4000 ಹುದ್ದೆಗಳನ್ನು ಕಡಿತಗೊಳಿಸಲಿರುವ ಜಾಗ್ವಾರ್ ಲ್ಯಾಂಡ್ ರೋವರ್

Photo Credit : X
ಬ್ರಿಟನ್ನಲ್ಲಿ ಮಾರುಕಟ್ಟೆ ಬಿಕ್ಕಟ್ಟು, ಅಮೆರಿಕ ಹೇರಿದ ಸುಂಕಗಳು ಮತ್ತು ಸೈಬರ್ ದಾಳಿಯ ದೀರ್ಘಕಾಲೀನ ಪರಿಣಾಮಗಳ ಹಿನ್ನೆಲೆಯಲ್ಲಿ ಟಾಟಾ ಒಡೆತನದ ಕಾರು ನಿರ್ಮಾಣ ಕಂಪೆನಿಯು ಮುಂದಿನ ಎರಡು ವರ್ಷಗಳಲ್ಲಿ ಜಾಗತಿಕವಾಗಿ 4000 ಹುದ್ದೆಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ.
ಬ್ರಿಟನ್ ನ ಅತಿದೊಡ್ಡ ಕಾರು ನಿರ್ಮಾಣ ಕಂಪೆನಿಯಾಗಿರುವ ಜಾಗ್ವಾರ್ ಲ್ಯಾಂಡ್ ರೋವರ್ ಮುಂದಿನ ಎರಡು ವರ್ಷಗಳಲ್ಲಿ ಜಾಗತಿಕವಾಗಿ 4000 ಹುದ್ದೆಗಳನ್ನು ಕಡಿತಗೊಳಿಸುವ ಯೋಜನೆಯನ್ನು ದೃಢಪಡಿಸಿದೆ. ಬ್ರಿಟನ್ ನಲ್ಲಿ ಮಾರುಕಟ್ಟೆ ಬಿಕ್ಕಟ್ಟು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇರಿದ ಸುಂಕಗಳು ಮತ್ತು ಸೈಬರ್ ದಾಳಿಯ ದೀರ್ಘಕಾಲೀನ ಪರಿಣಾಮಗಳ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದೆ.
ಟಾಟಾ ಒಡೆತನದ ಕಾರು ನಿರ್ಮಾಣ ಕಂಪೆನಿಯು ಜಾಗತಿಕ ಕಾರ್ಯಪಡೆಯಿಂದ 4000 ಹುದ್ದೆಗಳನ್ನು ಕಡಿತಗೊಳಿಸಿ, ಮುಂದಿನ ಎರಡು ವರ್ಷಗಳಲ್ಲಿ 1.7 ಶತಕೋಟಿ ಪೌಂಡ್ ಉಳಿಸುವ ಪ್ರಯತ್ನ ಮಾಡುತ್ತಿದೆ. ಕಂಪೆನಿಯು ಯುನೈಟೆಡ್ ಕಿಂಗ್ಡಂ ನಲ್ಲಿ ಸುಮಾರು 34,000 ಉದ್ಯೋಗಿಗಳನ್ನು ಹೊಂದಿದೆ.
ಜಾಗತಿಕ ಕಾರು ಮಾರುಕಟ್ಟೆಯಲ್ಲಿನ ತೀವ್ರ ಸ್ಪರ್ಧೆ ಹಾಗೂ ಕಳೆದ ವರ್ಷ ಕಂಪೆನಿಯ ಕಾರ್ಖಾನೆಗಳನ್ನು ಮುಚ್ಚಬೇಕಾಗಿ ಬಂದಿದ್ದ ಸೈಬರ್ ದಾಳಿಯ ಪರಿಣಾಮಗಳ ನಡುವೆ ಜಾಗ್ವಾರ್ ಲ್ಯಾಂಡ್ ರೋವರ್ ತೀವ್ರ ಸವಾಲುಗಳನ್ನು ಎದುರಿಸುತ್ತಿದೆ. ಆದರೆ ಈ ಉದ್ಯೋಗ ಕಡಿತವು ಬ್ರಿಟನ್ನಲ್ಲಿ ಕೈಗಾರೀಕರಣದ ಯುಗವನ್ನು ಮರಳಿ ತರುವ ಪ್ರಧಾನಿ ಆಂಡಿ ಬರ್ನ್ಹ್ಯಾಮ್ ಅವರ ಪ್ರಯತ್ನಕ್ಕೆ ಆರಂಭಿಕ ಸವಾಲು ಒಡ್ಡಬಹುದು.
“ತೀವ್ರ ಸ್ಪರ್ಧೆ ಮತ್ತು ನಡೆಯುತ್ತಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ನಡುವೆ ತಾಂತ್ರಿಕ ಬದಲಾವಣೆ ಜೊತೆಗೆ ಆಟೋಮೋಟಿವ್ ಉದ್ಯಮವು ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ. ಬೆಳವಣಿಗೆಯ ಮರುಕಲ್ಪಿತ ತಂತ್ರದ ಮೂಲಕ ಜಾಗ್ವಾರ್ ಲ್ಯಾಂಡ್ ರೋವರ್ ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ಮತ್ತು ದೀರ್ಘಾವಧಿಯ ಯಶಸ್ಸಿನ ವ್ಯವಹಾರವನ್ನು ಮುಂದುವರಿಸುವತ್ತ ಸಾಗುತ್ತಿದೆ” ಎಂದು ಜಾಗ್ವಾರ್ ಲ್ಯಾಂಡ್ ರೋವರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿಬಿ ಬಾಲಾಜಿ ಹೇಳಿದ್ದಾರೆ.
“ಈ ಪರಿವರ್ತನೆಯ ಭಾಗವಾಗಿ ಮುಂದಿನ ಎರಡು ವರ್ಷಗಳಲ್ಲಿ ಜಾಗತಿಕ ಕಾರ್ಯಪಡೆಯಿಂದ 4000 ಹುದ್ದೆಗಳನ್ನು ಕಡಿತಗೊಳಿಸುತ್ತಿದ್ದೇವೆ. ಸಂಬಂಧಿತ ಸಹೋದ್ಯೋಗಿಗಳಿಗೆ ಈ ಸುದ್ದಿ ಕಷ್ಟದಾಯಕವಾಗಿದ್ದರೂ, ಎಲ್ಲರಿಗೂ ಗೌರವಯುತವಾಗಿ ಬೆಂಬಲ ನೀಡಲು ಬದ್ಧರಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಉದ್ಯೋಗ ಕಡಿತದಿಂದ ಉತ್ಪಾದನಾ ಹಂತದ ಕಾರ್ಮಿಕರಿಗಿಂತ ಹೆಚ್ಚಾಗಿ ಹಿರಿಯ ಮ್ಯಾನೇಜ್ಮೆಂಟ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಹುದ್ದೆಗಳಲ್ಲಿರುವವರಿಗೆ ಹೆಚ್ಚು ಹೊಡೆತ ಬೀಳುವ ಸಾಧ್ಯತೆಯಿದೆ. ಮುಂದಿನ ಎರಡು ವರ್ಷಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿರುವ ಹುದ್ದೆಗಳನ್ನು ಕಡಿತಗೊಳಿಸುವ ಮೂಲಕ ಗುರಿ ತಲುಪಲು ಕಂಪೆನಿ ಪ್ರಯತ್ನಿಸುತ್ತಿದೆ.
ಉದ್ಯೋಗ ಕಡಿತದ ಪ್ರಕ್ರಿಯೆಯನ್ನು ಕೈಬಿಡುವಂತೆ ಮನವೊಲಿಸಲು ತೆರಿಗೆದಾರರ ಹಣದಿಂದ ಹಣಕಾಸು ನೆರವು ನೀಡುವ ಸಾಧ್ಯತೆಯನ್ನು ವ್ಯವಹಾರ ಸಚಿವ ಜೋನಥನ್ ರೇನಾಲ್ಡ್ಸ್ ತಳ್ಳಿ ಹಾಕಿದ್ದಾರೆ. ಹಣಕಾಸು ನೆರವು ನೀಡಲಾಗುವುದಿಲ್ಲ. ಆದರೆ ಕಂಪೆನಿಯನ್ನು ಬೆಂಬಲಿಸಲು ಇತರ ಪ್ರಯತ್ನಗಳು ಇರಬಹುದು ಎಂದು ಅವರು ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೈಬರ್ ದಾಳಿಯಿಂದ ಕಂಪೆನಿ ಚೇತರಿಸಿಕೊಳ್ಳಲು ನೆರವಾಗಲು ಸರ್ಕಾರ ಕಳೆದ ವರ್ಷ ಜಾಗ್ವಾರ್ ಲ್ಯಾಂಡ್ ರೋವರ್ ಕಂಪೆನಿಗೆ 1.5 ಶತಕೋಟಿ ಪೌಂಡ್ ವರೆಗಿನ ಸಾಲಕ್ಕೆ ಖಾತರಿ ನೀಡಲು ಒಪ್ಪಿಕೊಂಡಿತ್ತು. ಆದರೆ ಕಂಪೆನಿ ಈ ಸಾಲ ಸೌಲಭ್ಯವನ್ನು ಬಳಸಿಕೊಂಡಿರಲಿಲ್ಲ.
ಬಾಲಾಜಿ ಅವರ ಜೊತೆಗೆ ಮಂಗಳವಾರ ರೇನಾಲ್ಡ್ಸ್ ಚರ್ಚೆ ನಡೆಸಲಿದ್ದಾರೆ. ಆ ಸಂದರ್ಭದಲ್ಲಿ ಉದ್ಯೋಗ ಕಡಿತದ ಬದಲಿಗೆ ಕಾರ್ಮಿಕರಿಗೆ ಮರುತರಬೇತಿ ಮತ್ತು ಮರುನಿಯೋಜನೆಗೆ ಆದ್ಯತೆ ನೀಡುವಂತೆ ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಒತ್ತಾಯಿಸುವ ನಿರೀಕ್ಷೆಯಿದೆ.






