ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ : ಬಿಜೆಪಿ ಸರಕಾರದ ಅವಧಿಯಲ್ಲೇ 4 ಕೋಟಿ ರೂ. ಸಂಗ್ರಹ

Photo: facebook.com/IndiaToday
ಬೆಂಗಳೂರು : ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮದ ವಿವಿಧ ಮುಖಗಳನ್ನು ಪರಿಚಯಿಸಿರುವ ಜಾರಿ ನಿರ್ದೇಶನಾಲಯವು ದೋಷಾರೋಪ ಪಟ್ಟಿಯು ಈ ನೇಮಕಾತಿಗೆ 2020 ರಲ್ಲಿಯೇ ನೇಮಕಾತಿ ಅಧಿಸೂಚನೆ ಹೊರಡಿಸಲು ಅರ್ಹ ಪಶು ವೈದ್ಯರಿಂದ ಸುಮಾರು 4 ಕೋಟಿ ರೂ. ಸಂಗ್ರಹಿಸಲಾಗಿತ್ತು ಎಂಬ ಮತ್ತೊಂದು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.
ಈ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ಬಸವರಾಜ ಕನ್ನಾಳೆಯು ಬಿಜೆಪಿ ಸರಕಾರದ ಅವಧಿಯ ಸಚಿವರೊಬ್ಬರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂಬ ಮಾತುಗಳು ಕೇಳಿ ಬಂದಿರುವ ನಡುವೆಯೇ ಇದೇ ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿಯೇ 4 ಕೋಟಿ ರೂ. ಸಂಗ್ರಹಿಸಲಾಗಿತ್ತು ಎಂದು ಅಭ್ಯರ್ಥಿಯೊಬ್ಬರು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಈ ಅಕ್ರಮದ ಮತ್ತೊಂದು ಮುಖವನ್ನು ತೆರೆದಿಟ್ಟಂತಾಗಿದೆ. ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿ ಪ್ರತಿಯು "the-file.in'ಗೆ ಲಭ್ಯವಾಗಿದೆ.
ಪಶು ವೈದ್ಯಾಧಿಕಾರಿ ಹುದ್ದೆಗಳಿಗೆ ಬರೆದಿದ್ದ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದ ಡಾ.ರಾಜ್ ಮೊಹಮ್ಮದ್ ಎಂಬವರು ಜಾರಿ ನಿರ್ದೇಶನಾಲಯಕ್ಕೆ 2026ರ ಆಗಸ್ಟ್ 27 ಮತ್ತು 28ರಂದು ನೀಡಿರುವ ಹೇಳಿಕೆಯಲ್ಲಿ ಈ ಮಾಹಿತಿ ಇದೆ. ಕೆಪಿಎಸ್ಸಿಯು 2026ರ ಜನವರಿ 9ರಂದು ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಪರೀಕ್ಷೆಗೆ ಹಾಜರಾಗಿದ್ದ ಡಾ.ರಾಜ್ ಮೊಹಮ್ಮದ್ ಅವರು ಮೊದಲ ಸ್ಥಾನ ಪಡೆದು ಆಯ್ಕೆಯಾಗಿದ್ದರು. ಇವರು ತಮ್ಮ ಸಹೋದ್ಯೋಗಿ ಡಾ.ಓಂ ಪ್ರಕಾಶ್ ಅವರ ಮೂಲಕ ಪವನ್ (ಮೊಬೈಲ್ ಸಂಖ್ಯೆ: 9180125725) ಅವರನ್ನು ಸಂಪರ್ಕಿಸಿದ್ದರು. ಬೆಂಗಳೂರಿನ ವಿಲ್ಲಾವೊಂದರಲ್ಲಿ ಬಸವರಾಜ್ ಕನ್ನಾಳೆ ಅವರ ಸಮ್ಮುಖದಲ್ಲಿ ಅವರಿಗೆ ಉತ್ತರಗಳ ಸಹಿತ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ನೀಡಲಾಗಿತ್ತು. ಅದಕ್ಕಾಗಿ 30 ಲಕ್ಷ ರೂ. ಅಕ್ರಮ ಹಣ ಪಾವತಿಸಲು ಅವರು ಒಪ್ಪಿಕೊಂಡಿದ್ದರು. ಈ ಮೊತ್ತದಲ್ಲಿ 5 ಲಕ್ಷ ರೂ. ಮುಂಗಡವಾಗಿ ಪಾವತಿಸಿದ್ದರು ಎಂದು ಹೇಳಿಕೆಯಲ್ಲಿ ರಾಜ್ ಮೊಹಮ್ಮದ್ ವಿವರಿಸಿರುವುದು ದೋಷಾರೋಪ ಪಟ್ಟಿಯಿಂದ ತಿಳಿದು
ಬಂದಿದೆ.






