ಸರಕಾರ vs ರಾಜ್ಯಪಾಲ: ಸರಕಾರದ ಭಾಷಣ ಓದಲು ನಿರಾಕರಿಸಿ ತಮ್ಮದೇ ಭಾಷಣ ಓದಿ ಹೊರನಡೆದ ಗೆಹ್ಲೋಟ್; ವಿಧಾನಸಭೆಯಲ್ಲೇನೇನಾಯ್ತು?

ಸರಕಾರ ಸಿದ್ಧಪಡಿಸಿದ ಭಾಷಣವನ್ನು ವರ್ಷದ ಆರಂಭದಲ್ಲಿ ನಡೆಯುವ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಓದುವ ಮೂಲಕ ಇಡೀ ವರ್ಷದ ಕಲಾಪಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ನಿರಾಕರಿಸಿದ್ದಾರೆ. ಜಂಟಿ ಅಧಿವೇಶನದಲ್ಲಿ ಇಂದು (ಗುರುವಾರ)ಗೆಹ್ಲೋಟ್ ಅವರು ತಾವೇ ಸಿದ್ಧಪಡಿಸಿದ ಎರಡು ಸಾಲಿನ ಭಾಷಣವನ್ನು ಓದಿ ಸದನದಿಂದ ಹೊರನಡೆದಿದ್ದಾರೆ. ಮನರೇಗಾ ಯೋಜನೆಯ ಹೆಸರನ್ನು ಬದಲಾವಣೆ ಮಾಡಿದ ಕೇಂದ್ರ ಸರಕಾರದ ಕ್ರಮ ಖಂಡಿಸಿ, ರಾಜ್ಯ ಸರಕಾರ ಜನವರಿ 31ರವರೆಗೆ ವಿಧಾನಮಂಡಲದ ವಿಶೇಷ ಅಧಿವೇಶನವನ್ನು ಕರೆದಿದೆ. ಆದಾಗ್ಯೂ, MGNREGA ಯೋಜನೆಯನ್ನು ಪರಿಷ್ಕರಿಸುವ ಗುರಿಯನ್ನು ಹೊಂದಿರುವ ವಿವಾದಾತ್ಮಕ ಶಾಸನವನ್ನು ಉಲ್ಲೇಖಿಸುವ ನಿರ್ದಿಷ್ಟ ಪ್ಯಾರಾಗಳಿಗೆ ರಾಜ್ಯಪಾಲ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಭಾಷಣವು ಸರಕಾರದ ಪ್ರಚಾರಕ್ಕೆ ಸಮನಾಗಿದೆ ಎಂದು ಹೇಳಿದ್ದರು.
ರಾಜ್ಯಪಾಲರು Vs ಕರ್ನಾಟಕ ಸರಕಾರ
ಅಧಿವೇಶನ ಆರಂಭವಾಗುವ ಮುನ್ನಾದಿನ (ಬುಧವಾರ ) ರಾಜ್ಯ ಸರಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಕೇಂದ್ರ ಸರಕಾರವನ್ನು ಟೀಕಿಸುವ ಅಂಶಗಳಿವೆ ಎಂಬ ಆಕ್ಷೇಪ ಎತ್ತಿದ ಗೆಹ್ಲೋಟ್ ಜಂಟಿ ಅಧಿವೇಶನದಲ್ಲಿ ಭಾಷಣ ಓದಲು ನಿರಾಕರಿಸಿದ್ದರು. ಆಮೇಲೆ ಸಾಂವಿಧಾನಿಕ ಬಿಕ್ಕಟ್ಟು ತಪ್ಪಿಸಲು ಹಲವು ಸುತ್ತಿನ ಚರ್ಚೆಗಳು ನಡೆದಿವೆ. ಚರ್ಚೆಗಳ ನಂತರ ಭಾಷಣದಲ್ಲಿ ‘ವಿಬಿ ಜಿ ರಾಮ್ ಜಿ ಕಾಯ್ದೆ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಡುತ್ತದೆ’ ಹಾಗೂ ‘ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುತ್ತದೆ’ ಎಂಬ ಅಂಶವನ್ನು ಕೈಬಿಡಲು ಸರಕಾರ ತೀರ್ಮಾನಿತ್ತು.
ಇಂದು ವಿಧಾನಸೌಧಕ್ಕೆ ಬಂದ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಬರಮಾಡಿಕೊಂಡರು. ಆಮೇಲೆ ರಾಜ್ಯ,ಪಾಲರು ಸರಕಾರದ ಭಾಷಣವನ್ನು ಓದುವುದು ಬಿಟ್ಟು ತಾವೇ ಸಿದ್ದಪಡಿಸಿದ ಎರಡು ಸಾಲಿನ ಭಾಷಣವನ್ನು ಓದಿ ಮುಗಿಸಿ ಸದನದಿಂದ ಹೊರನಡೆದರು. ರಾಜ್ಯಪಾಲರು ಸದನದಿಂದ ಹೊರಗೆ ಹೋಗುತ್ತಿದ್ದಂತೆ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯರಾದ ಎಸ್. ರವಿ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕೆಲವು ಶಾಸಕರು ತಡೆಯಲು ಮುಂದಾದರು.
ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಶಾಸಕರು ಘೋಷಣೆ ಕೂಗಿದರು. ನಂತರ ಸಭಾಧ್ಯಕ್ಷ ಯು.ಟಿ. ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರನ್ನು ಬೀಳ್ಕೊಟ್ಟರು.
ರಾಜ್ಯಪಾಲರ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ: ಸಿದ್ದರಾಮಯ್ಯ
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಸಿಎಂ ಸಿದ್ದರಾಮಯ್ಯ ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಅವರ ಈ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಇದನ್ನು ನಾವು ಖಂಡಿಸುತ್ತೇವೆ. ಈ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇಂದು ವರ್ಷದ ಮೊದಲ ಜಂಟಿ ಅಧಿವೇಶನ ಮತ್ತು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ರದ್ದುಪಡಿಸಿ, ವಿಬಿಜಿ ರಾಮ್ ಜಿ ( ವಿಕಸಿತ ಭಾರತ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಎಂಬ ಕಾಯ್ದೆಯನ್ನು ಕೇಂದ್ರ ಸರಕಾರ ಹೊಸದಾಗಿ ರಚಿಸಿದೆ. ಇದಕ್ಕೆ ನಮ್ಮ ಸರಕಾರದ ತೀವ್ರ ವಿರೋಧವಿದೆ. ಆದರೆ ರಾಜ್ಯಪಾಲರು ಹೊಸ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರು ಕೇಂದ್ರದ ಕಾಯ್ದೆಗಳಿಗೆ ನಾವು ಸಹಕರಿಸಲೇಬೇಕೆಂಬ ನೀತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಆಡಳಿತ ಪಕ್ಷವಾಗಿ ನಮಗೆ ಅದರ ಬಗ್ಗೆ ವಿರೋಧವಿದ್ದು, ಈ ವಿಚಾರಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು ಎಂದರು.
ಮನರೇಗಾ ಕಾಯ್ದೆಯನ್ನು ಮರುಸ್ಥಾಪಿಸುವುದು ಮತ್ತು ಹೊಸ ಕಾಯ್ದೆಯನ್ನು ರದ್ದುಗೊಳಿಸಬೇಕೆಂಬುದು ನಮ್ಮ ಉದ್ದೇಶ. ನಮ್ಮ ಪಕ್ಷ ಮತ್ತು ಸರಕಾರದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಮನರೇಗಾ ಮರುಸ್ಥಾಪನೆ ಮಾಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೆ, ತಾವೇ ಸಿದ್ಧಪಡಿಸಿದ ಭಾಷಣವನ್ನು ಓದುವ ಮೂಲಕ ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನದ ಕಲಂ 176 ಮತ್ತು 163 ರಂತೆ ಸಚಿವ ಸಂಪುಟ ಭಾಷಣವನ್ನು ಓದಲೇಬೇಕಾಗಿದ್ದು ವಾಸ್ತವ ಅಂಶ. ಇದು ಸಂವಿಧಾನ ಸ್ಥಾಪನೆಯಾದಾಗಿನಿಂದ ನಡೆದುಕೊಂಡು ಬಂದಿರುವ ಪದ್ಧತಿ. ರಾಜ್ಯಪಾಲರ ಈ ನಡೆ, ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಸಂವಿಧಾನಬದ್ಧವಾದ ವಿಚಾರದ ಉಲ್ಲಂಘನೆಯಾಗಿದೆ. ಇದನ್ನು ನಮ್ಮ ಪಕ್ಷ ಮತ್ತು ಸರಕಾರ, ಶಾಸಕರು, ಎಂಎಲ್‌ಸಿ ಗಳು ಪ್ರತಿಭಟನೆ ಮೂಲಕ ವಿರೋಧಿಸುತ್ತೇವೆ ಎಂದರು.
ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೇಂದ್ರ ಸರಕಾರ ತಾವು ಮಾಡಿದ ತಪ್ಪನ್ನು ಮರೆಮಾಚಲು ರಾಜ್ಯಪಾಲರ ಕೈಯಲ್ಲಿ ಬೇರೆ ಭಾಷಣವನ್ನು ಓದಿಸಿದ್ದಾರೆ. ಇದು ಸಂವಿಧಾನ ಬಾಹಿರ ಕೃತ್ಯ. ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಪಾಲನೆ ಮಾಡಿಲ್ಲ. ಸರಕಾರ ಸಿದ್ಧಪಡಿಸಿರುವ ಭಾಷಣದ ಪ್ರತಿಯನ್ನು ಎಲ್ಲ ಶಾಸಕರು ಎಂಎಲ್ ಸಿಗಳಿಗೆ ವಿತರಿಸಲಾಗಿದೆ. ಇದರ ಬಗ್ಗೆ ಚರ್ಚಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯಾಗಿದೆ: ಪ್ರಿಯಾಂಕ್ ಖರ್ಗೆ
ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ 176 ಮತ್ತು 163 ನೇ ವಿಧಿಯನ್ನು ಯಾರು ಉಲ್ಲಂಘಿಸುತ್ತಿದ್ದಾರೆ? ನಮ್ಮ ರಾಜ್ಯಪಾಲರ ಭಾಷಣದಲ್ಲಿರುವುದೆಲ್ಲಾ ಸತ್ಯಗಳು. ಅಲ್ಲಿ ಒಂದೇ ಒಂದು ಸುಳ್ಳೂ ಇಲ್ಲ, ಆದರೂ ರಾಜ್ಯಪಾಲರು ಅದನ್ನು ಓದಲು ಬಯಸುವುದಿಲ್ಲ. ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯಾಗಿದೆಯೇ? ಎಂದು ಕೇಳಿದ್ದಾರೆ.
ಭಾಷಣ ಓದುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯ. ಆ ಭಾಷಣ ರಾಜ್ಯ ಹಿತಾಸಕ್ತಿಯ ವಿಷಯಗಳನ್ನು ಮಾತ್ರ ಒಳಗೊಂಡಿದೆ. ಇದನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಮಂಡಿಸಲಾಗಿದೆ. ಹಾಗೆ ಮಾಡುವುದು ಅವರ ಸಾಂವಿಧಾನಿಕ ಆದೇಶ. ಅವರು ಅದರಿಂದ ಹಿಂದೆ ಸರಿಯುತ್ತಿರುವುದೇಕೆ ಎಂದು ನನಗೆ ತಿಳಿದಿಲ್ಲ. ಒಂದು ಪ್ಯಾರಾಗ್ರಾಫ್ ಸುಳ್ಳು ಅಥವಾ ಕಟ್ಟುಕತೆ ಆಗಿದ್ದರೂ, ಅದನ್ನು ಓದಬೇಡಿ. ಈ 11 ಪ್ಯಾರಾಗ್ರಾಫ್‌ಗಳು ಈಗಾಗಲೇ ಸಾರ್ವಜನಿಕವಾಗಿ ಚರ್ಚೆಯಾಗುತ್ತಿವೆ. ಅದೇ ಪ್ಯಾರಾಗಳನ್ನು ಪ್ರಧಾನಿ, ಹಣಕಾಸು ಸಚಿವರು ಮತ್ತು RDPR ಸಚಿವರಿಗೆ ಸಲ್ಲಿಸಲಾಗಿದೆ.ಇದರಲ್ಲಿ ತಪ್ಪೇನಿದೆ? ಇದು ಈಗಾಗಲೇ ಸಾರ್ವಜನಿಕ ವಲಯದಲ್ಲಿದೆ. ಅವರು ಸಾರ್ವಜನಿಕರ ಕಾಳಜಿಗಳನ್ನು ಹೇಳುತ್ತಿದ್ದಾರೆ ಅಷ್ಟೆ. ಅವರಿಗೆ ಕರ್ನಾಟಕದ ಜನರ ಬಗ್ಗೆ ಕಾಳಜಿ ಇಲ್ಲದೇ ಇದ್ದರೆ ಅವರು ಎಲ್ಲಿ ಬೇಕಾದರೂ ಹೋಗಲು ಸ್ವತಂತ್ರರು. ರಾಜ್ಯಪಾಲರು ರಾಜ್ಯದ ಕಾಳಜಿಗಳ ಕುರಿತಾದ ಭಾಷಣವನ್ನು ಓದಲು ಬಯಸದಿದ್ದರೆ, ಭಾಷಣವನ್ನು ಸಾರ್ವಜನಿಕಗೊಳಿಸಬೇಕು. ಇದರಿಂದ ಅವರು ಅದು ಸತ್ಯವೋ ಅಥವಾ ಕಟ್ಟುಕತೆಯೋ ಎಂದು ನಿರ್ಧರಿಸಬಹುದು ಎಂದು ಖರ್ಗೆ ಹೇಳಿದ್ದಾರೆ.
ಯಾರು ಏನು ಹೇಳಿದ್ರು
ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ದಿನ. ಸಂವಿಧಾನದ ರಕ್ಷಕನಾಗಬೇಕಾದ ರಾಜ್ಯಪಾಲರು ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಅವರು ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಬಾಧ್ಯಸ್ಥರು. ಅವರು ಸಂವಿಧಾನವನ್ನು ಅವಮಾನಿಸಿದ್ದಾರೆ. ನಾವು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ರಾಜ್ಯ ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಈ ಮಧ್ಯೆ, ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ರಾಜ್ಯಪಾಲರು ಮತ್ತು ರಾಜ್ಯ ಸರಕಾರದ ನಡುವಿನ ಸಂಘರ್ಷದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಖಾದರ್, ಸಾಂವಿಧಾನಿಕ ಸಂಸ್ಥೆಗಳು ಪರಸ್ಪರ ಬೆಂಬಲಿಸುತ್ತವೆ. ರಾಜ್ಯಪಾಲರ ಕಚೇರಿ ಒಂದು ಸಾಂವಿಧಾನಿಕ ಸಂಸ್ಥೆ. ಅವು ಒಟ್ಟಾಗಿ ಕೆಲಸ ಮಾಡುತ್ತವೆ. ರಾಜ್ಯಪಾಲರು ಮತ್ತು ಸರಕಾರದ ನಡುವೆ ಯಾವುದೇ ಸಂಘರ್ಷವಿಲ್ಲ ಎಂದಿದ್ದಾರೆ.
11 ಪ್ಯಾರಾಗಳಿಗೆ ರಾಜ್ಯಪಾಲ ಆಕ್ಷೇಪ
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅನುಮೋದನೆಗೊಂಡಿರುವ ಭಾಷಣದಲ್ಲಿರುವ 11 ಪ್ಯಾರಾಗಳಿಗೆ ರಾಜ್ಯಪಾಲರು ಗೆಹ್ಲೋಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಭಾಷಣವನ್ನು ಯಥಾವತ್ ಓದಲು ನಿರಾಕರಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಯವರ ಸಲಹೆ ಮೇರೆಗೆ ಕಾನೂನು ಸಚಿವ ಎಚ್.ಕೆ.ಪಾಟೀಲ್, ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಬುಧವಾರ ಸಂಜೆ ಲೋಕಭವನಕ್ಕೆ ಭೇಟಿ ನೀಡಿ ರಾಜ್ಯಪಾಲರ ಮನವೊಲಿಕೆಗೆ ಪ್ರಯತ್ನಿಸಿದ್ದರು.
ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಎಚ್.ಕೆ. ಪಾಟೀಲ್, ‘ರಾಜ್ಯಪಾಲರು ಸರಕಾರ ಸಿದ್ಧಪಡಿಸಿರುವ ಭಾಷಣ ಓದಬೇಕು ಎಂಬುದನ್ನು ಸಂವಿಧಾನದ 176 ವಿಧಿ ಹೇಳುತ್ತದೆ. ಇದು ರಾಷ್ಟ್ರಪತಿ, ರಾಜ್ಯಪಾಲರಿಗೂ ಅನ್ವಯ. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಈ ಎಲ್ಲ ವಿಷಯಗಳನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಲಾಗಿದೆ. ಈ ಬಗ್ಗೆ ಜಂಟಿ ಸದನದಲ್ಲಿ ತಿಳಿಸಬಾರದು ಅಂದರೆ ಹೇಗೆ?. ರಾಜ್ಯದ ಕಲ್ಯಾಣದ ದೃಷ್ಟಿಯಿಂದ ಹಲವು ಅಂಶಗಳನ್ನು ಭಾಷಣದಲ್ಲಿ ಸೇರಿಸಿದ್ದೇವೆ. ಜಂಟಿ ಅಧಿವೇಶನಕ್ಕೆ ರಾಜ್ಯಪಾಲರು ಬರುವುದಿಲ್ಲ ಎಂದು ಹೇಳಿಲ್ಲ. ಭಾಷಣದಲ್ಲಿರುವ 11 ಪ್ಯಾರಾಗಳನ್ನು ಬದಲಿಸುವಂತೆ ಹೇಳಿದ್ದಾರೆ ಎಂದಿದ್ದರು.
ಭಾಷಣ ಮೊಟಕುಗೊಳಿಸಿದ್ದು ಇದೇ ಮೊದಲಲ್ಲ
ಕರ್ನಾಟಕದ ಸಂಸದೀಯ ಇತಿಹಾಸದಲ್ಲಿ ಸರಕಾರ ಸಿದ್ಧಪಡಿಸಿದ ಪೂರ್ಣ ಭಾಷಣ ಓದದೆ ಭಾಷಣವನ್ನು ಅರ್ಧದಲ್ಲಿ ಮೊಟಕುಗೊಳಿಸಿ ರಾಜ್ಯಪಾಲರು ಹೊರ ನಡೆದ ಘಟನೆ ಎರಡು ಬಾರಿ ನಡೆದಿದೆ. 1996–99 ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂ ಖಾನ್, ಭಾಷಣದ ಮೊದಲ ಮತ್ತು ಕೊನೆಯ ಪ್ಯಾರಾಗಳನ್ನಷ್ಟೇ ಓದಿದ್ದರು. 2008–11 ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಸರಕಾರ ಸಿದ್ಧಪಡಿಸಿದ ಭಾಷಣವನ್ನು ಎರಡು ನಿಮಿಷ ಓದಿದ್ದರು. ನಂತರ ಸದನದಲ್ಲಿ ಮಂಡಿಸಲಾಗಿದೆ ಎಂದು ಹೇಳಿ ಹೊರನಡೆದಿದ್ದರು.
ರಾಜ್ಯದೊಂದಿಗೆ ರಾಜ್ಯಪಾಲರ ಜಟಾಪಟಿ
ರಾಜ್ಯಪಾಲರು ಮತ್ತು ಸರಕಾರಗಳ ನಡುವಿನ ಸಂಘರ್ಷಗಳು ಹೊಸ ಸಂಗತಿಯೇನೂ ಅಲ್ಲ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲಿಯೂ ಲೋಕಭವನ ಮತ್ತು ಸರಕಾರ ನಡುವೆ ಸಂಘರ್ಷಗಳು ಆಗಾಗ ನಡೆಯುತ್ತಿರುತ್ತವೆ. ಮಸೂದೆ ಅಂಗೀಕಾರಕ್ಕೆ ವಿಳಂಬ,.ಕುಲಪತಿಗಳ ನೇಮಕ ಮೊದಲಾದ ವಿಷಯಗಳಲ್ಲಿ ರಾಜ್ಯಪಾಲರು ತಕರಾರು ತೆಗೆಯುವುದುಂಟು. ಎರಡು ದಿನಗಳ ಹಿಂದೆಯಷ್ಟೇ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಭಾಷಣದಲ್ಲಿನ "ತಪ್ಪುಗಳನ್ನು" ಉಲ್ಲೇಖಿಸಿ ಭಾಷಣ ಮಾಡದೆ ರಾಜ್ಯ ವಿಧಾನಸಭೆಯಿಂದ ಹೊರನಡೆದಿದ್ದರು. ಇದಕ್ಕೂ ಮೊದಲು, ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಕೂಡ ಸರಕಾರ ಸಿದ್ಧಪಡಿಸಿದ ಭಾಷಣದ ಕೆಲವು ಭಾಗಗಳನ್ನು ಕೈಬಿಟ್ಟಿದ್ದಾರೆ, ಕೆಲವು ವಾಕ್ಯಗಳನ್ನು ಸೇರಿಸಿದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ. ಕೆಲವೊಂದು ಪ್ಯಾರಾಗಳನ್ನು ತೆಗೆದುಹಾಕುವಂತೆ ರಾಜಭವನ ಸೂಚಿಸಿತ್ತು. ಆದರೆ ಸೂಚಿಸಿದ ಬದಲಾವಣೆಗಳನ್ನು ಭಾಷಣದಲ್ಲಿ ಮಾಡಿಲ್ಲ ಎಂದು ಪಿಣರಾಯಿ ಅವರ ಆರೋಪಕ್ಕೆ ರಾಜಭವನ ಪ್ರತಿಕ್ರಿಯಿಸಿದೆ.
ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಬರೆದುಕೊಟ್ಟಿದ್ದ ಭಾಷಣದ ಮುಖ್ಯಾಂಶಗಳು
ನನ್ನ ಸರ್ಕಾರವು ಅಭಿವೃದ್ಧಿ, ಸಾಮಾಜಿಕ ನ್ಯಾಯ, ಹಣಕಾಸಿನ ಶಿಸ್ತು, ಪ್ರಾದೇಶಿಕ ನ್ಯಾಯ, ಜನಸ್ನೇಹಿ ಆಡಳಿತ, ಕಾನೂನು ಸುವ್ಯವಸ್ಥೆ ಮುಂತಾದವುಗಳಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡುತ್ತಿದೆ. ಪರಿಣಾಮಕಾರಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಿರುವ ರಾಜ್ಯಗಳಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಹಾಗೂ ಇಂಡಿಯಾ ಜಸ್ಟೀಸ್ -2025 ರ ವರದಿ ಪ್ರಕಾರ ಪೊಲೀಸ್ ಮತ್ತು ನ್ಯಾಯದಾನ ವ್ಯವಸ್ಥೆ ರೂಪಿಸಿರುವ ದೇಶದ ಮಧ್ಯಮ ಮತ್ತು ದೊಡ್ಡ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಸಾಮಾಜಿಕ ಆರ್ಥಿಕ ಅಭಿವೃದ್ಧಿ, ಜನಸ್ನೇಹಿ ಕಾನೂನುಗಳ ರಚನೆ, ಕೈಗಾರಿಕಾ ಪರವಾದ ನೀತಿಗಳ ರಚನೆ ಮತ್ತು ಅನುಷ್ಠಾನ, ಸುಸಂಬದ್ಧವಾದ ಸಾರಿಗೆ ವ್ಯವಸ್ಥೆ, ಸರ್ಕಾರದ ಅಧೀನದ ಸಂಸ್ಥೆಗಳ ಕಾರ್ಯವೈಖರಿ, ಪೊಲೀಸು, ನ್ಯಾಯ ವ್ಯವಸ್ಥೆ ಮುಂತಾದವುಗಳಲ್ಲಿ ಕರ್ನಾಟಕವು ಇಂದು ದೇಶದಲ್ಲಿ ಹಲವು ಮಾದರಿಗಳನ್ನು ಸೃಷ್ಟಿಸಿದೆ.
ರಾಜ್ಯವು ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಮತ್ತು ನೀತಿಕಾರಕ ವಿಚಾರಗಳಲ್ಲಿ ದಮನಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತೆರಿಗೆ ಪಾಲು, ಕೇಂದ್ರ ಪುರಸ್ಕೃತ ಯೋಜನೆಗಳು, ಕೇಂದ್ರದ ಯೋಜನೆಗಳು, ವಿಶೇಷ ಯೋಜನೆಗಳು ಮುಂತಾದವುಗಳಲ್ಲಿ ಅನ್ಯಾಯಗಳಿಗೆ ತುತ್ತಾಗಿದೆ. ದೇಶದ ಆರ್ಥಿಕತೆಯಲ್ಲಿ ಚಾಲಕ ಸ್ಥಾನದಲ್ಲಿರುವ ಕರ್ನಾಟಕವನ್ನು ಆರ್ಥಿಕವಾಗಿ ಗಮನಿಸಿದರೆ ಅದರ ಪರಿಣಾಮ ಇಡೀ ದೇಶದ ಮೇಲೆ ಉಂಟಾಗುತ್ತದೆ ಎಂಬುದನ್ನು ಒಕ್ಕೂಟ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕಾಗಿದೆ. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಸುಮಾರು 1.25 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ಸಂಪನ್ಮೂಲಗಳು ರಾಜ್ಯಕ್ಕೆ ಸಿಗದೆ ವಂಚನೆಯಾಗಿದೆ ಎಂಬುದನ್ನು 16ನೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಈ ಅನ್ಯಾಯವು ಸರಿಯಾಗಬಹುದೆಂಬುದು ಸರ್ಕಾರದ ಖಚಿತ ನಂಬುಗೆಯಾಗಿದೆ.
“ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ” ಕಾಯ್ದೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಆ ಮೂಲಕ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು, ಸಣ್ಣ ರೈತರ, ಮಹಿಳೆಯರ ಉದ್ಯೋಗದ ಮತ್ತು ನಿರುದ್ಯೋಗ ಭತ್ಯೆಯ ಹಕ್ಕನ್ನು ಕಸಿದುಕೊಂಡಿದೆ. “ಮನರೇಗಾ" ಕಾಯ್ದೆಯ ರದ್ಧತಿಯ ಮೂಲಕ ಭಾರತೀಯ ಗ್ರಾಮೀಣ ಬದುಕನ್ನು ದುರ್ಬಲಗೊಳಿಸಲಾಗಿದೆ.
ಮನರೇಗಾ ಕಾಯ್ದೆಯು ಖಾತ್ರಿ ಮಾಡಿದ್ದ ಉದ್ಯೋಗದ ಖಾತ್ರಿಯನ್ನು ಹೊಸ ವಿಬಿ ಗ್ರಾಮ್ ಜಿ ಕಾಯ್ದೆಯು ಕಿತ್ತುಕೊಂಡಿದೆ. ಮನರೇಗಾ ಕಾಯ್ದೆಯ ಸೆಕ್ಷನ್ 3 ರ ಪ್ರಕಾರ ಯಾವುದೇ ಪಂಚಾಯಿತಿಯಲ್ಲಿ ಉದ್ಯೋಗ ನೀಡಬೇಕೆಂದು ಅರ್ಜಿ ಹಾಕಿದ ಪ್ರತಿಯೊಬ್ಬರಿಗೂ ಉದ್ಯೋಗ ನೀಡಬೇಕೆಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಬೇಡಿಕೆಯನ್ನು ಆಧರಿಸಿ ಉದ್ಯೋಗ ನೀಡಬೇಕೆಂಬ ತತ್ವವನ್ನು ಧ್ವಂಸ ಮಾಡಿ ಪೂರೈಕೆ ಆಧಾರಿತ ಯೋಜನೆ ಮಾಡಲಾಗಿದೆ. ಕಾರ್ಪೊರೇಟ್ ಬಂಡವಾಳಿಗರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ, ʼವಿಬಿ ಗ್ರಾಮ್ ಜಿʼ ಯೋಜನೆಯನ್ನು ರೂಪಿಸಲಾಗಿದೆ. ಆ ಮೂಲಕ ಗ್ರಾಮೀಣ ಜನರ ಹಿತಾಸಕ್ತಿಯನ್ನು ಗಾಳಿಗೆ ತೂರಲಾಗಿದೆ.
ಇದರಿಂದಾಗಿ ಗ್ರಾಮೀಣ ಆಸ್ತಿ ಸೃಜನೆಯ ಮೇಲೆ ಮತ್ತು ಕೂಲಿಕಾರರು ಅವರು ಇರುವ ಸ್ಥಳಗಳಲ್ಲಿಯೇ ಉದ್ಯೋಗ ಒದಗಿಸಬೇಕೆಂಬ ಘನವಾದ ಉದಾತ್ತ ಉದ್ದೇಶಗಳನ್ನು ತರಗೆಲೆಗಳಂತೆ ಉದುರಿಸಲಾಗಿದೆ. ಇಂತಹ ಪ್ರಗತಿ ವಿರೋಧಿ ಕ್ರಮವನ್ನು ನನ್ನ ಸರ್ಕಾರ ಬಲವಾಗಿ ಖಂಡಿಸುತ್ತದೆ. ಹೆಸರಾಂತ ಮನರೇಗಾ ರಾಷ್ಟ್ರದಾದ್ಯಂತ ಪ್ರಸಿದ್ಧಿ ಪಡೆದಿತ್ತು. ಪ್ರಗತಿಯ ಪ್ರತೀಕವಾಗಿತ್ತು ಎಂಬುದನ್ನು ನೀರಿನಲ್ಲಿ ಹೋಮ ಮಾಡಿದಂತೆ ಕೇಂದ್ರ ಸರ್ಕಾರ ಈ ಯೋಜನೆಗೆ ತಿಲಾಂಜಲಿಯನ್ನಿಟ್ಟಿದೆ.
ಮನರೇಗಾ ಯೋಜನೆಯಲ್ಲಿದ್ದ ಗಾಂಧೀಜಿಯವರ ಪ್ರಧಾನ ಆಶಯವಾದ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಹೊಸ ಕಾಯ್ದೆಯು ದುರ್ಬಲಗೊಳಿಸಿದೆ. ರಾಷ್ಟ್ರದ ಪ್ರಜಾಸತ್ತೆಗೆ ಮೂಲಭೂತ ಅಡಿಪಾಯ ಒದಗಿಸುವ ಪಂಚಾಯತ್ ರಾಜ್ ಸಂಸ್ಥೆಗಳು ಅಧಿಕಾರ ವಿಕೇಂದ್ರಿಕರಣದ ಸಂಕೇತಗಳು. ಈ ವಿಕೇಂದ್ರಿಕೃತ ವ್ಯವಸ್ಥೆಯ ಅಡಿಪಾಯವನ್ನೇ ಬುಡಮೇಲು ಮಾಡಿ ಕೇಂದ್ರಿಕೃತ ವ್ಯವಸ್ಥೆಗೆ ಕೇಂದ್ರ ಸರ್ಕಾರವು ಬುನಾದಿ ಹಾಕಿದೆ.
ಮನರೇಗಾ ಕಾಯ್ದೆಯಲ್ಲಿ ಕಾಮಗಾರಿಗಳನ್ನು ಗ್ರಾಮ ಸಭೆಗಳಲ್ಲಿಟ್ಟು ತೀರ್ಮಾನ ಮಾಡಿ ಅನುಷ್ಠಾನ ಮಾಡಲಾಗುತ್ತಿತ್ತು. ಹೊಸ ಕಾಯ್ದೆಯಲ್ಲಿ ಗ್ರಾಮಸಭೆಗಳಿಗಿದ್ದ ಅಧಿಕಾರವನ್ನು ಕೇಂದ್ರ ಸರ್ಕಾರದ ಮಾನದಂಡಗಳ ಮೂಲಕ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕೇಂದ್ರದ ಈ ಕ್ರಮಗಳು ಕೇವಲ ಪ್ರಜಾಸತ್ತಾತ್ಮಕತೆಗೆ ವಿರೋಧಿ ಮಾತ್ರ ಅಲ್ಲ, ರಾಷ್ಟ್ರದ ಬಹುಪಾಲು ನಾಗರೀಕರ ಬೇಡಿಕೆಗಳನ್ನು ನಿರ್ಲಕ್ಷಿಸುವ ಮತ್ತು ರಾಷ್ಟ್ರದ ಹಿತಾಸಕ್ತಿಯನ್ನು ವಿನಾಶದ ಅಂಚಿಗೆ ದೂಡುವ ಪ್ರಗತಿ ವಿರೋಧಿ ಕ್ರಮವಾಗಿದೆ.
ನರೇಗಾ ಯೋಜನೆಯಿಂದಾಗಿ ಗುಳೆ ಹೋಗುವ ಸಮಸ್ಯೆ ಕಡಿಮೆಯಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ ನಿರ್ಧಾರಗಳನ್ನು ಕೇಂದ್ರದಿಂದ ಹೇರಲಾಗುತ್ತದೆ. ದೆಹಲಿಯಲ್ಲಿ ಅಧಿಕಾರಿಗಳ ಪರಿಷತ್ತನ್ನು ರಚಿಸಲಾಗುತ್ತದೆ. ಈ ಅಧಿಕಾರಿಗಳ ಪರಿಷತ್ತು ಯಾವ ಪಂಚಾಯಿತಿಗಳಲ್ಲಿ ಈ ಯೋಜನೆಗಳನ್ನು ಜಾರಿಗೆ ತರಬೇಕೆಂಬುದನ್ನು ನಿರ್ಣಯಿಸುತ್ತದೆ. ಉದ್ಯೋಗ ಅರಸಿ ದೊಡ್ಡ ದೊಡ್ಡ ಪಟ್ಟಣಗಳಿಗೆ ಗುಳೆ ಹೋಗುವ ಅಥವಾ ವಲಸೆ ಹೋಗುವ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ಈ ʼವಿಬಿ ಗ್ರಾಮ್ ಜಿʼ ಯೋಜನೆಯನ್ನು ನನ್ನ ಸರ್ಕಾರ ಅತ್ಯಂತ ಪ್ರಬಲವಾಗಿ ವಿರೋಧಿಸುತ್ತದೆ. ಮನರೇಗಾ ಕಾಯ್ದೆಯು ದಲಿತರು, ಆದಿವಾಸಿಗಳು, ಮಹಿಳೆಯರು, ಹಿಂದುಳಿದವರು, ರೈತಾಪಿ ಸಮುದಾಯಗಳ ಜನರ ಉದ್ಯೋಗದ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ.
ಉದ್ಯೋಗ ಖಾತ್ರಿಗೆ ಸಂಬಂಧಿಸಿದ ಕಾಯ್ದೆಯನ್ನು ರದ್ದುಗೊಳಿಸಿ ಹೊಸ ಕಾಯ್ದೆಯನ್ನು ಜಾರಿಗೊಳಿಸುವಾಗ ರಾಜ್ಯಗಳ ಅಭಿಪ್ರಾಯ ಪಡೆಯಬೇಕಾಗಿತ್ತು. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಗಳ ಪಾಲೂ ಇರುತ್ತದೆ. ಹೀಗಿರುವಾಗ ರಾಜ್ಯಗಳನ್ನು ಸಂಪರ್ಕಿಸದೆ ಜಾರಿಗೊಳಿಸಿರುವುದು ಸಂವಿಧಾನ ಬಾಹಿರ ನಡೆಯಾಗಿರುತ್ತದೆ.
ಮನರೇಗಾದಲ್ಲಿದ್ದ ಕಾರ್ಮಿಕ ಕೇಂದ್ರಿತ ಹಕ್ಕುಗಳನ್ನು ಮೊಟಕುಗೊಳಿಸಿ ಅವರನ್ನು ಗುತ್ತಿಗೆದಾರರ ಅಧೀನಕ್ಕೆ ನೀಡಲಾಗುತ್ತಿದೆ. ಬೆಲೆಯೇರಿಕೆ, ಹಣದುಬ್ಬರಗಳನ್ನು ಆಧರಿಸಿ ಕೂಲಿಯನ್ನು ಪರಿಷ್ಕರಿಸುತ್ತಿದ್ದ ಅವಕಾಶಗಳೂ ಹೊಸ ಕಾಯ್ದೆಯಲ್ಲಿ ಕ್ಷೀಣಿಸಿವೆ. ಇದರಿಂದ ಬಡ ಕೂಲಿ ಕಾರ್ಮಿಕರ ಸಾಮಾಜಿಕ ಭದ್ರತೆಯು ಇಲ್ಲವಾಗುತ್ತಿದೆ.
ಮನರೇಗಾದಿಂದ ಮಹಾತ್ಮ ಗಾಂಧೀಜಿಯವರ ಹೆಸರನ್ನು ತೆಗೆದು ಹಾಕಲಾಗಿದೆ. ಕೇಂದ್ರ ಸರ್ಕಾರದ ನೀತಿಗಳಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಜ್ಯ ಸರ್ಕಾರಗಳು ಹೊಸ ಕಾಯ್ದೆಯ ಪ್ರಕಾರ ಶೇ.40 ರಷ್ಟು ಅನುದಾನವನ್ನು ನೀಡಬೇಕಾಗುತ್ತದೆ. ರಾಜ್ಯವು ಅನುದಾನ ನೀಡದಿದ್ದರೆ ಕೇಂದ್ರವು ʼವಿಬಿ ಗ್ರಾಮ್ ಜಿʼ ಯೋಜನೆಗೆ ಅನುದಾನಗಳನ್ನು ನೀಡುವುದಿಲ್ಲ. ಹಾಗಾಗಿ ಯೋಜನೆಯು ನಿಧಾನವಾಗಿ ಅವಸಾನದ ಹಾದಿಯ ಕಡೆಗೆ ತೆರಳುತ್ತದೆ.
ಈ ಎಲ್ಲ ಕಾರಣಗಳಿಂದ ಕೇಂದ್ರ ಸರ್ಕಾರವು ತಂದಿರುವ ಗುತ್ತಿಗೆದಾರ ಕೇಂದ್ರಿತ, ಬೃಹತ್ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸುವ “ವಿಬಿ ಗ್ರಾಮ್ ಜಿ” ಕಾನೂನನ್ನು ತಕ್ಷಣ ರದ್ದುಪಡಿಸಿ, ಬಡವರ, ಕೃಷಿ ಕಾರ್ಮಿಕರ, ಗ್ರಾಮೀಣ ಆಸ್ತಿ ಸೃಜನೆಗೆ ಅವಕಾಶ ಕಲ್ಪಿಸುವ, ನಿರುದ್ಯೋಗಿ ಭತ್ಯೆ ಒದಗಿಸುವ ಕಾರ್ಮಿಕರು ಅವರಿರುವ ಸ್ಥಳದಲ್ಲಿಯೇ ಕೆಲಸ ಒದಗಿಸುವ “ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ”ಯನ್ನು ಮರು ಸ್ಥಾಪಿಸಬೇಕೆಂದು ನನ್ನ ಸರ್ಕಾರ ಕೇಂದ್ರವನ್ನು ಒತ್ತಾಯಿಸುತ್ತದೆ.
ಗ್ರಾಹಕ ಬೆಲೆ ಸೂಚ್ಯಂಕದ ಪ್ರಕಾರ ದೇಶದ ಬಹುತೇಕ ರಾಜ್ಯಗಳ ಜನರ ಕೊಳ್ಳುವ ಶಕ್ತಿಯು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವಾಗ ಕರ್ನಾಟಕದ ಜನರ ಕೊಳ್ಳುವ ಶಕ್ತಿಯು ನಿಗದಿತವಾದ ಆರ್ಥಿಕ ಮಾನದಂಡಗಳಿಗೆ ಅನುಗುಣವಾಗಿದೆ. ಇದಕ್ಕೆ ಮುಖ್ಯ ಕಾರಣ ʼಯೂನಿವರ್ಸಲ್ ಬೇಸಿಕ್ ಇನ್‌ಕಂʼ ಎಂಬ ತತ್ವವನ್ನಾಧರಿಸಿ ಕ್ರಾಂತಿಕಾರಕ ಮಾದರಿಯಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳೇ ಕಾರಣ ಎಂಬುದು ಸಾಬೀತಾಗಿದೆ.
ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಎಂಬ ಐದು ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಇವುಗಳಿಗೆ ಇದುವರೆಗೆ 1,16,706 ಕೋಟಿ ರೂಗಳನ್ನು ವಿನಿಯೋಗಿಸಲಾಗಿದೆ.
ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ನಗದು ವರ್ಗಾವಣೆ ಪಡೆದ ಕುಟುಂಬಗಳ ಪ್ರಮಾಣ 2022 ರಲ್ಲಿ ಶೇ.9.3 ರಷ್ಟಿದ್ದದ್ದು 2024ರ ವೇಳೆಗೆ ಅದು ಶೇ.72.7ಕ್ಕೆ ಏರಿಕೆಯಾಗಿದೆ. ಇದು ಗ್ಯಾರಂಟಿ ಯೋಜನೆಗಳ ಸಾರ್ಥಕತೆಗೆ ಸಾಕ್ಷಿಯಾಗಿದೆ.
'ಶಕ್ತಿ' ಯೋಜನೆಯು ಮಹಿಳೆಯರ ಬದುಕಿನಲ್ಲಿ ಅಪಾರ ಚೈತನ್ಯ ತಂದಿದೆ.ಈ ಯೋಜನೆಯಿಂದ ಪ್ರತಿ ಮಹಿಳೆಗೆ ಮಾಸಿಕ ಸರಾಸರಿ ರೂ.1,500 ರಿಂದ 2,000 ಉಳಿತಾಯವಾಗುತ್ತಿದೆ. ರಾಜ್ಯದಾದ್ಯಂತ ಶೇ.19 ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ.34ರಷ್ಟು ಮಹಿಳೆಯರು ಉತ್ತಮ ಸಂಬಳದ ಕೆಲಸಗಳನ್ನು ಪಡೆಯಲು ಈ ಯೋಜನೆ ನೆರವಾಗಿದೆ. ಶೇ.83 ರಷ್ಟು ಜನರು ಉತ್ತಮ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗಿದೆ.
ʼಹಸಿವು ಮುಕ್ತ ಕರ್ನಾಟಕʼದ ಕನಸನ್ನು ನನಸು ಮಾಡುತ್ತಿರುವ 'ಅನ್ನಭಾಗ್ಯ' ಯೋಜನೆಯಿಂದಾಗಿ ಶೇ.83 ರಷ್ಟು ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ಆದ ಉಳಿತಾಯದ ಹಣದಲ್ಲಿ ಬೇಳೆಕಾಳು, ತರಕಾರಿ, ಹಣ್ಣು, ಮೊಟ್ಟೆ ಮತ್ತು ಮಾಂಸ ಮುಂತಾದ ಗುಣ ಮಟ್ಟದ ಆಹಾರ ಪದಾರ್ಥಗಳನ್ನು ಖರೀದಿಸುವ ಮೂಲಕ ಕುಟುಂಬದ ಪೌಷ್ಠಿಕತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ʼಗೃಹಲಕ್ಷ್ಮಿʼ ಯೋಜನೆಯಿಂದ ಶೇ.80 ರಷ್ಟು ಮಹಿಳೆಯರು, ತಾವು ಹೆಚ್ಚು ಆರ್ಥಿಕವಾಗಿ ಸ್ವತಂತ್ರರಾಗಿರುವುದಾಗಿ ಹಾಗೂ ಕುಟುಂಬದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಶೇ.37 ರಷ್ಟು ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಹಣವನ್ನು ಕುಟುಂಬದ ಹಳೆಯ ಸಾಲ ಮರುಪಾವತಿಸಲು ಬಳಸುವ ಮೂಲಕ ಸಾಲ ಮುಕ್ತರಾಗುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಶೇ.89 ರಷ್ಟು ಫಲಾನುಭವಿಗಳು ಕೌಟುಂಬಿಕ ಸಂಬಂಧಗಳಲ್ಲಿ ಸುಧಾರಣೆ ಕಂಡಿದ್ದೇವೆ ಎಂದಿದ್ದಾರೆ.
ಯುವ ಜನತೆಗೆ ಆಸರೆಯಾಗಿರುವ 'ಯುವ ನಿಧಿ' ಯೋಜನೆಯ ಫಲವಾಗಿ ಶೇ.28ರಷ್ಟು ಯುವಕರು ಕೌಶಲ್ಯ ಕಲಿಕೆಯಲ್ಲಿ ತೊಡಗಿಸಿಕೊಂಡರೆ, ಶೇ.20ರಷ್ಟು ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ.
ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ 'ಗೃಹಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ'ಯನ್ನು ಸ್ಥಾಪಿಸಲಾಗಿದೆ.







