ಉದ್ಯೋಗಿಗಳ ವಜಾ, AI ಗೆ ಮೂಲಸೌಕರ್ಯ; Amazon ವಿರುದ್ಧ ತಿರುಗಿಬಿದ್ದ ನೌಕರರು!

Photo Credit: timesofindia
ಕೃತಕ ಬುದ್ಧಿಮತ್ತೆಗಾಗಿ ಕೋಟ್ಯಂತರ ಡಾಲರ್ ವೆಚ್ಚ ಮಾಡುತ್ತಿರುವ Amazon, ಎಂಟು ತಿಂಗಳಲ್ಲಿ 30 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಿದೆ!
AI (ಕೃತಕ ಬುದ್ಧಿಮತ್ತೆ) ಮೇಲೆ ಹೆಚ್ಚು ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಒತ್ತಡಕ್ಕೆ ಸಿಲುಕಿವೆ. Amazon ನಲ್ಲಿ ಈ ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ವಿವಾದಕ್ಕೂ ಕಾರಣವಾಗಿದೆ. ಕಳೆದ ಎಂಟು ತಿಂಗಳಲ್ಲಿ Amazon 30,000 ಕಾರ್ಪೋರೇಟ್ ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪೆನಿಯ ಸಿಇಒ ಆಂಡಿ ಜೆಸ್ಸಿ, ಸಂಸ್ಥೆಯಲ್ಲಿ ಆಡಳಿತಾತ್ಮಕ ಪದರಗಳನ್ನು ಕಡಿಮೆ ಮಾಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಇದೇ ವೇಳೆ, Amazon AI ಮೂಲಸೌಕರ್ಯದ ಮೇಲೆ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಿಗೆ ಶಕ್ತಿ ನೀಡಬಲ್ಲ ಹೊಸ ಡೇಟಾ ಕೇಂದ್ರಗಳ ಸ್ಥಾಪನೆಯೂ ಇದರಲ್ಲಿ ಸೇರಿದೆ.
ವಜಾದ ಸಮಯವನ್ನು ಪ್ರಶ್ನಿಸುತ್ತಿರುವ ಉದ್ಯೋಗಿಗಳು
ಕೆಲವು Amazon ಉದ್ಯೋಗಿಗಳು, ವಜಾಗೊಳಿಸುವಿಕೆಯ ಸಮಯವನ್ನು ನಿರ್ಲಕ್ಷಿಸುವುದು ಕಷ್ಟ ಎಂದು ಹೇಳುತ್ತಿದ್ದಾರೆ. ಇದೇ ವಾರ Amazon ಇಂಜಿನಿಯರಿಂಗ್ ತಂಡದ ಸದಸ್ಯರು ಸಿಯಾಟಲ್ ನಗರ ಮಂಡಳಿಯ ವಿಚಾರಣೆಯಲ್ಲಿ ಭಾಗವಹಿಸಿದ್ದರು. ಅವರ ಸಂದೇಶ ಸರಳವಾಗಿತ್ತು: ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿರುವಾಗ, Amazon AIಗಾಗಿ ಅಗತ್ಯವಾದ ಕಂಪ್ಯೂಟಿಂಗ್ ಸಾಮರ್ಥ್ಯ ನಿರ್ಮಾಣದ ಸ್ಪರ್ಧೆಯಲ್ಲಿ ತೊಡಗಿದೆ.
Amazon ವೆಬ್ ಸರ್ವಿಸಸ್ ನ ಸಾಫ್ಟ್ವೇರ್ ಇಂಜಿನಿಯರ್ ಪ್ಯಾಟ್ರಿಕ್ ಸ್ಕ್ಲೋಸೆರ್ ಮಾತನಾಡಿ, ಕಂಪೆನಿಯ ಇತ್ತೀಚಿನ ಉದ್ಯೋಗ ಕಡಿತವು Amazon AI ಸಾಮರ್ಥ್ಯವನ್ನು ಎಷ್ಟು ತುರ್ತಾಗಿ ವಿಸ್ತರಿಸಲು ಪ್ರಯತ್ನಿಸುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
‘ನನ್ನ ಕಂಪೆನಿಯ ಮುಖ್ಯಸ್ಥರು ಕಳೆದ ಎಂಟು ತಿಂಗಳಲ್ಲಿ 30,000 ಕಾರ್ಪೋರೇಟ್ ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ತಂತ್ರಜ್ಞಾನ ಸಂಸ್ಥೆಯು ಸಾಧ್ಯವಾದಷ್ಟು ವೇಗವಾಗಿ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ನಿರ್ಮಿಸುವ ಹತಾಶ ಸ್ಥಿತಿಯಲ್ಲಿದೆ’ ಎಂದು ಅವರು ಹೇಳಿದ್ದಾರೆ.
ಈ ಕುರಿತು Amazon ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕಂಪೆನಿ ತನ್ನ ಉದ್ಯೋಗಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಎಂದು ತಿಳಿಸಿದೆ.
AI ಮೇಲೆ ಕೋಟ್ಯಂತರ ಡಾಲರ್ ವೆಚ್ಚ
ಪ್ರಮುಖ ತಂತ್ರಜ್ಞಾನ ಕಂಪೆನಿಗಳು AI ಮೂಲಸೌಕರ್ಯದ ಮೇಲೆ ಅಭೂತಪೂರ್ವ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿರುವುದರಿಂದ ವ್ಯಾಪಕ ಚರ್ಚೆ ನಡೆಯುತ್ತಿದೆ. Amazon, ಮೈಕ್ರೋಸಾಫ್ಟ್, ಗೂಗಲ್ನ ಮಾತೃಸಂಸ್ಥೆ ಆಲ್ಫಾಬೆಟ್ ಹಾಗೂ ಮೆಟಾ ಕಂಪೆನಿಗಳು ಈ ವರ್ಷ ಒಟ್ಟಾರೆ ಸುಮಾರು 700 ಶತಕೋಟಿ ಡಾಲರ್ ಗಳನ್ನು AI ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ನಿರೀಕ್ಷೆಯಿದೆ. Amazon 2026ರಲ್ಲಿ ಬಂಡವಾಳ ವೆಚ್ಚಕ್ಕಾಗಿ 200 ಶತಕೋಟಿ ಡಾಲರ್ ವ್ಯಯಿಸಲು ಯೋಜಿಸಿದೆ.
ಡೇಟಾ ಕೇಂದ್ರಗಳ ಬಗ್ಗೆ ಹೆಚ್ಚುತ್ತಿರುವ ಕಳವಳ
AI ಡೇಟಾ ಕೇಂದ್ರಗಳ ವೇಗದ ವಿಸ್ತರಣೆಯು ತಂತ್ರಜ್ಞಾನ ಕ್ಷೇತ್ರದ ಹೊರಗೂ ಕಳವಳ ಮೂಡಿಸಿದೆ. ಈ ಕೇಂದ್ರಗಳಿಗೆ ಅಪಾರ ಪ್ರಮಾಣದ ನೀರು ಮತ್ತು ವಿದ್ಯುತ್ ಅಗತ್ಯವಿದೆ. ಪರಿಣಾಮವಾಗಿ, ಅಮೆರಿಕದ ಹಲವು ಪ್ರದೇಶಗಳ ನಿವಾಸಿಗಳು ತಮ್ಮ ಸಮುದಾಯಗಳಲ್ಲಿ ಡೇಟಾ ಕೇಂದ್ರಗಳ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೊಸ ಸೌಲಭ್ಯಗಳ ವಿಸ್ತರಣೆಯನ್ನು ನಿಯಂತ್ರಿಸುವಂತೆ ಸಮುದಾಯಗಳು ಒತ್ತಾಯಿಸುತ್ತಿವೆ. AI ಡೇಟಾ ಕೇಂದ್ರಗಳ ಪರಿಸರೀಯ ವೆಚ್ಚದ ಬಗ್ಗೆ ಆತಂಕವೂ ವ್ಯಕ್ತವಾಗಿದೆ.
ಸಮುದಾಯಗಳ ಈ ಒತ್ತಡವು ಶಾಸಕರ ಗಮನವನ್ನೂ ಸೆಳೆದಿದೆ. ಅಮೆರಿಕದ ನ್ಯಾಷನಲ್ ಕಾನ್ಫರೆನ್ಸ್ ಆಫ್ ಸ್ಟೇಟ್ ಲೆಜಿಸ್ಲೇಚರ್ಸ್ ಪ್ರಕಾರ, 14 ರಾಜ್ಯಗಳು ಹೊಸ ಡೇಟಾ ಕೇಂದ್ರಗಳ ಸ್ಥಾಪನೆಗೆ ನಿರ್ಬಂಧ ವಿಧಿಸುವ ಅಥವಾ ನಿಯಂತ್ರಣ ಕಠಿಣಗೊಳಿಸುವ ಶಾಸನಗಳನ್ನು ಪರಿಗಣಿಸುತ್ತಿವೆ.






