BRICS ದೇಶಗಳು ಯುಎಸ್ ಡಾಲರ್ ಅನ್ನು ಕೈಬಿಡಲು ಚಿಂತನೆ ನಡೆಸಿವೆಯೇ?; ಭಾರತ, ಚೀನಾ ಮತ್ತು ರಷ್ಯಾದ ನಿಲುವೇನು?

Photo Credit : facebook
ಬ್ರಿಕ್ಸ್ ದೇಶಗಳು ಯುಎಸ್ ಡಾಲರ್ ಅನ್ನು ಕೈಬಿಡಲು (de-dollarisation) ಯೋಚಿಸುತ್ತಿವೆಯೇ? ಈ ಒಕ್ಕೂಟ ಡಾಲರ್ ಸ್ಥಾನವನ್ನು ಬದಲಾಯಿಸಬಲ್ಲದೇ? ಈ ವಾರಾಂತ್ಯದಲ್ಲಿ ಹೊಸದಿಲ್ಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಬ್ರಿಕ್ಸ್ ನಾಯಕರು ಸೇರುತ್ತಿರುವಂತೆ ಈ ಪ್ರಮುಖ ಪ್ರಶ್ನೆಗಳು ಮುಂಚೂಣಿಗೆ ಬರುವ ನಿರೀಕ್ಷೆಯಿದೆ.
2025ರ ಬ್ರಿಕ್ಸ್ ಘೋಷಣೆಯು ಯುಎಸ್ ಡಾಲರ್ ಅನ್ನು ನೇರವಾಗಿ ಉಲ್ಲೇಖಿಸಿಲ್ಲ. ಬದಲಿಗೆ, ಗಡಿಯಾಚೆಗಿನ ವ್ಯಾಪಾರ ಮತ್ತು ಹಣಕಾಸಿನಲ್ಲಿ ಡಾಲರ್ ಪ್ರಾಬಲ್ಯದ ಮೇಲಿನ ಅವಲಂಬನೆಯನ್ನು ಕ್ರಮೇಣ ಕಡಿಮೆ ಮಾಡುವ ಒಕ್ಕೂಟದ ವಿಶಾಲ ಪ್ರಯತ್ನಗಳ ಸಂಕೇತವಾಗಿ “ಸ್ಥಳೀಯ ಕರೆನ್ಸಿಗಳಲ್ಲಿ ಹಣಕಾಸು ಒದಗಿಸುವ ಸ್ವೀಕಾರಾರ್ಹ ವ್ಯವಸ್ಥೆಗಳಿಗೆ” ಕರೆ ನೀಡಿದೆ.
ಶನಿವಾರ (ಸೆಪ್ಟೆಂಬರ್ 12) ಮತ್ತು ರವಿವಾರ (ಸೆಪ್ಟೆಂಬರ್ 13) ಶೃಂಗಸಭೆಯನ್ನು ಆಯೋಜಿಸುತ್ತಿರುವ ಭಾರತವು, ತನ್ನ ಬ್ರಿಕ್ಸ್ ಪಾಲುದಾರರೊಂದಿಗೆ ಡಾಲರ್ ಮುಕ್ತಗೊಳಿಸುವಿಕೆಯ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಏತನ್ಮಧ್ಯೆ ಸಾಮಾನ್ಯ ಬ್ರಿಕ್ಸ್ ಕರೆನ್ಸಿ ಅಥವಾ ಡಾಲರ್ ಅನ್ನು ಬದಲಿಸುವ ಉದ್ದೇಶಪೂರ್ವಕ ಅಜೆಂಡಾವನ್ನು ತಾನು ಬೆಂಬಲಿಸುವುದಿಲ್ಲ ಎಂದು ಭಾರತ ಹಲವಾರು ಬಾರಿ ಸ್ಪಷ್ಟಪಡಿಸಿದೆ.
ಬ್ರಿಕ್ಸ್ ಯುಎಸ್ ಡಾಲರ್ ಬಗ್ಗೆ ಏನು ಹೇಳಿದೆ?
2025ರಲ್ಲಿ, ವಿಶ್ವದ ಪ್ರಮುಖ ಕರೆನ್ಸಿಯಾಗಿ ಯುಎಸ್ ಡಾಲರ್ ಅನ್ನು ಬದಲಾಯಿಸಬೇಕು ಎಂದು ಈ ಒಕ್ಕೂಟವು ನೇರವಾಗಿ ಒತ್ತಾಯಿಸಲಿಲ್ಲ.
ಬಾಕಿ ಉಳಿದಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗಾಗಿ ಹೊಸ ಹಣಕಾಸು ಪದ್ಧತಿಗಳು ಹಾಗೂ ವಿಧಾನಗಳನ್ನು ಸುಲಭಗೊಳಿಸುವುದು ಮತ್ತು ವಿಸ್ತರಿಸುವತ್ತ ಬ್ರಿಕ್ಸ್ ಇಂಟರ್ಬ್ಯಾಂಕ್ ಸಹಕಾರ ಕಾರ್ಯವಿಧಾನವು ಗಮನಹರಿಸುವುದನ್ನು ಒಕ್ಕೂಟದ ನಾಯಕರು ಸ್ವಾಗತಿಸಿದ್ದಾರೆ ಎಂದು 2025ರ ಶೃಂಗಸಭೆಯ ಹೇಳಿಕೆಯು ತಿಳಿಸಿದೆ.
ಇದು ಸಾಮಾನ್ಯ ಬ್ರಿಕ್ಸ್ ಕರೆನ್ಸಿಯನ್ನು ಪ್ರಸ್ತಾಪಿಸುವ ಅಥವಾ ಯುಎಸ್ ಡಾಲರ್ ಅನ್ನು ಸಂಪೂರ್ಣವಾಗಿ ಬದಲಿಸುವ ಬದಲು, ವ್ಯಾಪಾರ ಮತ್ತು ಹಣಕಾಸು ವಹಿವಾಟುಗಳಲ್ಲಿ ರಾಷ್ಟ್ರೀಯ ಕರೆನ್ಸಿಗಳ ಬಳಕೆಯನ್ನು ವಿಸ್ತರಿಸುವ ಒಕ್ಕೂಟದ ವಿಶಾಲ ಅಜೆಂಡಾವನ್ನು ಎತ್ತಿ ತೋರಿಸಿದೆ.
ಡಾಲರ್ ಮುಕ್ತಗೊಳಿಸುವಿಕೆಯ ಬಗ್ಗೆ ಭಾರತದ ನಿಲುವು ಏನು?
'ಸಾಮಾನ್ಯ ಬ್ರಿಕ್ಸ್ ಕರೆನ್ಸಿ ನೀತಿ'ಯ ವಿಷಯದಲ್ಲಿ ಭಾರತವು ಹೆಚ್ಚು ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದನ್ನು ಭಾರತ ಬೆಂಬಲಿಸಿದೆ. ಆದರೆ ಇದು ಎಂದಿಗೂ ಪ್ರತ್ಯೇಕ ಬ್ರಿಕ್ಸ್ ಕರೆನ್ಸಿಯ ಪರ ವಹಿಸಿಲ್ಲ.
ಡಾಲರ್ ಅನ್ನು ಬದಲಿಸುವುದು ಭಾರತದ ನೀತಿಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಕಳೆದ ವರ್ಷ ಹೇಳಿದ್ದರು.
"ಡಾಲರ್ ಅನ್ನು ಬದಲಿಸುವ ಯಾವುದೇ ನೀತಿ ನಮ್ಮ ಕಡೆಯಿಂದ ಇದೆ ಎಂದು ನಾನು ಭಾವಿಸುವುದಿಲ್ಲ" ಎಂದು ಜೈಶಂಕರ್ ಹೇಳಿದ್ದಾರೆ. ವಿಶ್ವದ ಮೀಸಲು ಕರೆನ್ಸಿಯಾಗಿ ಡಾಲರ್ನ ಪಾತ್ರವು ಜಾಗತಿಕ ಆರ್ಥಿಕ ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿರುವುದಾಗಿ 'ನ್ಯೂಸ್ 18' ವರದಿ ಮಾಡಿದೆ.
ಅಮೆರಿಕದೊಂದಿಗೆ ನಿರಂತರ ಸಹಕಾರದಲ್ಲಿ ಭಾರತವು ನಂಬಿಕೆ ಹೊಂದಿದೆ ಮತ್ತು ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ಹಣಕಾಸು ಹಾಗೂ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವುದು ಮುಂಚೂಣಿಯಲ್ಲಿರಬೇಕು ಎಂದು ಅವರು ತಿಳಿಸಿದರು.
ಆಗಸ್ಟ್ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕೂಡ ಇದೇ ಮಾತನ್ನು ಪ್ರತಿಧ್ವನಿಸಿದರು. ಭಾರತವು ಪ್ರತ್ಯೇಕ ಬ್ರಿಕ್ಸ್ ಕರೆನ್ಸಿಯ ಪರ ಇಲ್ಲ ಎಂದಿದ್ದರು.
"ಭಾರತವು ಬ್ರಿಕ್ಸ್ ಕರೆನ್ಸಿಯ ಪಕ್ಷದಲ್ಲಿಲ್ಲ. ಅಂತಹ ಯಾವುದೇ ಬ್ರಿಕ್ಸ್ ಕರೆನ್ಸಿಯಂತಹ ಹೊಸ ಯೋಜನೆ ತರುವುದನ್ನು ನಾವು ಬೆಂಬಲಿಸುವುದಿಲ್ಲ. ಭಾರತವು ಅದನ್ನು ವಿರೋಧಿಸುತ್ತದೆ" ಎಂದು ಗೋಯಲ್ ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ , ಗಡಿಯಾಚೆಗಿನ ವ್ಯಾಪಾರ ಮತ್ತು ಪ್ರವಾಸೋದ್ಯಮ ಪಾವತಿಗಳನ್ನು ಸುಲಭಗೊಳಿಸಲು ಬ್ರಿಕ್ಸ್ ದೇಶಗಳ ಅಧಿಕೃತ ಡಿಜಿಟಲ್ ಕರೆನ್ಸಿಗಳನ್ನು ಪರಸ್ಪರ ಜೋಡಿಸುವ ಪ್ರಸ್ತಾಪವನ್ನು ಮುಂದಿಟ್ಟಿತ್ತು.
ಈ ಚೌಕಟ್ಟು ಡಾಲರ್ ಆಧಾರಿತ ವಹಿವಾಟುಗಳಿಗೆ ಪರ್ಯಾಯ ಮಾರ್ಗವನ್ನು ಒದಗಿಸಬಹುದು. ರೂಪಾಯಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ತಮ್ಮ ಪ್ರಯತ್ನವು ಡಾಲರ್ ಅನ್ನು ಕಡೆಗಣಿಸುವ ಅಥವಾ ಕೈಬಿಡುವ ಪ್ರಕ್ರಿಯೆಯ ಭಾಗವಲ್ಲ ಎಂದು ಆರ್ಬಿಐ ಹಲವು ಬಾರಿ ಸ್ಪಷ್ಟಪಡಿಸಿದೆ ಎಂದು ಜನವರಿಯಲ್ಲಿ ರಾಯಿಟರ್ಸ್ ವರದಿ ಮಾಡಿತ್ತು.
ಬ್ರಿಕ್ಸ್ ರಾಷ್ಟ್ರಗಳು ಗಡಿಯಾಚೆಗಿನ ವಹಿವಾಟುಗಳನ್ನು ಸುಲಭಗೊಳಿಸಲು ತಮ್ಮ ಕ್ಷಿಪ್ರ ಪಾವತಿ ವ್ಯವಸ್ಥೆಗಳು ಮತ್ತು ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳನ್ನು ಪರಸ್ಪರ ಜೋಡಿಸುವ ಕುರಿತು ಗಂಭೀರವಾಗಿ ಚಿಂತಿಸುತ್ತಿವೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಆಗಸ್ಟ್ನಲ್ಲಿ ತಿಳಿಸಿದ್ದರು.
ವಹಿವಾಟು ವೆಚ್ಚವನ್ನು ಕಡಿಮೆ ಮಾಡುವುದೇ ಇದರ ಮುಖ್ಯ ಉದ್ದೇಶವೇ ಹೊರತು, ಏಕೈಕ ಬ್ರಿಕ್ಸ್ ಕರೆನ್ಸಿಯ ಮೂಲಕ ಡಾಲರ್ ಅನ್ನು ಬದಲಿಸುವುದಲ್ಲ ಎಂದಿದ್ದರು ಅವರು.
ಈ ಬೆಳವಣಿಗೆಯಿಂದಾಗಿ, ಜಾಗತಿಕ ಪ್ರಾಥಮಿಕ ಮೀಸಲು ಕರೆನ್ಸಿಯಾಗಿರುವ ಯುಎಸ್ ಡಾಲರ್ ಅನ್ನು ಬದಲಿಸುವುದನ್ನು ಭಾರತವು ಬೆಂಬಲಿಸುವುದಿಲ್ಲ ಎಂಬ ನಿಲುವು ಸ್ಪಷ್ಟವಾಗಿದೆ.
ಚೀನಾವು ಡಾಲರ್ ಅನ್ನು ಸಂಪೂರ್ಣವಾಗಿ ತ್ಯಜಿಸುವ ಧೋರಣೆಯನ್ನು ಹೊಂದಿದೆಯೇ?
ಆಗಸ್ಟ್ನಲ್ಲಿ, ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ತನ್ನ ಐದು ವರ್ಷಗಳ ಕಾರ್ಯತಂತ್ರದಡಿ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಯುವಾನ್ ಕರೆನ್ಸಿಯ ಜಾಗತಿಕ ಬಳಕೆಯನ್ನು ಗಣನೀಯವಾಗಿ ವಿಸ್ತರಿಸುವ ಯೋಜನೆಗಳನ್ನು ಪ್ರಕಟಿಸಿತು. ರಾಯಿಟರ್ಸ್ ವರದಿಯ ಪ್ರಕಾರ, ಕೇಂದ್ರ ಬ್ಯಾಂಕ್ ಯುವಾನ್ ಕರೆನ್ಸಿಯ ಜಾಗತಿಕ ಬಳಕೆಯನ್ನು ವಿಸ್ತರಿಸುವ ಜೊತೆಗೆ ವಿನಿಮಯ ದರದ ಸ್ಥಿರತೆಯನ್ನು ಕಾಯ್ದುಕೊಳ್ಳಲು ಯೋಜಿಸಿದೆ.
ಸೆಪ್ಟೆಂಬರ್ನಲ್ಲಿ 'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ವರದಿ ಮಾಡಿದಂತೆ, ಚೀನೀ ಹೂಡಿಕೆದಾರರ ಮೂಲಕ ಕಾರ್ಖಾನೆಗಳು, ಇಂಧನ ಯೋಜನೆಗಳು ಮತ್ತು ಡಿಜಿಟಲ್ ಮೂಲಭೂತ ಸೌಕರ್ಯಗಳಲ್ಲಿ ಬಲವಾದ ಹಣಕಾಸು ಸಂಬಂಧಗಳನ್ನು ಹೊಂದುವುದರೊಂದಿಗೆ, ವ್ಯಾಪಾರ ಮತ್ತು ಹೂಡಿಕೆಗಾಗಿ ತಮ್ಮದೇ ಆದ ಕರೆನ್ಸಿಗಳನ್ನು ಹೆಚ್ಚು ಬಳಸಲು ಬೀಜಿಂಗ್ ಮತ್ತು ಕೈರೋ ನಿರ್ಧರಿಸಿವೆ.
ಯುವಾನ್ ಆಧಾರಿತ ಹಣಕಾಸು ಮಾರುಕಟ್ಟೆಗಳ ಆರ್ಥಿಕ ವ್ಯವಸ್ಥೆಯನ್ನು ವಿಸ್ತರಿಸಲು ಬೀಜಿಂಗ್ ಕಾರ್ಯನಿರ್ವಹಿಸುತ್ತಿದೆ.
ಜುಲೈನಲ್ಲಿ, ವಿದೇಶಿ ಪಾಂಡಾ ಬಾಂಡ್ ವಿತರಕರಿಗೆ ವಿಧಿಸಲಾಗುವ ಕೆಲವು ಶುಲ್ಕಗಳನ್ನು 2028ರವರೆಗೆ ಮನ್ನಾ ಮಾಡಲಾಗುವುದು ಎಂದು ದೇಶವು ಘೋಷಿಸಿತು. ಯುವಾನ್ ಸಾಲ ಮಾರುಕಟ್ಟೆಯನ್ನು ಬಲಪಡಿಸುವುದು ಮತ್ತು ಜಾಗತಿಕವಾಗಿ ಈ ಕರೆನ್ಸಿಯ ಚಲಾವಣೆಯನ್ನು ಉತ್ತೇಜಿಸುವುದು ಈ ಹೆಜ್ಜೆಯ ಮುಖ್ಯ ಗುರಿಯಾಗಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಚೀನಾದ ಈ ಧೋರಣೆಯು ಡಾಲರ್ ಅನ್ನು ತಕ್ಷಣವೇ ಕೈಬಿಡುವುದನ್ನು ಸೂಚಿಸುವುದಿಲ್ಲ. ಬದಲಿಗೆ, ಬೀಜಿಂಗ್ನ ಕಾರ್ಯತಂತ್ರವು ಹೆಚ್ಚು ದೂರ ಸಾಗುವಂತಿದೆ. ಅಂದರೆ ಯುಎಸ್ ಡಾಲರ್ ಅನಿವಾರ್ಯವಾಗಿರದ ಪಾವತಿ ಹಾಗೂ ಹಣಕಾಸು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಯುವಾನ್ ಕರೆನ್ಸಿಯ ಅಂತಾರಾಷ್ಟ್ರೀಯ ಬಳಕೆಯನ್ನು ವಿಸ್ತರಿಸುವುದಾಗಿದೆ.
ಡಾಲರ್ ಮುಕ್ತಗೊಳಿಸುವುದನ್ನು ನಾವು ಬೆಂಬಲಿಸುವುದಿಲ್ಲ: ರಷ್ಯಾ
ಪಶ್ಚಿಮ ದೇಶಗಳ ನಿರ್ಬಂಧಗಳು ಮತ್ತು ಡಾಲರ್ ಆಧಾರಿತ ಹಣಕಾಸು ವ್ಯವಸ್ಥೆಗೆ ಪ್ರವೇಶದ ಮೇಲೆ ವಿಧಿಸಲಾದ ತಡೆಗಳ ಅನುಭವದಿಂದ ರಷ್ಯಾದ ನಿಲುವು ರೂಪುಗೊಂಡಿದೆ. ಆದರೆ, ತಾನು ಅಧಿಕೃತವಾಗಿ "ಡಾಲರ್ ಮುಕ್ತಗೊಳಿಸುವಿಕೆಯನ್ನು" ಬೆಂಬಲಿಸುವುದಿಲ್ಲ ಎಂದು ಮಾಸ್ಕೋ ಸ್ಪಷ್ಟಪಡಿಸಿದೆ.
ಸೆಪ್ಟೆಂಬರ್ 8 ರಂದು, ರಷ್ಯಾವು "ಡಾಲರ್ ಮುಕ್ತಗೊಳಿಸಲು" ಪ್ರಯತ್ನಿಸುತ್ತಿಲ್ಲ ಮತ್ತು ಯಾವುದೇ ಸ್ವೀಕಾರಾರ್ಹ ಪಾವತಿ ವಿಧಾನಕ್ಕೆ ಮುಕ್ತವಾಗಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾಗವಹಿಸುವುದಕ್ಕೆ ಕೆಲವೇ ದಿನಗಳ ಮೊದಲು ಅವರ ಈ ಹೇಳಿಕೆ ಬಂದಿದೆ.
"ಕೆಲವು ದೇಶಗಳು ತಮ್ಮ ರಾಷ್ಟ್ರೀಯ ಕರೆನ್ಸಿಯನ್ನು ರಾಜಕೀಯ ಸಾಧನವಾಗಿ ಬಳಸುತ್ತಿವೆ" ಎಂದು ಪೆಸ್ಕೋವ್ ಹೇಳಿರುವುದಾಗಿ ರಾಯಿಟರ್ಸ್ ವರದಿ ಉಲ್ಲೇಖಿಸಿದೆ, ಆದರೆ ಅವರು ಯಾವುದೇ ದೇಶದ ಹೆಸರನ್ನು ಪ್ರಸ್ತಾಪಿಸಲಿಲ್ಲ.
ಮಾಸ್ಕೋಗೆ ಸಂಬಂಧಿಸಿದಂತೆ, ಡಾಲರ್ ಅನ್ನು ಬದಲಿಸುವುದಕ್ಕಿಂತ ಹೆಚ್ಚಾಗಿ ಪರ್ಯಾಯ ಪಾವತಿ ವ್ಯವಸ್ಥೆಗಳು ಮತ್ತು ರಾಷ್ಟ್ರೀಯ ಕರೆನ್ಸಿಗಳ ಮೂಲಕ ತನ್ನ ವ್ಯಾಪಾರವು ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಹೆಚ್ಚು ಗಮನಹರಿಸಲಾಗಿದೆ ಎನ್ನಬಹುದು.
ಡಾಲರ್ ಮುಕ್ತಗೊಳಿಸುವಿಕೆ ಬಗ್ಗೆ ಡೊನಾಲ್ಡ್ ಟ್ರಂಪ್ ನಿಲುವೇನು?
ಯುಎಸ್ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಬ್ರಿಕ್ಸ್ ಮಾಡುತ್ತಿರುವ ಪ್ರಯತ್ನವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಿಡಿಸಿಲ್ಲ. ಡಾಲರ್ ಪ್ರಾಬಲ್ಯವನ್ನು ಸವಾಲಿಗೆ ಒಳಪಡಿಸುವ ಯಾವುದೇ ಪ್ರಯತ್ನದ ವಿರುದ್ಧ ಯುಎಸ್ ಅಧ್ಯಕ್ಷರು ಬ್ರಿಕ್ಸ್ ಒಕ್ಕೂಟಕ್ಕೆ ಪದೇ ಪದೇ ಎಚ್ಚರಿಕೆ ನೀಡಿದ್ದಾರೆ ಮತ್ತು ದೇಶಗಳ ಮೇಲೆ ಶೇಕಡಾ 100 ರಷ್ಟು ಭಾರಿ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.
"ಡಾಲರ್ ರಾಜನಿದ್ದಂತೆ. ನಾವು ಅದನ್ನು ಹಾಗೆಯೇ ಮುಂದುವರಿಸುತ್ತೇವೆ" ಎಂದಿದ್ದಾರೆ ಟ್ರಂಪ್.
ವಿಶ್ವದ ಪ್ರಮುಖ ಕರೆನ್ಸಿಯಾಗಿ ಡಾಲರ್ ಹೊಂದಿರುವ ಸ್ಥಾನಕ್ಕೆ ಬ್ರಿಕ್ಸ್ ಸವಾಲು ಒಡ್ಡುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದು, ಅದನ್ನು ಬದಲಿಸುವ ಯಾವುದೇ ಕ್ರಮವು ಅಮೆರಿಕದ ಆರ್ಥಿಕ ಬಲಕ್ಕೆ ಧಕ್ಕೆ ತರಲಿದೆ ಎಂದು ವಾದಿಸಿದ್ದಾರೆ.
ಬ್ರಿಕ್ಸ್ ಒಕ್ಕೂಟದೊಳಗೆ ಸ್ಥಳೀಯ ಕರೆನ್ಸಿಗಳ ಬಳಕೆ ಹೆಚ್ಚಾಗಿದ್ದರೂ, ಯುಎಸ್ ಡಾಲರ್ ಅನ್ನು ಬದಲಿಸುವುದು ಸವಾಲಿನ ಸಂಗತಿಯಾಗಿಯೇ ಉಳಿದಿದೆ.
ವ್ಯಾಪಾರ, ವಿದೇಶಿ ವಿನಿಮಯ ಮಾರುಕಟ್ಟೆಗಳು, ಅಂತಾರಾಷ್ಟ್ರೀಯ ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ಮೀಸಲು ನಿಧಿಗಳು ಸೇರಿದಂತೆ ಜಾಗತಿಕ ಹಣಕಾಸು ವ್ಯವಸ್ಥೆಯ ಪ್ರಮುಖ ಕ್ಷೇತ್ರಗಳಲ್ಲಿ ಡಾಲರ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಬ್ರಿಕ್ಸ್ ಸದಸ್ಯರ ಆರ್ಥಿಕ ಹಿತಾಸಕ್ತಿಗಳು ಮತ್ತು ಹಣಕಾಸು ನೀತಿಗಳಲ್ಲಿನ ವ್ಯತ್ಯಾಸಗಳು ಸಹ ಬ್ರಿಕ್ಸ್ ರಾಷ್ಟ್ರಗಳಿಗೆ ಒಗ್ಗಟ್ಟಿನ ಪರ್ಯಾಯ ವ್ಯವಸ್ಥೆಯನ್ನು ರೂಪಿಸುವುದನ್ನು ಕಷ್ಟಕರವಾಗಿಸುತ್ತವೆ.
ಕೃಪೆ: firstpost.com






