ಗಾಝಾದಲ್ಲಿ ಇಸ್ರೇಲ್ ನ AI ಬಳಕೆ ಬಯಲು?; ‘ನಾಝಾ’ ಸಾಕ್ಷ್ಯಚಿತ್ರಕ್ಕೆ ವೆನಿಸ್ ನಲ್ಲಿ ಭಾರಿ ಮೆಚ್ಚುಗೆ
► 25 ನಿಮಿಷ ಎದ್ದು ನಿಂತು ಕರತಾಡನ ನೀಡಿದ ಪ್ರೇಕ್ಷಕರು; ಇಸ್ರೇಲಿ ಸೇನೆ, ಗುಪ್ತಚರ ಮೂಲಗಳ ಹೇಳಿಕೆ ಆಧರಿಸಿದ ಸಾಕ್ಷ್ಯಚಿತ್ರ ► ವೀಡಿಯೊ ಗೇಮ್ ಆಡಿದಂತೆ ಸಂಯೋಜಿಸಿದ್ದ ದಾಳಿ!

Photo Credit : Ettore Ferrari/EPA
ವೆನಿಸ್: ಗಾಝಾದಲ್ಲಿ ಫೆಲೆಸ್ತೀನಿನ ಜನರನ್ನು ಗುರುತಿಸಿ ದಾಳಿ ನಡೆಸಲು ಇಸ್ರೇಲ್ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಗಳನ್ನು ಬಳಸಿದೆ ಎಂಬ ಆರೋಪದ ಕುರಿತು ನಿರ್ಮಿಸಿರುವ ‘ನಾಝಾ’ (NAZA) ಸಾಕ್ಷ್ಯಚಿತ್ರಕ್ಕೆ ವೆನಿಸ್ ಚಲನಚಿತ್ರೋತ್ಸವದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೆಪ್ಟೆಂಬರ್ 10ರಂದು ನಡೆದ ಚಿತ್ರದ ಪ್ರದರ್ಶನದ ಬಳಿಕ ಪ್ರೇಕ್ಷಕರು 25 ನಿಮಿಷಗಳ ಕಾಲ ಎದ್ದು ನಿಂತು ಕರತಾಡನ ಮಾಡಿದರು.
80 ನಿಮಿಷಗಳ ಈ ಚಿತ್ರವನ್ನು ಇಸ್ರೇಲಿನ ನಿರ್ದೇಶಕರಾದ ಯುವಲ್ ಅಬ್ರಹಾಂ ಮತ್ತು ರಾಚೆಲ್ ಸ್ಜೋರ್ ನಿರ್ದೇಶಿಸಿದ್ದಾರೆ.
ಇವರಿಬ್ಬರು 2025ರಲ್ಲಿ ಫೆಲೆಸ್ತೀನಿನ ನಿರ್ದೇಶಕರಾದ ಬಾಸೆಲ್ ಅದ್ರಾ ಮತ್ತು ಹಮ್ದಾನ್ ಬಲ್ಲಾಲ್ ಅವರೊಂದಿಗೆ ‘ನೋ ಅದರ್ ಲ್ಯಾಂಡ್’ ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದರು. ಆ ಚಿತ್ರದಲ್ಲಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ವಸಾಹತುಗಾರರು ನಡೆಸಿದ ದಾಳಿಗಳನ್ನು ದಾಖಲಿಸಲಾಗಿತ್ತು.
► ಮೂರು ವರ್ಷಗಳ ತನಿಖೆ
‘ನಾಝಾ’ ಚಿತ್ರವು ಮೂರು ವರ್ಷಗಳ ತನಿಖೆ ಮಾಡಿ ನಿರ್ಮಿಸಿದ ಚಿತ್ರವಾಗಿದೆ. ಇಸ್ರೇಲಿನ ಸೇನೆ ಮತ್ತು ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಿರುವ ಕೆಲವು ಮಂದಿ ಚಿತ್ರತಂಡದೊಂದಿಗೆ ನಿಕಟವಾಗಿ ಮಾತನಾಡಿದ್ದಾರೆ.
ಆದರೆ ತಮ್ಮ ಗುರುತು ಬಹಿರಂಗವಾಗಬಾರದು ಎಂದು ಅವರು ಷರತ್ತು ವಿಧಿಸಿದ್ದರು ಎನ್ನಲಾಗಿದೆ. ಹೀಗಾಗಿ ಅವರ ಮುಖ ಮತ್ತು ಧ್ವನಿಯನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಬದಲಾಯಿಸಲಾಗಿದೆ. ಟೆಲ್ ಅವಿವ್ ನ ಕಟ್ಟಡಗಳ ಮೇಲ್ಛಾವಣಿಯಲ್ಲಿ ರಾತ್ರಿ ವೇಳೆ ಅವರ ಸಂದರ್ಶನಗಳನ್ನು ಚಿತ್ರೀಕರಿಸಲಾಗಿದೆ.
“ಗಾಝಾದಲ್ಲಿ ಜನರನ್ನು ಕೊಲ್ಲಲು ಬಳಸಲಾದ ವ್ಯವಸ್ಥೆಗಳು ಹೇಗೆ ಕೆಲಸ ಮಾಡುತ್ತಿದ್ದವು ಎಂಬುದನ್ನು ವಿವರವಾಗಿ ತಿಳಿದುಕೊಳ್ಳುವುದು ನಮ್ಮ ಉದ್ದೇಶವಾಗಿತ್ತು” ಎಂದು ಅಬ್ರಹಾಂ AFPಗೆ ತಿಳಿಸಿದ್ದಾರೆ.
► ‘ಲಾವೆಂಡರ್’ AI ವ್ಯವಸ್ಥೆ
ಚಿತ್ರದಲ್ಲಿ ಇಸ್ರೇಲಿ ಸೇನೆ ಬಳಸಿದೆ ಎನ್ನಲಾದ ‘ಲಾವೆಂಡರ್’ (Lavender) ಎಂಬ AI ವ್ಯವಸ್ಥೆಯ ಬಗ್ಗೆಯೂ ವಿವರಿಸಲಾಗಿದೆ.
ಗಾಝಾದಲ್ಲಿ ಜನರ ದೂರವಾಣಿ ಕರೆಗಳು, ಅವರ ಚಲನವಲನ ಮತ್ತು ಇತರರೊಂದಿಗೆ ಇರುವ ಸಂಪರ್ಕದ ಮಾಹಿತಿಯನ್ನು ಈ ವ್ಯವಸ್ಥೆ ವಿಶ್ಲೇಷಿಸುತ್ತಿತ್ತು. ಆ ಮಾಹಿತಿಯ ಆಧಾರದಲ್ಲಿ ದಾಳಿಗೆ ಗುರಿಯಾಗಬಹುದಾದ ವ್ಯಕ್ತಿಗಳನ್ನು ಗುರುತಿಸಲಾಗುತ್ತಿತ್ತು ಎಂದು ಚಿತ್ರದಲ್ಲಿನ ಮೂಲಗಳು ಹೇಳಿದ್ದಾರೆ.
ಈ ಪ್ರಕ್ರಿಯೆಯನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲಾಗುತ್ತಿತ್ತು ಎಂದು ಮತ್ತೊಬ್ಬ ಮೂಲ ಹೇಳಿದ್ದಾರೆ. ನೆಲೆಗಳನ್ನು ಗುರುತಿಸುವ ಕೆಲಸದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು, ಎಲ್ಲವನ್ನೂ ದೂರದಿಂದಲೇ ಮಾಡಲಾಗುತ್ತಿದ್ದ ಕಾರಣ ಅದು “ವೀಡಿಯೊ ಗೇಮ್ ಆಡುವಂತಿತ್ತು” ಎಂದು ಹೇಳಿದ್ದಾರೆ.
ಚಿತ್ರದಲ್ಲಿನ ಕೆಲವು ಇಸ್ರೇಲಿ ಸೇನೆ ಮತ್ತು ಗುಪ್ತಚರ ಮೂಲಗಳು ನಾಗರಿಕರ ಮನೆಗಳ ನಾಶ ಮತ್ತು ಮಾನವೀಯ ಕಾನೂನುಗಳ ಉಲ್ಲಂಘನೆಯ ಬಗ್ಗೆಯೂ ಮಾತನಾಡಿದ್ದಾರೆ.
‘ಅಪರಾಧದ ತಾಣ’ ಎಂದು ಗುರುತಿಸಲಾಗುತ್ತಿದ್ದ ಕೆಲವು ಮನೆಗಳಲ್ಲಿ ವಾಸ್ತವವಾಗಿ ಕುಟುಂಬಗಳು ವಾಸಿಸುತ್ತಿದ್ದವು ಎಂಬುದು ಗುಪ್ತಚರ ಸಿಬ್ಬಂದಿಗೆ ತಿಳಿದಿತ್ತು ಎಂದು ಅವರು ಹೇಳಿದ್ದಾರೆ. ಫೆಲೆಸ್ತೀನಿನ ಜನರ ವಿರುದ್ಧ ಇಸ್ರೇಲ್ ನಲ್ಲಿ ದ್ವೇಷದ ವಾತಾವರಣ ಇತ್ತು ಎಂದೂ ಚಿತ್ರದಲ್ಲಿನ ಕೆಲವರು ಆರೋಪಿಸಿದ್ದಾರೆ.
► ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಮನವಿ
ಇಸ್ರೇಲ್ ಗೆ ನೀಡುತ್ತಿರುವ ಬೆಂಬಲವನ್ನು ಪಾಶ್ಚಿಮಾತ್ಯ ಸರ್ಕಾರಗಳು ಹಿಂಪಡೆಯಬೇಕು ಎಂದು ಅಬ್ರಹಾಂ ಹೇಳಿದ್ದಾರೆ. ಇಸ್ರೇಲ್ ಮೇಲೆ ನಿರ್ಬಂಧ ಹೇರುವ ಮೂಲಕ ಒತ್ತಡ ತರಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
“ಇಸ್ರೇಲ್ ಮೇಲೆ ಪಾಶ್ಚಿಮಾತ್ಯ ದೇಶಗಳು ಒತ್ತಡ ಹೇರಬೇಕು. ಇದರಿಂದ ಇಸ್ರೇಲ್ ಮತ್ತು ಫೆಲೆಸ್ತೀನ್ನಲ್ಲಿ ಬದಲಾವಣೆ ಬಯಸುವವರಿಗೆ ಬೆಂಬಲ ಸಿಗಲಿದೆ. ಆದರೆ, ಇಸ್ರೇಲ್ ವಿರುದ್ಧ ಕ್ರಮ ಕೈಗೊಳ್ಳದಿರುವುದು ಮಾನವ ಹಕ್ಕುಗಳು ಮತ್ತು ಶಾಂತಿಯುತ ರಾಜಕೀಯ ಪರಿಹಾರಕ್ಕಾಗಿ ಹೋರಾಡುತ್ತಿರುವವರಿಗೆ ಹಿನ್ನಡೆಯಾಗುತ್ತದೆ” ಎಂದು ಅಬ್ರಹಾಂ ಹೇಳಿದ್ದಾರೆ.
ಅಬ್ರಹಾಂ ಮತ್ತು ಸ್ಜೋರ್ ಅವರು ‘+972 ಮ್ಯಾಗಝಿನ್’ನಲ್ಲಿ ಬರೆದ ಲೇಖನದಲ್ಲಿ, ಗಾಝಾದ ನಾಗರಿಕರ ಸಾವು ಹಮಾಸ್ ವಿರುದ್ಧದ ಯುದ್ಧದ ವೇಳೆ ಸಂಭವಿಸಿದ ಅನಿರೀಕ್ಷಿತ ಪರಿಣಾಮವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದು “ಪೂರ್ವಯೋಜಿತ, ಲೆಕ್ಕಾಚಾರದ ಮತ್ತು ಉದ್ದೇಶಪೂರ್ವಕ ಕೃತ್ಯ” ಎಂದು ಚಿತ್ರ ಪ್ರತಿಪಾದಿಸುತ್ತದೆ ಎಂದು ಅವರು ಹೇಳಿದ್ದಾರೆ.
► ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ
‘ನಾಝಾ’ ಚಿತ್ರವು ತೀವ್ರ ಪರಿಣಾಮ ಬೀರುವ ಹಾಗೂ ಆಘಾತ ಮೂಡಿಸುವ ಚಿತ್ರವಾಗಿದೆ ಎಂದು ಯುಕೆ ಮೂಲದ ಚಿತ್ರರಂಗದ ನಿಯತಕಾಲಿಕೆ ‘ಸ್ಕ್ರೀನ್ ಇಂಟರ್ನ್ಯಾಶನಲ್’ ಅಭಿಪ್ರಾಯಪಟ್ಟಿದೆ. ‘ದಿ ಹಾಲಿವುಡ್ ರಿಪೋರ್ಟರ್’ ಕೂಡ ಚಿತ್ರವು ಆಕ್ರೋಶ ಮತ್ತು ಅವಮಾನದ ಭಾವನೆ ಮೂಡಿಸುತ್ತದೆ ಎಂದು ಹೇಳಿದೆ. ಪ್ರಸ್ತುತ ಇಸ್ರೇಲಿ ಸರ್ಕಾರದ ಬಗ್ಗೆ ಅಸಹ್ಯ ಭಾವನೆ ಮೂಡಿಸುತ್ತದೆ ಎಂದೂ ಅದು ಹೇಳಿದೆ.
ಯುಕೆ ಮೂಲದ ಜಿಮ್ ವಿಲ್ಸನ್ ಅವರು ‘ದಿ ಗಾರ್ಡಿಯನ್’ ಜತೆಗೂಡಿ ಚಿತ್ರವನ್ನು ನಿರ್ಮಿಸಿದ್ದಾರೆ. 2024ರಲ್ಲಿ ಆಸ್ಕರ್ ಗೆದ್ದ ‘ದಿ ಝೋನ್ ಆಫ್ ಇಂಟರೆಸ್ಟ್’ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದ ಜೊನಾಥನ್ ಗ್ಲೇಝರ್, ‘ನಾಝಾ’ದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
► ಗಾಝಾದಲ್ಲಿ ಮೃತಪಟ್ಟವರ ಸಂಖ್ಯೆ 73,500ಕ್ಕೆ ಏರಿಕೆ
ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, 2023ರ ಅಕ್ಟೋಬರ್ ನಿಂದ ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ ಸುಮಾರು 73,500 ಫೆಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ. 1,74,500 ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲಿ ಸೇನೆಯ ಕಟ್ಟುನಿಟ್ಟಿನ ನಿಯಂತ್ರಣದ ಕಾರಣ ವಿದೇಶಿ ಪತ್ರಕರ್ತರಿಗೆ ಗಾಝಾ ಪ್ರವೇಶಿಸಲು ಅವಕಾಶವಿಲ್ಲ. ಸೇನೆಯ ನಿಯಂತ್ರಣದ ಅಡಿಯಲ್ಲಿ ಮಾತ್ರ ಪ್ರವೇಶ ಸಾಧ್ಯವಾಗಿದೆ.
ಈ ವರ್ಷದ ವೆನಿಸ್ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿರುವ ಏಕೈಕ ಸಾಕ್ಷ್ಯಚಿತ್ರ ‘ನಾಝಾ’. ಶನಿವಾರ ಚಿತ್ರೋತ್ಸವ ಮುಕ್ತಾಯವಾಗಲಿದೆ. ಕಳೆದ ವರ್ಷ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರಕ್ಕೆ 23 ನಿಮಿಷಗಳ ಕಾಲ ಪ್ರೇಕ್ಷಕರು ಎದ್ದು ನಿಂತು ಕರತಾಡನ ಮಾಡಿದ್ದರು. ಆ ಚಿತ್ರವು ವೆನಿಸ್ ಚಿತ್ರೋತ್ಸವದಲ್ಲಿ ಎರಡನೇ ಬಹುಮಾನ ಪಡೆದಿತ್ತು.
ಈ ಬಾರಿ ‘ನಾಝಾ’ ಚಿತ್ರವು 25 ನಿಮಿಷಗಳ ಕಾಲ ನಿಂತು ಕರತಾಡನ ಪಡೆಯುವ ಮೂಲಕ ಗಮನ ಸೆಳೆದಿದೆ.






