ಟ್ ಡೀಡ್ ಮೂಲಕ ನೀಡಿದ್ದರು.
ಮಹಾರಾಜರ ನಿಧನದ ನಂತರ, ಅವರ ಪುತ್ರ ಮಾಧವರಾವ್ ಸಿಂಧಿಯಾ ಅವರನ್ನು ದಿವಂಗತ ಮಹಾರಾಜರ "ಎಲ್ಲಾ ಖಾಸಗಿ, ಚರ ಮತ್ತು ಸ್ಥಿರ ಆಸ್ತಿಗಳ ಏಕೈಕ ಉತ್ತರಾಧಿಕಾರಿ" ಎಂದು ಸರ್ಕಾರ ನೀಡಿದ ಪ್ರಮಾಣಪತ್ರದ ಮೂಲಕ ಗುರುತಿಸಲಾಗಿತ್ತು.
ತಮ್ಮ ತಂದೆಗೆ ಉತ್ತರಾಧಿಕಾರದಿಂದ ಬಂದ ಆಸ್ತಿಗಳು 'ಜ್ಯೇಷ್ಠಾಧಿಕಾರ ನಿಯಮ'ಕ್ಕೆ ಒಳಪಟ್ಟಿವೆ ಎಂದು ಜ್ಯೋತಿರಾದಿತ್ಯ ವಾದಿಸುತ್ತಿದ್ದಾರೆ. ಇದು ಹಿರಿಯ ಕಾನೂನುಬದ್ಧ ಮಗನು ಹೆತ್ತವರ ಮರಣದ ನಂತರ ಅವರ ಸಂಪೂರ್ಣ ಆಸ್ತಿಯನ್ನು ಪಡೆಯುವ ಒಂದು ಸಾಂಪ್ರದಾಯಿಕ ಪದ್ಧತಿಯಾಗಿದೆ. ಸಂಪತ್ತು ಮತ್ತು ಅಧಿಕಾರವು ಒಂದೇ ವಂಶಾವಳಿಯಲ್ಲಿ ಉಳಿಯುವಂತೆ ಮಾಡಲು ಈ ನಿಯಮವನ್ನು ರಾಜಮನೆತನಗಳಲ್ಲಿ ಬಳಸಲಾಗುತ್ತಿತ್ತು.
ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 5(ii)ರ ಅಡಿಯಲ್ಲಿ ಈ ನಿಯಮಕ್ಕೆ ಮಾನ್ಯತೆ ಇದೆ. ಭಾರತೀಯ ಸಂಸ್ಥಾನದ ದೊರೆಯು ಭಾರತ ಸರ್ಕಾರದೊಂದಿಗೆ ಮಾಡಿಕೊಂಡ ಯಾವುದೇ ಒಪ್ಪಂದದ ಅನ್ವಯ ಏಕೈಕ ವಾರಸುದಾರನಿಗೆ ಸಿಗುವ ಆಸ್ತಿಗೆ ಈ ಸಾಮಾನ್ಯ ಕಾನೂನು ಅನ್ವಯಿಸುವುದಿಲ್ಲ ಎಂದು ಈ ಸೆಕ್ಷನ್ ಹೇಳುತ್ತದೆ. ಜ್ಯೋತಿರಾದಿತ್ಯ ಅವರು ಈ 'ಜ್ಯೇಷ್ಠಾಧಿಕಾರ ನಿಯಮ'ದ ಆಧಾರದ ಮೇಲೆಯೇ ವಿವಾದಿತ ಆಸ್ತಿಗಳ ಮೇಲಿನ ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದಾರೆ.
ಇನ್ನೊಂದೆಡೆ, ಪತಿಯ ಮರಣದ ನಂತರ ವಿಜಯಾ ರಾಜೇ ಸಿಂಧಿಯಾ ಅವರು ಆಸ್ತಿಗಳನ್ನು ನಿರ್ವಹಿಸಲು ವಿವಿಧ ವಿಭಜನಾ ಪತ್ರಗಳನ್ನು ಮತ್ತು ಟ್ರಸ್ಟ್ ಗಳನ್ನು ರಚಿಸಿದ್ದರು. ತಮ್ಮ ಅಜ್ಜಿಗೆ ಕೇವಲ ಜೀವನ ನಿರ್ವಹಣಾ ಭತ್ಯೆ ಬಿಟ್ಟರೆ ಬೇರೇನೂ ಸಿಗುತ್ತಿರಲಿಲ್ಲ ಎಂಬ ಕಾರಣಕ್ಕೆ, ಆಸ್ತಿಗಳು ಹಿಂದೂ ಅವಿಭಕ್ತ ಕುಟುಂಬಕ್ಕೆ ಸೇರಿವೆ ಎಂದು ತೋರಿಸಲು ಅವರು ಈ ಟ್ರಸ್ಟ್ ಮತ್ತು ವಿಭಜನಾ ಪತ್ರಗಳನ್ನು ಸಂಚು ರೂಪಿಸಿ ಸೃಷ್ಟಿಸಿದ್ದರು ಎಂದು ಜ್ಯೋತಿರಾದಿತ್ಯ ಆರೋಪಿಸಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ಜೀವಾಜಿ ರಾವ್ ಅವರು 1956ರ ಹಿಂದೂ ಉತ್ತರಾಧಿಕಾರ ಕಾಯ್ದೆ ಜಾರಿಗೆ ಬಂದ ನಂತರ ನಿಧನರಾಗಿರುವುದರಿಂದ ಈ ಕಾನೂನು ತಮಗೂ ಅನ್ವಯಿಸುತ್ತದೆ ಎಂದು ಅವರ ಪುತ್ರಿಯರು ವಾದಿಸುತ್ತಿದ್ದಾರೆ. ತಾವು 'ಕ್ಲಾಸ್-I' (ಮೊದಲ ದರ್ಜೆಯ) ವಾರಸುದಾರರಾಗಿರುವುದರಿಂದ, ವಿವಾದಿತ ಆಸ್ತಿಗಳಲ್ಲಿ ತಮಗೂ ಸಮಾನ ಪಾಲಿದೆ ಎಂಬುದು ಅವರ ನಿಲುವಾಗಿದೆ.
►300 ಪುಟಗಳಷ್ಟು ಸುದೀರ್ಘ ಆಸ್ತಿ ವಿವರ
ತಮ್ಮ ಪುತ್ರ ಮಾಧವರಾವ್ ಸಿಂಧಿಯಾ ಅವರು ಬದುಕಿದ್ದಾಗಲೇ, 1984ರಲ್ಲಿ ವಿಜಯಾ ರಾಜೇ ಸಿಂಧಿಯಾ ಅವರು ಹಿಂದೂ ಅವಿಭಕ್ತ ಕುಟುಂಬಕ್ಕೆ ಸೇರಿದ ಚರ ಆಸ್ತಿಗಳ ವಿಭಜನೆ ಕೋರಿ ಮುಂಬೈ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದರು.
ವಿವಾದಕ್ಕೆ ಒಳಗಾಗಿದ್ದ ಚರ ಆಸ್ತಿಗಳ ಪಟ್ಟಿಯೇ ಬರೋಬ್ಬರಿ 300 ಪುಟಗಳಷ್ಟಿತ್ತು. ಇದರಲ್ಲಿ ಐತಿಹಾಸಿಕ ಪಾರಂಪರಿಕ ವರ್ಣಚಿತ್ರಗಳು, 623 ಕೆ.ಜಿ. ಚಿನ್ನ, 332 ಕೆ.ಜಿ. ಬೆಳ್ಳಿ ಹಾಗೂ ಕ್ರಿಸ್ತಶಕ 9ನೇ ಶತಮಾನದಿಂದ 14ನೇ ಶತಮಾನದವರೆಗಿನ ಅಪರೂಪದ ಪ್ರಾಚೀನ ಕಲಾಕೃತಿಗಳು ಸೇರಿದ್ದವು.
ಮೊಕದ್ದಮೆ ಬಾಕಿ ಇರುವಾಗಲೇ ವಿಜಯಾ ರಾಜೇ ಸಿಂಧಿಯಾ ಅವರು ನಿಧನರಾದ ಕಾರಣ, ಅವರ ಆಸ್ತಿಯನ್ನು ಪ್ರತಿನಿಧಿಸಲು ಅವರ ಮಾಜಿ ಖಾಸಗಿ ಕಾರ್ಯದರ್ಶಿ ಸರ್ದಾರ್ ಸಂಭಾಜಿ ಆಂಗ್ರೆ ಅವರನ್ನು ನೇಮಿಸಲಾಯಿತು. ಆಂಗ್ರೆ ಅವರ ನಿಧನದ ನಂತರ, ವಿಜಯಾ ರಾಜೇ ಅವರ ವಿಲ್ ಪ್ರಕಾರ ಆಸ್ತಿಯ ಉಸ್ತುವಾರಿಯಾಗಿ ಸ್ವದೇಶಿ ಜಾಗರಣ ಮಂಚ್ನ ಸಂಚಾಲಕರು ಏಕೈಕ ದೂರುದಾರರಾಗಿ ಮುಂದುವರಿದರು.
ಇನ್ನೊಂದೆಡೆ, ಪ್ರತಿವಾದಿಗಳ ಸ್ಥಾನದಲ್ಲೂ ತಲೆಮಾರುಗಳ ಬದಲಾವಣೆಯಾಯಿತು. ಆರಂಭದಲ್ಲಿ ಮೊದಲ ಪ್ರತಿವಾದಿ ಮಾಧವರಾವ್ ಸಿಂಧಿಯಾ ಆಗಿದ್ದರೆ, ಎರಡನೇ ಪ್ರತಿವಾದಿ ಅವರ ಪತ್ನಿ ಮಾಧವಿ ರಾಜೇ ಸಿಂಧಿಯಾ ಆಗಿದ್ದರು. 3, 4 ಮತ್ತು 5ನೇ ಪ್ರತಿವಾದಿಗಳು ವಿಜಯಾ ರಾಜೇ ಮತ್ತು ಜೀವಾಜಿ ರಾವ್ ಅವರ ಪುತ್ರಿಯರಾದ ಉಷಾ ರಾಜೇ ರಾಣಾ, ವಸುಂಧರಾ ರಾಜೇ ಮತ್ತು ಯಶೋಧರಾ ರಾಜೇ ಆಗಿದ್ದರು. 6 ಮತ್ತು 7ನೇ ಪ್ರತಿವಾದಿಗಳು ಅವರ ಹಿರಿಯ ಪುತ್ರಿ ದಿವಂಗತ ಪದ್ಮಾವತಿ ರಾಜೇ 'ಅಕ್ಕಾಸಾಹೇಬ್' ದೇವ್ ಬರ್ಮನ್ ಅವರ ಪುತ್ರಿಯರಾದ ಕನಿಕಾ ದೇವಿ ದೇವ್ ಬರ್ಮನ್ ಮತ್ತು ಪ್ರತಿಮಾ ದೇವಿ ರಾಣೆ ಬರ್ಮನ್ ಆಗಿದ್ದರು.
ಮಾಧವರಾವ್ ಅವರ ನಿಧನದ ನಂತರ, ಅವರ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಪುತ್ರಿ ಚಿತ್ರಾಂಗದಾ ರಾಜೇ ಸಿಂಧಿಯಾ ಅವರು ಮೊದಲ ಪ್ರತಿವಾದಿಗಳಾಗಿ ಈ ಮೊಕದ್ದಮೆಯನ್ನು ಸೇರಿಕೊಂಡರು.
ಮೊಕದ್ದಮೆ ದಾಖಲಾದ 34 ವರ್ಷಗಳ ನಂತರ, ಅಂದರೆ 2018ರಲ್ಲಿ ಮಾತ್ರವೇ ನ್ಯಾಯಾಲಯವು ಈ ಪ್ರಕರಣದ ಪ್ರಮುಖ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿತು.
ಕುಟುಂಬದ ಸದಸ್ಯರು ರಾಜಿ ಸಂಧಾನದ ಮೊರೆ ಹೋಗುವ ಸಾಧ್ಯತೆ ಇದೆ ಎಂದು 2021ರ ಜನವರಿಯಲ್ಲಿ ಮುಂಬೈ ಹೈಕೋರ್ಟ್ ಗೆ ಮೊದಲ ಬಾರಿಗೆ ತಿಳಿಸಲಾಗಿತ್ತು. ಆದರೂ, ಮೂರು ವರ್ಷಗಳ ನಂತರ, ಅಂದರೆ 2024ರ ಜನವರಿಯಲ್ಲಿ ಹೈಕೋರ್ಟ್ ಕುಟುಂಬದ ಸದಸ್ಯರಿಗೆ ಅಂತಿಮ ಗಡುವು ವಿಧಿಸಿತು. ಈ ಮೊಕದ್ದಮೆಯು ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಇನ್ನೂ ಪ್ರತಿವಾದಿಗಳ ಸಾಕ್ಷ್ಯಾಧಾರಗಳ ಅಫಿಡವಿಟ್ ಸಲ್ಲಿಕೆಯ ಹಂತದಲ್ಲೇ ಇರುವುದನ್ನು ನ್ಯಾಯಾಲಯ ಪ್ರಸ್ತಾಪಿಸಿತು.
ತಾವು ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಕುಟುಂಬದ ಸದಸ್ಯರು ನ್ಯಾಯಪೀಠಕ್ಕೆ ತಿಳಿಸಿದಾಗ, "ಕುಟುಂಬದ ಸದಸ್ಯರಿಗೆ ತಮ್ಮ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅಥವಾ ಅದಕ್ಕೆ ಅವರು ದೀರ್ಘ ಸಮಯ ತೆಗೆದುಕೊಳ್ಳುತ್ತಿದ್ದರೆ, ಈ ನ್ಯಾಯಾಲಯದ ಮುಂದಿರುವ ಪ್ರಕ್ರಿಯೆಗಳನ್ನು ಅನಿರ್ದಿಷ್ಟಾವಧಿಯವರೆಗೆ ನನೆಗುದಿಗೆ ಹಾಕಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಖಡಕ್ ಆಗಿ ಹೇಳಿತು.
ಆದ್ದರಿಂದ, ಎಂಟು ವಾರಗಳ ಒಳಗಾಗಿ ರಾಜಿ ಸಂಧಾನದ ಷರತ್ತುಗಳನ್ನು ತನ್ನ ಮುಂದೆ ಮಂಡಿಸುವಂತೆ ನ್ಯಾಯಾಲಯ ಅವರಿಗೆ ನಿರ್ದೇಶನ ನೀಡಿತು. ಒಂದು ವೇಳೆ ಷರತ್ತುಗಳನ್ನು ಸಲ್ಲಿಸದಿದ್ದರೆ ಮೊಕದ್ದಮೆಯ ವಿಚಾರಣೆಯನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿತು.
►ಜೀವಿತಾವಧಿಯಿಡೀ ಮುಂದುವರಿದ ಮೊಕದ್ದಮೆಗಳು
ಈ ಇಡೀ ಪ್ರಕರಣದಲ್ಲಿ ಅತ್ಯಂತ ಪ್ರಮುಖವಾದ ಮೊಕದ್ದಮೆಯನ್ನು ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮಗೆ 20 ವರ್ಷ ತುಂಬುವುದಕ್ಕೂ ಮೊದಲೇ ಗ್ವಾಲಿಯರ್ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ತಮ್ಮ ಅಜ್ಜಿ ವಿಜಯಾ ರಾಜೇ ಸಿಂಧಿಯಾ ಮತ್ತು ತಂದೆ ಮಾಧವರಾವ್ ಸಿಂಧಿಯಾ ಅವರ ವಿರುದ್ಧವೇ ಅವರು ಈ ಕಾನೂನು ಸಮರ ಸಾರಿದ್ದರು.
ಮಾಧವರಾವ್ ಸಿಂಧಿಯಾ ಅವರು ದಿವಂಗತ ಜೀವಾಜಿ ರಾವ್ ಸಿಂಧಿಯಾ ಮತ್ತು ವಿಜಯಾ ರಾಜೇ ಸಿಂಧಿಯಾ ಅವರ ಏಕೈಕ ಪುತ್ರರಾಗಿದ್ದರು. ಜೀವಾಜಿ ರಾವ್ ಅವರ ನಿಧನದ ನಂತರ, ಮುಂಬೈ ಮೂಲದ ನ್ಯಾಯವಾದಿ ಡಿ. ಎಂ. ಹರೀಶ್ ಅವರು ಏಕೈಕ ಮಧ್ಯಸ್ಥಗಾರರಾಗಿ ಕಾರ್ಯನಿರ್ವಹಿಸಿ, 1980ರ ಎಪ್ರಿಲ್ 1ರ ಮಧ್ಯಸ್ಥಿಕೆ ತೀರ್ಪಿನ ಮೂಲಕ ತಾಯಿ ಮತ್ತು ಮಗನ ನಡುವೆ ಕೆಲವು ಆಸ್ತಿಗಳನ್ನು ವಿಭಜಿಸಿದ್ದರು.
ವಿವಾದದ ಆರಂಭಿಕ ಹಂತದಲ್ಲೇ ಜ್ಯೋತಿರಾದಿತ್ಯ ಅವರು ತಮ್ಮ ಅಜ್ಜಿಯ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ತಮ್ಮ ಅಜ್ಜಿ ಈಗಾಗಲೇ ವಿವಾದಿತ ಆಸ್ತಿಗಳನ್ನು ಇತರರಿಗೆ ಹಸ್ತಾಂತರಿಸಲು ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಉದಾಹರಣೆಗೆ, ದಿಲ್ಲಿಯ ಸರೋಜಿನಿ ನಗರದಲ್ಲಿರುವ ಆಸ್ತಿಯನ್ನು ಗುತ್ತಿಗೆಗೆ ನೀಡಲು ವಿಜಯಾ ರಾಜೇ ಅವರು ಈಗಾಗಲೇ 1 ಲಕ್ಷ ರೂ. ಮುಂಗಡ ಹಣ ಪಡೆದಿದ್ದಾರೆ. ದಿಲ್ಲಿಯ ವಸಂತ್ ವಿಹಾರ್ ಹಾಗೂ ಸರೋಜಿನಿ ನಗರದ ಕುಸುಂಪುರ್ ಜೇಡಿಮಣ್ಣಿನ ಗಣಿಗಳಿಗೂ ಇಂತಹುದೇ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ದೂರಿದ್ದರು.
1990ರ ಅಕ್ಟೋಬರ್ ನಲ್ಲಿ ಗ್ವಾಲಿಯರ್ ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಜ್ಯೋತಿರಾದಿತ್ಯ ಅವರ ಪರವಾಗಿ ತಾತ್ಕಾಲಿಕ ತಡೆಯಾಜ್ಞೆ ಆದೇಶ ಹೊರಡಿಸಿದರು. ವಿಜಯಾ ರಾಜೇ ಸಿಂಧಿಯಾ ಅವರು ವಿವಾದಿತ ಆಸ್ತಿಗಳನ್ನು ಇತರರಿಗೆ ಹಸ್ತಾಂತರಿಸುವುದರಿಂದ ಜ್ಯೋತಿರಾದಿತ್ಯ ಅವರಿಗೆ ಸರಿಪಡಿಸಲಾಗದ ನಷ್ಟ ಉಂಟಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಇದನ್ನು ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಯಿತಾದರೂ, ಹೈಕೋರ್ಟ್ ಕೆಳ ನ್ಯಾಯಾಲಯದ ತಾತ್ಕಾಲಿಕ ತಡೆಯಾಜ್ಞೆಯನ್ನು ಎತ್ತಿಹಿಡಿಯಿತು.
2001ರಲ್ಲಿ ವಿಜಯಾ ರಾಜೇ ಸಿಂಧಿಯಾ ಅವರ ನಿಧನದ ನಂತರ ಈ ಆಸ್ತಿ ವಿವಾದಗಳು ಮತ್ತಷ್ಟು ಸಂಕೀರ್ಣಗೊಂಡವು.
►ಕಿಡ್ವಾಯಿ ಅವರ ಪುಸ್ತಕದ ಪ್ರಕಾರ...
ಕಿಡ್ವಾಯಿ ಅವರ ಪುಸ್ತಕದ ಪ್ರಕಾರ, ಆಂಗ್ರೆ ಅವರು 1985ರಲ್ಲಿ ಸಿದ್ಧಪಡಿಸಲಾಗಿದ್ದ ಕೈಬರಹದ ವಿಲ್ ಒಂದನ್ನು ಹಾಜರುಪಡಿಸಿದ್ದರು. ಇದರಲ್ಲಿ ವಿಜಯಾ ರಾಜೇ ಅವರು ತಮ್ಮ ಮಗ ಮತ್ತು ಮೊಮ್ಮಗನನ್ನು ಆಸ್ತಿಯಿಂದ ವಂಚಿತರನ್ನಾಗಿಸಿದ್ದರು. ಬದಲಿಗೆ, ತಮ್ಮ ಆಸ್ತಿಯ ಮೂರನೇ ಎರಡರಷ್ಟು ಪಾಲನ್ನು ಪುತ್ರಿಯರಿಗೆ ಹಾಗೂ ಮೂರನೇ ಒಂದರಷ್ಟು ಪಾಲನ್ನು ತಾವು ಈ ಹಿಂದೆ ಸ್ಥಾಪಿಸಿದ್ದ 15 ಟ್ರಸ್ಟ್ಗಳನ್ನು ಒಳಗೊಂಡಂತೆ ಧರ್ಮದತ್ತಿ ಸಂಸ್ಥೆಯೊಂದಕ್ಕೆ ನೀಡಿದ್ದರು. ಆಂಗ್ರೆ ಮತ್ತು ಗುರುಮೂರ್ತಿ ಈ ವಿಲ್ನ ಉಸ್ತುವಾರಿಗಳಾಗಿದ್ದರು.
2001ರಲ್ಲಿ ಆಂಗ್ರೆ ಅವರು ದಿಲ್ಲಿ ಹೈಕೋರ್ಟ್ನಲ್ಲಿ ಪ್ರೊಬೇಟ್ ಅರ್ಜಿಯನ್ನು ಸಲ್ಲಿಸಿದ್ದು, ಅದು ಇಂದಿಗೂ ಬಾಕಿ ಉಳಿದಿದೆ. ಪ್ರೊಬೇಟ್ ಎಂಬುದು ವಿಲ್ ನಿಜವಾದದ್ದು ಎಂಬುದನ್ನು ಸಾಬೀತುಪಡಿಸುವ ಮತ್ತು ಮೃತರ ಹಣ ಹಾಗೂ ಆಸ್ತಿಯನ್ನು ನಿರ್ವಹಿಸುವ ಅಧಿಕಾರವನ್ನು ಉಸ್ತುವಾರಿಗೆ ನೀಡುವ ಕಾನೂನುಬದ್ಧ ದಾಖಲೆಯಾಗಿದೆ.
ಆದರೆ, ವಿಜಯಾ ರಾಜೇ ಅವರ ಪುತ್ರಿಯರಾದ ಉಷಾ ರಾಜೇ, ವಸುಂಧರಾ ರಾಜೇ ಮತ್ತು ಯಶೋಧರಾ ರಾಜೇ ಅವರು 2001ರಲ್ಲಿ ಮುಂಬೈ ಹೈಕೋರ್ಟ್ ನಲ್ಲಿ ಮತ್ತೊಂದು ಸಮಾನಾಂತರ ಅರ್ಜಿ ಸಲ್ಲಿಸಿದರು. ವಿಜಯಾ ರಾಜೇ ಅವರ ವಿಲ್ 2001ರ ಫೆಬ್ರವರಿಯಲ್ಲಿ ಸಿದ್ಧವಾಗಿತ್ತು ಮತ್ತು ಅದು ಕೇವಲ ತಮ್ಮ ಮೂವರು ಪುತ್ರಿಯರಿಗೆ ಮಾತ್ರ ಆಸ್ತಿಯನ್ನು ಹಸ್ತಾಂತರಿಸಿದೆ ಎಂದು ಅವರು ಇದರಲ್ಲಿ ವಾದಿಸಿದ್ದರು.
ಕಳೆದ ವರ್ಷ, ಅಂದರೆ 2025ರ ಸೆಪ್ಟೆಂಬರ್ ನಲ್ಲಿ, ಕುಟುಂಬದ ಸದಸ್ಯರು ವಿವಾದದ ಸೌಹಾರ್ದಯುತ ಇತ್ಯರ್ಥಕ್ಕೆ ಒಪ್ಪಿಕೊಂಡಿದ್ದಾರೆ ಮತ್ತು ಜ್ಯೋತಿರಾದಿತ್ಯ ಹಾಗೂ ಚಿತ್ರಾಂಗದಾ ಅವರು ತಮ್ಮ ಅತ್ತೆಯಂದಿರ ಪರವಾಗಿ ಪ್ರೊಬೇಟ್ ನೀಡಲು ಇದ್ದ ಆಕ್ಷೇಪಣೆಗಳನ್ನು ಹಿಂತೆಗೆದುಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಈ ವರ್ಷದ 2026ರ ಫೆಬ್ರವರಿಯಲ್ಲಿ, ವಿಜಯಾ ರಾಜೇ ಅವರ ಮೂವರು ಪುತ್ರಿಯರ ಪರವಾಗಿ ಉಳಿದ ಎಲ್ಲಾ ಪುತ್ರಿಯರು, ಮೊಮ್ಮಕ್ಕಳು ಮತ್ತು ಮೊಮ್ಮಗ ಒಪ್ಪಿಗೆ ನೀಡಿರುವುದನ್ನು ಪರಿಗಣಿಸಿದ ನ್ಯಾಯಾಲಯವು ಅವರ ಅರ್ಜಿಯನ್ನು ಪುರಸ್ಕರಿಸಿತು.
ಆದ್ದರಿಂದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿ-ಅರ್ಜಿ ಅಥವಾ ಕೇವಿಯಟ್ ಸಲ್ಲಿಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಿದ ನಂತರ ಪ್ರೊಬೇಟ್ ನೀಡುವಂತೆ ನ್ಯಾಯಾಲಯವು ಕಚೇರಿಗೆ ಆದೇಶಿಸಿತು.
►180 ಡಿಗ್ರಿ ತಿರುವು
ಸಿಂಧಿಯಾ ಕುಟುಂಬಕ್ಕೆ ಸಂಬಂಧಿಸಿದ ಮತ್ತೊಂದು ಮೊಕದ್ದಮೆಯು 1985ರಲ್ಲಿ ಪುಣೆಯ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿತ್ತು. ಆಸ್ತಿ ವಿಭಜನೆ ಮತ್ತು ಅದರಲ್ಲಿ ತಮಗೆ ಬರಬೇಕಾದ ಅರ್ಧದಷ್ಟು ಪಾಲನ್ನು ಪ್ರತ್ಯೇಕವಾಗಿ ವಶಕ್ಕೆ ನೀಡುವಂತೆ ಕೋರಿ ವಿಜಯಾ ರಾಜೇ ಸಿಂಧಿಯಾ ಅವರು ಈ ಅರ್ಜಿ ಸಲ್ಲಿಸಿದ್ದರು.
ಪ್ರತಿವಾದಿಯಾದ ತಮ್ಮ ಪುತ್ರ ಮಾಧವರಾವ್ ಸಿಂಧಿಯಾ ಅವರು ಆಸ್ತಿಯ ಉಳಿದ ಅರ್ಧ ಭಾಗವನ್ನು ಹೊಂದಿದ್ದಾರೆ. ಇತರ ಪ್ರತಿವಾದಿಗಳಾದ ತಮ್ಮ ಪುತ್ರಿಯರಾದ ಉಷಾ ರಾಜೇ ರಾಣಾ, ವಸುಂಧರಾ ರಾಜೇ, ಯಶೋಧರಾ ರಾಜೇ ಹಾಗೂ ದಿವಂಗತ ಪದ್ಮಾವತಿ ರಾಜೇ (ಅವರ ಪುತ್ರಿಯರಾದ ಕನಿಕಾ ದೇವಿ ದೇವ್ ಬರ್ಮನ್ ಮತ್ತು ಪ್ರತಿಮಾ ದೇವಿ ರಾಣೆ ಬರ್ಮನ್ ಅವರ ಮೂಲಕ) ಅವರಿಗೆ ಆಸ್ತಿಯಲ್ಲಿ ಯಾವುದೇ ಪಾಲಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.
1999ರ 'ವಿಲ್' ಈ ಮೊಕದ್ದಮೆಯಲ್ಲಿ ಪುತ್ರಿಯರ ಭವಿಷ್ಯವನ್ನೇ ಬದಲಾಯಿಸಿತು. ಇದರ ಪರಿಣಾಮವಾಗಿ, 2012ರಲ್ಲಿ ಈ ಪುತ್ರಿಯರೇ ಪ್ರಕರಣದ ದೂರುದಾರರಾದರು ಮತ್ತು ಮಾಧವರಾವ್ ಸಿಂಧಿಯಾ ಅವರ ಸ್ಥಾನಕ್ಕೆ ಅವರ ಕಾನೂನುಬದ್ಧ ವಾರಸುದಾರರು ಬಂದರು.
ಆದರೆ, 2016ರಲ್ಲಿ ಈ ಪುತ್ರಿಯರು ನ್ಯಾಯಾಲಯಕ್ಕೆ ಹೊಸದೊಂದು ಮಾಹಿತಿ ನೀಡಿ, ತಮ್ಮನ್ನು ದೂರುದಾರರನ್ನಾಗಿ ಸೇರಿಸಲಾದ ತಿದ್ದುಪಡಿ ಅರ್ಜಿಯನ್ನು ತಮ್ಮ ಸಹಿ ಅಥವಾ ಅನುಮತಿಯಿಲ್ಲದೆ ಕೇವಲ "ಯಾಂತ್ರಿಕವಾಗಿ" ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ತಿದ್ದುಪಡಿ ಅರ್ಜಿಯು ಅವರನ್ನು ವಿಜಯಾ ರಾಜೇ ಸಿಂಧಿಯಾ ಅವರ ಕಾನೂನುಬದ್ಧ ವಾರಸುದಾರರು ಎಂದು ಬಿಂಬಿಸಿತ್ತು. ಆದರೆ ವಿಜಯಾ ರಾಜೇ ಸಿಂಧಿಯಾ ಅವರು ಮೊದಲೇ ಪುತ್ರಿಯರಿಗೆ ಆಸ್ತಿಯಲ್ಲಿ ಯಾವುದೇ ಪಾಲಿಲ್ಲ ಎಂದು ವಾದಿಸಿದ್ದರು. ಇದು ಇತರ ನ್ಯಾಯಾಲಯಗಳಲ್ಲಿ ಪುತ್ರಿಯರು ಸಲ್ಲಿಸಿದ್ದ ಅರ್ಜಿಗಳಿಗೆ ಧಕ್ಕೆ ತರುತ್ತಿತ್ತು. ಏಕೆಂದರೆ, ತಾಯಿ ಮತ್ತು ಸೋದರನೊಂದಿಗೆ ತಮಗೂ ತಮ್ಮ ತಂದೆಯ ಆಸ್ತಿಯಲ್ಲಿ ಸಮಾನ ಪಾಲಿದೆ ಎಂದು ಅವರು ಇತರ ನ್ಯಾಯಾಲಯಗಳಲ್ಲಿ ವಾದಿಸುತ್ತಿದ್ದರು. ಇದೇ ಕಾರಣಕ್ಕೆ ಪುತ್ರಿಯರು ಸಮಾನಾಂತರವಾಗಿ 2010ರಲ್ಲಿ ಗ್ವಾಲಿಯರ್ ನ್ಯಾಯಾಲಯದಲ್ಲಿ ಮತ್ತೊಂದು ವಿಭಜನಾ ಮೊಕದ್ದಮೆಯನ್ನು ಹೂಡಿದ್ದರು.
ತಮ್ಮ ತಂದೆಯ ಆಸ್ತಿಯಲ್ಲಿ ಪುತ್ರಿಯರಿಗೆ ಯಾವುದೇ ಹಕ್ಕಿಲ್ಲ ಎಂಬ ವಿಜಯಾ ರಾಜೇ ಅವರ ಮೂಲ ವಾದವನ್ನು ಈ ತಿದ್ದುಪಡಿ ಅರ್ಜಿಯಲ್ಲೂ ಮುಂದುವರಿಸಲಾಗಿತ್ತು. ಇದು ಇತರ ಮೊಕದ್ದಮೆಗಳಲ್ಲಿ ಪುತ್ರಿಯರು ಮಂಡಿಸುತ್ತಿದ್ದ ವಾದಕ್ಕೆ ಸಂಪೂರ್ಣ ವಿರುದ್ಧವಾಗಿತ್ತು.
ಹೀಗಾಗಿ, ಅರ್ಜಿಯನ್ನು ತಿದ್ದುಪಡಿ ಮಾಡಲು ಪುತ್ರಿಯರು ಸಲ್ಲಿಸಿದ್ದ ಕೋರಿಕೆಯನ್ನು ನ್ಯಾಯಾಲಯವು 2017ರಲ್ಲಿ ತಿರಸ್ಕರಿಸಿತು. ಜ್ಯೋತಿರಾದಿತ್ಯ ಮತ್ತು ಚಿತ್ರಾಂಗದಾ ರಾಜೇ ಅವರ ಪರ ವಕೀಲರು, ವಿಜಯಾ ರಾಜೇ ಅವರು ಕೋರಿದ್ದ ಪರಿಹಾರಕ್ಕೆ "180 ಡಿಗ್ರಿ ಸಂಪೂರ್ಣ ತಿರುವು" ನೀಡುವ ಮೂಲಕ ಹೊಸ ವಾದವನ್ನು ಮಂಡಿಸಲು ಇವರಿಗೆ ಅವಕಾಶ ನೀಡಬಾರದು ಎಂದು ವಾದಿಸಿದರು.
ನ್ಯಾಯಾಲಯದ ದಾಖಲೆಗಳ ಪ್ರಕಾರ, 2018ರ ಅಕ್ಟೋಬರ್ನಿಂದ ಮುಂಬೈ ಹೈಕೋರ್ಟ್ ಈ ಮೊಕದ್ದಮೆಯ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.
►ಕೊನೆಯಲ್ಲಿ ಮೂಡಿದ ಆಶಾಕಿರಣ
ನ್ಯಾಯಾಲಯಗಳಲ್ಲಿ ದಶಕಗಳಿಂದ ನಡೆಯುತ್ತಿದ್ದ ಈ ವಿವಾದವು ಸೌಹಾರ್ದಯುತವಾಗಿ ಇತ್ಯರ್ಥಗೊಳ್ಳಬಹುದು ಎಂಬ ಮೊದಲ ಭರವಸೆ ಮೂಡಿದ್ದು 2021ರಲ್ಲಿ.
2021ರ ಜನವರಿಯಲ್ಲಿ, ತಾವು ವಿವಾದವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಮುಂಬೈ ಹೈಕೋರ್ಟ್ ಗೆ ತಿಳಿಸಲಾಯಿತು. 2021ರ ನವೆಂಬರ್ ನಲ್ಲಿ, ತಾವು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಜಿಲ್ಲಾ ನ್ಯಾಯಾಲಯಕ್ಕೂ ಮಾಹಿತಿ ನೀಡಲಾಯಿತು. ಇದರ ಬೆನ್ನಲ್ಲೇ ನ್ಯಾಯಾಲಯವು ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ನ್ಯಾಯಾಲಯದ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವಂತೆ ಆದೇಶಿಸಿತು.
2023ರ ಜನವರಿ 11ರಂದು ಮಧ್ಯಪ್ರದೇಶ ಹೈಕೋರ್ಟ್ ಹೊರಡಿಸಿದ ಆದೇಶದಲ್ಲೂ ಸಹ, ವಿವಾದವು ಸೌಹಾರ್ದಯುತವಾಗಿ ಇತ್ಯರ್ಥಗೊಳ್ಳುವ "ಉತ್ತಮ ಅವಕಾಶಗಳಿವೆ" ಎಂದು ಉಭಯ ಕಡೆಯ ವಕೀಲರು ಸಮ್ಮತಿಸಿರುವುದನ್ನು ದಾಖಲಿಸಲಾಗಿತ್ತು.
ಇದು ಅತ್ಯಂತ ಹಳೆಯ ಪ್ರಕರಣಗಳ ಪಟ್ಟಿಯಲ್ಲಿ ಸೇರಿರುವುದರಿಂದ, ರಾಜಿ ಸಂಧಾನಕ್ಕಾಗಿ ವಿಚಾರಣೆಯನ್ನು ಮುಂದೂಡಲು ಕೆಳ ನ್ಯಾಯಾಲಯವು ನಿರಾಕರಿಸಿತ್ತು. ಅಷ್ಟೇ ಅಲ್ಲದೆ, ಸಿವಿಲ್ ಪ್ರೊಸೀಜರ್ ಕೋಡ್ ನ ಆರ್ಡರ್ 7 ರೂಲ್ 11ರ ಅಡಿಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು 2023ರ ಜನವರಿ 13ಕ್ಕೆ ನಿಗದಿಪಡಿಸಿತ್ತು. ಸಿವಿಲ್ ಮೊಕದ್ದಮೆಯನ್ನು ಆರಂಭಿಕ ಹಂತದಲ್ಲೇ ವಜಾಗೊಳಿಸುವಂತೆ ಕೋರಿ ಪ್ರತಿವಾದಿಗಳು ಈ ಅರ್ಜಿಯನ್ನು ಸಲ್ಲಿಸುತ್ತಾರೆ. ಈ ಬೆಳವಣಿಗೆಯು, ಈ ಮೊಕದ್ದಮೆಯು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಕೇವಲ ಆರಂಭಿಕ ಹಂತದಲ್ಲೇ ಸಿಲುಕಿಕೊಂಡಿರುವುದನ್ನು ಎತ್ತಿ ತೋರಿಸುತ್ತದೆ.
ಒಂದು ವೇಳೆ ಕೆಳ ನ್ಯಾಯಾಲಯವು ಈ ಅರ್ಜಿಯ ಬಗ್ಗೆ ತೀರ್ಮಾನ ಕೈಗೊಂಡರೆ, ಅದು ರಾಜಿ ಪ್ರಕ್ರಿಯೆಯನ್ನು ಖಂಡಿತವಾಗಿಯೂ ಹಳಿತಪ್ಪಿಸುತ್ತದೆ ಎಂದು ಎರಡೂ ಕಡೆಯವರು ಹೈಕೋರ್ಟ್ ಗೆ ತಿಳಿಸಿದರು. ನ್ಯಾಯದ ಹಿತದೃಷ್ಟಿಯಿಂದ ಕೆಳ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕ್ರಿಯೆಗಳಿಗೆ ಸೂಕ್ತ ಸಮಯದವರೆಗೆ ತಡೆಯಾಜ್ಞೆ ನೀಡಬೇಕು, ಇದರಿಂದ ತಮಗೆ ರಾಜಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ಮನವಿ ಮಾಡಿದರು.
ಇದನ್ನು ಪುರಸ್ಕರಿಸಿದ ಏಕಸದಸ್ಯ ನ್ಯಾಯಪೀಠವು, ಕೆಳ ನ್ಯಾಯಾಲಯದಲ್ಲಿದ್ದ ಒಂದು ಮೊಕದ್ದಮೆಯ ವಿಚಾರಣೆಗೆ ಮುಂದಿನ ವಿಚಾರಣೆಯ ದಿನಾಂಕದವರೆಗೆ ತಡೆಯಾಜ್ಞೆ ನೀಡಿತು. ಆ ನಂತರ ನಡೆದ ಸರಣಿ ವಿಚಾರಣೆಗಳಲ್ಲೂ ನ್ಯಾಯಾಲಯವು ಈ ಮಧ್ಯಂತರ ಆದೇಶವನ್ನು ವಿಸ್ತರಿಸುತ್ತಾ ಹೋಯಿತು.
ರಾಜಿ ಸಂಧಾನಕ್ಕಾಗಿ ತೆಗೆದುಕೊಂಡ ಸುದೀರ್ಘ ಸಮಯವು ನ್ಯಾಯಾಲಯದ ತಾಳ್ಮೆಯನ್ನೂ ಪರೀಕ್ಷಿಸಿತು. 2025ರ ಮಾರ್ಚ್ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಜ್ಯೋತಿರಾದಿತ್ಯ ಸಿಂಧಿಯಾ ಅವರ ವಕೀಲರು ವಾದ ಮಂಡಿಸಲು ಪದೇ ಪದೇ ಹೆಚ್ಚಿನ ಸಮಯ ಕೋರುತ್ತಿರುವುದನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿತು. "ವಕೀಲರು ಪ್ರಕರಣವನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದ್ದಾರೆ. 2023ರ ಜನವರಿ 11ರ ಮೊದಲ ದಿನವೇ ಅವರು ತಡೆಯಾಜ್ಞೆ ಪಡೆದುಕೊಂಡಿದ್ದು, ಈಗ ರಾಜಿ ಸಂಧಾನದ ನೆಪದಲ್ಲಿ ವಾದ ಮಂಡಿಸಲು ಇಷ್ಟಪಡುತ್ತಿಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ನ್ಯಾಯಾಲಯವು ಇದನ್ನು "ವಿಳಂಬ ತಂತ್ರ" ಎಂದು ಕರೆದಿತ್ತು.
ಆದರೆ, ಇದಾಗಿ ಒಂದು ವರ್ಷದ ನಂತರ, ಅಂದರೆ ಇತ್ತೀಚೆಗೆ 2026ರ ಮಾರ್ಚ್ ನಲ್ಲಿ, ಈ ವಿವಾದವು ಉಭಯ ಕಡೆಯವರ ನಡುವೆ ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದೆ ಮತ್ತು ತಾವು ಕೆಳ ನ್ಯಾಯಾಲಯದಲ್ಲಿ ರಾಜಿ ಪತ್ರವನ್ನು ಸಲ್ಲಿಸಲಿರುವುದಾಗಿ ಅಂತಿಮವಾಗಿ ಹೈಕೋರ್ಟ್ ಗೆ ತಿಳಿಸಲಾಯಿತು.
ಸೌಜನ್ಯ: theprint.in






