ಇಸ್ರೋ ಮಾಜಿ ಮುಖ್ಯಸ್ಥರಿಂದ ಐಐಟಿ ನಿರ್ದೇಶಕರವರೆಗೆ: ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ನಂದನ್ ನಿಲೇಕಣಿ ನೇತೃತ್ವದ ಟಾಸ್ಕ್ ಫೋರ್ಸ್ ತಂಡದಲ್ಲಿ ಯಾರೆಲ್ಲ ಇದ್ದಾರೆ?

ನಂದನ್ ನಿಲೇಕಣಿ (@NandanNilekani) , ಅನಿತಾ ಕರ್ವಾಲ್(X) , ಎಸ್. ಸೋಮನಾಥ್(PTI)
ಭಾರತದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡಲು ನಂದನ್ ನಿಲೇಕಣಿ ನೇತೃತ್ವದ ಆರು ಸದಸ್ಯರ ಉನ್ನತ ಮಟ್ಟದ ಕಾರ್ಯಪಡೆಯನ್ನು (ಟಾಸ್ಕ್ ಫೋರ್ಸ್) ಪ್ರಧಾನಿ ನರೇಂದ್ರ ಮೋದಿ ರಚಿಸಿದ್ದಾರೆ.
ನೀಟ್-ಯುಜಿ (NEET-UG) 2026ರ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರಧಾನಿಯವರಿಂದ ಈ ಘೋಷಣೆ ಹೊರಬಿದ್ದಿದೆ.
ರಾಷ್ಟ್ರೀಯ ಪರೀಕ್ಷೆಗಳ ಮೇಲಿನ ನಂಬಿಕೆ ಮತ್ತು ಪಾರದರ್ಶಕತೆಯನ್ನು ಮರುಸ್ಥಾಪಿಸಲು ತಂತ್ರಜ್ಞಾನ ಆಧಾರಿತ ಮತ್ತು ರಚನಾತ್ಮಕ ಬದಲಾವಣೆಗಳನ್ನು ಶಿಫಾರಸು ಮಾಡುವ ಜವಾಬ್ದಾರಿಯನ್ನು ಈ ಕಾರ್ಯಪಡೆಗೆ ವಹಿಸಲಾಗಿದೆ.
'ದಿ ಹಿಂದೂ' ವರದಿಯ ಪ್ರಕಾರ, ಪರೀಕ್ಷಾ ವ್ಯವಸ್ಥೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮುಕ್ತಗೊಳಿಸುವುದು ಮತ್ತು ಸಂಪೂರ್ಣ ತಂತ್ರಜ್ಞಾನ ಆಧಾರಿತವಾಗಿಸುವುದರ ಮೇಲೆ ಈ ಕಾರ್ಯಪಡೆ ಗಮನಹರಿಸಲಿದೆ.
ಪರೀಕ್ಷಾ ಪ್ರಕ್ರಿಯೆಗಳಲ್ಲಿ ಮುಂಬರುವ ಸುಧಾರಣೆಗಳಿಗೆ ಈ ಸಮಿತಿಯ ಶಿಫಾರಸುಗಳೇ ಮಾರ್ಗದರ್ಶಿಯಾಗಲಿವೆ ಎಂದು ಸರ್ಕಾರ ತಿಳಿಸಿದೆ.
'ಡೆಕ್ಕನ್ ಹೆರಾಲ್ಡ್' ವರದಿ ಪ್ರಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಂತಹ (NTA) ಪರೀಕ್ಷಾ ಮಂಡಳಿಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವುದು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವುದು ಮತ್ತು ಭದ್ರತಾ ನಿಯಮಗಳನ್ನು ಬಲಪಡಿಸುವುದು ಈ ಕಾರ್ಯಪಡೆಯ ಮುಖ್ಯ ಉದ್ದೇಶವಾಗಿದೆ.
2026ರ ಮೇ 3ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ನಂತರ ಜೂನ್ 21ರಂದು ಮರುಪರೀಕ್ಷೆ ನಡೆಸಲಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಹೊಸ ಸಮಿತಿಯನ್ನು ರಚಿಸಲಾಗಿದೆ.
'ಫೈನಾನ್ಷಿಯಲ್ ಎಕ್ಸ್ಪ್ರೆಸ್' ಉಲ್ಲೇಖಿಸಿರುವಂತೆ, ಎನ್ಟಿಎ ನಡೆಸುವ ಪರೀಕ್ಷೆಗಳನ್ನು ಪುನರ್ ರಚಿಸಲು ತಂತ್ರಜ್ಞಾನದ ಸಮ್ಮಿಲನ ಮತ್ತು ರಚನಾತ್ಮಕ ಸುಧಾರಣೆಗಳಿಗೆ ಒತ್ತು ನೀಡಿ ಶಿಫಾರಸುಗಳನ್ನು ಸಿದ್ಧಪಡಿಸುವ ಹೊಣೆಗಾರಿಕೆಯನ್ನು ಈ ವಿವಿಧ ಕ್ಷೇತ್ರಗಳ ತಜ್ಞರ ತಂಡಕ್ಕೆ ನೀಡಲಾಗಿದೆ.
ಮುಂಬರುವ ಪರೀಕ್ಷೆಗಳ ಪಾರದರ್ಶಕತೆ ಮತ್ತು ನಂಬಿಕೆಯನ್ನು ಕಾಯ್ದುಕೊಳ್ಳಲು ಕಾರ್ಯಪಡೆಯ ಸಲಹೆಗಳನ್ನು ಸರ್ಕಾರ ತಕ್ಷಣವೇ ಜಾರಿಗೆ ತರಲಿದೆ ಎಂದು ಪ್ರಧಾನಿಯವರು ಭರವಸೆ ನೀಡಿದ್ದಾರೆ.
ಇದರ ಜೊತೆಗೆ, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳ ಸ್ಥಾಪನೆ ಮತ್ತು ಸಂಸತ್ತಿನಲ್ಲಿ ಪೇಪರ್ ಲೀಕ್ ವಿರೋಧಿ ವಿಧೇಯಕ ಮಂಡಿಸುವುದಾಗಿಯೂ ಸರ್ಕಾರ ಘೋಷಿಸಿದೆ.
►ಟಾಸ್ಕ್ ಫೋರ್ಸ್ ತಂಡದಲ್ಲಿರುವವರು
Photo Credit : @NandanNilekani
- ನಂದನ್ ನಿಲೇಕಣಿ
ಇನ್ಫೋಸಿಸ್ ಟೆಕ್ನಾಲಜಿಸ್ ಲಿಮಿಟೆಡ್ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ನಿಲೇಕಣಿ ಅವರು 2009ರಿಂದ 2014ರವರೆಗೆ ಕ್ಯಾಬಿನೆಟ್ ಸಚಿವ ದರ್ಜೆಯೊಂದಿಗೆ ಯುಐಡಿಎಐ (UIDAI) ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. 2023 ಜನವರಿಯಲ್ಲಿ, ಅವರನ್ನು "ಆರ್ಥಿಕ ಪರಿವರ್ತನೆ, ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕುರಿತ ಜಿ20 ಕಾರ್ಯಪಡೆ"ಯ ಸಹ-ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
2010ರಲ್ಲಿ ಸರ್ಕಾರ ಸ್ಥಾಪಿಸಿದ್ದ 'ವಿಶಿಷ್ಟ ಯೋಜನೆಗಳ ತಂತ್ರಜ್ಞಾನ ಸಲಹಾ ಗುಂಪು' (TAGUP) ಅಧ್ಯಕ್ಷರೂ ಆಗಿದ್ದ ನಿಲೇಕಣಿ, ಜಿಎಸ್ಟಿ ಸೇರಿದಂತೆ ಬೃಹತ್ ಪ್ರಮಾಣದ ಸಾರ್ವಜನಿಕ ಯೋಜನೆಗಳ ಐಟಿ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೆಂಗಳೂರಿನಲ್ಲಿ ಜನಿಸಿದ ನಿಲೇಕಣಿ ಅವರು ಮುಂಬೈನ ಐಐಟಿಯಿಂದ (IIT) ಪದವಿ ಪಡೆದಿದ್ದಾರೆ.
(Photo Credit : @airnewsalerts)
- ಅಮೃತ್ ಲಾಲ್ ಮೀನಾ
ಬಿಹಾರ ಕೆಡರ್ನ ನಿವೃತ್ತ ಐಎಎಸ್ ಅಧಿಕಾರಿ (1989ರ ಬ್ಯಾಚ್) ಅಮೃತ್ ಲಾಲ್ ಮೀನಾ ಅವರು, 2024ರ ಆಗಸ್ಟ್ನಿಂದ 2025ರ ಆಗಸ್ಟ್ವರೆಗೆ ಬಿಹಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅವರು ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿಯಾಗಿ ಮತ್ತು ಡಿಪಿಐಐಟಿ (DPIIT) ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯಾಗಿ (ಲಾಜಿಸ್ಟಿಕ್ಸ್) ಕಾರ್ಯನಿರ್ವಹಿಸಿದ್ದರು. ಪರೀಕ್ಷಾ ಸುಧಾರಣೆಗಾಗಿ ರಚಿಸಲಾದ ಆರು ಸದಸ್ಯರ ಉನ್ನತ ಮಟ್ಟದ ಕಾರ್ಯಪಡೆಯಲ್ಲಿ ಅವರನ್ನು 'ಲಾಜಿಸ್ಟಿಕ್ಸ್ ತಜ್ಞ'ರನ್ನಾಗಿ ನೇಮಿಸಲಾಗಿದೆ. ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ.
(Photo Credit : X)
- ಅನಿತಾ ಕರ್ವಾಲ್
ಇವರು 2020ರಿಂದ 2022ರಲ್ಲಿ ನಿವೃತ್ತರಾಗುವವರೆಗೆ ಭಾರತದ ಶಿಕ್ಷಣ ಕಾರ್ಯದರ್ಶಿಯಾಗಿದ್ದರು. ಅದಕ್ಕೂ ಮೊದಲು, ಕರ್ವಾಲ್ ಅವರು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (CBSE) ಅಧ್ಯಕ್ಷರಾಗಿದ್ದರು. ನಿವೃತ್ತಿಯ ನಂತರ ಅವರನ್ನು ಗುಜರಾತ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (RERA) ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಸರ್ಕಾರದ 'ರಾಷ್ಟ್ರೀಯ ಶಿಕ್ಷಣ ನೀತಿ 2020' ಅನ್ನು ರೂಪಿಸುವಲ್ಲಿ ಕರ್ವಾಲ್ ಪ್ರಮುಖ ಪಾತ್ರ ವಹಿಸಿದ್ದರು. ಇವರು ಗುಜರಾತ್ ಕೆಡರ್ನ ನಿವೃತ್ತ ಐಎಎಸ್ ಅಧಿಕಾರಿ (1988ರ ಬ್ಯಾಚ್).
(Photo Credit : PTI )
- ಎಸ್. ಸೋಮನಾಥ್
ಇವರು 2022ರಿಂದ 2025ರವರೆಗೆ ಇಸ್ರೋ (ISRO) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ನೇತೃತ್ವದಲ್ಲೇ ಭಾರತವು ಚಂದ್ರನ ದಕ್ಷಿಣ ಧ್ರುವದ ಮೇಲೆ 'ಚಂದ್ರಯಾನ-3' ಅನ್ನು ಯಶಸ್ವಿಯಾಗಿ ಇಳಿಸುವ ಐತಿಹಾಸಿಕ ಸಾಧನೆ ಮಾಡಿತ್ತು. ಸಣ್ಣ ಉಪಗ್ರಹ ಉಡಾವಣಾ ವಾಹನವನ್ನು (SSLV) ಕಾರ್ಯಾಚರಣೆಗೆ ತಂದಾಗ ಮತ್ತು ಸಂಸ್ಥೆಯ ಅತ್ಯಂತ ಭಾರವಾದ ಉಡಾವಣಾ ವಾಹನವಾದ LVM3 ಅನ್ನು ವಿವಿಧ ಕಕ್ಷೆಗಳಿಗೆ ಉಪಗ್ರಹ ರವಾನಿಸಲು ಸಜ್ಜುಗೊಳಿಸಿದಾಗ ಇವರೇ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥರಾಗಿದ್ದರು.
ಅದಕ್ಕೂ ಮುನ್ನ, ಪ್ರೊಪಲ್ಶನ್ ಸಯನ್ಸ್ ತಜ್ಞರಾಗಿದ್ದ ಸೋಮನಾಥ್, ಚಂದ್ರಯಾನ-2 ಮತ್ತು 3 ಅನ್ನು ಹೊತ್ತೊಯ್ದ LVM3 ರಾಕೆಟ್ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸಿದ್ದರು. ಇವರು 1985ರಲ್ಲಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಸೇರಿದ್ದರು.
(Photo Credit : heritage.iitm.ac.in)
- ಡಾ. ವಿ. ಕಾಮಕೋಟಿ
ಇವರು 2022ರಿಂದ ಐಐಟಿ ಮದ್ರಾಸ್ನ (IIT Madras) ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಮಕೋಟಿ ಅವರು ಕಂಪ್ಯೂಟರ್ ಆರ್ಕಿಟೆಕ್ಚರ್, ಭದ್ರತೆ ಮತ್ತು ಎಐ ವಿಷಯಗಳಲ್ಲಿ ತಜ್ಞರಾಗಿದ್ದಾರೆ. ಮೊಬೈಲ್ ಕಂಪ್ಯೂಟಿಂಗ್ ಸಾಧನಗಳು ಮತ್ತು ನೆಟ್ವರ್ಕಿಂಗ್ ವ್ಯವಸ್ಥೆಗಳಲ್ಲಿ ಬಳಸಬಹುದಾದ ಭಾರತದ ಮೊದಲ ಸ್ವದೇಶಿ ಮೈಕ್ರೊಪ್ರೊಸೆಸರ್ 'ಶಕ್ತಿ'ಯನ್ನು ಅಭಿವೃದ್ಧಿಪಡಿಸಿದ ಸಂಶೋಧನಾ ತಂಡದ ನೇತೃತ್ವ ವಹಿಸಿದ್ದರಿವರು. ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ರಚಿಸಿದ್ದ 'ಕೃತಕ ಬುದ್ಧಿಮತ್ತೆ ಕಾರ್ಯಪಡೆ'ಯ ಅಧ್ಯಕ್ಷರೂ ಆಗಿದ್ದರು. ಕಾಮಕೋಟಿ ಅವರು 1995ರಲ್ಲಿ ಐಐಟಿ ಮದ್ರಾಸ್ನಿಂದ ಪಿಎಚ್ಡಿ ಮುಗಿಸಿ, 2001ರಲ್ಲಿ ಅದೇ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿಕೊಂಡರು.
(Photo Credit : PTI)
- ತಪನ್ ಕುಮಾರ್ ಡೆಕಾ
ಹಿಮಾಚಲ ಪ್ರದೇಶ ಕೆಡರ್ನ 1988ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾದ ಇವರು ನಾಲ್ಕು ವರ್ಷಗಳ ಕಾಲ ಗುಪ್ತಚರ ಇಲಾಖೆಯ (IB) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಮಲ್ಟಿ ಏಜೆನ್ಸಿ ಸೆಂಟರ್ ಅನ್ನು ಆಧುನೀಕರಣಗೊಳಿಸುವ ಮೂಲಕ ಗುಪ್ತಚರ ಸಮನ್ವಯವನ್ನು ಬಲಪಡಿಸುವುದು, ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ನಡುವೆ ಮಾಹಿತಿ ವಿನಿಮಯವನ್ನು ಹೆಚ್ಚಿಸುವುದು ಹಾಗೂ ಭಯೋತ್ಪಾದನಾ ನಿಗ್ರಹ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಗಳಿಗೆ ಅಗತ್ಯವಾದ ಗುಪ್ತಚರ ಮಾಹಿತಿ ಒದಗಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಅದಕ್ಕೂ ಮೊದಲು, ಇವರು ಐಬಿಯ ಕಾರ್ಯಾಚರಣೆಗಳ ವಿಭಾಗದಲ್ಲಿ ಹತ್ತಕ್ಕೂ ಹೆಚ್ಚು ವರ್ಷಗಳನ್ನು ಕಳೆದು, ಭಯೋತ್ಪಾದನಾ ನಿಗ್ರಹ ಕ್ರಮಗಳ ಮೇಲ್ವಿಚಾರಣೆ ನಡೆಸಿದ್ದರು.






