ಗುಜರಾತ್ ನಲ್ಲಿ ನವರಾತ್ರಿಗಾಗಿ ಐವಿ ಡ್ರಿಪ್? ಏನಿದು ಸೌಂದರ್ಯ ಮತ್ತು ಹೈಡ್ರೇಷನ್ ಕ್ರೇಝ್?

Screengrab : instagram.com
ನವರಾತ್ರಿಯ ಸಂಭ್ರಮ ಮತ್ತೆ ಬಂದಿದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತಿದ್ದ ಬಣ್ಣಬಣ್ಣದ ಚನಿಯಾ ಚೋಲಿಗಳು ಇದೀಗ ಕರ್ನಾಟಕದಲ್ಲೂ ಜನಪ್ರಿಯವಾಗುತ್ತಿವೆ.
ಗರ್ಬಾ ಮತ್ತು ದಾಂಡಿಯಾ ರಾತ್ರಿಗಳಿಗಾಗಿ ಪಾಸ್ ಗಳನ್ನು ಕಾಯ್ದಿರಿಸಿಕೊಳ್ಳುವ ಸಮಯ ಬಂದಿದೆ. ಆದರೆ ಇದೇ ನವರಾತ್ರಿಯಲ್ಲಿ ಮತ್ತೊಂದು ವಿಷಯವೂ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅದೇ ಐವಿ ಡ್ರಿಪ್!
ನೇರವಾಗಿ ರಕ್ತನಾಳದ ಮೂಲಕ ನೀಡಲಾಗುವ ದ್ರವ ಚಿಕಿತ್ಸೆಯಾದ ಐವಿ ಡ್ರಿಪ್ಗಳಿಗೂ ನವರಾತ್ರಿಗೂ ಏನು ಸಂಬಂಧ ಎಂದುಕೊಂಡಿರಾ? ಗುಜರಾತ್ನಾದ್ಯಂತ ಇರುವ ಕ್ಲಿನಿಕ್ಗ ಳಲ್ಲಿ ‘ನವರಾತ್ರಿ ಐವಿ ಡ್ರಿಪ್’ಗಳು ಹಬ್ಬದ ಸಮಯದಲ್ಲಿ ಚೈತನ್ಯ ತುಂಬುವ ಹೊಸ ವಿಧಾನವಾಗಿ ಜನಪ್ರಿಯವಾಗುತ್ತಿವೆ. ದಣಿವಿಲ್ಲದೆ ಗರ್ಬಾ ಮತ್ತು ದಾಂಡಿಯಾ ರಾತ್ರಿಗಳನ್ನು ಕಳೆಯಲು ಅಗತ್ಯವಾದ ಶಕ್ತಿಯನ್ನು ಪಡೆಯುವುದು ಮತ್ತು ಹಬ್ಬದ ವಿಶೇಷ ಹೊಳಪನ್ನು ನೀಡುವ ಹೈಡ್ರೇಷನ್ ಡ್ರಿಪ್ ಗಳ ಬಗ್ಗೆ ಯೋಚಿಸಿ ನೋಡಿ! ಇದರ ಉದ್ದೇಶವೇನು? ರಾತ್ರಿಯಿಡೀ ನೃತ್ಯ ಮಾಡುವುದು, ಹಗಲಿನಲ್ಲಿ ಉಪವಾಸವಿರುವುದು ಮತ್ತು ಆದರೂ ಮುಂದಿನ ಸುತ್ತಿನ ಗರ್ಬಾಗೆ ತಾಜಾತನದಿಂದ ಹಾಜರಾಗುವುದು!
ವಿಚಿತ್ರವೆನಿಸಿದರೂ ಇದು ನಿಜ. ಐವಿ ಡ್ರಿಪ್ ಗಳು ಈಗಾಗಲೇ ಭಾರತೀಯ ಮದುವೆಗಳಲ್ಲೂ ಕಾಣಿಸಿಕೊಂಡಿವೆ. ಕಳೆದ ವರ್ಷ ಮದುವೆಯೊಂದರಲ್ಲಿ ಅಲಂಕಾರಿಕ ಉಡುಪು ಧರಿಸಿದ ಅತಿಥಿಗಳು ಡ್ರಿಪ್ ಗಳನ್ನು ಹಾಕಿಸಿಕೊಂಡಿರುವ ವೀಡಿಯೊಗಳು ಮತ್ತು ಫೋಟೊಗಳು ವೈರಲ್ ಆಗಿದ್ದವು.
ವಾಸ್ತವದಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಐವಿ ಡ್ರಿಪ್ ಗಳು ಹೊಸದೇನಲ್ಲ. ಜನಪ್ರಿಯ ತಾರೆಯರು ತಾವು ಐವಿ ಥೆರಪಿ ಪಡೆಯುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಆದರೆ ನವರಾತ್ರಿಯ ವಿಶೇಷತೆಯೇ ಬೇರೆ. ನವರಾತ್ರಿ ಎಂದರೆ ನಸುಕಿನ ಜಾವದವರೆಗೂ ನೃತ್ಯ ಮಾಡುವುದು, ಹಗಲಿನಲ್ಲಿ ಉಪವಾಸವಿರುವುದು ಮತ್ತು ಮರುದಿನ ರಾತ್ರಿ ಮತ್ತೆ ಅದೇ ಚಟುವಟಿಕೆಯನ್ನು ಮುಂದುವರಿಸುವುದು. ಹೀಗಾಗಿ ದೇಹಕ್ಕೆ ದಣಿವು ಸಾಮಾನ್ಯ. ಅದೇ ಸಂದರ್ಭದಲ್ಲಿ ಐವಿ ಡ್ರಿಪ್ ಗಳು ಪ್ರವೇಶ ಪಡೆಯುತ್ತವೆ. ಇವು ಗರ್ಬಾ ಸಿದ್ಧತೆಯ ದಿನಚರಿಯಲ್ಲಿ ಸೇರ್ಪಡೆಯಾಗಿರುವ ಹೊಸ ಅಂಶ.
ಅಹಮದಾಬಾದ್ ಮತ್ತು ಸೂರತ್ ನಿಂದ ಹಿಡಿದು ರಾಜ್ಕೋಟ್ ಹಾಗೂ ಇತರ ಕಡೆಗಳಲ್ಲಿ ನವರಾತ್ರಿ ವಿಶೇಷ ಐವಿ ಡ್ರಿಪ್ ಪ್ಯಾಕೇಜ್ ಗಳನ್ನು ನೀಡುವ ಕ್ಲಿನಿಕ್ಗಳ ವೀಡಿಯೊಗಳು ವೈರಲ್ ಆಗಿದೆ. ಇವುಗಳಲ್ಲಿ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವುದು ಮತ್ತು ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುವುದರಿಂದ ಹಿಡಿದು ತ್ವಚೆಯ ಹೊಳಪಿನವರೆಗೆ ಎಲ್ಲವನ್ನೂ ಗುರಿಯಾಗಿಸುವ ಆಯ್ಕೆಗಳು ಲಭ್ಯವಿವೆ!
ಹಬ್ಬದ ವಿಶೇಷ ಐವಿ ಡ್ರಿಪ್ ಗೆ ನಿಗದಿತ ಸೂತ್ರವಿಲ್ಲ. ಐವಿ ಡ್ರಿಪ್ ನಲ್ಲಿ ವಿಟಮಿನ್ ಗಳು, ಖನಿಜಗಳು, ಆಂಟಿಆಕ್ಸಿಡಂಟ್ಗಳು, ಅಮಿನೊ ಆಮ್ಲಗಳು ಮತ್ತು ಇತರ ಪೂರಕ ಅಂಶಗಳನ್ನು ಸಂಯೋಜಿಸಲು ಸಾವಿರಾರು ಮಾರ್ಗಗಳಿವೆ. ನಿರ್ದಿಷ್ಟ ಪೋಷಕಾಂಶಗಳನ್ನು ಒದಗಿಸುವುದು ಮತ್ತು ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಲು ನೆರವಾಗುವುದು ಇದರ ಮುಖ್ಯ ಉದ್ದೇಶವಾಗಿದೆ. ಬಳಸುವ ಮಿಶ್ರಣವು ವ್ಯಕ್ತಿಯ ಅಗತ್ಯಗಳಿಗೆ ಅನುಗುಣವಾಗಿರುತ್ತದೆ.
ಈ ಚಿಕಿತ್ಸಾ ಅವಧಿಗಳಲ್ಲಿ ವ್ಯಕ್ತಿಯ ಆರೋಗ್ಯ, ಜೀವನಶೈಲಿ ಮತ್ತು ಪೌಷ್ಟಿಕಾಂಶದ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾದ, ವೈದ್ಯರ ಮೇಲ್ವಿಚಾರಣೆಯ ಐವಿ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಇದರ ಪರಿಣಾಮಗಳು ಸಾಮಾನ್ಯವಾಗಿ ತಾತ್ಕಾಲಿಕವಾಗಿದ್ದರೂ, ವೈದ್ಯಕೀಯ ಅಗತ್ಯವಿದ್ದಾಗ ನಿರ್ಜಲೀಕರಣ, ಎಲೆಕ್ಟ್ರೋಲೈಟ್ಗಳ ಅಸಮತೋಲನ ಮತ್ತು ನಿರ್ದಿಷ್ಟ ಪೋಷಕಾಂಶಗಳ ಕೊರತೆಯನ್ನು ನಿವಾರಿಸಲು ಐವಿ ಚಿಕಿತ್ಸೆ ಸಹಾಯ ಮಾಡುತ್ತದೆ.
ಎಲ್ಲರೂ ಐವಿ ಡ್ರಿಪ್ ಪಡೆಯಲು ಸಾಧ್ಯವಿಲ್ಲ. ಶಿಫಾರಸು ಮಾಡುವ ಮೊದಲು ರೋಗಿಯ ಸಮಸ್ಯೆ, ವೈದ್ಯಕೀಯ ಇತಿಹಾಸ ಮತ್ತು ವೈಯಕ್ತಿಕ ಅಗತ್ಯಗಳನ್ನು ಗಮನಿಸಲಾಗುತ್ತದೆ. ದರಗಳು ಕ್ಲಿನಿಕ್ ಮತ್ತು ಬಳಸುವ ದ್ರಾವಣದ ಪ್ರಕಾರ ಬದಲಾಗುತ್ತವೆ. ಕೆಲವು ಡ್ರಿಪ್ ಗಳಿಗೆ 5,000 ರೂ. ವೆಚ್ಚವಾಗುತ್ತದೆ. ಆಪ್ಟಿಮೈಸ್ ಐವಿ ಚಿಕಿತ್ಸೆಯ ದರ 4,000 ರೂ.ಗಳಿಂದ 15,000 ರೂ.ವರೆಗೆ ಇರುತ್ತದೆ.
ತಕ್ಷಣದ ಕಾಂತಿ ಮತ್ತು ಶಕ್ತಿ ನೀಡುವ ಭರವಸೆಯಲ್ಲಿ ಪಡೆಯಲಾಗುವ ಈ ಹಬ್ಬದ ಡ್ರಿಪ್ಗಳ ಬಗ್ಗೆ ಟೀಕೆಗಳೂ ಕೇಳಿಬಂದಿವೆ. ವೈದ್ಯಕೀಯ ಪ್ರಕ್ರಿಯೆಯೊಂದನ್ನು ಪಾರ್ಟಿಗೂ ಮುನ್ನದ ಸಿದ್ಧತೆಯ ಭಾಗವನ್ನಾಗಿ ಪರಿವರ್ತಿಸುವ ಕಲ್ಪನೆಯನ್ನು ಕೆಲವರು ಟೀಕಿಸಿದ್ದಾರೆ.






