ಕಾಲಿನ ಉಗುರು ಕಪ್ಪಾಗಿದೆಯೆ? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ?

ಸಾಂದರ್ಭಿಕ ಚಿತ್ರ | Photo Credit : freepik.com
ಉಗುರಿನ ಬಣ್ಣ ಕಪ್ಪಾಗಲು ಮುಖ್ಯ ಕಾರಣವೇನು ಎಂದು ಗುರುತಿಸಬೇಕಾಗುತ್ತದೆ. ಅದು ಪದೇ ಪದೆ ಗಾಯವಾಗುವುದೆ? ಚಪ್ಪಲಿಯ ಸಮಸ್ಯೆಯೆ ಅಥವಾ ಉಗುರಿನ ಸಮಸ್ಯೆಯೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
ಆನ್ಲೈನ್ ವೇದಿಕೆಯಾದ ‘ಕ್ಯೂರಾ’ದಲ್ಲಿ ಮಹಿಳೆಯೊಬ್ಬರು ತಮ್ಮ ಕಾಲಿನ ಉಗುರು ಕಪ್ಪಾಗಿರುವ ಬಗ್ಗೆ ಪ್ರಶ್ನೆ ಕೇಳಿದ್ದರು. “ನನ್ನ ಕಾಲಿನ ಉಗುರಿನಲ್ಲಿ ಒಣಗಿದ ರಕ್ತವಿದೆ. ಏಳು ತಿಂಗಳಾದರೂ ಹೋಗಿಲ್ಲ. ಅದನ್ನು ಹೋಗಿಸುವುದು ಹೇಗೆ?” ಎಂದು ಪ್ರಶ್ನೆ ಹಾಕಿದ್ದರು. ‘ಕ್ಯೂರಾ’ದಲ್ಲಿ ಬರುವ ಉತ್ತರಗಳು ಸಮಂಜಸವಾಗಿರುತ್ತದೆಯೇ ಇಲ್ಲವೆ ಎಂದು ಹೇಳಲಾಗದು. ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ? ಆಸ್ಟರ್ ಆರ್ವಿ ಆಸ್ಪತ್ರೆಯ ಚರ್ಮತಜ್ಞರಾದ ಡಾ ಸುನೀಲ್ ಕುಮಾರ್ ಪ್ರಭು ಅವರನ್ನು ಸಂಪರ್ಕಿಸಿದರೆ “ಭಯಪಡುವ ಅಗತ್ಯವಿಲ್ಲ” ಎಂದು ಉತ್ತರಿಸಿದರು.
ಉಗುರಿನಲ್ಲಿ ರಕ್ತ ಹೆಪ್ಪುಗಟ್ಟಿದ ಸ್ಥಿತಿ
ಡಾ. ಪ್ರಭು ಅವರು ವಿವರಿಸುವ ಪ್ರಕಾರ ಉಗುರು ಕಪ್ಪಾಗುವುದನ್ನು ಸಬ್ಉನ್ಗ್ವಲ್ ಹೀಮಟೊಮ ಎಂದು ಕರೆಯಲಾಗುತ್ತದೆ. ಅಂದರೆ ಉಗುರಿನ ಒಳಗೆ ರಕ್ತ ಒಣಗಿರುವುದು. ಏನಾದರೂ ಗಾಯಗಳಾದರೆ ಹೀಗೆ ಉಗುರಿನೊಳಗೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿರುತ್ತದೆ. ನೆನಪಿಲ್ಲದಂತಹ ಸಣ್ಣ-ಪುಟ್ಟ ಗಾಯಗಳಿಂದಲೂ ಇದು ಸಂಭವಿಸಬಹುದು. “ನಿಮ್ಮ ಉಗುರು ಎಲ್ಲಿಗಾದರೂ ಚುಚ್ಚಿ ಹೋಗಿರುವುದು ಅಥವಾ ಭಾರವಾದ ವಸ್ತು ಉಗುರಿನ ಮೇಲೆ ಬಿದ್ದಾಗ ಬಣ್ಣ ಬದಲಾಗುತ್ತದೆ. ಕೆಲವೊಮ್ಮೆ ಬಿಗಿಯಾದ ಚಪ್ಪಲಿಯನ್ನು ನಿತ್ಯವೂ ಧರಿಸುವುದರಿಂದ ಅಥವಾ ಸರಿಯಾಗಿ ಹೊಂದಿಕೆಯಾಗದ ಚಪ್ಪಲಿ ಧರಿಸಿದರೆ ಉಗುರು ಕಪ್ಪಾಗಬಹುದು. ದೀರ್ಘ ಸಮಯದವರೆಗೆ ಓಡಿದರೆ ಅಥವಾ ನಡೆದರೂ ರಕ್ತ ಹೆಪ್ಪುಗಟ್ಟಿ ಉಗುರಿನ ಬಣ್ಣ ಬದಲಾಗಬಹುದು.
ಉಗುರು ಬೆಳೆದಾಗ ಬಣ್ಣ ಮರೆಯಾಗುತ್ತದೆ
ಬಹಳಷ್ಟು ಸಂದರ್ಭದಲ್ಲಿ ಉಗುರಿನ ಗಾಯ ಸಣ್ಣದಾಗಿರಬಹುದು. ಅನೇಕರಿಗೆ ಯಾವಾಗ ಬಣ್ಣ ಬದಲಾಗಿದೆ ಎಂದು ತಿಳಿಯದೆ ಇರಬಹುದು. “ಬಹಳ ಸಂದರ್ಭದಲ್ಲಿ ಯಾವ ಗಾಯದಿಂದ ಬಣ್ಣ ಬದಲಾಗಿದೆ ಎಂದು ತಿಳಿದು ಬರುವುದಿಲ್ಲ. ಕೆಲವೊಮ್ಮೆ ಉಗುರು ಬೆಳೆದಂತೆ ಬಣ್ಣ ಬದಲಾಗಿರುವುದನ್ನು ಗಮನಿಸಿರಬಹುದು. ಮುಖ್ಯವಾಗಿ ವಯಸ್ಕರಲ್ಲಿ ಕಾಲಿನ ಉಗುರುಗಳು ನಿಧಾನವಾಗಿ ಬೆಳೆಯುತ್ತವೆ. ಹೀಗಾಗಿ ರಕ್ತ ಹೆಪ್ಪುಗಟ್ಟಿದಲ್ಲಿ ಅನೇಕ ತಿಂಗಳುಗಳವರೆಗೆ ಹಾಗೇ ಇರುತ್ತದೆ. ಉಗುರು ಬೆಳೆದಂತೆ ನಿಧಾನವಾಗಿ ಅದು ಹೋಗಬಹುದು.”
ರಕ್ತ ಹೆಪ್ಪುಗಟ್ಟಲು ಕಾರಣ ತಿಳಿಯುವುದು ಹೇಗೆ?
“ಒಣಗಿದ ರಕ್ತ ಸಾಮಾನ್ಯವಾಗಿ ಕೆಂಪು-ಕಂದು ಬಣ್ಣದಲ್ಲಿರುತ್ತದೆ. ಕೆಲವೊಮ್ಮೆ ಕಡು ನೇರಳೆ ಅಥವಾ ಕಪ್ಪು ಬಣ್ಣದಲ್ಲಿರುತ್ತವೆ. ಮುಖ್ಯವಾಗಿ ಉಗುರು ಬೆಳೆದಂತೆ ಅವು ಮುಂದಕ್ಕೆ ಸಾಗುತ್ತವೆ” ಎನ್ನುತ್ತಾರೆ ವೈದ್ಯರು. ಅದಕ್ಕೆ ಬದಲಾಗಿ ಉಗುರಿಗೆ ಶಿಲೀಂಧ್ರ ರೋಗ ಹಿಡಿದಲ್ಲಿ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಉಗುರು ದಪ್ಪವಾಗುತ್ತದೆ, ಉಗುರುಗಳ ಕೆಳಗೆ ಬಿರುಕು ಬಿಟ್ಟಿರುತ್ತದೆ ಮತ್ತು ಕಸ ತುಂಬಿರುತ್ತದೆ.
ಕಪ್ಪಾಗಿರುವುದು ಬದಲಾಗದೆ ಮುಂದುವರಿದರೆ ಏನು ಮಾಡಬೇಕು?
ವೈದ್ಯರ ಪ್ರಕಾರ, “ಮನೆಯಲ್ಲಿಯೇ ಉಗುರಿನ ಅಡಿಯಲ್ಲಿರುವ ಒಣಗಿದ ರಕ್ತವನ್ನು ತೆಗೆಯಲು ಪ್ರಯತ್ನಿಸುವುದು ಸರಿಯಲ್ಲ. ಕೆತ್ತುವುದು ಅಥವಾ ತುಂಡು ಮಾಡುವುದು ಅಥವಾ ಉಗುರು ಕತ್ತರಿಸುವ ಮೂಲಕ ಒಣರಕ್ತವನ್ನು ತೆಗೆಯಲು ಪ್ರಯತ್ನಿಸಿದಲ್ಲಿ ಸೋಂಕು ತಗಲಬಹುದು. ಉಗುರಿಗೆ ಹಾನಿಯಾಗಿ ಗುಣಮುಖರಾಗಲು ಬಹಳ ಸಮಯ ಹಿಡಿಯಬಹುದು. ಕೆಲವೊಮ್ಮೆ ಶಾಶ್ವತವಾಗಿ ಉಗುರು ವಿರೂಪಗೊಳ್ಳಬಹುದು.”
ವೈದ್ಯರನ್ನು ಸಂಪರ್ಕಿಸುವುದು ಅಗತ್ಯವೆ?
ಉಗುರಿನ ಬಣ್ಣ ಕಪ್ಪಾಗಲು ಮುಖ್ಯ ಕಾರಣವೇನು ಎಂದು ಗುರುತಿಸಬೇಕಾಗುತ್ತದೆ. ಅದು ಪದೇಪದೆ ಗಾಯವಾಗುವುದೆ? ಚಪ್ಪಲಿಯ ಸಮಸ್ಯೆಯೆ ಅಥವಾ ಉಗುರಿನ ಸಮಸ್ಯೆಯೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
ಬಹಳಷ್ಟು ಮಂದಿಗೆ ವೈದ್ಯರನ್ನು ಸಂಪರ್ಕಿಸುವ ಅಗತ್ಯ ಬರದೆ ಇರಬಹುದು. ಹಾಗೆಯೇ ಬಹುತೇಕ ಪ್ರಕರಣಗಳಲ್ಲಿ ಚಿಕಿತ್ಸೆಯ ಅಗತ್ಯವೇ ಇರದು. ಉಗುರು ಬೆಳೆದಂತೆ ಕಪ್ಪಾಗಿರುವುದೂ ಹೋಗಿಬಿಡಬಹುದು. ಕಾಲಿನ ಉಗುರುಗಳು ಉದ್ದವಾಗಲು/ 9ರಿಂದ 12 ತಿಂಗಳುಗಳ ಕಾಲ ಹಿಡಿಯುತ್ತದೆ. ಕೆಲವೊಮ್ಮೆ ಇನ್ನೂ ದೀರ್ಘ ಸಮಯ ಹಿಡಿಯಬಹುದು. ಉಗುರನ್ನು ಟ್ರಿಮ್ ಮಾಡುವುದು, ಹೊಂದಿಕೊಳ್ಳುವ ಚಪ್ಪಲಿ ಧರಿಸುವುದು, ಉಗುರಿಗೆ ಗಾಯವಾಗದಂತೆ ನೋಡಿಕೊಳ್ಳುವಂತಹ ಸರಳ ಕ್ರಮಗಳಿಂದ ಸಮಸ್ಯೆಯನ್ನು ನಿವಾರಿಸಬಹುದು.
ಆದರೆ ಉಗುರು ಸಡಿಲವಾಗಿ, ನೋವು ಇದ್ದಲ್ಲಿ ಅಥವಾ ಸೌಂದರ್ಯದ ಬಗ್ಗೆ ಕಳವಳ ಇದ್ದರೆ ವೈದ್ಯರನ್ನು ಕಾಣಬಹುದು. ನೈರ್ಮಲ್ಯಯುತ ಸ್ಥಿತಿಯಲ್ಲಿ ವೈದ್ಯರು ಉಗುರು ಟ್ರಿಮ್ ಮಾಡಬಹುದು ಅಥವಾ ತೆಗೆಯಬಹುದು. ಕಾಲಾನುಸಾರದಲ್ಲಿ ಬಣ್ಣ ಮಾಸಿರುವುದು ಬದಲಾಗದೆ ಇದ್ದರೆ, ಉಗುರು ಕತ್ತರಿಸುವುದು, ಅರ್ಧ ಉಗುರು ತೆಗೆಸುವುದು ಮಾಡಬಹುದು. ವೈದ್ಯರು ಇನ್ನೇನಾದರೂ ಸಮಸ್ಯೆಯಿದೆಯೇ ಎಂದೂ ಪರಿಶೀಲಿಸಬಹುದು.
ಕೃಪೆ: ಇಂಡಿಯನ್ ಎಕ್ಸ್ಪ್ರೆಸ್







