ಅಹ್ಮದಿನೆಜಾದ್ ಮೂಲಕ ಇರಾನ್ ನಲ್ಲಿ ಆಡಳಿತ ಬದಲಾವಣೆಗೆ ಇಸ್ರೇಲ್ ಯತ್ನ?

Photo Credit: ndtv
2024 ರ ಆರಂಭದಲ್ಲಿ, ಬುಡಾಪೆಸ್ಟ್ ನ ವಿಶ್ವವಿದ್ಯಾಲಯವೊಂದರ ಕುಲಪತಿಗಳಿಗೆ ಹಂಗೇರಿ ಸರ್ಕಾರದ ಉನ್ನತ ಅಧಿಕಾರಿಯೊಬ್ಬರಿಂದ ಅತ್ಯಂತ ಆಶ್ಚರ್ಯಕರ ವಿನಂತಿಯೊಂದು ಬಂದಿತ್ತು. ಲುಡೋವಿಕಾ ಸಾರ್ವಜನಿಕ ಸೇವಾ ವಿಶ್ವವಿದ್ಯಾಲಯವು (Ludovika University of Public Service) ಹವಾಮಾನ ಬದಲಾವಣೆ ಕುರಿತು ಸಮ್ಮೇಳನವೊಂದನ್ನು ಆಯೋಜಿಸಬೇಕು ಮತ್ತು ಅದಕ್ಕೆ ಇರಾನ್ ನ ಮಾಜಿ ಅಧ್ಯಕ್ಷ ಮಹ್ಮದ್ ಅಹ್ಮದಿನೆಜಾದ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬೇಕು ಎಂದು ಆ ಅಧಿಕಾರಿ ಕುಲಪತಿ ಪ್ರೊಫೆಸರ್ ಗರ್ಗೆಲಿ ಡೆಲಿ ಅವರಿಗೆ ತಿಳಿಸಿದ್ದರು.
ಆದರೆ, ಈ ಆಹ್ವಾನದ ಹಿಂದಿದ್ದ ಅಸಲಿ ಕಾರಣ ಮತ್ತಷ್ಟು ಆಘಾತಕಾರಿಯಾಗಿತ್ತು. ಆ ಹವಾಮಾನ ಸಮ್ಮೇಳನವು ಕೇವಲ ಒಂದು ಮುಖವಾಡವಷ್ಟೇ ಆಗಿದ್ದು, ಅಹ್ಮದಿನೆಜಾದ್ ಅವರ ಜನ್ಮಶತ್ರುವಾಗಿರುವ ಇಸ್ರೇಲ್ ನ ಗುಪ್ತಚರ ಏಜೆಂಟರೊಂದಿಗೆ ಬುಡಾಪೆಸ್ಟ್ ನಲ್ಲಿ ರಹಸ್ಯ ಮಾತುಕತೆ ನಡೆಸಲು ಈ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಆ ಸರ್ಕಾರಿ ಅಧಿಕಾರಿ ಪ್ರೊಫೆಸರ್ ಡೆಲಿ ಅವರಿಗೆ ವಿವರಿಸಿದ್ದರು.
ಈ ಆಹ್ವಾನದಿಂದ ತಮ್ಮ ವೈಯಕ್ತಿಕ ಗೌರವ ಹಾಗೂ ವಿಶ್ವವಿದ್ಯಾಲಯದ ಪ್ರತಿಷ್ಠೆಗೆ ಧಕ್ಕೆ ಬರಬಹುದು ಎಂಬುದು ಪ್ರೊಫೆಸರ್ ಡೆಲಿ ಅವರಿಗೆ ತಿಳಿದಿತ್ತು. ಆದರೆ, ತಾವು ಜೀವಗಳನ್ನು ಉಳಿಸುವ ಮಹತ್ತರ ಕಾರ್ಯದಲ್ಲಿ ಪಾತ್ರ ವಹಿಸುತ್ತಿರಬಹುದು ಎಂದು ತಾವು ನಂಬಿದ್ದಾಗಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
"ಇಬ್ಬರು ಶತ್ರುಗಳು ಪರಸ್ಪರ ಮಾತನಾಡಲು ಬಯಸಿದಾಗ, ಅವರಿಬ್ಬರು ಮುಖಾಮುಖಿ ಚರ್ಚೆ ನಡೆಸುವಂತೆ ಮಾಡಲು ನಮ್ಮ ಕೈಲಾದ ಎಲ್ಲ ಪ್ರಯತ್ನವನ್ನು ಮಾಡುವುದು ಅತ್ಯುತ್ತಮ ನಿರ್ಧಾರ" ಎಂದು ಅವರು ಹೇಳಿದ್ದರು.
ಸೂಕ್ಷ್ಮ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳಲು ಇಚ್ಛಿಸದ ಅಮೆರಿಕ ಮತ್ತು ಇರಾನ್ ನ ಉನ್ನತ ಅಧಿಕಾರಿಗಳ ಪ್ರಕಾರ, ಅಹ್ಮದಿನೆಜಾದ್ ಅವರ 2024 ರ ವಿಶ್ವವಿದ್ಯಾಲಯದ ಭೇಟಿ ಹಾಗೂ ಅದರ ಮರು ವರ್ಷದ ಪ್ರವಾಸವು ಇಸ್ರೇಲ್ ನ ಸುದೀರ್ಘ ಯೋಜನೆಯ ಒಂದು ಭಾಗವಾಗಿತ್ತು. ಸೂಕ್ತ ಸಮಯ ಬಂದಾಗ ಇರಾನ್ ನ ಹೊಸ ನಾಯಕನನ್ನಾಗಿ ಪ್ರತಿಷ್ಠಾಪಿಸಲು, ಅವರನ್ನು ತಮ್ಮ ರಹಸ್ಯ ಏಜೆಂಟ್ ಆಗಿ ಬಳಸಿಕೊಳ್ಳಲು ಇಸ್ರೇಲ್ ವರ್ಷಗಳಿಂದ ಈ ಪ್ರಯತ್ನ ನಡೆಸಿತ್ತು.
ಮಾಜಿ ಅಮೆರಿಕನ್ ಅಧಿಕಾರಿಗಳ ಪ್ರಕಾರ, ಅಹ್ಮದಿನೆಜಾದ್ ಅವರನ್ನು ತಮ್ಮ ಕಡೆಗೆ ಸೆಳೆದುಕೊಳ್ಳುವುದು ಇಸ್ರೇಲ್ ಗೆ ಎಷ್ಟು ಮುಖ್ಯವಾಗಿತ್ತೆಂದರೆ, ಇಸ್ರೇಲ್ ನ ಅಂದಿನ ಗುಪ್ತಚರ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಅವರು ಸ್ವತಃ 2024 ರಲ್ಲಿ ಹಂಗೇರಿ ರಾಜಧಾನಿಗೆ ಪ್ರಯಾಣ ಬೆಳೆಸಿ ಅಹ್ಮದಿನೆಜಾದ್ ರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದರು. ಇದರ ಬೆನ್ನಲ್ಲೇ, ತಾವು ಅಹ್ಮದಿನೆಜಾದ್ ಅವರೊಂದಿಗೆ ಸಂಪರ್ಕದಲ್ಲಿರುವುದಾಗಿ ಇಸ್ರೇಲ್ ನ ವಿದೇಶಿ ಗುಪ್ತಚರ ಸಂಸ್ಥೆ 'ಮೊಸಾದ್', ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ(CIA)ಗೆ ಮಾಹಿತಿ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ನ ಪರಮಾಣು ಕಾರ್ಯಕ್ರಮವನ್ನು ವೇಗಗೊಳಿಸಿದ್ದ, ಇಸ್ರೇಲ್ ನ ವಿನಾಶಕ್ಕೆ ನಿರಂತರ ಕರೆ ನೀಡುತ್ತಿದ್ದ ಮತ್ತು ಹೊಲೊಕಾಸ್ಟ್ (ಯಹೂದಿಗಳ ನರಮೇಧ) ಅನ್ನು ನಿರಾಕರಿಸುತ್ತಿದ್ದ ಮಾಜಿ ಅಧ್ಯಕ್ಷ ಅಹ್ಮದಿನೆಜಾದ್ ಸುತ್ತ ಇಸ್ರೇಲ್ ಇಂತಹದೊಂದು ಆಡಳಿತ ಬದಲಾವಣೆಯ ತಂತ್ರ ರೂಪಿಸಿದ್ದು ಉಭಯ ದೇಶಗಳ ಸಂಬಂಧದ ಇತಿಹಾಸದಲ್ಲೇ ಒಂದು ಅಸಾಮಾನ್ಯ ತಿರುವಾಗಿದೆ.
ಅಮೆರಿಕದ ಅಧಿಕಾರಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ರಹಸ್ಯವಾಗಿ ಅಹ್ಮದಿನೆಜಾದ್ ಅವರ ವಸತಿ ಮತ್ತು ಪ್ರಯಾಣದ ವೆಚ್ಚಗಳಿಗಾಗಿ ಹಣವನ್ನು ಪಾವತಿಸಿತ್ತು. ಇಸ್ರೇಲಿ ಏಜೆಂಟರು ಬುಡಾಪೆಸ್ಟ್ ಪ್ರವಾಸ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ವಿದೇಶಗಳಲ್ಲಿ ಅವರನ್ನು ಭೇಟಿಯಾಗಿದ್ದರು.
ಇರಾನ್ ಮೇಲಿನ ಯುಎಸ್-ಇಸ್ರೇಲ್ ಯುದ್ಧದ ಆರಂಭಿಕ ದಿನಗಳಾದ ಈ ವರ್ಷದ ಫೆಬ್ರವರಿ ಕೊನೆಯಲ್ಲಿ ಈ ಪ್ರಯತ್ನಗಳು ತುತ್ತತುದಿಗೆ ತಲುಪಿದ್ದವು. ಟೆಹರಾನ್ ನಲ್ಲಿ ತೀವ್ರ ಕಣ್ಗಾವಲಿನಲ್ಲಿ ಇರಿಸಲಾಗಿದ್ದ ಮಾಜಿ ನಾಯಕನನ್ನು ಅಲ್ಲಿಂದ ಸ್ಥಳಾಂತರಿಸಲು ಇಸ್ರೇಲ್ ಒಂದು ಸಾಹಸಿಕ ಕಾರ್ಯಾಚರಣೆ ನಡೆಸಿತ್ತು. ಪ್ರಸ್ತುತ ಆಡಳಿತವನ್ನು ಉರುಳಿಸಿ ಅಹ್ಮದಿನೆಜಾದ್ ರನ್ನು ಅಧಿಕಾರದಲ್ಲಿ ಕೂರಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಈ ಕಾರ್ಯಾಚರಣೆಯ ಗುರಿಯಾಗಿತ್ತು.
►ಆದರೆ ಈ ಯೋಜನೆ ವಿಫಲವಾಯಿತು!
ಫೆಬ್ರವರಿ 28 ರಂದು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯು ಅಹ್ಮದಿನೆಜಾದ್ ಅವರ ಕಾಂಪೌಂಡ್ ನಲ್ಲಿದ್ದ ಬಾಡಿಗಾರ್ಡ್ ಗಳ ಕಟ್ಟಡ ಮತ್ತು ಅವರ ಸಶಸ್ತ್ರ ವಾಹನವನ್ನು ಗುರಿಯಾಗಿಸಿಕೊಂಡಿತ್ತು. ಇರಾನ್ ನ ನಾಲ್ಕು ಉನ್ನತ ಅಧಿಕಾರಿಗಳ ಪ್ರಕಾರ, ದಾಳಿಯ ಬೆನ್ನಲ್ಲೇ ಅಲ್ಲಿಗೆ ಬಂದ ಕಪ್ಪು ಬಣ್ಣದ ಪಿಯುಗಿಯೊ (Peugeot) ಕಾರು, ಅಹ್ಮದಿನೆಜಾದ್ ರನ್ನು ಹತ್ತಿಸಿಕೊಂಡು ಆ ಗೊಂದಲದ ವಾತಾವರಣದಿಂದ ಅತ್ಯಂತ ವೇಗವಾಗಿ ನಿರ್ಗಮಿಸಿತು.
ಈ ಕಾರ್ಯಾಚರಣೆಯ ವಿವರ ತಿಳಿದಿರುವ ಅಮೆರಿಕ ಮತ್ತು ಇರಾನ್ ಅಧಿಕಾರಿಗಳು, ಆ ಕಾರನ್ನು ಮೊಸಾದ್ ಏಜೆಂಟರು ಚಲಾಯಿಸುತ್ತಿದ್ದರು . ಅವರು ಅಹ್ಮದಿನೆಜಾದ್ ರನ್ನು ಇರಾನ್ ನಲ್ಲೇ ಇದ್ದ ರಹಸ್ಯ ಸೇಫ್ ಹೌಸ್ ಗೆ ಕರೆದೊಯ್ದಿದ್ದರು ಎಂದು ತಿಳಿಸಿದ್ದಾರೆ.
ನಡೆದ ಘಟನೆಗಳ ವಿವರ ತಿಳಿದಿರುವ ಮೂಲಗಳ ಪ್ರಕಾರ, ಈ ತರಾತುರಿಯ ರಕ್ಷಣಾ ಕಾರ್ಯಾಚರಣೆಯಿಂದ ಮಾಜಿ ಇರಾನಿ ನಾಯಕ ತೀವ್ರ ಅಸಮಾಧಾನಗೊಂಡಿದ್ದರು. ಅಲ್ಲದೆ, ತಮ್ಮನ್ನು ಮತ್ತೆ ಅಧಿಕಾರಕ್ಕೆ ತರುವ ಇಸ್ರೇಲ್ ನ ಯೋಜನೆಯ ಬಗ್ಗೆ ಅವರು ಭ್ರಮನಿರಸನಗೊಂಡಂತೆ ಕಂಡುಬಂದರು.
ಕೊನೆಗೆ ಅವರು ಯಾವ ಪರಿಸ್ಥಿತಿಯಲ್ಲಿ ಆ ಸೇಫ್ ಹೌಸ್ ನಿಂದ ಹೊರಬಂದರು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಜುಲೈ 6 ರಂದು, ಹತ್ಯೆಗೀಡಾದ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಾಮಿನೈ ಅವರ ಶವಸಂಸ್ಕಾರದ ಮೆರವಣಿಗೆಯಲ್ಲಿ ಸ್ವಲ್ಪ ಸಮಯ ಕಾಣಿಸಿಕೊಳ್ಳುವವರೆಗೆ ಅಹ್ಮದಿನೆಜಾದ್ ಮತ್ತೆಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.
ಅವರು ಈಗ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಇಸ್ರೇಲ್ ಜೊತೆಗಿನ ಅವರ ಸಂಪೂರ್ಣ ಸಂಪರ್ಕದ ವಿವರಗಳು ಈಗ ಇರಾನ್ ಗೆ ತಿಳಿದಿರುವುದರಿಂದ, ಅಹ್ಮದಿನೆಜಾದ್ ಪ್ರಸ್ತುತ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಗುಪ್ತಚರ ವಿಭಾಗದ ವಶದಲ್ಲಿದ್ದು, ಗೃಹಬಂಧನದಲ್ಲಿದ್ದಾರೆ ಎಂದು ಇರಾನ್ ನ ನಾಲ್ಕು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಟೆಹರಾನ್ ಸರ್ಕಾರವನ್ನು ಉರುಳಿಸುವ ವ್ಯಾಪಕ ಯೋಜನೆಯ ಭಾಗವಾಗಿದ್ದ ಅಹ್ಮದಿನೆಜಾದ್ ರನ್ನು ಇರಾನ್ ನ ನಾಯಕನನ್ನಾಗಿ ಪ್ರತಿಷ್ಠಾಪಿಸುವ ತಂತ್ರದ ಬಗ್ಗೆ ಇಸ್ರೇಲ್ ಅಧಿಕಾರಿಗಳು ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಯೋಜನೆಯ ಮತ್ತೊಂದು ಭಾಗವಾಗಿ, ಉತ್ತರ ಇರಾಕ್ ನಲ್ಲಿರುವ ಇರಾನಿನ ಕುರ್ದಿಶ್ ವಿರೋಧ ಪಕ್ಷದ ಪಡೆಗಳಿಗೆ ಶಸ್ತ್ರಾಸ್ತ್ರ ಮತ್ತು ತರಬೇತಿ ನೀಡಿ, ಪಶ್ಚಿಮ ಇರಾನ್ ಗಡಿಯೊಳಗೆ ನುಗ್ಗಿ ಅಲ್ಲಿನ ಪ್ರದೇಶಗಳನ್ನು ವಶಪಡಿಸಿಕೊಂಡು ಕೊನೆಗೆ ರಾಜಧಾನಿ ಟೆಹರಾನ್ ಕಡೆಗೆ ಮುನ್ನಡೆಯುವಂತೆ ಮಾಡುವ ತಂತ್ರವೂ ಇತ್ತು. ಆದರೆ ಆ ಪ್ರಯತ್ನ ಎಂದೂ ಕಾರ್ಯರೂಪಕ್ಕೆ ಬರಲಿಲ್ಲ.
ʼನ್ಯೂಯಾರ್ಕ್ ಟೈಮ್ಸ್ʼ ಮೊದಲ ಬಾರಿಗೆ ಈ ಯೋಜನೆಯಲ್ಲಿ ಅಹ್ಮದಿನೆಜಾದ್ ಅವರ ಪಾತ್ರದ ವಿವರಗಳನ್ನು ಬಹಿರಂಗಪಡಿಸಿದ ನಂತರ, ಇಸ್ರೇಲ್ ರಕ್ಷಣಾ ಪಡೆಯ (IDF) ಮಾಜಿ ಗುಪ್ತಚರ ಮುಖ್ಯಸ್ಥ ತಮೀರ್ ಹೈಮನ್ ಅವರು ಮೇ ತಿಂಗಳಲ್ಲಿ ಪಿಬಿಎಸ್ (PBS) ವಾಹಿನಿಯ 'ಫೈರಿಂಗ್ ಲೈನ್' ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಈ ಆಡಳಿತ ಬದಲಾವಣೆಯ ಯೋಜನೆಯು "ನಡೆಯಬೇಕಾಗಿದ್ದ ಅತ್ಯಂತ ವಿಶಿಷ್ಟವಾದ ಸರಣಿ ವಿಶೇಷ ಕಾರ್ಯಾಚರಣೆಗಳನ್ನು ಒಳಗೊಂಡಿತ್ತು. ಅಹ್ಮದಿನೆಜಾದ್ ಆ ಸರಣಿ ಕಾರ್ಯಾಚರಣೆಯ ಒಂದು ಭಾಗವಾಗಿದ್ದರು" ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಲು ಮೊಸಾದ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಅತ್ತ ಅಹ್ಮದಿನೆಜಾದ್ ಅವರ ವಕ್ತಾರ ಅಲಿ ಅಕ್ಬರ್ ಜಾವನ್ಫಕರ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಲು ಒಪ್ಪಲಿಲ್ಲ.
2005 ರಿಂದ 2013 ರವರೆಗೆ ಇರಾನ್ ಅಧ್ಯಕ್ಷರಾಗಿದ್ದ ಅಹ್ಮದಿನೆಜಾದ್ ದೇಶದ ಅತ್ಯಂತ ಪ್ರಭಾವಿ ನಾಯಕರಾಗಿದ್ದರು. ಇಸ್ರೇಲ್ ಅನ್ನು ಭೂಪಟದಿಂದ ಅಳಿಸಿಹಾಕುವ ಬಗ್ಗೆ ಮಾತನಾಡುತ್ತಿದ್ದ ಅವರ ಆಡಳಿತಾವಧಿಯಲ್ಲೇ ಇರಾನ್ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಪುನರಾರಂಭಿಸಿತ್ತು. ಇದು ಇರಾನ್ ರಹಸ್ಯವಾಗಿ ಪರಮಾಣು ಅಸ್ತ್ರ ತಯಾರಿಕೆಯಲ್ಲಿ ತೊಡಗಿದೆ ಎಂಬ ಅನುಮಾನಗಳನ್ನು ಹುಟ್ಟುಹಾಕಿತ್ತು.
2009 ರ ತಮ್ಮ ಮರುಚುನಾವಣೆಯನ್ನು ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಹ್ಮದಿನೆಜಾದ್ ತೀವ್ರ ಹಿಂಸಾತ್ಮಕ ದಮನಕಾಂಡಕ್ಕೆ ಆದೇಶಿಸಿದ್ದರು. ಅವರ ಆಡಳಿತದಲ್ಲಿ ಇರಾನ್ ನ್ಯಾಯಾಂಗವು ಸರ್ಕಾರದ ವಿರೋಧಿಗಳು ಹಾಗೂ ಬಂಡಾಯಗಾರರನ್ನು ದೊಡ್ಡ ಪ್ರಮಾಣದಲ್ಲಿ ಗಲ್ಲಿಗೇರಿಸಿತ್ತು ಮತ್ತು ಸೆರೆಮನೆಗೆ ತಳ್ಳಿತ್ತು.
ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರದ ವರ್ಷಗಳಲ್ಲಿ ಅಹ್ಮದಿನೆಜಾದ್ ತಮ್ಮ ತೀವ್ರಗಾಮಿ ನಿಲುವುಗಳನ್ನು ಸಡಿಲಗೊಳಿಸಿದರು ಮತ್ತು ತಮ್ಮ ಅಧಿಕಾರಾವಧಿಯಲ್ಲಿದ್ದ ಇಸ್ರೇಲ್ ವಿರೋಧಿ ಭಾಷಣಗಳ ತೀಕ್ಷ್ಣತೆಯನ್ನು ಕಡಿಮೆ ಮಾಡಿಕೊಂಡರು. ಇರಾನ್ ನ ಪಾಪ್ ಸಂಗೀತ ಸಂಸ್ಕೃತಿಯ ಬಗ್ಗೆ ಮಾತನಾಡುವುದು, ಪ್ರತಿಭಟನಾಕಾರರ ಮೇಲಿನ ಭದ್ರತಾ ಪಡೆಗಳ ಅತಿಯಾದ ದರ್ಪವನ್ನು ಟೀಕಿಸುವುದು ಹಾಗೂ ಆಡಳಿತ ವರ್ಗದ ಭ್ರಷ್ಟಾಚಾರವನ್ನು ಪ್ರಶ್ನಿಸುವ ಮೂಲಕ ತಮ್ಮ ಹೊಸ ಸೌಮ್ಯವಾದಿ ಮುಖವನ್ನು ಪ್ರದರ್ಶಿಸಲು ಅವರು ಉತ್ಸುಕರಾಗಿದ್ದರು.
ತಮ್ಮ ಹಳೆಯ ವಿಶಿಷ್ಟ ಶೈಲಿಯ ಸಡಿಲವಾದ ಖಾಕಿ ವಿಂಡ್ಬ್ರೇಕರ್ ಜಾಕೆಟ್ ಧರಿಸುವುದನ್ನು ಬಿಟ್ಟು, ಅಚ್ಚುಕಟ್ಟಾಗಿ ಹೊಲಿದ ಸೂಟುಗಳನ್ನು ಧರಿಸಲು ಪ್ರಾರಂಭಿಸಿದರು. ಕೆದರಿಕೊಂಡಿರುತ್ತಿದ್ದ ಗಡ್ಡವನ್ನು ಸವರಿಕೊಂಡು, ಬೊಟಾಕ್ಸ್ ಚಿಕಿತ್ಸೆ ಪಡೆದವರಂತೆ ಕಾಣಿಸಿಕೊಂಡರು ಹಾಗೂ ಇಂಗ್ಲಿಷ್ ಕಲಿಯಲು ಆರಂಭಿಸಿದರು.
ಟೆಹರಾನ್ ನಲ್ಲಿರುವ ತಮ್ಮ ಕಚೇರಿಯಲ್ಲಿ ಅವರು ಪ್ರತಿದಿನ ಬೆಳಿಗ್ಗೆ ಒಂದು ಗಂಟೆಯ ಕಾಲ ಸಾರ್ವಜನಿಕ ಸಭೆ ನಡೆಸಿ ಸಾಮಾನ್ಯ ಜನರ ಅಹವಾಲುಗಳನ್ನು ಆಲಿಸುತ್ತಿದ್ದರು. ಸರ್ಕಾರಿ ಕಚೇರಿಗಳ ಕೆಲಸಗಳಲ್ಲಿ ತೊಂದರೆ ಅನುಭವಿಸುತ್ತಿದ್ದ ಜನರಿಗೆ ಸಹಾಯ ಮಾಡುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಸಾಲ ಸೌಲಭ್ಯ ಕೊಡಿಸುವಂತೆ ಶಿಫಾರಸು ಪತ್ರಗಳನ್ನೂ ಬರೆದುಕೊಡುತ್ತಿದ್ದರು. ದೇಶದ ವಿವಿಧ ನಗರಗಳು ಮತ್ತು ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ ಬೆಂಬಲಿಗರನ್ನು ಭೇಟಿಯಾಗುತ್ತಿದ್ದರು.
ಇರಾನ್ ಸರ್ಕಾರದೊಂದಿಗೆ ಅಹ್ಮದಿನೆಜಾದ್ ಅವರ ಸಂಬಂಧ ಜಟಿಲವಾಗಿತ್ತು. ದೇಶದ ಪ್ರಮುಖ ನಾಯಕರು ಅವರನ್ನು ಮೂಲೆಗುಂಪು ಮಾಡಿ ಅವರ ಓಡಾಟದ ಮೇಲೆ ನಿರ್ಬಂಧ ಹೇರಿದ್ದರೂ, ಸುಪ್ರೀಂ ಲೀಡರ್ ಗೆ ಸಲಹೆ ನೀಡುವ ಉನ್ನತ ಮಟ್ಟದ ಮಂಡಳಿಯಲ್ಲಿ ಅವರಿಗೆ ಸ್ಥಾನ ನೀಡಲಾಗಿತ್ತು. ಯುದ್ಧ ಆರಂಭವಾಗುವ ಕೆಲವು ದಿನಗಳ ಮೊದಲು ಫೆಬ್ರವರಿಯಲ್ಲಿ ನಡೆದ ಈ ಮಂಡಳಿಯ ಸಭೆಯಲ್ಲೂ ಅವರು ಭಾಗವಹಿಸಿದ್ದರು.
ಅಹ್ಮದಿನೆಜಾದ್ ಅವರ ಈ ಬದಲಾವಣೆಯ ಹಿಂದೆ ರಾಜಕೀಯ ಸ್ವಾರ್ಥವಿದೆ ಎಂದು ಇರಾನ್ ನ ಹಲವರು ಭಾವಿಸಿದ್ದರು. ಸಾರ್ವಜನಿಕ ವಲಯದಲ್ಲಿ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಮತ್ತು ಆಡಳಿತಾರೂಢ ಅಧಿಕಾರಿಗಳಿಂದ ದೂರವಿರಲು ಅವರು ಈ ನಾಟಕವಾಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಶ್ರಮಿಕ ವರ್ಗದ ಇರಾನಿ ಜನರಲ್ಲಿ ಅವರು ತಮ್ಮದೇ ಆದ ಬೆಂಬಲಿಗರನ್ನು ಹೊಂದಿದ್ದರು ಮತ್ತು ಅವರು ಒಂದಲ್ಲ ಒಂದು ದಿನ ಮತ್ತೆ ಅಧಿಕಾರಕ್ಕೆ ಮರಳಲಿದ್ದಾರೆ ಎಂಬ ಭರವಸೆ ಅವರ ಆಪ್ತ ಸಲಹೆಗಾರರಿಗಿತ್ತು.
"ಅಹ್ಮದಿನೆಜಾದ್ ಇದನ್ನು ಹಣಕ್ಕಾಗಿ ಮಾಡುತ್ತಿಲ್ಲ. ಅವರ ಬಳಿ ಸಾಕಷ್ಟು ಹಣವಿದೆ ಹಾಗೂ ದೊಡ್ಡ ಆರ್ಥಿಕ ಜಾಲವೇ ಇದೆ. ಅವರು ಇದನ್ನು ಮಾಡುತ್ತಿರುವುದು ಕೇವಲ ಅಧಿಕಾರಕ್ಕಾಗಿ. ಅವರಿಗೆ ಮತ್ತೆ ದೇಶದ ಚುಕ್ಕಾಣಿ ಹಿಡಿಯಬೇಕಿದೆ" ಎಂದು ಅಹ್ಮದಿನೆಜಾದ್ ಅವರ ಮಾಜಿ ನಿಕಟವರ್ತಿ ಹಾಗೂ ಹಿರಿಯ ಸಲಹೆಗಾರ ಅಬ್ದುಲ್ರೆಜಾ ದಾವರಿ ದೂರವಾಣಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಈ ಇಬ್ಬರು ನಾಯಕರ ನಡುವೆ ಕೆಲವು ವರ್ಷಗಳ ಹಿಂದೆ ಭಿನ್ನಾಭಿಪ್ರಾಯ ಮೂಡಿತ್ತು.
ಖಾಸಗಿ ಮಾತುಕತೆಗಳ ವಿವರಗಳನ್ನು ಹಂಚಿಕೊಳ್ಳಲು ಇಚ್ಛಿಸದ ಅಹ್ಮದಿನೆಜಾದ್ ಅವರ ಆಪ್ತ ವಲಯದ ಅಧಿಕಾರಿಯೊಬ್ಬರ ಪ್ರಕಾರ, ವಿದೇಶಿ ಶಕ್ತಿಗಳ ನೆರವಿನೊಂದಿಗೆ ಇರಾನ್ ನ ಭವಿಷ್ಯದ ನಾಯಕನಾಗುವ ತಮ್ಮ ಮಹತ್ವಾಕಾಂಕ್ಷೆಯ ಬಗ್ಗೆ ಅಹ್ಮದಿನೆಜಾದ್ ತಮ್ಮ ಆಪ್ತರಲ್ಲಿ ಹಂಚಿಕೊಂಡಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಂತೆ ಸತತ ಮೂರು ಬಾರಿ ತಮ್ಮನ್ನು ಅನರ್ಹಗೊಳಿಸಿದ ನಂತರ ಅಹ್ಮದಿನೆಜಾದ್ ಪ್ರಸ್ತುತ ಇಸ್ಲಾಮಿಕ್ ಗಣರಾಜ್ಯ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದರು. ಈ ವ್ಯವಸ್ಥೆ ಅಧಿಕಾರದಲ್ಲಿ ಇರುವವರೆಗೆ ತಮಗೆ ಮತ್ತೆ ನಾಯಕನಾಗಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಅವರು ಬಂದಿದ್ದರು ಎಂದು ಆ ಅಧಿಕಾರಿ ತಿಳಿಸಿದ್ದಾರೆ.
ಯುದ್ಧ ಮತ್ತು ಆಡಳಿತ ಬದಲಾವಣೆಯ ಸಂದರ್ಭದಲ್ಲಿ, ಅಮೆರಿಕನ್ನರು ಮತ್ತು ಇಸ್ರೇಲಿಗಳು ದೇಶದ ಬಗ್ಗೆ ಅರಿವಿಲ್ಲದ ಇರಾನ್ ನ ಹೊರಗಿನ ಯಾವುದೋ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳಬಹುದು ಮತ್ತು ಇದರಿಂದ ಇರಾನ್ ನಲ್ಲಿ ಅಸ್ಥಿರತೆ ಉಂಟಾಗಬಹುದು ಎಂಬ ಆತಂಕ ಅಹ್ಮದಿನೆಜಾದ್ ಅವರಿಗೆ ಇತ್ತು ಎಂದು ಅವರ ಆಪ್ತ ಸಹವರ್ತಿ ತಿಳಿಸಿದ್ದಾರೆ.
ರಷ್ಯಾದ ಮಾಜಿ ಅಧ್ಯಕ್ಷ ಬೋರಿಸ್ ಯೆಲ್ತ್ಸಿನ್ ಅವರಂತೆ ತಾವೂ ಒಬ್ಬ ಸುಧಾರಕನ ಪಾತ್ರವನ್ನು ವಹಿಸಬಹುದು ಎಂದು ಅವರು ತಮ್ಮ ಸುತ್ತಮುತ್ತಲಿನವರ ಬಳಿ ಹೇಳಿಕೊಂಡಿದ್ದರು. ಅಲ್ಲದೆ, ತಾವು ಅಧಿಕಾರಕ್ಕೆ ಬಂದರೆ ಇರಾನ್ ಇಸ್ರೇಲ್ ಅನ್ನು ಅಧಿಕೃತವಾಗಿ ಮಾನ್ಯ ಮಾಡಲಿದೆ ಮತ್ತು ಅಧ್ಯಕ್ಷ ಟ್ರಂಪ್ ಅವರ 'ಅಬ್ರಹಾಂ ಒಪ್ಪಂದಗಳ' (Abraham Accords) ಭಾಗವಾಗಿ ಇಸ್ರೇಲ್ ಜೊತೆಗಿನ ಸಂಬಂಧವನ್ನು ಸಹಜ ಸ್ಥಿತಿಗೆ ತರಲಿದೆ ಎಂದು ಅವರು ಹೇಳಿದ್ದರು ಎಂದು ಸಹವರ್ತಿ ವಿವರಿಸಿದ್ದಾರೆ.
ಆ ಅವಧಿಯಲ್ಲಿ ಇಸ್ರೇಲಿ ರಕ್ಷಣಾ ಅಧಿಕಾರಿಗಳ ಗುಪ್ತಚರ ಮೌಲ್ಯಮಾಪನದ ಪ್ರಕಾರ, ಅಹ್ಮದಿನೆಜಾದ್ ಮತ್ತು ಇರಾನ್ ಆಡಳಿತದ ನಡುವೆ ಹೆಚ್ಚುತ್ತಿದ್ದ ಭಿನ್ನಾಭಿಪ್ರಾಯವನ್ನು ಇಸ್ರೇಲ್ ನ ಗುಪ್ತಚರ ಸಂಸ್ಥೆಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದವು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಂತೆ ತಮನ್ನು ಅನರ್ಹಗೊಳಿಸಿದ ಆಯತೊಲ್ಲಾ ಖಾಮಿನೈ ಹಾಗೂ ಇತರ ಉನ್ನತ ನಾಯಕರ ವಿರುದ್ಧ ಅಹ್ಮದಿನೆಜಾದ್ ಅವರಿಗೆ ಇದ್ದ ತೀವ್ರ ಅಸಮಾಧಾನವೇ ಇಸ್ರೇಲಿ ಸಂಸ್ಥೆಗಳಿಗೆ ಪ್ರಮುಖ ಆಸಕ್ತಿಯ ವಿಷಯವಾಗಿತ್ತು.
ವಿದೇಶಿ ಹಸ್ತಕ್ಷೇಪದಿಂದ ಇಸ್ಲಾಮಿಕ್ ಗಣರಾಜ್ಯವನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಗುಪ್ತಚರ ವಿಭಾಗಕ್ಕೆ ಅಹ್ಮದಿನೆಜಾದ್ ಅವರ ನಡವಳಿಕೆಗಳು ಸಂಶಯ ಮೂಡಿಸಲು ಪ್ರಾರಂಭಿಸಿದವು. ಇಬ್ಬರು ಗಾರ್ಡ್ ಸದಸ್ಯರು ಮತ್ತು ಪ್ರಕರಣದ ವಿವರ ತಿಳಿದಿರುವ ಗುಪ್ತಚರ ಅಧಿಕಾರಿಯ ಪ್ರಕಾರ, ಅಹ್ಮದಿನೆಜಾದ್ ಅವರು 2017 ರಲ್ಲಿ ಟ್ರಂಪ್ ಅವರಿಗೆ ಮತ್ತು ನಂತರ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಬಹಿರಂಗ ಪತ್ರಗಳನ್ನು ಕಳುಹಿಸಲು ಪ್ರಾರಂಭಿಸಿದ ಬಳಿಕ ಈ ಅನುಮಾನ ಮತ್ತಷ್ಟು ಬಲವಾಯಿತು. ಟ್ರಂಪ್ ಅವರು ಈ ಇಬ್ಬರೂ ನಾಯಕರನ್ನು ತುಂಬಾನೇ ಶ್ಲಾಘಿಸಿದ್ದರು.
ಈ ವರ್ಷ ಇಸ್ರೇಲ್ ನಡೆಸಿದ ದಾಳಿಯು ಅಹ್ಮದಿನೆಜಾದ್ ರನ್ನು ಗಾರ್ಡ್ ಗಳ ಕಣ್ಗಾವಲಿನಿಂದ ತಾತ್ಕಾಲಿಕವಾಗಿ ಮುಕ್ತಗೊಳಿಸಿದ ನಂತರ, ಇರಾನ್ ನ ಗುಪ್ತಚರ ಸಂಸ್ಥೆಗಳು ತನಿಖೆ ಆರಂಭಿಸಿ ಇಸ್ರೇಲ್ ಜೊತೆಗಿನ ಅವರ ಸಂಪರ್ಕದ ಕೊಂಡಿಗಳನ್ನು ಪತ್ತೆಹಚ್ಚಲು ಆರಂಭಿಸಿದವು ಎಂದು ನಾಲ್ಕು ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲಿ ಏಜೆಂಟರು ಅಹ್ಮದಿನೆಜಾದ್ ರನ್ನು ಮೊದಲ ಬಾರಿಗೆ ಯಾವಾಗ ಸಂಪರ್ಕಿಸಲು ಪ್ರಯತ್ನಿಸಿದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಪರಿಸರಕ್ಕೆ ಸಂಬಂಧಿಸಿದ ಸಮ್ಮೇಳನದಲ್ಲಿ ಭಾಗವಹಿಸಲು ಅಹ್ಮದಿನೆಜಾದ್ ಅವರು 2023 ರಲ್ಲಿ ಗ್ವಾಟೆಮಾಲಾಗೆ ಭೇಟಿ ನೀಡಿದ್ದಾಗ ಕನಿಷ್ಠ ಕೆಲವು ಸಂಪರ್ಕಗಳು ಏರ್ಪಟ್ಟಿದ್ದವು ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ. ಲ್ಯಾಟಿನ್ ಅಮೆರಿಕದ ಇತರ ದೇಶಗಳಿಗಿಂತ ಇಸ್ರೇಲ್ ಜೊತೆಗೆ ಅತ್ಯಂತ ನಿಕಟ ರಾಜತಾಂತ್ರಿಕ ಸಂಬಂಧ ಹೊಂದಿರುವ ದೇಶ ಗ್ವಾಟೆಮಾಲಾ ಆಗಿದ್ದು, ಅಲ್ಲಿನ ಸರ್ಕಾರವೇ ಅಹ್ಮದಿನೆಜಾದ್ ಅವರಿಗೆ ಆಹ್ವಾನ ಕಳುಹಿಸಿತ್ತು.
ಟೆಹರಾನ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆಗಳು ಬೋರ್ಡಿಂಗ್ ಪಾಸ್ ನೀಡಲು ನಿರಾಕರಿಸಿ, ದೇಶ ಬಿಟ್ಟು ಹೋಗದಂತೆ ತಡೆದಿದ್ದರಿಂದ ಅಹ್ಮದಿನೆಜಾದ್ ಅವರ ಈ ಪ್ರವಾಸ ಬಹುತೇಕ ರದ್ದಾಗುವ ಹಂತ ತಲುಪಿತ್ತು.
ಅದಕ್ಕೆ ಪ್ರತಿರೋಧವಾಗಿ ಅವರು ವಿಮಾನ ನಿಲ್ದಾಣದಲ್ಲೇ ಗಂಟೆಗಳ ಕಾಲ ಧರಣಿ ಕುಳಿತರು. ಈ ವೇಳೆ ಅವರು ಸಾಮಾನ್ಯ ಇರಾನಿ ಪ್ರಯಾಣಿಕರು, ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಂದಿಗೆ ಸೆಲ್ಫಿ ಫೋಟೋಗಳನ್ನು ತೆಗೆದುಕೊಂಡು ತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಅಪ್ಡೇಟ್ ಹಂಚಿಕೊಳ್ಳುವ ಮೂಲಕ ಇಡೀ ಘಟನೆ ಸಾರ್ವಜನಿಕವಾಗಿ ದೊಡ್ಡ ಸುದ್ದಿಯಾಗುವಂತೆ ನೋಡಿಕೊಂಡರು.
ಕೊನೆಗೆ ಇರಾನ್ ಅಧಿಕಾರಿಗಳು ಅಹ್ಮದಿನೆಜಾದ್ ಅವರಿಗೆ ವಿಮಾನವೇರಲು ಮತ್ತು ಸಮ್ಮೇಳನದಲ್ಲಿ ಭಾಗವಹಿಸಲು ಅನುಮತಿ ನೀಡಿದರು.
ಕೆಲವರು ನನ್ನಲ್ಲಿ ಗ್ವಾಟೆಮಾಲಾಗೆ ಹೋಗಬೇಡಿ ಎಂದು ಹೇಳಿದರು. ಆದರೆ ನನ್ನ ಸಹೋದರ ಅಲ್ಲಿನ ಪರಿಸರ ಸಚಿವರು ನನ್ನನ್ನು ಆಹ್ವಾನಿಸಿದ್ದಾರೆ ಎಂದು ನಾನು ಅವರಿಗೆ ತಿಳಿಸಿದೆ. ಇದು ಲ್ಯಾಟಿನ್ ಅಮೆರಿಕದಲ್ಲಿ ಅತ್ಯಂತ ಪ್ರಮುಖವಾದ ದೇಶ" ಎಂದು ಅಹ್ಮದಿನೆಜಾದ್ ಆ ಪ್ರವಾಸದ ವೀಡಿಯೋವೊಂದರಲ್ಲಿ ಹೇಳಿದ್ದರು.
ಮರು ವರ್ಷ ಅಂದರೆ 2024 ರಲ್ಲಿ, ಅವರು ಲುಡೋವಿಕಾ ವಿಶ್ವವಿದ್ಯಾಲಯದ ಸಮ್ಮೇಳನದಲ್ಲಿ ಭಾಗವಹಿಸಲು ಮೊದಲ ಬಾರಿಗೆ ಹಂಗೇರಿಗೆ ಭೇಟಿ ನೀಡಿದರು. ಈ ವೇಳೆ ಬುಡಾಪೆಸ್ಟ್ ನಲ್ಲಿ ಅವರು ಕಳೆದ ತಿಂಗಳವರೆಗೂ ಐದು ವರ್ಷಗಳ ಕಾಲ ಮೊಸಾದ್ ಅನ್ನು ಮುನ್ನಡೆಸಿದ್ದ ಡೇವಿಡ್ ಬಾರ್ನಿಯಾ ಅವರನ್ನು ಭೇಟಿಯಾದರು.
ಅದೂ ಅಲ್ಲದೆ, ಬಲಪಂಥೀಯ ಪ್ರಧಾನಿ ವಿಕ್ಟರ್ ಓರ್ಬನ್ ನೇತೃತ್ವದ ಹಂಗೇರಿಯು ಇಡೀ ಯುರೋಪಿನಲ್ಲೇ ಇಸ್ರೇಲ್ ಜೊತೆಗೆ ಅತ್ಯಂತ ನಿಕಟ ಸಂಬಂಧ ಹೊಂದಿರುವ ದೇಶವಾಗಿತ್ತು. ವಿಕ್ಟರ್ ಓರ್ಬನ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪರಸ್ಪರರ ದೇಶಗಳಿಗೆ ಭೇಟಿ ನೀಡಿದ್ದರು. ನೆತನ್ಯಾಹು ಅವರು ಸಹ 2025 ರ ಏಪ್ರಿಲ್ ನಲ್ಲಿ ಇದೇ ಲುಡೋವಿಕಾ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿದ್ದರು ಮತ್ತು ಆ ವಿಶ್ವವಿದ್ಯಾಲಯ ಅವರಿಗೆ ಸಾರ್ವಜನಿಕ ಸೇವಾ ಪ್ರಶಸ್ತಿ ನೀಡಿ ಗೌರವಿಸಿತ್ತು.
ಎರಡು ತಿಂಗಳ ನಂತರ, ಇರಾನ್ ಮೇಲೆ ಇಸ್ರೇಲ್ ಯುದ್ಧ ಘೋಷಿಸುವ ಕೇವಲ ಕೆಲವು ದಿನಗಳ ಮೊದಲು ಅಹ್ಮದಿನೆಜಾದ್ ಮತ್ತೆ ಬುಡಾಪೆಸ್ಟ್ಗೆ ಮರಳಿದ್ದರು. ಈ ಪ್ರವಾಸವು ಇಸ್ರೇಲ್ ಗುಪ್ತಚರ ಏಜೆಂಟರನ್ನು ಭೇಟಿಯಾಗಲು ಅವರು ಮಾಡಿಕೊಂಡಿದ್ದ ಒಂದು ಮುಖವಾಡವಾಗಿತ್ತು.
ಅಹ್ಮದಿನೆಜಾದ್ ಅವರ ಎಲ್ಲಾ ವಿದೇಶಿ ಪ್ರವಾಸಗಳಲ್ಲೂ ಜೊತೆಗಿರುತ್ತಿದ್ದ ಇರಾನ್ ನ 'ಅನ್ಸಾರ್ ಗಾರ್ಡ್ಸ್' ವಿಭಾಗದ ಬಾಡಿಗಾರ್ಡ್ ಗಳು ವರದಿ ನೀಡಿ, ಜೂನ್ 2025 ರ ಈ ಪ್ರವಾಸದ ಅವಧಿಯಲ್ಲಿ ಅಹ್ಮದಿನೆಜಾದ್ ಕನಿಷ್ಠ ಎರಡು ಬಾರಿ ತಮ್ಮ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ನಾಪತ್ತೆಯಾಗಿದ್ದರು ಮತ್ತು ದೀರ್ಘಾವಧಿಯ ರಹಸ್ಯ ಸಭೆಗಳನ್ನು ನಡೆಸಿದ್ದರು ಎಂದು ತಿಳಿಸಿದ್ದಾರೆ.
ಇಬ್ಬರು ಇರಾನಿ ಗಾರ್ಡ್ ಸದಸ್ಯರು ಮತ್ತು ಒಬ್ಬ ಗುಪ್ತಚರ ಅಧಿಕಾರಿಯ ಪ್ರಕಾರ, ಈ ಪ್ರವಾಸದ ಕುರಿತಾದ ವರದಿಯಲ್ಲಿ ಬಾಡಿಗಾರ್ಡ್ ಗಳು ತಾವು ಅಹ್ಮದಿನೆಜಾದ್ ಅವರ ನಾಪತ್ತೆಯ ಬಗ್ಗೆ ಅವರನ್ನು ನೇರವಾಗಿ ಪ್ರಶ್ನಿಸಿದ್ದಾಗಿ ಉಲ್ಲೇಖಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಅಹ್ಮದಿನೆಜಾದ್, ತಾವು ವಿಶ್ವವಿದ್ಯಾಲಯದ ಪ್ರೊಫೆಸರ್ ಗಳನ್ನು ಭೇಟಿಯಾಗುತ್ತಿರುವುದಾಗಿ ಸಮರ್ಥಿಸಿಕೊಂಡಿದ್ದರು.
ವಿಶ್ವವಿದ್ಯಾಲಯದ ಆ ಸಮ್ಮೇಳನದಲ್ಲಿ ಇರಾನ್ ನ ಈ ಮಾಜಿ ಅಧ್ಯಕ್ಷರು ಇಂಗ್ಲಿಷ್ ನಲ್ಲಿ ಉಪನ್ಯಾಸ ನೀಡಿದರು. ಈ ವೇಳೆ ಅವರು ತಮ್ಮ ಪ್ರತಿಯೊಂದು ಭಾಷಣದ ಆರಂಭದಲ್ಲೂ ಪಠಿಸುತ್ತಿದ್ದ ತಮ್ಮದೇ ವಿಶಿಷ್ಟ ಶೈಲಿಯ ಕುರಾನ್ ಶ್ಲೋಕವನ್ನು ಕೈಬಿಡುವ ಮೂಲಕ ಅಲ್ಲಿದ್ದ ಸಭಿಕರಿಗೆ ಆಶ್ಚರ್ಯ ಮೂಡಿಸಿದರು.
ಅವರ ಸಾಮಾಜಿಕ ಮಾಧ್ಯಮ ಪುಟದಲ್ಲಿ ಪೋಸ್ಟ್ ಮಾಡಲಾದ ಆ ಪ್ರವಾಸದ ವೀಡಿಯೋಗಳ ಪ್ರಕಾರ, ಅಚ್ಚುಕಟ್ಟಾದ ಗಾಢ ನೀಲಿ ಬಣ್ಣದ ಸೂಟ್ ಧರಿಸಿದ್ದ ಅವರು "ಹಂಚಿಕೊಂಡ ಮಾನವೀಯತೆ" ಮತ್ತು "ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆ" ಬಗ್ಗೆ ಮಾತನಾಡಿದರು ಹಾಗೂ ಹೊಸ ಜಗತ್ತು ಹೇಗೆ ಉದಯಿಸಬಹುದು ಎಂಬ ತಮ್ಮದೇ ಆದ ದೃಷ್ಟಿಕೋನವನ್ನು ಮಂಡಿಸಿದರು.
ಅವರು ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಡೆಲಿ ಅವರಿಗೆ ಪ್ರಾಚೀನ ಇರಾನಿ ಕವಿ ಫಿರ್ದೌಸಿ ಬರೆದ 'ಬುಕ್ ಆಫ್ ಕಿಂಗ್ಸ್' ಕೃತಿಯ ಪ್ರತಿಯೊಂದನ್ನು ಉಡುಗೊರೆಯಾಗಿ ನೀಡಿದರು. ಪ್ರತಿಯಾಗಿ ಪ್ರೊಫೆಸರ್ ಡೆಲಿ ಅವರು ಅಹ್ಮದಿನೆಜಾದ್ ಅವರಿಗೆ ವಿಶ್ವವಿದ್ಯಾಲಯದ ಲಾಂಛನವನ್ನು ನೀಡಿ ಗೌರವಿಸಿದರು.
ಕಳೆದ ತಿಂಗಳು ನೀಡಿದ ಸಂದರ್ಶನವೊಂದರಲ್ಲಿ ಪ್ರೊಫೆಸರ್ ಡೆಲಿ ಅವರು, ಅಹ್ಮದಿನೆಜಾದ್ ಅವರಿಗೆ ಆಹ್ವಾನ ಪತ್ರ ಕಳುಹಿಸುವ ಮೂಲಕ ತಾವು ಕೇವಲ ಒಬ್ಬ 'ಸ್ಟ್ರೋಮನ್' (Strohmann - ಜರ್ಮನ್ ಭಾಷೆಯಲ್ಲಿ ಮುಖವಾಡ ಅಥವಾ ಸೂತ್ರದ ಬೊಂಬೆ) ಪಾತ್ರವನ್ನು ಮಾತ್ರ ವಹಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಕಪ್ಪು ಪಿಯುಗಿಯೊ ಕಾರಿನಲ್ಲಿ ಟೆಹರಾನ್ ನ ಅವರ ಮನೆಯಿಂದ ಕರೆದೊಯ್ಯಲಾದ ಫೆಬ್ರವರಿ ಕೊನೆಯ ವಾರದ ನಂತರ, ಕಳೆದ ವಾರದವರೆಗೂ ಅಹ್ಮದಿನೆಜಾದ್ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.
ಜುಲೈ 6 ರಂದು ನಡೆದ ಆಯತೊಲ್ಲಾ ಖಾಮಿನೈ ಅವರ ಅಂತ್ಯಸಂಸ್ಕಾರದ ಮೆರವಣಿಗೆಯಲ್ಲಿ ಅವರು ದಿಢೀರನೆ ಕಾಣಿಸಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಮೆರವಣಿಗೆಯ ವೀಡಿಯೋಗಳಲ್ಲಿ, 90 ಡಿಗ್ರಿ ಫ್ಯಾರನ್ಹೀಟ್ (32 ಡಿಗ್ರಿ ಸೆಲ್ಸಿಯಸ್) ತಾಪಮಾನದ ತೀವ್ರ ಸೆಕೆಯಲ್ಲೂ ಅಹ್ಮದಿನೆಜಾದ್ ದಪ್ಪನೆಯ ಜಾಕೆಟ್ ಧರಿಸಿರುವುದು ಮತ್ತು ಸರ್ಜಿಕಲ್ ಮಾಸ್ಕ್ ಅನ್ನು ಗಲ್ಲದವರೆಗೆ ಎಳೆದುಕೊಂಡಿರುವುದು ಕಂಡುಬಂದಿದೆ. ಇರಾನ್ ನ ಇನ್ನುಳಿದ ಇಬ್ಬರು ಮಾಜಿ ಅಧ್ಯಕ್ಷರಾದ ಹಸನ್ ರೌಹಾನಿ ಮತ್ತು ಮೊಹಮ್ಮದ್ ಖಾತಮಿ ಅವರಿಗೆ ಈ ಅಂತ್ಯಸಂಸ್ಕಾರದ ಯಾವುದೇ ವಿಧಿವಿಧಾನಗಳಿಗೆ ಆಹ್ವಾನವಿರಲಿಲ್ಲ ಮತ್ತು ಅವರು ಎಲ್ಲೂ ಭಾಗವಹಿಸಿರಲಿಲ್ಲ
ಅಹ್ಮದಿನೆಜಾದ್ ತಲೆ ತಗ್ಗಿಸಿ ನಿಂತಿದ್ದರು, ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಮತ್ತು ಅವರ ಸುತ್ತಲೂ ಭದ್ರತಾ ಸಿಬ್ಬಂದಿಯಂತೆ ತೋರುತ್ತಿದ್ದವರು ಕಾವಲು ನಿಂತಿದ್ದರು.
ಪ್ರಸ್ತುತ ಇರಾನ್ ಆಡಳಿತವನ್ನು ಉರುಳಿಸಿ, ಅಲ್ಲಿ ಅಹ್ಮದಿನೆಜಾದ್ ಅವರನ್ನು ಹೊಸ ನಾಯಕನನ್ನಾಗಿ ಪ್ರತಿಷ್ಠಾಪಿಸುವ ರಹಸ್ಯ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದೇ ಇಸ್ರೇಲ್ ನ ಪ್ರಮುಖ ಗುರಿಯಾಗಿತ್ತು.
ಸೌಜನ್ಯ: The New York Times






