AI ಮನುಕುಲಕ್ಕೆ ಬೆದರಿಕೆಯ ಅಥವಾ ಗಾಳಿ ಗುಳ್ಳೆಯೆ? ತಂತ್ರಜ್ಞಾನ ತಜ್ಞರ ಅಭಿಪ್ರಾಯವೇನು?

AI ಮನುಕುಲಕ್ಕೆ ಒಳಿತು ಮಾಡಲಿದೆಯೇ ಅಥವಾ ಕೆಡುಕು ಮಾಡಲಿದೆಯೇ ಎನ್ನುವ ಬಗ್ಗೆ ಅನೇಕರಿಗೆ ಆತಂಕವಿದೆ. ಈ ನಿಟ್ಟಿನಲ್ಲಿ ಸಾಫ್ಟ್ವೇರ್ ವೃತ್ತಿಪರರು ಯಾವ ಅಭಿಪ್ರಾಯ ಹೊಂದಿದ್ದಾರೆ?
ಒಂದು ವರದಿಯ ಪ್ರಕಾರ, ಈ ವಾರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಾವಿರಾರು ಗ್ರಾಹಕರ ಡೇಟಾ ಸೋರಿಕೆಯಾಗಿದೆ. ದಕ್ಷಿಣ ಅಮೆರಿಕದಲ್ಲಿ ನೂರಾರು ಬ್ಯಾಂಕ್ಗಳು ಸಂಘಟಿತ ಸೈಬರ್ ದಾಳಿಗೆ ಒಳಗಾದವು. ಭಾರತದ ಸೆನ್ಸಾರ್ ಮಂಡಳಿಯ ವೆಬ್ ಸೈಟ್ ಗೆ ನುಗ್ಗಿ ಡೇಟಾ ಕದಿಯಲಾಗಿದೆ. ಅಮೆರಿಕದ ದೊಡ್ಡ ವೈದ್ಯಕೀಯ ಪ್ರಯೋಗಾಲಯವಾದ ಕ್ವೆಸ್ಟ್ ಡಯಗ್ನಸ್ಟಿಕ್ಸ್ ಅನ್ನು ಹ್ಯಾಕರ್ ಗಳು ಭೇದಿಸಿ ಸಾವಿರಾರು ರೋಗಿಗಳ ಡೇಟಾ ಕದ್ದಿದ್ದಾರೆ. ಇತ್ತೀಚೆಗೆ ಬಹಿರಂಗವಾದ PHP ದೋಷಗಳನ್ನು ಬಳಸಿಕೊಂಡು ಕೆಲವೇ ದಿನಗಳಲ್ಲಿ ತಮ್ಮ ಕಂಪೆನಿಯ ವೆಬ್ ಸೈಟ್ ಗಳ ಮೇಲೆ ಲಕ್ಷಾಂತರ ದಾಳಿಗಳಾಗಿವೆ ಎಂದು ಕ್ಲೌಡ್ಫ್ಲೇರ್ ಸಿಇಒ ಹೇಳಿದ್ದಾರೆ.
ಎಲ್ಲವೂ AI ಕಾರಣದಿಂದ ಆಗಿಲ್ಲ. ಆದರೆ ಬಹಳಷ್ಟು ಸಮಸ್ಯೆಗಳು AI ಕಾರಣದಿಂದಲೇ ಆಗಿವೆ. ಜನರೇಟಿವ್ AI ಇದೀಗ ನಾವು ನಂಬಿದ ಎಲ್ಲವನ್ನೂ ಮತ್ತು ಬಳಸುತ್ತಿರುವ ತಂತ್ರಜ್ಞಾನಗಳನ್ನೂ ಪರೀಕ್ಷೆಗೆ ಒಡ್ಡಿದೆ. ಇಂತಹ ಸಂದರ್ಭದಲ್ಲಿ AI ಮನುಕುಲಕ್ಕೆ ಒಳಿತು ಮಾಡಲಿದೆಯೇ ಅಥವಾ ಕೆಡುಕು ಮಾಡಲಿದೆಯೇ ಎನ್ನುವ ಬಗ್ಗೆ ಅನೇಕರಿಗೆ ಆತಂಕವಿದೆ. ಈ ನಿಟ್ಟಿನಲ್ಲಿ ಸಾಫ್ಟ್ವೇರ್ ವೃತ್ತಿಪರರು ಯಾವ ಅಭಿಪ್ರಾಯ ಹೊಂದಿದ್ದಾರೆ?
ʼವಾರ್ತಾಭಾರತಿʼ ಜೊತೆ ಮಾತನಾಡಿದ ಬೆಂಗಳೂರಿನ ಸಾಫ್ಟ್ವೇರ್ ವೃತ್ತಿಪರರು, ಲೇಖಕರು ಮತ್ತು ಅನುವಾದಕರೂ ಆಗಿರುವ ಸಂಕೇತ್ ಪಾಟೀಲ್ ಅವರು, ಸದ್ಯದ ಸ್ಥಿತಿಯಲ್ಲಿ ಜನರೇಟಿವ್ AI ಅನ್ನು ಬಬಲ್ ಎಂದು ತಳ್ಳಿಹಾಕುವಂತೆಯೂ ಇಲ್ಲ, ಬೆದರಿಕೆ ಎಂದು ನಿರ್ಧರಿಸುವಂತೆಯೂ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
►AI ಒಂದು ತಾತ್ಕಾಲಿಕ ಬೂಮ್ (Bubble)? ಅಥವಾ ಮಾನವಕುಲಕ್ಕೆ ಬೆದರಿಕೆ ಎಂದು ನೀವು ನಂಬುತ್ತೀರಾ?
ಹೌದು ಅಥವಾ ಇಲ್ಲ ಎನ್ನುವ ಉತ್ತರ ಕೊಡುವುದು ಕಷ್ಟ. ಮೊದಲನೆಯದಾಗಿ, ಇದು ತಾತ್ಕಾಲಿಕ ಬೂಮ್ ಏನೂ ಅಲ್ಲ. ಬೆದರಿಕೆಯಾಗಲಿದೆಯೇ ಎನ್ನುವುದನ್ನೂ ಗಮನಿಸಬೇಕಿದೆ. AI ಎನ್ನುವುದು ಹೊಸದೇನಲ್ಲ. 1960ನೇ ಇಸವಿಯಿಂದಲೇ ಸಂಶೋಧನೆ ನಡೆಯುತ್ತಲೇ ಬಂದಿದೆ. ಹಲವು ವರ್ಷಗಳಿಂದ ಇದನ್ನು ಬಳಸುತ್ತಲೇ ಇದ್ದೇವೆ. ಕಂಪ್ಯೂಟ್ ಪವರ್ ಹೆಚ್ಚಾದಂತೆ, ಇದು ಇನ್ನಷ್ಟು ಅತ್ಯಾಧುನಿಕವಾಗಿದೆ. ಇದೀಗ ಅದರ ಅತ್ಯಾಧುನಿಕ ಆವೃತ್ತಿಯಾದ ಜನರೇಟಿವ್ AI ಮತ್ತು LLMಗಳು ಚಾಟ್ಜಿಪಿಟಿ ಹಾಗೂ ಜೆಮಿನೈ ರೂಪದಲ್ಲಿ ಮುನ್ನೆಲೆಗೆ ಬಂದಿವೆ. ಆದರೆ ಗೂಗಲ್ ಮ್ಯಾಪ್ಸ್ನಿಂದ ಹಿಡಿದು ನಾವು ಎಲ್ಲೆಡೆ AI ಅನ್ನೇ ಬಳಸುತ್ತಿದ್ದೇವೆ. ಹೀಗಾಗಿ ಇದು ಬಬಲ್ ಆಗಿ ಉಳಿದಿಲ್ಲ. ಬಹಳ ಸುಸ್ಥಿರವಾಗಿದೆ. ಒಂದು ಕಾಲದಲ್ಲಿ ವಿದ್ಯುತ್ ಮತ್ತು ಇಂಟರ್ನೆಟ್ ಇದ್ದ ಹಾಗೆ AI ಕೂಡ ಎಲ್ಲರಿಗೂ ಸಿಗುತ್ತಿದೆ ಮತ್ತು ಬಳಕೆಯಲ್ಲಿದೆ. ಹೀಗಾಗಿ ಇದು ಗುಳ್ಳೆಯಾಗಲು ಸಾಧ್ಯವಿಲ್ಲ.
ಪ್ರತಿಯೊಂದು ತಂತ್ರಜ್ಞಾನದಲ್ಲೂ ಅನುಕೂಲ ಮತ್ತು ಅನನುಕೂಲ ಇರುವುದು ಸಾರ್ವತ್ರಿಕ ಸತ್ಯ. ನಾವು ಯೋಚಿಸಬೇಕಾಗಿರುವುದು ಇದರ ಶಕ್ತಿಯ ಬಗ್ಗೆ. ಹಿಂದಿನ ಬಹಳಷ್ಟು ತಂತ್ರಜ್ಞಾನಗಳಿಗಿಂತ ಹೆಚ್ಚಿನ ಶಕ್ತಿ ಇದರಲ್ಲಿದೆ. ಅದರ ವ್ಯಾಪ್ತಿ ಮತ್ತು ಕೆಲವೇ ಕ್ಷಣಗಳಲ್ಲಿ ಅದು ಏನೇನೆಲ್ಲ ಮಾಡಬಹುದು ಎನ್ನುವುದನ್ನು ಗಮನಿಸಬೇಕಾಗುತ್ತದೆ.
►ಇಂತಹ ಒಂದು ತಂತ್ರಜ್ಞಾನಕ್ಕೆ ಜಗತ್ತು ಸಿದ್ಧವಾಗಿರಲಿಲ್ಲ ಎಂದು ಅನಿಸುತ್ತಿದೆಯೇ?
ತಂತ್ರಜ್ಞಾನ ಎನ್ನುವುದು ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಣುಬಾಂಬ್ ಗೆ ಜಗತ್ತು ಸಿದ್ಧವಾಗಿತ್ತೇ ಎನ್ನುವ ಪ್ರಶ್ನೆ ಬರುತ್ತದೆ. ಬಹಳಷ್ಟು ಸಲ ನಾವು ಸಿದ್ಧರಾಗಿರುವುದಿಲ್ಲ. ಇದೇ ಕ್ಷೇತ್ರದಲ್ಲಿ ಇದ್ದವರಿಗೂ ಇಷ್ಟು ವೇಗವಾಗಿ ಇದರ ಪ್ರಗತಿಯಾಗುವ ನಿರೀಕ್ಷೆ ಇರಲಿಲ್ಲ. ಹೀಗಾಗಿ ನಾವು ಪೂರ್ಣವಾಗಿ ತೆರೆದುಕೊಂಡಿದ್ದೇವೆಯೇ ಅಥವಾ ಸಿದ್ಧರಾಗಿದ್ದೇವೆಯೇ ಎನ್ನುವ ಪ್ರಶ್ನೆ ಬರುವುದು ಸಹಜ. ಇದರ ಧನಾತ್ಮಕ ಅಥವಾ ನಕಾರಾತ್ಮಕ ಸಾಧ್ಯತೆಗಳ ಬಗ್ಗೆಯೂ ನಮಗೆ ಇನ್ನೂ ತಿಳಿದಿಲ್ಲ. ಇದನ್ನು ಸೈಬರ್ ಭದ್ರತೆಗೆ ಬೆದರಿಕೆ ಎಂದೂ ಹೇಳಬಹುದು. ಆದರೆ AI ಬಂದ ಮೇಲೆ ಸೈಬರ್ ಭದ್ರತೆಯಲ್ಲಿನ ದೌರ್ಬಲ್ಯಗಳನ್ನು ಗುರುತಿಸಲು ಸಾಧ್ಯವಾಗಿದೆ. ಇತ್ತೀಚೆಗೆ ಎಷ್ಟು ವೆಬ್ ಸೈಟ್ ಗಳಲ್ಲಿ ಸಮಸ್ಯೆಗಳಿವೆ ಎನ್ನುವುದನ್ನೂ ತಿಳಿಸಿದೆ. ಕಂಪ್ಯೂಟ್ ಪವರ್ ಅಗಾಧವಾಗಿದೆ. ಹೀಗಾಗಿ ಅದು ಬೆದರಿಕೆಯಾಗಿ ಬದಲಾಗುವುದೇ ಎನ್ನುವುದು ನಮಗೇ ಬಿಟ್ಟಿದ್ದು.
►AI ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದರಿಂದ ಚೀನಾ ಮತ್ತು ಅಮೆರಿಕ ವಿಶ್ವದ ಮೇಲೆ ಪ್ರಾಬಲ್ಯ ಸಾಧಿಸಲಿವೆಯೇ?
ಎರಡೂ ರೀತಿಯಲ್ಲಿ ಕೆಲಸವಾಗುತ್ತದೆ. ಅವರು ಈಗಾಗಲೇ ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಪ್ರಾಬಲ್ಯ ಹೊಂದಿದ್ದ ಕಾರಣದಿಂದಲೇ AI ಅಲ್ಲಿ ಪ್ರಬಲವಾಗಿದೆ. AIನಲ್ಲಿ ಪ್ರಬಲವಾಗಿರುವ ಕಾರಣದಿಂದ ಇನ್ನಷ್ಟು ಪ್ರಾಬಲ್ಯ ಸಾಧಿಸಬಹುದು. ಅಂತಹ AI ಸೃಷ್ಟಿಸಬೇಕೆಂದರೆ ಮೂಲಸೌಕರ್ಯದ ಅಗತ್ಯವಿದೆ. ಹಣ ಮಾತ್ರವಲ್ಲ. ಚೀನಾದಲ್ಲಿ ಉತ್ಪಾದನಾ ಕ್ಷೇತ್ರ ಬಹಳ ಕಾಲದಿಂದ ಮುಂಚೂಣಿಯಲ್ಲಿದೆ. ಚಿಪ್ ಮ್ಯಾನುಫ್ಯಾಕ್ಚರಿಂಗ್ ಇದೆ. ಬಹಳ ಉತ್ತಮ ವಿಶ್ವವಿದ್ಯಾಲಯಗಳಿವೆ. ನಾವು ಪ್ರತಿಭಾ ಪಲಾಯನ ಎಂದು ಹೇಳುತ್ತಿದ್ದೇವೆಯೋ, ಅದು ಚೀನಾದಲ್ಲಿ ಹಿಮ್ಮುಖವಾಗಿದೆ. ಅಲ್ಲಿನ ಪ್ರತಿಭೆಗಳು ಅಮೆರಿಕದಲ್ಲಿ ಕಲಿತು ಮರಳಿ ದೇಶಕ್ಕೆ ಬಂದು ಇಲ್ಲಿಯೇ ನೆಲೆಸಿ ಉದ್ಯಮ ನಡೆಸುತ್ತಿದ್ದಾರೆ. AI ಬೆಳೆಯಲು ಪೂರಕವಾದ ಪರಿಸರವನ್ನು ಸೃಷ್ಟಿಸಿದ್ದಾರೆ. ಅಮೆರಿಕದಲ್ಲಿ ಸಿಲಿಕಾನ್ ವ್ಯಾಲಿ ಮೊದಲಿನಿಂದಲೂ ಮುಂಚೂಣಿಯಲ್ಲಿದ್ದು ಪ್ರಾಬಲ್ಯ ಸಾಧಿಸಿತ್ತು.
ಇನ್ನೊಂದು ರೀತಿಯ ಪ್ರಾಬಲ್ಯವನ್ನು ನಾವು ಗಮನಿಸಬೇಕು. ಇದೊಂದು ರೀತಿಯಲ್ಲಿ ಪ್ರಜಾಸತ್ತಾತ್ಮಕ ಬಲ ಎಂದು ಅನಿಸಬಹುದು. ಎಲ್ಲರೂ ಬಳಸಬಹುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಇಂತಹ ತಂತ್ರಜ್ಞಾನ ನಿರ್ಮಿಸುವ ಸಾಮರ್ಥ್ಯ ಇರುವುದು ಬೆರಳೆಣಿಕೆಯಷ್ಟು ಬೃಹತ್ ಕಂಪೆನಿಗಳಿಗೆ ಮಾತ್ರ. ಹೀಗಾಗಿ ಅವುಗಳೇ ಕೆಲವು ದೇಶಗಳನ್ನು ಮೀರಿ ಹೆಚ್ಚಿನ ಪ್ರಾಬಲ್ಯ ಹೊಂದಿವೆಯೇ ಎನ್ನುವ ಅನಿಸಿಕೆ ಮೂಡದೆ ಇರದು. ಅಂತಹ ಕಂಪೆನಿಗಳು ನಮ್ಮ ಸಮಾಜದ ಮೇಲೆ, ದೇಶದ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು ಎನ್ನುವುದನ್ನೂ ನೋಡಬೇಕಾಗುತ್ತದೆ.
►ಇತ್ತೀಚಿನ SBI ಡೇಟಾ ಸೋರಿಕೆ ಕುರಿತು ನಿಮ್ಮ ಅಭಿಪ್ರಾಯವೇನು? ಇಂತಹ ಬೆದರಿಕೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬ್ಯಾಂಕ್ ಗಳು ಯಾವ ಕ್ರಮಗಳನ್ನು ಕೈಗೊಳ್ಳಬೇಕು?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರಕರಣದಲ್ಲಿ ವಾಸ್ತವವಾಗಿ ತಾಂತ್ರಿಕವಾಗಿ ಏನು ಸಮಸ್ಯೆಯಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಡೇಟಾ ಸೋರಿಕೆ AIಗೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಅದನ್ನು ಮೀರಿದ ಸಮಸ್ಯೆಯೂ ಹೌದು. ಡೇಟಾ, ಅದರ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ನಮಗೆ ಅರಿವು ಬಹಳ ಕಡಿಮೆ ಇದೆ. ಡೇಟಾದ ರಕ್ಷಕರಾದ ಸಂಸ್ಥೆಗಳು ಮತ್ತು ಕಂಪೆನಿಗಳಿಗೆ ಅಗತ್ಯವಾಗಿ ಇರಬೇಕಾದ ಕಾಳಜಿ ಇಲ್ಲ. ಹಿಂದೆ ಆಧಾರ್ ಡೇಟಾ ಸೋರಿಕೆ ಮತ್ತು ಅದರ ಪರಿಣಾಮಗಳನ್ನು ನೋಡಿದ್ದೇವೆ. ಈಗ AI ಬಳಸಿಕೊಂಡು ನೈತಿಕ ಹ್ಯಾಕರ್ ಗಳು ಇಂತಹ ಸಮಸ್ಯೆಗಳಿವೆ ಎಂದು ತೋರಿಸುತ್ತಿದ್ದಾರೆ. ಇನ್ನು ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇದೆ. AI ಮಾತ್ರವಲ್ಲ, ಒಟ್ಟಾರೆ ಡೇಟಾ ಸುರಕ್ಷತೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.
ಸಮಸ್ಯೆ ಏನೆಂದರೆ, ಹೊಣೆಗಾರಿಕೆಯನ್ನು ಬಳಕೆದಾರರು ಮತ್ತು ಸಂಸ್ಥೆಗಳಿಗೆ ಬಿಡಲಾಗುತ್ತಿದೆ. ಸರ್ಕಾರ ಸ್ವತಃ ಜವಾಬ್ದಾರಿ ಹೊತ್ತಿರುವುದು ಬಹಳ ಕಡಿಮೆ. ವ್ಯವಸ್ಥಿತವಾಗಿ ಡೇಟಾ ಸೋರಿಕೆಯಾಗುವುದು ಒಂದು ಕಡೆಯಾದರೆ, ಚಿಕ್ಕಪುಟ್ಟ ಗೂಡಂಗಡಿಗಳಲ್ಲೂ ನಾವು ಮೊಬೈಲ್ ಸಂಖ್ಯೆಯನ್ನು ಕೊಡುತ್ತಿದ್ದೇವೆ. ಎಲ್ಲೆಡೆ ನಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಗಳನ್ನು ನೀಡುತ್ತಿದ್ದೇವೆ. ಅವು ಹೇಗೆ ಬಳಕೆಯಾಗುತ್ತಿವೆ ಎನ್ನುವುದು ನಮಗೆ ಗೊತ್ತಿಲ್ಲ. ಒಂದು ಸಮುದಾಯವಾಗಿ, ಸಾಮಾಜಿಕವಾಗಿ ಸಂಸ್ಥೆಗಳು ಎಚ್ಚೆತ್ತುಕೊಂಡು ಡೇಟಾ ಗೌಪ್ಯತೆಯ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.
►AI ಸೈಬರ್ ಭದ್ರತಾ ಕ್ಷೇತ್ರವನ್ನು ಹೇಗೆ ಬದಲಿಸುತ್ತಿದೆ? ಹಾಗೂ ಅದು ವ್ಯವಹಾರ ಸಂಸ್ಥೆಗಳು ಮತ್ತು ಗ್ರಾಹಕರಿಗೆ ಏಕೆ ಹೊಸ ಸವಾಲುಗಳನ್ನು ಉಂಟುಮಾಡುತ್ತಿದೆ?
ನಮ್ಮ ಬಹಳಷ್ಟು ಡೇಟಾ ಸರ್ಕಾರದ ಬಳಿಯೂ ಇದೆ. ಹೀಗಾಗಿ ಡೇಟಾ ಸುರಕ್ಷತೆ ಅಲ್ಲಿಂದಲೇ ಶುರುವಾಗಬೇಕು. ಹೊಣೆಗಾರಿಕೆಯನ್ನು ಕೊನೆಗೆ ಚಿಕ್ಕಪುಟ್ಟ ವ್ಯವಹಾರ ಸಂಸ್ಥೆಗಳು ಮತ್ತು ಗ್ರಾಹಕರ ಮೇಲೆ ಹಾಕಲಾಗುತ್ತಿದೆ. AI ಇರಲಿ ಅಥವಾ ಇಲ್ಲದಿರಲಿ, ನಾವು ಅದರ ಬಗ್ಗೆ ಚಿಂತಿಸಲೇಬೇಕು. AIನಿಂದ ಅನುಕೂಲಗಳೂ ಸಾಕಷ್ಟಿವೆ. AI ಗೌಪ್ಯತೆಯ ಸಮಸ್ಯೆಯನ್ನು ಬಹುಬೇಗನೇ ಬಹಿರಂಗಪಡಿಸಿಬಿಡುತ್ತದೆ. ಹಿಂದೆ ಹ್ಯಾಕರ್ ಗಳು ಬಹಳ ಕಷ್ಟಪಟ್ಟು ಸಿಸ್ಟಂಗಳಿಗೆ ಪ್ರವೇಶ ಪಡೆಯುತ್ತಿದ್ದರು. ಇದೀಗ AI ಮೂಲಕ ನಿಮಿಷಗಳಲ್ಲೇ ಅದನ್ನು ಮಾಡಬಹುದು. ಹಾಗಿದ್ದಾಗ ಇನ್ನೂ ಹೆಚ್ಚಿನ ಸುರಕ್ಷತೆಯ ಬಗ್ಗೆ ಗಮನ ಕೊಡಬೇಕಾಗುತ್ತದೆ. ಅದರ ಅರಿವೂ ಕಡಿಮೆ ಇದೆ. ಅದಕ್ಕಾಗಿ ಮೂಲಸೌಕರ್ಯ ರೂಪಿಸಿಕೊಳ್ಳಬೇಕೆಂದರೆ ಹಣದ ಅಗತ್ಯವೂ ಇದೆ. ಏನೇನು ಸಮಸ್ಯೆಗಳು ಉದ್ಭವಿಸುತ್ತವೆ ಎನ್ನುವುದರ ಬಗ್ಗೆ ಗಮನ ಕೊಡಬೇಕು ಮತ್ತು ಅದಕ್ಕೆ ತಕ್ಕಂತೆ ಸಿದ್ಧವಾಗಬೇಕಾಗುತ್ತದೆ.
►ಇತ್ತೀಚೆಗೆ ಗೂಗಲ್ ಮತ್ತು ಮೆಟಾದಂತಹ ಸಂಸ್ಥೆಗಳು ಏಜೆಂಟ್ ಗಳನ್ನು ಪರಿಚಯಿಸಿವೆ. ಆ ಏಜೆಂಟ್ ಗಳೂ ಭದ್ರತೆಗೆ ಆತಂಕ ಎಂದು ಅನಿಸುತ್ತಿಲ್ಲವೇ?
ಏಜೆಂಟ್ ಗಳ ಸುರಕ್ಷತೆ ಅವುಗಳನ್ನು ಸೃಷ್ಟಿಸಿದ ಕಂಪೆನಿಯ ಮೇಲಿರುತ್ತದೆ. ಕ್ರೆಡಿಟ್ ಕಾರ್ಡ್ ಅನ್ನು ಏಜೆಂಟ್ಗೆ ಕೊಡಬೇಕು ಎಂದು ಬಯಸಿದ್ದರೆ, ಅದಕ್ಕೆ ಗಾರ್ಡ್ರೈಲ್ ಹಾಕಿಕೊಳ್ಳಬಹುದು. ಏಜೆಂಟ್ ಗಳನ್ನು ಬಳಸುವಾಗ ಪ್ರತಿ ಹಣಕಾಸು ವ್ಯವಹಾರಕ್ಕೂ ಅನುಮೋದನೆ (Approval) ಪಡೆಯಬೇಕು ಎನ್ನುವ ಗಾರ್ಡ್ ರೈಲ್ ಹಾಕಿರಬೇಕು. ಅದನ್ನು ಹಾಕದೆ ಮಾಹಿತಿ ಕೊಟ್ಟುಬಿಟ್ಟರೆ ಅನಾಹುತವಾದೀತು. ಅದರಲ್ಲಿ ಲಾಜಿಕಲ್ ಎರರ್ ಇದ್ದು, ಮಿತಿಗಳನ್ನು ನಿಗದಿಪಡಿಸದಿದ್ದರೂ ಸಮಸ್ಯೆಯಾಗಬಹುದು. ಅನಿಯಂತ್ರಿತವಾಗಿ ಬಳಕೆಯಾಗಬಹುದು. ಏಜೆಂಟ್ಗೆ ನಾವು ನೀಡಿದ ಇನ್ಪುಟ್ನ ಗುಣಮಟ್ಟಕ್ಕೆ ಅನುಗುಣವಾಗಿ ಅದರಿಂದ ಔಟ್ಪುಟ್ ಪಡೆಯಬಹುದು.
ಗೂಗಲ್ ಮತ್ತು ಮೆಟಾದಂತಹ ದೊಡ್ಡ ಕಂಪೆನಿಗಳಿಗೆ ಮುಖ್ಯವಾಗಿ ಜನರ ಡೇಟಾ ಅಗತ್ಯವಿರುತ್ತದೆ. ಜಾಹೀರಾತು ಮತ್ತು ತರಬೇತಿ ಉದ್ದೇಶಗಳಿಗಾಗಿ ಡೇಟಾದ ಅಗತ್ಯವಿರುವುದರಿಂದ ಇಂತಹ ಟೂಲ್ ಗಳನ್ನು ಉಚಿತವಾಗಿ ಕೊಡಲಾಗುತ್ತದೆ. ನಮ್ಮ ಅನುಕೂಲಕ್ಕೆ ಹೆಚ್ಚು ಒತ್ತುಕೊಟ್ಟು, ಗೌಪ್ಯತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಸುಲಭವಾಗಿ ಡೇಟಾ ಕೊಡುತ್ತೇವೆ. ಸರ್ಕಾರ ಮತ್ತು ಕಾರ್ಪೊರೇಟ್ ಸಂಸ್ಥೆಗಳನ್ನು ಒಂದಷ್ಟು ಮಟ್ಟಿಗೆ ಸಂಶಯದಿಂದ ನೋಡಲೇಬೇಕಾಗುತ್ತದೆ. ಅವು ಸೌಲಭ್ಯ ಕೊಡುವಾಗ ಜನರಿಗೆ ಅನುಕೂಲವೆನಿಸುವಂತಹದ್ದನ್ನು ಮಾಡುತ್ತಿರುತ್ತವೆ.
►ಓಪನ್ ಎಐ ಯಂತಹ ಸಂಸ್ಥೆಗಳು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿರುವ ಸಂದರ್ಭದಲ್ಲಿ, ವೈದ್ಯಕೀಯ ನಾವೀನ್ಯತೆಯ ಪ್ರಮುಖ ಚಾಲಕಶಕ್ತಿಯಾಗಿ AI ಹೊರಹೊಮ್ಮುವ ಹೊಸ ಯುಗಕ್ಕೆ ನಾವು ಪ್ರವೇಶಿಸುತ್ತಿದ್ದೇವೆಯೇ?
ಉದಾಹರಣೆಗೆ, 2016ರಲ್ಲಿ ಫೇಸ್ ಬುಕ್ ಗೆ ಸಂಬಂಧಿಸಿದ ಸಂಶೋಧನೆಗಳು ಹದಿಹರೆಯದವರಲ್ಲಿ ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳನ್ನು ತರುವ ಅಪಾಯವಿದೆ ಎಂದು ಕಂಡುಕೊಂಡಿದ್ದವು. ಆದರೆ ಅದಕ್ಕೆ ಸಂಸ್ಥೆ ಪ್ರಾಶಸ್ತ್ಯ ನೀಡಲಿಲ್ಲ. AI ಬಂದ ಮೇಲೆ ಇದೀಗ ಮಕ್ಕಳು ಹೋಂವರ್ಕ್ ಮಾಡಲೂ ಜೆಮಿನೈ ಬಳಸುತ್ತಿರುವಾಗ ದೊಡ್ಡ ಬಿಕ್ಕಟ್ಟು ಈಗಾಗಲೇ ಉಂಟಾಗುತ್ತಿದೆ ಅಥವಾ ಮುಂದೆ ಉಂಟಾಗುವ ಸಾಧ್ಯತೆಯಿದೆ. ಯಾವುದು ನಾವು ಗಳಿಸಿದ ಜ್ಞಾನ ಮತ್ತು ಯಾವುದು AI ಕೊಡುವ ಜ್ಞಾನ ಎನ್ನುವ ಬಿಕ್ಕಟ್ಟು ಎದುರಾಗಬಹುದು. ಮುಂದುವರಿದು ಗಮನಿಸಿದರೆ, ಇಂಟೆಲಿಜೆನ್ಸ್ ಎನ್ನುವುದೇ ಸರಕಾದಲ್ಲಿ ಮನುಷ್ಯನ ಅಸ್ತಿತ್ವದ ಪ್ರಶ್ನೆ ಬರುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಜೈವಿಕ ತಂತ್ರಜ್ಞಾನದ ವಿಚಾರಕ್ಕೆ ಬಂದರೆ, ಕಂಪ್ಯೂಟ್ ಪವರ್ ಮೂಲಕ ಮನುಷ್ಯರು ಕೆಲವು ವರ್ಷಗಳನ್ನು ತೆಗೆದುಕೊಂಡು ಕಂಡುಹಿಡಿಯಬಹುದಾದ ಪ್ಯಾಟರ್ನ್ಗಳನ್ನು ಕ್ಷಣಾರ್ಧದಲ್ಲಿ ಹುಡುಕಬಹುದು. ಅಂತಹ ಶಕ್ತಿ ಯಾರ ಕೈಯಲ್ಲಿರುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಓಪನ್ಎಐ ಎನ್ನುವ ಹೆಸರಿದೆ. ಆದರೆ ಅದು ನಿಜವಾಗಿಯೂ ಓಪನ್ ಆಗಿದೆಯೇ? ಇದು ಹೆಚ್ಚು ಮುಕ್ತವಾಗಬೇಕು ಎನ್ನುವ ಬೇಡಿಕೆಗಳಿವೆ. ಅದು ಆಗಬೇಕು. ಅಂತಿಮವಾಗಿ ಸರ್ಕಾರ ಮತ್ತು ಕಂಪೆನಿಗಳನ್ನು ನಂಬಲು ಸಾಧ್ಯವಿಲ್ಲ. ಶಕ್ತಿ ಎನ್ನುವುದು ಬಂದಾಗ ಯಾವುದು ಸರಿ ಅಥವಾ ತಪ್ಪು ಎನ್ನುವ ಸೀಮೆಗಳು ಸ್ವತಃ ಅವರಿಗೇ ತಿಳಿದಿರುವುದಿಲ್ಲ. ಆಂಥ್ರೋಪಿಕ್ ತನ್ನ ನೂತನ ಆವೃತ್ತಿಯನ್ನು ಬಳಸಲು ಇತರ ದೇಶಗಳಿಗೆ ಅವಕಾಶ ಕೊಟ್ಟಿಲ್ಲ. ಕೊನೆಯಲ್ಲಿ ಹೇಳುವುದಾದರೆ, ನಾವು ಎಚ್ಚೆತ್ತುಕೊಂಡು ಎಷ್ಟರ ಮಟ್ಟಿಗೆ ಅರಿವು ಮೂಡಿಸಿಕೊಂಡು ಒತ್ತಡ ಹಾಕುತ್ತೇವೆ ಎನ್ನುವುದನ್ನು ಅವಲಂಬಿಸಿದೆ.






