ಗಾಳಿಪಟವೆಂಬ ನಲಿಕೆ-ಕಲಿಕೆ

ಒಂದಡಿ ಉದ್ದಗಲದ ಬಣ್ಣದ ಕಾಗದ, ಎರಡು ಬಿದಿರು ಕಡ್ಡಿ, ಮೂರು ಮುಷ್ಠಿ ನೂಲು ಇದ್ದರೆ ಸಾಕು ನಮ್ಮ ನಿಮ್ಮ ಬಣ್ಣದ ಕನಸುಗಳನ್ನು ಆಕಾಶಕ್ಕೆ ಏರಿಸಬಹುದು. ಹೌದು, ಗಾಳಿಪಟವೆಂಬ ಕ್ರೀಡಾ ಹವ್ಯಾಸವು ನಲಿವಿನ ಉತ್ಸಾಹವನ್ನು ನೀಡುತ್ತದೆ ಹಾಗೇನೇ ನಲಿವಿನ ಜೊತೆ ಕಲಿಯುವ ಹುಮ್ಮಸ್ಸನ್ನೂ ನೀಡುತ್ತದೆ. ಎಲ್ಲಾ ಕ್ರೀಡೆಗಳು ನೆಲದಲ್ಲಿ ಆಗುವಂತಿದ್ದರೆ ಗಾಳಿಪಟವು ಆಕಾಶದಲ್ಲಿ ನಲಿಯುವಂತಿದ್ದು ಸುತ್ತಮುತ್ತಲಿನ ಎಲ್ಲರೂ ಒಮ್ಮೆ ಕತ್ತು ಎತ್ತಿ ಆಕಾಶ ನೋಡುವಂತಿದ್ದರೆ ಇದು ಗಾಳಿಪಟ ಹಾರಿಸುವವನ ತಾಕತ್ತು ಎನ್ನಬಹುದು. ಮಕ್ಕಳ ಪಾಲಿಗೆ ಗಾಳಿಪಟ ಹಾರಿಸುವುದೆಂದರೆ ಒಂದು ರೀತಿಯ ಪಾಠ. ಗಾಳಿಪಟ ಹಾರಿಸಬೇಕಾದರೆ ಅದಕ್ಕೆ ಕಟ್ಟುವ ಸೂತ್ರವು ಜ್ಯಾಮಿತಿ ಕೌಶಲ್ಯವನ್ನು ಕಲಿಸುತ್ತದೆ, ಗಾಳಿಯ ದಿಕ್ಕಿಗೆ ಅನುಲೋಮವಾಗಿ ಸೂತ್ರವನ್ನು 45 ಡಿಗ್ರಿಯಿಂದ 55 ಡಿಗ್ರಿಗೆ ಬದಲಾಯಿಸುವುದು ಗಣಿತವನ್ನು ಹೇಳಿಕೊಡುತ್ತದೆ. ಈಗಿನ ಮಕ್ಕಳಿಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ನೋಡಲು ಪುರುಸೊತ್ತೇ ಇಲ್ಲ. ಗಾಳಿಪಟವು ಪರಿಸರದ ಪರಿಚಯ ಮಾಡುತ್ತದೆ. ಗಾಳಿಪಟ ಹಾರಿಸುವವನು ಒಮ್ಮೆ ಆಕಾಶ ನೋಡುತ್ತಾನೆ, ಗಾಳಿ ಯಾವ ಮಟ್ಟದಲ್ಲಿ ಇದೆ ಮತ್ತು ತನ್ನ ಗಾಳಿಪಟ ಅಕ್ಕ ಪಕ್ಕದ ಗಿಡ ಮರಗಳಿಗೆ ಸಿಕ್ಕಿ ಹಾಕಿ ಕೊಳ್ಳುತ್ತದೋ ಎಂದು ಒಮ್ಮೆ ಸುತ್ತ ಮುತ್ತ ಇರುವ ಮರ ಗಿಡಗಳನ್ನು ಗಮನಿಸುತ್ತಾನೆ.
ಅಲ್ಲಿ ಪಕ್ಕದಲ್ಲಿ ಬಾವಿ, ಕೆರೆ ಇದ್ದರೆ, ಲೈಟ್ (ವಿದ್ಯುತ್) ಕಂಬ ಇದ್ದರೆ ತನ್ನ ಹಾಗೂ ಗಾಳಿಪಟದ ಭದ್ರತೆಗೆ ಜಾಗೃತಿ ವಹಿಸುತ್ತಾನೆ. ಹತ್ತಿರದಲ್ಲಿ ಬೆಟ್ಟ ಇದ್ದರೆ ಗಾಳಿಯ ಹರಿವಿಗೆ ಅಡ್ಡಿಯಾಗುತ್ತದೆ ಎಂದು ಬೆಟ್ಟದ ಕಡೆ ಗಮನ ನೀಡಬೇಕಾಗುತ್ತದೆ. ಗಾಳಿಪಟದ ನೂಲು ಬಿಡುತ್ತಾ ಅದು ಆಕಾಶದಲ್ಲಿ ನಲಿಯುತ್ತಾ ಇರುವಾಗ ಆಕಾಶವನ್ನೇ ನೋಡುತ್ತಿರುತ್ತಾನೆ, ಅದೇ ಸಮಯಕ್ಕೆ ಅಲ್ಲಿ ಹಕ್ಕಿ ಹಾರಾಡುವುದನ್ನು, ವಿಮಾನ ಹಾರಾಡುವುದನ್ನು ನೋಡುವಂತಾಗುತ್ತದೆ. ಎಷ್ಟು ನೂಲು ಬಿಡುತ್ತಾನೋ ಅಷ್ಟು ನಿಖರವಾಗಿ ಕೈಟ್ ಹಾರುವಾಗ ಎತ್ತರ, ವೇಗ, ದೀರ್ಘ, ಲಂಬ ಎಂಬ ವಿಜ್ಞಾನವನ್ನು ಕಲಿಯುವ ಅವಕಾಶ ಲಭಿಸುತ್ತದೆ. ನೋಡಿ ಒಂದು ಗಾಳಿಪಟವು ಗಣಿತ, ಸಮಾಜ, ವಿಜ್ಞಾನ, ಪರಿಸರದ ಪಾಠವನ್ನು ಹೇಳಿಕೊಡುತ್ತದೆ.







