ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಮಾಜಿ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ನಿಧನ
► ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ, ನ್ಯಾಯಾಂಗದ ಹೊಣೆಗಾರಿಕೆ ಮತ್ತು ಜಾತಿ ತಾರತಮ್ಯದ ಆರೋಪಗಳ ಕುರಿತು ಚರ್ಚೆಗೆ ಕಾರಣವಾಗಿದ್ದ ಕರ್ಣನ್ ಪ್ರಕರಣ ► ವಿ. ವೆಂಕಟೇಸನ್ - frontline.thehindu. com

ಸಿ.ಎಸ್. ಕರ್ಣನ್ | Photo Credit ; PTI
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾದ ಭಾರತದ ಮೊದಲ ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದ ಮದ್ರಾಸ್ ಮತ್ತು ಕಲ್ಕತ್ತಾ ಹೈಕೋರ್ಟ್ಗಳ ಮಾಜಿ ನ್ಯಾಯಮೂರ್ತಿ ಚಿನ್ನಸ್ವಾಮಿ ಸ್ವಾಮಿನಾಥನ್ ಕರ್ಣನ್ (71) ಅವರು ನ. 13ರಂದು ಬೆಳಿಗ್ಗೆ ಚೆನ್ನೈನ ಆಸ್ಪತ್ರೆಯೊಂದರಲ್ಲಿ ನಿಧನರಾದರು.
2017ರಲ್ಲಿ ಸುಪ್ರೀಂ ಕೋರ್ಟ್ನೊಂದಿಗೆ ನಡೆದ ಸಂಘರ್ಷದಿಂದ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಕರ್ಣನ್, ಎಂಟು ವರ್ಷಕ್ಕೂ ಹೆಚ್ಚು ಕಾಲ ಮದ್ರಾಸ್ ಮತ್ತು ಕಲ್ಕತ್ತಾ ಹೈಕೋರ್ಟ್ಗಳಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಈ ಸಂಘರ್ಷದ ಪರಿಣಾಮವಾಗಿ ಸುಪ್ರೀಂ ಕೋರ್ಟ್ ನ ಏಳು ಹಿರಿಯ ನ್ಯಾಯಮೂರ್ತಿಗಳ ಪೀಠ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.
ನ್ಯಾಯಮೂರ್ತಿಗಳ ನೇಮಕಾತಿ ಹೇಗೆ ನಡೆಯಬೇಕು, ತಪ್ಪು ಎಸಗುವ ನ್ಯಾಯಮೂರ್ತಿಗಳ ವಿರುದ್ಧ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ನ್ಯಾಯಾಂಗದ ಹೊಣೆಗಾರಿಕೆಯನ್ನು ಹೇಗೆ ಖಾತರಿಪಡಿಸಬೇಕು ಎಂಬ ಹಲವು ಗಂಭೀರ ಪ್ರಶ್ನೆಗಳನ್ನು ಈ ಪ್ರಕರಣ ಹುಟ್ಟುಹಾಕಿತ್ತು. ಕರ್ಣನ್ ಅವರ ನಿಧನದ ಬಳಿಕವೂ ಈ ಪ್ರಶ್ನೆಗಳು ಪ್ರಸ್ತುತವಾಗಿಯೇ ಉಳಿದಿವೆ.
►ದಲಿತ ಕುಟುಂಬದಲ್ಲಿ ಜನನ
1955ರ ಜೂನ್ 12ರಂದು ತಮಿಳುನಾಡಿನ ಕಡಲೂರು ಜಿಲ್ಲೆಯ ವಿರುಧಾಚಲಂ ಸಮೀಪದ ಕರ್ಣಥಮ್ ಗ್ರಾಮದಲ್ಲಿ ಕರ್ಣನ್ ಜನಿಸಿದ್ದರು. ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಶಾಲಾ ಶಿಕ್ಷಕ ಚಿನ್ನಸ್ವಾಮಿ ಸ್ವಾಮಿನಾಥನ್ ಮತ್ತು ಗೃಹಿಣಿ ಕಮಲಂ ದಂಪತಿಯ ಎಂಟು ಮಕ್ಕಳಲ್ಲಿ ಅವರು ಎರಡನೆಯವರಾಗಿದ್ದರು.
ಗ್ರಾಮದ ಆದಿ ದ್ರಾವಿಡ ಶಾಲೆ ಹಾಗೂ ಸಮೀಪದ ಮಂಗಳಂಪೇಟೆಯ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, ವಿರುಧಾಚಲಂನ ಸರ್ಕಾರಿ ಕಲಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಿದರು. ಬಳಿಕ ಚೆನ್ನೈಗೆ ತೆರಳಿ ದಿ ನ್ಯೂ ಕಾಲೇಜಿನಲ್ಲಿ ವಿಜ್ಞಾನ ಪದವಿ ಮತ್ತು ಮದ್ರಾಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.
1983ರಲ್ಲಿ ಪದವಿ ಪೂರ್ಣಗೊಳಿಸಿದ ಅವರು, ಅದೇ ವರ್ಷ ತಮಿಳುನಾಡು ಬಾರ್ ಕೌನ್ಸಿಲ್ ನಲ್ಲಿ ನೋಂದಾಯಿಸಿಕೊಂಡು ಸಿವಿಲ್ ಪ್ರಕರಣಗಳ ವಕೀಲರಾಗಿ ವೃತ್ತಿಜೀವನ ಆರಂಭಿಸಿದರು. ಚೆನ್ನೈ ಮೆಟ್ರೋಪಾಲಿಟನ್ ವಾಟರ್ ಸಪ್ಲೈ ಆ್ಯಂಡ್ ಸ್ಯೂವರೇಜ್ ಬೋರ್ಡ್ ನ ಕಾನೂನು ಸಲಹೆಗಾರರಾಗಿ, ಸಿವಿಲ್ ಮೊಕದ್ದಮೆಗಳಲ್ಲಿ ಸರ್ಕಾರಿ ವಕೀಲರಾಗಿ ಹಾಗೂ ಕೇಂದ್ರ ಸರ್ಕಾರದ ಸ್ಥಾಯಿ ವಕೀಲರಾಗಿ ಸೇವೆ ಸಲ್ಲಿಸಿದ್ದರು.
1991ರಲ್ಲಿ ಪತ್ನಿ ಸರಸ್ವತಿ ಅವರ ಸಲಹೆಯ ಮೇರೆಗೆ ತಮ್ಮ ಹೆಸರನ್ನು 'ಕರುಣಾನಿಧಿ'ಯಿಂದ 'ಕರ್ಣನ್' ಎಂದು ಬದಲಾಯಿಸಿಕೊಂಡಿದ್ದರು.
►ನ್ಯಾಯಮೂರ್ತಿಯಾಗಿ ನೇಮಕ
ಮದ್ರಾಸ್ ಹೈಕೋರ್ಟ್ ನ ಅಂದಿನ ಮುಖ್ಯ ನ್ಯಾಯಮೂರ್ತಿ ಎ.ಕೆ. ಗಂಗುಲಿ ನೇತೃತ್ವದ ಕೊಲಿಜಿಯಂ ಕರ್ಣನ್ ಅವರನ್ನು ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿತ್ತು. ಗಂಗುಲಿ ನಂತರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದರು.
2009ರ ಮಾರ್ಚ್ 30ರಂದು ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಕರ್ಣನ್, ಎರಡು ವರ್ಷಗಳ ಬಳಿಕ ಕಾಯಂ ನ್ಯಾಯಮೂರ್ತಿಯಾದರು.
ಆದರೆ, ಕರ್ಣನ್ ಅವರನ್ನು ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದೇ ಕೊಲಿಜಿಯಂ ವ್ಯವಸ್ಥೆಯಲ್ಲಿನ ಲೋಪಗಳಿಗೆ ಉದಾಹರಣೆ ಎಂದು ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ಟೀಕಿಸಿದ್ದರು. ನ್ಯಾಯಮೂರ್ತಿಗಳ ನೇಮಕಾತಿಗೂ ಮುನ್ನ ಅವರ ವ್ಯಕ್ತಿತ್ವವನ್ನು ಸರಿಯಾಗಿ ಪರಿಶೀಲಿಸಲಾಗುತ್ತಿಲ್ಲ ಎಂಬುದನ್ನು ಕರ್ಣನ್ ಅವರ ನೇಮಕಾತಿ ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
►ಸಹ ನ್ಯಾಯಮೂರ್ತಿಗಳ ವಿರುದ್ಧ ಜಾತಿ ತಾರತಮ್ಯದ ಆರೋಪ
ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೂರು ವರ್ಷಗಳೊಳಗಾಗಿಯೇ ಕರ್ಣನ್ ಮತ್ತು ಅವರ ಸಹೋದ್ಯೋಗಿಗಳ ನಡುವಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿದ್ದವು.
2011ರ ನವೆಂಬರ್ ನಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ದೂರು ಸಲ್ಲಿಸಿದ್ದ ಅವರು, ತಾವು ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಸಹ ನ್ಯಾಯಮೂರ್ತಿಗಳು ತಮ್ಮನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಮುಂದಿನ ಐದು ವರ್ಷಗಳ ಕಾಲ ಮುಖ್ಯ ನ್ಯಾಯಮೂರ್ತಿಗಳು, ಪ್ರಧಾನಿ ಮತ್ತು ಪೊಲೀಸರಿಗೆ ಬರೆದ ಪತ್ರಗಳಲ್ಲಿ ಇದೇ ಆರೋಪಗಳನ್ನು ಪುನರುಚ್ಚರಿಸಿದ್ದರು. ತಮ್ಮ ಸಹೋದ್ಯೋಗಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ವೈಯಕ್ತಿಕ ದುರ್ನಡತೆಯ ಆರೋಪಗಳನ್ನೂ ಮಾಡಿದ್ದರು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ನ ಅಂದಿನ ಮುಖ್ಯ ನ್ಯಾಯಮೂರ್ತಿಗಳು ಕರ್ಣನ್ ಅವರ ವರ್ಗಾವಣೆಗೆ ಮನವಿ ಮಾಡಿದ್ದರು. ಹೈಕೋರ್ಟ್ ನ 20 ಹಾಲಿ ನ್ಯಾಯಮೂರ್ತಿಗಳೂ ಒಟ್ಟಾಗಿ ಅವರ ವರ್ಗಾವಣೆಗೆ ಆಗ್ರಹಿಸಿದ್ದರು.
2015ರ ಎಪ್ರಿಲ್ ನಲ್ಲಿ ನ್ಯಾಯಾಂಗ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿಗಳು ಹೊರಡಿಸಿದ್ದ ಆಡಳಿತಾತ್ಮಕ ಆದೇಶಗಳಿಗೆ ಕರ್ಣನ್ ಸ್ವಯಂಪ್ರೇರಿತವಾಗಿ ತಡೆಯಾಜ್ಞೆ ನೀಡಿದ್ದರು. ಎರಡು ವಾರಗಳೊಳಗೆ ಸುಪ್ರೀಂ ಕೋರ್ಟ್ ಅವರ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಲ್ಲದೆ, ಆ ಪ್ರಕರಣದ ವಿಚಾರಣೆ ನಡೆಸದಂತೆ ಅವರನ್ನು ನಿರ್ಬಂಧಿಸಿತ್ತು.
2016ರ ಫೆಬ್ರವರಿಯಲ್ಲಿ ಅವರನ್ನು ಕಲ್ಕತ್ತಾ ಹೈಕೋರ್ಟ್ ಗೆ ವರ್ಗಾಯಿಸುವ ಪ್ರಸ್ತಾಪ ಬಂದಾಗಲೂ ಕರ್ಣನ್ ತಡೆಯಾಜ್ಞೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಮುಖ್ಯ ನ್ಯಾಯಮೂರ್ತಿಗಳು ನಿರ್ದಿಷ್ಟವಾಗಿ ವಹಿಸುವ ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸುವಂತೆ ಅವರಿಗೆ ಸೂಚಿಸಿತ್ತು. ಮುಂದಿನ ತಿಂಗಳು ಅವರು ಕಲ್ಕತ್ತಾ ಹೈಕೋರ್ಟ್ ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು.
►20 ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ
2017ರ ಜನವರಿ 23ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಕರ್ಣನ್, ಹಾಲಿ ಮತ್ತು ನಿವೃತ್ತ 20 ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು.
ಫೆಬ್ರವರಿ 8ರಂದು ಸುಪ್ರೀಂ ಕೋರ್ಟ್ ನ ಏಳು ಹಿರಿಯ ನ್ಯಾಯಮೂರ್ತಿಗಳ ಪೀಠವು ಸ್ವಯಂಪ್ರೇರಿತವಾಗಿ ಈ ವಿಷಯವನ್ನು ಕೈಗೆತ್ತಿಕೊಂಡಿತ್ತು. ಅಂದಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಜೆ. ಚೆಲಮೇಶ್ವರ್, ರಂಜನ್ ಗೊಗೊಯ್, ಮದನ್ ಬಿ. ಲೋಕೂರ್, ಪಿನಾಕಿ ಚಂದ್ರ ಘೋಷ್ ಮತ್ತು ಕುರಿಯನ್ ಜೋಸೆಫ್ ಇದ್ದರು.
ಪೀಠವು ಕರ್ಣನ್ ಅವರಿಗೆ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನೋಟಿಸ್ ಜಾರಿಗೊಳಿಸಿತು. ಅವರ ಎಲ್ಲ ನ್ಯಾಯಾಂಗ ಮತ್ತು ಆಡಳಿತಾತ್ಮಕ ಕರ್ತವ್ಯಗಳಿಂದಲೂ ಅವರನ್ನು ಮುಕ್ತಗೊಳಿಸಿತು.
ನ್ಯಾಯಾಲಯದ ಘನತೆಗೆ ಕುಂದುಂಟುಮಾಡುವ ಕೃತ್ಯಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿತ್ತು. ನ್ಯಾಯಾಲಯಗಳ ನಿಂದನೆ ಕಾಯಿದೆ-1971ರ ಅಡಿಯಲ್ಲಿ ನ್ಯಾಯಾಲಯದ ಅಧಿಕಾರವನ್ನು ಕುಗ್ಗಿಸುವ ಅಥವಾ ಅದಕ್ಕೆ ಧಕ್ಕೆ ತರುವ ಸಾಧ್ಯತೆಯಿರುವ ಪ್ರಕಟಣೆಗಳು ನ್ಯಾಯಾಂಗ ನಿಂದನೆಯ ವ್ಯಾಪ್ತಿಗೆ ಬರುತ್ತವೆ.
►ಸುಪ್ರೀಂ ಕೋರ್ಟ್ ವಿಚಾರಣೆಗೆ ಹಾಜರಾಗಲು ನಿರಾಕರಣೆ
ನ್ಯಾಯಾಂಗ ನಿಂದನೆ ಪ್ರಕರಣದ ಮೊದಲ ಎರಡು ವಿಚಾರಣೆಗಳಿಗೆ ಕರ್ಣನ್ ಹಾಜರಾಗಿರಲಿಲ್ಲ. ಅವರ ವಿರುದ್ಧ ಜಾಮೀನು ಪಡೆಯಬಹುದಾದ ವಾರಂಟ್ ಹೊರಡಿಸಿದ ನಂತರ ಮಾರ್ಚ್ 31ರಂದು ಸುಪ್ರೀಂ ಕೋರ್ಟ್ ಗೆ ಹಾಜರಾಗಿದ್ದರು.
ವಿಚಾರಣೆ ವೇಳೆ ತಮ್ಮ ಹಿಂದಿನ ಆರೋಪಗಳನ್ನು ಪುನರುಚ್ಚರಿಸಿದ್ದ ಅವರು, ಮತ್ತೊಂದೆಡೆ ತಮ್ಮ ದೂರುಗಳನ್ನು ಹಿಂಪಡೆಯುವುದಾಗಿ ಮತ್ತು ಬೇಷರತ್ತಾಗಿ ಕ್ಷಮೆ ಕೋರುವುದಾಗಿ ತಿಳಿಸಿ ಪತ್ರ ಸಲ್ಲಿಸಿದ್ದರು.
ಆದರೆ, ನ್ಯಾಯಾಲಯದಿಂದ ಹೊರನಡೆಯುವಾಗ, "ನನ್ನನ್ನು ಜೈಲಿಗೆ ಕಳುಹಿಸಬಹುದು, ಆದರೆ ನಾನು ಮತ್ತೆ ಈ ಪೀಠದ ಮುಂದೆ ಬರುವುದಿಲ್ಲ" ಎಂದು ಹೇಳಿದ್ದರು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಕರ್ಣನ್ ಅವರ ಮಾನಸಿಕ ಆರೋಗ್ಯದ ಸ್ಥಿತಿಯನ್ನು ಪರಿಶೀಲಿಸಲು ನ್ಯಾಯಾಲಯ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿತ್ತು. ಪರೀಕ್ಷೆಗೆ ಒಳಗಾದ ಕರ್ಣನ್, ತಾವು ಉತ್ತಮ ಆರೋಗ್ಯದಲ್ಲಿರುವುದಾಗಿ ವೈದ್ಯರಿಗೆ ತಿಳಿಸಿದ್ದರು.
ನ್ಯಾಯಾಂಗ ಕರ್ತವ್ಯಗಳಿಂದ ಮುಕ್ತಗೊಳಿಸಲ್ಪಟ್ಟಿದ್ದರೂ, ಈ ಅವಧಿಯಲ್ಲಿ ಅವರು ನ್ಯಾಯಾಂಗ ಅಧಿಕಾರವನ್ನು ಪ್ರತಿಪಾದಿಸುವ ಸರಣಿ ಆದೇಶಗಳನ್ನು ಹೊರಡಿಸಿದ್ದರು.
►ಆರು ತಿಂಗಳ ಜೈಲು ಶಿಕ್ಷೆ
2017ರ ಮೇ 9ರಂದು ಸುಪ್ರೀಂ ಕೋರ್ಟ್ ಕರ್ಣನ್ ಅವರನ್ನು ಅತ್ಯಂತ ಗಂಭೀರ ಸ್ವರೂಪದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಅವರ ಯಾವುದೇ ಹೇಳಿಕೆಗಳನ್ನು ಪ್ರಕಟಿಸಬಾರದು ಎಂದೂ ನಿರ್ದೇಶಿಸಿತ್ತು.
ಮದ್ರಾಸ್ ಹೈಕೋರ್ಟ್ ನ ರಿಜಿಸ್ಟ್ರಾರ್ ಜನರಲ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್, ಕರ್ಣನ್ ಅವರು ಜೂನ್ ನಲ್ಲಿ ನಿವೃತ್ತರಾಗುವವರೆಗೆ ಕಾಯುವಂತೆ ಪೀಠಕ್ಕೆ ಮನವಿ ಮಾಡಿದ್ದರು. ಸೇವೆಯಲ್ಲಿರುವ ನ್ಯಾಯಮೂರ್ತಿಗೆ ಶಿಕ್ಷೆ ವಿಧಿಸುವುದರಿಂದ ನ್ಯಾಯಾಂಗ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆಯಾಗಬಹುದು ಎಂಬುದು ಅವರ ವಾದವಾಗಿತ್ತು.
ಆದರೆ, ಪೀಠವು ಈ ಮನವಿಯನ್ನು ಪರಿಗಣಿಸಲಿಲ್ಲ.
"ಇದು ಎಂದಿಗೂ ಸಂಭವಿಸಿಲ್ಲ. ಇದು ಎಂದಿಗೂ ಸಂಭವಿಸಬಾರದು" ಎಂದು ಮುಖ್ಯ ನ್ಯಾಯಮೂರ್ತಿ ಖೇಹರ್ ತೀರ್ಪಿನಲ್ಲಿ ಬರೆದಿದ್ದರು. ಸುಪ್ರೀಂ ಕೋರ್ಟ್ ಒಂದೇ ದಿನ ಕರ್ಣನ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ವಿಧಿಸಿತ್ತು. ಆದರೆ, ಶಿಕ್ಷೆಗೆ ಕಾರಣಗಳನ್ನು ನಂತರ ಪ್ರಕಟಿಸಿತ್ತು. ಈ ಕ್ರಮದ ಬಗ್ಗೆ ಕಾನೂನು ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿದ್ದವು.
"ಕಾರಣಗಳನ್ನು ನೀಡದೆ ಶಿಕ್ಷೆ ವಿಧಿಸುವುದು ನನಗೆ ಸೂಕ್ತವೆಂದು ತೋರುವುದಿಲ್ಲ" ಎಂದು ಹಿರಿಯ ವಕೀಲ ರಾಜು ರಾಮಚಂದ್ರನ್ 'ಫ್ರಂಟ್ಲೈನ್' ನಿಯತಕಾಲಿಕೆಗೆ ಪ್ರತಿಕ್ರಿಯಿಸಿದ್ದರು.
ಸಿಪಿಐನ ಆಗಿನ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ ಕೂಡ ಸುಪ್ರೀಂ ಕೋರ್ಟ್ ನ ಕ್ರಮವನ್ನು ಪ್ರಶ್ನಿಸಿದ್ದರು. ನ್ಯಾಯಮೂರ್ತಿಗಳ ವಿರುದ್ಧ ಕರ್ಣನ್ ಮಾಡಿದ್ದ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಬೇಕಿತ್ತು ಅಥವಾ ನ್ಯಾಯಮೂರ್ತಿಗಳನ್ನು ವಜಾಗೊಳಿಸುವ ಅಧಿಕಾರ ಹೊಂದಿರುವ ಸಂಸತ್ತಿಗೆ ವಿಷಯವನ್ನು ಬಿಡಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದರು.
"ಇದು ಆರೋಗ್ಯಕರ ಪೂರ್ವನಿದರ್ಶನವಲ್ಲ" ಎಂದು ರಾಜಾ ಹೇಳಿದ್ದರು.
►ಆರು ವಾರಗಳ ಕಾಲ ಬಂಧನದಿಂದ ತಪ್ಪಿಸಿಕೊಂಡಿದ್ದರು
ಜೈಲು ಶಿಕ್ಷೆ ಪ್ರಕಟವಾದ ಬಳಿಕ ಕರ್ಣನ್ ಸುಮಾರು ಆರು ವಾರಗಳ ಕಾಲ ಬಂಧನದಿಂದ ತಪ್ಪಿಸಿಕೊಂಡಿದ್ದರು. ಈ ಅವಧಿಯಲ್ಲೇ ಜೂನ್ ನಲ್ಲಿ ಅವರು ನಿವೃತ್ತರಾಗಿದ್ದರು.
2017ರ ಜೂನ್ 20ರ ರಾತ್ರಿ ಪಶ್ಚಿಮ ಬಂಗಾಳ ಪೊಲೀಸರ ತಂಡವು ಕೊಯಮತ್ತೂರು ಸಮೀಪ ಅವರನ್ನು ಬಂಧಿಸಿತ್ತು. ಬಳಿಕ ಕೋಲ್ಕತ್ತಾದ ಪ್ರೆಸಿಡೆನ್ಸಿ ಕರೆಕ್ಷನಲ್ ಹೋಂನಲ್ಲಿ ಆರು ತಿಂಗಳ ಶಿಕ್ಷೆ ಅನುಭವಿಸಿದ ಅವರು, ಅದೇ ವರ್ಷದ ಡಿಸೆಂಬರ್ 20ರಂದು ಬಿಡುಗಡೆಯಾಗಿದ್ದರು.
►ಕೊಲಿಜಿಯಂ ವ್ಯವಸ್ಥೆಯ ಲೋಪಗಳ ಬಗ್ಗೆಯೂ ಚರ್ಚೆ
ಕರ್ಣನ್ ಅವರಿಗೆ ಶಿಕ್ಷೆ ವಿಧಿಸಲು ಕಾರಣಗಳನ್ನು ಸುಪ್ರೀಂ ಕೋರ್ಟ್ 2017ರ ಜುಲೈನಲ್ಲಿ ಎರಡು ಪ್ರತ್ಯೇಕ ಅಭಿಪ್ರಾಯಗಳ ಮೂಲಕ ವಿವರಿಸಿತ್ತು.
ಐವರು ನ್ಯಾಯಮೂರ್ತಿಗಳ ಪರವಾಗಿ ಅಭಿಪ್ರಾಯ ಬರೆದಿದ್ದ ಮುಖ್ಯ ನ್ಯಾಯಮೂರ್ತಿ ಖೇಹರ್, ಕರ್ಣನ್ ಮಾಡಿದ್ದ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಹೇಳಿದ್ದರು. ತಮ್ಮ ಜಾತಿಯ ಗುರುತನ್ನು ಅವರು ರಕ್ಷಣೆಯಾಗಿ ಬಳಸಿಕೊಂಡಿದ್ದಾರೆ ಎಂದೂ ಅಭಿಪ್ರಾಯಪಟ್ಟಿದ್ದರು.
ಆದರೆ, ಕರ್ಣನ್ ಅವರಿಗೆ ಶಿಕ್ಷೆ ವಿಧಿಸುವುದನ್ನು ಒಪ್ಪಿಕೊಂಡಿದ್ದ ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್ ಮತ್ತು ರಂಜನ್ ಗೊಗೊಯ್ ಈ ಪ್ರಕರಣದ ಬಗ್ಗೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕರ್ಣನ್ ಮಾಡಿದ್ದ ಆರೋಪಗಳು ಸ್ಪಷ್ಟವಾಗಿಲ್ಲದ ಕಾರಣ, ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯಲ್ಲಿ ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಿರಲಿಲ್ಲ. ಆದರೆ, ಆ ಆರೋಪಗಳಲ್ಲಿ ಯಾವುದಾದರೂ ಸತ್ಯವಾಗಿದ್ದರೆ, ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು ಎಂದು ಇಬ್ಬರೂ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದರು.
ಆ ಆರೋಪಗಳ ಕುರಿತು ಕ್ರಮ ಕೈಗೊಳ್ಳುವುದು ಅಗತ್ಯವೆಂದು ಯಾವುದೇ ಸಾಂವಿಧಾನಿಕ ಪ್ರಾಧಿಕಾರ ಪರಿಗಣಿಸಿರಲಿಲ್ಲ. ದೂರು ನೀಡಿದವರೇ ತಮ್ಮ ದೂರಿನ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದರು.
ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆಯೂ ಇಬ್ಬರು ನ್ಯಾಯಮೂರ್ತಿಗಳು ಗಮನ ಸೆಳೆದಿದ್ದರು. ಕರ್ಣನ್ ಅವರ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡುವಾಗ ಅವರ ವ್ಯಕ್ತಿತ್ವವನ್ನು ಸೂಕ್ತವಾಗಿ ಮೌಲ್ಯಮಾಪನ ಮಾಡಿರಲಿಲ್ಲ. ಹೀಗಾಗಿ, ನ್ಯಾಯಮೂರ್ತಿಗಳ ಆಯ್ಕೆ ಪ್ರಕ್ರಿಯೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದರು. ನ್ಯಾಯಮೂರ್ತಿಗಳ ನಡವಳಿಕೆಯನ್ನು ಸರಿಪಡಿಸಲು ಪದಚ್ಯುತಿ ಪ್ರಕ್ರಿಯೆಯ ಹೊರತಾಗಿ ಸೂಕ್ತ ಕಾನೂನು ವ್ಯವಸ್ಥೆಯಿಲ್ಲ ಎಂಬುದನ್ನೂ ಅವರು ಉಲ್ಲೇಖಿಸಿದ್ದರು.
ಸಂವಿಧಾನದ ಪ್ರಕಾರ, ಸಾಬೀತಾದ ದುರ್ನಡತೆ ಅಥವಾ ಅಸಮರ್ಥತೆಯ ಆಧಾರದಲ್ಲಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಹುದ್ದೆಯಿಂದ ತೆಗೆದುಹಾಕಲು ಸಂಸತ್ತಿನ ಮೂಲಕ ನಿಗದಿತ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.
ನ್ಯಾಯಾಲಯದ ಘನತೆಗೆ ಧಕ್ಕೆ ತರುವ ಕೃತ್ಯವನ್ನು ಅಪರಾಧವೆಂದು ಪರಿಗಣಿಸುವ ಕಾನೂನನ್ನು ಭಾರತವು ಬ್ರಿಟನ್ನಿಂದ ಪಡೆದಿದೆ. ಆದರೆ, ಬ್ರಿಟನ್ ಈಗಾಗಲೇ ಅಂತಹ ಅಪರಾಧದ ನಿಬಂಧನೆಯನ್ನು ರದ್ದುಗೊಳಿಸಿದೆ ಎಂಬುದನ್ನೂ ಇಬ್ಬರು ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದರು.
"ಈ ವಿಷಯದ ಬಗ್ಗೆ ಚರ್ಚಿಸಲು ದೇಶಕ್ಕೆ ಈಗ ಸಮಯ ಬಂದಿರಬಹುದು" ಎಂದು ಅವರು ಅಭಿಪ್ರಾಯಪಟ್ಟಿದ್ದರು.
►ಜೈಲಿನಿಂದ ಬಿಡುಗಡೆಯಾದ ಬಳಿಕ ರಾಜಕೀಯ ಪ್ರವೇಶ
2018ರ ಮೇ ತಿಂಗಳಲ್ಲಿ ಕರ್ಣನ್ 'ಭ್ರಷ್ಟಾಚಾರ ವಿರೋಧಿ ಡೈನಾಮಿಕ್ ಪಾರ್ಟಿ' ಎಂಬ ರಾಜಕೀಯ ಸಂಘಟನೆಯನ್ನು ಸ್ಥಾಪಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಜನೆಯನ್ನೂ ಪ್ರಕಟಿಸಿದ್ದರು.
2020ರ ಅಕ್ಟೋಬರ್ನಲ್ಲಿ ನ್ಯಾಯಮೂರ್ತಿಗಳು, ಅವರ ಕುಟುಂಬದವರು ಹಾಗೂ ಮಹಿಳಾ ವಕೀಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಒಳಗೊಂಡ ವಿಡಿಯೊಗಳನ್ನು ಕರ್ಣನ್ ಪ್ರಕಟಿಸಿದ್ದರು ಎಂಬ ಆರೋಪದ ಮೇಲೆ ಚೆನ್ನೈ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಮದ್ರಾಸ್ ಹೈಕೋರ್ಟ್ ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿನ ವಿಳಂಬವನ್ನು ಪ್ರಶ್ನಿಸಿದ ಬಳಿಕ ಡಿ. 2ರಂದು ಅವರನ್ನು ಬಂಧಿಸಲಾಗಿತ್ತು.
ನಿವೃತ್ತಿಯ ನಂತರ ತೀವ್ರ ಖಿನ್ನತೆಯಿಂದ ಬಳಲುತ್ತಿರುವುದಾಗಿ ಕರ್ಣನ್ ತಮ್ಮ ಜಾಮೀನು ಅರ್ಜಿಯಲ್ಲಿ ಮದ್ರಾಸ್ ಹೈಕೋರ್ಟ್ ಗೆ ತಿಳಿಸಿದ್ದರು. 2021ರ ಫೆಬ್ರವರಿಯಲ್ಲಿ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಅದೇ ವರ್ಷದ ಮಾರ್ಚ್ 23ರಂದು ಷರತ್ತುಬದ್ಧ ಜಾಮೀನು ನೀಡಿತ್ತು.
ಕರ್ಣನ್ ಅವರ ಬೆಂಬಲಿಗರ ಪ್ರಕಾರ, ನ್ಯಾಯಾಂಗದಲ್ಲಿನ ಜಾತಿ ತಾರತಮ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ನ ಅಭಿಪ್ರಾಯ ಬೇರೆಯಾಗಿತ್ತು. ಕರ್ಣನ್ ಯಾವುದೇ ಆಧಾರವಿಲ್ಲದೆ ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅಷ್ಟೇ ಅಲ್ಲ, ತಮ್ಮ ನ್ಯಾಯಮೂರ್ತಿ ಹುದ್ದೆಯ ಅಧಿಕಾರವನ್ನು ಬಳಸಿಕೊಂಡು ಆ ಆರೋಪಗಳನ್ನು ಮುಂದುವರಿಸಿದ್ದರು ಎಂಬುದು ಸುಪ್ರೀಂ ಕೋರ್ಟ್ನ ನಿಲುವಾಗಿತ್ತು.
ಕರ್ಣನ್ ಅವರ ನಡವಳಿಕೆಯನ್ನು ಸಮರ್ಥಿಸಲು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಅವರು ಬರೆದ ಪತ್ರಗಳು ಮತ್ತು ಹೊರಡಿಸಿದ್ದ ಆದೇಶಗಳನ್ನು ವಿವರವಾಗಿ ಉಲ್ಲೇಖಿಸಿತ್ತು.
ಇದೇ ವೇಳೆ, ಮದ್ರಾಸ್ ಹೈಕೋರ್ಟ್ ನಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ ಎಂದು ಕರ್ಣನ್ ಆರಂಭದಲ್ಲಿ ಸಲ್ಲಿಸಿದ್ದ ದೂರಿನ ಬಗ್ಗೆ ಯಾವುದೇ ದಾಖಲಾದ ವಿಚಾರಣೆ ನಡೆದಿರಲಿಲ್ಲ. ಹೀಗಾಗಿ, ಆ ಆರೋಪಗಳ ಸತ್ಯಾಸತ್ಯತೆ ಪರಿಶೀಲನೆಗೆ ಒಳಪಡದೆ ಉಳಿದಿದ್ದವು.
►'ಪ್ರಜಾಪ್ರಭುತ್ವದಲ್ಲಿ ಆರೋಪಿಗೂ ನ್ಯಾಯಯುತ ಅವಕಾಶ ಸಿಗಬೇಕು'
ಸುಪ್ರೀಂ ಕೋರ್ಟ್ ನ ವಕೀಲ ಎಂ.ಪಿ. ರಾಜು ಅವರು ಆ ಸಂದರ್ಭದಲ್ಲಿ ಬರೆದ ಲೇಖನದಲ್ಲಿ ಮಹಾಭಾರತದ ಕರ್ಣನ ಪ್ರಸಂಗವನ್ನು ಉಲ್ಲೇಖಿಸಿದ್ದರು.
ಮಹಾಭಾರತದಲ್ಲಿ ಕರ್ಣನ ರಥದ ಚಕ್ರ ನೆಲದಲ್ಲಿ ಸಿಲುಕಿಕೊಂಡಾಗ ಅದನ್ನು ಹೊರತೆಗೆಯಲು ಸಮಯಾವಕಾಶ ನೀಡುವಂತೆ ಆತ ಮನವಿ ಮಾಡಿದ್ದ. ಆದರೆ, ಆ ಮನವಿಯನ್ನು ತಿರಸ್ಕರಿಸಲಾಗಿತ್ತು. ರಥದ ಚಕ್ರವನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾಗಲೇ ಕರ್ಣನನ್ನು ಕೊಲ್ಲಲಾಗಿತ್ತು ಎಂದು ಅವರು ನೆನಪಿಸಿದ್ದರು.
ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಪಿಗಳಿಗೂ ತಮ್ಮ ವಾದ ಮಂಡಿಸಲು ನ್ಯಾಯಯುತ ಅವಕಾಶ ಕಲ್ಪಿಸಬೇಕು. ಮಹಾಕಾವ್ಯದಲ್ಲಿ ಕರ್ಣನಿಗೆ ಅಂತಹ ಅವಕಾಶ ಸಿಗದಿದ್ದರೂ, ಪ್ರಜಾಪ್ರಭುತ್ವದಲ್ಲಿ ಅದು ದೊರೆಯಬೇಕು ಎಂದು ಅವರು ಪ್ರತಿಪಾದಿಸಿದ್ದರು.
ಕರ್ಣನ್ ಅವರ ನಿಧನದ ವೇಳೆಯಲ್ಲೂ ನ್ಯಾಯಮೂರ್ತಿಗಳಾದ ಚೆಲಮೇಶ್ವರ್ ಮತ್ತು ಗೊಗೊಯ್ ಪ್ರಸ್ತಾಪಿಸಿದ್ದ ಪ್ರಮುಖ ಚರ್ಚೆ ಮುಂದುವರಿದಿತ್ತು. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಮತ್ತು ಅವರನ್ನು ಪದಚ್ಯುತಗೊಳಿಸುವ ಹಂತಕ್ಕೆ ಹೋಗದೆಯೇ ಅವರ ತಪ್ಪುಗಳನ್ನು ಸರಿಪಡಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಈ ಚರ್ಚೆಯ ಪ್ರಮುಖ ವಿಷಯವಾಗಿತ್ತು.
ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡುವುದರ ಜತೆಗೆ ನ್ಯಾಯಮೂರ್ತಿಗಳ ಹೊಣೆಗಾರಿಕೆಯನ್ನು ಖಾತರಿಪಡಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಕರ್ಣನ್ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ತಂದಿತ್ತು.
*ವಿ. ವೆಂಕಟೇಸನ್ ಅವರು 'ಸುಪ್ರೀಂ ಕೋರ್ಟ್ ಅಬ್ಸರ್ವರ್'ನಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.
ಸೌಜನ್ಯ: frontline.thehindu.com






