ಇಂಜಿನಿಯರ್ಸ್ Day | ನಮ್ಮೊಳಗಿನ ಇಂಜಿನಿಯರ್ ಗೆ ಒಂದು ನಮಸ್ಕಾರ...

Photo: AI-Generated
ಇಂಜಿನಿಯರ್ಸ್ ಡೇ ಶುಭಾಶಯ ಹೇಳುವಾಗ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವುದು ಒಂದು ಚಿತ್ರ—ಕೈಯಲ್ಲಿ ಡಿಗ್ರಿ ಸರ್ಟಿಫಿಕೇಟ್ ಹಿಡಿದು ನಿಂತಿರುವ ಒಬ್ಬ ಇಂಜಿನಿಯರ್. ಆದರೆ ನನಗೆ ಅನಿಸುವುದು, ಇಂಜಿನಿಯರಿಂಗ್ ಎಂದರೆ ಕೇವಲ ಕಾಲೇಜಿನಲ್ಲಿ ನಾಲ್ಕು ವರ್ಷ ಓದಿ ಪಡೆದುಕೊಳ್ಳುವ ಒಂದು ಡಿಗ್ರಿ ಸರ್ಟಿಫಿಕೇಟ್ ಅಲ್ಲ. ಅದಕ್ಕಿಂತ ಬಹಳ ಹಿಂದೆಯೇ, ಮನುಷ್ಯನ ಬದುಕಿನಲ್ಲೇ ಇಂಜಿನಿಯರಿಂಗ್ ಶುರುವಾಗಿತ್ತು.
ಮಳೆ ಬಂದಾಗ ಮನೆಯೊಳಗೆ ನೀರು ಬರದಂತೆ ದಾರಿ ಮಾಡಿಕೊಟ್ಟವನಲ್ಲೂ ಇಂಜಿನಿಯರಿಂಗ್ ಇತ್ತು. ಹೊಲಕ್ಕೆ ನೀರು ಸರಿಯಾಗಿ ಹರಿಯುವಂತೆ ಕಾಲುವೆ ತೋಡಿದ ರೈತನಲ್ಲೂ ಇತ್ತು. ಮುರಿದ ಉಪಕರಣವನ್ನು ಮತ್ತೆ ಕೆಲಸಕ್ಕೆ ಬರುವಂತೆ ಮಾಡಿದ ಕಮ್ಮಾರನಲ್ಲೂ ಇತ್ತು. ಮರವನ್ನು ನೋಡಿ ಅದರಿಂದ ಏನು ಮಾಡಬಹುದು ಎಂದು ಅಂದಾಜು ಮಾಡಿದ ಬಡಗಿಯಲ್ಲೂ ಇತ್ತು. ಅವರಿಗೆ ಇಂಜಿನಿಯರಿಂಗ್ ಎಂಬ ಪದ ಗೊತ್ತಿರಲಿಲ್ಲ. ಆದರೆ ಸಮಸ್ಯೆ ಬಂದಾಗ, “ಇದಕ್ಕೆ ಏನಾದರೂ ದಾರಿ ಇರಬೇಕು” ಎಂದು ಯೋಚಿಸುವ ಬುದ್ಧಿ ಇತ್ತು.
ಬಹುಶಃ ಈ ಪ್ರವೃತ್ತಿ ಮನುಷ್ಯನೊಳಗೆ ಬಹಳ ಹಿಂದಿನಿಂದಲೇ ಇದೆ. ನಮ್ಮ ಪೂರ್ವಜರು ಕಲ್ಲನ್ನು ಕಲ್ಲಿಗೆ ಹೊಡೆದು ಬೆಂಕಿ ಕಂಡುಕೊಂಡರು, ಮರವನ್ನು ಕತ್ತರಿಸಿ ದೋಣಿ ಮಾಡಿದರು, ನೀರನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕೊಂಡೊಯ್ಯುವ ದಾರಿ ಕಂಡುಕೊಂಡರು. ಯಾರೂ ಅವರ ಕೈಯಲ್ಲಿ ಡಿಗ್ರಿ ಸರ್ಟಿಫಿಕೇಟ್ ಕೇಳಲಿಲ್ಲ. ಕೆಲಸ ಆಯಿತೇ ಇಲ್ಲವೇ ಎಂಬುದೇ ಮುಖ್ಯವಾಗಿತ್ತು.
ನಮ್ಮೂರಿನ ರಾಮಕೃಷ್ಣನನ್ನು ನಾನು ಸಣ್ಣ ಹುಡುಗನಾಗಿದ್ದಾಗ ನೋಡಿದ್ದೇನೆ. ಅವನಿಗೆ ಇಂಜಿನಿಯರಿಂಗ್ ಕಾಲೇಜಿನ ಸರ್ಟಿಫಿಕೇಟ್ ಬಿಡಿ, ನಾಲ್ಕನೇ ತರಗತಿ ಪಾಸಾದ ಸರ್ಟಿಫಿಕೇಟ್ ಕೂಡ ಇರಲಿಲ್ಲ. ಆದರೆ ಒಂದು ದಿನ ಡೀಸೆಲ್ ಮುಗಿದು ಡೀಸೆಲ್ ಪಂಪ್ಸೆಟ್ ನಿಂತುಹೋಯಿತು. ನೀರು ತುರ್ತಾಗಿ ಬೇಕಾಗಿತ್ತು. ಡೀಸೆಲ್ ಬರುವವರೆಗೆ ಕಾಯುವ ಸ್ಥಿತಿ ಇರಲಿಲ್ಲ.
ರಾಮಕೃಷ್ಣ ತನ್ನ ಮೋಟಾರ್ ಸೈಕಲ್ ನ್ನು ಪಂಪ್ ಸೆಟ್ ನ ಹತ್ತಿರ ತಂದು, ಅದರ ಹಿಂದಿನ ಚಕ್ರವನ್ನು ಪಂಪ್ ಸೆಟ್ ನ shaftನ ಸಾಲಿಗೆ ಸರಿಯಾಗಿ ನಿಲ್ಲಿಸಿದ. ಮೋಟಾರ್ ಸೈಕಲ್ ನ ಹಿಂದಿನ ಚಕ್ರದ hub ಪಕ್ಕದಲ್ಲಿದ್ದ ಸಣ್ಣ ಜಾಗವನ್ನು ಬಳಸಿಕೊಂಡು, ಅಗಲ ಕಡಿಮೆ ಇರುವ ಒಂದು ಬೆಲ್ಟ್ ಅನ್ನು ಚಕ್ರಕ್ಕೂ ಪಂಪ್ ಸೆಟ್ ನ ಪುಲಿಗೂ ಜೋಡಿಸಿದ. ಬೈಕ್ ಸ್ಟಾರ್ಟ್ ಆಯಿತು. ಹಿಂದಿನ ಚಕ್ರ ತಿರುಗಿತು. ಚಕ್ರದ ತಿರುಗುವಿಕೆಯಿಂದ ಬೆಲ್ಟ್ ತಿರುಗಿತು; ಬೆಲ್ಟ್ ಪಂಪ್ಸೆಟ್ನ shaftನ್ನು ತಿರುಗಿಸಿತು. ಡೀಸೆಲ್ ಇಲ್ಲದೆ ನಿಂತಿದ್ದ ಪಂಪ್ಸೆಟ್ಗೆ ಆ ದಿನ ಮೋಟಾರ್ಸೈಕಲ್ ಎಂಜಿನ್ ತಾತ್ಕಾಲಿಕವಾಗಿ ಎಂಜಿನ್ ಆಗಿಬಿಟ್ಟಿತು. ನೀರು ಹರಿಯತೊಡಗಿತು.
ಇದನ್ನು ಇಂಜಿನಿಯರಿಂಗ್ ಎನ್ನದೇ ಇನ್ನೇನು ಎನ್ನಬೇಕು? ಸಮಸ್ಯೆ ಬಂದಾಗ “ಡೀಸೆಲ್ ಇಲ್ಲ” ಎಂದು ಕೈಚೆಲ್ಲಿ ಕುಳಿತುಕೊಳ್ಳಲಿಲ್ಲ. ಕೈಯಲ್ಲಿದ್ದ ಮತ್ತೊಂದು ಎಂಜಿನ್ನ್ನು ನೋಡಿದ. ಅದರ ಶಕ್ತಿಯನ್ನು ಪಂಪ್ ಸೆಟ್ ಗೆ ಹೇಗೆ ತಲುಪಿಸಬಹುದು ಎಂದು ಯೋಚಿಸಿದ. ಒಂದು ಬೆಲ್ಟ್, ಸರಿಯಾದ ಸಾಲು ಮತ್ತು ಸ್ವಲ್ಪ ಬುದ್ಧಿ—ಕೆಲಸ ಮುಗಿಯಿತು. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇದನ್ನು ಯಾವ ಪಾಠದ ಹೆಸರಿನಲ್ಲಿ ಕಲಿಸುತ್ತಾರೋ ಗೊತ್ತಿಲ್ಲ; ಆದರೆ ರಾಮಕೃಷ್ಣನಿಗೆ ಆ ದಿನ ಪರೀಕ್ಷೆ ಇರಲಿಲ್ಲ, ನಿಜವಾದ ಸಮಸ್ಯೆ ಇತ್ತು!
ಇಂತಹ ಅನುಭವಗಳು ನನ್ನ ಬದುಕಿನಲ್ಲೂ ಮತ್ತೆ ಮತ್ತೆ ಎದುರಾಗಿವೆ. ನೋಯ್ಡಾದಲ್ಲಿ ನಾನು ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದಾಗ ಅಡುಗೆಮನೆಯ ಎಕ್ಸಾಸ್ಟ್ ಫ್ಯಾನ್ಗೆ ಒಂದು ರಕ್ಷಣಾ ಗಾರ್ಡ್ ಹಾಕಲಾಗಿತ್ತು. ಪಕ್ಷಿ, ಇಲಿ, ಹೆಗ್ಗಣ ಒಳಗೆ ಬರದಂತೆ ತಡೆಯುವುದು ಅದರ ಕೆಲಸ. ಅದರ ನಾಲ್ಕು ರೆಕ್ಕೆಗಳು ಫ್ಯಾನ್ ಆನ್ ಮಾಡಿದಾಗ ಗಾಳಿಯ ರಭಸಕ್ಕೆ ತೆರೆದುಕೊಳ್ಳುತ್ತಿದ್ದವು; ಫ್ಯಾನ್ ಆಫ್ ಮಾಡಿದಾಗ ಗುರುತ್ವಾಕರ್ಷಣೆಯ ಬಲದಿಂದ ಮತ್ತೆ ಮುಚ್ಚಿಕೊಳ್ಳುತ್ತಿದ್ದವು. ಅಂದರೆ, ವಿದ್ಯುತ್ ಸಂಪರ್ಕವೇ ಇಲ್ಲದೆ ತನ್ನ ಕೆಲಸ ತಾನೇ ಮಾಡುವ ಒಂದು ಸಣ್ಣ ಸ್ವಯಂಚಾಲಿತ ವ್ಯವಸ್ಥೆ.
ಆದರೆ ದಿನವೂ ಅಡುಗೆಯ ಎಣ್ಣೆಯ ಹಬೆ ಹೋಗಿ ಹೋಗಿ ಆ ರೆಕ್ಕೆಗಳ ಎರಡು ಬದಿಯ hinges ಒಳಗೆ ಜಿಡ್ಡಾಗಿ ಅಂಟಿಕೊಂಡಿತು. ರೆಕ್ಕೆಗಳು ತೆರೆದವು; ಆದರೆ ಮತ್ತೆ ಸರಿಯಾಗಿ ಮುಚ್ಚಿಕೊಳ್ಳಲಿಲ್ಲ. ಗಾರ್ಡ್ ಬದಲಿಸಬೇಕೆಂದು ಎಲೆಕ್ಟ್ರೀಷಿಯನ್ ರಾಮ್ ಕುಮಾರ್ಗೆ ಹೇಳಿದೆ. ಅವನು “ಹೊಸದು ಹಾಕೋಣ” ಎಂದು ಹೇಳಲಿಲ್ಲ. ಸ್ವಲ್ಪ ನೋಡಿ, “ಇದು ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಕಮ್ಮಾರನ ಕುಲುಮೆಯಲ್ಲಿ ಚೆನ್ನಾಗಿ ಕಾಯಿಸಿದರೆ ಮತ್ತೆ ಬಾಗಿಸಿ ಕೆಲಸಕ್ಕೆ ತರಬಹುದು” ಎಂದ.
ಆದರೆ ಮತ್ತೊಂದು ಸಮಸ್ಯೆ ಇತ್ತು. ನಾವು ಮೊದಲ ಮಹಡಿಯಲ್ಲಿದ್ದೆವು. ಅಡುಗೆಮನೆಯ ಪ್ಲಾಟ್ಫಾರ್ಮ್ ಮೇಲೆ ನಿಂತು ಒಳಗಡೆಯಿಂದ ಗಾರ್ಡ್ಗೆ ಹಾಕಿದ್ದ ಸ್ಕ್ರೂಗಳನ್ನು ತೆಗೆಯಬಹುದು. ಆದರೆ ಅದನ್ನು ಒಳಗೆ ಎಳೆದುಕೊಂಡು ಬರಲು ಸಾಧ್ಯವಿಲ್ಲ. ಕಿಟಕಿಗೆ ಕಬ್ಬಿಣದ ಸರಳುಗಳಿದ್ದವು. ರಾಮ್ ಕುಮಾರ್ ಸ್ವಲ್ಪ ಯೋಚಿಸಿ, ಮೇಲಿನಿಂದ ಕೆಳಗೆ ಇಳಿಸುವುದೇ ದಾರಿ ಎಂದು ಕಂಡುಕೊಂಡ. ಗಾರ್ಡ್ಗೆ ಒಂದು ಸಣ್ಣ ಹಗ್ಗ ಕಟ್ಟಿ ಕಿಟಕಿಯಿಂದ ಕೆಳಗೆ ಇಳಿಸಿದ. ಕೆಳಗೆ ಹೋಗಿ ಅದನ್ನು ಸರಿಪಡಿಸಿಕೊಂಡು ಬಂದಿದ್ದ ವ್ಯಕ್ತಿ, ಅದೇ ಹಗ್ಗವನ್ನು ಬಾವಿಯಿಂದ ನೀರು ಸೇದುವಂತೆ ಮೇಲಕ್ಕೆ ಎಳೆದು ಗಾರ್ಡ್ನ್ನು ಮತ್ತೆ ಅಡುಗೆಮನೆಗೆ ತಂದ.
ಕೆಲಸವೂ ಆಯಿತು. ಗಾರ್ಡ್ವೂ ಬಂತು. ಇದರಲ್ಲಿ ಯಾವ ಇಂಜಿನಿಯರಿಂಗ್ ಕಾಲೇಜಿನ ಸಿಲಬಸ್ ಇತ್ತು? ಯಾವುದೂ ಇರಲಿಲ್ಲ. ಆದರೆ ಸಮಸ್ಯೆ ಇತ್ತು, ಅದಕ್ಕೆ ಪರಿಹಾರ ಹುಡುಕುವ ಬುದ್ಧಿ ಇತ್ತು.
ಇನ್ನೊಂದು ಘಟನೆ. ಸುಮಾರು ಇನ್ನೂರು ಜನರಿಗೆ ಬಿರಿಯಾನಿ ಮಾಡಬೇಕಾದ ಸಂದರ್ಭ. ಅಡುಗೆಗೆ ಬೇಕಾದ ಸೌದೆ ಹಿಂದಿನ ದಿನ ಬಿದ್ದ ಮಳೆಯಿಂದ ಸ್ವಲ್ಪ ಒದ್ದೆಯಾಗಿತ್ತು. ಅಡುಗೆ ಮಾಡುವವನಿಗೆ ಎರಡು ಪ್ರಯತ್ನದಲ್ಲೇ ವಿಷಯ ಅರ್ಥವಾಯಿತು—ಈ ಸೌದೆಗೆ ಬೆಂಕಿ ಹಚ್ಚುವುದು ಸುಲಭವಲ್ಲ. ಆದರೆ ಅವನು ಬೆಂಕಿಯನ್ನೇ ದೂಷಿಸುತ್ತಾ ಕುಳಿತುಕೊಳ್ಳಲಿಲ್ಲ. ಪಕ್ಕದಲ್ಲಿದ್ದ ಪೂಜಾ ಸಾಮಗ್ರಿ ಮಾರುವ ಅಂಗಡಿಗೆ ಹೋಗಿ ಸ್ವಲ್ಪ ಕರ್ಪೂರ ತಂದ. ಸಿಗರೇಟನ್ನು ಬಾಯಲ್ಲಿಟ್ಟುಕೊಂಡು ಏನೂ ಆಗದವನಂತೆ ನಿಧಾನವಾಗಿ ಬಂದು, ಒದ್ದೆಯಾದ ಸೌದೆಯ ಮಧ್ಯದಲ್ಲಿ ಕರ್ಪೂರ ಇಟ್ಟು ಬೆಂಕಿ ಹಚ್ಚಿದ. ಕರ್ಪೂರ ತನ್ನ ಕೆಲಸ ಮಾಡಿತು; ಸೌದೆ ತನ್ನ ಕೆಲಸ ಮಾಡಿತು; ಕೊನೆಗೆ ಬಿರಿಯಾನಿಯೂ ತನ್ನ ಕೆಲಸ ಮಾಡಿತು!
ಇವು ಸಣ್ಣ ಘಟನೆಗಳಂತೆ ಕಾಣಬಹುದು. ಆದರೆ ಇವುಗಳಲ್ಲೆಲ್ಲ ಒಂದೇ ಗುಣವಿದೆ—ಪರಿಸ್ಥಿತಿಯನ್ನು ನೋಡುವುದು, ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದು, ಕೈಗೆ ಸಿಗುವ ವಸ್ತುಗಳನ್ನು ಬಳಸಿಕೊಂಡು ಹೊಸ ದಾರಿ ಹುಡುಕುವುದು ಮತ್ತು ಕೊನೆಗೆ ಕೆಲಸ ಆಗುವಂತೆ ಮಾಡುವುದು. ಇಂದಿನ ಭಾಷೆಯಲ್ಲಿ ಇದಕ್ಕೆ Innovation, Design Thinking, Problem Solving ಎಂದು ದೊಡ್ಡ ದೊಡ್ಡ ಹೆಸರುಗಳಿವೆ. ನಮ್ಮ ಹಳ್ಳಿಯವರು ಅಷ್ಟೊಂದು ಹೆಸರುಗಳನ್ನೇ ಇಡಲಿಲ್ಲ. “ಕೆಲಸ ಆಗಬೇಕಲ್ಲ!” ಎಂದು ಹೇಳಿ ಕೆಲಸ ಮಾಡಿಬಿಟ್ಟರು.
ಇಲ್ಲಿಯೇ ಹಳ್ಳಿಯ ಇಂಜಿನಿಯರಿಂಗ್ ಮತ್ತು ನಗರದ ಇಂಜಿನಿಯರಿಂಗ್ ನಡುವೆ ಒಂದು ವಿಚಿತ್ರ ವ್ಯತ್ಯಾಸ ಕಾಣುತ್ತದೆ. ಹಳ್ಳಿಯಲ್ಲಿ ಸಮಸ್ಯೆ ಬಂದರೆ ಮೊದಲು ಪರಿಹಾರ ಹುಡುಕುತ್ತಾರೆ. ನಗರದಲ್ಲಿ ಕೆಲವೊಮ್ಮೆ ಸಮಸ್ಯೆ ಬಂದರೆ ಮೊದಲು ಅದು ಯಾವ ಇಲಾಖೆಗೆ ಸೇರಿದೆ ಎಂದು ಹುಡುಕುತ್ತೇವೆ! ಹಳ್ಳಿಯಲ್ಲಿ ನೀರು ನಿಂತರೆ ಒಂದು ದಾರಿ ಮಾಡುತ್ತಾರೆ. ನಗರದಲ್ಲಿ ನೀರು ನಿಂತರೆ ಮೊದಲು ದೂರು, ನಂತರ ಅರ್ಜಿ, ನಂತರ ಪರಿಶೀಲನೆ, ನಂತರ ವರದಿ—ಕೊನೆಗೆ ಮುಂದಿನ ಮಳೆಯೂ ಬರುತ್ತದೆ. ನಮ್ಮ ತಂತ್ರಜ್ಞಾನ ಬಹಳ ಬೆಳೆದಿದೆ; ಆದರೆ ಕೆಲವೊಮ್ಮೆ ಸಮಸ್ಯೆ ಪರಿಹರಿಸುವುದಕ್ಕಿಂತ ಸಮಸ್ಯೆಯನ್ನು ನಿರ್ವಹಿಸುವ ತಂತ್ರಜ್ಞಾನವೇ ಹೆಚ್ಚು ಬೆಳೆದಂತೆ ಕಾಣುತ್ತದೆ.
ಇಂಜಿನಿಯರಿಂಗ್ ನ ಇನ್ನೊಂದು ವಿಚಿತ್ರ ಮುಖವನ್ನು ಕ್ವಾಂಟಂ ಭೌತಶಾಸ್ತ್ರದಲ್ಲಿ ನೋಡಬಹುದು. ಎಲೆಕ್ಟ್ರಾನ್ ಅನ್ನು ನಾವು ಗಮನಿಸದೇ ಇದ್ದಾಗ ಅದರ ಸ್ಥಿತಿಯನ್ನು ಒಂದೇ ನಿರ್ದಿಷ್ಟ ಜಾಗದಲ್ಲಿ ಇರುವ ಸಣ್ಣ ಕಣವೆಂದು ಸರಳವಾಗಿ ಹೇಳಲಾಗುವುದಿಲ್ಲ; ಅದರ ಸಾಧ್ಯತೆಗಳನ್ನು ‘ಸಾಧ್ಯತೆಗಳ ತರಂಗ’ದ ಮೂಲಕ ವಿವರಿಸಲಾಗುತ್ತದೆ. ಅಳತೆ ಮಾಡಿದಾಗ ನಮಗೆ ಒಂದು ನಿರ್ದಿಷ್ಟ ಫಲಿತಾಂಶ ಸಿಗುತ್ತದೆ. ಕತ್ತಲೆ ಕೋಣೆಯಲ್ಲಿ ಮಿಂಚುಹುಳುವನ್ನು ಹುಡುಕುವವನ ಸ್ಥಿತಿಯೂ ಸ್ವಲ್ಪ ಹಾಗೆಯೇ—ಎಲ್ಲಿ ಇದೆ ಎಂದು ಗೊತ್ತಿಲ್ಲ; ಆದರೆ ಎಲ್ಲೋ ಇದೆ ಎಂಬ ನಂಬಿಕೆ ಮಾತ್ರ ಇರುತ್ತದೆ!
ಇದನ್ನು ಇಂಜಿನಿಯರಿಂಗ್ ಗೆ ಒಂದು ರೂಪಕವಾಗಿ ನೋಡಬಹುದು. ಪ್ರಕೃತಿಯಲ್ಲಿ ಅನೇಕ ಸಾಧ್ಯತೆಗಳಿವೆ. ಆದರೆ ಸಾಧ್ಯತೆ ಇದ್ದುದರಿಂದ ಮಾತ್ರ ಸೇತುವೆ ಕಟ್ಟುವುದಿಲ್ಲ, ಯಂತ್ರ ಓಡುವುದಿಲ್ಲ, ಮನೆ ನಿರ್ಮಾಣವಾಗುವುದಿಲ್ಲ. ಆ ಸಾಧ್ಯತೆಯನ್ನು ಗಮನಿಸಬೇಕು, ಅಳೆಯಬೇಕು, ಪರೀಕ್ಷಿಸಬೇಕು, ತಪ್ಪಾದರೆ ಮತ್ತೆ ಪ್ರಯತ್ನಿಸಬೇಕು. ಕೊನೆಗೆ ಕಾಗದದ ಮೇಲಿದ್ದ ರೇಖೆ ಭೌತಿಕ ವಸ್ತುವಾಗಬೇಕು. ಆಗಲೇ ಇಂಜಿನಿಯರಿಂಗ್ ತನ್ನ ಕೆಲಸ ಮಾಡಿದೆ ಎನ್ನಬಹುದು.
ಹೀಗಾಗಿ ಇಂಜಿನಿಯರಿಂಗ್ ಕೇವಲ ಬೌದ್ಧಿಕ ಚಿಂತನೆಯಲ್ಲ. ಅದು ಪ್ರಕೃತಿಯಲ್ಲಿ ಮತ್ತು ಬದುಕಿನಲ್ಲಿ ಅಡಗಿರುವ ಸಾಧ್ಯತೆಗಳನ್ನು ಗಮನಿಸಿ, ಅವುಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಂಡು, ಅವುಗಳನ್ನು ಮನುಷ್ಯನ ಬದುಕಿಗೆ ಉಪಯೋಗವಾಗುವ ರೂಪಕ್ಕೆ ತರುವ ಕ್ರಿಯೆ. ಒಂದು ಅರ್ಥದಲ್ಲಿ, “ಇದನ್ನು ಇನ್ನೊಂದು ರೀತಿಯಲ್ಲಿ ಮಾಡಬಹುದೇ?” ಎಂಬ ಪ್ರಶ್ನೆಗೆ ಕೈಯಿಂದ ಕೊಡುವ ಉತ್ತರವೇ ಇಂಜಿನಿಯರಿಂಗ್.
ಅದಕ್ಕಾಗಿ ಇಂಜಿನಿಯರ್ಸ್ ಡೇ ಕೇವಲ ಡಿಗ್ರಿ ಪಡೆದ ಇಂಜಿನಿಯರ್ಗಳ ದಿನವಲ್ಲ. ಸಮಸ್ಯೆ ಕಂಡಾಗ ಪರಿಹಾರ ಹುಡುಕುವ ಪ್ರತಿಯೊಬ್ಬರ ದಿನವೂ ಹೌದು. ರಾಮಕೃಷ್ಣನ ಮೋಟಾರ್ ಸೈಕಲ್ ನಲ್ಲೂ ಇಂಜಿನಿಯರಿಂಗ್ ಇತ್ತು. ರಾಮ್ ಕುಮಾರ್ ನ ಹಗ್ಗದಲ್ಲೂ ಇತ್ತು. ಒದ್ದೆಯಾದ ಸೌದೆಗೆ ಕರ್ಪೂರ ಹಚ್ಚಿದ ಅಡುಗೆಗಾರನಲ್ಲೂ ಇತ್ತು. ಇಂತಹ ಉದಾಹರಣೆಗಳು ನಮ್ಮ ಸುತ್ತಮುತ್ತ ಸಾವಿರಾರು ಇವೆ.
ಡಿಗ್ರಿ ಒಬ್ಬನಿಗೆ ಇಂಜಿನಿಯರ್ ಎಂಬ ಹೆಸರನ್ನು ಕೊಡಬಹುದು. ಆದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬುದ್ಧಿ, ಲಭ್ಯವಿರುವುದರಿಂದಲೇ ಹೊಸದನ್ನು ರೂಪಿಸುವ ಕೌಶಲ ಮತ್ತು “ಕೆಲಸ ಆಗಬೇಕು” ಎಂಬ ಹಠ—ಇವೇ ಇಂಜಿನಿಯರಿಂಗ್ನ ನಿಜವಾದ ಜೀವ.
ಹಾಗಾಗಿ ಈ ಇಂಜಿನಿಯರ್ಸ್ ಡೇಯಂದು ಕೇವಲ ಸರ್ಟಿಫಿಕೇಟ್ ಹಿಡಿದ ಇಂಜಿನಿಯರ್ಗಳಿಗೆ ಶುಭಾಶಯ ಹೇಳುವುದಷ್ಟೇ ಬೇಡ. ನಮ್ಮೊಳಗೆ ಎಲ್ಲೋ ಮಲಗಿರುವ ಆ ಸಣ್ಣ ಇಂಜಿನಿಯರ್ಗೂ ಒಂದು ಸಲ ನಮಸ್ಕಾರ ಮಾಡೋಣ. ಅವನು ಡಿಗ್ರಿ ಕೇಳುವುದಿಲ್ಲ; ಸಮಸ್ಯೆ ಕೊಟ್ಟರೆ ಸಾಕು!
ಎಲ್ಲ ಇಂಜಿನಿಯರ್ಗಳಿಗೆ ಇಂಜಿನಿಯರ್ಸ್ ಡೇಯ ಹಾರ್ದಿಕ ಶುಭಾಶಯಗಳು.
ಲೇಖಕರು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ TCPOದ ನಿವೃತ್ತ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ತಜ್ಞರು






