ಭಾರತದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳ ಜಾಹೀರಾತು ಪ್ರಚಾರ ಮಾಡುತ್ತಿದೆ ಇನ್ಸ್ಟಾಗ್ರಾಮ್: BBC ತನಿಖೆಯಿಂದ ಆಘಾತಕಾರಿ ಮಾಹಿತಿ ಬಹಿರಂಗ

Photo: PTI
ಇನ್ಸ್ಟಾಗ್ರಾಮ್ ಭಾರತದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವ ಹಣ ಪಾವತಿಸಿದ ಜಾಹೀರಾತುಗಳನ್ನು ಪ್ರದರ್ಶಿಸುತ್ತಿದೆ ಎಂಬ ಆಘಾತಕಾರಿ ವಿಷಯ BBC ಐ (BBC Eye) ತನಿಖೆಯಿಂದ ಬಹಿರಂಗವಾಗಿದೆ. BBC ವರ್ಲ್ಡ್ ಸರ್ವಿಸ್ ಪರಿಶೀಲಿಸಿದ ಈ ಜಾಹೀರಾತುಗಳಲ್ಲಿ 'ರೇ*ಪ್ ವೀಡಿಯೊ' ಮತ್ತು "ಚೈಲ್ಡ್ ವೀಡಿಯೊ" ನಂತಹ ಪದಗಳನ್ನು ಬಳಸಲಾಗಿದೆ. ಈ ಜಾಹೀರಾತುಗಳು ಬಳಕೆದಾರರನ್ನು ಟೆಲಿಗ್ರಾಮ್ ಆ್ಯಪ್ನ ಚಾನೆಲ್ ಗಳಿಗೆ ಲಿಂಕ್ ಮಾಡುತ್ತವೆ. ಅಲ್ಲಿ ಕೇವಲ 99 ರೂಪಾಯಿಗಳಷ್ಟು ಕಡಿಮೆ ದರದಲ್ಲಿ ಇಂತಹ ದೃಶ್ಯಗಳನ್ನು ಖರೀದಿಸಬಹುದಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಯಾವುದೇ ಜಾಹೀರಾತು ಪ್ರಕಟವಾಗಬೇಕಾದರೂ, ಮೊದಲು ಅದರ ಮಾಡರೇಶನ್ ತಂತ್ರಜ್ಞಾನವು ಅದಕ್ಕೆ ಅನುಮೋದನೆ ನೀಡಬೇಕಿರುತ್ತದೆ.
ಈ ಜಾಹೀರಾತುಗಳಲ್ಲಿ ಒಂದರ ಕುರಿತು BBC ಇನ್ಸ್ಟಾಗ್ರಾಮ್ ಗೆ ದೂರು ನೀಡಿದಾಗ, 24 ಗಂಟೆಗಳ ನಂತರ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಸಂಸ್ಥೆಯು, ಈ ಪೋಸ್ಟ್ ತನ್ನ "ಸಮುದಾಯ ಮಾರ್ಗಸೂಚಿಗಳನ್ನು" ಉಲ್ಲಂಘಿಸಿಲ್ಲ ಎಂದು ಹೇಳಿತ್ತು.
ಆದರೆ, ನಂತರ BBC ಈ ಕುರಿತು ಇನ್ಸ್ಟಾಗ್ರಾಮ್ನ ಪೋಷಕ ಸಂಸ್ಥೆಯಾದ ಮೆಟಾದಲ್ಲಿ ವಿವರಣೆ ಕೇಳಿದಾಗ, ತಾವು ಈಗಾಗಲೇ ಹಲವಾರು ಜಾಹೀರಾತುಗಳನ್ನು ಸ್ಥಗಿತಗೊಳಿಸಿರುವುದಾಗಿ ಮತ್ತು ಅವುಗಳನ್ನು ಪೋಸ್ಟ್ ಮಾಡಿದ ಖಾತೆಗಳನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ. BBC ಪತ್ತೆಹಚ್ಚಿದ ದತ್ತಾಂಶಗಳಿಗೆ ಪ್ರತಿಕ್ರಿಯೆಯಾಗಿ, ನಿಯಮಗಳನ್ನು ಉಲ್ಲಂಘಿಸಿದ ಇನ್ನು ಹಲವು ಜಾಹೀರಾತುಗಳನ್ನು ತೆಗೆದುಹಾಕಲಾಗಿದೆ, ಹೆಚ್ಚಿನ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು ಇತರ ಲಿಂಕ್ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಕಂಪೆನಿ ಹೇಳಿದೆ.
ಇತ್ತ ಟೆಲಿಗ್ರಾಮ್ ಸಂಸ್ಥೆಯು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ 2,74,000ಕ್ಕೂ ಹೆಚ್ಚು ಗ್ರೂಪ್ಗಳು ಮತ್ತು ಚಾನೆಲ್ ಗಳನ್ನು 2026ರಲ್ಲಿ ತೆಗೆದುಹಾಕಿರುವುದಾಗಿ ತಿಳಿಸಿದೆ. ಬಳಕೆದಾರರು ಅಂತಹ ವಿಷಯವನ್ನು ಹುಡುಕದಿದ್ದರೂ ಸಹ, ಇನ್ಸ್ಟಾಗ್ರಾಮ್ ಲೈಂಗಿಕವಾಗಿ ಸೂಚಿಸುವ ವಿಷಯವನ್ನು ಉತ್ತೇಜಿಸುತ್ತಿದೆ ಎಂದು ನಾವು ಗಮನಿಸಿದ ನಂತರ BBC ಇನ್ಸ್ಟಾಗ್ರಾಮ್ನಲ್ಲಿ ಅಲಿಯಾಸ್ ಖಾತೆಯನ್ನು ಸ್ಥಾಪಿಸಿತು.
ಇದರಲ್ಲಿ ಭಾರತದ ಆಹಾರ, ಹವಾಮಾನ ಮತ್ತು ದೈನಂದಿನ ಜೀವನದ ಕುರಿತು ಪೋಸ್ಟ್ ಮಾಡುತ್ತಿದ್ದ ಮಹಿಳೆಯರೂ ಸೇರಿದ್ದರು. ಇವರು ಅರೆಬೆತ್ತಲೆ ಬಟ್ಟೆಗಳನ್ನು ಧರಿಸಿ, ತಮ್ಮ ಪೋಸ್ಟ್ಗಳಲ್ಲಿ ಲೈಂಗಿಕ ದ್ವಂದ್ವಾರ್ಥಗಳನ್ನು ಬಳಸುತ್ತಿದ್ದರು.
ಭಾರತದಲ್ಲಿ ಸ್ಥಾಪಿಸಲಾದ ಹೊಸ ಅಲಿಯಾಸ್ ಖಾತೆಯು, ವೇದಿಕೆಯಲ್ಲಿ ಲೈಂಗಿಕ ವಿಷಯವನ್ನು ತನಿಖೆ ಮಾಡಲು ಈ ಮಹಿಳೆಯರು ಮತ್ತು ಇತರ ರೀತಿಯ ಜನರನ್ನು (ಒಟ್ಟು 10 ಜನರನ್ನು) ಫಾಲೋ ಮಾಡಲು ಪ್ರಾರಂಭಿಸಿತು. ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ, ಇನ್ಸ್ಟಾಗ್ರಾಮ್ ಫೀಡ್ನಲ್ಲಿ ಮಹಿಳೆಯರು ವೀಡಿಯೊ ಕರೆಗಳಿಗೆ ಆಹ್ವಾನ ನೀಡುತ್ತಿರುವ ಹಾಗೂ ಜೋಡಿಗಳು ಬಹಿರಂಗವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಜಾಹೀರಾತುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು.
ಕೆಲವು ದಿನಗಳ ನಂತರ, ಇನ್ಸ್ಟಾಗ್ರಾಮ್ ಟೆಲಿಗ್ರಾಮ್ ಚಾನೆಲ್ ಗಳ ಲಿಂಕ್ಗಳೊಂದಿಗೆ ವಯಸ್ಕರು ಮತ್ತು ಮಕ್ಕಳಿರುವ ಲೈಂಗಿಕ ಸೂಚ್ಯಾರ್ಥದ ಜಾಹೀರಾತುಗಳನ್ನು ತೋರಿಸಲು ಆರಂಭಿಸಿತು. ಒಟ್ಟಾರೆಯಾಗಿ, ಮಕ್ಕಳ ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವ ಸುಮಾರು 30 ವಿಶಿಷ್ಟ ಜಾಹೀರಾತುಗಳು ಕಾಣಿಸಿಕೊಂಡಿದ್ದು, ಅವುಗಳಲ್ಲಿ ಕೆಲವನ್ನು ಬಹು ಖಾತೆಗಳಿಂದ ಹಂಚಿಕೊಳ್ಳಲಾಗಿತ್ತು.
ಇದಲ್ಲದೆ, ಅಲಿಯಾಸ್ ಖಾತೆಯೊಂದರಲ್ಲಿ ವಯಸ್ಕರ ಅಶ್ಲೀಲತೆಯನ್ನು ಒಳಗೊಂಡ ಸುಮಾರು 20 ಜಾಹೀರಾತುಗಳೂ ಕಂಡುಬಂದಿದ್ದವು.
ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳು ಮತ್ತು ವಯಸ್ಕರ ಅಶ್ಲೀಲತೆಯ ವಿತರಣೆಯು ಭಾರತದಲ್ಲಿ ಕ್ರಿಮಿನಲ್ ಅಪರಾಧಗಳಾಗಿವೆ. ಹಾಗೆಯೇ, ಜಾಹೀರಾತುಗಳಲ್ಲಿ ವಯಸ್ಕರ ನಗ್ನತೆ, ಜನನಾಂಗಗಳ ಪ್ರದರ್ಶನ ಅಥವಾ ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವ ಅಥವಾ ಅಪಾಯಕ್ಕೆ ಸಿಲುಕಿಸುವ ಯಾವುದೇ ವಿಷಯಗಳು ಇರಬಾರದು ಎಂದು ಮೆಟಾ ಸಂಸ್ಥೆಯ ನೀತಿಯೂ ಹೇಳುತ್ತದೆ. ಸದ್ಯ, BBC ಈ ಎಲ್ಲಾ ಜಾಹೀರಾತುಗಳು ಮತ್ತು ಟೆಲಿಗ್ರಾಮ್ ಚಾನೆಲ್ ಗಳ ಕುರಿತು ಭಾರತೀಯ ಅಧಿಕಾರಿಗಳಿಗೆ ವರದಿ ಮಾಡಿದೆ.
ಒಂದು ಜಾಹೀರಾತಿನಲ್ಲಿ ಸುಮಾರು 12 ವರ್ಷ ವಯಸ್ಸಿನ ಹುಡುಗ ಮತ್ತು ಹುಡುಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ತೋರಿಸಲಾಗಿದೆ.
ಇನ್ನೊಂದು ಜಾಹೀರಾತಿನಲ್ಲಿ ಒಬ್ಬ ವ್ಯಕ್ತಿ ತನ್ನ ತೋಳನ್ನು ಹುಡುಗಿಯ ಸುತ್ತ ಬಳಸಿರುವುದನ್ನು ತೋರಿಸಲಾಗಿದೆ. ಅದರಲ್ಲಿ ಅವನಿಗೆ 52 ವರ್ಷ ಮತ್ತು ಹುಡುಗಿಗೆ 12 ವರ್ಷ ಎಂದು ಪಠ್ಯವಿದೆ. "ಇನ್ನಷ್ಟು ವೀಕ್ಷಿಸಲು ಕ್ಲಿಕ್ ಮಾಡಿ" ಎಂದು ಅದು ಟೆಲಿಗ್ರಾಮ್ ಚಾನೆಲ್ಗೆ ಲಿಂಕ್ ಮಾಡಲಾಗಿದೆ.
BBC ಇನ್ಸ್ಟಾಗ್ರಾಮ್ಗೆ ಒಂದು ಜಾಹೀರಾತನ್ನು ವರದಿ ಮಾಡಿದೆ. ಅದರಲ್ಲಿ ಪುಟ್ಟ ಹುಡುಗಿಯೊಬ್ಬಳು ಕಣ್ಣೀರು ಹಾಕುತ್ತಿದ್ದು, ಅವಳು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಳೆ ಎಂದು ಸೂಚಿಸುವ ಪದಗಳಿವೆ.
ಆದರೆ, 24 ಗಂಟೆಗಳ ನಂತರ ಇನ್ಸ್ಟಾಗ್ರಾಮ್, "ಈ ಜಾಹೀರಾತುದಾರರ ಜಾಹೀರಾತು ನಮ್ಮ ಸಮುದಾಯದ ಮಾನದಂಡಗಳನ್ನು ಉಲ್ಲಂಘಿಸಿಲ್ಲ ಎಂದು ನಮ್ಮ ಪರಿಶೀಲನಾ ತಂಡವು ಕಂಡುಕೊಂಡಿದೆ" ಎಂದು ಉತ್ತರಿಸಿದೆ.
"ಯಾವ ವ್ಯವಸ್ಥೆಯೂ ಪರಿಪೂರ್ಣವಾಗಿರುವುದಿಲ್ಲ. ನಮ್ಮ ಪರಿಶೀಲನಾ ಪ್ರಕ್ರಿಯೆಯು ಎಲ್ಲಾ ರೀತಿಯ ನೀತಿ ಉಲ್ಲಂಘನೆಗಳನ್ನು ಪತ್ತೆಹಚ್ಚಲು ವಿಫಲವಾಗಿರಬಹುದು" ಎಂದು ಮೆಟಾ ನಂತರ BBCಗೆ ತಿಳಿಸಿದೆ.
"ಜಾಹೀರಾತುಗಳು ಪ್ರಸಾರವಾದ ನಂತರವೂ ನಾವು ಅವುಗಳ ಮೇಲೆ ನಮ್ಮ 'ಪೂರ್ವಭಾವಿ ಪತ್ತೆ ತಂತ್ರಜ್ಞಾನ'ವನ್ನು ಚಲಾಯಿಸುವುದನ್ನು ಮುಂದುವರಿಸುತ್ತೇವೆ. ಅಲ್ಲದೆ, ನಮ್ಮ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಜಾಹೀರಾತು ಕಂಡುಬಂದಲ್ಲಿ ಯಾರಾದರೂ ನಮಗೆ ವರದಿ ಮಾಡಬಹುದು" ಎಂದು ಮೆಟಾ ಹೇಳಿದೆ.
ಮಕ್ಕಳ ಮೇಲಿನ ಸ್ಪಷ್ಟ ಶೋಷಣೆಯ ಪ್ರಕರಣಗಳು ಬೆಳಕಿಗೆ ಬಂದಾಗ, ಕಾನೂನಿನ ಪ್ರಕಾರ ಅದನ್ನು 'ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ' (NCMEC) ವರದಿ ಮಾಡುವುದಾಗಿ ಸಂಸ್ಥೆ ತಿಳಿಸಿದೆ. NCMEC ಎಂಬುದು ಆನ್ಲೈನ್ ನಲ್ಲಿ ಮಕ್ಕಳ ಮೇಲಾಗುವ ಲೈಂಗಿಕ ಶೋಷಣೆಯ ವಿರುದ್ಧ ಕೆಲಸ ಮಾಡುವ ಒಂದು ಕೇಂದ್ರೀಕೃತ ಜಾಗತಿಕ ವರದಿ ವ್ಯವಸ್ಥೆಯಾಗಿದೆ.
"ಮಕ್ಕಳ ಲೈಂಗಿಕ ದೌರ್ಜನ್ಯದ ವೀಡಿಯೊಗಳನ್ನು ಮಾರಾಟ ಮಾಡುತ್ತಿದ್ದ ಎರಡು ಚಾನೆಲ್ ಗಳ ಕುರಿತು ನಾವು ಟೆಲಿಗ್ರಾಮ್ಗೆ ವರದಿ ಮಾಡಿದ್ದೆವು.
ಅವುಗಳಲ್ಲಿ ಒಂದು ಚಾನೆಲ್ ಅನ್ನು ನಂತರ ತೆಗೆದುಹಾಕಲಾಯಿತು ಮತ್ತು ಅದರ ಬದಲಿಗೆ, 'ಟೆಲಿಗ್ರಾಮ್ನ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಈ ಗುಂಪನ್ನು ಪ್ರದರ್ಶಿಸಲು ಸಾಧ್ಯವಿಲ್ಲ' ಎಂಬ ಸಂದೇಶವನ್ನು ಹಾಕಲಾಯಿತು. ಆದರೆ, ಇನ್ನೊಂದು ಚಾನೆಲ್ ಮಾತ್ರ ಎಂದಿನಂತೆ ಹೊಸ ವೀಡಿಯೊಗಳನ್ನು ಮಾರಾಟಕ್ಕಾಗಿ ಪೋಸ್ಟ್ ಮಾಡುವುದನ್ನು ಮುಂದುವರಿಸಿತ್ತು."
ಅಪರಾಧ ಜಗತ್ತಿಗೆ ಸಂಬಂಧಿಸಿದ ಇಂತಹ ವಿಷಯಗಳ ಹಂಚಿಕೆಯನ್ನು ತಡೆಯಲು ಈ ಪ್ಲಾಟ್ಫಾರ್ಮ್ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ವಿಮರ್ಶಕರು ಈ ಹಿಂದೆಯೂ ಆರೋಪಿಸಿದ್ದರು.
ದುಬೈ ಮೂಲದ ಈ ಕಂಪೆನಿಯು NCMEC ಆಗಲಿ ಅಥವಾ ಇಂಟರ್ನೆಟ್ ವಾಚ್ ಫೌಂಡೇಶನ್ (IWF) ಆಗಲಿ, ಇವೆರಡರಲ್ಲಿ ಯಾವುದೇ ಸಂಸ್ಥೆಯ ಸದಸ್ಯತ್ವವನ್ನು ಹೊಂದಿಲ್ಲ. ಸಾಮಾನ್ಯವಾಗಿ ಬಹುತೇಕ ಆನ್ಲೈನ್ ಪ್ಲಾಟ್ಫಾರ್ಮ್ಗಳು ಇಂತಹ ಕಾನೂನುಬಾಹಿರ ವಿಷಯಗಳನ್ನು ಪತ್ತೆಹಚ್ಚಲು, ವರದಿ ಮಾಡಲು ಮತ್ತು ಅವುಗಳನ್ನು ತೆಗೆದುಹಾಕಲು ಈ ಸಂಸ್ಥೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತವೆ.
ಆದರೆ ಟೆಲಿಗ್ರಾಮ್ BBCಗೆ ಪ್ರತಿಕ್ರಿಯಿಸಿದ್ದು, "ತನ್ನ ಆ್ಯಪ್ನಿಂದ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳನ್ನು (CSAM) ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸ್ವಯಂಚಾಲಿತ ತಂತ್ರಜ್ಞಾನ ಮತ್ತು ಮಾನವ ಮೇಲ್ವಿಚಾರಣೆ ಎರಡನ್ನೂ ಬಳಸಲಾಗುತ್ತಿದೆ" ಎಂದು ತಿಳಿಸಿದೆ. ಇದರ ಪರಿಣಾಮವಾಗಿ, "ತನ್ನ ಪ್ಲಾಟ್ಫಾರ್ಮ್ನಲ್ಲಿ CSAM ಸಾರ್ವಜನಿಕವಾಗಿ ಹರಡುವುದನ್ನು ಬಹುತೇಕ ಸಂಪೂರ್ಣವಾಗಿ ತಡೆಗಟ್ಟಲಾಗಿದೆ" ಎಂದು ಅದು ಹೇಳಿಕೊಂಡಿದೆ.
ಜಾಹೀರಾತುಗಳು ಮೆಟಾ ಸಂಸ್ಥೆಗೆ ಆದಾಯದ ಪ್ರಮುಖ ಮೂಲಗಳಾಗಿವೆ.
2025ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ತನಗೆ ಬಂದ 200 ಶತಕೋಟಿ ಡಾಲರ್ ಆದಾಯದಲ್ಲಿ ಸುಮಾರು ಶೇ. 98ರಷ್ಟು ಭಾಗ ಕೇವಲ ಜಾಹೀರಾತುಗಳಿಂದಲೇ ಬಂದಿದೆ ಎಂದು ಸಂಸ್ಥೆ ಜನವರಿಯಲ್ಲಿ ವರದಿ ಮಾಡಿತ್ತು. ಅಲ್ಲದೆ, ಇನ್ ಸ್ಟಾಗ್ರಾಮ್ ನ ಒಟ್ಟು ಆದಾಯದಲ್ಲಿ ಶೇ. 90ಕ್ಕಿಂತ ಹೆಚ್ಚು ಪಾಲು ಜಾಹೀರಾತುಗಳದ್ದೇ ಆಗಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಸಾಮಾನ್ಯ ಪೋಸ್ಟ್ ಗಳು ಪ್ರಕಟವಾಗುವವರೆಗೂ ಮೆಟಾದ ತಂತ್ರಜ್ಞಾನವು ಸಾಮಾನ್ಯವಾಗಿ ಅವುಗಳನ್ನು ಪರಿಶೀಲಿಸುವುದಿಲ್ಲ. ಆದರೆ, ತನ್ನ ಪ್ಲಾಟ್ಫಾರ್ಮ್ಗಳಲ್ಲಿ ಯಾವುದೇ ಜಾಹೀರಾತು ಪ್ರದರ್ಶನಗೊಳ್ಳುವ ಮೊದಲು ಅದನ್ನು ಕಡ್ಡಾಯವಾಗಿ ಪರಿಶೀಲಿಸಲಾಗುತ್ತದೆ ಎಂದು ಮೆಟಾ ಹೇಳುತ್ತದೆ.
ಇದರ ಪರಿಶೀಲನಾ ವ್ಯವಸ್ಥೆಯು ಪ್ರಮುಖವಾಗಿ ಸ್ವಯಂಚಾಲಿತ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದ್ದು, ಇದನ್ನು ಚಿತ್ರಗಳು, ವೀಡಿಯೊಗಳು, ಪಠ್ಯ ಮತ್ತು ಆಡಿಯೊಗಳನ್ನು ತಪಾಸಣೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ, ಈ ಜಾಹೀರಾತು ಯಾರನ್ನು ಗುರಿಯಾಗಿಸಿಕೊಂಡಿದೆ ಮತ್ತು ಅದರಲ್ಲಿರುವ ಲಿಂಕ್ಗಳು ಬಳಕೆದಾರರನ್ನು ಎಲ್ಲಿಗೆ ಕರೆದೊಯ್ಯುತ್ತವೆ ಎಂಬುದನ್ನೂ ಇದು ಪರಿಶೀಲಿಸುತ್ತದೆ.
ಈ ಸಾಫ್ಟ್ವೇರ್ ಜಾಹೀರಾತುಗಳನ್ನು ಅನುಮೋದಿಸುತ್ತದೆ ಅಥವಾ ತಿರಸ್ಕರಿಸುತ್ತದೆ. ಯಾವುದೇ ಜಾಹೀರಾತಿನ ಬಗ್ಗೆ ಅನುಮಾನ ಅಥವಾ ಅಸ್ಪಷ್ಟತೆ ಇದ್ದಾಗ, ಅದನ್ನು ಮುಂದಿನ ಮಾನವ ಪರಿಶೀಲನೆಗೆ ಕಳುಹಿಸುತ್ತದೆ.
ಕಳೆದ ಮಾರ್ಚ್ನಲ್ಲಿ ಮೆಟಾ ಸಂಸ್ಥೆಯು, ತಾನು ಹೊರಗಿನ (ಥರ್ಡ್ ಪಾರ್ಟಿ) ಮಾನವ ಮೇಲ್ವಿಚಾರಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿದ್ದು, ಎಐ ಬಳಕೆಯನ್ನು ಹೆಚ್ಚಿಸುತ್ತಿರುವುದಾಗಿ ಘೋಷಿಸಿತ್ತು. ಅಲ್ಲದೆ, "ನಮ್ಮ ಎಐ ವ್ಯವಸ್ಥೆಗಳನ್ನು ಪರಿಣಿತರೇ ವಿನ್ಯಾಸಗೊಳಿಸುತ್ತಾರೆ, ತರಬೇತಿ ನೀಡುತ್ತಾರೆ, ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಮೌಲ್ಯಮಾಪನ ಮಾಡುತ್ತಾರೆ" ಎಂದು ಹೇಳಿತ್ತು.
ನಾವು ನೋಡಿದ ಜಾಹೀರಾತುಗಳ ಬಗ್ಗೆ BBC ತಂಡವು ಭಾರತದ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕೂರ್ ಅವರಿಗೆ ವಿವರಿಸಿದಾಗ, ಇನ್ಸ್ಟಾಗ್ರಾಮ್ "ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಣ ಗಳಿಸುತ್ತಿದೆ" ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
"ಭಾರತದ ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಮತ್ತು ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವಂತೆ ಮಾಡಲು ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ" ಎಂದು ಅವರು ಹೇಳಿದ್ದಾರೆ.
ಬಳಕೆದಾರರು ಅಪ್ಲೋಡ್ ಮಾಡುವ ವಿಷಯಗಳಿಗೆ ಸಾಮಾಜಿಕ ಮಾಧ್ಯಮ ಕಂಪೆನಿಗಳನ್ನು ಹೊಣೆಗಾರರನ್ನಾಗಿ ಮಾಡದಂತೆ ಭಾರತೀಯ ಕಾನೂನು ರಕ್ಷಣೆ ನೀಡುತ್ತದೆಯಾದರೂ, "ಈ ಪ್ಲಾಟ್ಫಾರ್ಮ್ ಯಾವುದೇ ಕಾರಣಕ್ಕೂ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವೇ ಇಲ್ಲ" ಎಂದು ನ್ಯಾಯಮೂರ್ತಿ ಲೋಕೂರ್ ಅವರು ವಾದಿಸಿದರು.
2021ರಲ್ಲಿ ತನ್ನ ಹೆಸರನ್ನು ಬದಲಾಯಿಸಿಕೊಳ್ಳುವ ಮುನ್ನ ಮೆಟಾ ಸಂಸ್ಥೆಯನ್ನು 'ಫೇಸ್ಬುಕ್' ಎಂದು ಕರೆಯಲಾಗುತ್ತಿತ್ತು. ಅದರ ಮಾಜಿ ಉಪಾಧ್ಯಕ್ಷರೊಬ್ಬರು BBCಯ ಈ ಸಂಶೋಧನಾ ವರದಿಯನ್ನು ನೋಡಿ, ತಮಗೆ "ಅತ್ಯಂತ ಆಘಾತವಾಗಿದೆ, ಆದರೆ ಇದರಲ್ಲಿ ಆಶ್ಚರ್ಯವೇನೂ ಇಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.
2009ರಿಂದ 2020ರ ಅವಧಿಯಲ್ಲಿ ಈ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಮತ್ತು ಅದರ ಜಾಹೀರಾತು ಹಾಗೂ ಮಾರ್ಕೆಟಿಂಗ್ ವ್ಯವಹಾರವನ್ನು ನಿರ್ಮಿಸಲು ನೆರವಾಗಿದ್ದ ಬ್ರಿಯಾನ್ ಬೋಲ್ಯಾಂಡ್ ಅವರು, "ಅವರಿಗೆ ಜಗತ್ತಿನ ಯಾವುದೇ ಭಾಗದ ಬಳಕೆದಾರರ ಬಗ್ಗೆ ಕಾಳಜಿಯೇ ಇರಲಿಲ್ಲ" ಎಂಬ ಕಾರಣಕ್ಕೆ ತಾವು ಕಂಪೆನಿಯನ್ನು ತೊರೆದಿದ್ದಾಗಿ ತಿಳಿಸಿದ್ದಾರೆ.
ಬಳಕೆದಾರರನ್ನು ತನ್ನ ಪ್ಲಾಟ್ಫಾರ್ಮ್ನಲ್ಲೇ ಹಿಡಿದಿಟ್ಟುಕೊಳ್ಳಲು ಅವರಿಗೆ "ಇನ್ನಷ್ಟು ತೀವ್ರವಾದ ಮತ್ತು ಪ್ರಚೋದನಾತ್ಮಕವಾದ ವಿಷಯಗಳನ್ನು" ತೋರಿಸುವಂತೆ ಇನ್ಸ್ಟಾಗ್ರಾಮ್ನ ಆಲ್ಗರಿದಮ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.
"ಇದು ಜನರನ್ನು ಬಾಲಾಪರಾಧಿಗಳನ್ನಾಗಿ (paedophiles) ಮಾಡಿ ಎಂದು ಹೇಳುವ ಆಲ್ಗರಿದಮ್ ಅಲ್ಲ. ಆದರೆ, ಅವರು ಇದನ್ನು ಜವಾಬ್ದಾರಿಯುತವಾಗಿ ಮುನ್ನಡೆಸುತ್ತಿಲ್ಲ ಮತ್ತು ನಿಯಂತ್ರಿಸುತ್ತಿಲ್ಲ. ಇದು ಕೇವಲ ಆದಾಯ ಮತ್ತು ಕ್ಲಿಕ್ ಗಳ ಗುರಿಯನ್ನಷ್ಟೇ ಬೆನ್ನಟ್ಟುತ್ತಿದೆ. ಈ ವ್ಯವಸ್ಥೆಗಳ ಬಗ್ಗೆ ನಿಜವಾದ ಮತ್ತು ಕಟ್ಟುನಿಟ್ಟಾದ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳದಿದ್ದರೆ, ಇಂತಹ ದುಷ್ಪರಿಣಾಮಗಳು ಎದುರಾಗುತ್ತಲೇ ಇರುತ್ತವೆ" ಎಂದು ಅವರು ವಿವರಿಸಿದರು.
2009 ಮತ್ತು 2010ರ ಅವಧಿಯಲ್ಲಿ ತಾವು ಬಳಕೆದಾರರನ್ನು ವಂಚಿಸುವ ಜಾಹೀರಾತುಗಳನ್ನು ತೆಗೆದುಹಾಕುವ ಯೋಜನೆಯೊಂದರ ನೇತೃತ್ವ ವಹಿಸಿದ್ದಾಗಿ ಬೋಲ್ಯಾಂಡ್ ನೆನಪಿಸಿಕೊಂಡರು. "ಆ ಸಮಯದಲ್ಲಿ, ಬಳಕೆದಾರರ ಸುರಕ್ಷತೆ ಮತ್ತು ಅವರ ಉತ್ತಮ ಅನುಭವಕ್ಕಾಗಿ ಕಂಪೆನಿಯ ಆದಾಯದ ಬಹುದೊಡ್ಡ ಭಾಗವನ್ನೇ ಕಡಿತಗೊಳಿಸಲು ನನಗೆ ಅನುಮತಿ ಇತ್ತು. ಆದರೆ ಕಾಲಾನಂತರದಲ್ಲಿ, ಆದಾಯ ಮತ್ತು ಬಳಕೆದಾರರ ಸುರಕ್ಷತೆಯ ನಡುವಿನ ತಕ್ಕಡಿಯಲ್ಲಿ ಆದಾಯಕ್ಕೇ ಹೆಚ್ಚು ಆದ್ಯತೆ ನೀಡುವ ಚರ್ಚೆಗಳು ಮುಖ್ಯವಾದವು. ಇದು ಅತ್ಯಂತ ಬೇಸರದ ಮತ್ತು ದುರಂತದ ಸಂಗತಿಯಾಗಿದೆ" ಎಂದು ಅವರು ಅಭಿಪ್ರಾಯಪಟ್ಟರು.
ತಾವು 2025ರಲ್ಲೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿರುವುದಾಗಿ ತಿಳಿಸಿದ ಅವರು, "ಜನರು ಒಟ್ಟಾಗಿ 'ನಾವು ಇನ್ನು ಇದನ್ನು ಬಳಸುವುದಿಲ್ಲ, ಸಾಕು ಬಿಡಿ' ಎಂದು ಹೊರನಡೆಯಲು ಆರಂಭಿಸಿದರೆ ಮಾತ್ರ ಕಂಪೆನಿಯು ಈ ಬಗ್ಗೆ ಗಮನ ಹರಿಸುತ್ತದೆ" ಎಂದು ಹೇಳಿದ್ದಾರೆ.
BBCಗೆ ಕಳುಹಿಸಿದ ಹೇಳಿಕೆಯಲ್ಲಿ ಮೆಟಾ, "ಮಕ್ಕಳ ಮೇಲಿನ ದೌರ್ಜನ್ಯವು ಒಂದು ಭೀಕರ ಅಪರಾಧವಾಗಿದೆ. ನಮ್ಮ ಆ್ಯಪ್ಗಳಲ್ಲಿ ಇದರ ವಿರುದ್ಧ ಹೋರಾಡಲು ಮೆಟಾ ಅತ್ಯಂತ ತೀವ್ರವಾಗಿ ಕೆಲಸ ಮಾಡುತ್ತಿದೆ" ಎಂದು ಹೇಳಿದೆ.
ಮಕ್ಕಳನ್ನು ಒಳಗೊಂಡ ಇಂತಹ ಜಾಹೀರಾತುಗಳನ್ನು, ಆ ವಿಷಯಗಳಲ್ಲಿ ಅನುಚಿತ ಆಸಕ್ತಿ ಹೊಂದಿರುವ ಬಳಕೆದಾರರಿಗೇ ಮೆಟಾ ಸಂಸ್ಥೆಯು ತಿಳಿಸಿಯೇ ಮತ್ತು ಉದ್ದೇಶಪೂರ್ವಕವಾಗಿಯೇ ಟಾರ್ಗೆಟ್ ಮಾಡುತ್ತಿದೆ ಎಂದು ಬಿಂಬಿಸುವುದು "ಸಂಪೂರ್ಣವಾಗಿ ತಪ್ಪು" ಎಂದು ಕಂಪೆನಿ ಹೇಳಿದೆ.
ಸುರಕ್ಷತೆಗಿಂತ ಆದಾಯಕ್ಕೇ ತಾನು ಆದ್ಯತೆ ನೀಡುತ್ತಿರುವುದನ್ನು ನಿರಾಕರಿಸಿದ ಕಂಪೆನಿಯು, "ಅನುಮಾನಾಸ್ಪದ ನಡವಳಿಕೆಯ ಗಣನೀಯ ಸೂಚನೆಗಳನ್ನು" ನೀಡಿದ್ದಕ್ಕಾಗಿ 2025ರಲ್ಲೇ 40 ದಶಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದೆ.
"ಅಪರಾಧಿಗಳು ನಮ್ಮ ಕಣ್ಣು ತಪ್ಪಿಸಲು ಎಷ್ಟೇ ಪ್ರಯತ್ನಿಸಿದರೂ, ನಮ್ಮ ತಜ್ಞರ ತಂಡಗಳು ನಿರಂತರವಾಗಿ ರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಕೆಲಸ ಮಾಡುತ್ತಿವೆ. ಇಂತಹ ಬೇಟೆಗಾರರನ್ನು ಪತ್ತೆಹಚ್ಚಲು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ನಿಯಮ ಉಲ್ಲಂಘಿಸುವ ವೆಬ್ಸೈಟ್ಗಳ ಲಿಂಕ್ಗಳನ್ನು ಬ್ಲಾಕ್ ಮಾಡಲಾಗುತ್ತಿದೆ ಮತ್ತು ಇತರ ಕಂಪೆನಿಗಳೂ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಈ ಮಾಹಿತಿಯನ್ನು ಅವುಗಳೊಂದಿಗೂ ಹಂಚಿಕೊಳ್ಳಲಾಗುತ್ತಿದೆ" ಎಂದು ಮೆಟಾ ಹೇಳಿದೆ.
ಈ ವರ್ಷದ ಆರಂಭದಲ್ಲಿ ಅಮೆರಿಕದ ನ್ಯೂ ಮೆಕ್ಸಿಕೋ ರಾಜ್ಯದಲ್ಲಿ ನಡೆದ ವಿಚಾರಣೆಯೊಂದರಲ್ಲಿ ಬೋಲ್ಯಾಂಡ್ ಅವರು ಮೆಟಾ ವಿರುದ್ಧ ಸಾಕ್ಷ್ಯ ನುಡಿದಿದ್ದರು. ಆ ಮೊಕದ್ದಮೆಯಲ್ಲಿ, ಮೆಟಾ ತನ್ನ ಪ್ಲಾಟ್ಫಾರ್ಮ್ ಗಳು ಮಕ್ಕಳ ಸುರಕ್ಷತೆಗೆ ಪೂರಕವಾಗಿವೆ ಎಂದು ಸುಳ್ಳು ಹೇಳಿ ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಲಾಗಿತ್ತು.
ನ್ಯೂ ಮೆಕ್ಸಿಕೋ ರಾಜ್ಯಕ್ಕೆ 375 ಮಿಲಿಯನ್ ಡಾಲರ್ (279 ಮಿಲಿಯನ್ ಪೌಂಡ್) ಪರಿಹಾರ ನೀಡುವಂತೆ ನ್ಯಾಯಾಲಯವು ಮೆಟಾ ಸಂಸ್ಥೆಗೆ ಆದೇಶಿಸಿತ್ತು. ಆ ಸಮಯದಲ್ಲಿ ಕಂಪೆನಿಯ ವಕ್ತಾರರೊಬ್ಬರು, ತಮಗೆ ಈ ತೀರ್ಪಿನ ಬಗ್ಗೆ ಒಪ್ಪಿಗೆಯಿಲ್ಲ ಮತ್ತು ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದರು.
ಅಮೆರಿಕ ಮೂಲದ ಸಾಮಾಜಿಕ ಮಾಧ್ಯಮ ಕಂಪೆನಿಗಳು ತಮ್ಮ ಪ್ಲಾಟ್ಫಾರ್ಮ್ಗಳಲ್ಲಿ ಕಂಡುಬರುವ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳನ್ನು 'NCMEC ಸೈಬರ್ ಟಿಪ್ಲೈನ್'ಗೆ ವರದಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ನಂತರ ಈ ಟಿಪ್ಲೈನ್ ಸಂಸ್ಥೆಯು, ಆ ಘಟನೆಯು ಯಾವ ದೇಶದಲ್ಲಿ ನಡೆದಿದೆ ಎಂದು ತಾನು ನಂಬುತ್ತದೆಯೋ ಆ ದೇಶದ ಸೂಕ್ತ ಕಾನೂನು ಜಾರಿ ಸಂಸ್ಥೆಗೆ ಆ ವರದಿಯನ್ನು ರವಾನಿಸುತ್ತದೆ.
2025ರಲ್ಲಿ ಭಾರತವು ಇಂತಹ 19 ಲಕ್ಷ ವರದಿಗಳನ್ನು ಸ್ವೀಕರಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ. ಕೇವಲ 20 ಲಕ್ಷ ವರದಿಗಳನ್ನು ಪಡೆದ ಅಮೆರಿಕ ಮಾತ್ರ ಭಾರತಕ್ಕಿಂತ ಮುಂದಿದೆ.
ಭಾರತದ ಪ್ರಮುಖ ಸೈಬರ್ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾದ ಮತ್ತು ತೆಲಂಗಾಣ ರಾಜ್ಯದ ಸೈಬರ್ ಸೆಕ್ಯೂರಿಟಿ ಬ್ಯೂರೋದ ನಿರ್ದೇಶಕಿಯಾಗಿರುವ ಶಿಖಾ ಗೋಯೆಲ್ ಅವರು, "ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಸಂಸ್ಥೆಗಳೇ ಅತಿ ಹೆಚ್ಚು ಟಿಪ್ಲೈನ್ ವರದಿಗಳನ್ನು ಸೃಷ್ಟಿಸುತ್ತವೆ" ಎಂದು ಹೇಳಿದ್ದಾರೆ.
"ಆದರೆ ಇದರರ್ಥ ಅವರದೇ ದೊಡ್ಡ ತಪ್ಪು ಎಂದಲ್ಲ. ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳನ್ನು ಪತ್ತೆಹಚ್ಚಲು ಅವರ ಬಳಿ ಉತ್ತಮ ಆಲ್ಗರಿದಮ್ ಇದ್ದರೆ, ಸಹಜವಾಗಿಯೇ ಹೆಚ್ಚು ಎಚ್ಚರಿಕೆಗಳು ಸೃಷ್ಟಿಯಾಗುತ್ತವೆ" ಎಂದು ಅವರು ವಿವರಿಸಿದರು.
ಆನ್ಲೈನ್ನಲ್ಲಿ ತೊಂದರೆ ಎದುರಿಸುತ್ತಿರುವ ಮಕ್ಕಳಿಗಾಗಿ ಸಹಾಯವಾಣಿ ಸೇವೆಯನ್ನು ನಡೆಸುತ್ತಿರುವ ಮುಂಬೈ ಮೂಲದ ಎನ್ಜಿಒ ರತಿ ಫೌಂಡೇಶನ್ ಕೂಡ, ತಮಗೆ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳ ಕುರಿತು ಬರುವ ಬಹುಪಾಲು ವರದಿಗಳು ಮೆಟಾ ಪ್ಲಾಟ್ಫಾರ್ಮ್ಗಳಿಂದಲೇ ಬರುತ್ತವೆ ಎಂದು ತಿಳಿಸಿದೆ.
ಹಾನಿಕಾರಕ ವಿಷಯಗಳನ್ನು ತೆಗೆದುಹಾಕಲು ಈ ಸಂಸ್ಥೆಯು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತದೆ. ಆದರೆ ಇದರ ಸಹ-ಸ್ಥಾಪಕ ಮತ್ತು ನಿರ್ದೇಶಕರಾದ ಸಿದ್ಧಾರ್ಥ್ ಪಿಳ್ಳೈ ಅವರು, "ನಾವು ಹರಡದಂತೆ ತಡೆದ ವಿಷಯಗಳನ್ನು ಅಪರಾಧಿಗಳು ಮತ್ತೆ ಮತ್ತೆ ಅಪ್ಲೋಡ್ ಮಾಡುತ್ತಾರೆ. ನಮ್ಮ ತಪಾಸಣಾ ಪ್ರಯತ್ನಗಳಿಂದ ಬಚಾವಾಗಲು ಅವರು ಇನ್ಸ್ಟಾಗ್ರಾಮ್ನಿಂದ ಟೆಲಿಗ್ರಾಮ್ಗೆ ಇರುವ ಸುಲಭ ಸಂಪರ್ಕವನ್ನು ಬಳಸಿಕೊಳ್ಳುತ್ತಾರೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳನ್ನು ಸಾಮಾನ್ಯವಾಗಿ ಮಾನವ ಕಳ್ಳಸಾಗಣೆದಾರರಂತಹ ಅಪರಾಧಿ ಗುಂಪುಗಳು ಸೃಷ್ಟಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಕೆಲವು ಸಂದರ್ಭಗಳಲ್ಲಿ ಕುಟುಂಬದವರು ಅಥವಾ ಸಮುದಾಯದ ಸದಸ್ಯರೇ ಇದಕ್ಕೆ ಜವಾಬ್ದಾರರಾಗಿರುತ್ತಾರೆ.
ಭಾರತದಲ್ಲಿ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಕೆಲಸ ಮಾಡುವ 250ಕ್ಕೂ ಹೆಚ್ಚು ಸಂಸ್ಥೆಗಳ ಜಾಲವಾದ 'ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್'ನ ಸಂಸ್ಥಾಪಕ ಭುವನ್ ರಿಭು ಅವರು, "ಈ ಅಪರಾಧದ ಬಗ್ಗೆ ಇನ್ನೂ ಸರಿಯಾಗಿ ವರದಿಗಳೇ ದಾಖಲಾಗುತ್ತಿಲ್ಲ ಮತ್ತು ಇದನ್ನು ಎದುರಿಸಲು ಅಗತ್ಯವಿರುವ ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಪೊಲೀಸರು ಇಂದಿಗೂ ಹೆಣಗಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
ಇದರಲ್ಲಿ ಯಶಸ್ವಿಯಾಗಬೇಕಾದರೆ, ಅಂತರರಾಷ್ಟ್ರೀಯ ಸಹಕಾರ ಮತ್ತು ದೇಶಗಳ ನಡುವೆ ಮಾಹಿತಿ ಹಂಚಿಕೆ ಅತ್ಯಂತ ಅಗತ್ಯ. ಇಂತಹ ಸಂಘಟಿತ ಅಪರಾಧಗಳ ಬೇರುಗಳನ್ನು ಪತ್ತೆಹಚ್ಚಬೇಕಾದರೆ, ಇದರ ಇಡೀ ಬೇಡಿಕೆ ಮತ್ತು ಪೂರೈಕೆಯ ಸರಪಳಿಯನ್ನು ಸೂಕ್ಷ್ಮವಾಗಿ ಪತ್ತೆಹಚ್ಚುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಸೌಜನ್ಯ: bbc.com






