Work From Home ಉದ್ಯೋಗಿಗಳ ಕೌಶಲ್ಯ ಬೆಳವಣಿಗೆಗೆ ಧಕ್ಕೆ ತರುತ್ತಿದೆಯೇ?

Photo: timesofindia
ಹೊಸ ಅಧ್ಯಯನವೊಂದು ತೋರಿಸಿರುವ ಪ್ರಕಾರ, ತಮ್ಮ ಆರಂಭಿಕ ವೃತ್ತಿ ಜೀವನದಲ್ಲಿ ಸಂಪೂರ್ಣವಾಗಿ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು ಸಾಮಾನ್ಯವಾಗಿ ಹಿರಿಯರ ಮಾರ್ಗದರ್ಶನ, ಅನೌಪಚಾರಿಕ ಕಲಿಕೆ ಮತ್ತು ದೈನಂದಿನ ಸಭೆ-ಸಂವಾದಗಳನ್ನು ಕಳೆದುಕೊಳ್ಳುತ್ತಾರೆ!
ಆಧುನಿಕ ಜಗತ್ತಿನ ಹೊಸ ರೀತಿಯ ವೃತ್ತಿ ಪರಿಸರದಲ್ಲಿ ಮನೆಯಿಂದಲೇ ಕೆಲಸ ಮಾಡುವ ವೃತ್ತಿಪರರ ಸಂಖ್ಯೆ ಹೆಚ್ಚಾಗುತ್ತಿದೆ. ವರ್ಕ್ ಫ್ರಂ ಹೋಂ (ಮನೆಯಿಂದ ಕೆಲಸ) ಸಂಸ್ಕೃತಿಯಲ್ಲಿ ಎರಡು- ಮೂರು ರೀತಿಯ ವಿಧಗಳಿವೆ. ಸಂಪೂರ್ಣವಾಗಿ ಮನೆಯಿಂದ ಕೆಲಸ ಮಾಡುವವರು ಮತ್ತು ವಾರಕ್ಕೆ ಮೂರುದಿನ ಕಚೇರಿ ಮತ್ತು ಮೂರು ದಿನ ಮನೆಯಿಂದ ಕೆಲಸ ಮಾಡುವವರು. ಇನ್ನೊಂದು ವಿಭಾಗದವರು ತಿಂಗಳಿಗೆ ಎರಡು ವಾರ ಮನೆಯಿಂದ ಕೆಲಸ ಮಾಡಿದರೆ ಇನ್ನೆರಡು ವಾರ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ.
ಹೊಸ ಅಧ್ಯಯನವೊಂದು ತೋರಿಸಿರುವ ಪ್ರಕಾರ, ತಮ್ಮ ಆರಂಭಿಕ ವೃತ್ತಿ ಜೀವನದಲ್ಲಿ ಸಂಪೂರ್ಣವಾಗಿ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು ಸಾಮಾನ್ಯವಾಗಿ ಹಿರಿಯರ ಮಾರ್ಗದರ್ಶನ, ಅನೌಪಚಾರಿಕ ಕಲಿಕೆ ಮತ್ತು ದೈನಂದಿನ ಸಭೆ-ಸಂವಾದಗಳನ್ನು ಕಳೆದುಕೊಳ್ಳುತ್ತಾರೆ. ಇದರ ಪರಿಣಾಮವಾಗಿ ನಿಧಾನಗತಿಯ ಬಡ್ತಿ ಮತ್ತು ಕೌಶಲ್ಯ ಬೆಳೆಸಿಕೊಳ್ಳುವಲ್ಲಿ ಸಮಸ್ಯೆ ಎದುರಿಸುತ್ತಾರೆ. ಕೌಶಲ್ಯವಿಲ್ಲದೆ ಭಡ್ತಿಯಲ್ಲಿ ಸಮಸ್ಯೆಯಾಗುತ್ತದೆ.
ಆದರೆ ವಾಸ್ತವದಲ್ಲಿ ಉದ್ಯೋಗಿಗಳು ವರ್ಕ್ ಫ್ರಂ ಹೋಂ ಹೇಗೇ ಇದ್ದರೂ ಚೆನ್ನ ಎಂದೇ ಅಭಿಪ್ರಾಯಪಡುತ್ತಾರೆ. ಇಂದಿನ AI ಯುಗದಲ್ಲಿ ಮಾರ್ಗದರ್ಶನ ಮತ್ತು ಸಲಹೆಗಳು ಬೇಕಾಗಿದ್ದರೆ AI ಚಾಟ್ಬಾಟ್ ನೆರವಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಮಾರ್ಗದರ್ಶನ ನೀಡುವ AI
ಮೂಲತಃ ಮಂಗಳೂರಿನ ನಿವಾಸಿಯಾಗಿದ್ದು ಬೆಂಗಳೂರಿನಲ್ಲಿ ಸ್ಟ್ರೈಪ್ ಕಂಪೆನಿಯಲ್ಲಿ ಹಿರಿಯ ಲೆಕ್ಕ ಪರಿಶೋದಕರಾಗಿ ಕೆಲಸ ಮಾಡುತ್ತಿರುವ ರಕ್ಷಾ ಅವರ ಪ್ರಕಾರ, “ನನ್ನ ವೃತ್ತಿಜೀವನದ ಆರಂಭದಲ್ಲಿ ಕೋವಿಡ್ ಕಾರಣದಿಂದ ‘ಅಮೆಜಾನ್’ ಕಂಪೆನಿಗೆ ಮನೆಯಿಂದಲೇ ಕೆಲಸ ಮಾಡುತ್ತಿದ್ದೆ. ಸುಮಾರು ನಾಲ್ಕು ವರ್ಷಗಳ ಕಾಲ ಮನೆಯಿಂದ ಕೆಲಸ ಮಾಡಿದ ನಂತರ ಇದೀಗ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮನೆಯಿಂದ ಕೆಲಸ ಮಾಡುವಾಗ ಚೆನ್ನಾಗಿತ್ತು. ಮಾರ್ಗದರ್ಶನ ಅಥವಾ ಸಲಹೆಗಳ ಅಗತ್ಯ ಬಿದ್ದಾಗ AI ಚಾಟ್ಬಾಟ್ ಜೊತೆಗೆ ಕೇಳಿ ಪರಿಹರಿಸುತ್ತಿದ್ದೆವು. ಭಡ್ತಿ ಅಥವಾ ವೇತನದಲ್ಲಿ ಏರಿಕೆಯಂತಹ ಸಮಸ್ಯೆ ಏನೂ ಬರಲಿಲ್ಲ. ಬದಲಾಗಿ ಇದೀಗ ಬೆಂಗಳೂರಿನ ಸಾರಿಗೆ ಜಂಜಡದ ನಡುವೆ ಕೆಲಸ ಮಾಡುವುದು ಬೇಸರ ತಂದಿದೆ. ಮನೆಯವರಿಂದ ದೂರವಿರುವ ನೋವಿದೆ” ಎನ್ನುತ್ತಾರೆ.
ಮುಖ್ಯವಾಗಿ IT ರಂಗದಲ್ಲಿ ಕೆಲಸ ಮಾಡುವವರಿಗೆ ಮನೆಯಿಂದ ಕೆಲಸ ಮಾಡುವುದು ಯಾವುದೇ ಸಮಸ್ಯೆ ತಂದಿಲ್ಲ. “ಐಟಿ ಕಂಪೆನಿಗಳಲ್ಲಿ ಜಂಟಿ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡುವಾಗ ಮಾತ್ರ ಸಾಂಘಿಕ ಕೆಲಸದ ಅಗತ್ಯವಿರುತ್ತದೆ. ಅಂತಹ ಸಂದರ್ಭದಲ್ಲಿ ಮನೆಯಿಂದ ಕೆಲಸ ಮಾಡುವುದಿಲ್ಲ. ಸಂಪೂರ್ಣವಾಗಿ ಮನೆಯಿಂದ ಕೆಲಸ ಮಾಡುವವರು ಪ್ರತ್ಯೇಕ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಪ್ರಾಜೆಕ್ಟ್ಗಳನ್ನು ಹಂಚಿ ಕೊಡುವಾಗ, ಪ್ರತಿಯೊಬ್ಬರಿಗೆ ಮೀಸಲಿರಿಸಿದ ಕೆಲಸವನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಹೀಗಾಗಿ ಬಡ್ತಿ ಅಥವಾ ವೇತನ ಏರಿಕೆಯಂತಹ ಸಮಸ್ಯೆ ಬರುವುದಿಲ್ಲ” ಎನ್ನುತ್ತಾರೆ ಫ್ಲಿಪ್ಕಾರ್ಟ್ನಲ್ಲಿ ವೆಂಡರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್.
►ಸಾಂಘಿಕ ಕೆಲಸದ ಕೊರತೆ
ಆದರೆ ಎಲ್ಲಾ ವೃತ್ತಿಪರರೂ ಇದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ‘ಬಾರ್ ಆಂಡ್ ಬೆಂಚ್’ನಲ್ಲಿ ಅನುವಾದಕ/ ಲೇಖಕರಾಗಿ ಕೆಲಸ ಮಾಡುತ್ತಿರುವ ಸಿದ್ದೇಶ್ ಪ್ರಕಾರ, “ಮನೆಯಿಂದ ಕೆಲಸ ಮಾಡುವಾಗ ಭಡ್ತಿ ಮತ್ತು ವೇತನ ಏರಿಕೆಯ ಅವಕಾಶ ಕಡಿಮೆ ಇದೆ. ಆದರೆ ಕೆಲಸ ಮಾತ್ರ ಹೆಚ್ಚು ಇರುತ್ತದೆ. ಆದರೆ ಕುಟುಂಬದ ಜೊತೆಗಿದ್ದು ಕೆಲಸ ಮಾಡುವ ಅನುಭವ ಚೆನ್ನಾಗಿದೆ. ಅಲ್ಲದೆ, ನಮಗೆ ಬೇಕಾದ ಸ್ಥಳಗಳಿಗೆ ತಿರುಗಾಡಬಹುದು. ರೈಲಿನಲ್ಲಿ ಕುಳಿತೇ ಸುದ್ದಿ ಪ್ರಕಟಿಸುತ್ತೇನೆ. ಇದೀಗ ನ್ಯಾಯಾಲಯದ ಕಲಾಪಗಳೆಲ್ಲವೂ ಅಂತರ್ಜಾಲದಲ್ಲಿ ಸಿಗುವ ಕಾರಣ ವೃತ್ತಿಗೆ ಸಮಸ್ಯೆ ಬಂದಿಲ್ಲ. ಬೆಂಗಳೂರಿನ ಸಾರಿಗೆ ಜಂಜಡವನ್ನು ತಪ್ಪಿಸಿಕೊಂಡು ಕೆಲಸ ಮಾಡುವುದು ನಿಜಕ್ಕೂ ಉತ್ತಮ ಅನುಭವ.”
ಸಂಪೂರ್ಣವಾಗಿ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ಹಿರಿಯ ಉದ್ಯೋಗಿಗಳು ಮತ್ತು ಸಹೋದ್ಯೋಗಿಗಳ ಜೊತೆಗೆ ಬೆರೆತು ಕೆಲಸ ಮಾಡುವ ಅನುಭವದ ಕೊರತೆಯಿದೆ ಎನ್ನುವುದನ್ನು ಸಿದ್ದೇಶ್ ಒಪ್ಪಿಕೊಳ್ಳುತ್ತಾರೆ. ಇದು ತಮ್ಮ ಕೌಶಲ್ಯದ ಮೇಲೆ ಪ್ರಭಾವ ಬೀರುತ್ತದೆ ಮತ್ತು ಕಚೇರಿಯ ಸಂಸ್ಕೃತಿಯಿಂದ ಹೊರತಾದ ಸ್ಥಳದಲ್ಲಿ ಕುಳಿತು ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
►ಹೈಬ್ರಿಡ್ ಸಂಸ್ಕೃತಿ ಉತ್ತಮ
ರಿಯಲ್ ಎಸ್ಟೇಟ್ ಕಂಪೆನಿಯಲ್ಲಿ ನಿತ್ಯವೂ ಕಚೇರಿಗೆ ಹೋಗಿ ಕೆಲಸ ಮಾಡುವ ದೀಪಾ ಪ್ರಕಾರ ಸಂಪೂರ್ಣವಾಗಿ ಮನೆಯಿಂದ ಕೆಲಸ ಮಾಡುವ ಅವಕಾಶ ಉತ್ತಮವಾಗಿರುತ್ತದೆ. “ನನ್ನ ಸ್ನೇಹಿತೆ ಪೂರ್ಣಿಮ ಹೈಬ್ರಿಡ್ ಕೆಲಸ ಮಾಡುತ್ತಾಳೆ. ವಾರಕ್ಕೆ ಮೂರು ದಿನ ಮಾತ್ರ ಕಚೇರಿಗೆ ಹೋಗುತ್ತಾಳೆ. ಉಳಿದ ಮೂರು ದಿನ ಕೆಲವೊಮ್ಮೆ ಊರಿಗೆ ಹೋಗಿ ಮನೆಯಿಂದ ಕೆಲಸ ಮಾಡುತ್ತಾಳೆ. ಕೆಲವೊಮ್ಮೆ ಪಿಜಿಯಲ್ಲಿ ಇದ್ದುಕೊಂಡೇ ಮಾಡುತ್ತಾಳೆ. ಅವಳಿಗೆ ಎರಡೂ ರೀತಿಯ ಕೆಲಸವೂ ಇಷ್ಟವಾಗಿದೆ. ಮೂರು ದಿನ ಸ್ವತಂತ್ರವಾಗಿ ಲಾಗಿನ್ ಸಮಯವಿಲ್ಲದೆ ಕೊಟ್ಟ ಕೆಲಸವನ್ನು ಮುಗಿಸುತ್ತಾಳೆ. ಅಂತಹ ಕೆಲಸದ ಸಂಸ್ಕೃತಿ ನಮಗೂ ಸಿಗಬೇಕು ಎಂದು ಬಯಸುತ್ತೇನೆ.”
►ಪ್ರತಿಭಾವಂತರಿಗೆ ಮಾತ್ರ ಕೆಲಸ
ಆಧುನಿಕ ಜಗತ್ತಿನಲ್ಲಿ AI ಎಲ್ಲವೂ ಆಗಿರುವಾಗ ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ ಮತ್ತು ಸಲಹೆಗಳಿಗೆ ಸಮಸ್ಯೆಯಾಗಿಲ್ಲ. ತಮ್ಮ ಕೆಲಸದ ಮೌಲ್ಯಮಾಪನದ ಸಮಯದಲ್ಲಿ ಅವರಿಗೆ ತಮ್ಮ ಕೆಲಸದ ಕುರಿತಂತೆ ಅಭಿಪ್ರಾಯಗಳು ಸಿಗುತ್ತವೆ.
“ಕೌಶಲ್ಯವಿದ್ದವರಿಗೆ ಮಾರ್ಗದರ್ಶನ ಅಥವಾ ಹಿರಿಯರ ಅಭಿಪ್ರಾಯದ ಅಗತ್ಯವಿರುವುದಿಲ್ಲ. ಇದೀಗ ಎಐ ಯುಗದಲ್ಲಿ ಕೌಶಲ್ಯ ಇದ್ದವರಿಗೆ ಮಾತ್ರ ಕೆಲಸವಿರುತ್ತದೆ. ಮನೆಯಿಂದ ಕೆಲಸ ಮಾಡುವುದು ಅಥವಾ ಕಚೇರಿಯಿಂದ ಕೆಲಸ ಮಾಡುವುದು ಮುಖ್ಯವಾಗುವುದಿಲ್ಲ. ಕೌಶಲ್ಯ ಇದೆಯೇ ಎನ್ನುವುದು ಮುಖ್ಯವಾಗುತ್ತದೆ. ಇನ್ನು ಮುಂದೆ ಪ್ರತಿಭಾವಂತರು ಮಾತ್ರ ಉದ್ಯೋಗದಲ್ಲಿರುತ್ತಾರೆ. ಇಲ್ಲದಿದ್ದರೆ ತಮ್ಮ ಉದ್ಯೋಗವನ್ನು AI ಕೈಗೆ ಕೊಡಬೇಕಾಗುತ್ತದೆ” ಎನ್ನುತ್ತಾರೆ ಕಿರಣ್.







