ʼನ್ಯೂಟನ್ ಒಬ್ಬ ಶ್ರೇಷ್ಠ ಪೈಲಟ್ʼ, ಕೊನಾರ್ಕ್ ಸೂರ್ಯ ದೇವಾಲಯ ಎಂದು ತೋರಿಸಿರುವುದು ಹಂಪಿಯ ಚಿತ್ರ: ಒಡಿಶಾ ಶಾಲಾ ಪಠ್ಯಪುಸ್ತಕಗಳಲ್ಲಿ ತಪ್ಪು ಒಂದೆರಡಲ್ಲ...

ಕರ್ನಾಟಕದ ಹಂಪಿ (Pexels), ಐಸಾಕ್ ನ್ಯೂಟನ್(NDTV )
ಒಡಿಶಾದ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (SCERT) ಸಿದ್ಧಪಡಿಸಿದ ಪಠ್ಯಪುಸ್ತಕಗಳಲ್ಲಿ ಬರೀ ತಪ್ಪುಗಳೇ ತುಂಬಿಕೊಂಡಿವೆ. ಎಂಟನೇ ತರಗತಿಯ ವಿಜ್ಞಾನ ಪುಸ್ತಕದಲ್ಲಿ ಸರ್ ಐಸಾಕ್ ನ್ಯೂಟನ್ ಅವರನ್ನು “ಶ್ರೇಷ್ಠ ಪೈಲಟ್” ಎಂದು ಬರೆಯಲಾಗಿದೆ. ಹಾಗೆಯೇ 'ಜಾಸ್ಮಿನ್' ಎಂಬ ಹೆಸರಿನ ಮತ್ತೊಂದು ಎಂಟನೇ ತರಗತಿಯ ಪುಸ್ತಕದಲ್ಲಿ ಕರ್ನಾಟಕದ ಹಂಪಿಯನ್ನು ಕೊನಾರ್ಕ್ ಸೂರ್ಯ ದೇವಾಲಯ ಎಂದು ಗುರುತಿಸಲಾಗಿದೆ. 1 ರಿಂದ 8 ನೇ ತರಗತಿಯ ಒಟ್ಟು 55 ಹೊಸ ಎಸ್ಸಿಇಆರ್ಟಿ ಪಠ್ಯಪುಸ್ತಕಗಳಲ್ಲಿ ಬರೋಬ್ಬರಿ 1,678 ದೋಷಗಳು ಪತ್ತೆಯಾಗಿವೆ. ಇವುಗಳಲ್ಲಿ ತಪ್ಪು ಮಾಹಿತಿ, ವ್ಯಾಕರಣ ದೋಷಗಳು, ಕಾಗುಣಿತ ತಪ್ಪುಗಳು ಮತ್ತು ತಪ್ಪು ಉಲ್ಲೇಖಗಳು ಸೇರಿವೆ. ಇವುಗಳ ಪೈಕಿ ಎಂಟನೇ ತರಗತಿಯ ಪಠ್ಯಪುಸ್ತಕಗಳಲ್ಲೇ ಅತಿ ಹೆಚ್ಚು ಅಂದರೆ 705 ತಪ್ಪುಗಳು ಕಂಡುಬಂದಿವೆ.
ಪಠ್ಯಪುಸ್ತಕಗಳಲ್ಲಿ ಇಷ್ಟೊಂದು ತಪ್ಪುಗಳಿರುವ ಬಗ್ಗೆ ಟೀಕೆ , ಆಕ್ರೋಶಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಎಸ್ಸಿಇಆರ್ಟಿ ಸಿದ್ಧಪಡಿಸಿದ ಪಠ್ಯಪುಸ್ತಕಗಳಲ್ಲಿನ ತಪ್ಪುಗಳಿಗೆ ಅಲ್ಲಿನ ಅಧಿಕಾರಿಗಳು ಕಾರಣಗಳನ್ನು ನೀಡಿದ್ದಾರೆ. ಪುಸ್ತಕಗಳನ್ನು ಮುದ್ರಿಸಲು ನೀಡಿದ ಅತ್ಯಲ್ಪ ಸಮಯ, ಎನ್ಸಿಇಆರ್ಟಿ ಪಠ್ಯಪುಸ್ತಕಗಳಿಂದ ವಿಷಯವನ್ನು ಯಥಾವತ್ತಾಗಿ ನಕಲು ಮಾಡಿದ್ದು, ಅಪೂರ್ಣ ಕರಡು ತಿದ್ದುಪಡಿ ಮತ್ತು ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ʼದಿ ಇಂಡಿಯನ್ ಎಕ್ಸ್ಪ್ರೆಸ್ʼ ಪತ್ರಿಕೆಯೊಂದಿಗೆ ಮಾತನಾಡಿದ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಸಿಇಆರ್ಟಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲು ಕನಿಷ್ಠ ಮೂರು ವರ್ಷಗಳನ್ನು ತೆಗೆದುಕೊಂಡಿತ್ತು. ಆದರೆ ಒಡಿಶಾದ ಎಸ್ಸಿಇಆರ್ಟಿ ಕೇವಲ ಆರು ತಿಂಗಳ ಗಡುವು ನೀಡಿತ್ತು. ಅಂತಿಮ ಮುದ್ರಣಕ್ಕೂ ಮುನ್ನ ಪಠ್ಯವನ್ನು ಸರಿಯಾಗಿ ಸಿದ್ಧಪಡಿಸಲು ಸಮಯದ ಕೊರತೆ ಇದೆ ಎಂದು ವ್ಯಕ್ತಪಡಿಸಲಾಗಿದ್ದ ಕಳವಳಗಳನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿರುವುದಾಗಿ ʼದಿ ಇಂಡಿಯನ್ ಎಕ್ಸ್ಪ್ರೆಸ್ʼ ವರದಿ ಉಲ್ಲೇಖಿಸಿದೆ.
ಪಠ್ಯಪುಸ್ತಕದಲ್ಲಿ ಕರ್ನಾಟಕದ ವಿಧಾನಸೌಧವನ್ನು ಒಡಿಶಾ ವಿಧಾನ ಸಭೆ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು ಡಿಟಿಪಿ ಮಾಡುವಾಗ ಕರ್ನಾಟಕ ವಿಧಾನಸಭೆಯ ಚಿತ್ರವನ್ನು ಹೊಂದಿರುವ ಎನ್ಸಿಇಆರ್ಟಿ ಪಠ್ಯಪುಸ್ತಕದ ಮೇಲೆಯೇ ಅತಿಯಾಗಿ ಅವಲಂಬಿತರಾಗಿದ್ದರಿಂದ ಬಹುಶಃ ಈ ತಪ್ಪು ಸಂಭವಿಸಿದೆ ಎಂದಿದ್ದಾರೆ.
ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪುಸ್ತಕಗಳನ್ನು ವಿತರಿಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಇದೇ ಪುಸ್ತಕಗಳನ್ನು ಓದುವುದನ್ನು ಮುಂದುವರಿಸಲಿದ್ದಾರೆ ಮತ್ತು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಕಟವಾಗುವ ಪುಸ್ತಕಗಳಲ್ಲಿ ಮಾತ್ರ ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಎಸ್ಸಿಇಆರ್ಟಿ ಗುರುವಾರ ಸ್ಪಷ್ಟಪಡಿಸಿದೆ.
ಪ್ರಸಕ್ತ 2026-27 ರ ಶೈಕ್ಷಣಿಕ ವರ್ಷಕ್ಕಾಗಿ ಹೊಸ ಪಠ್ಯಕ್ರಮದ ಪುಸ್ತಕಗಳನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದು ಎಸ್ಸಿಇಆರ್ಟಿ ನಿರ್ದೇಶಕಿ ಮಧುಸ್ಮಿತಾ ಸಾಹೂ ಸುದ್ದಿಗಾರರಿಗೆ ತಿಳಿಸಿದ್ದಾರೆ. “ನಾವು ದೋಷಗಳನ್ನು ಪತ್ತೆಹಚ್ಚಿದ್ದೇವೆ... ತರಗತಿಗಳಲ್ಲಿ ಪಾಠ ಮಾಡುವಾಗ ಈ ತಪ್ಪುಗಳನ್ನು ವಿದ್ಯಾರ್ಥಿಗಳಿಗೆ ಎತ್ತಿ ತೋರಿಸುವಂತೆ ಶಿಕ್ಷಕರಿಗೆ ಸೂಚನೆಗಳನ್ನು ನೀಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಶಿಕ್ಷಕರೇ ತಪ್ಪುಗಳನ್ನು ಸರಿಪಡಿಸಲಿದ್ದಾರೆ, ಇನ್ನು ಹಿರಿಯ ತರಗತಿಗಳಲ್ಲಿ ಶಿಕ್ಷಕರ ಸೂಚನೆಯ ಮೇರೆಗೆ ವಿದ್ಯಾರ್ಥಿಗಳೇ ತಪ್ಪುಗಳನ್ನು ತಿದ್ದಿಕೊಳ್ಳಲಿದ್ದಾರೆ ಎಂದಿದ್ದಾರೆ ಸಾಹೂ.
ಈ ವಿಷಯದ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅಭಿವೃದ್ಧಿ ಆಯುಕ್ತರ ನೇತೃತ್ವದ ಸಮಿತಿಯು ಎಲ್ಲಿ ಮತ್ತು ಏನು ತಪ್ಪು ನಡೆದಿದೆ ಎಂಬುದನ್ನು ಪತ್ತೆಹಚ್ಚಲಿದೆ ಎಂದು ಒಡಿಶಾ ಶಾಲಾ ಮತ್ತು ಸಮೂಹ ಶಿಕ್ಷಣ ಕಾರ್ಯದರ್ಶಿ ಎನ್. ತಿರುಮಲ ನಾಯ್ಕ್ ಹೇಳಿದ್ದಾರೆ.
ತಪ್ಪುಗಳಾಗಿದ್ದು ಎಲ್ಲಿ?
ಒಡಿಶಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಜಾರಿಗೆ ತರಲು ನಿರ್ಧರಿಸಿತು. ಇದರೊಂದಿಗೆ ಶಾಲಾ ಪಠ್ಯಕ್ರಮವನ್ನು ಸಂಪೂರ್ಣವಾಗಿ ಪರಿಷ್ಕರಿಸಿ, ಅದನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಪಠ್ಯಕ್ರಮಕ್ಕೆ ಅನುಗುಣವಾಗಿ ರೂಪಿಸಲು ನಿರ್ಧರಿಸಲಾಗಿತ್ತು. ಈಗ ಹೊಸ ಪಠ್ಯಪುಸ್ತಕಗಳಲ್ಲಿನ ದೋಷಗಳು ಪೋಷಕರು ಮತ್ತು ಶಿಕ್ಷಣ ತಜ್ಞರು ಸೇರಿದಂತೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿವೆ.
ಈ ವಿಷಯದ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳು ಹೇಳುವ ಪ್ರಕಾರ, ಪಠ್ಯಪುಸ್ತಕಗಳನ್ನು ಕೇವಲ ಆರು ತಿಂಗಳಲ್ಲಿ ಸಿದ್ಧಪಡಿಸಲಾಗಿದೆ. ಅಂತಿಮ ಮುದ್ರಣಕ್ಕೂ ಮುನ್ನ ಪಠ್ಯವನ್ನು ಸಿದ್ಧಪಡಿಸಲು, ಪರಿಶೀಲಿಸಲು ಮತ್ತು ಅಂತಿಮಗೊಳಿಸಲು ಈ ಸಮಯ ಅತ್ಯಂತ ಅಪೂರ್ಣವಾಗಿದೆ ಎಂದು ಪರಿಗಣಿಸಲಾಗಿದೆ.
ಯಾವುದೇ ಪಠ್ಯಪುಸ್ತಕದ ಮುದ್ರಣಕ್ಕೂ ಮುನ್ನ ಸಾಮಾನ್ಯವಾಗಿ ಹಲವು ಹಂತದ ಪರಿಶೀಲನೆಗಳನ್ನು ನಡೆಸಲಾಗುತ್ತದೆ. ಆದರೆ, ಮುದ್ರಣಕ್ಕೂ ಮುನ್ನ ತಪ್ಪುಗಳನ್ನು ಪತ್ತೆಹಚ್ಚಬಹುದಾಗಿದ್ದ ಸಮಗ್ರ ಪ್ರಕ್ರಿಯೆಯನ್ನು ಈ ಬಾರಿ ಅನುಸರಿಸಲಾಗಿಲ್ಲ ಎಂದು ಎಸ್ಸಿಇಆರ್ಟಿ ಮೂಲಗಳು ತಿಳಿಸಿವೆ.
ಎಸ್ಸಿಇಆರ್ಟಿ ನಿಯಮಾವಳಿಗಳ ಪ್ರಕಾರ, ನಿಗದಿತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪಠ್ಯಪುಸ್ತಕದ ಹಸ್ತಪ್ರತಿಯನ್ನು ಸಿದ್ಧಪಡಿಸಿದ ನಂತರ, ಅದನ್ನು ಪರಿಶೀಲನೆ ಮತ್ತು ಅನುಮೋದನೆಗಾಗಿ ಪರಿಶೀಲನಾ ಸಮಿತಿಗೆ ಸಲ್ಲಿಸಲಾಗುತ್ತದೆ. ಆ ನಂತರವೇ ಅದನ್ನು ಡಿಟಿಪಿಗೆ ಕಳುಹಿಸಲಾಗುತ್ತದೆ.
ಡಿಟಿಪಿ ಪೂರ್ಣಗೊಂಡ ನಂತರ, ಹಸ್ತಪ್ರತಿಯನ್ನು ಹೆಚ್ಚಿನ ಪರಿಶೀಲನೆಗಾಗಿ ವಿಷಯ ತಜ್ಞರಿಗೆ ಕಳುಹಿಸುವ ಮೊದಲು ಕನಿಷ್ಠ ಎರಡು ಹಂತದ ತಿದ್ದುಪಡಿಗಳು ಮತ್ತು ಕರಡು ಪರಿಶೀಲನೆಗೆ ಒಳಪಡಿಸಲಾಗುತ್ತದೆ.
ತಜ್ಞರು ಅಗತ್ಯ ಪರಿಷ್ಕರಣೆಗಳನ್ನು ಪೂರ್ಣಗೊಳಿಸಿ ಮುಂದುವರಿಯಲು ಅನುಮೋದನೆ ನೀಡಿದ ನಂತರವೇ ಪಠ್ಯಪುಸ್ತಕದ ಅಂತಿಮ ಮುದ್ರಣಕ್ಕೆ ಒಪ್ಪಿಗೆ ಸಿಗುತ್ತದೆ.
"ಪ್ರಸ್ತುತ ನಡೆಯುತ್ತಿರುವ ತನಿಖೆಯು ಈ ಸುದೀರ್ಘ ಪ್ರಕ್ರಿಯೆಯನ್ನು ಪಾಲಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆಹಚ್ಚಲಿದೆ. ಆದರೆ ಎಲ್ಲಾ ನಿಯಮಾವಳಿಗಳನ್ನು ಅನುಸರಿಸಿ ಈ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆರು ತಿಂಗಳ ಗಡುವು ಖಂಡಿತವಾಗಿಯೂ ಸಾಕಾಗುವುದಿಲ್ಲ ಎಂದು ಹೊಸ ಪಠ್ಯಪುಸ್ತಕಗಳ ತಯಾರಿಕೆಗಾಗಿ ರಚಿಸಲಾಗಿದ್ದ ಸಮಿತಿಯಲ್ಲಿದ್ದ ಶಿಕ್ಷಕರೊಬ್ಬರು ಹೇಳಿದ್ದಾರೆ.
ಪಠ್ಯಪುಸ್ತಕಗಳಲ್ಲಿನ ತಪ್ಪುಗಳ ಬಗ್ಗೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತನಿಖೆಗೆ ಆದೇಶಿಸಿದ ಮರುದಿನವೇ, ಅಭಿವೃದ್ಧಿ ಆಯುಕ್ತ ಡಿ.ಕೆ. ಸಿಂಗ್ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ಗುರುವಾರ ರಚಿಸಲಾಗಿದೆ. ಇಬ್ಬರು ಹಿರಿಯ ಅಧಿಕಾರಿಗಳನ್ನೊಳಗೊಂಡ ಈ ಸಮಿತಿಯು ಎಸ್ಸಿಇಆರ್ಟಿ ಅಧಿಕಾರಿಗಳು ಮತ್ತು ಪಠ್ಯಪುಸ್ತಕ ತಯಾರಿಕಾ ಸಮಿತಿಯ ಸದಸ್ಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಏಳು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದ್ದು, ಲೋಪದೋಷಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.
ವಿರೋಧ ಪಕ್ಷದ ಪ್ರಕಾರ, ಈ ತಪ್ಪುಗಳು ಬಿಜೆಪಿ ಸರ್ಕಾರದ ವಿಪರೀತ ಬೇಜವಾಬ್ದಾರಿ ಮತ್ತು ಸಂಪೂರ್ಣ ನಿರ್ಲಕ್ಷ್ಯದ ಧೋರಣೆಯನ್ನು ಬಹಿರಂಗಪಡಿಸುತ್ತವೆ. ಈ ಸರ್ಕಾರವು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಅಷ್ಟೇ ಅಲ್ಲದೆ, ವಿತರಿಸಲಾದ ಪುಸ್ತಕಗಳೂ ಸಹ ಸಾಲು ಸಾಲು ತಪ್ಪುಗಳಿಂದ ತುಂಬಿದ್ದು, ಮಕ್ಕಳ ಶಿಕ್ಷಣದ ಆಶಯಗಳನ್ನು ನುಚ್ಚುನೂರು ಮಾಡಿವೆ ಎಂದು ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಎಕ್ಸ್ ನಲ್ಲಿ ಬರೆದಿದ್ದಾರೆ. ಈ ತಪ್ಪುಗಳು "ಸಣ್ಣ ವಿಷಯಗಳಲ್ಲ" ಎಂದು ಅವರು ಒತ್ತಿ ಹೇಳಿದ್ದಾರೆ.






