Keralam | ಬದುಕಿದ್ದಾನಾ ಸುಕುಮಾರ ಕುರುಪ್?; ಕಡತ ಮುಚ್ಚುವ ಹೊತ್ತಿಗೆ ಮತ್ತೆ ಸುದ್ದಿಯಲ್ಲಿ!
1984ರಿಂದ ತಪ್ಪಿಸಿಕೊಂಡ ಕುರುಪ್; ಈಗ ಬ್ರೂನೈನಲ್ಲಿ ನಕಲಿ ಹೆಸರಿನಲ್ಲಿ ವಾಸ: ನಿವೃತ್ತ ತನಿಖಾಧಿಕಾರಿ ಹೇಳಿಕೆ

ಸುಕುಮಾರ ಕುರುಪ್ | Photo Credit : keralakaumudi.com
ತಿರುವನಂತಪುರಂ: ಕೇರಳದ ಅಪರಾಧ ಇತಿಹಾಸದಲ್ಲಿ ನಾಲ್ಕು ದಶಕಗಳಿಂದ ನಿಗೂಢವಾಗಿಯೇ ಉಳಿದಿರುವ ಸುಕುಮಾರ ಕುರುಪ್ ಮತ್ತೆ ಸುದ್ದಿಯಾಗಿದ್ದಾನೆ. ಆತ ಬದುಕಿದ್ದಾನೆಯೇ ಅಥವಾ ಮೃತಪಟ್ಟಿದ್ದಾನೆಯೇ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ. ಈ ನಡುವೆ ಕುರೀಪ್ ಬ್ರೂನೈನಲ್ಲಿ ‘ಜಾನ್ ಮೆನನ್’ ಎಂಬ ನಕಲಿ ಹೆಸರಿನಲ್ಲಿ ಬದುಕುತ್ತಿದ್ದಾನೆ ಎಂದು ನಿವೃತ್ತ ತನಿಖಾಧಿಕಾರಿ ಅಲಿ ಅಕ್ಬರ್ ಹೇಳಿರುವುದು ಮತ್ತೊಮ್ಮೆ ಕುರುಪ್ ಪ್ರಕರಣದ ಚರ್ಚೆಗೆ ಕಾರಣವಾಗಿದೆ.
ಕುರುಪ್ ಬ್ರೂನೈನಲ್ಲಿ ವಾಸಿಸುತ್ತಿದ್ದಾನೆ ಎಂಬುದಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ದಾಖಲೆಗಳು ಹಾಗೂ ಇತ್ತೀಚಿನ ಫೋಟೋಗಳು ತಮ್ಮ ಬಳಿ ಇವೆ ಎಂದು ಅಲಿ ಅಕ್ಬರ್ ಹೇಳಿದ್ದಾರೆ.
ಆದರೆ ಕೇರಳಂ ಪೊಲೀಸರು ಹಾಗೂ ಗೃಹ ಇಲಾಖೆ ಈ ಸುದ್ದಿಯನ್ನು ಗಾಳಿಸುದ್ದಿ ಎಂದು ಹೇಳಿವೆ. ನಾಲ್ಕು ದಶಕಗಳ ಹಿಂದೆಯೇ ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕುರುಪ್ ಕುರುಪ್ 80 ವರ್ಷ ದಾಟಿದ ಬಳಿಕವೂ ಬದುಕಿರುವ ಸಾಧ್ಯತೆ ಕಡಿಮೆ ಎಂಬುದು ತನಿಖಾ ಸಂಸ್ಥೆಗಳ ವಾದ.
ಈ ಬಗ್ಗೆ ಕೇರಳ ಗೃಹ ಸಚಿವರೂ ಪ್ರತಿಕ್ರಿಯಿಸಿದ್ದು, ಈಗ ವೈರಲ್ ಆಗಿರುಲ ಸುದ್ದಿಗಳಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ. ಆದರೂ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಕ್ರೈಂ ಬ್ರಾಂಚ್ಗೆ ಸೂಚಿಸಿದ್ದಾರೆ. ಅಗತ್ಯ ಬಿದ್ದರೆ ಇಂಟರ್ಪೋಲ್ ನೆರವು ಪಡೆಯುವಂತೆಯೂ ಸೂಚಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮೀಮ್ ಗಳ ಹಾವಳಿ
ಕುರುಪ್ ಕುರಿತ ಹೊಸ ಸುದ್ದಿ ಹೊರಬಿದ್ದ ಬೆನ್ನಲ್ಲೇ ಮಲಯಾಳಂ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಬಗ್ಗೆ ಭಾರಿ ಚರ್ಚೆ ಆರಂಭವಾಗಿದೆ. ಕುರುಪ್ ಮಂಗಳ ಗ್ರಹಕ್ಕೆ ಹೋಗಿದ್ದಾನೆ, ಬ್ರೂನೈ ಹೋಟೆಲ್ ನಲ್ಲಿ ಕುಳಿತು ಚಿಕನ್ ತಿನ್ನುತ್ತಿದ್ದಾನೆ, ಕೇರಳಂನಲ್ಲಿ ಯಾರಿಗೂ ಗೊತ್ತಾಗದಂತೆ ದೊಡ್ಡ ಶೋರೂಮ್ ಉದ್ಘಾಟಿಸಿ ಹೋಗಿದ್ದಾನೆ ಎಂಬಂತಹ ಮೀಮ್ ಗಳು ವೈರಲ್ ಆಗಿದೆ.
ನಾಲ್ಕು ದಶಕಗಳಿಂದ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡಿರುವ ವ್ಯಕ್ತಿ ಇದೀಗ ಸಾಮಾಜಿಕ ಮಾಧ್ಯಮಗಳ ಟ್ರೋಲ್ ಗಳಿಗೆ ‘ವಿಷಯ’ವಾಗಿದ್ದಾನೆ.
ವಿಮೆ ಹಣಕ್ಕಾಗಿ ಕೊಲೆ
ಕುರುಪ್ ಪ್ರಕರಣದ ಮೂಲ 1984ರ ಜನವರಿಯಲ್ಲಿದೆ. ಆಗ ಅಬುಧಾಬಿಯಲ್ಲಿದ್ದ ಕುರುಪ್, ತನ್ನ ಹೆಸರಿನಲ್ಲಿದ್ದ ಸುಮಾರು 8 ಲಕ್ಷ ರೂಪಾಯಿಯ ವಿಮೆ ಹಣ ಪಡೆಯಲು ಸಂಚು ರೂಪಿಸಿದ್ದ. ಆ ಕಾಲದ 8 ಲಕ್ಷ ರೂಪಾಯಿ ಮೌಲ್ಯವನ್ನು ಇಂದಿನ ಲೆಕ್ಕದಲ್ಲಿ ಒಂದೂವರೆ ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
ತಾನು ರಸ್ತೆ ಅಪಘಾತದಲ್ಲಿ ಕಾರಿನೊಳಗೆ ಸುಟ್ಟು ಮೃತಪಟ್ಟಿದ್ದೇನೆ ಎಂದು ನಂಬಿಸುವುದು ಕುರುಪ್ ಯೋಜನೆಯಾಗಿತ್ತು. ಇದಕ್ಕಾಗಿ ತನ್ನದ ಮೈಕಟ್ಟು ಹೊಂದಿದ್ದ ಚಾಕೋ ಎಂಬ ವ್ಯಕ್ತಿಯನ್ನು ಲಿಫ್ಟ್ ನೀಡುವ ನೆಪದಲ್ಲಿ ಕಾರಿನಲ್ಲಿ ಕೂರಿಸಿಕೊಂಡಿದ್ದ.
ನಂತರ ಚಾಕೋನ ಕತ್ತು ಹಿಸುಕಿ ಕೊಲೆ ಮಾಡಿ, ಅವರ ಮುಖ ಗುರುತಿಸಲಾಗದಂತೆ ಪೆಟ್ರೋಲ್ ಸುರಿದು ಕಾರಿನ ಸಮೇತ ಸುಟ್ಟು ಹಾಕಲಾಗಿತ್ತು. ಈ ಘಟನೆ ಇಡೀ ಕೇರಳವನ್ನೇ ಬೆಚ್ಚಿಬೀಳಿಸಿತ್ತು.
ಆದರೆ ಮೃತದೇಹದ ಕೈಕಾಲುಗಳು ಸುಟ್ಟಿದ್ದ ರೀತಿ ಹಾಗೂ ಸ್ಥಳದಲ್ಲಿ ದೊರೆತ ಕುರುಹುಗಳು ಪೊಲೀಸರಿಗೆ ಅನುಮಾನ ಮೂಡಿಸಿದವು. ಹೀಗಾಗಿ ಕುರುಪ್ ರೂಪಿಸಿದ್ದ ಸಂಚು ಬಯಲಾಗತೊಡಗಿತು.
ವಿಮೆ ಹಣವೂ ದೊರೆಯಲಿಲ್ಲ. ಪ್ರಕರಣದಲ್ಲಿ ಭಾಗಿಯಾಗಿದ್ದ ಸಹಚರರೆಲ್ಲರೂ ಜೈಲು ಪಾಲಾದರು. ಆದರೆ ಪ್ರಕರಣದ ಪ್ರಮುಖ ಸೂತ್ರಧಾರಿ ಕುರುಪ್ ಮಾತ್ರ ಪೊಲೀಸರಿಗೆ ಸಿಗದೆ ನಾಪತ್ತೆಯಾದ.
ಎಲ್ಲೆಲ್ಲೋ ಕಾಣಿಸಿಕೊಂಡನೆಂಬ ವರದಿ
ಅಂದಿನಿಂದ ಕುರುಪ್ ಕಾಣಿಸಿಕೊಂಡಿದ್ದಾನೆ ಎಂಬ ವರದಿಗಳು ಹಲವು ಬಾರಿ ಕೇಳಿ ಬಂದಿದೆ. ಮುಂಬೈನ ಹೋಟೆಲ್ ಗಳಲ್ಲಿ, ದಿಲ್ಲಿಯ ಬೀದಿಗಳಲ್ಲಿ ಹಾಗೂ ಜಾರ್ಖಂಡ್ ನ ಆಸ್ಪತ್ರೆಯೊಂದರಲ್ಲಿ ಸುಕುಮಾರ ಕುರುಪ್ ಕಾಣಿಸಿಕೊಂಡಿದ್ದಾನೆ ಎಂಬ ಸುದ್ದಿಗಳು ಬಂದಿದ್ದವು.
ಆದರೆ ಪೊಲೀಸರು ಆ ಸ್ಥಳಗಳಿಗೆ ತೆರಳಿ ಹುಡುಕಾಟ ನಡೆಸುವಷ್ಟರಲ್ಲಿ ಕುರುಪ್ ಅಲ್ಲಿಂದ ಮಾಯವಾಗಿರುತ್ತಿದ್ದ.
ನಾಲ್ಕು ದಶಕಗಳಿಂದ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡಿರುವ ಕುರುಪ್, ಕ್ರಮೇಣ ಸಿನಿಮಾ ಕಥೆಗಳಿಗೂ ಪ್ರೇರಣೆಯಾದ. ದುಲ್ಕರ್ ಸಲ್ಮಾನ್ ನಟನೆಯ ‘ಕುರುಪ್’ ಸಿನಿಮಾ ಕುರುಪ್ ಕಥೆಯನ್ನು ಹೊಸ ತಲೆಮಾರಿಗೆ ಪರಿಚಯಿಸಿತು.
ಭೀಕರ ಕೊಲೆಯ ಆರೋಪಿಯೊಬ್ಬ ಕಾಲಕ್ರಮೇಣ ಜನರ ಬಾಯಲ್ಲಿ ಪಾಪ್ ಕಲ್ಚರ್ ನ ನಾಯಕನಂತೆ ಬಿಂಬಿತನಾಗಿರುವುದು ಈ ಪ್ರಕರಣದ ವಿಪರ್ಯಾಸವಾಗಿದೆ.
ಪೊಲೀಸರು ಪ್ರಕರಣದ ಕಡತವನ್ನು ಮುಚ್ಚಲು ಮುಂದಾದಾಗಲೆಲ್ಲ ಕುರುಪ್ ಮತ್ತೆ ಕಾಣಿಸಿಕೊಂಡಿದ್ದಾನೆ ಎಂಬ ಹೊಸ ಸುದ್ದಿ ಹರಡುತ್ತದೆ. ಇದೀಗ ಬ್ರೂನೈ ಕುರಿತ ಹೇಳಿಕೆಯೊಂದಿಗೆ ಮತ್ತೊಮ್ಮೆ ಅದೇ ಪ್ರಶ್ನೆ ಎದುರಾಗಿದೆ.
ಕುರುಪ್ ಮೃತಪಟ್ಟಿದ್ದರೆ, ನಾಲ್ಕು ದಶಕಗಳಿಂದ ಪ್ರಕರಣದ ಕಡತವನ್ನು ಹೊತ್ತು ತಿರುಗುತ್ತಿರುವ ತನಿಖಾ ವ್ಯವಸ್ಥೆಯ ಅಸಹಾಯಕತೆ ಎದ್ದು ಕಾಣುತ್ತದೆ. ಒಂದು ವೇಳೆ ಅವರು ಬದುಕಿದ್ದರೆ, ನಾಲ್ಕು ದಶಕಗಳಿಂದ ಕಾನೂನಿನ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡಿರುವ ಸುಕುಮಾರ ಕುರುಪ್ ನನ್ನು ಕಾನೂನಿನ ಮುಂದೆ ನಿಲ್ಲಿಸುವುದು ಇಂದಿಗೂ ದೊಡ್ಡ ಸವಾಲಾಗಿದೆ.






