ಕರ್ನಾಟಕದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಫಾರ್ಮ್ 7 ಸಲ್ಲಿಕೆ; ಮುಸ್ಲಿಂ ಮತದಾರರೇ ಗುರಿ; ವರದಿ

ಸಾಂದರ್ಭಿಕ ಚಿತ್ರ
ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆಯ ಮತಗಟ್ಟೆ ಮಟ್ಟದ ಅಧಿಕಾರಿ (BLO) ಸೆಪ್ಟೆಂಬರ್ 24 ರಂದು ಸೈಯದ್ ಹಸ್ರತ್ ಉಲ್ಲಾ (57) ಅವರಿಗೆ ಮಾಹಿತಿ ನೀಡಿ, ಯಾರೋ ಒಬ್ಬರು ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡುವಂತೆ ಕೋರಿ ಫಾರ್ಮ್ 7 ಸಲ್ಲಿಸಿದ್ದಾರೆ ಎಂದು ತಿಳಿಸಿದಾಗ ಅವರಿಗೆ ಅಚ್ಚರಿಯಾಯಿತು. ಆ ವ್ಯಕ್ತಿ ಅವರು "ಸ್ಥಳದಲ್ಲಿಲ್ಲ/ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ" ಎಂದು ದೂರಿನಲ್ಲಿ ತಿಳಿಸಿದ್ದರು.
"ಇದು ನನ್ನಜ್ಜಿಯ ಮನೆ. ನನ್ನ ತಂದೆ ಇಲ್ಲಿ ವಾಸವಾಗಿದ್ದರು. ನಾನು ಇದೇ ಮನೆಯಲ್ಲಿ ಜನಿಸಿದ್ದೇನೆ ಮತ್ತು ಈ ಮನೆಯಿಂದಲೇ ನಾಲ್ಕು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದೇನೆ" ಎಂದು ಹಸ್ರತ್ ಉಲ್ಲಾ 'ಫ್ರಂಟ್ಲೈನ್'ಗೆ ತಿಳಿಸಿದರು. ಮೈಸೂರು ಮಹಾನಗರ ಪಾಲಿಕೆಯ 29ನೇ ವಾರ್ಡ್ನ ಜನಪ್ರತಿನಿಧಿಯಾಗಿ ಮತ್ತು 1996 ರಿಂದ ಸಕ್ರಿಯ ರಾಜಕಾರಣಿಯಾಗಿರುವ ಹಸ್ರತ್ ಉಲ್ಲಾ ಆ ಪ್ರದೇಶದಲ್ಲಿ ಎಲ್ಲರಿಗೂ ಪರಿಚಿತರಾಗಿದ್ದಾರೆ. ಆದರೂ ತಮ್ಮ ಪತ್ನಿ ಮತ್ತು ಮಗಳು ಸೇರಿದಂತೆ ತಮ್ಮ ಕುಟುಂಬದ 10 ಸದಸ್ಯರ ವಿರುದ್ಧವೂ ಫಾರ್ಮ್ 7ಗಳನ್ನು ಸಲ್ಲಿಸಲಾಗಿದೆ ಎಂದು ಹಸ್ರತ್ ಉಲ್ಲಾ ಹೇಳಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ಫಾರ್ಮ್ 7 ಒಂದು ಕಾನೂನುಬದ್ಧ ದಾಖಲೆಯಾಗಿದೆ. ಜೂನ್ 16 ರಿಂದ ಅಕ್ಟೋಬರ್ 4 ರ ನಡುವೆ ಕರ್ನಾಟಕದಲ್ಲಿ ಒಟ್ಟು 91,278 ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಲಾಗಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು ಸಾಮೂಹಿಕವಾಗಿ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂಬ ವರದಿಗಳು ರಾಜ್ಯದ ವಿವಿಧೆಡೆಯಿಂದ ಬಂದಿವೆ. ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ 3,244 ಮತದಾರರ ವಿರುದ್ಧ ಫಾರ್ಮ್ 7 ಆಕ್ಷೇಪಣೆಗಳನ್ನು ಸಲ್ಲಿಸಿದ್ದಕ್ಕಾಗಿ 32 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ, ಸೆಪ್ಟೆಂಬರ್ನಲ್ಲಿ ಕೇವಲ ಎರಡು ದಿನಗಳ ಅವಧಿಯಲ್ಲಿ ಎಂಟು ವ್ಯಕ್ತಿಗಳು 1,577 ಆಕ್ಷೇಪಣೆಗಳನ್ನು ಸಲ್ಲಿಸಿರುವುದು ವರದಿಯಾಗಿದೆ. ಬೆಳಗಾವಿಯಲ್ಲಿ, 198 ಮುಸ್ಲಿಂ ಮತದಾರರ ವಿರುದ್ಧ ಫಾರ್ಮ್ 7 ಸಲ್ಲಿಸಿದ ಆರೋಪದ ಮೇಲೆ ಬಿಜೆಪಿ ನಾಯಕ ರವಿ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅರ್ಹ ಮತದಾರರ ವಿರುದ್ಧ ಇದೇ ರೀತಿಯ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ್ದಕ್ಕೆ ಬೆಂಗಳೂರಿನ ಜಯನಗರ ಮತ್ತು ಮಲ್ಲೇಶ್ವರಂ, ಕೊಡಗು ಜಿಲ್ಲೆಯ ಬ್ಯಾಡಗೊಟ್ಟ ಹಾಗೂ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ.
ಅಕ್ಟೋಬರ್ 5 ರಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬುಕುಮಾರ್ ಅವರು, ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಪಕ್ಷದ ಬೂತ್ ಮಟ್ಟದ ಏಜೆಂಟ್-2 (BLA-2) ಒಬ್ಬರು ದಿನಕ್ಕೆ 50 ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಆದರೆ ಹಲವು ಕಡೆಗಳಲ್ಲಿ ಈ ಮೀರಿದ ಸಂಖ್ಯೆಯಲ್ಲಿ ಅರ್ಜಿಗಳನ್ನು ಸಲ್ಲಿಸಿರುವುದು ಕಂಡುಬಂದಿದೆ. ಈ ಮಿತಿಯನ್ನು ಹೇಗೆ ಮೀರಲು ಸಾಧ್ಯವಾಯಿತು ಎಂದು ಕೇಳಿದಾಗ, ಭಾಲ್ಕಿ ತಹಶೀಲ್ದಾರ್ ಮಲ್ಲಿಕಾರ್ಜುನ್ ವಡ್ಡಂಕೆರಿ ಅವರು, ವ್ಯಕ್ತಿಗಳು ವಿವಿಧ ಬೂತ್ಗಳಲ್ಲಿ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು. ಆಕ್ಷೇಪಣೆಗಳಿಗೆ ಸಂಬಂಧಿಸಿದ ನಿಯಮಗಳ ಪ್ರಕಾರ, ಸಂಬಂಧಪಟ್ಟ ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರನ್ನು ಹೊಂದಿರುವ ವ್ಯಕ್ತಿಯೇ ಆಕ್ಷೇಪಣೆಯನ್ನು ಸಲ್ಲಿಸುವುದು ಸೂಕ್ತವಾಗಿದೆ.
ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯಗಳ ಮತದಾರರ ಹಕ್ಕುಗಳನ್ನು ಗುರಿಯಾಗಿಸಲು ಬಿಜೆಪಿ ಫಾರ್ಮ್ 7 ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 1 ರಂದು ಪಕ್ಷದ ಸಹೋದ್ಯೋಗಿಗಳೊಂದಿಗೆ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅನ್ಬುಕುಮಾರ್ ಅವರು, 1960ರ ಮತದಾರರ ನೋಂದಣಿ ನಿಯಮಗಳ ನಿಯಮ 20ರ ಅಡಿಯಲ್ಲಿ ವಿಚಾರಣೆ ನಡೆಸುವಂತೆ ಮತ್ತು ಅರ್ಜಿದಾರರು "ಅರಿವಿದ್ದೇ" ಸುಳ್ಳು ಹೇಳಿಕೆಗಳನ್ನು ನೀಡಿರುವ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವಂತೆ ಎಲ್ಲಾ ಚುನಾವಣಾ ನೋಂದಣಿ ಅಧಿಕಾರಿಗಳಿಗೆ (ERO) ಸೂಚನೆ ನೀಡಿದ್ದಾರೆ.
ಫಾರ್ಮ್ 7 ಅರ್ಜಿಗಳನ್ನು ಮುದ್ರಿಸಿ ವ್ಯವಸ್ಥಿತವಾಗಿ ಸಲ್ಲಿಸಲಾಗುತ್ತಿದೆ ಎಂದು ಹಲವಾರು ವರದಿಗಳು ತಿಳಿಸಿವೆ. ಹಸ್ರತ್ ಉಲ್ಲಾ ಅವರ ವಿರುದ್ಧ ಸಲ್ಲಿಸಲಾದ ಫಾರ್ಮ್ 7 ರಲ್ಲಿ ಅವರ ಹೆಸರು, ಎಪಿಕ್ (EPIC) ಐಡಿ, ಇತರ ವಿವರಗಳು ಮತ್ತು ಹೆಸರನ್ನು ತೆಗೆದುಹಾಕಲು ಕೋరిರುವ ಕಾರಣವನ್ನು ಮುದ್ರಿಸಲಾಗಿತ್ತು. ಆದರೆ ಆಕ್ಷೇಪಣೆದಾರರಾದ ಹರೀಶ್ ಕುಮಾರ್ ಸಿ ಅವರ ಹೆಸರು, ಮೊಬೈಲ್ ಸಂಖ್ಯೆ, ಎಪಿಕ್ ಐಡಿ ಮತ್ತು ಸಹಿಯನ್ನು ಪೆನ್ನಿಂದ ಕೈಬರಹದಲ್ಲಿ ಬರೆಯಲಾಗಿತ್ತು.
ಫ್ರಂಟ್ಲೈನ್ನೊಂದಿಗೆ ಫೋನ್ನಲ್ಲಿ ಮಾತನಾಡಿದ ಹರೀಶ್ ಕುಮಾರ್, ತಮಗೆ ಪಕ್ಷದ ಕಚೇರಿಯಿಂದ ಫಾರ್ಮ್ 7 ಅರ್ಜಿಗಳು ಸಿಕ್ಕಿವೆ ಎಂದು ಹೇಳಿದರು. ಕುಮಾರ್ ಅವರು ಮೈಸೂರು ನಗರದ 27ನೇ ವಾರ್ಡ್ನ BLA-2 ಆಗಿದ್ದು, ಬಿಜೆಪಿ ಯುವ ಮೋರ್ಚಾದ ಮಾಜಿ ಉಪಾಧ್ಯಕ್ಷರಾಗಿದ್ದಾರೆ. ಅರ್ಜಿಗಳಲ್ಲಿ ಹೆಸರನ್ನು ತೆಗೆದುಹಾಕಲು ಕಾರಣವೇನು ಎಂದು ಕೇಳಿದಾಗ, ತಮಗೆ ಇಂಗ್ಲಿಷ್ ಓದಲು ಬಾರದ ಕಾರಣ ನಿಖರವಾಗಿ ತಿಳಿದಿಲ್ಲ ಎಂದು ಕುಮಾರ್ ಹೇಳಿದರು. "ಕರಡು ಪಟ್ಟಿಯಲ್ಲಿ ಹಸ್ರತ್ ಉಲ್ಲಾ ವಿಳಾಸ ತಪ್ಪಾಗಿದ್ದು ಮತ್ತು ಅವರ ಹೆಸರು ಬೇರೆ ಬೇರೆ ಎರಡು ಭಾಗದ ಸಂಖ್ಯೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಹೀಗೆ ಮಾಡಲಾಗಿದೆ ಎಂದು ನಾನು ನಂಬುತ್ತೇನೆ" ಎಂದು ಕುಮಾರ್ ತಿಳಿಸಿದರು. ತಾನು ಇಂತಹ 28 ರಿಂದ 30 ಅರ್ಜಿಗಳನ್ನು ಸಲ್ಲಿಸಿರುವುದಾಗಿಯೂ ಅವರು ಹೇಳಿದ್ದಾರೆ.
ಹಸ್ರತ್ ಉಲ್ಲಾ ಅವರ ದೂರಿನ ಮೇರೆಗೆ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಹರೀಶ್ ಕುಮಾರ್ ಅವರನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಈ ಎಫ್ಐಆರ್ನಲ್ಲಿ ವಂಚನೆ, ನಕಲಿ ದಾಖಲೆ ಸೃಷ್ಟಿ, ಸಾರ್ವಜನಿಕ ಗಲಭೆ ಸೃಷ್ಟಿಸುವುದು, ಗಲಭೆಗೆ ಪ್ರಚೋದನೆ ನೀಡುವುದು, ವಿವಿಧ ಗುಂಪುಗಳ ನಡುವೆ ದ್ವೇಷ ಹುಟ್ಟುಹಾಕುವುದು ಮತ್ತು ಅಪರಾಧ ಸಂಚು ಆರೋಪಗಳಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4), 336(3), 336(4), 353, 192, 196, 61(2) ಮತ್ತು 3(5) ಗಳನ್ನು ದಾಖಲಿಸಲಾಗಿದೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷರು ಮತ್ತು ನರಸಿಂಹರಾಜ ಕ್ಷೇತ್ರದ ಪಕ್ಷದ ಉಸ್ತುವಾರಿಯಾಗಿರುವ ಅನಿಲ್ ಥಾಮಸ್ ಅವರ ಹೆಸರೂ ಕೂಡ ಎಫ್ಐಆರ್ನಲ್ಲಿದೆ. ಬಿಎಲ್ಎಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುವ ಹಕ್ಕಿದೆ ಎಂದು ಹೇಳುವ ಮೂಲಕ ಅನಿಲ್ ಥಾಮಸ್ ಈ ಸಲ್ಲಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. BLA-2 ಆಗಿ ತಾವೇ ಸ್ವತಃ 50 ರಿಂದ 80 ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ್ದು, ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಸುಮಾರು 1,000 ಫಾರ್ಮ್ 7 ಅರ್ಜಿಗಳು ಸಲ್ಲಿಕೆಯಾಗಿರಬಹುದು ಎಂದು ಅವರು ನಂಬಿದ್ದಾರೆ.
ಕ್ಷೇತ್ರ ಮತ್ತು ಅಲ್ಲಿನ ನಿವಾಸಿಗಳ ಬಗ್ಗೆ ತಮ್ಮ ಬಳಿಯಿರುವ ಮಾಹಿತಿಯನ್ನು ಬಳಸಿ, ಯಾವ ಮತದಾರರು ಅನುಮಾನಾಸ್ಪದವಾಗಿದ್ದಾರೆ ಎಂಬುದನ್ನು ನಿರ್ಧರಿಸಿ ಬಿಜೆಪಿ ಕಾರ್ಯಕರ್ತರು ಆಕ್ಷೇಪಣೆಗಳನ್ನು ಎತ್ತಿದ್ದಾರೆ ಅಂತಾರೆ ಥಾಮಸ್ ."ಇದು ನಮ್ಮ ಹಕ್ಕು. ಬಿಎಲ್ಒಗಳು ಈ ಮತದಾರರ ಸ್ಥಳ ಪರಿಶೀಲನೆ ಮಾಡಬೇಕೆಂದು ನಾವು ಬಯಸುತ್ತೇವೆ. ಅವರು ನಿಜವಾದ ಮತದಾರರಾಗಿದ್ದರೆ ಅವರ ಹೆಸರುಗಳನ್ನು ತೆಗೆದುಹಾಕುವುದಿಲ್ಲವಲ್ಲವೇ? ಇದು ಬಹಳ ಸರಳ ವಿಷಯ, ಆದರೆ ಅಲ್ಪಸಂಖ್ಯಾತರು, ದಲಿತರು ಮತ್ತು ಒಬಿಸಿಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬ ಸುಳ್ಳು ಕಥೆಯನ್ನು ಕಾಂಗ್ರೆಸ್ ಸೃಷ್ಟಿಸುತ್ತಿದೆ" ಎಂದು ಥಾಮಸ್ ಹೇಳಿದ್ದಾರೆ.
'ಫ್ರಂಟ್ಲೈನ್' ಜತೆ ಮಾತನಾಡಿದ ಥಾಮಸ್, ಸಮೀಕ್ಷೆಯ ಹಂತದಲ್ಲಿ ಬಿಎಲ್ಒಗಳು ಮನೆಗಳಿಗೆ ಭೇಟಿ ನೀಡದೆ ಫಾರ್ಮ್ಗಳನ್ನು ವಿತರಿಸಿದ್ದರಿಂದ ತಾವು ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸುವುದು ಅನಿವಾರ್ಯವಾಯಿತು ಎಂದಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅನರ್ಹ ಮತದಾರರಿದ್ದಾರೆ ಎಂದು ಅವರು ನಂಬಿದ್ದಾರೆ. ಈ ಫಾರ್ಮ್ 7 ಅರ್ಜಿಗಳಲ್ಲಿ ಮುಸ್ಲಿಮೇತರ ಮತದಾರರು ಯಾಕೆ ಕಾಣಿಸುತ್ತಿಲ್ಲ ಎಂದು ಕೇಳಿದಾಗ, ಗೈರುಹಾಜರಾದ, ಮೃತಪಟ್ಟ ಅಥವಾ ಸ್ಥಳಾಂತರಗೊಂಡ ಎಲ್ಲಾ ಹಿಂದೂ ಮತದಾರರನ್ನು ಈಗಾಗಲೇ ನಿಗದಿತ ಪ್ರಕ್ರಿಯೆಯ ಮೂಲಕ ತೆಗೆದುಹಾಕಲಾಗಿದೆ ಎಂದು ಥಾಮಸ್ ಉತ್ತರಿಸಿದ್ದಾರೆ.
ಕಾರ್ಯಕರ್ತರ ಪ್ರಕಾರ, ಮುಸ್ಲಿಂ ಮತದಾರರನ್ನು ಗುರಿಯಾಗಿಸಲು ಫಾರ್ಮ್ 7 ಅನ್ನು ಬಳಸಲಾಗುತ್ತಿರುವುದು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಎರಡನೇ ಹಂತದಲ್ಲೂ ಕಂಡುಬಂದಿತ್ತು. ಸಿವಿಲ್ ರೈಟ್ಸ್ ರಕ್ಷಣಾ ಸಂಘಟನೆಯ (APCR) ಕರ್ನಾಟಕ ಘಟಕದ ಶಾಜಿನ್ ಸಿದ್ದಿಕ್ ಮಾತನಾಡಿ, ಆ ಸಂದರ್ಭದಲ್ಲಿ ಬಂದ ಮಾಧ್ಯಮ ವರದಿಗಳು "ಕರ್ನಾಟಕದಲ್ಲಿ ನಡೆಯುವ ಎಸ್ಐಆರ್ ಸಮಯದಲ್ಲಿ ನಾವು ಇದರ ಮೇಲೆ ಕಣ್ಣಿಡಬೇಕು" ಎಂಬುವುದನ್ನು ನಮಗೆ ಮನವರಿಕೆ ಮಾಡಿಕೊಟ್ಟವು ಎಂದು ಹೇಳಿದರು. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ನವೀಕರಿಸಲಾದ ಆಕ್ಷೇಪಣೆಗಳ ಕ್ರೋಢೀಕೃತ ವರದಿಗಳನ್ನು (ಫಾರ್ಮ್ 10) ನಾಗರಿಕ ಸ್ವಯಂಸೇವಕರು ಟ್ರ್ಯಾಕ್ ಮಾಡಿದ್ದಾರೆ.
ಹಕ್ಕುಗಳು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಅವಧಿ ಸೆಪ್ಟೆಂಬರ್ 24 ರಂದು ಮುಕ್ತಾಯಗೊಳ್ಳಲು ಕೆಲವೇ ದಿನಗಳಿದ್ದಾಗ, ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿರುವುದು ಮೇಲ್ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಬಬಲೇಶ್ವರದಲ್ಲಿ ಸೆಪ್ಟೆಂಬರ್ 22 ರಂದು ಮೂವರು ವ್ಯಕ್ತಿಗಳು 992 ಆಕ್ಷೇಪಣೆಗಳನ್ನು ಹಾಗೂ ಭಾಲ್ಕಿಯಲ್ಲಿ 10 ಜನ ವ್ಯಕ್ತಿಗಳು 346 ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಇವೆಲ್ಲವೂ ಹೆಚ್ಚಾಗಿ ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿವೆ ಎಂದು ಸಿದ್ದಿಕ್ ಅವರು ಆಯಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ನೀಡಿದ ದೂರುಗಳಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ಹಾಗೂ ಭಾಲ್ಕಿ ನಗರಸಭೆಯ ನಾಮನಿರ್ದೇಶಿತ ಸದಸ್ಯರಾದ ಮೊಹಮ್ಮದ್ ಅತೀಕ್ ಕೂಡ ಈ ಬೆಳವಣಿಗೆಯನ್ನು ಗಮನಿಸಿದ್ದಾರೆ. ತಮ್ಮ ಬೂತ್ನಲ್ಲಿ ತಾವೂ ಸೇರಿದಂತೆ 200 ಜನರಿಗೆ ವಿರುದ್ಧವಾಗಿ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬುದು ತಮ್ಮ ಬೂತ್ ಮಟ್ಟದ ಅಧಿಕಾರಿಯಿಂದ ಅವರಿಗೆ ತಿಳಿದುಬಂದಿದೆ. "ನನಗೆ ಅಚ್ಚರಿಯಾಯಿತು ಮತ್ತು ಇದು ಯಾಕಾಯಿತು ಎಂದು ಯೋಚಿಸಿದೆ. ನನ್ನ ಬೂತ್ನಲ್ಲಿ ಸುಮಾರು 900 ಮತದಾರರಿದ್ದಾರೆ, ಮತ್ತು ಸಮೀಕ್ಷೆಯ ಹಂತದಲ್ಲೇ ನಾವು ಮೃತಪಟ್ಟವರನ್ನು ಅಥವಾ ಸ್ಥಳಾಂತರಗೊಂಡವರನ್ನು ಈಗಾಗಲೇ ಪಟ್ಟಿಯಿಂದ ತೆಗೆದುಹಾಕಿದ್ದೆವು. ಈಗ ಸುಮಾರು 700 ಜನ ಉಳಿದಿದ್ದಾರೆ" ಎಂದು ಅತೀಕ್ 'ಫ್ರಂಟ್ಲೈನ್'ಗೆ ತಿಳಿಸಿದರು.
ಸಮೀಕ್ಷೆಯ ಹಂತದಲ್ಲಿ ಅತೀಕ್ ಅವರು ತಮ್ಮ ಪ್ರದೇಶದ ಜನರಿಗೆ 2002 ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಹುಡುಕಲು ಮತ್ತು ಫಾರ್ಮ್ಗಳನ್ನು ಭರ್ತಿ ಮಾಡಲು ಸಹಾಯ ಮಾಡಲು ತಾತ್ಕಾಲಿಕ ಕಚೇರಿಯೊಂದನ್ನು ತೆರೆದಿದ್ದರು. "ನಾನು ಅನೇಕ ಜನರಿಗೆ ಸಹಾಯ ಮಾಡಿದೆ. ಯಾರು ಯಾವ ಪಕ್ಷದವರು ಅಥವಾ ಧರ್ಮದವರು ಎಂದು ನಾನು ನೋಡಲಿಲ್ಲ. ನಮ್ಮ ಹೆಸರುಗಳು ಕರಡು ಪಟ್ಟಿಯಲ್ಲಿದ್ದಾಗ, ಸರಿ, ಈಗ ಕೆಲಸ ಮುಗಿಯಿತು ಎಂದು ನಾವು ಭಾವಿಸಿದ್ದೆವು. ಆದರೆ ಇದು ಹೊಸ ಆತಂಕವನ್ನು ತಂದಿದೆ" ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ 3,244 ಜನರ ವಿರುದ್ಧ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ್ದ 32 ಜನರ ವಿರುದ್ಧ ಅತೀಕ್ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 319(2), 336(2), 336(3), 340(2), 190 ಮತ್ತು 61(2) ರ ಅಡಿಯಲ್ಲಿ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸೆಪ್ಟೆಂಬರ್ 25 ರಂದು ಪ್ರಾಥಮಿಕ ತನಿಖೆ ನಡೆಸಲಾಗಿದೆ ಎಂದು ಭಾಲ್ಕಿ ತಹಶೀಲ್ದಾರ್ ಮಲ್ಲಿಕಾರ್ಜುನ್ ವಡ್ಡಂಕೆರಿ 'ಫ್ರಂಟ್ಲೈನ್'ಗೆ ತಿಳಿಸಿದರು. ವಿಚಾರಣೆಗೆ ಹಾಜರಾದ ಆಕ್ಷೇಪಣೆದಾರರು ತಮ್ಮ ದಾವೆಯನ್ನು ಸಮರ್ಥಿಸಲು ಯಾವುದೇ ದಾಖಲೆಗಳನ್ನು ಸಲ್ಲಿಸಲಿಲ್ಲ. ಬದಲಿಗೆ, ಅವರಲ್ಲಿ ಹೆಚ್ಚಿನವರು ತಮ್ಮ ಆಕ್ಷೇಪಣೆಗಳನ್ನು ವಾಪಸ್ ಪಡೆಯಲು ಪತ್ರಗಳನ್ನು ಬರೆದುಕೊಟ್ಟಿದ್ದಾರೆ. ಮುಖ್ಯ ಚುನಾವಣಾ ಅಧಿಕಾರಿಯವರ ಸೂಚನೆಯಂತೆ ಜನತಾ ಪ್ರಾತಿನಿಧ್ಯ ಕಾಯ್ದೆಯ (RPA) ನಿಯಮ 20 ರ ಅಡಿಯಲ್ಲಿ ತನಿಖೆ ನಡೆಸಲಾಗುವುದು ಎಂದು ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ ಶಂಕರ್ ದೃಢಪಡಿಸಿದರು. ತನಿಖೆ ಪೂರ್ಣಗೊಂಡ ನಂತರ ನಾವು ಎಲ್ಲರಿಗೂ ಮಾಹಿತಿ ನೀಡುತ್ತೇವೆ" ಎಂದು ಶಂಕರ್ ಹೇಳಿದರು.
ಬಬಲೇಶ್ವರದಲ್ಲೂ ಸಹ, ಆರು ಮಂದಿ ಆಕ್ಷೇಪಣೆದಾರರು ತಾವು ಸಲ್ಲಿಸಿದ್ದ 1,634 ಫಾರ್ಮ್ 7 ಅರ್ಜಿಗಳನ್ನು ವಾಪಸ್ ಪಡೆದುಕೊಂಡಿದ್ದು, ಯಾವುದೇ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಕೋರಿದ್ದಾರೆ. 'ಫ್ರಂಟ್ಲೈನ್' ಜತೆ ಹಂಚಿಕೊಳ್ಳಲಾದ ಅವರ ಸಹಿ ಇರುವ ಪತ್ರದ ಫೋಟೋದ ಪ್ರಕಾರ, ಆ ಆರು ಮಂದಿ ಆಕ್ಷೇಪಣೆದಾರರು ಬಿಜೆಪಿಯ ಸದಸ್ಯರಾಗಿದ್ದಾರೆ. ಈ ಪತ್ರದ ಮೇಲೆ ವಿಜಯಪುರದ ಸಹಾಯಕ ಆಯುಕ್ತರ ಕಚೇರಿಯ ಮುದ್ರೆಯಿದ್ದು, ದಿನಾಂಕ ಸೆಪ್ಟೆಂಬರ್ 23 ಎಂದಿದೆ.
ಕೃಪೆ: frontline.thehindu.com






