ʼಇನ್ನು ಮುಂದೆ ಜಂತರ್ ಮಂತರ್ ಪ್ರತಿಭಟನಾ ಸ್ಥಳವಲ್ಲʼ: ಪ್ರತಿಭಟನೆಗಳು ಎಲ್ಲಿ ನಡೆಯಬೇಕು ಎಂಬುದನ್ನು ಯಾರು ನಿರ್ಧರಿಸುತ್ತಾರೆ?

Photo Credit : PTI
ದಿಲ್ಲಿ ಪೊಲೀಸರು ಸೋಮವಾರ (ಅಕ್ಟೋಬರ್ 12) ಜಂತರ್ ಮಂತರ್ ಅನ್ನು ನಿಗದಿತ ಪ್ರತಿಭಟನಾ ಸ್ಥಳದ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಉತ್ತರ ದಿಲ್ಲಿಯ ರಾಮಲೀಲಾ ಮೈದಾನ ಮತ್ತು ಬುರಾರಿ ಮೈದಾನ ಹಾಗೂ ಪೂರ್ವ ದಿಲ್ಲಿಯ ಸಿಬಿಡಿ ಮೈದಾನವನ್ನು ಪರ್ಯಾಯ ಸ್ಥಳಗಳಾಗಿ ಘೋಷಿಸಿದ್ದಾರೆ.
ಅಧಿಸೂಚನೆಯ ಪ್ರಕಾರ, ಗೃಹ ವ್ಯವಹಾರಗಳ ಸಚಿವಾಲಯ (MHA) ರಚಿಸಿದ್ದ ಸಮಿತಿಯ ಶಿಫಾರಸಿನ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂರು ಸ್ಥಳಗಳಲ್ಲಿ ಪ್ರತಿಭಟನೆಗಳು ಅಥವಾ ಪ್ರದರ್ಶನಗಳನ್ನು ಆಯೋಜಿಸಲು ವಿವರವಾದ ಮತ್ತು ಪರಿಷ್ಕರಿಸಿದ ಪ್ರಮಾಣಿತ ಕಾರ್ಯವಿಧಾನ (SOP) ಅನ್ನು ಪ್ರತ್ಯೇಕವಾಗಿ ಹೊರಡಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 10ರಿಂದ ದಿಲ್ಲಿಯ ಮಧ್ಯಭಾಗದಲ್ಲಿ ದಿಲ್ಲಿ ಪೊಲೀಸರು ನಡೆಸಿದ ಬ್ಯಾರಿಕೇಡ್ ಅಳವಡಿಕೆ ಮತ್ತು ಪ್ರತಿಭಟನಾಕಾರರ ಮೇಲಿನ ಕ್ರಮದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಅಂದಿನಿಂದ ಪ್ರತಿಭಟನಾಕಾರರು ರಸ್ತೆಗಿಳಿದಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಪ್ರದೇಶಗಳು ಸೇರಿದಂತೆ ಹಲವೆಡೆ ಸೇರಿದ್ದಾರೆ.
ಸಂಚಾರ ದಟ್ಟಣೆ, ಸಾರ್ವಜನಿಕ ಸುರಕ್ಷತೆ ಮತ್ತು ನಿವಾಸಿಗಳ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವ ಜೊತೆಗೆ, ಪ್ರತಿಭಟನೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಈ ಪ್ರತಿಭಟನಾ ಸ್ಥಳಗಳನ್ನು ನಿಗದಿಪಡಿಸಲಾಗಿದೆ.
ದಿಲ್ಲಿಯಲ್ಲಿ ಪ್ರತಿಭಟನೆಗಳು ಎಲ್ಲಿ ನಡೆಯಬೇಕು ಎಂಬುದನ್ನು ಯಾರು ನಿರ್ಧರಿಸುತ್ತಾರೆ?
ಮಾತನಾಡುವ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತವಾಗಿ ಸಭೆ ಸೇರುವ ಮೂಲಭೂತ ಹಕ್ಕುಗಳನ್ನು ಸಂವಿಧಾನದ 19ನೇ ವಿಧಿಯು ಖಾತಪಡಿಸುತ್ತದೆ. ಈ ಹಕ್ಕುಗಳು "ಸಾರ್ವಜನಿಕ ಸುವ್ಯವಸ್ಥೆ" ಸೇರಿದಂತೆ ಸೂಕ್ತವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತವೆ.
ಇತರ ರಾಜ್ಯಗಳಿಗಿಂತ ಭಿನ್ನವಾಗಿ, ದಿಲ್ಲಿಯ ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆಯು ದಿಲ್ಲಿ ವಿಧಾನಸಭೆಯ ಶಾಸಕಾಂಗ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಸಂವಿಧಾನದ 239AA(3)(a) ವಿಧಿಯ ಪ್ರಕಾರ, ರಾಜ್ಯ ಪಟ್ಟಿಯ ನಮೂದುಗಳು 1, 2 ಮತ್ತು 18 (ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್ ಮತ್ತು ನೆಲ) ಹೊರತುಪಡಿಸಿ, ರಾಷ್ಟ್ರ ರಾಜಧಾನಿ ಪ್ರದೇಶ (NCT) ದಿಲ್ಲಿಗಾಗಿ ಕಾನೂನುಗಳನ್ನು ರೂಪಿಸುವ ಅಧಿಕಾರ ವಿಧಾನಸಭೆಗೆ ಇದೆ.
ಹೀಗಾಗಿ ದಿಲ್ಲಿ ಪೊಲೀಸರು ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಪೊಲೀಸರು ಪ್ರತಿಭಟನೆಗಳಿಗೆ ಅರ್ಜಿ ಸಲ್ಲಿಕೆ ಮತ್ತು ನಿಗದಿತ ಸ್ಥಳಗಳ ನಿಯಮಗಳ ಪಾಲನೆ ಸೇರಿದಂತೆ ವೈಯಕ್ತಿಕ ಪ್ರತಿಭಟನೆಗಳನ್ನು ನಿಯಂತ್ರಿಸುತ್ತಾರೆ.
ಹಿಂದಿನ ವ್ಯವಸ್ಥೆಯಡಿ, ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಆಯೋಜಕರು 10 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಿತ್ತು. ಅಲ್ಲಿ ಗರಿಷ್ಠ 1,000 ಜನರಿಗೆ ಮಾತ್ರ ಅವಕಾಶವಿತ್ತು. ರಾಮಲೀಲಾ ಮೈದಾನವು ಮತ್ತೊಂದು ನಿಗದಿತ ಸ್ಥಳವಾಗಿದ್ದು, ಅಲ್ಲಿ ಸುಮಾರು 50,000 ಜನರ ಸಾಮರ್ಥ್ಯವಿದೆ.
ಕಾನೂನು ಮತ್ತು ಸುವ್ಯವಸ್ಥೆ vs 'ಸಾರ್ವಜನಿಕ ಸುವ್ಯವಸ್ಥೆ'
ಪ್ರತಿಭಟನೆಗಳನ್ನು ನಿಯಂತ್ರಿಸುವಾಗ ಪೊಲೀಸರು ಸಾಮಾನ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದನ್ನು ಉಲ್ಲೇಖಿಸುತ್ತಾರೆ. ಆದರೆ, 19ನೇ ವಿಧಿಯು ಸಾರ್ವಜನಿಕ ಆದೇಶ ಸೇರಿದಂತೆ ನಿರ್ದಿಷ್ಟಪಡಿಸಿದ ಕಾರಣಗಳ ಆಧಾರದ ಮೇಲೆ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ವಿಧಿಸಲು ಅವಕಾಶ ನೀಡುತ್ತದೆ. ಸುಪ್ರೀಂ ಕೋರ್ಟ್ ಈ ಎರಡನ್ನೂ ವಿಭಿನ್ನವಾಗಿ ಪರಿಗಣಿಸಿದೆ.
1966ರ ರಾಮ್ ಮನೋಹರ್ ಲೋಹಿಯಾ ವಿರುದ್ಧ ಬಿಹಾರ ಸರ್ಕಾರ ಪ್ರಕರಣದ ತೀರ್ಪಿನಲ್ಲಿ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದೆಯೂ ಒಂದು ಕೃತ್ಯವು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದು ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ರಾಜ್ಯದ ಭದ್ರತೆಯನ್ನು ಒಂದರೊಳೊಗೊಂದರಂತೆ ಇರುವ ಮೂರು ವೃತ್ತಗಳ ರೂಪದಲ್ಲಿ ವಿವರಿಸಿದ್ದು, ಸಾರ್ವಜನಿಕ ಸುವ್ಯವಸ್ಥೆಯು ಕಿರಿದಾದ ವರ್ಗದಲ್ಲಿದೆ ಎಂದು ತಿಳಿಸಿದೆ.
"ನಾವು ಒಂದರೊಳೊಗೊಂದರಂತೆ ಇರುವ ಮೂರು ವೃತ್ತಗಳನ್ನು ಕಲ್ಪಿಸಿಕೊಳ್ಳಬೇಕು. ಕಾನೂನು ಮತ್ತು ಸುವ್ಯವಸ್ಥೆಯು ಅತ್ಯಂತ ದೊಡ್ಡ ವೃತ್ತವನ್ನು ಪ್ರತಿನಿಧಿಸುತ್ತದೆ, ಅದರೊಳಗೆ ಸಾರ್ವಜನಿಕ ಸುವ್ಯವಸ್ಥೆಯನ್ನು ಪ್ರತಿನಿಧಿಸುವ ಮುಂದಿನ ವೃತ್ತವಿದೆ ಮತ್ತು ಅತ್ಯಂತ ಸಣ್ಣ ವೃತ್ತವು ರಾಜ್ಯದ ಭದ್ರತೆಯನ್ನು ಪ್ರತಿನಿಧಿಸುತ್ತದೆ. ಒಂದು ಕೃತ್ಯವು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟುಮಾಡಬಹುದು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಅದೇ ರೀತಿ, ಒಂದು ಕೃತ್ಯವು ರಾಜ್ಯದ ಭದ್ರತೆಗೆ ಭಂಗ ತರದೇ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯುಂಟುಮಾಡಬಹುದು" ಎಂದು ನ್ಯಾಯಾಲಯ ಹೇಳಿದೆ.
ರಾಮ್ಲೀಲಾ ಮೈದಾನದ ಘಟನೆ (2012) ಪ್ರಕರಣದಲ್ಲಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವಿಧಿಸುವ ನಿರ್ಬಂಧವು "ಖಾತರಿಪಡಿಸಿದ ಸ್ವಾತಂತ್ರ್ಯದಲ್ಲಿ ಕನಿಷ್ಠ ಮಟ್ಟದ ಹಸ್ತಕ್ಷೇಪ ಮಾಡುತ್ತದೆ" ಎಂದಿರುವ ನ್ಯಾಯಾಲಯ, ಸಾರ್ವಜನಿಕ ಸುವ್ಯವಸ್ಥೆಯು ಹೆಚ್ಚಿನ ಸಾಮಾಜಿಕ ಕಾಳಜಿಯ ವಿಷಯವಾಗಿರುವುದರಿಂದ ಅದು "ಹೆಚ್ಚಿನ ಮಟ್ಟದ ನಿರ್ಬಂಧಕ್ಕೆ ಅರ್ಹವಾಗಿರಬಹುದು" ಎಂದು ತಿಳಿಸಿದೆ.
"ಸಾರ್ವಜನಿಕ ಸುವ್ಯವಸ್ಥೆಯು ಸ್ಥಳೀಯ ಪ್ರದೇಶದಲ್ಲಿನ ವ್ಯವಸ್ಥೆ ಅಥವಾ ಶಿಸ್ತಿಗಿಂತ ಭಿನ್ನವಾದದ್ದಾಗಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಭಂಗವಾದರೆ ಅದು ಸಾರ್ವಜನಿಕ ಅಶಾಂತಿಗೆ ಕಾರಣವಾಗಬೇಕು. ಆದರೆ ಶಾಂತಿ ಭಂಗದ ಪ್ರತಿಯೊಂದು ಘಟನೆಯೂ ಯಾವಾಗಲೂ ಸಾರ್ವಜನಿಕ ಅಶಾಂತಿಗೆ ಕಾರಣವಾಗಬೇಕಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
'ದಿ ಇಂಡಿಯನ್ ಎಕ್ಸ್ಪ್ರೆಸ್' ಜತೆ ಮಾತನಾಡಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ರಸ್ತೆಯಲ್ಲಿ ಇಬ್ಬರು ಜಗಳವಾಡುವುದು ಅಥವಾ ಕಾರೊಂದು ರಸ್ತೆಯನ್ನು ತಡೆಯುವುದರಂತಹ ಸ್ಥಳೀಯ ಮಟ್ಟದ ಅಶಾಂತಿಗಳು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಒಳಗೊಂಡಿರಬಹುದು ಎಂದು ವಿವರಿಸಿದರು. ಸಾರ್ವಜನಿಕ ಸುವ್ಯವಸ್ಥೆಯು ಸಾರಿಗೆ, ಸಂವಹನ ಅಥವಾ ಸಂಚಾರಕ್ಕೆ ದೊಡ್ಡ ಪ್ರಮಾಣದ ವ್ಯತ್ಯಯದಂತಹ ವಿಶಾಲ ಸಮುದಾಯದ ಮೇಲೆ ಪರಿಣಾಮ ಬೀರುವ ಅಶಾಂತಿಗಳಿಗೆ ಸಂಬಂಧಿಸಿದೆ ಎಂದು ಅವರು ಹೇಳಿದರು.
"ಮಾತನಾಡುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಸೀಮಿತಗೊಳಿಸಲು ಕಾನೂನು ಮತ್ತು ಸುವ್ಯವಸ್ಥೆಯು ಮಾನ್ಯವಾದ ಆಧಾರವಲ್ಲ. ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ವಿಧಿಸುವುದನ್ನು ಸಮರ್ಥಿಸಿಕೊಳ್ಳಲು ಪೊಲೀಸರು ಸ್ವಂತ ಇಚ್ಛೆಯಿಂದ ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲೇಖಿಸಲು ಸಾಧ್ಯವಿಲ್ಲ. "ಮೊದಲನೆಯದಾಗಿ, ಪೊಲೀಸರಿಗೆ ಆ ಅಧಿಕಾರವನ್ನು ನೀಡುವ ಕಾನೂನನ್ನು ರೂಪಿಸಬೇಕು. ನಂತರ ಪೊಲೀಸರು ಆ ಕಾನೂನಿನಡಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸುತ್ತಾರೆ. ತಾವು ಯಾವ ಕಾನೂನಿನಡಿ ಅಧಿಕಾರ ಚಲಾಯಿಸುತ್ತಿದ್ದೇವೆ ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದ್ದಾರೆ
ಪ್ರತಿಭಟನೆಯು "ಶಾಂತಿಯುತ ಮತ್ತು ಕಾನೂನು ಪಾಲಿಸುವ ಸಮಾಜದ ಜೀವನಾಡಿ" ಎಂದಿರುವ ಪ್ರೊಫೆಸರ್ ಜಿ. ಮೋಹನ್ ಗೋಪಾಲ್, ವಿಭಿನ್ನ ಅಭಿಪ್ರಾಯಗಳಿಗೆ ಅವಕಾಶ ಕಲ್ಪಿಸುವುದಕ್ಕಾಗಿಯೇ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್'ಗೆ ತಿಳಿಸಿದ್ದಾರೆ. "ಕಾನೂನು ಮತ್ತು ಸುವ್ಯವಸ್ಥೆ ಎಂದರೆ ಮಾನವ ಹಕ್ಕುಗಳನ್ನು ರಕ್ಷಿಸುವ ವ್ಯವಸ್ಥೆ... ನೀವು ಅದನ್ನು ಆ ರೀತಿಯಲ್ಲಿ ಅರ್ಥಮಾಡಿಕೊಂಡರೆ, ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಂದಿಲ್ಲ. ಜನ ಪ್ರತಿಭಟನೆ ಮಾಡುವ ಹಕ್ಕನ್ನು ಉಲ್ಲಂಘಿಸುತ್ತಿರುವವರಿಂದಲೇ ಕಾನೂನು ದುರುಪಯೋಗವಾಗುತ್ತಿದೆ ಮತ್ತು ತಪ್ಪಾಗಿ ಬಳಕೆಯಾಗುತ್ತಿದೆ" ಎಂದು ಅವರು ವಾದಿಸಿದರು.
ನಿಗದಿತ ಪ್ರತಿಭಟನಾ ಸ್ಥಳಗಳನ್ನು ಮುಚ್ಚುವುದು ಮತ್ತು "ಕಾನೂನು ಮತ್ತು ಸುವ್ಯವಸ್ಥೆಯ" ಹೆಸರಿನಲ್ಲಿ ಶಾಂತಿಯುತ ಭಿನ್ನಾಭಿಪ್ರಾಯವನ್ನು ದಮನ ಮಾಡುವುದು ನಾಗರಿಕರನ್ನು ಅತಂತ್ರ ಸ್ಥಿತಿಗೆ ತಳ್ಳುವ ಅಪಾಯವಿದೆ ಎಂದು ಗೋಪಾಲ್ ಹೇಳಿದರು. "ಪ್ರಜಾಪ್ರಭುತ್ವದ ಆಧಾರದ ಮೇಲೆ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಎಲ್ಲಾ ಕಾನೂನುಬದ್ಧ ಮತ್ತು ಪ್ರಜಾಸತ್ತಾತ್ಮಕ ಮಾರ್ಗಗಳನ್ನು ಮುಚ್ಚಿರುವ ಕಾರಣ, ಸಾರ್ವಜನಿಕ ಸುವ್ಯವಸ್ಥೆಯನ್ನು ರಕ್ಷಿಸಬೇಕಾದವರೇ ಪ್ರತಿಭಟಿಸಲು ಸೆಕ್ಷನ್ 163 ಅನ್ನು ಉಲ್ಲಂಘಿಸುವಂತೆ ಒತ್ತಾಯಿಸಲ್ಪಡುತ್ತಿದ್ದಾರೆ" ಎಂದಿದ್ದಾರೆ ಅವರು.
ಪ್ರತಿಭಟನಾ ಸ್ಥಳಗಳನ್ನು ಹೇಗೆ ನಿಗದಿಪಡಿಸಬಹುದು?
ಅಹಮದಾಬಾದ್ ಪೊಲೀಸ್ ಆಯುಕ್ತ vs ಹಿಮತ್ ಲಾಲ್ ಕೆ. ಶಾ (1972) ಪ್ರಕರಣದ ಪೀಠವು, ಬೀದಿಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲು ಪೊಲೀಸರು ಪೂರ್ವಾನುಮತಿ ಕೋರಬಹುದು ಮತ್ತು ಅದರಲ್ಲಿ "ಯಾವುದೇ ತಪ್ಪಿಲ್ಲ" ಎಂದು ಅಭಿಪ್ರಾಯಪಟ್ಟಿತ್ತು. ಆದರೆ, ಪ್ರತಿ ಸಾರ್ವಜನಿಕ ರಸ್ತೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಸಭೆ ಸೇರುವುದನ್ನು ನಿಷೇಧಿಸುವ ಮೂಲಕ ರಾಜ್ಯವು "ಕಾನೂನು ಮೂಲಕ ಸಭೆ ಸೇರುವ ಹಕ್ಕನ್ನು ಕಡಿತಗೊಳಿಸಲು ಅಥವಾ ಕಸಿದುಕೊಳ್ಳಲು ಸಾಧ್ಯವಿಲ್ಲ" ಎಂದು ಅದು ಹೇಳಿದೆ.
ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ vs ಯೂನಿಯನ್ ಆಫ್ ಇಂಡಿಯಾ (2018) ಪ್ರಕರಣವು ಜಂತರ್ ಮಂತರ್ನಲ್ಲಿನ ಪ್ರದರ್ಶನಗಳ ಮೇಲಿನ ನಿರ್ಬಂಧಗಳು ಮತ್ತು ಅವುಗಳನ್ನು ರಾಮಲೀಲಾ ಮೈದಾನಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆಗೆ ಸಂಬಂಧಿಸಿದ್ದಾಗಿದೆ. ಹೊಸ ದಿಲ್ಲಿಯಲ್ಲಿನ "ಅಧಿಕಾರದ ಕೇಂದ್ರ"ದಿಂದ ಆ ಮೈದಾನವು ತುಂಬಾ ದೂರದಲ್ಲಿದೆ ಮತ್ತು ಇದು ಪ್ರತಿಭಟನೆಯ ಉದ್ದೇಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಯಾರ ವಿರುದ್ಧ ಘೋಷಣೆಗಳನ್ನು ಕೂಗಲಾಗುತ್ತದೆಯೋ ಆ ಅಧಿಕಾರಿಗಳ ಗಮನಕ್ಕೆ ಇದು ತಲುಪಲು ಕಷ್ಟವಾಗುತ್ತದೆ ಎಂದಿದ್ದರು.
ಆ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತಾದರೂ, ಪ್ರತಿಭಟನಾಕಾರರ ಹಕ್ಕುಗಳನ್ನು ನಿವಾಸಿಗಳ ಹಕ್ಕುಗಳೊಂದಿಗೆ ಸಮತೋಲನಗೊಳಿಸುವ ಅಗತ್ಯವಿದೆ ಎಂದು ಹೇಳಿತು ಮತ್ತು "ಸಾರ್ವಜನಿಕ ಹಿತಾಸಕ್ತಿಯಲ್ಲಿ ಇಂತಹ ಪ್ರದರ್ಶನಗಳನ್ನು ನಿಯಂತ್ರಿಸುವಾಗ, ನಿರ್ದಿಷ್ಟ ಪ್ರದೇಶಗಳನ್ನು ನಿಗದಿಪಡಿಸಬಹುದು" ಎಂದು ತಿಳಿಸಿತು.
ಹೀಗಾಗಿ, ಜಂತರ್ ಮಂತರ್ ರಸ್ತೆಯ ಸೀಮಿತ ಭಾಗವನ್ನು ಸಣ್ಣ ಗುಂಪುಗಳು ನಿಯಂತ್ರಿತ ಪ್ರದರ್ಶನಗಳನ್ನು ನಡೆಸಲು ಮುಕ್ತವಾಗಿಡಲು ನ್ಯಾಯಾಲಯ ಅನುಮತಿ ನೀಡಿತು. ಈ ಸ್ಥಳವು ದೀರ್ಘಕಾಲದಿಂದ ಪ್ರತಿಭಟನೆಗಳಿಗೆ ಬಳಕೆಯಾಗಿದೆ ಎಂಬುದನ್ನು ಅದು ಗಮನಿಸಿತು.
ಕೃಪೆ: indianexpress.com






