ನೀರಾವರಿ ಯೋಜನೆಗಳ ಗುತ್ತಿಗೆದಾರರಿಗೆ ಇನ್ನೂ 15,429.51 ಕೋಟಿ ರೂ. ಬಾಕಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಇನ್ನೂ 15,429.51 ಕೋಟಿ ರೂ.ಬಾಕಿ ಮೊತ್ತ ಪಾವತಿಸಿಲ್ಲ.
ಗುತ್ತಿಗೆದಾರರಿಗೆ ಇಷ್ಟೊಂದು ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ಕಾರಣ ರಾಜ್ಯದ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಬೃಹತ್ ನೀರಾವರಿ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಅಲ್ಲದೇ ಕಾಲುವೆ ಕಾಮಗಾರಿಗಳು, ಜಲಾಶಯಗಳ ನಿರ್ಮಾಣ ಸೇತುವೆ ಮತ್ತಿತರ ಮೂಲಸೌಕರ್ಯ ಕಾಮಗಾರಿಗಳ ಪೈಕಿ ಬಹುತೇಕ ಕುಂಠಿತಗೊಂಡಿದೆ.
ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿನ ನೀರಾವರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತದ ಕುರಿತು ವಿಧಾನಪರಿಷತ್ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
ಜಲಸಂಪನ್ಮೂಲ ಇಲಾಖೆಯಡಿ ಬರುವ ಕೃಷ್ಣಾಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮಗಳಿಗೆ ಪ್ರತೀ ವರ್ಷ ಆಯವ್ಯಯದಲ್ಲಿ ಸಾವಿರಾರು ಕೋಟಿ ರೂ. ಹಂಚಿಕೆ ಮಾಡುತ್ತದೆ. ಈ ಅನುದಾನದಲ್ಲಿ ಬಂಡವಾಳ ವೆಚ್ಚ ಹಾಗೂ ಇತರ ಲೆಕ್ಕ ಶೀರ್ಷಿಕೆಯಡಿಯಲ್ಲಿ ಕಾಮಗಾರಿಗಳಿಗೆ ಅನುದಾನ ಒದಗಿಸಿದೆ. 1/12ನೇ ಆಧಾರದ ಮೇಲೆ ಪ್ರತೀ ತಿಂಗಳು ಆಯಾ ಲೆಕ್ಕ ಶೀರ್ಷಿಕೆಯಡಿಯಲ್ಲಿ ಅನುದಾನ ಬಿಡುಗಡೆ ಮಾಡುತ್ತಿದೆ. ಅದನ್ನು ನಿಗಮಗಳು ಯೋಜನೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ಗಳ ಪಾವತಿಗಾಗಿ ನಿಗದಿತವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ಅವರು ಉತ್ತರಿಸಿರುವುದು ಗೊತ್ತಾಗಿದೆ.
ಅಲ್ಲದೇ ಕಾಮಗಾರಿಗಳ ಬಿಲ್ಗಳನ್ನು ಗುತ್ತಿಗೆದಾರರಿಗೆ ಸಕಾಲದಲ್ಲಿ ಪಾವತಿಸದೇ ನೀರಾವರಿ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಪ್ರಕರಣಗಳು ವರದಿಯಾಗಿಲ್ಲ ಎಂದು ಉತ್ತರಿಸಿದ್ದಾರೆ. ಅದೇ ರೀತಿ ಗುತ್ತಿಗೆದಾರರಿಗೆ ಬಾಕಿ ಇರುವ ಮೊತ್ತದ ವಿವರಗಳನ್ನೂ ಉತ್ತರದಲ್ಲಿ ಒದಗಿಸಿದ್ದಾರೆ.
ಈ ಉತ್ತರದ ಪ್ರಕಾರ ಕೃಷ್ಣ ಭಾಗ್ಯ ಜಲನಿಗಮ ವ್ಯಾಪ್ತಿಯಲ್ಲಿ 1,649.57 ಕೋಟಿ ರೂ., ಕರ್ನಾಟಕ ನೀರಾವರಿ ನಿಗಮದಲ್ಲಿ 4,696.86 ಕೋಟಿ ರೂ., ಕಾವೇರಿ ನೀರಾವರಿ ನಿಗಮದಲ್ಲಿ 3,305.66 ಕೋಟಿ ರೂ., ವಿಶ್ವೇಶ್ವರಯ್ಯ ಜಲ ನಿಗಮದಲ್ಲಿ 5,777.42 ಕೋಟಿ ರೂ. ಸೇರಿ ಒಟ್ಟು 15,429.51 ಕೋಟಿ ರೂ.ನಷ್ಟು ಬಾಕಿ ಇದೆ ಇರುವುದು ಗೊತ್ತಾಗಿದೆ.
ಸಕಾಲದಲ್ಲಿ ಹಣ ಪಾವತಿಯಾಗದ ಕಾರಣ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಗುತ್ತಿಗೆದಾರರು ಸಹ ಬೃಹತ್ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಾರೆ. ಇದರಿಂದಾಗಿ ಕೃಷಿ ಭೂಮಿಗೆ ನೀರು ಒದಗಿಸುವ ಸರಕಾರದ ಗುರಿಗೆ ಹಿನ್ನಡೆಯಾಗುತ್ತಿದೆ ಎಂದು ಹಲವು ಗುತ್ತಿಗೆದಾರರೇ ಆರೋಪಿಸಿದ್ದರು. ಈಗ ಸರಕಾರವು ಕೊಟ್ಟಿರುವ ಉತ್ತರದದಲ್ಲಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಬದಲಿಗೆ ನಿಗಮವಾರು ಬಾಕಿ ಇರುವ ಮೊತ್ತದ ವಿವರವನ್ನಷ್ಟೇ ನೀಡಿದ್ದಾರೆ.
‘ಒಟ್ಟು ಯೋಜನೆಗಳ ಪ್ರಗತಿಯ ಹಿತದೃಷ್ಟಿಯಿಂದ ಮತ್ತು ಮಾಹೆವಾರು ಒದಗಿಸುತ್ತಿರುವ ಅನುದಾನದಿಂದ ಕಾಮಗಾರಿಗಳನ್ನು ಸರಿದೂಗಿಸಿಕೊಂಡು ಹೋಗಲಾಗುತ್ತಿದೆ. ಆದ್ಯತೆ ಮೇರೆಗೆ ಕಾಮಗಾರಿಗಳ ಬಿಲ್ಗಳನ್ನು ಪಾವತಿಸಲು ಕ್ರಮ ಜರುಗಿಸಲಾಗುತ್ತಿದೆ,’ ಎಂದು ಉತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ರಾಜ್ಯದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಭಾರೀ ನೀರಾವರಿ ಯೋಜನೆಗಳಿಗೆ ಮರು ಜೀವ ನೀಡಲು ಹಾಗೂ ಗುತ್ತಿಗೆದಾರರಿಗೆ ಪಾವತಿಸಬೇಕಿರುವ ಸಾವಿರಾರು ಕೋಟಿ ರೂ. ಬಾಕಿ ಬಿಲ್ಗಳನ್ನು ವಿಲೇವಾರಿ ಮಾಡಲು ಸರಕಾರವು ರೂಪಿಸಿರುವ ಆರ್ಥಿಕ ಕ್ರಿಯಾ ಯೋಜನೆ ಏನು, ಯಾವ ನಿರ್ದಿಷ್ಟ ಕಾಲಮಿತಿಯೊಳಗೆ ಸಂಪೂರ್ಣ ಬಾಕಿ ಹಣವನ್ನು ಬಿಡುಗಡೆ ಮಾಡಿ ರೈತರ ಹಿತದೃಷ್ಟಿಯಿಂದ ಈ ನೀರಾವರಿ ಕಾಮಗಾರಿಗಳನ್ನು ಯಾವಾಗ ಪೂರ್ಣಗೊಳಿಸಲಾಗುವುದು ಎಂದು ಕೇಳಿದ್ದ ಪ್ರಶ್ನೆಗೆ ಸರಕಾರವು ನಿರ್ದಿಷ್ಟವಾಗಿ ಉತ್ತರಿಸಿಲ್ಲ.
ಬದಲಿಗೆ ‘ಆರ್ಥಿಕ ಇಲಾಖೆಯಿಂದ ಹೊರಡಿಸಲಾಗುವ ತ್ರೈಮಾಸಿಕ ಕಂತಿನ ಹಣ ಬಿಡುಗಡೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಅನ್ವಯ ಪ್ರತೀ ವರ್ಷ ಆಯವ್ಯಯದಲ್ಲಿ ಹಂಚಿಕೆಯಾದ ಅನುದಾನವನ್ನು ಮಾಹೆವಾರು 1/12 ಅನುಪಾತದಂತೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಮೊತ್ತವನ್ನು ಲೆಕ್ಕ ಶೀರ್ಷಿಕೆವಾರು ಬಾಕಿ ಬಿಲ್ಗಳನ್ನು ಜೇಷ್ಠತೆ ಆಧಾರದ ಮೇಲೆ ಪಾವತಿಸಲು ಕ್ರಮವಹಿಸಲಾಗುತ್ತಿದೆ,’ ಎಂದು ವಿವರಿಸಿದೆ.
ನಿಗಮಗಳಿಗೆ ಮಾಹೆವಾರು ಬಿಡುಗಡೆ ಮಾಡಲಾಗುವ ಅನುದಾನದಲ್ಲಿ ಯೋಜನೆಗಳ ಪ್ರಗತಿಯ ಹಿತದೃಷ್ಟಿಯಿಂದ ಆದ್ಯತೆ ಹಾಗೂ ಅನುದಾನ ಲಭ್ಯತೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಎಲ್ಲ ರೀತಿಯ ಬಾಕಿ ಬಿಲ್ಗಳನ್ನು ಪಾವತಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದೆ.
ಕೃಷ್ಣಾ ಭಾಗ್ಯ ಜಲನಿಗಮ, ಕಾವೇರಿ ಮತ್ತು ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಭೂ ಸ್ವಾಧೀನ, ನಬಾರ್ಡ್, ಎಸ್ಸಿಪಿ, ಟಿಎಸ್ಪಿ, ವಿದ್ಯುತ್ ವೆಚ್ಚ, ದುರಸ್ತಿ ಮತ್ತು ನಿರ್ವಹಣೆ ಅಡಿಯಲ್ಲಿ 2023ರ ಎಪ್ರಿಲ್ 1ರ ಅಂತ್ಯಕ್ಕೆ 15,088 ಕಾಮಗಾರಿಗಳು ಪ್ರಗತಿಯಲ್ಲಿದ್ದು ಇದೇ ಅವಧಿಯಲ್ಲಿ ಬಿಡುಗಡೆಗೆ 38,607.01 ಕೋಟಿ ರೂ. ಬಾಕಿ ಇತ್ತು.
ಅದೇ ರೀತಿ ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ನಿಗಮದಲ್ಲಿ ಬಾಕಿ ಬಿಲ್ಗಳು ಇರುವ ಕಾರಣ ನಿರೀಕ್ಷಿತ ಭೌತಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಮತ್ತು ಎಪ್ರಿಲ್ ತಿಂಗಳಿಗೆ ಬಂಡವಾಳ ಲೆಕ್ಕ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಲಾಗಿದ್ದ 66 ಕೋಟಿ ರೂ.ಗಳು ಕಾವೇರಿ ನೀರಾವರಿ ನಿಗಮದ ಖಾತೆಗೆ ಜಮೆ ಆಗಿಲ್ಲ ಎಂಬ ಸಂಗತಿಯನ್ನು ನಿಗಮದ ಅಧಿಕಾರಿಗಳು ಸರಕಾರದ ಗಮನಕ್ಕೆ ತಂದಿದ್ದರು.
ಒಟ್ಟು 38,607.01 ಕೋಟಿ ರೂ.ಪೈಕಿ 677.06 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಅಂದಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅನುಮೋದನೆ ನೀಡಿದ್ದಾರೆ. ಈ ಸಂಬಂಧ 2023ರ ಜುಲೈ 24 ಮತ್ತು ಆಗಸ್ಟ್ 7ರಂದು ಅನುದಾನ ಬಿಡುಗಡೆ ಮಾಡಿರುವ ಜಲಸಂಪನ್ಮೂಲ ಇಲಾಖೆಯು ಆದೇಶ ಹೊರಡಿಸಿತ್ತು.






