ಮಕ್ಕಳಿಗೆ ಇಂಟರ್ನೆಟ್ ಪ್ರವೇಶಾವಕಾಶ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು?
► ಅಪೂರ್ವ ವಿಶ್ವನಾಥ್ - indianexpress. com ವರದಿ

Photo credit : Magnific
"ಇಂಟರ್ನೆಟ್ ಪಡೆಯುವ ಮತ್ತು ಬಳಸುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು" ಎಂದು ಸುಪ್ರೀಂ ಕೋರ್ಟ್ ಅಕ್ಟೋಬರ್ 15ರಂದು ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಜಿ. ಬಿ. ಪಾರ್ದಿವಾಲಾ ಮತ್ತು ಕೆ. ವಿ. ಚಂದ್ರನ್ ಅವರನ್ನೊಳಗೊಂಡ ಪೀಠವು, "ವಯಸ್ಸಿನ ಭೇದವಿಲ್ಲದೆ ಮಕ್ಕಳು ಸಹ ಇತರರಂತೆಯೇ ಅದೇ ಹಕ್ಕುಗಳನ್ನು ಅನುಭವಿಸುತ್ತಾರೆ" ಎಂದು ಹೇಳಿದೆ. ಜೊತೆಗೆ, "ನಮ್ಮ ಮಕ್ಕಳ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯ ಒಂದಕ್ಕೊಂದು ವಿರುದ್ಧವಾದುದಲ್ಲ. ನಮ್ಮ ಮಕ್ಕಳು ಎರಡಕ್ಕೂ ಅರ್ಹರಾಗಿದ್ದಾರೆ" ಎಂದೂ ತಿಳಿಸಿದೆ.
ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಮಕ್ಕಳ ಸ್ಕ್ರೀನ್ಟೈಮ್ ನಿಯಂತ್ರಿಸಲು ಯೋಜನೆ ರೂಪಿಸುತ್ತಿರುವ, ಕೆಲವು ದೇಶಗಳು ಅಪ್ರಾಪ್ತರ ಸೋಷಿಯಲ್ ಮೀಡಿಯಾ ಬಳಕೆಯನ್ನು ನಿರ್ಬಂಧಿಸುತ್ತಿರುವ ಮತ್ತು ಪ್ರತಿಭಟನೆಗಳ ಸಂದರ್ಭದಲ್ಲಿ ಸರ್ಕಾರಗಳು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವ ಈ ಸಮಯದಲ್ಲಿ, ಇಂಟರ್ನೆಟ್ ಬಳಸುವ ಹಕ್ಕಿನ ಅರ್ಥವೇನು?
ಈ ಪ್ರಶ್ನೆ ಸುಪ್ರೀಂ ಕೋರ್ಟ್ಗೆ ತಲುಪಿದ್ದು ಹೇಗೆ? :
2024ರಲ್ಲಿ, ನ್ಯಾಯಮೂರ್ತಿಗಳಾದ ಡಿ. ವೈ. ಚಂದ್ರಚೂಡ್ ಮತ್ತು ಜಿ. ಬಿ. ಪಾರ್ದಿವಾಲಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠವು, ಬಾಲ ಲೈಂಗಿಕ ಶೋಷಣೆಯ ದೃಶ್ಯಗಳನ್ನು ವೀಕ್ಷಿಸುವುದು, ಹೊಂದಿರುವುದು ಮತ್ತು ಅವುಗಳನ್ನು ವರದಿ ಮಾಡದಿರುವುದು ಕಠಿಣ ಪೋಕ್ಸೊ (POCSO) ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಅಪರಾಧವಾಗುತ್ತದೆ ಎಂದು ತೀರ್ಪು ನೀಡಿತ್ತು. ಅಂತಹ ವಿಷಯಗಳನ್ನು ಮುಂದೆ ಹಂಚಿಕೊಳ್ಳದಿದ್ದರೂ ಅದು ಅಪರಾಧ ಎಂದು ಹೇಳಿತ್ತು.
ಅಂತಹ ವಿಷಯಗಳನ್ನು ಪ್ರಕಟಿಸದೆ ಅಥವಾ ರವಾನಿಸದೆ, ಕೇವಲ ಡೌನ್ಲೋಡ್ ಮಾಡಿ ಖಾಸಗಿಯಾಗಿ ವೀಕ್ಷಿಸುವುದು ಅಪರಾಧವಲ್ಲ ಎಂದು ಹೇಳಿ ಆರೋಪಿಯೊಬ್ಬನ ವಿರುದ್ಧದ ಚಾರ್ಜ್ಶೀಟ್ ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. 'ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್' ಎಂಬ ಎನ್ಜಿಒಗಳ ಒಕ್ಕೂಟವು ಮದ್ರಾಸ್ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಅಲ್ಲದೆ, ಅಂತಹ ವಿಷಯಗಳನ್ನು ವರದಿ ಮಾಡುವಂತೆ ಮಧ್ಯವರ್ತಿ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿತ್ತು.
ತನ್ನ ಹಿಂದಿನ ಆದೇಶಗಳ ಪಾಲನೆಯಲ್ಲಿ ಡಿಜಿಟಲ್ ವೇದಿಕೆಗಳು ಲೋಪ ಎಸಗಿರುವುದನ್ನು ಮತ್ತು ಮರುನಿರ್ದೇಶಿತ ಲಿಂಕ್ಗಳ ಮೂಲಕ ಬಾಲ ಲೈಂಗಿಕ ಶೋಷಣೆ ಹಾಗೂ ದೌರ್ಜನ್ಯದ ದೃಶ್ಯಗಳನ್ನು (CSEAM) ಹಣ ಪಡೆದು ಪ್ರಚಾರ ಮಾಡುತ್ತಿರುವ ಸುದ್ದಿಗಳನ್ನು ಸುಪ್ರೀಂ ಕೋರ್ಟ್ ನಂತರದ ಆದೇಶಗಳಲ್ಲಿ ಗಮನಿಸಿತು.
ತನ್ನ ಹಿಂದಿನ ಆದೇಶಗಳ ಪಾಲನೆಯ ಕುರಿತು ತೀರ್ಪು ನೀಡುವಾಗ, ನ್ಯಾಯಾಲಯವು "ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ" ಸೋಷಿಯಲ್ ಮೀಡಿಯಾಗೆ ಮಕ್ಕಳ ಪ್ರವೇಶವನ್ನು ನಿರ್ಬಂಧಿಸುವ "ಜಾಗತಿಕ" ಪ್ರವೃತ್ತಿಯನ್ನು ಪರಿಗಣಿಸಿತು. ಈ ಪ್ರವೃತ್ತಿಯನ್ನು "ಪ್ರಜ್ಞಾಪೂರ್ವಕವಾಗಿ ಬೆಂಬಲಿಸದಿರಲು ನಿರ್ಧರಿಸಲಾಗಿದೆ" ಎಂದು ಪೀಠ ಹೇಳಿದೆ.
ಇಂಟರ್ನೆಟ್ ಪ್ರವೇಶಾವಕಾಶದ ಕುರಿತು ನ್ಯಾಯಾಲಯ ಏನು ಹೇಳಿದೆ ಮತ್ತು ಏಕೆ? :
ಇಂಟರ್ನೆಟ್ ಪ್ರವೇಶಿಸುವ ಹಕ್ಕನ್ನು ಮೂಲಭೂತ ಹಕ್ಕು ಎಂದು ಒಪ್ಪಿಕೊಳ್ಳಲು ಆಧಾರವಾಗಿರುವ ಕಾನೂನು ತತ್ವಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ. 'ಅನುರಾಧಾ ಭಾಸಿನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (2020)' ಪ್ರಕರಣದಲ್ಲಿ, ಮೂವರು ನ್ಯಾಯಮೂರ್ತಿಗಳ ಪೀಠವು ಇಂಟರ್ನೆಟ್ ಮೂಲಕ ಮಾತನಾಡುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸುವ ಹಾಗೂ ವ್ಯಾಪಾರ ಅಥವಾ ವಹಿವಾಟು ನಡೆಸುವ ಸ್ವಾತಂತ್ರ್ಯವು ಸಂವಿಧಾನದ ವಿಧಿ 19(1)(a) ಮತ್ತು 19(1)(g)ರ ಅಡಿಯಲ್ಲಿ ರಕ್ಷಿಸಲ್ಪಟ್ಟಿವೆ ಎಂದು ತೀರ್ಪು ನೀಡಿತ್ತು.
ಮತ್ತೊಂದು ತೀರ್ಪಿನಲ್ಲಿ, 'ಪ್ರಜ್ಞಾ ಪ್ರಸೂನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (2025)' ಪ್ರಕರಣದಲ್ಲಿ ಇಬ್ಬರು ನ್ಯಾಯಮೂರ್ತಿಗಳ ಪೀಠವು, ವಿಕಲಚೇತನರನ್ನು ಡಿಜಿಟಲ್ ಕೆವೈಸಿ ಪ್ರಕ್ರಿಯೆಯಿಂದ ಹೊರಗಿಡುವುದು ವಿಧಿ 21ರ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು. ಅಲ್ಲದೆ, "ಡಿಜಿಟಲ್ ಪ್ರವೇಶದ ಹಕ್ಕು ಜೀವಿಸುವ ಹಕ್ಕಿನ ಒಂದು ಅನಿವಾರ್ಯ ಭಾಗವಾಗಿದೆ" ಎಂದೂ ತಿಳಿಸಿತ್ತು.
ಇದಲ್ಲದೆ, 'ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (1995)' ತೀರ್ಪನ್ನೂ ನ್ಯಾಯಾಲಯ ಉಲ್ಲೇಖಿಸಿದ್ದು, ವಿಧಿ 19(1)(a)ರ ಅಡಿಯಲ್ಲಿ "ತಿಳಿಯುವ ಹಕ್ಕು ಹಾಗೂ ಮಾಹಿತಿ ಮತ್ತು ವಿಚಾರಗಳನ್ನು ಸ್ವೀಕರಿಸುವ ಮತ್ತು ಹಂಚಿಕೊಳ್ಳುವ ಹಕ್ಕು" ಸೇರಿವೆ ಎಂದು ತಿಳಿಸಿದೆ.
"ಅನೇಕ ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಕಲಿಕೆ ಮತ್ತು ಮಾಹಿತಿಗೆ ಇಂಟರ್ನೆಟ್ ಒಂದೇ ಪ್ರಮುಖ ಮೂಲವಾಗಿದೆ" ಎಂದು ಕಳೆದ ವಾರದ ತೀರ್ಪು ಹೇಳಿದೆ.
ಇಂಟರ್ನೆಟ್ ಪ್ರವೇಶಿಸುವ ಹಕ್ಕನ್ನು ಮೂಲಭೂತ ಹಕ್ಕು ಎಂದು ನ್ಯಾಯಾಲಯವು ವಿಶ್ಲೇಷಿಸಿರುವುದು, ಮಕ್ಕಳ ಇಂಟರ್ನೆಟ್ ಬಳಕೆಯ ಮೇಲಿನ ಸಂಪೂರ್ಣ ನಿಷೇಧ ಅಥವಾ ಅಸಮಾನ ನಿಯಂತ್ರಣಗಳನ್ನು ತಳ್ಳಿಹಾಕಲು ಪ್ರಮುಖ ಆಧಾರವಾಗಿದೆ.
"ಮಕ್ಕಳ ಇಂಟರ್ನೆಟ್ ಪ್ರವೇಶದ ಮೇಲಿನ ಯಾವುದೇ ಸಂಪೂರ್ಣ ನಿಷೇಧವು ಸಾಬೀತಾಗದ ಮತ್ತು ಅಪಾರ ಅಸಮಾನತೆಯಿಂದ ಕೂಡಿದ ಕ್ರಮವಾಗಿದೆ ಎಂಬುದಷ್ಟೇ ನಾವು ಹೇಳಲು ಹೊರಟಿರುವುದು. ಇಂತಹ ಕ್ರಮಗಳಿಂದಾಗಿ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂಬುದನ್ನು ಇದುವರೆಗೆ ಯಾವುದೇ ನ್ಯಾಯಾಂಗ ವ್ಯಾಪ್ತಿಯಲ್ಲೂ ನಿರೂಪಿಸಲು ಸಾಧ್ಯವಾಗಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಏಕೆಂದರೆ, ಮೂಲಭೂತ ಹಕ್ಕಿನ ಮೇಲಿನ ಯಾವುದೇ ನಿರ್ಬಂಧವು ನ್ಯಾಯಾಲಯ ನಿಗದಿಪಡಿಸಿದ ಮೂರು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕಾಗುತ್ತದೆ. ಮೊದಲನೆಯದಾಗಿ, ನಿರ್ಬಂಧವು ಕಾನೂನುಬದ್ಧವಾಗಿ ಜಾರಿಗೆ ತಂದ ಶಾಸನದ ಮೂಲಕ ಇರಬೇಕು. ಎರಡನೆಯದಾಗಿ, ಆ ಕಾನೂನು ಸಂಸತ್ತು ಸಾಧಿಸಲು ಹೊರಟಿರುವ ಉದ್ದೇಶದೊಂದಿಗೆ ನಿಕಟ ಸಂಬಂಧ ಹೊಂದಿರುವ ನ್ಯಾಯಸಮ್ಮತ ಸರ್ಕಾರಿ ಹಿತಾಸಕ್ತಿಯನ್ನು ಪ್ರದರ್ಶಿಸಬೇಕು. ಮೂರನೆಯದಾಗಿ, ಅತ್ಯಂತ ಮುಖ್ಯವಾಗಿ, ಮೂಲಭೂತ ಹಕ್ಕುಗಳ ಮೇಲಿನ ಅತಿಕ್ರಮಣವು ಆ ಉದ್ದೇಶಕ್ಕೆ ಅನುಗುಣವಾದ ಪ್ರಮಾಣದಲ್ಲಿರಬೇಕು.
ನ್ಯಾಯಾಲಯವು ಯಾವ ನಿರ್ಬಂಧಗಳನ್ನು ನಿರಾಕರಿಸಿತು? ಇದು ಎಲ್ಲಾ ನಿಯಂತ್ರಣಗಳನ್ನೂ ತಳ್ಳಿಹಾಕುತ್ತದೆಯೇ?
ಪ್ರಸ್ತುತ ಪರಿಸ್ಥಿತಿಯಲ್ಲಿ ಇಂಟರ್ನೆಟ್ ನಮ್ಮ ಮಕ್ಕಳಿಗೆ ಸಂಪೂರ್ಣ ಸುರಕ್ಷಿತವಾಗಿಲ್ಲ ಎಂಬುದನ್ನು ಪೀಠವು ಒಪ್ಪಿಕೊಂಡಿದೆ. ಆದರೆ, ಮಕ್ಕಳ ಸುರಕ್ಷತೆಗಾಗಿ ಕೈಗೊಳ್ಳುವ ಯಾವುದೇ ಕ್ರಮವು ಹಾನಿಕಾರಕ ವಿಷಯಗಳು ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಇರಬೇಕೇ ಹೊರತು, ಮಕ್ಕಳ ವಿರುದ್ಧವಲ್ಲ ಎಂದು ಹೇಳಿದೆ. ವ್ಯವಸ್ಥೆಯ ಇಂತಹ ವೈಫಲ್ಯಗಳಿಂದಾಗಿ ಮಕ್ಕಳನ್ನು ಇಂಟರ್ನೆಟ್ನಿಂದ ದೂರವಿಡುವುದು ಸಂತ್ರಸ್ತರನ್ನೇ ಸಮಸ್ಯೆಯನ್ನಾಗಿ ಬಿಂಬಿಸಿದಂತೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಯಸ್ಸಾಧಾರಿತ ನಿರ್ಬಂಧಗಳಿಗೆ ಪ್ರತಿಯೊಬ್ಬ ಬಳಕೆದಾರರ ವಯಸ್ಸನ್ನು ಗುರುತಿಸುವುದು ಮತ್ತು "ಸೂಕ್ಷ್ಮ ದತ್ತಾಂಶಗಳ ನಿರಂತರ ಸಂಗ್ರಹಣೆ ಹಾಗೂ ಮೇಲ್ವಿಚಾರಣೆ" ಅಗತ್ಯವಾಗಿರುತ್ತದೆ. ಇದು "ದುರುಪಯೋಗ ಮತ್ತು ಅನಗತ್ಯ ಕಣ್ಗಾವಲಿನ ಅಸಮಾನ ಅಪಾಯವನ್ನು" ಸೃಷ್ಟಿಸುತ್ತದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಇಂತಹ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆಯೂ ನ್ಯಾಯಾಲಯ ಪ್ರಶ್ನೆ ಎತ್ತಿದೆ. "ಕಾನೂನು ನಿಷೇಧಿಸಿದೆ ಎಂಬ ಒಂದೇ ಕಾರಣಕ್ಕೆ ಮಕ್ಕಳು ಇಂಟರ್ನೆಟ್ ಬಳಕೆಯನ್ನು ನಿಲ್ಲಿಸುವುದಿಲ್ಲ. ಬದಲಿಗೆ, ಅವರು ನಿಯಂತ್ರಣವಿಲ್ಲದ ಮತ್ತು ಇನ್ನಷ್ಟು ಅಭದ್ರವಾಗಿರುವ ಇತರ ವೇದಿಕೆಗಳು ಹಾಗೂ ವೆಬ್ಸೈಟ್ಗಳತ್ತ ಮುಖ ಮಾಡುತ್ತಾರೆ" ಎಂದು ನ್ಯಾಯಾಲಯ ಹೇಳಿದೆ. ಸಂಪೂರ್ಣ ನಿರ್ಬಂಧಗಳನ್ನು "ಸಾಬೀತಾಗದ ಮತ್ತು ಅತ್ಯಂತ ಅಸಮಾನ ಕ್ರಮಗಳು" ಎಂದು ಕರೆದ ನ್ಯಾಯಾಲಯ, ಇಂತಹ ಕ್ರಮಗಳಿಂದ ಮಕ್ಕಳು ಹೆಚ್ಚು ಸುರಕ್ಷಿತರಾಗಿದ್ದಾರೆ ಎಂಬುದನ್ನು ಇದುವರೆಗೆ ಯಾವುದೇ ದೇಶ ನಿರೂಪಿಸಿಲ್ಲ ಎಂದಿದೆ.
ಪೋಷಕರ ಒಪ್ಪಿಗೆ, ಮಾರ್ಗದರ್ಶನ ಮತ್ತು ಉಸ್ತುವಾರಿಗೆ ಹೆಚ್ಚಿನ ಒತ್ತು ನೀಡುವಂತೆ ನ್ಯಾಯಾಲಯ ಸಲಹೆ ನೀಡಿದೆ. ಖಾತೆಗಳನ್ನು ಪೂರ್ವನಿಯೋಜಿತವಾಗಿ ಖಾಸಗಿಯಾಗಿರಿಸುವ 'ಚೈಲ್ಡ್ ಮೋಡ್' (Child Mode), ಅಪರಿಚಿತರಿಂದ ಬರುವ ಸಂದೇಶಗಳ ಮೇಲಿನ ನಿಯಂತ್ರಣ ಮತ್ತು ಜಾಹೀರಾತು ಹಾಗೂ ವಿಷಯಗಳ ಪರಿಶೀಲನೆಯಂತಹ ಕ್ರಮಗಳನ್ನೂ ಸೂಚಿಸಿದೆ. ಇವುಗಳ ಕಾರ್ಯವಿಧಾನಗಳನ್ನು "ಭಾರತ ಸರ್ಕಾರದ ವಿವೇಚನೆಗೆ" ಬಿಟ್ಟಿದೆ. ಸರ್ಕಾರವು "ವಯಸ್ಕರ ವೆಬ್ಸೈಟ್ಗಳಂತಹ ಮಕ್ಕಳಿಗೆ ಹಾನಿಕಾರಕವಾದ ವಿಷಯಗಳ ಪ್ರವೇಶವನ್ನು ನಿರ್ಬಂಧಿಸಬಹುದು" ಎಂದು ತಿಳಿಸಿದೆ.
ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನೀಡಿದ ನಿರ್ದೇಶನಗಳಲ್ಲಿ, ಬಾಲ ಲೈಂಗಿಕ ಶೋಷಣೆಯ ದೃಶ್ಯಗಳ (CSEAM) ತಡೆಗಾಗಿ 'ರಾಷ್ಟ್ರೀಯ ಹ್ಯಾಶ್ ಮತ್ತು ಯುಆರ್ಎಲ್ ಪಟ್ಟಿ ಡೇಟಾಬೇಸ್' (National Hash & URL List Database) ರಚಿಸುವುದೂ ಒಂದಾಗಿದೆ. ಇದರಲ್ಲಿನ ನಮೂದುಗಳನ್ನು ಕನಿಷ್ಠ "ಮೂವರು ತರಬೇತಿ ಪಡೆದ ವಿಶ್ಲೇಷಕರು" ದೃಢೀಕರಿಸಬೇಕಾಗುತ್ತದೆ. ಇತರ CSEAM ಸಾಮಗ್ರಿಗಳನ್ನು ತೆಗೆದುಹಾಕಿದ "ಎರಡು ಗಂಟೆಗಳ ಒಳಗಾಗಿ" ವರದಿ ಮಾಡಬೇಕು ಮತ್ತು ದೂರುಗಳನ್ನು "ಸ್ವೀಕರಿಸಿದ ಇಪ್ಪತ್ತನಾಲ್ಕು ಗಂಟೆಗಳ ಒಳಗಾಗಿ" ಪರಿಗಣಿಸಬೇಕು.
ಇದಲ್ಲದೆ, ಕೇಂದ್ರ ಸರ್ಕಾರವು ಇಂತಹ ಅಕ್ರಮಗಳಿಗೆ ತೀವ್ರ ಸ್ವರೂಪದ ಆರ್ಥಿಕ ದಂಡ ವಿಧಿಸುವ ಬಗ್ಗೆ ಪರಿಗಣಿಸಬೇಕು ಹಾಗೂ ಹಣಪಾವತಿ ಹಂತಗಳ ಮೂಲಕ ನೀಡಲಾಗುವ CSEAM ಸಾಮಗ್ರಿಗಳಿಂದ ಬರುವ ಆದಾಯವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಈ ತೀರ್ಪಿನ ಮುಖ್ಯ ಆಶಯವೇನು? :
ಇಂಟರ್ನೆಟ್ ಪಡೆಯುವ ಮತ್ತು ಬಳಸುವ ಹಕ್ಕು ಮಕ್ಕಳಿಗೂ ವಿಸ್ತರಿಸುವ ಮೂಲಭೂತ ಹಕ್ಕಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸುರಕ್ಷತಾ ಕ್ರಮಗಳು ಹಾನಿಕಾರಕ ವಿಷಯಗಳು ಮತ್ತು ಅದಕ್ಕೆ ಕಾರಣರಾದವರನ್ನು ಗುರಿಯಾಗಿಸಬೇಕೇ ಹೊರತು, ಮಕ್ಕಳ ಪ್ರವೇಶಾವಕಾಶವನ್ನಲ್ಲ ಎಂದು ಹೇಳಿದೆ.
ನ್ಯಾಯಾಲಯವು ಎಲ್ಲಾ ಸುರಕ್ಷತಾ ಕ್ರಮಗಳನ್ನು ತಳ್ಳಿಹಾಕಿಲ್ಲ. ಪೋಷಕರ ಒಪ್ಪಿಗೆ ಮತ್ತು 'ಚೈಲ್ಡ್ ಮೋಡ್' ಚೌಕಟ್ಟನ್ನು ರೂಪಿಸುವ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ಬಿಟ್ಟಿದೆ. ಅಲ್ಲದೆ, ಮಕ್ಕಳಿಗೆ ಹಾನಿಕಾರಕವಾದ ವಿಷಯಗಳ ವರ್ಗಗಳನ್ನು ಸರ್ಕಾರ ನಿರ್ಬಂಧಿಸಬಹುದು ಎಂದು ತಿಳಿಸಿದೆ.
ಕೇಂದ್ರ ಸರ್ಕಾರವು ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ, ಅಗತ್ಯವಿದ್ದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳನ್ನು ತಿದ್ದುಪಡಿ ಮಾಡಿ, ಡಿಸೆಂಬರ್ 10, 2026ರ ಮುಂದಿನ ವಿಚಾರಣೆಗೆ ಮೊದಲು ಅಫಿಡವಿಟ್ ಸಲ್ಲಿಸಬೇಕಾಗಿದೆ. ಅಪ್ರಾಪ್ತರ ಸ್ಕ್ರೀನ್ಟೈಮ್ ನಿಯಂತ್ರಿಸಲು ಕಾನೂನು ರೂಪಿಸುತ್ತಿರುವ ರಾಜ್ಯಗಳು ಈ ನಿರ್ಬಂಧಗಳು ಸಂವಿಧಾನಬದ್ಧ ಮಿತಿಗಳ ಒಳಗಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಒಂದೆಡೆ, ಒಂದು ಹಕ್ಕನ್ನು ಮೂಲಭೂತ ಹಕ್ಕು ಎಂದು ಗುರುತಿಸುವುದರಲ್ಲಿ ಮಹತ್ವದ ಮೌಲ್ಯವಿದೆ. ಉದಾಹರಣೆಗೆ, ಖಾಸಗಿತನದ ಹಕ್ಕನ್ನು ತೆಗೆದುಕೊಳ್ಳಬಹುದು. ಆದರೆ, ಸುಪ್ರೀಂ ಕೋರ್ಟ್ ಮೂಲಭೂತ ಹಕ್ಕುಗಳ ವ್ಯಾಪ್ತಿಯನ್ನು ಸತತವಾಗಿ ವಿಸ್ತರಿಸುತ್ತಿರುವುದರ ಪ್ರಾಯೋಗಿಕ ಪರಿಣಾಮಗಳ ಕುರಿತು ಪ್ರಶ್ನೆಗಳು ಎದ್ದಿವೆ. ಮೂಲಭೂತ ಹಕ್ಕುಗಳ ವ್ಯಾಪ್ತಿಯು, ಆ ಹಕ್ಕುಗಳು ಭರವಸೆ ನೀಡುವುದನ್ನು ಒದಗಿಸುವ ಸರ್ಕಾರದ ಸಾಮರ್ಥ್ಯ ಅಥವಾ ಇಚ್ಛಾಶಕ್ತಿಯನ್ನು ಮೀರಿ ಬೆಳೆದಿದೆ. ನ್ಯಾಯಾಲಯದ ತೀರ್ಪುಗಳನ್ನು ಹೆಚ್ಚಾಗಿ ಸೈದ್ಧಾಂತಿಕ ಪ್ರಯತ್ನಗಳಾಗಿ ಮಾತ್ರ ನೋಡಲಾಗುತ್ತದೆ ಮತ್ತು ಪ್ರಾಯೋಗಿಕವಾಗಿ ಅವುಗಳನ್ನು ನಿರ್ಲಕ್ಷಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ, ಆ ಹಕ್ಕುಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸದಿದ್ದರೂ ಸರ್ಕಾರಗಳು ಯಾವುದೇ ಪರಿಣಾಮಗಳನ್ನು ಎದುರಿಸದಿರುವಾಗ ಇದು ಎದ್ದು ಕಾಣುತ್ತದೆ.
ಉದಾಹರಣೆಗೆ, ಇಂಟರ್ನೆಟ್ ನಿರ್ಬಂಧಗಳ ಮೇಲಿನ 'ಅನುರಾಧಾ ಭಾಸಿನ್' ತೀರ್ಪನ್ನು ಅದರ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆಯ ನಡುವೆಯೂ ಅಭ್ಯಾಸಬಲದಿಂದ ಉಲ್ಲೇಖಿಸಲಾಗುತ್ತಿದೆ. ಭವಿಷ್ಯದಲ್ಲಿ ಇಂಟರ್ನೆಟ್ ಸ್ಥಗಿತಗಳು ಮತ್ತು ಸಂಪರ್ಕ ನಿರ್ಬಂಧಗಳು ಕಾನೂನುಬದ್ಧತೆ ಹಾಗೂ ಅಗತ್ಯದ ಪರೀಕ್ಷೆಗಳಲ್ಲಿ ಉತ್ತೀರ್ಣವಾಗದಿದ್ದರೆ ಮತ್ತು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡದಿದ್ದರೆ, ಈ ಮೂಲಭೂತ ಹಕ್ಕುಗಳು ಬರೀ ಹೆಸರಿಗೆ ಮಾತ್ರ ಉಳಿಯುತ್ತವೆ.
ಸೌಜನ್ಯ: indianexpress.com






