ಮುಂದಿನ ವರ್ಷಾಂತ್ಯಕ್ಕೆ ಅನುಭವ ಮಂಟಪ ಪೂರ್ಣ : ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ

ಈಶ್ವರ್ ಖಂಡ್ರೆ
ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪಕ್ಕೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿ 200 ಕೋಟಿ ರೂ. ಬಿಡುಗಡೆ ಮಾಡಿಸಲಾಗಿದೆ. ಕಾಮಗಾರಿ ಭರದಿಂದ ಸಾಗಿದ್ದು, 2026ರ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. 770 ಅಮರಗಣಂಗಳ ಚಿತ್ರ, ವಚನಗಳನ್ನು ಕಲ್ಲಿನ ಕಂಬಗಳ ಮೇಲೆ ಕೆತ್ತಿಸಲಾಗಿದೆ.
ವಾ.ಭಾ.ವಿಶೇಷ ಪ್ರತಿನಿಧಿ
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ಹೊತ್ತಿರುವ ಈಶ್ವರ್ ಖಂಡ್ರೆ, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
► ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ತಾವು ಕೈಗೊಂಡಿರುವ ಕ್ರಮಗಳೇನು?
ಈಶ್ವರ್ ಖಂಡ್ರೆ: ಬೀದರ್ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭಿಸಲು 2025 ಕೋಟಿ ರೂ. ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಕಳೆದ ಎಪ್ರಿಲ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದ್ದಾರೆ. ಬಜೆಟ್ ನಲ್ಲಿ 5 ಸಾವಿರ ಕೋಟಿ ರೂ. ಹಂಚಿಕೆಯಾಗಿದ್ದು, ಬೀದರ್ ಜಿಲ್ಲೆಯಲ್ಲೂ ಪ್ರಗತಿ ಆಗುತ್ತಿದೆ.
ಹಿಂದೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದಾಗ ಉಡಾನ್ ಯೋಜನೆಯಡಿ ಬೀದರ್ಗೆ ಕಲ್ಪಿಸಿದ್ದ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಒಂದೂವರೆ ವರ್ಷ ನಿಂತು ಹೋಗಿತ್ತು. ಆದರೆ ಈಗ 15 ಕೋಟಿ ರೂ. ಅನುದಾನ ನೀಡಿ, ವಿಮಾನ ಯಾನ ಸೇವೆ ಪುನಾರಂಭ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಶೈಕ್ಷಣಿಕ ಅಭಿವೃದ್ಧಿಗಾಗಿ 350 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಜಿಲ್ಲೆಯಾದ್ಯಂತ ಇರುವ ನೂರಾರು ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಹೊಸ ಕೊಠಡಿಗಳು, ಪ್ರಯೋಗಾಲಯಗಳು, ಆಟದ ಮೈದಾನ, ಶೌಚಾಲಯ, ಶುದ್ಧ ಕುಡಿಯುವ ನೀರು, ಪೀಠೋಪಕರಣ, ಪಾಠೋಪಕರಣ, ಆವರಣ ಗೋಡೆ, ಕಂಪ್ಯೂಟರ್ ಕೊಠಡಿ, ನೂತನ ಕಟ್ಟಡ ಇತ್ಯಾದಿ ಸೌಲಭ್ಯ ಕಲ್ಪಿಸಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಎಎನ್ಎಂ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗೆ ನೂರಾರು ಕೋಟಿ ರೂ. ಅನುದಾನ ಒದಗಿಸಿ, ಕಟ್ಟಡ, ವೆಂಟಿಲೇಟರ್, ಹಾಸಿಗೆ, ಪರೀಕ್ಷಾ ಉಪಕರಣ, ಸಲಕರಣೆಗಳನ್ನು ಒದಗಿಸಿ, ಗುಣಮಟ್ಟದ ಆರೋಗ್ಯ ಸೇವೆ ದೊರಕುವಂತೆ ಮಾಡಲಾಗಿದೆ.
32 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಯ ಹೊಸ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಬೀದರ್ ವರ್ತುಲ ರಸ್ತೆಗೆ 20 ಕೋಟಿ ರೂ., ಬೀದರ್ ಮಹಿಳಾ ಪದವಿ ಕಾಲೇಜಿಗೆ 10 ಕೋಟಿ ರೂ. ಮಂಜೂರಾಗಿದೆ. ಬೀದರ್ ಜಿಲ್ಲೆಯಲ್ಲಿ 40 ಲಕ್ಷ ಸಸಿಗಳನ್ನು ನೆಟ್ಟು, ಹಸಿರು ಬೀದರ್ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಹದಿನಾಲ್ಕು 100 ಕೆ.ವಿ. ವಿದ್ಯುತ್ ಕೇಂದ್ರಗಳನ್ನು, ತಲಾ ಒಂದು 220 ಕೆ.ವಿ. ಕೇಂದ್ರ 400 ಕೆ.ವಿ. ಕೇಂದ್ರ ಸ್ಥಾಪಿಸಲಾಗುತ್ತಿದೆ.
► ಬೀದರ್ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳೇನು?
ಈಶ್ವರ್ ಖಂಡ್ರೆ: ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ನಾನು ಸಚಿವನಾದ ತರುವಾಗ 550 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ, ಔರಾದ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆರೆ ತುಂಬುವ ಕಾರ್ಯಕ್ರಮ ಹಾಗೂ ಭಾಲ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೆಹಖರ್ ಏತ ನೀರಾವರಿ ಯೋಜನೆ ಅಡಿಯಲ್ಲಿ ಸುಮಾರು 25 ಸಾವಿರ ಎಕರೆ ರೈತರ ಭೂಮಿಗೆ ನೀರೊದಗಿಸುವ ಯೋಜನೆಯನ್ನು ಕಾರ್ಯಗತ ಮಾಡಲು ಕಾಮಗಾರಿ ಆರಂಭಿಸಲಾಗಿದೆ. ಇದರ ಜೊತೆಗೆ 100 ಕೋಟಿ ರೂ. ಹೆಚ್ಚುವರಿ ವೆಚ್ಚದಲ್ಲಿ ಕಾರಂಜಾ ಎಡದಂಡೆ ಮತ್ತು ಬಲದಂಡೆ ಕಾಲುವೆ ಆಧುನೀಕರಣ ಹಾಗೂ ನಾಲ್ಕು ಬ್ರಿಜ್ ಕಂ ಬ್ಯಾರೇಜ್ಗಳ ನವೀಕರಣ ಮಾಡಲಾಗುತ್ತಿದೆ. ಒಟ್ಟಾರೆ ಕೃಷಿಯನ್ನೇ ಪ್ರಧಾನವಾಗಿ ಅವಲಂಬಿಸಿರುವ ನಮ್ಮ ಬೀದರ್ ಜಿಲ್ಲೆಗೆ ಹೆಚ್ಚಿನ ನೀರಾವರಿ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ.
► ಬಿಎಸ್ಎಸ್ಕೆ ಸಕ್ಕರೆ ಕಾರ್ಖಾನೆಯ ಮೇಲೆ ಕೋಟ್ಯಂತರ ರೂ. ಸಾಲವಿದ್ದ ಕಾರಣ ಅದನ್ನು ಮುಚ್ಚಲ್ಪಟ್ಟಿದೆ. ಅದನ್ನು ಪುನರ್ ಆರಂಭಿಸಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ?
ಈಶ್ವರ್ ಖಂಡ್ರೆ: ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ) ಬಗ್ಗೆ ನನಗೆ ಭಾವನಾತ್ಮಕವಾದ ಸಂಬಂಧವಿದೆ. ಬಿಎಸ್ಎಸ್ಕೆ ಸ್ಥಾಪನೆ ಮಾಡಿದ ಕೀರ್ತಿ ನನ್ನ ತಂದೆ ಭೀಮಣ್ಣ ಖಂಡ್ರೆಯವರಿಗೆ ಸಲ್ಲುತ್ತದೆ. ನಾನೂ ಕೂಡ ಇದರ ಅಧ್ಯಕ್ಷನಾಗಿದ್ದೆ. ಆಗ ಕಾರ್ಖಾನೆ ಉತ್ತಮ ಸ್ಥಿತಿಯಲ್ಲಿತ್ತು. ಅನಂತರ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಈ ಕಾರ್ಖಾನೆಯನ್ನು ನಷ್ಟದ ಸುಳಿಗೆ ಸಿಲುಕಿಸಿತು. ನಾನು ಸಚಿವನಾದ ನಂತರ ಈ ಕಾರ್ಖಾನೆ ಪುನರಾರಂಭಕ್ಕೆ ಬಹಳ ಪ್ರಯತ್ನ ಮಾಡಿದ್ದೇನೆ. ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯೂ ನಡೆದಿದೆ. ಕಾರ್ಖಾನೆ ಪುನಾರಂಭ ಮಾಡಲೂ ಸಾಧ್ಯವಾಗದಷ್ಟು ಸಾಲದ ಹೊರೆ ಕಾರ್ಖಾನೆ ಮೇಲಿದೆ. ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ನಲ್ಲೂ ಸಾಲ ಇದೆ. ಕಾರ್ಮಿಕರ ವೇತನ, ಭತ್ತೆ ಬಾಕಿ ಎಲ್ಲ ಸೇರಿ 400 ಕೋಟಿ ರೂ. ಸಾಲ ಇದೆ. ಸರಕಾರ ಅನುದಾನ ನೀಡಿದರೂ ಇದು ಪುನಶ್ಚೇತನ ಆಗುವ ಸ್ಥಿತಿಯಲ್ಲಿಲ್ಲ. ಆದರೂ ಕಬ್ಬು ಬೆಳೆಗಾರರ ಹಿತ ಕಾಯಲು ಪುನಶ್ಚೇತನದ ಪ್ರಯತ್ನ ಮುಂದುವರಿದಿದೆ.
► ಬ್ರಿಮ್ಸ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಘಟಕ ಸ್ಥಾಪನೆ ಮಾಡಿ ಚಾಲನೆ ನೀಡಲಾಗಿದೆ. ಆದರೆ ಆ ಹೃದ್ರೋಗ ಘಟಕದಲ್ಲಿ ವೈದ್ಯರಿಲ್ಲದೆ ಅದಕ್ಕೆ ಬೀಗ ಹಾಕಲಾಗಿದೆ. ಆ ಹೃದ್ರೋಗ ಘಟಕಕ್ಕೆ ವೈದ್ಯರ ನೇಮಕ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯಾವಾಗ ಮಾಡುತ್ತೀರಿ?
ಈಶ್ವರ್ ಖಂಡ್ರೆ: ಬ್ರಿಮ್ಸ್ ಆಸ್ಪತ್ರೆಯಲ್ಲಿ ಹೃದ್ರೋಗ ಕೇಂದ್ರ ತೆರೆಯಲು ನಾನು ಪ್ರಯತ್ನ ಮಾಡಿದ್ದು ಸಂಪೂರ್ಣ ಸಜ್ಜಾಗಿದೆ. ಎರಡು ಬಾರಿ ಹೃದ್ರೋಗ ತಜ್ಞರ ಹುದ್ದೆಗೆ ಅರ್ಜಿ ಕರೆದರೂ ಯಾರೂ ಮುಂದೆ ಬಂದಿಲ್ಲ. ಹೀಗಾಗಿ ಇದನ್ನು ಜಯದೇವ ಹೃದ್ರೋಗ ಕೇಂದ್ರದ ಅಡಿಯಲ್ಲಿ ತಂದು ಕಾರ್ಯಾರಂಭ ಮಾಡಿಸಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ.
► ಕೆಕೆಆರ್ಡಿಬಿ ಮೂಲಕ ಬೀದರ್ ಜಿಲ್ಲೆಗೆ ಕಳೆದ ಎರಡೂವರೆ ವರ್ಷಗಳಲ್ಲಿ ಲಭ್ಯವಾಗಿರುವ ಅನುದಾನ ಎಷ್ಟು? ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಯಾವುವು?
ಈಶ್ವರ್ ಖಂಡ್ರೆ: ಕೆಕೆಆರ್ಡಿಬಿಯಿಂದ ಬೀದರ್ ಜಿಲ್ಲೆಗೆ ಕಳೆದ ಎರಡೂವರೆ ವರ್ಷದಲ್ಲಿ ಸುಮಾರು 1,500 ಕೋಟಿ ರೂ. ಅನುದಾನ ಲಭ್ಯವಾಗಿದೆ. ಇದರ ಅಡಿಯಲ್ಲಿ ನಿಂತು ಹೋಗಿದ್ದ ಬೀದರ್-ಬೆಂಗಳೂರು ವಿಮಾನಯಾನ ಸೇವೆ ಪುನಾರಂಭವಾಗಿದೆ. 2024-25ರವರೆಗೆ ಒಟ್ಟು 5,086 ಕಾಮಗಾರಿ ಮಂಜೂರಾಗಿದ್ದು, ಈ ಪೈಕಿ 4,254 ಕಾಮಗಾರಿ ಪೂರ್ಣಗೊಂಡಿದೆ. 661 ಕಾಮಗಾರಿಗಳು ಪ್ರಗತಿಯಲ್ಲಿದ್ದು, 141 ಕಾಮಗಾರಿ ಆರಂಭವಾಗಬೇಕಿದೆ.
► ಬೀದರ್ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳೇನು?
ಈಶ್ವರ್ ಖಂಡ್ರೆ: 22 ಕೋಟಿ ರೂ. ವೆಚ್ಚದಲ್ಲಿ ಪಾಪನಾಶ ಶಿವ ದೇವಾಲಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. 20 ಕೋಟಿ ರೂ. ವೆಚ್ಚದಲ್ಲಿ ಬೀದರ್ ಕೋಟೆಯ ಜೀರ್ಣೋದ್ಧಾರ ಹಾಗೂ ಕಾರಂಜ ಜಲಾಶಯದ ಬಳಿ ಮೈಸೂರು ಬಳಿಯ ಕೆಆರ್ಎಸ್ ಬೃಂದಾವನ ಉದ್ಯಾನದ ರೀತಿಯಲ್ಲಿ ಉದ್ಯಾನ ನಿರ್ಮಾಣಕ್ಕೆ ಡಿಪಿಆರ್ ಮಾಡಲು ಆದೇಶ ನೀಡಲಾಗಿದೆ. ಇದೇ ಮೊದಲ ಬಾರಿಗೆ 15 ಕೋಟಿ ರೂ. ವೆಚ್ಚದಲ್ಲಿ ಬೀದರ್ ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ಹೊನ್ನಿಕೇರಿಯಲ್ಲಿ ಯೋಜನೆ ಕಾರ್ಯಗತವಾಗುತ್ತಿದೆ. ಬಸವ ಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ಲೋಕಾರ್ಪಣೆ ಆದ ಬಳಿಕ ಜಗತ್ತಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಲಿದೆ.
► ನೂತನ ಜಿಲ್ಲಾಡಳಿತ ಕಚೇರಿ ಸಂಕಿರಣ ಕಟ್ಟಡ ನಿರ್ಮಾಣ ಕಾರ್ಯ ಯಾವಾಗ ಪೂರ್ಣಗೊಳ್ಳಲಿದೆ?
ಈಶ್ವರ್ ಖಂಡ್ರೆ: ಜಿಲ್ಲಾಡಳಿತ ಕಚೇರಿ ಸಂಕಿರಣ ಕಟ್ಟಡಕ್ಕಾಗಿ 50 ಕೋಟಿ ರೂ. ಅನುದಾನ ತಂದು ಕಾಮಗಾರಿ ಆರಂಭಿಸಲಾಗಿದೆ. 2026ರ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಜನರಿಗೆ ಒಂದೇ ಸೂರಿನಡಿ ವಿವಿಧ ಇಲಾಖೆಗಳ ಸೇವೆ ಲಭಿಸುವಂತೆ ಮಾಡಲಾಗುವುದು.
► ಬೀದರ್ ಜಿಲ್ಲೆಯಲ್ಲಿ ರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಯೋಜನೆ ಯಾವ ಹಂತದಲ್ಲಿದೆ?
ಈಶ್ವರ್ ಖಂಡ್ರೆ: ಈ ವರ್ಷ ಕೆಕೆಆರ್ಡಿಬಿಯಿಂದ 10 ಕೋಟಿ ರೂ. ಮಂಜೂರು ಮಾಡಿಸಿ, ಮುಂದಿನ ಒಂದೂವರೆ ವರ್ಷದಲ್ಲಿ ಕ್ರೀಡಾಂಗಣ ಲೋಕಾರ್ಪಣೆ ಮಾಡುವುದು ನಮ್ಮ ಗುರಿಯಾಗಿದೆ. ಈಗ ಯೋಜನೆ ಡಿಪಿಆರ್ ಹಂತದಲ್ಲಿದೆ.
► 371(ಜೆ) ಜಾರಿಯಾದ ಬಳಿಕ ಬೀದರ್ ಜಿಲ್ಲೆಯಲ್ಲಿ ಆಗಿರುವ ಬದಲಾವಣೆಗಳು ಏನು?
ಈಶ್ವರ್ ಖಂಡ್ರೆ: 371(ಜೆ) ಘೋಷಣೆಯ ಬಳಿಕ ಬೀದರ್ ಜಿಲ್ಲೆಗೆ 1,500 ಕೋಟಿ ರೂ. ಮಂಜೂರಾಗಿದೆ. ನಮ್ಮ ಭಾಗದ ಯುವಜನರಿಗೆ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಕೋರ್ಸ್ಗಳಲ್ಲಿ ಮೀಸಲಾತಿ ಲಭಿಸುತ್ತಿದೆ. ಉದ್ಯೋಗವೂ ಲಭಿಸುತ್ತಿದೆ. ವಿಶೇಷ ಸ್ಥಾನಮಾನ ಸಿಕ್ಕಿರುವುದರಿಂದ ಬೀದರ್ ಜಿಲ್ಲೆಯ ಜನರಿಗೆ ತುಂಬಾ ಅನುಕೂಲವಾಗಿದೆ. 371 (ಜೆ) ಜಾರಿ ಪೂರ್ವದಲ್ಲಿ ವರ್ಷಕ್ಕೆ 10ರಿಂದ 15 ವೈದ್ಯಕೀಯ ಸೀಟುಗಳು ಬೀದರ್ ಯುವಜನರಿಗೆ ಲಭಿಸುತ್ತಿದ್ದವು. ಈಗ ಬೀದರ್ ಜಿಲ್ಲೆಯ ಪ್ರತಿಭಾವಂತ ಯುವಜನರಿಗೆ 80ರಿಂದ 100 ಸೀಟು ಲಭಿಸುತ್ತಿದೆ.







