ಉದ್ಯೋಗ ಕಡಿತ; 9 ವರ್ಷಗಳ ಸುದೀರ್ಘ ಸೇವೆಯ ಬಳಿಕವೂ ಆತಂಕ ಎದುರಿಸುತ್ತಿರುವ ಚಿಪ್ ಇಂಜಿನಿಯರ್ ಗಳು

Photo Credit : @IndianTechGuide
ವರ್ಷಗಟ್ಟಲೆ ಕಠಿಣ ಪರಿಶ್ರಮದಿಂದ ಶಿಕ್ಷಣ ಮುಗಿಸಿ, ಉತ್ತಮ ವೇತನದ ಉದ್ಯೋಗದ ಸಂತೋಷದಲ್ಲಿರುವಾಗಲೇ ಕೆಲಸ ಕಳೆದುಕೊಳ್ಳುತ್ತಿರುವುದು ಇಂದಿನ ಇಂಜಿನಿಯರ್ ಗಳ ಗೋಳಾಗಿದೆ.
ಅಮೆರಿಕದ ಚಿಪ್ ತಯಾರಿಕಾ ಕಂಪೆನಿ ದೀಪಾವಳಿ ಸಂದರ್ಭದಲ್ಲಿ ಭಾರತದಲ್ಲಿ 1,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ‘ಎಕ್ಸ್’ನಲ್ಲಿ ಕೆಲಸ ಕಳೆದುಕೊಂಡವರ ಕುರಿತು ಅನೇಕ ಕತೆಗಳು ಹರಿದಾಡುತ್ತಿವೆ. ಅವುಗಳಲ್ಲಿ 33 ವರ್ಷದ ಮಹಿಳೆಯೊಬ್ಬರ ಕತೆ ಜನರ ಗಮನ ಸೆಳೆದಿದೆ.
ಮಹಿಳೆ 24ನೇ ವಯಸ್ಸಿನಲ್ಲಿ ಕ್ವಾಲ್ಕಾಮ್ ಗೆ ಸೇರಿದ್ದರು. ಇಂತಹ ದೊಡ್ಡ ಕಂಪೆನಿಯಲ್ಲಿ ಕೆಲಸ ದೊರೆತಿದ್ದಕ್ಕಾಗಿ ಆಕೆಯ ಹೆತ್ತವರು ತಮ್ಮ ಮಗಳ ಸಾಧನೆಯನ್ನು ಎಲ್ಲರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಲಕ್ಷಾಂತರ ಸ್ಮಾರ್ಟ್ಫೋನ್ ಗಳಲ್ಲಿ ಬಳಸಲಾಗುವ 5ಜಿ ಮೋಡೆಮ್ ಗಳ ಅಭಿವೃದ್ಧಿಯಲ್ಲಿ ಅವರು ಕೆಲಸ ಮಾಡಿದ್ದರು. ವಾರ್ಷಿಕ 70 ಲಕ್ಷ ರೂ. ವೇತನ ಪಡೆಯುತ್ತಿದ್ದರು. ತಿಂಗಳಿಗೆ 83,000 ರೂ. ಕಂತು ಕಟ್ಟಬೇಕಾದ ಸಾಲದ ಹೊರೆ ಅವರ ಮೇಲಿದೆ. ಮುಂದಿನ ವರ್ಷ ಅವರಿಗೆ ಕಂಪೆನಿಯ ಷೇರುಗಳು ಸಿಗಬೇಕಿದ್ದವು. ಷೇರುಗಳ ಹಕ್ಕು ದೊರೆತ ತಕ್ಷಣ ಅವುಗಳನ್ನು ಮಾರಾಟ ಮಾಡಿ ಬರುವ ಹಣದಿಂದ ಮಗಳ ಶಾಲಾ ಶುಲ್ಕ ಕಟ್ಟಲು ಯೋಜನೆ ರೂಪಿಸಿದ್ದರು!
ವಾಸ್ತವದಲ್ಲಿ ಮಹಿಳಾ ಉದ್ಯೋಗಿಯ ಸಂಪೂರ್ಣ ಜೀವನವೇ ಉದ್ಯೋಗಕ್ಕೆ ಅಂಟಿಕೊಂಡಿದೆ. ಮುಂದಿನ ವರ್ಷ ಷೇರುಗಳು ಸಿಗುವ ನಿರೀಕ್ಷೆಯೂ ಇತ್ತು. ಅಷ್ಟರಲ್ಲೇ ಸಿಇಒ ಅವರ ಉದ್ಯೋಗ ಕಡಿತದ ಘೋಷಣೆ ಬಂದಿದೆ.
ಇದೀಗ ‘ಎಕ್ಸ್’ ಬಳಕೆದಾರರೊಬ್ಬರು ಅವರ ಕತೆಯನ್ನು ಹಂಚಿಕೊಂಡಿದ್ದಾರೆ. ಕ್ವಾಲ್ಕಾಮ್ ಉದ್ಯೋಗ ಕಡಿತಗೊಳಿಸುತ್ತಿರುವ ಹುದ್ದೆಗಳಲ್ಲಿ ಅವರ ಹುದ್ದೆಯೂ ಸೇರುವ ಸಾಧ್ಯತೆಯಿದೆ. ಆದರೆ, 1,000 ಹುದ್ದೆಗಳನ್ನು ಕಡಿತಗೊಳಿಸುವುದು ‘ಕಾರ್ಯಕ್ಷಮತೆ ಕೇಂದ್ರಿತ ಕಡಿತ’ ಎಂದು ವಿವರಿಸಲಾಗಿರುವ ವಿಶಾಲ ಪುನರ್ರಚನೆಯ ಭಾಗವಾಗಿದೆ ಎಂದು ಕಂಪೆನಿಯ ಸಿಇಒ ಕ್ರಿಸ್ಟಿಯಾನೊ ಅಮೋನ್ ಹೇಳಿದ್ದಾರೆ.
ಕೆಲಸ ಕಳೆದುಕೊಳ್ಳುವ ಆತಂಕದಲ್ಲಿರುವವರ ಕತೆಗಳು, ಕಂಪೆನಿಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ವರ್ಷಗಳನ್ನು ಕಳೆದ ವೃತ್ತಿಪರರು ಎದುರಿಸುತ್ತಿರುವ ಸಂಕಷ್ಟವನ್ನು ತೆರೆದಿಡುತ್ತಿವೆ.
ಇನ್ನೊಬ್ಬರು ಹಂಚಿಕೊಂಡಿರುವ ಪ್ರಕಾರ, ಉದ್ಯೋಗಿಯೊಬ್ಬರು ಗೇಟ್ ಪರೀಕ್ಷೆಯ ಮೂಲಕ ಐಐಟಿಗೆ ಪ್ರವೇಶ ಪಡೆಯಲು ಒಂದು ವರ್ಷ ತಂತ್ರಜ್ಞಾನೇತರ ಕೆಲಸವನ್ನು ತೊರೆದಿದ್ದರು. ಬಳಿಕ ಎರಡು ವರ್ಷ ಎಂಟೆಕ್ ಓದಿದ್ದರು. ನಂತರ ಕ್ಯಾಂಪಸ್ ಆಯ್ಕೆಯಲ್ಲಿ ಕ್ವಾಲ್ಕಾಮ್ ನಲ್ಲಿ ಕೆಲಸ ದೊರೆತಿತ್ತು. ಆಗ ವಾರ್ಷಿಕ 18 ಲಕ್ಷ ರೂ. ಮೂಲ ವೇತನ ಹಾಗೂ 26 ಲಕ್ಷ ರೂ. ಒಟ್ಟು ವೇತನದ ಉದ್ಯೋಗವಾಗಿತ್ತು. ಇದೀಗ ಅವರ ಕೆಲಸವೂ ಹೋಗಿದೆ.
‘ಎಕ್ಸ್’ನಲ್ಲಿ ಹಂಚಿಕೊಂಡಿರುವ ವಿವರಗಳ ಪ್ರಕಾರ, ಈ ವರ್ಷ ಕಂಪೆನಿ 13.6 ಶತಕೋಟಿ ಡಾಲರ್ ಲಾಭ ಗಳಿಸಿದೆ. ಇದು ಆದಾಯವಲ್ಲ, ಲಾಭ. ಆದರೆ, ಸ್ಮಾರ್ಟ್ಫೋನ್ ಚಿಪ್ ಗಳ ಮಾರಾಟ ಶೇ. 26ರಷ್ಟು ಕುಸಿದಿದೆ. ಆಪಲ್ ತನ್ನದೇ ಆದ ಮೋಡೆಮ್ ಗಳನ್ನು ತಯಾರಿಸುತ್ತಿದೆ. ಹೂಡಿಕೆಗಳು ಎಐ ಡೇಟಾ ಸೆಂಟರ್ ಗಳತ್ತ ಸಾಗುತ್ತಿವೆ.
ಭಾರತಕ್ಕೆ ಚಿಪ್ ಇಂಜಿನಿಯರ್ ಗಳ ಅಗತ್ಯವಿದೆ. ಜಾಗತಿಕವಾಗಿಯೂ ಚಿಪ್ ಇಂಜಿನಿಯರ್ ಗಳ ಕೊರತೆಯಿದೆ. ಆದರೆ, 15 ವರ್ಷಗಳ ಅನುಭವ ಹೊಂದಿರುವವರು ವಾರ್ಷಿಕ 1 ಕೋಟಿ ರೂ. ವೇತನದ ಮತ್ತೊಂದು ಉದ್ಯೋಗವನ್ನು ಹುಡುಕುವುದು ಸುಲಭವಲ್ಲ.
ಪುನರ್ರಚನೆಯಿಂದ ಪ್ರಭಾವಿತರಾದವರ ಕುರಿತು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ಈ ಇಂಜಿನಿಯರ್ ಗಳಲ್ಲಿ ಹೆಚ್ಚಿನವರು ಕೆಲಸದಲ್ಲಿ ವಿಫಲರಾದವರಲ್ಲ. ಕ್ವಾಲ್ಕಾಮ್ ಅನ್ನು ಬೃಹತ್ ಕಂಪೆನಿಯಾಗಿ ಬೆಳೆಸಿದವರೇ ಅವರು. ಈಗ ಕಂಪೆನಿ ಅವರನ್ನು ಹಿಂದೆ ಬಿಟ್ಟು ಮುನ್ನಡೆಯುತ್ತಿದೆ.
ಮತ್ತೊಬ್ಬ ‘ಎಕ್ಸ್’ ಬಳಕೆದಾರರ ಪ್ರಕಾರ, “ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಭಾರತದಲ್ಲಿ ಸ್ಮಾರ್ಟ್ಫೋನ್ ಸಾಗಣೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ. 20ರಷ್ಟು ಕಡಿಮೆಯಾಗಿದೆ. ಕ್ವಾಲ್ಕಾಮ್ ನ ಹ್ಯಾಂಡ್ಸೆಟ್ ವ್ಯವಹಾರ ಒತ್ತಡದಲ್ಲಿದೆ. ಎಐ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ಆದರೆ, ಎಐ ಅಭಿವೃದ್ಧಿಯಿಂದ ಮೆಮೊರಿ ವೆಚ್ಚ ಹೆಚ್ಚಾಗಿ ಸ್ಮಾರ್ಟ್ಫೋನ್ಗಳು ದುಬಾರಿಯಾಗುತ್ತಿವೆ. ಹೀಗಾಗಿ ಕ್ವಾಲ್ಕಾಮ್ ಕೂಡ ಎಐ, ಡೇಟಾ ಸೆಂಟರ್ ಮತ್ತು ಆಟೊಮೋಟಿವ್ ಕ್ಷೇತ್ರಗಳತ್ತ ಗಮನ ಹರಿಸುತ್ತಿದೆ.”






