ಅಲರಂ ಫಾರ್ಮ್ ಪ್ರದೇಶದ KM1 ಆನೆಯನ್ನು ಸೆರೆಹಿಡಿಯಲು ಆದೇಶಿಸಿದ ಕೇರಳ ಸರಕಾರ; ಕಾರಣವೇನು?

ಸಾಂದರ್ಭಿಕ ಚಿತ್ರ | Photo Credit : PTI
ಕೆಎಂ1 ನಿಯಮಿತವಾಗಿ ವಸತಿ ಪ್ರದೇಶಗಳಿಗೆ ನುಗ್ಗುತ್ತಿದ್ದು, ತಡೆಗೋಡೆಗಳನ್ನು ಧ್ವಂಸಗೊಳಿಸುತ್ತಿದೆ. ಪ್ರಚೋದನೆಯೇ ಇಲ್ಲದೆ ಮನೆಗಳು ಮತ್ತು ಕೃಷಿ ಬೆಳೆಗಳಿಗೆ ಹಾನಿ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದು, ವಾಹನಗಳ ಮೇಲೂ ದಾಳಿ ಮಾಡಿದೆ.
ಕಣ್ಣೂರು ವಲಯದ ಅರಲಂ ಫಾರ್ಮ್ ಪ್ರದೇಶ ಮತ್ತು ಸಮೀಪದ ಪುನರ್ವಸತಿ ವಸತಿ ಪ್ರದೇಶಗಳಿಗೆ ಪದೇಪದೆ ಬರುತ್ತಿದ್ದ ಕೆಎಂ1 ಆನೆಯನ್ನು ಸೆರೆಹಿಡಿಯಲು ರಾಜ್ಯ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ವಿವರ ನೀಡಿದ ವಿದ್ಯುತ್, ಪರಿಸರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸನ್ನಿ ಜೋಸೆಫ್, “ಮಾನವ ವಸತಿ ಪ್ರದೇಶಗಳಿಂದ ದೂರದ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡುವ ಮೊದಲು ಆನೆಯನ್ನು ಶಾಂತಗೊಳಿಸಿ ರೇಡಿಯೋ ಕಾಲರ್ ಅಳವಡಿಸುವಂತೆ ಆದೇಶಿಸಲಾಗಿದೆ. ಈ ಕುರಿತಾಗಿ 1972ರ ವನ್ಯಜೀವಿ (ರಕ್ಷಣೆ) ಕಾಯ್ದೆಯ ಸೆಕ್ಷನ್ 11(1)(a) ಅಡಿಯಲ್ಲಿ ಮುಖ್ಯ ವನ್ಯಜೀವಿ ವಾರ್ಡನ್ಗೆ ಅನುಮತಿ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
ಕೆಎಂ1 ಅರಲಂ ಫಾರ್ಮ್ ಪ್ರದೇಶಗಳಿಗೆ ಪದೇಪದೆ ಆತಂಕ ಒಡ್ಡುತ್ತಿದೆ ಮತ್ತು ವ್ಯಾಪಕ ಹಾನಿಯನ್ನು ಉಂಟು ಮಾಡಿದೆ. ಹೀಗಾಗಿ ತುರ್ತು ಕ್ರಮ ಕೈಗೊಳ್ಳುವ ಅಗತ್ಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿದ ಎಲ್ಲಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಆನೆಯನ್ನು ಶಾಂತಗೊಳಿಸಿದ ನಂತರ ರೇಡಿಯೋ ಕಾಲರ್ ಅಳವಡಿಸಲಾಗುವುದು. ಈ ಸಂದರ್ಭದಲ್ಲಿ ಆನೆಗೆ ಹೆಚ್ಚು ಒತ್ತಡ ಬೀಳದಂತೆ ಗಮನಹರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಅರಣ್ಯ ಇಲಾಖೆಯ ಪ್ರಕಾರ, ಕೆಎಂ1 ನಿಯಮಿತವಾಗಿ ವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ತಡೆಗೋಡೆಗಳನ್ನು ಧ್ವಂಸಗೊಳಿಸುತ್ತಿದೆ. ಪ್ರಚೋದನೆಯೇ ಇಲ್ಲದೆ ಮನೆಗಳು ಮತ್ತು ಕೃಷಿ ಬೆಳೆಗಳಿಗೆ ಹಾನಿ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದೆ ಮತ್ತು ವಾಹನಗಳ ಮೇಲೂ ದಾಳಿ ಮಾಡಿದೆ. 2008ರಿಂದ ಅರಲಂ ಪ್ರದೇಶಕ್ಕೆ ಪ್ರವೇಶಿಸುತ್ತಿರುವ ಹಿಂಡಿನಲ್ಲಿ ಕೆಎಂ1 ಅತಿದೊಡ್ಡ ಆನೆಯಾಗಿದೆ. ಈ ಆನೆ ಫೆಬ್ರವರಿ 26ರಂದು ಅನೀಶ್ ಎಂಬಾತನನ್ನು ಬಲಿ ತೆಗೆದುಕೊಂಡಿದೆ ಎಂದು ಇಲಾಖೆ ದೃಢಪಡಿಸಿದೆ.
ಸರ್ಕಾರಿ ಆದೇಶದಡಿ ಕಣ್ಣೂರಿನ ಉತ್ತರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಕಣ್ಣೂರು ಹೆಚ್ಚುವರಿ ಅರಣ್ಯ ಅಧಿಕಾರಿ ಕಾರ್ಯಾಚರಣೆ ಸಂಘಟಿಸುತ್ತಾರೆ. ಕಣ್ಣೂರು ಮುಖ್ಯ ಅರಣ್ಯ ಪಶುವೈದ್ಯಾಧಿಕಾರಿ ಮತ್ತು ಸಹಾಯಕ ಅರಣ್ಯ ಪಶುವೈದ್ಯಾಧಿಕಾರಿ ಅವರು ಸೆರೆಹಿಡಿಯುವಿಕೆ ಮತ್ತು ಮೇಲ್ವಿಚಾರಣಾ ಕಾರ್ಯಾಚರಣೆಯ ಭಾಗವಾಗಿರಲಿದ್ದಾರೆ.






