ಶೇ.33 ಮಹಿಳಾ ಮೀಸಲಾತಿ ಮಸೂದೆ, ಮೂಗಿಗೆ ಸವರಿದ ತುಪ್ಪವೇ?

ಅತಿ ದೀರ್ಘಕಾಲ ನನೆಗುದಿಗೆ ಬಿದ್ದ ಯಾವುದಾದರೂ ಮಸೂದೆ ಇದ್ದರೆ; ಅದು ಶೇ. 33 ಮಹಿಳಾ ಮೀಸಲಾತಿ ಮಸೂದೆಯೇ ಆಗಿದೆ. ಮೂರು ದಶಕಗಳವರೆಗೆ ಶೈತ್ಯಾಗಾರಕ್ಕೆ ತಳ್ಳಲಾಗಿದ್ದ ಮಸೂದೆ ಮೊನ್ನೆ ಅಂದರೆ 20-9-23ರಂದು ಲೋಕಸಭೆಯಲ್ಲಿ ಅಂಗೀಕಾರ ಆಗಿದೆ. ಇಷ್ಟು ದೀರ್ಘ ವನವಾಸದ ನಂತರ ಈಗಲಾದರೂ ಅಂಗೀಕಾರ ಆಯಿತಲ್ಲ ಎಂದು ಮಹಿಳಾ ಲೋಕ ಖುಷಿ ಪಡಬಹುದು ಎಂದು ಭಾವಿಸಲಾಗಿದ್ದರೆ ಅದು ಶುದ್ಧ ಸುಳ್ಳು ಮತ್ತು ಭ್ರಮಾತ್ಮಕ ಎಂಬುದನ್ನು ಸದರಿ ಬಿಲ್ ಎತ್ತಿ ತೋರಿಸುತ್ತಿದೆ. ಕಾರಣ ಈ ಮೊದಲು ಮಂಡಿಸಲಾದ ಮಸೂದೆಯಲ್ಲಿ ಇಲ್ಲದ ಷರತ್ತುಗಳನ್ನು ವಿಧಿಸಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುದನ್ನು ಬಿಜೆಪಿ ಸರಕಾರ ಸಾಬೀತುಪಡಿಸಿದೆ. ಬಿಜೆಪಿ ತನ್ನ 2014ರ ಲೋಕಸಭೆ ಚುನಾವಣಾ ಪ್ರಣಾಳಿಕೆಯಲ್ಲಿಯೇ ತಾನು ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆ ಪಾಸು ಮಾಡುವುದಾಗಿ ಆಶ್ವಾಸನೆ ನೀಡಿ ಅಧಿಕಾರ ವಹಿಸಿಕೊಂಡಿತ್ತು. ಐದು ವರ್ಷಗಳುದ್ದಕ್ಕೂ ಮಸೂದೆ ಕುರಿತು ಚಕಾರ ಎತ್ತಲಿಲ್ಲ. ಆನಂತರ 2019ರ ಚುನಾವಣೆಯಲ್ಲಿಯೂ ಮತ್ತೆ ಅದೇ ಡೈಲಾಗ್ ಹೊಡೆಯಿತು. ಅಧಿಕಾರವನ್ನು ವಹಿಸಿಕೊಂಡು ಈವರೆಗೆ ಅಂದರೆ ಐದು ವರ್ಷಗಳವರೆಗೆ ಮಸೂದೆಯ ಬಗೆಗೆ ಉಸಿರು ಎತ್ತಲಿಲ್ಲ. ಈಗ ಇನ್ನೇನು ಚುನಾವಣೆ ಸಮೀಪಿಸುತ್ತಿದೆ. ತಾನು ಜನ ವಿಶ್ವಾಸ ಕಳೆದುಕೊಂಡಿದ್ದೇನೆ ಎಂಬುದು ಮನವರಿಕೆಯಾದೊಡನೇ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ ನೀಡಿದೆ. ಮಸೂದೆ ಏನೋ ಪಾಸಾಗಿದೆ. ಆದರೆ ಅದು ಅನುಷ್ಠಾನಗೊಳ್ಳಲು ಹಲವು ಅಡ್ಡಗೋಡೆಗಳನ್ನು ಪಾರು ಮಾಡಿ ಬರಬೇಕು. ಮೊದಲು ಜನಗಣತಿ ಆಗಬೇಕು. ಆನಂತರ ಕ್ಷೇತ್ರ ಪುನರ್ ವಿಂಗಡಣೆಯೂ ಆಗಬೇಕು. ಇದೆಲ್ಲವೂ ಮುಗಿದು ಸದರಿ ಮಸೂದೆ ಕ್ರಿಯಾನ್ವಿತವಾಗಲು 2029 ರವರೆಗೆ ಕಾಯಬೇಕು. ಎಲ್ಲವೂ ಸುಸೂತ್ರವಾಗಿ ನಡೆದರೂ ಇನ್ನೂ 7-8 ವರ್ಷ ಕಾಯಬೇಕು. ಈಗಾಗಲೇ 2010ರಲ್ಲಿ ರಾಜ್ಯಸಭೆಯಲ್ಲಿ ಪಾಸು ಮಾಡಲಾಗಿದ್ದ ಮಸೂದೆಯನ್ನೇ ಮಂಡಿಸಿದ್ದರೆ ಸಾಕಿತ್ತು. ಅದರಲ್ಲಿ ಈ ಮೇಲಿನ ಷರತ್ತುಗಳು ಇರಲೇ ಇಲ್ಲ. ಇಲ್ಲದ ಷರತ್ತುಗಳನ್ನು ವಿಧಿಸಿ ಅದಕ್ಕೆ ‘ನಾರಿಶಕ್ತಿ ವಂದನೆ’ ಬಿಲ್ ಎಂದು ಹೆಸರಿಸಿ ಮಂಡಿಸುವ ಉದ್ದೇಶ ಏನಿದೆ? ಮೊದಲನೆಯದಾಗಿ ಮಸೂದೆಗಳು ಮಸೂದೆಗಳಾಗಿಯೇ ಇರಬೇಕು. ಸಾಂವಿಧಾನಿಕ ಪರಿಭಾಷೆಗೆ ಅನುಗುಣವಾಗಿರಬೇಕು. ಎರಡನೆಯದಾಗಿ ಮಸೂದೆಯು ತಡವಿಲ್ಲದಂತೆ ತಕ್ಷಣಕ್ಕೆ ಜಾರಿ ಬರುವಂತೆ ಮಾಡಬೇಕು. ಬಿಜೆಪಿ ತನಗೆ ಬೇಕಾದ ಹಲವಾರು ಮಸೂದೆಗಳನ್ನು ರಾತ್ರೋರಾತ್ರಿ ಪಾಸ್ ಮಾಡಿ ಹೊತ್ತು ಮೂಡುವಷ್ಟರಲ್ಲಿ ಜಾರಿ ಮಾಡಿದ ನಿದರ್ಶನಗಳು ಇವೆ. ಆದರೆ ಮಹಿಳಾ ಮೀಸಲಾತಿ ಮಸೂದೆಗೇಕೆ ಈ ವಿಳಂಬ ನೀತಿ. ಬರಲಿರುವ ಚುನಾವಣೆಯಲ್ಲಿ ಮಹಿಳಾ ಮತಗಳನ್ನು ಸೆಳೆಯುವ ಕಪಟ ಮಾತ್ರ ಇದರಲ್ಲಿ ಎದ್ದು ಕಾಣಿಸುತ್ತಿದೆ. ನಿಜವಾಗಿಯೂ ಮಹಿಳೆಯರ ಬಗೆಗೆ ಕಾಳಜಿ ಇದ್ದಿದ್ದರೆ ಬಿಜೆಪಿ ತನ್ನ ಅಧಿಕಾರಾವಧಿಯ ಇಷ್ಟು ದೀರ್ಘಕಾಲ ಕಾಯಬೇಕಾದ ಅವಶ್ಯಕತೆ ಇರಲಿಲ್ಲ.
1996ರಲ್ಲಿ ಆಗಿನ ಸಂಸದೆ ಪ್ರಮಿಳಾ ದಂಡವತೆಯವರು ಖಾಸಗಿಯಾಗಿ ಸಾದರ ಪಡಿಸಿದ್ದ ಮಹಿಳಾ ಮೀಸಲಾತಿ ಮಸೂದೆ ಹಲವು ಚರ್ಚೆಗಳ ನಂತರ ಅದಕ್ಕಾಗಿ ಸಮಿತಿಯೊಂದನ್ನು ಸಿಪಿಐನ ನಾಯಕಿ ಗೀತಾ ಮುಖರ್ಜಿ ನೇತೃತ್ವದಲ್ಲಿ ಸಿದ್ಧಪಡಿಸಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡಿಸಲಾಯಿತು. ಆಗ ಇದಕ್ಕೆ ಮೊದಲು ವಿರೋಧಿಸಿದವರೇ ಬಿಜೆಪಿಯ ಆಗಿನ ಸಂಸದೆಯರಾಗಿದ್ದ ಸುಷ್ಮಾ ಸ್ವರಾಜ್ ಮತ್ತು ಉಮಾ ಭಾರತಿ. ಅವರೊಂದಿಗೆ ಎಸ್.ಪಿ., ಆರ್.ಜೆ.ಡಿ., ಬಿ.ಎಸ್.ಪಿ ಇನ್ನು ಕೆಲವು ಸಂಸದರು ಸೇರಿಕೊಂಡಿದ್ದರು. ಬಿಜೆಪಿ ನಾಯಕಿಯರ ಕ್ಯಾತೆ ಎಂದರೆ ಸದರಿ ಬಿಲ್‌ನಲ್ಲಿ ಒಬಿಸಿಗಳಿಗೆ ಕೋಟಾ ಇಲ್ಲ. ಕೇವಲ ಮೇಲ್ಜಾತಿಯ, ಪ್ರಭಾವಿ ಮಹಿಳೆಯರು ಮಾತ್ರ ಆಕ್ರಮಿಸಿಕೊಳ್ಳುತ್ತಾರೆ. ಇದರಲ್ಲಿ ಹಿಂದುಳಿದ, ಬಡ ಮಹಿಳೆಯರಿಗೆ ಪಾಲು ಸಿಗದು ಎಂಬ ವಾದ ಹೂಡಿದ್ದರು. ಹಾಗೆ ನೋಡಿದರೆ ಅವರ ವಾದವು ಕೂಡ ಅಂದು ಅಷ್ಟೇನು ಸಮಂಜಸವಾಗಿರಲಿಲ್ಲ. ಏಕೆಂದರೆ ನಮ್ಮ ಮೀಸಲಾತಿ ನೀತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬಿಟ್ಟರೆ ಹಿಂದುಳಿದ ಜಾತಿಗಳ ಪುರುಷರಿಗೂ ಮೀಸಲಾತಿಯ ಪ್ರಸ್ತಾವನೆ ಇರಲಿಲ್ಲ. ಜನರಲ್ ನೀತಿಯಲ್ಲಿ ಏನೆಲ್ಲ ಇತ್ತೋ ಅವೆಲ್ಲವು ಮಹಿಳಾ ಮೀಸಲಾತಿ ಮಸೂದೆಯಲ್ಲಿ ತನ್ನಷ್ಟಕ್ಕೆ ಲಭ್ಯವಾಗಲಿತ್ತು. ಆದರೆ ಅಸಲಿಗೆ ಸಂಘ ಪರಿವಾರ ಪ್ರಣೀತ ಬಿಜೆಪಿಯ ಮನುವಾದಿ ತಾತ್ವಿಕತೆಯಲ್ಲಿ ಮಹಿಳೆಯರಿಗೆ ರಾಜಕೀಯ ಅಧಿಕಾರ ನೀಡುವ ಇಚ್ಛೆ ಇರಲೇ ಇಲ್ಲ. ಸದರಿ ಬಿಲ್ ತಡೆಯಲು ಅವರಿಗೊಂದು ನೆಪ ಬೇಕಿತ್ತು.
ಈಗಲಾದರೂ ಹಿಂದುಳಿದ ವರ್ಗಗಳಿಗೆ ಒಳ ಮೀಸಲಾತಿ ಕಲ್ಪಿಸಿ ಮಸೂದೆಯನ್ನು ಸಕಾಲಿಕಗೊಳಿಸಬೇಕಿತ್ತು. ಹಾಗೆ ಮಾಡಿಲ್ಲ. ಜನಗಣತಿ, ಕ್ಷೇತ್ರ ವಿಂಗಡಣೆಯಂಥ ಷರತ್ತುಗಳನ್ನು ಸೂಚಿಸುವ ಸರಕಾರಕ್ಕೆ ಒಳ ಮೀಸಲಾತಿ ತಿದ್ದುಪಡಿ ಸೂಚಿಸುವುದೇನು ಕಠಿಣವಾಗಿತ್ತೆ? ಇಲ್ಲವಲ್ಲ. ಈಗಲಾದರೂ ಮಸೂದೆ ಪಾಸಾಗಿದೆ ಎಂದರೆ ಕಳೆದ 27 ವರ್ಷಗಳಿಂದ ಹಲವಾರು ಮಹಿಳಾ ಸಂಘಟನೆಗಳು, ವಿಚಾರವಾದಿಗಳು ಇದಕ್ಕಾಗಿ ಬೆವರು ಬಸಿದಿವೆ. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಸದರಿ ಬಿಲ್ ಪಾಸು ಮಾಡುವಂತೆ 2005ರಲ್ಲಿ ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ರಾಸ್ತಾ ರೋಕೋ ನಡೆಸಿತ್ತು. ಆ ಸಂದರ್ಭದಲ್ಲಿ ಕಲಬುರಗಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದು ಸಾಮಾನ್ಯ ಮಹಿಳೆಯರು ಕೇಸು ಹಾಕಿಸಿಕೊಂಡಿದ್ದರು. ಕೇಸು ಹಾಕಿದ ಎರಡು ವರ್ಷಗಳ ತರುವಾಯ ಇದ್ದಕ್ಕಿದ್ದಂತೆ ಒಂದು ದಿನ ಸಂಘಟನೆಯ ಕೂಲಿ ಕಾರ್ಮಿಕ ಮಹಿಳೆಯರಿಗೆ ಅರೆಸ್ಟ್ ವಾರೆಂಟ್ ಬಂದಿತ್ತು. ಕಾರಣ ವಿಚಾರಣೆಯ ನೋಟಿಸ್‌ಗಳು ಮನೆ ಇಲ್ಲದ ಅವರಿಗೆ ಸರಿಯಾಗಿ ತಲುಪಿರಲಿಲ್ಲ. ಹೀಗಾಗಿ ಕೊನೆಗೊಂದು ದಿನ ಪೊಲೀಸರು ಅವರನ್ನು ಹುಡುಕಿಕೊಂಡು ಬಂದಿದ್ದರು. ತಕ್ಷಣವೇ ಸಂಘಟನೆಯ ನಾಯಕಿಯರು ಜಾಗೃತರಾಗಿ ಬೇಲ್ ಪಡೆಯಬೇಕು. ಆದರೆ ಕೋರ್ಟಿಗೆ ಮೂರು ದಿನ ರಜೆ ಇತ್ತು. ಬಂಧನ ತಪ್ಪುವಂತಿಲ್ಲ. ಈ ವಿಷಯವನ್ನು ಅವರು ತಮ್ಮ ಗಂಡ, ಅತ್ತೆ ಮನೆಯವರಿಗೆ ತಿಳಿಸುವಂತಿಲ್ಲ. ಜೈಲಿಗೆ ಎರಡು ದಿನದ ಮಟ್ಟಿಗಾದರೂ ಹೋಗದೆ ಗತ್ಯಂತರವಿಲ್ಲ. ಎಂಥ ದುಗುಡ, ನೋವು, ತಲ್ಲಣ ಎದುರಾಗಿತ್ತು ಎಂದರೆ ಅದನ್ನು ಶಬ್ದಗಳಲ್ಲಿ ಹೇಳಲಾಗದು. ಅಂತೂ ಉಪಾಯ ಮಾಡಿ ಸಂಘಟನೆಯ ಕೆಲಸಕ್ಕೆ ಬೆಂಗಳೂರಿಗೆ ಹೋಗಲಿಕ್ಕಿದೆ ಎಂದು ಹೇಳಿ ಮನೆಯಿಂದ ಹೊರಡಿಸಿಕೊಂಡು ಗುಪ್ತವಾಗಿ ಜೈಲಿಗೆ ಕಳಿಸಿ ಎರಡು ದಿನ ಸೂಜಿ ಮೊನೆಯ ಮೇಲೆ ಕಾಲ ಕಳೆಯಲಾಗಿತ್ತು. ಬೇಲ್‌ನ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಬಿಡುಗಡೆ ಮಾಡಿಸಿಕೊಂಡು ಬೆಂಗಳೂರಿನಿಂದ ಮರಳಿ ಬಂದಂತೆ ತೋರಿಸಲು ಸಂಘಟನೆ ಅವರಿಗಾಗಿ ಮಕ್ಕಳಿಗೆ ಬಟ್ಟೆ, ಸ್ವೀಟ್ ಇತ್ಯಾದಿಗಳನ್ನು ಖರೀದಿಸಿ ನೀಡಿತ್ತು. ಇಂಥ ಅಸಂಖ್ಯ ಮಹಿಳೆಯರ ಸಮರಧೀರ ಹೋರಾಟದ ಫಲವಾಗಿ ಮಸೂದೆ ಈವರೆಗೂ ಜೀವಂತವಾಗಿ ಉಳಿದುಕೊಂಡು ಬಂದಿತ್ತು. ಈಗ ಬಿಜೆಪಿ ಅನಾಮತ್ತಾಗಿ ಅದರ ಜಯವನ್ನು ತನ್ನ ಮುಡಿಗೇರಿಸಿಕೊಳ್ಳಲು ಹೊರಟಿದೆಯಾದರೂ ಅದೂ ಕೂಡ ನಿಜವಾದ ಇಚ್ಛಾಶಕ್ತಿಯಿಂದ ಅಲ್ಲ. ಈ ನಡೆ ಚುನಾವಣಾ ಪೂರ್ವದಲ್ಲಿ ಬಿಜೆಪಿಯು ದೇಶದ ಮಹಿಳಾ ಮತಗಳನ್ನು ತನ್ನೆಡೆಗೆ ಸೆಳೆಯುವ ಹುನ್ನಾರವೇ ಹೊರತು ನಿಜವಾದ ಮಹಿಳಾ ಕಾಳಜಿಯನ್ನು ವ್ಯಕ್ತಪಡಿಸುತ್ತಿಲ್ಲ. ಹಾಗೆ ನೋಡಿದರೆ ವಿಳಂಬ ನೀತಿಯನ್ನು ಅನುಸರಿಸಿ ಮಹಿಳೆಯರನ್ನು ಯಾಮಾರಿಸುವುದೇ ಮಸೂದೆ ಹಿಂದಿನ ಉದ್ದೇಶವಾದಂತಿದೆ. ಈಗ ಪಾಸಾದ ಕಾನೂನು ಹಸಿದವರ ಎದುರು ತಟ್ಟೆಯಲ್ಲಿ ಅನ್ನವಿಟ್ಟು ತಿನ್ನಲು ಬಾರದಂತೆ ಕೈ ಕಟ್ಟಿ ಹಾಕಿದಂತಾಗಿದೆ. ತಿನ್ನುವ ಸಮಯ ಬರುವಷ್ಟರಲ್ಲಿ ಅನ್ನ ಎಷ್ಟು ಹಳಸಿರುತ್ತದೆಯೋ? ಯಾವ ನಾಯಿ, ನರಿಗಳ ಪಾಲಾಗಿರುತ್ತದೋ ಯಾರಿಗೆ ಗೊತ್ತು?







