ಸೆನ್ಸಾರ್ ಮಂಡಳಿ ಮುಂದೆ ಸಿಲುಕಿರುವ ‘ಜನನಾಯಗನ್’ ಪೈರಸಿ ಸೈಟ್ ಗಳಲ್ಲಿ ಬಿಡುಗಡೆ

ವಿಜಯ್ | Photo Credit : .bookmyshow
ಬಿಡುಗಡೆಗೆ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕಾಯುತ್ತಿರುವ ವಿಜಯ್ ಅವರ ಸಿನಿಮಾ ‘ಜನನಾಯಗನ್’ ಪೈರಸಿ ವೆಬ್ಸೈಟ್ ಗಳಲ್ಲಿ ಸೋರಿಕೆಯಾಗಿದೆ.
ದಳಪತಿ ವಿಜಯ್ ಅವರ ಕೊನೆಯ ಚಿತ್ರ ‘ಜನನಾಯಗನ್’ನ ಹೈ ಡೆಫಿನಿಷನ್ (HD) ಮುದ್ರಣವು ಪೈರಸಿ ಸೈಟ್ ಗಳಲ್ಲಿ ಸೋರಿಕೆಯಾಗಿದೆ. ಈ ಸಿನಿಮಾಗೆ ಸೆನ್ಸರ್ ಪ್ರಮಾಣಪತ್ರ ನೀಡದೇ ಇರುವುದರಿಂದ, ಜನವರಿಯಲ್ಲಿ ಪೊಂಗಲ್ ಹಬ್ಬದ ಸಂದರ್ಭ ಬಿಡುಗಡೆಯಾಗಬೇಕಿದ್ದ ಚಿತ್ರ ಇನ್ನೂ ತೆರೆಕಂಡಿಲ್ಲ.
ಚಿತ್ರ ಸೋರಿಕೆಯಾಗುವ ಮೊದಲು ಚಿತ್ರದ ಶೀರ್ಷಿಕೆ ಕ್ರೆಡಿಟ್ ಗಳು, ಪರಿಚಯಾತ್ಮಕ ದೃಶ್ಯ ಹಾಗೂ ಕ್ಲೈಮಾಕ್ಸ್ ಸೇರಿ ಕೆಲವು ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿದ್ದವು. ನಂತರ ಪೂರ್ಣ ಸಿನಿಮಾವೇ ಸೋರಿಕೆಯಾಗಿದೆ. ವಿಜಯ್ ಅವರ ಅಭಿಮಾನಿಗಳು ಸಿನಿಮಾ ಸೋರಿಕೆ ಕುರಿತು ಆಘಾತ ವ್ಯಕ್ತಪಡಿಸಿದ್ದು, ದೂರು ದಾಖಲಿಸಲು ನಿರ್ಮಾಣ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.
ಪ್ರಾರಂಭದಲ್ಲಿ ನಿರ್ಮಾಣ ಸಂಸ್ಥೆ ತ್ವರಿತ ಕ್ರಮ ಕೈಗೊಂಡು ‘ಎಕ್ಸ್’ ಸಾಮಾಜಿಕ ಜಾಲತಾಣ ಸೇರಿದಂತೆ ಇತರ ವೇದಿಕೆಗಳಿಂದ ಪ್ರಸಾರವಾಗುತ್ತಿದ್ದ ಕ್ಲಿಪ್ಗಳನ್ನು ತೆಗೆದು ಹಾಕಿತ್ತು. ಆದರೆ ನಂತರ ಇಡೀ ಸಿನಿಮಾದ HD ಆವೃತ್ತಿ ಪೈರಸಿ ಸೈಟ್ ಗಳಲ್ಲಿ ಬಿಡುಗಡೆಯಾಯಿತು.
ಶುಕ್ರವಾರ ಬೆಳಗಿನ ವೇಳೆಗೆ ಚಿತ್ರದ ವಿಕಿಪೀಡಿಯ ಪುಟದಲ್ಲಿ ಸೋರಿಕೆಯಾದ ಯುಆರ್ಎಲ್ ಕೂಡ ಕಾಣಿಸಿಕೊಂಡಿತ್ತು. ಆದರೆ ಅದು ವೈರಸ್ ಅಥವಾ ದುರುದ್ದೇಶಪೂರಿತ ಲಿಂಕ್ ಆಗಿರುವ ಸಾಧ್ಯತೆಯೂ ಇದೆ.
ಈ ನಡುವೆ ತಮಿಳು ಸಿನಿಮಾಗಳನ್ನು ಪೈರಸಿಯಲ್ಲಿ ಬಿಡುಗಡೆ ಮಾಡುವಲ್ಲಿ ಕುಖ್ಯಾತವಾಗಿರುವ ‘ತಮಿಳುಎಂವಿ’ ಎಂಬ ಸೈಟ್ ತಾವು ವಿಜಯ್ ಅವರ ಸಿನಿಮಾವನ್ನು ಸದ್ಯ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದೆ. “ವಿಜಯ್ ಸುತ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ನಮಗೆ ತಿಳಿದಿದೆ. ನಮ್ಮ ನಿಯಮಗಳ ಪ್ರಕಾರ ನಾವು ಚಲನಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆಯಾದ ನಂತರ ಮಾತ್ರ ಅಪ್ಲೋಡ್ ಮಾಡುತ್ತೇವೆ. ಅಧಿಕೃತ ಬಿಡುಗಡೆಯ ಮೊದಲು ಚಲನಚಿತ್ರವನ್ನು ಇಲ್ಲಿ ಅಪ್ಲೋಡ್ ಮಾಡಲಾಗುವುದಿಲ್ಲ” ಎಂದು ತಿಳಿಸಿದೆ.
ಜನನಾಯಗನ್ ವರ್ಸಸ್ ಸೆನ್ಸಾರ್ ಮಂಡಳಿ
‘ಜನನಾಯಗನ್’ ಅನ್ನು ವಿಜಯ್ ಅವರು ಚಿತ್ರರಂಗವನ್ನು ತೊರೆಯುತ್ತಿರುವ ಸಂದರ್ಭದಲ್ಲಿ ವಿದಾಯ ಹೇಳುವ ಕೊನೆಯ ಚಿತ್ರವೆಂದು ಪ್ರಚಾರ ಮಾಡಲಾಗಿತ್ತು. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಜನರ ಭಾವನೆಗಳಿಗೆ ನೋವುಂಟು ಮಾಡುವ ಕೆಲವು ದೃಶ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿನ್ನೆಲೆ, ಜನವರಿ 9ರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಕೆಲವು ದಿನಗಳ ಕಾಲ ಮುಂದೂಡಲಾಗಿತ್ತು.
ಇದಾದ ನಂತರ ಪ್ರಮಾಣೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೋರಿ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಒಂದು ತಿಂಗಳ ಕಾನೂನು ಬಿಕ್ಕಟ್ಟಿನ ಬಳಿಕ ತಂಡವು ಪ್ರಕರಣವನ್ನು ಹಿಂತೆಗೆದುಕೊಂಡು ಚಿತ್ರವನ್ನು ಪರಿಷ್ಕರಣಾ ಸಮಿತಿಗೆ (Revising Committee) ಸಲ್ಲಿಸಲು ಒಪ್ಪಿಕೊಂಡಿತು. ಸಿನಿಮಾ ಈಗ ಪರಿಷ್ಕರಣಾ ಸಮಿತಿಯ ಮುಂದೆ ಇದೆ. ಅದನ್ನು ಸದಸ್ಯರಿಗೆ ಪ್ರದರ್ಶಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸದಸ್ಯರೊಬ್ಬರು ಅನಾರೋಗ್ಯಕ್ಕೆ ಒಳಗಾದ ನಂತರ ಸಮಿತಿಯ ಪ್ರದರ್ಶನವನ್ನು ರದ್ದುಪಡಿಸಲಾಗಿತ್ತು. ಅದರ ಬಳಿಕ ಸಮಿತಿ ಸಿನಿಮಾ ನೋಡಿದೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ತಮಿಳುನಾಡು ವಿಧಾನಸಭಾ ಚುನಾವಣೆ ಮುಗಿದ ನಂತರವೇ ಚಿತ್ರಕ್ಕೆ ಅನುಮತಿ ದೊರೆಯುವ ಸಾಧ್ಯತೆಗಳಿವೆ. ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ತಮ್ಮ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪರವಾಗಿ ಸ್ಪರ್ಧಿಸುತ್ತಿರುವುದು ವಿಳಂಬಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಜನನಾಯಗನ್’ ರಾಜಕೀಯ ಹಿನ್ನೆಲೆಯ ಸಿನಿಮಾ ಆಗಿದೆ. ವಿಜಯ್ ಅವರೊಂದಿಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ಮೆನನ್, ಪ್ರಕಾಶ್ ರಾಜ್ ಹಾಗೂ ಪ್ರಿಯಾಮಣಿ ನಟಿಸಿದ್ದಾರೆ.







