ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ನನ್ನು ದೂರವಿಡುವ ಬದಲು ಪ್ರಭಾವಿ ವ್ಯಕ್ತಿಗಳು ಆತನೊಂದಿಗೆ ಸಂಪರ್ಕವಿರಿಸಿಕೊಂಡಿದ್ದೇಕೆ?

ಜೆಫ್ರಿ ಎಪ್ಸ್ಟೀನ್ | Photo Credit : X
ಫೆಬ್ರವರಿ 9ರಂದು ವರ್ಮೊಂಟ್ನ ಯುಎಸ್ ಪ್ರತಿನಿಧಿ ಬೆಕ್ಕಾ ಬಾಲಿಂಟ್ ಸುಮಾರು 30 ನಿಮಿಷಗಳ ಕಾಲ ಪರಿಷ್ಕರಿಸದ ಎಪ್ಸ್ಟೀನ್ ಫೈಲ್ಗಳನ್ನು ಪರಿಶೀಲಿಸಿದ ನಂತರ, ಇಷ್ಟೊಂದು ಪ್ರಭಾವಿ ವ್ಯಕ್ತಿಗಳು ದುರುಪಯೋಗದ ಬಗ್ಗೆ ತಿಳಿದಿದ್ದರು; ಆದರೆ ಅದನ್ನು ತಡೆಯಲು ಏನನ್ನೂ ಮಾಡಲಿಲ್ಲವಲ್ಲ ಎಂದು ಹೇಳಿದ್ದಾರೆ. ಬಾಲಿಂಟ್ ಅವರದ್ದು ರಾಜಕೀಯ ಹೇಳಿಕೆಯಾಗಿರಲಿಲ್ಲ; ಅದು ಆ ಹೊತ್ತಿಗೆ ಅವರು ವ್ಯಕ್ತಪಡಿಸಿದ ತೀಕ್ಷ್ಣ ಪ್ರತಿಕ್ರಿಯೆಯಾಗಿತ್ತು. ಎಪ್ಸ್ಟೀನ್ ಎಸಗಿದ ಅಪರಾಧಗಳ ಸಂಪೂರ್ಣ ದಾಖಲೆಗಳು ಹೊರಬರಲು ವರ್ಷಗಳೇ ಬೇಕಾಗಬಹುದು. ಆದರೆ ಆತ ಎಸಗುತ್ತಿದ್ದ ಕುಕೃತ್ಯಗಳ ಬಗ್ಗೆ ಅರಿವಿದ್ದರೂ ಪ್ರಭಾವಿ ವ್ಯಕ್ತಿಗಳು ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದು ಈಗ ಬಹಿರಂಗವಾಗಿರುವ ಪುರಾವೆಗಳು ಸಾಬೀತುಪಡಿಸುತ್ತವೆ.
ಮುಂದಿನ ಪ್ರಶ್ನೆ ಎಪ್ಸ್ಟೀನ್ ಅಪರಾಧಗಳ ಬಗ್ಗೆ ಅಲ್ಲ. ಅವು ಸಾಬೀತಾಗಿವೆ. ಆದರೆ ಅವನ ಅಪರಾಧಗಳು ಬಹಿರಂಗಗೊಂಡ ನಂತರವೂ ಪ್ರಭಾವಿ ವ್ಯಕ್ತಿಗಳು ಯಾಕೆ ಅವನೊಂದಿಗೆ ಸಹವಾಸ ಮುಂದುವರಿಸಿದರು? ಅಪ್ರಾಪ್ತ ವಯಸ್ಸಿನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆ ವ್ಯಕ್ತಿಯೊಡನೆ ಅವರು ಯಾಕೆ ಸಂಪರ್ಕದಲ್ಲಿದ್ದರು ಎಂಬುದು.
ಸತ್ಯಗಳು ಹೊರಬಂದ ನಂತರವೂ ಕಡಿದಿರಲಿಲ್ಲ ಸಂಪರ್ಕ
ಎಪ್ಸ್ಟೀನ್ ಅಪರಾಧಗಳ ಬಗ್ಗೆ ನೈಜ ಸಮಯದಲ್ಲೇ ತಿಳಿದಿತ್ತು. ಅವುಗಳ ಬಗ್ಗೆ ವರದಿಯಾಗಿತ್ತು. ಆದರೆ ಪ್ರಭಾವಿ ವ್ಯಕ್ತಿಗಳು ಅವೆಲ್ಲವನ್ನೂ ನಿರ್ಲಕ್ಷಿಸಿದರು. ಅದಕ್ಕೆ ಒಂದು ಪ್ರಮುಖ ಉದಾಹರಣೆಯೆಂದರೆ ವಿಕಿ ವಾರ್ಡ್ ಬರೆದ 2003ರ ವ್ಯಾನಿಟಿ ಫೇರ್ ಲೇಖನ. ಅಲ್ಲಿ ಇಬ್ಬರು ಸಂತ್ರಸ್ತರಾದ ಮರಿಯಾ ಮತ್ತು ಆಕೆಯ ಸಹೋದರಿ ಆನಿ ಫಾರ್ಮರ್ ಅವರ ಸಾಕ್ಷ್ಯವನ್ನು ಸಂಪಾದಕ ಗ್ರೇಡನ್ ಕಾರ್ಟರ್ ಪ್ರಕಟವಾಗುವುದಕ್ಕೆ ಬಿಡಲಿಲ್ಲ. ಆ ಸತ್ಯವನ್ನು ಆಗ ಪ್ರಕಟಿಸಿದ್ದರೆ, ಇತರ ಅನೇಕ ಮಹಿಳೆಯರು ಭವಿಷ್ಯದ ದೌರ್ಜನ್ಯದಿಂದ ತಪ್ಪಿಸಿಕೊಳ್ಳಬಹುದಿತ್ತು.
ಎಪ್ಸ್ಟೀನ್ ಎಸಗಿದ ಅಪರಾಧಗಳು ಬಹಿರಂಗವಾದಾಗಲೂ ಆತನ ಜತೆಗಿನ ಪ್ರಭಾವಿಗಳ, ಶ್ರೀಮಂತರ ಭೇಟಿ ಮುಂದುವರಿಯುತ್ತಲೇ ಇತ್ತು. ಆತನ ಇಮೇಲ್ಗಳಿಗೆ ಇವರು ಪ್ರತಿಕ್ರಿಯಿಸುತ್ತಿದ್ದರು. ಆತನ ಆಹ್ವಾನಗಳಿಗೆ ಈ ಪ್ರಭಾವಿ ವ್ಯಕ್ತಿಗಳು ‘ಇಲ್ಲ’ ಎಂದು ಹೇಳುತ್ತಿರಲಿಲ್ಲ. ಆತನನ್ನು ದೂರವಿಡುವ ಬದಲು ದಾರಿತಪ್ಪಿಸುವ ಕೆಲಸಗಳು ನಡೆದವು.
ಹೆಸರುಗಳು ಮುಖ್ಯವಾಗುವುದು ಇಲ್ಲಿಯೇ. 2003ರ ಲೇಖನದಲ್ಲಿನ ಹೆಸರುಗಳನ್ನು ಓದಿದರೆ ಗೊತ್ತಾಗುತ್ತದೆ, ಆತನ ಸಾಮಾಜಿಕ ವಲಯದ ವ್ಯಾಪ್ತಿ ಎಷ್ಟಿತ್ತು ಎಂಬುದು.
ಇದರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಎಪ್ಸ್ಟೀನ್ ನಡುವಿನ ಸಂಬಂಧ ಮಹತ್ವದ್ದಾಗಿದೆ. ಟ್ರಂಪ್ ಅವರನ್ನು ಹೆಚ್ಚಾಗಿ ಪ್ರಜಾಪ್ರಭುತ್ವ ಮೌಲ್ಯಗಳಿಂದ ಬೇರೆ ದಾರಿ ಹಿಡಿದವರು ಎಂದು ಕರೆಯಲಾಗುತ್ತದೆ. ಎಪ್ಸ್ಟೀನ್ ಜಗತ್ತಿನಲ್ಲಿ ಟ್ರಂಪ್ ಮುಖ್ಯ ಭಾಗವಾಗಿದ್ದರು ಎಂದು ಫೈಲ್ಗಳು ತೋರಿಸುತ್ತವೆ. ಅಹಿತಕರ ಸತ್ಯವೆಂದರೆ, ನೈತಿಕ ಎಂದು ಹೇಳಿಕೊಳ್ಳುವ ಆಧುನಿಕ ‘ಗಣ್ಯ’ರು ಅವರನ್ನು ಟೀಕಿಸುವವರಂತೆಯೇ ಈ ವಿಷಯದಲ್ಲಿ ಮೌನವಾಗಿದ್ದರು. ಇದು ಬೇರೆಬೇರೆ ವ್ಯಕ್ತಿಗಳ ದೀರ್ಘಕಾಲೀನ ಸಂಬಂಧಗಳಿಂದ ಸಾಬೀತಾಗಿದೆ. ಎಪ್ಸ್ಟೀನ್ ಅವರು ಫೈನಾನ್ಸಿಯರ್ ಲೆಕ್ಸ್ ವೆಕ್ಸ್ನರ್ ಜೊತೆ ದೀರ್ಘ ಸಂಬಂಧ ಹೊಂದಿದ್ದರು.
ವಿಶ್ವಪ್ರಸಿದ್ಧ ಭಾಷಾಶಾಸ್ತ್ರಜ್ಞ ಮತ್ತು ಚಿಂತಕ ನೋಮ್ ಚೋಮ್ಸ್ಕಿ ಅವರು ಎಪ್ಸ್ಟೀನ್ನೊಂದಿಗೆ ಹಣಕಾಸಿನ ವಹಿವಾಟು ನಡೆಸಿದ ಬಗ್ಗೆ ಇಮೇಲ್ಗಳು ಇವೆ. ಸಿನಿಮಾ ನಿರ್ಮಾಪಕ ವುಡಿ ಅಲೆನ್ ಜತೆಗಿನ ಸಂಭಾಷಣೆಗಳೂ ಬಹಿರಂಗವಾಗಿವೆ. ಅಮೆರಿಕದ ಮಾಜಿ ಖಜಾನೆ ಕಾರ್ಯದರ್ಶಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಅಧ್ಯಕ್ಷ ಲಾರೆನ್ಸ್ ಸಮ್ಮರ್ಸ್ ಅವರು ಎಪ್ಸ್ಟೀನ್ ಜತೆ ಆರ್ಥಿಕ ಸಲಹೆಗಳ ಬಗ್ಗೆ ಚರ್ಚಿಸಿದ್ದ ಇಮೇಲ್ಗಳೂ ಇದರಲ್ಲಿ ಸೇರಿವೆ.
ಇಸ್ರೇಲಿನ ಮಾಜಿ ಪ್ರಧಾನಿ ಎಹುದ್ ಬರಾಕ್ ಆಪ್ತ ಸ್ನೇಹಿತ ಹಾಗೂ ವ್ಯಾಪಾರ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಡಿಪಿ ವರ್ಲ್ಡ್ ಸಿಇಒ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಎಪ್ಸ್ಟೀನ್ ಅವರೊಂದಿಗೆ ವ್ಯವಹಾರ ಮತ್ತು ಖಾಸಗಿ ವಿಷಯಗಳೆರಡನ್ನೂ ಚರ್ಚಿಸಿದರು. ಅವರ ಖಾಸಗಿ ದ್ವೀಪವನ್ನು ಖರೀದಿಸಲು ಸಹಾಯ ಮಾಡಲು ಕಂಪನಿಯನ್ನು ಸಹ ಬಳಸಿದರು. ಇವು ಯಾವುದೂ ಆಕಸ್ಮಿಕ ಭೇಟಿಗಳಾಗಿರಲಿಲ್ಲ. ಎಪ್ಸ್ಟೀನ್ ಅವರನ್ನು ದೂರವಿಡಬೇಕಾಗಿದ್ದ ನಂತರವೂ ಗಣ್ಯರು ದೀರ್ಘಕಾಲ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ಇಮೇಲ್ಗಳು ತೋರಿಸುತ್ತವೆ. ಎಪ್ಸ್ಟೀನ್ನ ಅಪರಾಧಗಳ ಬಗ್ಗೆ ತಿಳಿದಿದ್ದರೂ ಇವರ್ಯಾರೂ ಆತನೊಂದಿನ ಸಂಪರ್ಕ ಕಡಿತ ಮಾಡಿಲ್ಲ.
ಅತ್ಯಂತ ಆಘಾತಕಾರಿ ವಿಷಯವೆಂದರೆ ಎಲ್ಲರೂ ಎಷ್ಟು ಬಿಂದಾಸ್ ಆಗಿದ್ದರು ಎಂಬುದು. ಅವರ ಇಮೇಲ್ ವ್ಯವಹಾರಗಳನ್ನು ನೋಡಿದರೆ ಗೊತ್ತಾಗುತ್ತದೆ. ಅಲ್ಲಿ ಅವರಿಗೆ ಸಿಕ್ಕಿಬೀಳುವ ಭಯ ಇರಲಿಲ್ಲ. ಅವರು ಏನನ್ನೂ ಮರೆಮಾಡಲು ಪ್ರಯತ್ನಿಸುತ್ತಿರಲಿಲ್ಲ. ಒಂದು ವೇಳೆ ಸಿಕ್ಕಿಬಿದ್ದರೂ ಯಾವುದೇ ಪರಿಣಾಮಗಳನ್ನು ಎದುರಿಸಲು ಅವರು ತುಂಬಾ ಶಕ್ತಿಶಾಲಿಗಳು ಎಂದು ಖಚಿತವಾಗಿ ನಂಬಿದ್ದರು.
ಎಪ್ಸ್ಟೀನ್ ಫೈಲ್ಗಳು ಭಾರತೀಯರೂ ಈತನ ಜತೆ ಸಂಪರ್ಕ ಹೊಂದಿದ್ದರು ಎಂಬುದನ್ನು ತೋರಿಸುತ್ತವೆ. ಅನಿಲ್ ಅಂಬಾನಿ ಜರೆಡ್ ಕುಶ್ನರ್ ಮತ್ತು ಸ್ಟೀವ್ ಬ್ಯಾನನ್ ಅವರಂತಹ ಜನರೊಂದಿಗೆ ಸಂಪರ್ಕ ಸಾಧಿಸಲು ಎಪ್ಸ್ಟೀನ್ ಅವರನ್ನು ಮಧ್ಯವರ್ತಿಯಾಗಿ ಬಳಸಿಕೊಂಡರು. ದಾಖಲೆಗಳ ಪ್ರಕಾರ, 2017ರಿಂದ 2019ರವರೆಗೆ ಎಪ್ಸ್ಟೀನ್ ಮತ್ತು ಅಂಬಾನಿ ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದರು. ಎಪ್ಸ್ಟೀನ್ ಅವರ ಅಪರಾಧ ದಾಖಲೆಯು ಅವರನ್ನು ತಡೆಯಲಿಲ್ಲ ಎಂಬುದು ಇದರಿಂದ ತಿಳಿಯುತ್ತದೆ.
ಹಾಲಿ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಎಪ್ಸ್ಟೀನ್ ನಡುವೆ 2014ರಿಂದ ಇಮೇಲ್ ವಿನಿಮಯವಾಗಿದೆ. ಎಪ್ಸ್ಟೀನ್ ಪುರಿ ಅವರಿಗೆ ಇಮೇಲ್ ಮಾಡಿ ಲಿಂಕ್ಡ್ಇನ್ ತಾಣದ ಸಹ ಸಂಸ್ಥಾಪಕ ರೀಡ್ ಹಾಫ್ಮನ್ ಅವರ ಭಾರತ ಭೇಟಿಗೆ ವ್ಯವಸ್ಥೆ ಮಾಡುವ ಬಗ್ಗೆ ಮಾತನಾಡಿದ್ದರು. ಪುರಿ ಅವರು ಭಾರತದಲ್ಲಿನ ಹೂಡಿಕೆ ಅವಕಾಶಗಳು, ಮೋದಿ ಸರ್ಕಾರದ ಆರ್ಥಿಕ ಯೋಜನೆಗಳ ಬಗ್ಗೆ ವಿವರಿಸಿದ್ದರು. ಅವರು ಮ್ಯಾನ್ಹಟನ್ನಲ್ಲಿರುವ ಎಪ್ಸ್ಟೀನ್ ಮನೆಯಲ್ಲೇ ಆತನನ್ನು ಭೇಟಿ ಮಾಡಿದ್ದರು ಎಂದು ದಾಖಲೆಗಳು ತೋರಿಸಿವೆ.
ಈ ಎಲ್ಲವನ್ನೂ ಗಮನಿಸಿದರೆ ಅಸಮಾನತೆಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಸಂತ್ರಸ್ತರು ಸಹಾಯಕ್ಕಾಗಿ ಬೇಡಿಕೊಂಡಾಗ ಸಂಸ್ಥೆಗಳು ಬಸವನ ಹುಳುವಿನಂತೆ ನಿಧಾನವಾಗಿ ಚಲಿಸಿದವು. ಆದರೆ ಪ್ರಬಲ ಜನರು ತಮ್ಮ ಖ್ಯಾತಿಯನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಕ್ಷಣದಲ್ಲಿ ಅವು ಮಿಂಚಿನ ವೇಗದಲ್ಲಿ ಚಲಿಸಿದವು. ಸಂತ್ರಸ್ತರು ವರ್ಷಗಳ ಕಾಲ ನ್ಯಾಯಕ್ಕಾಗಿ ಕಾದರು; ಆದರೆ ಪ್ರಭಾವಿಗಳ ರಕ್ಷಣೆಗೆ ಎಲ್ಲವೂ ಸಿದ್ಧವಾಗಿತ್ತು.
ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ ಹೆಸರು ಎಪ್ಸ್ಟೀನ್ ಫೈಲ್ಗಳಲ್ಲಿ ಕಾಣಿಸಿಕೊಂಡರೂ ಅವರ ಕಚೇರಿ ಅದನ್ನು ನಿರಾಕರಿಸಿತು. ಮಾಜಿ ಪ್ರಧಾನಿ ಪಾಲ್ ಕೀಟಿಂಗ್ ಅವರ ಮಗಳು ಕ್ಯಾಥರೀನ್ ಕೀಟಿಂಗ್ ಸಾಮಾಜಿಕ ಮಧ್ಯವರ್ತಿಯಾಗಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಯುರೋಪ್ನಲ್ಲಿ ಪೀಟರ್ ಮ್ಯಾಂಡೆಲ್ಸನ್ ಮತ್ತು ಥಾರ್ಬ್ಜೋರ್ನ್ ಜಗ್ಲ್ಯಾಂಡ್ ಅವರಂತಹ ವ್ಯಕ್ತಿಗಳೂ ಎಪ್ಸ್ಟೀನ್ ಜತೆ ಸಂಪರ್ಕದಲ್ಲಿದ್ದರು ಎಂಬುದನ್ನು ಫೈಲ್ಗಳು ತೋರಿಸುತ್ತವೆ. ನಾರ್ವೆಯ ಕ್ರೌನ್ ಪ್ರಿನ್ಸೆಸ್ ಮೆಟ್ಟೆ–ಮಾರಿಟ್ ಅವರ ಹೆಸರು ಎಪ್ಸ್ಟೀನ್ ಸಂಬಂಧಿತ ಪತ್ರವ್ಯವಹಾರದಲ್ಲಿ ಪುನರಾವರ್ತನೆಯಾಗಿದೆ. ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರ ಹೆಸರೂ ಇಮೇಲ್ಗಳಲ್ಲಿ ಇದೆ.
ಮಾನವ ಹಕ್ಕುಗಳ ಶಾಶ್ವತ ಸಮಿತಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಯುಎಇ ರಾಜತಾಂತ್ರಿಕ ಹಿಂದ್ ಅಲ್–ಒವೈಸ್ ಅವರ ಹೆಸರು ಕೂಡಾ ಇಮೇಲ್ಗಳಲ್ಲಿ ಇದೆ. ಇತ್ತೀಚೆಗೆ ಬಿಡುಗಡೆಯಾದ ಫೈಲ್ಗಳು ಅವರು 2011 ಮತ್ತು 2012ರ ನಡುವೆ ಎಪ್ಸ್ಟೀನ್ ಜೊತೆ 400ಕ್ಕೂ ಹೆಚ್ಚು ಇಮೇಲ್ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಸೂಚಿಸುತ್ತವೆ. ಇದರಲ್ಲಿ ಒವೈಸ್ ತಮ್ಮ ಸಹೋದರಿಯ ಬಗ್ಗೆ ಮಾತ್ರವಲ್ಲದೆ ಹುಡುಗಿಯರನ್ನು ಏರ್ಪಾಡು ಮಾಡುವ ಬಗ್ಗೆಯೂ ಮಾತನಾಡಿದ್ದಾರೆ ಎಂಬ ಉಲ್ಲೇಖಗಳಿವೆ.
ಪ್ರತಿಯೊಂದು ಉಲ್ಲೇಖವೂ ಒಂದೇ ವಿಷಯವನ್ನು ಸೂಚಿಸುವುದಿಲ್ಲ. ಪ್ರತಿಯೊಂದು ಸಂವಹನವೂ ವಿಭಿನ್ನವಾಗಿದೆ. ಆದರೆ ಇವೆಲ್ಲವನ್ನು ಒಟ್ಟಿಗೆ ತೆಗೆದುಕೊಂಡರೆ ಗಣ್ಯರ ಇಮೇಲ್ಗಳು ಎಪ್ಸ್ಟೀನ್ ಅವರನ್ನು ಹೊರಗಿಡುವ ಬದಲು ಪ್ರಮುಖ ವ್ಯಕ್ತಿಯಾಗಿ ಪರಿಗಣಿಸಿದ್ದನ್ನು ತೋರಿಸುತ್ತವೆ.
ಜೆಫ್ರಿ ಎಪ್ಸ್ಟೀನ್ ಯಾರು? ಏನಿದು ಎಪ್ಸ್ಟೀನ್ ಫೈಲ್ಗಳು?
ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್. ಜನವರಿ 30ರಂದು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ 30 ಲಕ್ಷ ಪುಟಗಳ ದಾಖಲೆಗಳೇ ಎಪ್ಸ್ಟೀನ್ ಫೈಲ್ಗಳು. ಅದರಲ್ಲಿ 1.8 ಲಕ್ಷ ಚಿತ್ರಗಳು ಮತ್ತು ಎರಡು ಸಾವಿರ ವಿಡಿಯೊಗಳು ಇವೆ. ಇವು ಜಗತ್ತಿನ ವಿವಿಧ ದೇಶಗಳ ನಾಯಕರು, ಪ್ರಭಾವಿಗಳ ಹೆಸರುಗಳನ್ನು ಒಳಗೊಂಡಿವೆ.
ನ್ಯೂಯಾರ್ಕ್ನಲ್ಲಿ ಹುಟ್ಟಿ ಬೆಳೆದ ಜೆಫ್ರಿ ಎಪ್ಸ್ಟೀನ್ ಮ್ಯಾನ್ಹಟನ್ನ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ. ಆಮೇಲೆ ಹಣಕಾಸು ಸಂಸ್ಥೆಯೊಂದರಲ್ಲಿ ಪಾಲುದಾರನಾಗಿ ಸೇರಿ ಶ್ರೀಮಂತನಾದ. ಈತ ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತರ ಜತೆ ಒಡನಾಟವಿರಿಸಿಕೊಂಡಿದ್ದ. ದೇಶ–ವಿದೇಶಗಳ ಗಣ್ಯರು, ಪ್ರಭಾವಿಗಳು, ಖ್ಯಾತನಾಮರು ಈತನೊಂದಿಗೆ ಸಂಪರ್ಕ ಹೊಂದಿದ್ದರು.
ಈತ ತನ್ನ ಕಾಮತೃಷೆಗೆ ಅನೇಕ ಅಪ್ರಾಪ್ತ ವಯಸ್ಸಿನ ಮಹಿಳೆಯರು, ಬಾಲಕಿಯರನ್ನು ಬಳಸಿಕೊಂಡಿದ್ದ ಎಂಬ ವರದಿ ಬಹಿರಂಗವಾದೊಡನೆ ಇವನ ಅಪರಾಧಗಳು ಒಂದೊಂದಾಗಿ ಹೊರಬರಲು ಆರಂಭವಾದವು. ಈ ಮಹಿಳೆಯರನ್ನು ಕಳ್ಳಸಾಗಣೆ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಹೀಗೆ ಕರೆದುಕೊಂಡು ಬಂದ ಹೆಣ್ಮಕ್ಕಳನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ. 2005ರಲ್ಲಿ ಲೈಂಗಿಕ ಅಪರಾಧಗಳಿಗಾಗಿ ಆತನನ್ನು ಬಂಧಿಸಲಾಯಿತು; 2008ರಲ್ಲಿ ಆರೋಪಗಳು ಸಾಬೀತಾದವು. ಪ್ರಭಾವ ಬಳಸಿ ಆತ ಜೈಲು ಶಿಕ್ಷೆಯಿಂದ ಬಚಾವಾದ. ಆಮೇಲೆ ಕಳ್ಳಸಾಗಣೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ 2019ರಲ್ಲಿ ಮತ್ತೆ ಬಂಧಿತನಾದ ಎಪ್ಸ್ಟೀನ್ ವಿಚಾರಣೆಗೆ ಮುನ್ನವೇ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡನು.






