ಕ್ರಿಯೇಟಿನ್ ಮೂತ್ರ ಪಿಂಡಗಳಿಗೆ ಹಾನಿಕರ; ವ್ಯಾಯಾಮ ಪೌಷ್ಠಿಕತೆಗೆ ಸಂಬಂಧಿಸಿದ ಐದು ಸಾಮಾನ್ಯ ಮಿಥ್ಯೆಗಳ ಬಗ್ಗೆ ತಜ್ಞರ ಅಭಿಪ್ರಾಯವೇನು?

ಸಾಂದರ್ಭಿಕ ಚಿತ್ರ | Photo Credit : magnific
ಹಿರಿಯ ಆಹಾರ ತಜ್ಞೆಯಾಗಿರುವ ಡಾ. ದಿವ್ಯಾ ಪಟೇಲ್ ಅವರು ವ್ಯಾಯಾಮ ಪೌಷ್ಟಿಕತೆಗೆ ಸಂಬಂಧಿಸಿದ ಐದು ಮಿಥ್ಯೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಆಹಾರದ ಜೊತೆಗೆ ಪೂರಕ ಔಷಧಿಗಳು ಅಥವಾ ಸಪ್ಲಿಮೆಂಟ್ಗಳನ್ನು ಸೇವಿಸುವುದು ಪ್ಯಾಷನ್ ಆಗಿದೆ ಅಥವಾ ನಿತ್ಯ ಜೀವನದ ಮಾಂತ್ರಿಕ ಶಾರ್ಟ್ಕಟ್ಗಳಾಗಿವೆ. ಆದರೆ ಪೌಷ್ಟಿಕ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ? ಸೂರತ್ನ ಬ್ಯಾಲೆನ್ಸ್ ಡಯಟ್ ಆಂಡ್ ಲೈಫ್ಸ್ಟೈಲ್ ಮಾಡಿಫಿಕೇಶನ್ ಕ್ಲಿನಿಕ್ನ ಸಂಸ್ಥಾಪಕ ನಿರ್ದೇಶಕರು ಹಾಗೂ ರಿವರ್ಸ್ ಡಿಸೀಸ್ನ ಹಿರಿಯ ಆಹಾರ ತಜ್ಞೆಯಾಗಿರುವ ಡಾ. ದಿವ್ಯಾ ಪಟೇಲ್ ಅವರು ವ್ಯಾಯಾಮ ಪೌಷ್ಟಿಕತೆಗೆ ಸಂಬಂಧಿಸಿದ ಐದು ಮಿಥ್ಯೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಿಥ್ಯೆ 1: ಆರೋಗ್ಯಕರ ಆಹಾರದ ಬದಲಿಗೆ ಸಪ್ಲಿಮೆಂಟ್ಗಳನ್ನು ಬಳಸಬಹುದು
ಆರೋಗ್ಯಕರ ವ್ಯಕ್ತಿಗೆ ಸಪ್ಲಿಮೆಂಟ್ಗಳನ್ನು ಬಳಸುವ ಅಗತ್ಯವಿರುವುದಿಲ್ಲ. ಅವರಿಗೆ ಆರೋಗ್ಯಕರ ಆಹಾರ ಪದ್ಧತಿಯನ್ನು ನಾವು ಸೂಚಿಸಬಹುದು. ಅವರು ಸಪ್ಲಿಮೆಂಟ್ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಆದರೆ ಇದೀಗ ಹೊಸ ಟ್ರೆಂಡ್ ಬಂದಿದೆ. ಋತುಬಂಧದ ಹಂತದಲ್ಲಿ ನಾನು ಸಪ್ಲಿಮೆಂಟ್ ತೆಗೆದುಕೊಳ್ಳಲೇಬೇಕಿದೆ ಎನ್ನುವ ನಂಬಿಕೆ ಮೂಡುತ್ತಿದೆ. ಹೀಗೆ ವಿವಿಧ ಆರೋಗ್ಯ ಹಂತಗಳಲ್ಲಿ ಈ ಮನೋಸ್ಥಿತಿ ಬೆಳೆಯುತ್ತಿದೆ. ಆದರೆ ಆರಂಭದಿಂದಲೇ ಆರೋಗ್ಯಕರ ಆಹಾರ ಸೇವಿಸಿದರೆ ಸಪ್ಲಿಮೆಂಟ್ಗಳ ಅಗತ್ಯವಿರುವುದಿಲ್ಲ. ಪಾರ್ಶ್ವವಾಯು ಇದ್ದವರು ಮತ್ತು ಮೌಖಿಕವಾಗಿ ಆಹಾರ ಸೇವನೆ ಕಷ್ಟವಾದವರಿಗೆ ಸಪ್ಲಿಮೆಂಟ್ಗಳ ಅಗತ್ಯವಿದೆ. ಆದರೆ ಮೌಖಿಕವಾಗಿ ಆಹಾರ ಸೇವನೆ ಮಾಡಬಲ್ಲವರಿಗೆ ಸಪ್ಲಿಮೆಂಟ್ಗಳ ಅಗತ್ಯವಿರುವುದಿಲ್ಲ.
ನಮ್ಮ ಹಿಂದಿನ ತಲೆಮಾರುಗಳನ್ನು ನೋಡಿದರೆ ಸಪ್ಲಿಮೆಂಟ್ಗಳೇ ಇರಲಿಲ್ಲ. ಹಾಗಿದ್ದರೂ ಅವರು ಉತ್ತಮ ಜೀವನ ನಡೆಸುತ್ತಿದ್ದರು. ಹೆಚ್ಚು ರೋಗಗಳೂ ಇರಲಿಲ್ಲ. ಆರೋಗ್ಯಕರ ಜೀವನಶೈಲಿ ಇತ್ತು, ಆರೋಗ್ಯಕರ ಆಹಾರ ಸೇವಿಸುತ್ತಿದ್ದರು. ಈಗ ಸಪ್ಲಿಮೆಂಟ್ಗಳನ್ನು ಮಾರಾಟ ಮಾಡಲು ಮಾರುಕಟ್ಟೆಯಲ್ಲಿ ಬಹಳಷ್ಟು ಕಂಪೆನಿಗಳು ಬಂದಿದ್ದು, ಜನರ ಬ್ರೇನ್ವಾಷ್ ಮಾಡಿ ಸಪ್ಲಿಮೆಂಟ್ ಅಗತ್ಯವಿದೆಯೇ ಇಲ್ಲವೇ ಎಂದು ಗಮನಿಸದೆಯೇ ಕೊಡಲಾಗುತ್ತಿದೆ. ಕೆಲವೊಮ್ಮೆ ರಕ್ತ ಪರೀಕ್ಷೆಯನ್ನೂ ಮಾಡದೆಯೇ ನೀಡಲಾಗುತ್ತದೆ. ಋತುಬಂಧದ ಹಂತ ಬಂದಿದೆ ಎಂದರೆ ಈ ಸಪ್ಲಿಮೆಂಟ್ ನಿಮಗೆ ಅಗತ್ಯ ಎಂದು ಹೇಳಿ ಕೊಡಲಾಗುತ್ತಿದೆ. ಸಪ್ಲಿಮೆಂಟ್ ತೆಗೆದುಕೊಳ್ಳುವ ಮೊದಲು ತಜ್ಞರ ಬಳಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿರುತ್ತದೆ.
ಮಿಥ್ಯೆ 2: ಹೆಚ್ಚು ಪ್ರೊಟೀನ್ ಸೇವಿಸಿದರೆ, ಸ್ನಾಯುಗಳು ಹೆಚ್ಚು ಬಲಿಷ್ಠವಾಗುತ್ತವೆ
ತೂಕ ಮತ್ತು ವರ್ಕೌಟ್ ಅನ್ನು ಗಮನಿಸಿ ಪ್ರೊಟೀನ್ನ ಅಗತ್ಯವನ್ನು ಪರಿಗಣಿಸಲಾಗುತ್ತದೆ. ನೀವು ಎಷ್ಟು ವರ್ಕೌಟ್ ಮಾಡುತ್ತೀರಿ ಮತ್ತು ನಿಮ್ಮ ತೂಕ ಎಷ್ಟಿದೆ ಎನ್ನುವುದನ್ನು ಗಮನಿಸಿ ಪ್ರೊಟೀನ್ ನೀಡಲಾಗುತ್ತದೆ. ಆದರೆ ಈಗಿನ ಯುವಕರು ನನಗೆ ಪ್ರೊಟೀನ್ ಅಗತ್ಯವಿದೆ ಎಂದುಕೊಂಡು ಪ್ರೊಟೀನ್ ಪೌಡರ್ ಸೇವಿಸುತ್ತಾರೆ. ಆದರೆ ವರ್ಕೌಟ್ ಮಾಡುವುದಿಲ್ಲ. ತಜ್ಞರ ಸಲಹೆಯನ್ನೂ ಪಡೆಯುವುದಿಲ್ಲ. ಹೀಗಾಗಿ ಪ್ರೊಟೀನ್ ಸೇವನೆ ಹೆಚ್ಚಾದರೆ ಕಿಡ್ನಿ ಸಮಸ್ಯೆ ಕಂಡುಬರಬಹುದು. ಯುವಜನರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಪ್ರೊಟೀನ್ ಬಗ್ಗೆ ಸ್ವಲ್ಪ ಜ್ಞಾನ ಪಡೆದು ನಂತರ ಸೇವಿಸಿದರೆ ಸಮಸ್ಯೆಯಾಗದು.
ಸಾಮಾನ್ಯವಾಗಿ ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಜನಸಾಮಾನ್ಯರು ಹೊಟ್ಟೆಯೂ BMI (ಬಾಡಿ ಮಾಸ್ ಇಂಡೆಕ್ಸ್) ಸಹಜ ಮಿತಿಯಲ್ಲಿ ಇದ್ದರೆ ಅವರ ಪ್ರೊಟೀನ್ ಅಗತ್ಯವನ್ನು ಆರೋಗ್ಯಕರ ಆಹಾರದಿಂದಲೇ ಪೂರೈಸಬಹುದು. ಡೈರಿ ಉತ್ಪನ್ನಗಳಾದ ಪನ್ನೀರ್, ಮೊಸರು ಮೊದಲಾದವು ಸೇವಿಸಿದರೆ ಸಾಕಾಗುತ್ತದೆ. ಸ್ನಾಯುಗಳನ್ನೂ ಬೆಳೆಸಿಕೊಳ್ಳಬಹುದು.
ಮಿಥ್ಯೆ 3: ಕ್ರಿಯೇಟಿನ್ ಮೂತ್ರಪಿಂಡಗಳಿಗೆ ಹಾನಿಕರ
ಈಗ ಮಾರುಕಟ್ಟೆಯಲ್ಲಿ ವಿವಿಧ ಸಪ್ಲಿಮೆಂಟ್ಗಳನ್ನು ತರಲಾಗುತ್ತಿದೆ. ಅವುಗಳನ್ನು ತೆಗೆದುಕೊಂಡರೆ ನಿಮ್ಮ ಮೂತ್ರಪಿಂಡದ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವ ಪ್ರಚಾರ ಮಾಡಲಾಗುತ್ತದೆ. ಆದರೆ ತಜ್ಞರ ಸಲಹೆ ಇಲ್ಲದೆ ಪ್ರೊಟೀನ್ ಪೌಡರ್ ತೆಗೆದುಕೊಳ್ಳುತ್ತಿದ್ದರೆ, ವರ್ಕೌಟ್ ಮಾಡದೆ ಇದ್ದರೆ, ಕ್ರಿಯೇಟಿನ್ ಮಟ್ಟ ಸ್ವಲ್ಪ ಸ್ವಲ್ಪವೇ ಏರುವುದು ಚಿಕ್ಕ ವಯಸ್ಸಿನಲ್ಲಿಯೇ ಕಂಡುಬರುತ್ತದೆ. ಧೂಮಪಾನ ಅಥವಾ ಮದ್ಯಪಾನ ಮಾಡದೆ ಇದ್ದರೂ ಕ್ರಿಯೇಟಿನ್ ಮಟ್ಟ ಏರುತ್ತದೆ ಎಂದಾದಲ್ಲಿ, ಅವರು ಅಧಿಕ ಪ್ರಮಾಣದಲ್ಲಿ ಪ್ರೊಟೀನ್ ಪೌಡರ್ ತೆಗೆದುಕೊಂಡಿರುವುದು ರೋಗಿಯ ವೈದ್ಯಕೀಯ ಇತಿಹಾಸದಲ್ಲಿ ಕಂಡುಬರುತ್ತದೆ. ಕ್ರಿಯೇಟಿನ್-ಮುಕ್ತ ಸಪ್ಲಿಮೆಂಟ್ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಅದರಲ್ಲಿ ವಾಸ್ತವ ಎಷ್ಟಿದೆ ಎನ್ನುವುದು ನನಗೆ ಗೊತ್ತಿಲ್ಲ.
ಪೌಷ್ಟಿಕ ತಜ್ಞೆಯಾಗಿ ನಾನು ಸಪ್ಲಿಮೆಂಟ್ಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಸಂಪೂರ್ಣವಾಗಿ ವಿರುದ್ಧವಾಗಿರುವೆ. ಸಾಧ್ಯವಾದಷ್ಟು ನಿಮ್ಮ ಅಡುಗೆ ಮನೆಯಲ್ಲಿಯೇ ನಿಮ್ಮ ಔಷಧಿ ಸಿದ್ಧಪಡಿಸಬೇಕಾಗುತ್ತದೆ. ಬ್ರೇನ್ ಸ್ಟ್ರೋಕ್, ಕ್ಯಾನ್ಸರ್ ರೋಗಿಗಳು ಮೊದಲಾಗಿ ಮೌಖಿಕವಾಗಿ ಆಹಾರ ಸೇವನೆ ಸಾಧ್ಯವಾಗದವರಿಗೆ ಮಾತ್ರ ಸಪ್ಲಿಮೆಂಟ್ಗಳ ಅಗತ್ಯವಿದೆ. ಮುಖ್ಯವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳದೆ ಯಾವುದೇ ಸಪ್ಲಿಮೆಂಟ್ಗಳನ್ನು ತೆಗೆದುಕೊಳ್ಳಲೇಬಾರದು.
ಮಿಥ್ಯೆ 4: ವ್ಯಾಯಾಮಕ್ಕೂ ಮುನ್ನ ಬಳಸುವುದೆಲ್ಲವೂ ಕೆಫೀನ್ ಆಗಿರುತ್ತವೆ
ಎಲ್ಲಾ ವ್ಯಾಯಾಮಕ್ಕೂ ಮುನ್ನ ಸೇವಿಸುವ ಸಪ್ಲಿಮೆಂಟ್ಗಳು ಕೆಫೀನ್ ಮಾತ್ರ ಎಂದು ಹೇಳಲು ಸಾಧ್ಯವಿಲ್ಲ. ವ್ಯಾಯಾಮಕ್ಕೂ ಮುನ್ನ ಸೇವಿಸುವ ಸಪ್ಲಿಮೆಂಟ್ಗಳನ್ನು ಸಾಧ್ಯವಿರುವವರು ತೆಗೆದುಕೊಳ್ಳುತ್ತಿರಬಹುದು. ಅಂದರೆ ಅದಕ್ಕೆ ಹಣ ಸುರಿಯುವ ಸಾಮರ್ಥ್ಯ ಇರುವವರು ತೆಗೆದುಕೊಳ್ಳುತ್ತಿರಬಹುದು. ಆದರೆ ನಿಯಮಿತವಾಗಿ ತೆಗೆದುಕೊಳ್ಳಬಾರದು. ಕೆಲವೊಮ್ಮೆ ಇದನ್ನು ಸೇವಿಸಿದರೇ ನನ್ನ ದೇಹ ಚೆನ್ನಾಗಿರುತ್ತದೆ. ಇದರಿಂದಲೇ ನಾನು ಕೆಲಸ ಮಾಡಲು ಸಾಧ್ಯ ಎನ್ನುವ ಮನೋಸ್ಥಿತಿ ಇರುವವರಲ್ಲಿ ಕೆಫೀನ್ ಮೇಲಿನ ಅವಲಂಬನೆ ಉಂಟಾಗಬಹುದು. ಈ ಬಗ್ಗೆ ಹೆಚ್ಚು ಆಳವಾದ ವಿವರ ನನ್ನ ಬಳಿ ಇಲ್ಲ. ಆದರೆ ಬಹಳ ವರ್ಷಗಳಿಂದ ಇವುಗಳನ್ನು ಸೇವಿಸುವವರ ಮನದಲ್ಲಿ ಕೆಫೀನ್ ತರಹದ ಭಾವನೆ ಬಂದಿರುವುದನ್ನು ನಾನು ಗಮನಿಸಿದ್ದೇನೆ.
ವೈಯಕ್ತಿಕ ಅನುಭವದಿಂದ ಹೇಳುವುದೆಂದರೆ, ರೋಗಿಗಳನ್ನು ಮಾರುಕಟ್ಟೆ ಕಾರ್ಯತಂತ್ರಜ್ಞರು ಬ್ರೇನ್ವಾಷ್ ಮಾಡಿರುವಾಗ ಸಪ್ಲಿಮೆಂಟ್ ತೆಗೆದುಕೊಂಡ ತಕ್ಷಣ ಎಲ್ಲ ಸಮಸ್ಯೆಗಳೂ ಸರಿಯಾಗಿವೆ ಎನ್ನುವ ಭಾವನೆ ಬರುತ್ತದೆ. ವಿಟಮಿನ್ಗಳನ್ನು ತೆಗೆದುಕೊಳ್ಳುವುದು ಸರಿ. ಆದರೆ ತೂಕ ಇಳಿಸಿಕೊಳ್ಳಲೆಂದು ಪೌಡರ್ ಮೊದಲಾದ ಸಪ್ಲಿಮೆಂಟ್ ತೆಗೆದುಕೊಳ್ಳುವವರು, ನಂತರ ಅದನ್ನು ತೊರೆದಾಗ ಅವರ ತೂಕ ಇನ್ನಷ್ಟು ಹೆಚ್ಚಾಗುತ್ತದೆ.
ಮಿಥ್ಯೆ 5: ನೈಸರ್ಗಿಕ ಎಂದರೆ ಯಾವಾಗಲೂ ಸುರಕ್ಷಿತ ಎಂದರ್ಥ
ಪೌಷ್ಟಿಕ ತಜ್ಞೆಯಾಗಿ ನನ್ನ ಅನುಭವದಲ್ಲಿ ಹೇಳುವುದಾದರೆ, ನಿಮ್ಮ ಅಡುಗೆ ಮನೆಯೇ ನಿಮ್ಮ ಔಷಧಿ. ಪ್ರತಿ ಬಾರಿ ನಾನು ರೋಗಿಗೆ ಇದನ್ನೇ ಹೇಳುತ್ತೇನೆ. ಸಪ್ಲಿಮೆಂಟ್ಗಳ ಅಗತ್ಯವಿಲ್ಲದಿದ್ದರೂ ಅದನ್ನು ತೆಗೆದುಕೊಳ್ಳುತ್ತಿದ್ದೀರಿ. ನನ್ನ ಬಳಿ ವ್ಯಾಯಾಮಕ್ಕೆ ಅಥವಾ ಬೇರೆ ವಿಷಯಗಳಿಗೆ ಸಮಯವಿಲ್ಲ ಎಂದು ಹೇಳಿ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಾರೆ. ಆದರೆ ಸಪ್ಲಿಮೆಂಟ್ನಲ್ಲಿರುವ ಅದೇ ಅಂಶಗಳನ್ನು ನೀವು ನೇರವಾಗಿ ಅಡುಗೆ ಮನೆಯಿಂದ ಪಡೆಯಬಹುದು. ನೈಸರ್ಗಿಕವಾದ ಆಹಾರವನ್ನೇ ಸೇವಿಸಿ ಎನ್ನುವುದೇ ನನ್ನ ಸಲಹೆಯಾಗಿದೆ.






