ಜಂಕ್ ಫುಡ್ ಪ್ಯಾಕೆಟ್ಗಳ ಮೇಲೆ ಶೀಘ್ರದಲ್ಲೇ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣದ ಬಗ್ಗೆ ಮುನ್ನೆಚ್ಚರಿಕೆ ಲೇಬಲ್
ಮುನ್ನೆಚ್ಚರಿಕೆ ಲೇಬಲ್ಗಳು ಪರಿಣಾಮಕಾರಿಯೇ?; ಇಲ್ಲಿದೆ ಮಾಹಿತಿ...

Photo Credit: AI
ಜಂಕ್ ಫುಡ್ ಪ್ಯಾಕೆಟ್ಗಳಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣ ಹೆಚ್ಚಿರುವುದನ್ನು ಗುರುತಿಸುವ ಮುನ್ನೆಚ್ಚರಿಕೆ ಲೇಬಲ್ಗಳು ಶೀಘ್ರದಲ್ಲೇ ಕಾಣಿಸಿಕೊಳ್ಳಲಿವೆ. ಗ್ರಾಹಕರಿಗೆ ಆರೋಗ್ಯಕರವಲ್ಲದ ಆಹಾರ ಪದಾರ್ಥಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಪ್ಯಾಕೆಟ್ನ ಮುಂಭಾಗದಲ್ಲಿ ಕೆಂಪು ಬಣ್ಣದ ಷಡ್ಕೋನ ಮುನ್ನೆಚ್ಚರಿಕೆ ಚಿಹ್ನೆಯನ್ನು ಮುದ್ರಿಸಲು ಒಪ್ಪಿರುವುದಾಗಿ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಶುಕ್ರವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಆಹಾರ ಪ್ಯಾಕೆಟ್ಗಳ ಮುಂಭಾಗದ ಲೇಬಲಿಂಗ್ (FoPL) ಕುರಿತು ಆಗಸ್ಟ್ 13 ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಎಫ್ಎಸ್ಎಸ್ಎಐ ಈ ಕುರಿತು ಅಫಿಡವಿಟ್ ಸಲ್ಲಿಸಿದೆ.
"ಒಂದು ವೇಳೆ ಕೇಂದ್ರ ಸರ್ಕಾರವೇ ಸ್ವತಃ ಈ ಕೆಲಸವನ್ನು ಮಾಡಿದರೆ ಉತ್ತಮ, ಇಲ್ಲದಿದ್ದರೆ ನಾವೇ ಸೂಕ್ತ ನಿರ್ದೇಶನಗಳನ್ನು ನೀಡಬೇಕಾಗುತ್ತದೆ" ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ನಿಯಂತ್ರಣ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ.
ಈ ಹೊಸ ವ್ಯವಸ್ಥೆಯಡಿ, ನಿಯಮಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುವ ಉತ್ಪನ್ನಗಳ ಮೇಲೆ "ಅಧಿಕ ಕೊಬ್ಬು" , "ಅಧಿಕ ಉಪ್ಪು" ಅಥವಾ "ಅಧಿಕ ಸಕ್ಕರೆ" ಎಂದು ಎದ್ದು ಕಾಣುವಂತೆ ಕೆಂಪು ಬಣ್ಣದ ಷಡ್ಕೋನಾಕೃತಿಯಲ್ಲಿ ಮುದ್ರಿಸಬೇಕಾಗುತ್ತದೆ.
ಆದರೆ, ತುಪ್ಪ, ಖಾದ್ಯ ತೈಲ, ಉಪ್ಪು, ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪದಂತಹ ಸಿಂಗಲ್-ಇಂಗ್ರಿಡಿಯಂಟ್ ಆಹಾರ ಪದಾರ್ಥಗಳಿಗೆ ಈ ಮುನ್ನೆಚ್ಚರಿಕೆ ನಿಯಮದಿಂದ ವಿನಾಯಿತಿ ನೀಡಲು ಎಫ್ಎಸ್ಎಸ್ಎಐ ಒಪ್ಪಿಕೊಂಡಿದೆ.
ಈ ನಿಯಮವನ್ನು ಹಂತ ಹಂತವಾಗಿ ಜಾರಿಗೆ ತರಲು ಪ್ರಾಧಿಕಾರ ನಿರ್ಧರಿಸಿದ್ದು, ಇದರಿಂದ ಸಂಸ್ಥೆಗಳಿಗೆ ತಮ್ಮ ಉತ್ಪನ್ನಗಳ ತಯಾರಿಕಾ ಪ್ರಮಾಣವನ್ನು ಬದಲಾಯಿಸಿಕೊಳ್ಳಲು ಸಮಯ ಸಿಗಲಿದೆ. ಮೊದಲ ಹಂತದಲ್ಲಿ , ಎರಡಕ್ಕಿಂತ ಹೆಚ್ಚು ನಿಯಮಿತ ಪ್ರಮಾಣ ಮೀರಿದ ಘಟಕಾಂಶಗಳನ್ನು ಹೊಂದಿರುವ ಉತ್ಪನ್ನಗಳನ್ನು ಸೇರಿಸಲಾಗುತ್ತದೆ. ಎರಡನೇ ಹಂತದಲ್ಲಿ ಯಾವುದೇ ಒಂದೇ ಒಂದು ಘಟಕಾಂಶದ ಪ್ರಮಾಣ ಹೆಚ್ಚಾಗಿದ್ದರೂ ಅಂತಹ ಉತ್ಪನ್ನಗಳ ಮೇಲೆ ಈ ಮುನ್ನೆಚ್ಚರಿಕೆ ಲೇಬಲ್ ಅನ್ನು ಕಡ್ಡಾಯಗೊಳಿಸಲಾಗುತ್ತದೆ.
ಮುನ್ನೆಚ್ಚರಿಕೆ ಲೇಬಲ್ಗಳು ಪರಿಣಾಮಕಾರಿಯೇ?:
ಈ ಹೊಸ ನಿಯಮಾವಳಿಗಳನ್ನು ಐಸಿಎಂಆರ್-ಎನ್ಐಎನ್ (ICMR-NIN) ಬಿಡುಗಡೆ ಮಾಡಿರುವ 2024ರ ‘ಭಾರತೀಯರ ಆಹಾರ ಮಾರ್ಗದರ್ಶಿ’ಯಲ್ಲಿ ಉಲ್ಲೇಖಿಸಲಾದ ಪೋಷಕಾಂಶಗಳ ಮಿತಿಯ ಆಧಾರದ ಮೇಲೆ ರೂಪಿಸಲಾಗಿದೆ. ಪ್ರಮುಖವಾಗಿ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆಹಾರ ಪ್ಯಾಕೆಟ್ಗಳ ಮುಂಭಾಗದಲ್ಲಿ ಮುದ್ರಿಸುವ ಲೇಬಲ್ಗಳು ಗ್ರಾಹಕರು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತವೆ ಎಂದು ಕೋರ್ಟ್ ಹೇಳಿತ್ತು.
ಗ್ರಾಹಕರು ಮಾಹಿತಿಯುಕ್ತ ಆಯ್ಕೆಗಳನ್ನು ಮಾಡಲು ಅನುಕೂಲವಾಗುವಂತೆ ಪ್ಯಾಕೆಟ್ಗಳ ಮುಂಭಾಗದಲ್ಲಿ ಲೇಬಲಿಂಗ್ ಕಡ್ಡಾಯಗೊಳಿಸಬೇಕು ಎಂದು ಕೋರಿ '3S ಅಂಡ್ ಅವರ್ ಹೆಲ್ತ್ ಸೊಸೈಟಿ' ಎಂಬ ಎನ್ಜಿಒ ವಕೀಲ ರಾಜೀವ್ ಶಂಕರ್ ದ್ವಿವೇದಿ ಅವರ ಮೂಲಕ ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಆರೋಗ್ಯಕ್ಕೆ ಹಾನಿಕರವಾಗಬಲ್ಲ ಪೋಷಕಾಂಶಗಳು ಹೆಚ್ಚಿರುವ ಆಹಾರ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ "ಸರಳ, ಎದ್ದು ಕಾಣುವ ಮತ್ತು ಸುಲಭವಾಗಿ ಅರ್ಥವಾಗುವ ಮುನ್ನೆಚ್ಚರಿಕೆ" ನೀಡುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ ಎಂದು ಎಫ್ಎಸ್ಎಸ್ಎಐ ತಿಳಿಸಿದೆ. ಇದೇ ರೀತಿಯ ಲೇಬಲಿಂಗ್ ವ್ಯವಸ್ಥೆಯನ್ನು ಈಗಾಗಲೇ ಅಳವಡಿಸಿಕೊಂಡಿರುವ ಚಿಲಿ ಮತ್ತು ಕೆನಡಾ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಉದಾಹರಣೆಗಳನ್ನು ಪ್ರಾಧಿಕಾರ ಉಲ್ಲೇಖಿಸಿದೆ.
ಪ್ಯಾಕೆಟ್ಗಳ ಮುಂಭಾಗದಲ್ಲಿ ಬಣ್ಣದ ಸೂಚಕಗಳು, ವಿವರಣಾತ್ಮಕ ಪದಗಳು, ಸಂಖ್ಯೆಗಳು, ಅಕ್ಷರಗಳು, ಚಿಹ್ನೆಗಳು ಮತ್ತು ಶೇಕಡಾವಾರು ಪ್ರಮಾಣಗಳನ್ನು ಬಳಸುವ ವಿವಿಧ ಆಯ್ಕೆಗಳನ್ನು ಪರಿಶೀಲಿಸಿದ್ದ ಸುಪ್ರೀಂ ಕೋರ್ಟ್, ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಂಡು ಅದನ್ನು ದಾಖಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಮುನ್ನೆಚ್ಚರಿಕೆಯಲ್ಲಿರುವ ಲೋಪದೋಷಗಳು:
ಹೊರಗಿನಿಂದ ಸೇರಿಸಲಾದ ಸ್ಯಾಚುರೇಟೆಡ್ ಕೊಬ್ಬು, ಸಕ್ಕರೆ ಮತ್ತು ಉಪ್ಪು - ಈ ಮೂರು ನಿಗದಿತ ಅಂಶಗಳಲ್ಲಿ ಎರಡಕ್ಕಿಂತ ಹೆಚ್ಚು ಅಂಶಗಳ ಪ್ರಮಾಣ ಹೆಚ್ಚಿದ್ದಾಗ ಮಾತ್ರ ಮುನ್ನೆಚ್ಚರಿಕೆ ನೀಡಲು ಎಫ್ಎಸ್ಎಸ್ಎಐ ಪ್ರಸ್ತಾಪಿಸಿರುವುದು ಅತ್ಯಂತ ದೊಡ್ಡ ಕಳವಳಕಾರಿ ವಿಷಯವಾಗಿದೆ. ಇದರರ್ಥ, ಕೊಬ್ಬು ಅಥವಾ ಉಪ್ಪಿನ ಪ್ರಮಾಣವು ನಿಗದಿತ ಮಿತಿಯನ್ನು ದಾಟದಿದ್ದರೆ, ಅತಿಯಾದ ಸಕ್ಕರೆಯನ್ನು ಹೊಂದಿರುವ ಉತ್ಪನ್ನವೂ ಮುನ್ನೆಚ್ಚರಿಕೆ ಲೇಬಲ್ನಿಂದ ನುಣುಚಿಕೊಳ್ಳುವ ಸಾಧ್ಯತೆಯಿದೆ.
ಯಾವುದೇ ಒಂದೇ ಒಂದು ಹಾನಿಕರ ಅಂಶದ ಪ್ರಮಾಣ ಹೆಚ್ಚಿದ್ದರೂ ಅಂತಹ ಉತ್ಪನ್ನವು ಮುನ್ನೆಚ್ಚರಿಕೆ ಲೇಬಲ್ ಹೊಂದಿರಬೇಕು ಎಂದು ಪೋಷಕಾಂಶ ತಜ್ಞರು ಪ್ರತಿಪಾದಿಸುತ್ತಿದ್ದಾರೆ. ಇದರ ಜೊತೆಗೆ, ಚಿಲಿ, ಮೆಕ್ಸಿಕೋ, ಕೆನಡಾ ಮತ್ತು ಇಸ್ರೇಲ್ ದೇಶಗಳಲ್ಲಿ ಬಳಸಲಾಗುವ ಲೇಬಲಿಂಗ್ ವ್ಯವಸ್ಥೆಗಳಂತೆ ಕ್ಯಾಲರಿ ಪ್ರಮಾಣವನ್ನೂ ಪ್ರತ್ಯೇಕ ಮಾನದಂಡವಾಗಿ ಸೇರಿಸಬೇಕು ಎಂದು ಅವರು ಬಯಸುತ್ತಾರೆ.
ಹಂತ ಹಂತವಾಗಿ ಜಾರಿಗೆ ತರುವ ಪ್ರಸ್ತಾವನೆಯೂ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ಪ್ರಸ್ತಾವನೆಯು ಎರಡಕ್ಕಿಂತ ಹೆಚ್ಚು ಅಂಶಗಳ ಪ್ರಮಾಣ ಹೆಚ್ಚಿರುವ ಉತ್ಪನ್ನಗಳ ಮೇಲೆ ಗಮನ ಹರಿಸಿದ್ದರೆ, ಮುಂದಿನ ಹಂತದಲ್ಲಿ ಯಾವುದೇ ಒಂದೇ ಅಂಶ ಹೆಚ್ಚಿದ್ದರೂ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಆದರೆ, ಈ ಎರಡನೇ ಹಂತಕ್ಕೆ ತೆರಳಲು ಯಾವುದೇ ನಿರ್ದಿಷ್ಟ ಅಥವಾ ಕಡ್ಡಾಯ ಕಾಲಮಿತಿಯನ್ನು ನಿಗದಿಪಡಿಸಿಲ್ಲ.
ನಿರ್ದಿಷ್ಟ ಗಡುವಿಲ್ಲದ ಹಂತವು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಮಾಡಬಹುದು ಎಂದು ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಹೇಳುತ್ತಾರೆ. ಮೊದಲ ಹಂತ ಜಾರಿಯಾದ 12 ತಿಂಗಳೊಳಗೆ ಎರಡನೇ ಹಂತವನ್ನು ಜಾರಿಗೆ ತರಲು ಎಫ್ಎಸ್ಎಸ್ಎಐ ಸ್ಪಷ್ಟ ಕಾಲಮಿತಿಯನ್ನು ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ.
ಉತ್ಪನ್ನಗಳಿಗೆ ಹೊರಗಿನಿಂದ ಸೇರಿಸಲಾದ ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನುಮಾತ್ರ ಪ್ರಾಧಿಕಾರ ಪರಿಗಣಿಸುತ್ತಿರುವುದಕ್ಕೂ ವಿರೋಧ ವ್ಯಕ್ತವಾಗಿದೆ. ಐಸಿಎಂಆರ್-ಎನ್ಐಎನ್ ಮಾರ್ಗದರ್ಶಿ ಸೂತ್ರಗಳು ಒಟ್ಟು ಸಕ್ಕರೆ ಮತ್ತು ಒಟ್ಟು ಕೊಬ್ಬಿನ ಪ್ರಮಾಣಕ್ಕೆ ಮಿತಿಗಳನ್ನು ನಿಗದಿಪಡಿಸಿವೆ, ಆದರೆ ಉತ್ಪನ್ನಕ್ಕೆ ಹೊರಗಿನಿಂದ ಸೇರಿಸಲಾದ ಸಕ್ಕರೆಯನ್ನು ಗ್ರಾಹಕರು ಸ್ವತಂತ್ರವಾಗಿ ಗುರುತಿಸುವುದು ಕಷ್ಟ ಎಂದು ತಜ್ಞರು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಉಲ್ಲೇಖಿಸಿದೆ.
ಕೇವಲ "ಹೊರಗಿನಿಂದ ಸೇರಿಸಲಾದ" ಪೋಷಕಾಂಶಗಳ ಮೇಲೆ ಮಾತ್ರ ಗಮನ ಹರಿಸುವುದರಿಂದ, ಒಟ್ಟಾರೆಯಾಗಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಥವಾ ಕೊಬ್ಬನ್ನು ಹೊಂದಿರುವ ಉತ್ಪನ್ನಗಳು ಮುನ್ನೆಚ್ಚರಿಕೆ ಲೇಬಲ್ನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂಬುದು ಪ್ರಮುಖ ಆತಂಕವಾಗಿದೆ.
ಪ್ರಸ್ತಾವಿತ ಮುನ್ನೆಚ್ಚರಿಕೆ ಲೇಬಲ್ನ ಗಾತ್ರವೂ ಚರ್ಚೆಯಾಗುತ್ತಿದೆ.
ಆಹಾರ ನಿಯಂತ್ರಣ ಮಂಡಳಿಯು ಪ್ಯಾಕೆಟ್ನ ಹಿಂಭಾಗದಲ್ಲಿರುವ ಪೌಷ್ಟಿಕಾಂಶದ ವಿವರಗಳ ಕೋಷ್ಟಕಕ್ಕಿಂತ ಒಂದು ಪಾಯಿಂಟ್ ದೊಡ್ಡದಾದ ಅಕ್ಷರದ ಗಾತ್ರದಲ್ಲಿ ಮುನ್ನೆಚ್ಚರಿಕೆಯನ್ನು ಪ್ರದರ್ಶಿಸಲು ಪ್ರಸ್ತಾಪಿಸಿದೆ. ಹಿಂಭಾಗದ ಟೇಬಲ್ ನಲ್ಲಿರುವ ಅಕ್ಷರಗಳು ಈಗಾಗಲೇ ಅತ್ಯಂತ ಸಣ್ಣದಾಗಿದ್ದರೆ, ಅದನ್ನು ಕೇವಲ ಒಂದು ಪಾಯಿಂಟ್ ಹೆಚ್ಚಿಸುವುದರಿಂದ ಸಾಮಾನ್ಯ ದೂರದಿಂದ ನೋಡಿದಾಗ ಮುನ್ನೆಚ್ಚರಿಕೆ ಲೇಬಲ್ ಎದ್ದು ಕಾಣುವುದು ಕಷ್ಟವಾಗಬಹುದು ಎಂದು ತಜ್ಞರು ವಾದಿಸುತ್ತಾರೆ.
ನ್ಯೂಟ್ರಿಷನ್ ಅಡ್ವೊಕೇಸಿ ಇನ್ ಪಬ್ಲಿಕ್ ಇಂಟರೆಸ್ಟ್ (NAPi) ಸಂಯೋಜಕ ಡಾ. ಅರುಣ್ ಗುಪ್ತಾ ಮಾತನಾಡಿ, ಈ ಪ್ರಸ್ತಾವನೆಯು ಸಕಾರಾತ್ಮಕ ಹೆಜ್ಜೆಯಾಗಿದ್ದರೂ, ಇದರ ವಿನ್ಯಾಸವು ಸಾರ್ವಜನಿಕ ಆರೋಗ್ಯದ ಮೂಲ ಉದ್ದೇಶವನ್ನೇ ಹಾಳುಮಾಡಬಹುದು ಎಂದು ಎಚ್ಚರಿಸಿದ್ದಾರೆ.
"ಎಫ್ಎಸ್ಎಸ್ಎಐನ ಕೆಂಪು ಷಡ್ಕೋನ ಮುನ್ನೆಚ್ಚರಿಕೆ ಲೇಬಲ್ ಉತ್ತಮ ಹೆಜ್ಜೆಯಾಗಿದೆ, ಆದರೆ 'ಎರಡು ಅಥವಾ ಹೆಚ್ಚಿನ' ಅಂಶಗಳು ಇರಬೇಕೆಂಬ ನಿಬಂಧನೆಯು ದೊಡ್ಡ ಲೋಪದೋಷವಾಗಿದೆ. ಅತಿಯಾದ ಸಕ್ಕರೆ ಹೊಂದಿರುವ ಉತ್ಪನ್ನದಲ್ಲಿ ಕೊಬ್ಬು ಮತ್ತು ಉಪ್ಪಿನ ಪ್ರಮಾಣ ಕಡಿಮೆಯಿದ್ದರೆ ಅದಕ್ಕೆ ಯಾವುದೇ ಮುನ್ನೆಚ್ಚರಿಕೆ ಲೇಬಲ್ ಇರುವುದಿಲ್ಲ. ಇದು ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲ ಬದಲಿಗೆ ಉದ್ಯಮಗಳ ಒತ್ತಡಕ್ಕೆ ಮಣಿದಂತೆ. ಮೇಲಾಗಿ, ಎಚ್ಎಫ್ಎಸ್ಎಸ್ ವ್ಯಾಖ್ಯಾನದಲ್ಲಿ ಒಟ್ಟು ಸಕ್ಕರೆ ಮತ್ತು ಒಟ್ಟು ಕೊಬ್ಬನ್ನು ಸೇರಿಸುವುದು ಅತ್ಯಂತ ನಿರ್ಣಾಯಕವಾಗಿದೆ" ಎಂದು ಅವರು ಒತ್ತಿ ಹೇಳಿದ್ದಾರೆ.
ವಿನ್ಯಾಸ ಏಕೆ ಮುಖ್ಯ?
ಈ ಚರ್ಚೆಯು ಕೇವಲ ಪ್ಯಾಕೆಟ್ ಹೇಗೆ ಕಾಣಿಸುತ್ತದೆ ಎಂಬುದಕ್ಕೆ ಸೀಮಿತವಾಗಿಲ್ಲ. ಗ್ರಾಹಕರಿಗೆ ತಕ್ಷಣವೇ ಮುನ್ನೆಚ್ಚರಿಕೆ ಸಿಗುತ್ತಿದೆಯೇ ಅಥವಾ ಪೌಷ್ಟಿಕಾಂಶದ ವಿವರಗಳನ್ನು ಅವರೇ ವಿಶ್ಲೇಷಿಸಿಕೊಳ್ಳುವಂತೆ ಬಿಡಲಾಗುತ್ತಿದೆಯೇ ಎಂಬುದರ ಮೇಲಿದೆ.
ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಲಾದ ಸಾಕ್ಷ್ಯಗಳ ಪ್ರಕಾರ, ಮುನ್ನೆಚ್ಚರಿಕೆ ಲೇಬಲ್ಗಳು ಹಾನಿಕರ ಅಂಶ ಹೆಚ್ಚಿರುವ ಉತ್ಪನ್ನಗಳನ್ನು ಸುಲಭವಾಗಿ ಗುರುತಿಸಲು ಜನರಿಗೆ ನೆರವಾಗುತ್ತವೆ. ಆರು ರಾಜ್ಯಗಳಲ್ಲಿ ನಡೆದ ಕ್ಷೇತ್ರ ಪ್ರಯೋಗದಲ್ಲಿ, ಮುನ್ನೆಚ್ಚರಿಕೆ ಲೇಬಲ್ ತೋರಿಸಿದಾಗ ಶೇ. 60.8 ರಷ್ಟು ಜನರು ಉತ್ಪನ್ನದಲ್ಲಿ ಹಾನಿಕರ ಅಂಶ ಹೆಚ್ಚಿರುವುದನ್ನು ಸರಿಯಾಗಿ ಗುರುತಿಸಿದ್ದಾರೆ. ಅದೇ ರೀತಿ, ಸಂಖ್ಯೆಗಳ ಕೋಷ್ಟಕ ತೋರಿಸಿದಾಗ ಶೇ. 55 ರಷ್ಟು ಹಾಗೂ ಸ್ಟಾರ್-ರೇಟಿಂಗ್ ವ್ಯವಸ್ಥೆ ತೋರಿಸಿದಾಗ ಶೇ. 45 ರಷ್ಟು ಜನರು ಮಾತ್ರ ಸರಿಯಾಗಿ ಗುರುತಿಸಲು ಸಾಧ್ಯವಾಗಿತ್ತು.
ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಪ್ರಮುಖ ಕಾಯಿಲೆಗಳು ಹೆಚ್ಚುತ್ತಿರುವ ಭಾರತದಂತಹ ದೇಶಕ್ಕೆ ಈ ವಿಷಯ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ.
ದೇಶದ ಒಟ್ಟು ರೋಗಗಳ ಹೊರೆ ಪೈಕಿ ಶೇ. 57 ರಷ್ಟು ಕಾಯಿಲೆಗಳಿಗೆ ಅನಾರೋಗ್ಯಕರ ಆಹಾರ ಪದ್ಧತಿಯೇ ಕಾರಣ ಎಂದು ಐಸಿಎಂಆರ್-ಎನ್ಐಎನ್ ಅಂದಾಜಿಸಿದೆ. ಸಕ್ಕರೆ, ಉಪ್ಪು ಮತ್ತು ಕೊಬ್ಬು ಹೆಚ್ಚಿರುವ ಆಹಾರಗಳ ಬಳಕೆಯು ಬೊಜ್ಜು, ಮಧುಮೇಹ ಮತ್ತು ಹೃದಯಸಂಬಂಧಿ ಕಾಯಿಲೆಗಳ ಹೆಚ್ಚಳಕ್ಕೆ ನೇರವಾಗಿ ಕಾರಣವಾಗಿದೆ.
ಹಾಗಾಗಿ ಗ್ರಾಹಕರಿಗೆ, ತಕ್ಷಣವೇ ಕಣ್ಣಿಗೆ ಕಾಣಿಸುವ ಮುನ್ನೆಚ್ಚರಿಕೆ ಲೇಬಲ್ಗೂ ಮತ್ತು ಪೌಷ್ಟಿಕಾಂಶದ ಕೋಷ್ಟಕದಲ್ಲಿ ಅಡಗಿರುವ ಸಂಖ್ಯೆಗಳಿಗೂ ದೊಡ್ಡ ವ್ಯತ್ಯಾಸವಿದೆ.
ಎಫ್ಎಸ್ಎಸ್ಎಐನ ಈ ಇತ್ತೀಚಿನ ಪ್ರಸ್ತಾವನೆಯು ಭಾರತವನ್ನು ಮುನ್ನೆಚ್ಚರಿಕೆ ಆಧಾರಿತ ವ್ಯವಸ್ಥೆಗೆ ಹತ್ತಿರ ತಂದಿದೆ. ಇದು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮಕಾರಿ ಪ್ರಭಾವ ಬೀರಲಿದೆಯೇ ಎಂಬುದು ಅಂತಿಮ ಮಿತಿಗಳು, ಎಚ್ಎಫ್ಎಸ್ಎಸ್ ಆಹಾರಗಳ ವ್ಯಾಖ್ಯಾನ, ಲೇಬಲ್ನ ಗಾತ್ರ ಹಾಗೂ ಪ್ರಮುಖವಾಗಿ ಕೇವಲ ಒಂದೇ ಒಂದು ಹಾನಿಕರ ಅಂಶ ಹೆಚ್ಚಿರುವ ಉತ್ಪನ್ನಗಳನ್ನೂ ಇದು ಒಳಗೊಳ್ಳುತ್ತದೆಯೇ ಎಂಬುದರ ಮೇಲೆ ಅವಲಂಬಿತವಾಗಿದೆ.
ಕೇಂದ್ರ ಸರ್ಕಾರದ ಅಫಿಡವಿಟ್ ಮತ್ತು ಅನುಸರಣೆ ವರದಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಮುಂದಿನ ತಿಂಗಳು 10 ರಂದು ಈ ಅರ್ಜಿಯ ವಿಚಾರಣೆ ನಡೆಸುವ ನಿರೀಕ್ಷೆಯಿದೆ.
ಕೃಪೆ: Times of India






