ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಪ್ರಮುಖ ನಾಯಕರು ಯಾರು? ಅವರ ಪ್ರಾಮುಖ್ಯತೆ ಏನು?

Photo credit: PTI
ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾಹ್ ಅಲ್ಸಿಸಿ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಸೇರಿದಂತೆ ಬ್ರಿಕ್ಸ್ ಒಕ್ಕೂಟದ ನಾಯಕರು ಹಾಗೂ ಹಿರಿಯ ಪ್ರತಿನಿಧಿಗಳು ಶನಿವಾರ (ಸೆಪ್ಟೆಂಬರ್ 12) ಆರಂಭವಾಗುವ 18ನೇ ಬ್ರಿಕ್ಸ್ ಶೃಂಗಸಭೆಗಾಗಿ ಹೊಸ ದಿಲ್ಲಿಯಲ್ಲಿ ಸಭೆ ಸೇರಿದ್ದಾರೆ.
ಈ ಶೃಂಗಸಭೆಯು ಒಕ್ಕೂಟದ ಹೊಸ ಸದಸ್ಯರು, ಪಾಲುದಾರ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ನಾಯಕರು ಹಾಗೂ ಪ್ರತಿನಿಧಿಗಳನ್ನು ಒಂದೆಡೆ ಸೇರಿಸಿದೆ. ಇದು ಮೂಲ ಐದು ಸದಸ್ಯರ ಮಾದರಿಯನ್ನು ಮೀರಿ ಬ್ರಿಕ್ಸ್ ಎಷ್ಟು ವಿಸ್ತರಿಸಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಪಶ್ಚಿಮ ಏಷ್ಯಾ ಮತ್ತು ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧಗಳು, ತೀವ್ರಗೊಳ್ಳುತ್ತಿರುವ ಮಹಾಶಕ್ತಿಗಳ ನಡುವಿನ ಪೈಪೋಟಿ ಹಾಗೂ ಜಾಗತಿಕ ಸಂಸ್ಥೆಗಳಲ್ಲಿ ಪ್ರಭಾವದ ಸಮತೋಲನದ ಕುರಿತಾದ ಹೊಸ ಚರ್ಚೆಗಳ ಹಿನ್ನೆಲೆಯಲ್ಲಿ ಇವರ ಉಪಸ್ಥಿತಿಯು ಮಹತ್ವದ್ದಾಗಿದೆ.
ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಪ್ರಮುಖ ವ್ಯಕ್ತಿಗಳು ಯಾರು? ಅವರ ಹಿನ್ನೆಲೆ ಏನು ಮತ್ತು ಪ್ರಸ್ತುತ ಜಾಗತಿಕ ರಾಜಕಾರಣದಲ್ಲಿ ಅವರು ಏಕೆ ಮುಖ್ಯವಾಗುತ್ತಾರೆ ಎಂಬುದರ ಕಿರುನೋಟ ಇಲ್ಲಿದೆ.
►ಚೀನಾ – ಅಧ್ಯಕ್ಷ ಕ್ಸಿ ಜಿನ್ಪಿಂಗ್
ಕ್ಸಿ ಜಿನ್ಪಿಂಗ್ ಅವರು 2013ರಿಂದ ಚೀನಾದ ಅಧ್ಯಕ್ಷರಾಗಿ ಮತ್ತು 2012ರಿಂದ ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ಸಿ ಅವರ ನೇತೃತ್ವದಲ್ಲಿ ಚೀನಾವು 'ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್' ಮುಂತಾದ ಯೋಜನೆಗಳ ಮೂಲಕ ಜಾಗತಿಕ ದಕ್ಷಿಣ ರಾಷ್ಟ್ರಗಳ ಜೊತೆ ತನ್ನ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಬಂಧವನ್ನು ವಿಸ್ತರಿಸಿಕೊಂಡಿದೆ. ಅದೇ ಸಮಯದಲ್ಲಿ ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದಂತಹ ವಿಚಾರಗಳಲ್ಲಿ ಹೆಚ್ಚು ಆಕ್ರಮಣಕಾರಿ ನಿಲುವನ್ನು ತಾಳಿದೆ.
ಬ್ರಿಕ್ಸ್ ಒಕ್ಕೂಟದಲ್ಲಿ ಚೀನಾವು ಅತಿ ದೊಡ್ಡ ಆರ್ಥಿಕತೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಮುಖ ಉತ್ಪಾದನಾ, ವ್ಯಾಪಾರ ಮತ್ತು ಹೂಡಿಕೆ ಶಕ್ತಿಯಾಗಿದೆ. ಬಹುಧ್ರುವೀಯ ಅಂತರರಾಷ್ಟ್ರೀಯ ವ್ಯವಸ್ಥೆಗಾಗಿ ಬ್ರಿಕ್ಸ್ ಅನ್ನು ಚೀನಾವು ನಿರಂತರವಾಗಿ ಬೆಂಬಲಿಸಿಕೊಂಡು ಬಂದಿದೆ. ಅಲ್ಲದೆ, ಐಎಂಎಫ್ ಮತ್ತು ವಿಶ್ವಬ್ಯಾಂಕ್ನಂತಹ ಸಂಸ್ಥೆಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ಪ್ರತಿನಿಧಿತ್ವ ಸಿಗಬೇಕು ಎಂದು ವಾದಿಸುತ್ತಿದೆ.
2020ರ ಗಡಿ ಸಂಘರ್ಷದ ನಂತರ ಕ್ಸಿ ಜಿನ್ಪಿಂಗ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಗೆ ಎಂಬ ಕಾರಣಕ್ಕೂ ಅವರ ಈ ಭೇಟಿ ಬಹಳ ಮುಖ್ಯವಾಗಿದೆ. ಇತ್ಯರ್ಥವಾಗದ ಗಡಿ ವಿವಾದ, ಪಾಕಿಸ್ತಾನದ ಜೊತೆ ಚೀನಾ ಹೊಂದಿರುವ ಸಂಬಂಧದ ಬಗ್ಗೆ ಭಾರತದ ಕಳಪಳಗಳು ಹಾಗೂ ಚೀನಾದ ಜೊತೆಗಿನ ಭಾರತದ ದೊಡ್ಡ ಮಟ್ಟದ ವ್ಯಾಪಾರ ಕೊರತೆಯಂತಹ ಗಂಭೀರ ಭಿನ್ನಾಭಿಪ್ರಾಯಗಳು ಇನ್ನೂ ಹಾಗೆಯೇ ಉಳಿದಿವೆ.
►ರಷ್ಯಾ – ಅಧ್ಯಕ್ಷ ವ್ಲಾಡಿಮಿರ್ ಪುಟಿನ್
1999ರಿಂದ ಅಧ್ಯಕ್ಷರಾಗಿ ಅಥವಾ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ವ್ಲಾಡಿಮಿರ್ ಪುಟಿನ್ ಅವರು ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ರಷ್ಯಾದ ರಾಜಕಾರಣದಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ. ಸೋವಿಯತ್ ಒಕ್ಕೂಟದ ಪತನದ ನಂತರದ ಅಸ್ಥಿರ ವರ್ಷಗಳಲ್ಲಿ ರಾಜಕೀಯ ಪ್ರವೇಶಿಸಿದ ಮಾಜಿ ಕೆಜಿಬಿ ಗುಪ್ತಚರ ಅಧಿಕಾರಿಯಾಗಿರುವ ಪುಟಿನ್, ಕ್ರಮೇಣ ರಾಜಕೀಯ ಅಧಿಕಾರವನ್ನು ಅಧ್ಯಕ್ಷ ಸ್ಥಾನ ಮತ್ತು ರಷ್ಯಾದ ಸರ್ಕಾರದ ಕಡೆಗೆ ಕೇಂದ್ರೀಕರಿಸಿದ್ದಾರೆ. 2022ರಲ್ಲಿ ಉಕ್ರೇನ್ ಮೇಲೆ ನಡೆದ ದಾಳಿಯು ವ್ಯಾಪಕ ಪಶ್ಚಿಮ ದೇಶಗಳ ನಿರ್ಬಂಧಗಳಿಗೆ ಕಾರಣವಾಯಿತು ಮತ್ತು ಮಾಸ್ಕೋವನ್ನು ಪಶ್ಚಿಮ ದೇಶಗಳ ವ್ಯವಸ್ಥೆಯ ಹೊರಗಿನ ದೇಶಗಳೊಂದಿಗೆ ಆಳವಾದ ಸಂಬಂಧಗಳನ್ನು ಹೊಂದುವಂತೆ ಮಾಡಿತು.
ಪಶ್ಚಿಮ ದೇಶಗಳ ನಿರ್ಬಂಧಗಳನ್ನು ಸೇರಲು ನಿರಾಕರಿಸಿದ ದೇಶಗಳೊಂದಿಗೆ ಸಂಬಂಧವನ್ನು ಕಾಯ್ದುಕೊಳ್ಳಲು ಮತ್ತು ತನಗೆ ಗಮನಾರ್ಹ ಅಂತರರಾಷ್ಟ್ರೀಯ ಪಾಲುದಾರಿಕೆಗಳಿವೆ ಎಂದು ತೋರಿಸಲು ಬ್ರಿಕ್ಸ್ ರಷ್ಯಾಕ್ಕೆ ಒಂದು ಪ್ರಮುಖ ರಾಜತಾಂತ್ರಿಕ ವೇದಿಕೆಯನ್ನು ಒದಗಿಸುತ್ತದೆ.
ರಷ್ಯಾದ ಅತ್ಯಂತ ಪ್ರಮುಖ ಕಾರ್ಯತಂತ್ರದ ಪಾಲುದಾರರಲ್ಲಿ ಭಾರತ ಇಂದಿಗೂ ಮುಂಚೂಣಿಯಲ್ಲಿದೆ. ರಕ್ಷಣಾ ಸಹಕಾರವು ಐತಿಹಾಸಿಕವಾಗಿ ಈ ಸಂಬಂಧದ ಬೆನ್ನೆಲುಬಾಗಿದೆ. ಉಕ್ರೇನ್ ಯುದ್ಧದ ನಂತರ ರಷ್ಯಾದ ಕಚ್ಚಾ ತೈಲದ ಅತಿ ದೊಡ್ಡ ಖರೀದಿದಾರರಲ್ಲಿ ಒಂದಾಗಿ ಭಾರತ ಹೊರಹೊಮ್ಮಿರುವುದರಿಂದ ಇಂಧನ ಸಂಬಂಧಗಳು ಇನ್ನಷ್ಟು ಮಹತ್ವ ಪಡೆದುಕೊಂಡಿವೆ. 2024-25ರಲ್ಲಿ ದ್ವಿಪಕ್ಷೀಯ ವ್ಯಾಪಾರವು ಸುಮಾರು 70 ಬಿಲಿಯನ್ ಡಾಲರ್ಗಳನ್ನು ತಲುಪಿದೆ ಮತ್ತು ಎರಡೂ ದೇಶಗಳು 2030ರ ವೇಳೆಗೆ 100 ಬಿಲಿಯನ್ ಡಾಲರ್ಗಳ ಗುರಿಯನ್ನು ಹೊಂದಿವೆ.
ಅಮೆರಿಕ, ಯುರೋಪ್, ಜಪಾನ್ ಮತ್ತು ಗಲ್ಫ್ ದೇಶಗಳೊಂದಿಗೆ ಭಾರತ ತನ್ನ ಸಂಬಂಧವನ್ನು ಗಾಢವಾಗಿಸುತ್ತಿದ್ದರೂ ಸಹ, ಭಾರತದ ಕಾರ್ಯತಂತ್ರದ ಲೆಕ್ಕಾಚಾರದಲ್ಲಿ ರಷ್ಯಾವು ಪ್ರಮುಖ ಭಾಗವಾಗಿ ಮುಂದುವರಿದಿರುವುದರಿಂದ ಪುಟಿನ್ ಅವರ ಈ ಭೇಟಿಯು ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ.
►ಬ್ರೆಝಿಲ್ – ವಿದೇಶಾಂಗ ಸಚಿವ ಮೌರೋ ವಿಯೆರಾ
ಮೌರೋ ಲೂಯಿಸ್ ಲೆಕ್ಕರ್ ವಿಯೆರಾ ಅವರು 2023 ಜನವರಿ 1ರಿಂದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 2015ರಿಂದ 2016ರ ಅವಧಿಯಲ್ಲೂ ಇದೇ ಹುದ್ದೆಯನ್ನು ನಿರ್ವಹಿಸಿದ್ದರು. ವಿಯೆರಾ ಅವರು 2004ರಿಂದ 2010ರವರೆಗೆ ಅರ್ಜೆಂಟೀನಾದಲ್ಲಿ ಬ್ರೆಝಿಲ್ನ ರಾಯಭಾರಿಯಾಗಿ ನಾಮನಿರ್ದೇಶನಗೊಂಡಿದ್ದರು. ತದನಂತರ 2014 ಡಿಸೆಂಬರ್ 31ರಂದು ವಿದೇಶಾಂಗ ಸಚಿವರಾಗಿ ನೇಮಕಗೊಳ್ಳುವವರೆಗೆ ಅಮೆರಿಕದಲ್ಲಿ ಬ್ರೆಝಿಲ್ನ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.
ಲ್ಯಾಟಿನ್ ಅಮೆರಿಕದ ಅತಿ ದೊಡ್ಡ ಆರ್ಥಿಕತೆಯಾಗಿರುವ ಬ್ರೆಝಿಲ್, ಕೃಷಿ ಉತ್ಪನ್ನಗಳು, ಇಂಧನ ಮತ್ತು ಖನಿಜಗಳ ಪ್ರಮುಖ ರಫ್ತುದಾರ ರಾಷ್ಟ್ರವಾಗಿದೆ. ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಹಾಗೂ ಉದಯೋನ್ಮುಖ ಆರ್ಥಿಕತೆಗಳ ನಡುವೆ ಹಣಕಾಸು ಮತ್ತು ಆರ್ಥಿಕ ಸಹಕಾರವನ್ನು ಬಲಪಡಿಸುವ ಕುರಿತು ಬ್ರಿಕ್ಸ್ ಒಕ್ಕೂಟದಲ್ಲಿ ಇದು ಪ್ರಮುಖ ಧ್ವನಿಯಾಗಿದೆ.
ಜಾಗತಿಕ ಆಡಳಿತದ ಸುಧಾರಣೆ, ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳ ಹೆಚ್ಚಿನ ಬಳಕೆ ಹಾಗೂ ಐಎಂಎಫ್ ಮತ್ತು ವಿಶ್ವಬ್ಯಾಂಕ್ನಂತಹ ಸಂಸ್ಥೆಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಭಾವವನ್ನು ವಿಸ್ತರಿಸುವುದು ಬ್ರಿಕ್ಸ್ ಒಕ್ಕೂಟದಲ್ಲಿ ಬ್ರೆಝಿಲ್ನ ಪ್ರಾಥಮಿಕ ಆದ್ಯತೆಗಳಾಗಿವೆ.
ವ್ಯಾಪಾರ, ಕೃಷಿ, ಇಂಧನ, ಔಷಧಗಳು ಮತ್ತು ರಕ್ಷಣಾ ಕ್ಷೇತ್ರಗಳನ್ನು ಒಳಗೊಂಡ ವಿಶಾಲವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ಭಾರತ ಮತ್ತು ಬ್ರೆಝಿಲ್ ಬೆಳೆಸಿಕೊಂಡಿವೆ. ಲ್ಯಾಟಿನ್ ಅಮೆರಿಕದಲ್ಲಿ ಭಾರತದ ಅತಿ ದೊಡ್ಡ ವ್ಯಾಪಾರಿ ಪಾಲುದಾರರಲ್ಲಿ ಬ್ರೆಝಿಲ್ ಒಂದಾಗಿದ್ದರೆ, ಭಾರತವು ಬ್ರೆಝಿಲ್ನ ಸರಕುಗಳಿಗೆ ಪ್ರಮುಖ ಮಾರುಕಟ್ಟೆಯಾಗಿದೆ ಮತ್ತು ಔಷಧಗಳು ಹಾಗೂ ತಯಾರಿಕಾ ಸರಕುಗಳ ಬೆಳೆಯುತ್ತಿರುವ ಮೂಲವಾಗಿದೆ.
►ದಕ್ಷಿಣ ಆಫ್ರಿಕಾ – ಅಧ್ಯಕ್ಷ ಸಿರಿಲ್ ರಾಮಫೋಸಾ
ಸಿರಿಲ್ ರಾಮಫೋಸಾ ಅವರು 2018ರಿಂದ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದಾರೆ. ವರ್ಣಭೇದ ನೀತಿ ವಿರೋಧಿ ಹೋರಾಟದಲ್ಲಿ ಆಳವಾಗಿ ಬೇರೂರಿರುವ ರಾಜಕೀಯ ಹಿನ್ನೆಲೆಯನ್ನು ಅವರು ಹೊಂದಿದ್ದಾರೆ. ಅವರು ಮೈನರ್ಸ್ ರಾಷ್ಟ್ರೀಯ ಒಕ್ಕೂಟದ ಮೊದಲ ಪ್ರಧಾನ ಕಾರ್ಯದರ್ಶಿಯಾದರು. ನಂತರ ನೆಲ್ಸನ್ ಮಂಡೇಲಾ ಅವರ ಜೊತೆಗೂಡಿ ವರ್ಣಭೇದ ನೀತಿಯಿಂದ ಪ್ರಜಾಪ್ರಭುತ್ವಕ್ಕೆ ಪರಿವರ್ತನೆಯಾಗುವ ಸಂದರ್ಭದಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ನ ಮುಖ್ಯ ಸಂಧಾನಕಾರರಾಗಿ ಜವಾಬ್ದಾರಿ ನಿರ್ವಹಿಸಿದರು.
2024ರ ಚುನಾವಣೆಯಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡ ನಂತರ, ರಾಮಫೋಸಾ ಅವರು ಹಲವು ರಾಜಕೀಯ ಪಕ್ಷಗಳನ್ನು ಒಳಗೊಂಡ 'ಗವರ್ನಮೆಂಟ್ ಆಫ್ ನ್ಯಾಷನಲ್ ಯೂನಿಟಿ 'ಮೂಲಕ ಎರಡನೇ ಅವಧಿಗೆ ಅಧಿಕಾರವನ್ನು ಪಡೆದರು.
ಆಫ್ರಿಕಾ ಖಂಡದ ಬಹುಭಾಗದಲ್ಲಿ ಅತಿ ಹೆಚ್ಚು ಕೈಗಾರಿಕೀಕರಣಗೊಂಡ ಆರ್ಥಿಕತೆಯನ್ನು ಹೊಂದಿರುವ ದಕ್ಷಿಣ ಆಫ್ರಿಕಾ, ಪ್ಲಾಟಿನಂ, ಚಿನ್ನ, ಮ್ಯಾಂಗನೀಸ್ ಮತ್ತು ಕ್ರೋಮಿಯಂ ಸೇರಿದಂತೆ ಪ್ರಮುಖ ಖನಿಜಗಳ ಉತ್ಪಾದಕವಾಗಿದೆ. ಇದರ ಭೌಗೋಳಿಕ ಸ್ಥಾನವು ಜಾಗತಿಕ ಸರಕು ಪೂರೈಕೆ ಸರಪಳಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ತಂದುಕೊಟ್ಟಿದೆ. ಜಾಗತಿಕ ಸಂಸ್ಥೆಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ಪ್ರತಿನಿಧಿತ್ವವನ್ನು ಪ್ರತಿಪಾದಿಸಲು ಮತ್ತು ಜಾಗತಿಕ ದಕ್ಷಿಣ ರಾಷ್ಟ್ರಗಳ ನಡುವಿನ ಸಹಕಾರವನ್ನು ಬಲಪಡಿಸಲು ದಕ್ಷಿಣ ಆಫ್ರಿಕಾವು ಬ್ರಿಕ್ಸ್ ವೇದಿಕೆಯನ್ನು ನಿರಂತರವಾಗಿ ಬಳಸಿಕೊಳ್ಳುತ್ತಿದೆ.
ವಸಾಹತುಶಾಹಿ ವಿರೋಧಿ ಹಂಚಿಕೊಂಡ ಇತಿಹಾಸ, ವರ್ಣಭೇದ ನೀತಿ ವಿರೋಧಿ ಒಗ್ಗಟ್ಟು ಮತ್ತು ಅಲಿಪ್ತ ಚಳವಳಿಯ ಸಹಕಾರದಿಂದ ರೂಪಿತವಾದ ಆಳವಾದ ರಾಜಕೀಯ ಸಂಬಂಧವನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ಹೊಂದಿವೆ. ಇಂದಿನ ದಿನಗಳಲ್ಲಿ ಇವೆರಡೂ ದೇಶಗಳ ಸಂಬಂಧವು ವ್ಯಾಪಾರ, ಔಷಧಗಳು, ವಾಹನಗಳು, ಗಣಿಗಾರಿಕೆ, ಇಂಧನ ಮತ್ತು ರಕ್ಷಣಾ ಕ್ಷೇತ್ರಗಳನ್ನು ಒಳಗೊಂಡಿದೆ. ಅಲ್ಲದೆ, ಬ್ರಿಕ್ಸ್ ಹಾಗೂ ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ ಒಕ್ಕೂಟದ ಮೂಲಕ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುತ್ತಿವೆ.
►ಇರಾನ್ – ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್
ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ನಿಧನದ ನಂತರ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಮಸೂದ್ ಪೆಜೆಶ್ಕಿಯನ್ ಅವರು 2024ರ ಜುಲೈನಲ್ಲಿ ಇರಾನ್ನ ಅಧ್ಯಕ್ಷರಾದರು. ಸುಧಾರಣಾವಾದಿ ರಾಜಕಾರಣಿಯಾಗಿರುವ ಮತ್ತು ಮಾಜಿ ಆರೋಗ್ಯ ಸಚಿವರಾಗಿರುವ ಪೆಜೆಶ್ಕಿಯನ್, ಹೊರಜಗತ್ತಿನೊಂದಿಗೆ ಸಂಬಂಧವನ್ನು ಸುಧಾರಿಸುವುದು, ದೇಶದೊಳಗಿನ ಕೆಲವು ನಿರ್ಬಂಧಗಳನ್ನು ಸಡಿಲಿಸುವುದು ಮತ್ತು ಇರಾನ್ನ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಇರಾನ್ 2024ರಲ್ಲಿ ಬ್ರಿಕ್ಸ್ ಒಕ್ಕೂಟಕ್ಕೆ ಸೇರ್ಪಡೆಗೊಂಡಿತು. ಇದರ ಭೌಗೋಳಿಕ ಸ್ಥಾನವು ದಕ್ಷಿಣ ಏಷ್ಯಾ, ಮಧ್ಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್ ನಡುವಿನ ಸಾರಿಗೆ ಹಾಗೂ ಇಂಧನ ಸಂಪರ್ಕಕ್ಕೆ ಹೆಚ್ಚಿನ ಮಹತ್ವವನ್ನು ತಂದುಕೊಟ್ಟಿದೆ. ಇರಾನ್ ಜೊತೆ ನಡೆಯುತ್ತಿರುವ ಯುಎಸ್-ಇಸ್ರೇಲ್ ಯುದ್ಧವು ಭಾರತದ ಶೃಂಗಸಭೆಯಲ್ಲಿ ಇರಾನ್ನ ಭೇಟಿಯನ್ನು ಅತ್ಯಂತ ಮಹತ್ವದ್ದಾಗಿಸಿದೆ. ಅದೇ ಸಮಯದಲ್ಲಿ ಈ ಸಂಘರ್ಷವು ಇರಾನ್ ಮತ್ತು ಮತ್ತೊಂದು ಬ್ರಿಕ್ಸ್ ಸದಸ್ಯ ರಾಷ್ಟ್ರವಾದ ಯುಎಇ ನಡುವಿನ ಉದ್ವಿಗ್ನತೆಯನ್ನು ಬಹಿರಂಗಪಡಿಸಿದೆ.
ಸಂಪರ್ಕ ಜಾಲದ ಸುತ್ತ ಇರಾನ್ನೊಂದಿಗೆ ಭಾರತವು ಬಲವಾದ ಕಾರ್ಯತಂತ್ರದ ಬುನಾದಿಯನ್ನು ಹೊಂದಿದೆ. ಪಾಕಿಸ್ತಾನವನ್ನು ಬೈಪಾಸ್ ಮಾಡಿ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾವನ್ನು ತಲುಪಲು ಭಾರತಕ್ಕೆ ಒಂದು ಪ್ರಮುಖ ಮಾರ್ಗವನ್ನು ಒದಗಿಸುವ ಚಾಬಹಾರ್ ಬಂದರಿನ ಅಭಿವೃದ್ಧಿಯಲ್ಲಿ ಎರಡೂ ದೇಶಗಳು ಸಹಕರಿಸಿವೆ.
ಹಲವು ಸಂಬಂಧಗಳನ್ನು ಏಕಕಾಲದಲ್ಲಿ ನಿಭಾಯಿಸಬೇಕಿರುವ ಕಾರಣದಿಂದಾಗಿ ಶೃಂಗಸಭೆಯಲ್ಲಿ ಇರಾನ್ನ ಉಪಸ್ಥಿತಿಯು ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಯುಎಇ ಹಾಗೂ ಗಲ್ಫ್ ದೇಶಗಳೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆ, ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ಸಂಬಂಧ ಹಾಗೂ ಟೆಹರಾನ್ ಜೊತೆಗಿನ ದೀರ್ಘಕಾಲದ ಬಾಂಧವ್ಯವನ್ನು ಭಾರತ ಸಮತೋಲನದಲ್ಲಿಡಬೇಕಿದೆ. ಇರಾನ್ ಜೊತೆ ಮಾತುಕತೆಯನ್ನು ಮುಂದುವರಿಸಲು, ಉದ್ವಿಗ್ನತೆಯನ್ನು ತಗ್ಗಿಸಲು ಹಾಗೂ ಇಂಧನ, ಸಂಪರ್ಕ ಮತ್ತು ಪ್ರಾದೇಶಿಕ ಸ್ಥಿರತೆಯಲ್ಲಿ ತನ್ನ ಸ್ವಂತ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಬ್ರಿಕ್ಸ್ ಭಾರತಕ್ಕೆ ಒಂದು ವೇದಿಕೆಯನ್ನು ಒದಗಿಸುತ್ತದೆ.
► ಈಜಿಪ್ಟ್ – ಅಧ್ಯಕ್ಷ ಅಬ್ದುಲ್ ಫತಾಹ್ ಅಲ್ಸಿಸಿ
ಅಬ್ದುಲ್ ಫತಾಹ್ ಅಲ್ಸಿಸಿ ಅವರು 2014ರಿಂದ ಈಜಿಪ್ಟ್ನ ಅಧ್ಯಕ್ಷರಾಗಿದ್ದಾರೆ. ಈಜಿಪ್ಟ್ 2024ರಲ್ಲಿ ಬ್ರಿಕ್ಸ್ ಒಕ್ಕೂಟಕ್ಕೆ ಸೇರ್ಪಡೆಗೊಂಡಿತು. ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರಗಳನ್ನು ಸಂಪರ್ಕಿಸುವ, ಜಗತ್ತಿನ ಅತ್ಯಂತ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಒಂದಾದ ಸೂಯೆಜ್ ಕಾಲುವೆಯನ್ನು ಈ ದೇಶವು ನಿಯಂತ್ರಿಸುತ್ತದೆ.
ವ್ಯಾಪಾರ, ಇಂಧನ ಮತ್ತು ಮಧ್ಯಪ್ರಾಚ್ಯದ ವಿಚಾರಗಳಲ್ಲಿ ಹೊಂದಿರುವ ಪಾತ್ರದಿಂದಾಗಿ ಬ್ರಿಕ್ಸ್ ಒಕ್ಕೂಟದಲ್ಲಿ ಈಜಿಪ್ಟ್ನ ಪಾತ್ರವು ಅತ್ಯಂತ ನಿರ್ಣಾಯಕವಾಗಿದೆ. ಇದರ ಕಾರ್ಯತಂತ್ರದ ಭೌಗೋಳಿಕತೆಯು ಜಾಗತಿಕ ಸರಕು ಪೂರೈಕೆ ಸರಪಳಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ತಂದುಕೊಟ್ಟಿದೆ. ಇರಾನ್ ಒಳಗೊಂಡಿರುವ ಪ್ರಸ್ತುತ ಸಂಘರ್ಷ ಮತ್ತು ಪ್ರಾದೇಶಿಕ ವ್ಯಾಪಾರ ಮಾರ್ಗಗಳ ವ್ಯತ್ಯಯವು ಈಜಿಪ್ಟ್ ಮತ್ತು ಸೂಯೆಜ್ ಕಾಲುವೆಯ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಅಲಿಪ್ತ ಚಳವಳಿಯಲ್ಲಿ ಸಹಕರಿಸಿದ ಇತಿಹಾಸವನ್ನು ಹಂಚಿಕೊಂಡಿರುವ ಎರಡೂ ದೇಶಗಳು ಸಾಂಪ್ರದಾಯಿಕವಾಗಿ ನಿಕಟ ರಾಜಕೀಯ ಬಾಂಧವ್ಯವನ್ನು ಕಾಯ್ದುಕೊಂಡು ಬಂದಿವೆ. ವ್ಯಾಪಾರ, ಹೂಡಿಕೆ, ರಕ್ಷಣೆ, ಔಷಧಗಳು ಮತ್ತು ಇಂಧನ ಕ್ಷೇತ್ರಗಳಿಗೆ ಈ ಸಂಬಂಧವು ವಿಸ್ತರಿಸಿದೆ. ಅಲ್-ಸಿಸಿ ಅವರು 2023ರ ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ಬ್ರಿಕ್ಸ್ ಒಕ್ಕೂಟದೊಂದಿಗೆ ಆಫ್ರಿಕಾ ಮತ್ತು ಅರಬ್ ಜಗತ್ತನ್ನು ಸಂಪರ್ಕಿಸುವಲ್ಲಿ ಈಜಿಪ್ಟ್ನ ಭೌಗೋಳಿಕ ಸ್ಥಾನವು ಭಾರತಕ್ಕೆ ಪ್ರಮುಖ ಪಾಲುದಾರನನ್ನಾಗಿ ಮಾಡಿದೆ.
►ಇಂಡೋನೇಷ್ಯಾ – ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ
ಪ್ರಬೋವೊ ಸುಬಿಯಾಂಟೊ ಅವರು 2024ರ ಅಕ್ಟೋಬರ್ನಲ್ಲಿ ಇಂಡೋನೇಷ್ಯಾದ ಅಧ್ಯಕ್ಷರಾಗಿದ್ದು ಆಗ್ನೇಯ ಏಷ್ಯಾದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವನ್ನು ಮುನ್ನಡೆಸುತ್ತಿದ್ದಾರೆ. ಇಂಡೋನೇಷ್ಯಾದಲ್ಲಿ ನಿಕ್ಕಲ್, ಪಾಮ್ ಆಯಿಲ್, ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲದಂತಹ ಸಂಪತ್ತು ಸಮೃದ್ಧವಾಗಿದೆ. ಪ್ರಮುಖ ಸಮುದ್ರ ಮಾರ್ಗಗಳಲ್ಲಿ ನೆಲೆಗೊಂಡಿರುವ ಇದರ ಸ್ಥಾನವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಇದಕ್ಕೆ ಗಣನೀಯ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ತಂದುಕೊಟ್ಟಿದೆ.
ಈ ದೇಶವು 2025ರಲ್ಲಿ ಬ್ರಿಕ್ಸ್ ಒಕ್ಕೂಟದ ಪೂರ್ಣ ಸದಸ್ಯವಾಯಿತು ಮತ್ತು ಈ ಗುಂಪಿಗೆ ಸೇರಿದ ಆಗ್ನೇಯ ಏಷ್ಯಾದ ಮೊದಲ ದೇಶವಾಯಿತು. ಇದರ ಪ್ರವೇಶವು ಈ ಪ್ರದೇಶದಲ್ಲಿ ಬ್ರಿಕ್ಸ್ ಪ್ರಾತಿನಿಧ್ಯವನ್ನು ಗಣನೀಯವಾಗಿ ಬಲಪಡಿಸುತ್ತದೆ ಹಾಗೂ ಗಣನೀಯ ಪ್ರಾಕೃತಿಕ ಸಂಪನ್ಮೂಲಗಳು ಮತ್ತು ದೊಡ್ಡ ದೇಶೀಯ ಮಾರುಕಟ್ಟೆಯನ್ನು ಹೊಂದಿರುವ ಮತ್ತೊಂದು ಪ್ರಮುಖ ಉದಯೋನ್ಮುಖ ಆರ್ಥಿಕತೆಯನ್ನು ಈ ಒಕ್ಕೂಟಕ್ಕೆ ನೀಡುತ್ತದೆ.
ಭಾರತ ಮತ್ತು ಇಂಡೋನೇಷ್ಯಾ ದೀರ್ಘಕಾಲದ ಕಡಲ ಸಂಬಂಧಗಳನ್ನು ಹೊಂದಿದ್ದು, ವ್ಯಾಪಾರ, ರಕ್ಷಣೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚು ಹೆಚ್ಚು ಗಾಢವಾಗಿಸುತ್ತಿವೆ. ಹಿಂದೂ ಮಹಾಸಾಗರ ಮತ್ತು ಆಗ್ನೇಯ ಏಷ್ಯಾದಾದ್ಯಂತ ಸಮುದ್ರ ಮಾರ್ಗಗಳನ್ನು ಸುರಕ್ಷಿತವಾಗಿಡುವುದು ಹಾಗೂ ಸ್ಥಿರತೆಯನ್ನು ಕಾಪಾಡುವಲ್ಲಿಯೂ ಎರಡೂ ದೇಶಗಳು ಪ್ರಮುಖ ಪಾಲುದಾರರಾಗಿವೆ.
►ಇಥಿಯೋಪಿಯಾ – ಪ್ರಧಾನಿ ಅಬಿಯ್ ಅಹ್ಮದ್
ಅಬಿಯ್ ಅಹ್ಮದ್ ಅವರು 2018ರಿಂದ ಇಥಿಯೋಪಿಯಾದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 'ಇಥಿಯೋಪಿಯನ್ ಪೀಪಲ್ಸ್ ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್' ಅನ್ನು ವಿಸರ್ಜಿಸಿದ ನಂತರ ಅವರು ಸ್ಥಾಪಿಸಿದ ಆಡಳಿತಾರೂಢ 'ಪ್ರಾಸ್ಪೆರಿಟಿ ಪಾರ್ಟಿ'ಯನ್ನು ಅವರು ಮುನ್ನಡೆಸುತ್ತಿದ್ದಾರೆ.
ಮಾಜಿ ಗುಪ್ತಚರ ಮತ್ತು ಮಿಲಿಟರಿ ಅಧಿಕಾರಿಯಾಗಿರುವ ಅಬಿಯ್, ಆರಂಭದಲ್ಲಿ ರಾಜಕೀಯ ಉದಾರೀಕರಣ ಮತ್ತು ರಾಜಿ ಸಂಧಾನದ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದರು. ಅವರು ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿದರು ಮತ್ತು ರಾಜಕೀಯ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದರು. ನೆರೆಯ ಎರಿಟ್ರಿಯಾದೊಂದಿಗೆ ಶಾಂತಿ ಸ್ಥಾಪಿಸುವಲ್ಲಿ ಅವರು ವಹಿಸಿದ ಪಾತ್ರಕ್ಕಾಗಿ 2019ರ ನೋಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾದರು.
ಆಫ್ರಿಕಾದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಇಥಿಯೋಪಿಯಾವೂ ಒಂದು. ಅಡಿಸ್ ಅಬಾಬಾ ನಗರವು ಆಫ್ರಿಕನ್ ಒಕ್ಕೂಟದ ಕೇಂದ್ರಸ್ಥಾನವಾಗಿದೆ. ಇಥಿಯೋಪಿಯಾವು ಸಾಂಪ್ರದಾಯಿಕವಾಗಿ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದು, ಇದು ವ್ಯಾಪಕ ಶ್ರೇಣಿಯ ಪ್ರಮುಖ ಮಹಾಶಕ್ತಿಗಳೊಂದಿಗೆ ಸಂಬಂಧವನ್ನು ಹೊಂದಲು ಅವಕಾಶ ಮಾಡಿಕೊಟ್ಟಿದೆ. 2024ರಲ್ಲಿ ಬ್ರಿಕ್ಸ್ ಒಕ್ಕೂಟಕ್ಕೆ ಇದರ ಪ್ರವೇಶವು ಒಕ್ಕೂಟಕ್ಕೆ ಹೆಚ್ಚುವರಿ ಆಫ್ರಿಕನ್ ಧ್ವನಿಯನ್ನು ನೀಡಿತು ಮತ್ತು ವಿಶಾಲವಾದ ಜಾಗತಿಕ ದಕ್ಷಿಣದೊಂದಿಗೆ ಅದರ ಸಂಪರ್ಕವನ್ನು ಬಲಪಡಿಸಿತು.
1948ರಿಂದಲೇ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವ ಭಾರತ ಮತ್ತು ಇಥಿಯೋಪಿಯಾ ದೀರ್ಘಕಾಲದ ರಾಜಕೀಯ ಮತ್ತು ವಾಣಿಜ್ಯ ಸಂಬಂಧಗಳನ್ನು ಹೊಂದಿವೆ. ಸಾಲದ ಸೌಲಭ್ಯಗಳು, ಸಾಮರ್ಥ್ಯ ವೃದ್ಧಿ ಮತ್ತು ಶಿಕ್ಷಣದ ಮೂಲಕ ಇಥಿಯೋಪಿಯಾದ ಅಭಿವೃದ್ಧಿಯನ್ನು ಭಾರತ ಬೆಂಬಲಿಸಿದೆ. ಹಾಗೆಯೇ ಭಾರತೀಯ ಕಂಪನಿಗಳು ಔಷಧ ತಯಾರಿಕೆ, ಉತ್ಪಾದನೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿವೆ. ವಿಶ್ವ ಸಂಸ್ಥೆಯ ಸುಧಾರಣೆ ಹಾಗೂ ಜಾಗತಿಕ ಸಂಸ್ಥೆಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ಪ್ರತಿನಿಧಿತ್ವ ಸಿಗಬೇಕು ಎಂಬ ವಿಚಾರದಲ್ಲಿ ಎರಡೂ ದೇಶಗಳು ಒಂದೇ ರೀತಿಯ ನಿಲುವನ್ನು ಹೊಂದಿವೆ.
►ಯುನೈಟೆಡ್ ಅರಬ್ ಎಮಿರೇಟ್ಸ್ (UAE) – ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್
ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಅಬುಧಾಬಿಯ ಯುವರಾಜರಾಗಿದ್ದು, ಅಬುಧಾಬಿ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಇವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಹಿರಿಯ ಪುತ್ರರಾಗಿದ್ದು, ಅವರ ಪರವಾಗಿ ಭಾರತದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಯುಎಇ ನಿಯೋಗವನ್ನು ಮುನ್ನಡೆಸುತ್ತಿದ್ದಾರೆ.
ಮೂಲ ಸದಸ್ಯರ ಗಡಿಯನ್ನು ಮೀರಿ ಬ್ರಿಕ್ಸ್ ಒಕ್ಕೂಟವು ತನ್ನ ಮೊದಲ ದೊಡ್ಡ ವಿಸ್ತರಣೆ ಕೈಗೊಂಡಾಗ, 2024ರಲ್ಲಿ ಯುಎಇ ಈ ಒಕ್ಕೂಟಕ್ಕೆ ಸೇರ್ಪಡೆಗೊಂಡಿತು. ಪ್ರಮುಖ ಇಂಧನ ಉತ್ಪಾದಕ ದೇಶ, ಹಣಕಾಸು ಕೇಂದ್ರ, ಹೂಡಿಕೆದಾರ ಮತ್ತು ಏಷ್ಯಾ, ಯುರೋಪ್ ಹಾಗೂ ಆಫ್ರಿಕಾವನ್ನು ಸಂಪರ್ಕಿಸುವ ಸಾರಿಗೆ ಕೇಂದ್ರವಾಗಿರುವ ಕಾರಣದಿಂದ ಈ ಒಕ್ಕೂಟದಲ್ಲಿ ಯುಎಇ ಮಹತ್ವದ ಸ್ಥಾನ ಪಡೆದಿದೆ.
ವ್ಯಾಪಾರ, ಹೂಡಿಕೆ, ಇಂಧನ, ಮೂಲಸೌಕರ್ಯ ಮತ್ತು ರಕ್ಷಣಾ ಕ್ಷೇತ್ರಗಳನ್ನು ಒಳಗೊಂಡಂತೆ ಗಲ್ಫ್ ದೇಶಗಳೊಂದಿಗೆ ಭಾರತ ಹೊಂದಿರುವ ಅತ್ಯಂತ ಪ್ರಮುಖ ಪಾಲುದಾರಿಕೆಗಳಲ್ಲಿ ಯುಎಇ ಜೊತೆಗಿನ ಸಂಬಂಧವೂ ಒಂದಾಗಿದೆ. ಬ್ರಿಕ್ಸ್ ಶೃಂಗಸಭೆಯಲ್ಲಿ ಯುಎಇಯ ಭಾಗವಹಿಸುವಿಕೆಯು, ಗಲ್ಫ್ ಪ್ರದೇಶದ ಬಂಡವಾಳ, ಇಂಧನ ಮತ್ತು ಸಾರಿಗೆ ಜಾಲದೊಂದಿಗೆ ಭಾರತದ ಒಡನಾಟವನ್ನು ಮತ್ತಷ್ಟು ಬೆಸೆಯುತ್ತದೆ.
►ಸೌದಿ ಅರೇಬಿಯಾ – ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್
ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಅವರು 2019ರಿಂದ ಸೌದಿ ಅರೇಬಿಯಾದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ನೇತೃತ್ವದಲ್ಲಿ ಸೌದಿ ಅರೇಬಿಯಾವು ಅಮೆರಿಕದೊಂದಿಗೆ ತನ್ನ ದೀರ್ಘಕಾಲದ ಭದ್ರತಾ ಸಂಬಂಧವನ್ನು ಉಳಿಸಿಕೊಳ್ಳುತ್ತಲೇ, ಚೀನಾ, ರಷ್ಯಾ ಮತ್ತು ಇತರ ಉದಯೋನ್ಮುಖ ಶಕ್ತಿಗಳೊಂದಿಗೆ ಬಾಂಧವ್ಯವನ್ನು ಗಟ್ಟಿಗೊಳಿಸಲು ಯತ್ನಿಸಿದೆ. ಗಾಝಾ, ಉಕ್ರೇನ್ ಮತ್ತು ವಿಶಾಲ ಮಧ್ಯಪ್ರಾಚ್ಯದ ಸಂಘರ್ಷಗಳ ಕುರಿತಾದ ಸೌದಿ ರಾಜತಾಂತ್ರಿಕತೆಯಲ್ಲಿ ಫೈಸಲ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಬ್ರಿಕ್ಸ್ ಒಕ್ಕೂಟದಲ್ಲಿ ಸೌದಿ ಅರೇಬಿಯಾದ ಸೇರ್ಪಡೆಯು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಗುಂಪಿನ ತೂಕವನ್ನು ಗಣನೀಯವಾಗಿ ಹೆಚ್ಚಿಸಿದೆ ಮತ್ತು ಗಲ್ಫ್ ಪ್ರದೇಶದಲ್ಲಿ ಅದರ ಅಸ್ತಿತ್ವವನ್ನು ಬಲಪಡಿಸಿದೆ. ಪಶ್ಚಿಮ ಮತ್ತು ಪಶ್ಚಿಮೇತರ ದೇಶಗಳೊಂದಿಗೆ ಸೌದಿ ಅರೇಬಿಯಾ ಹೊಂದಿರುವ ಸಂಬಂಧವು, ಹೆಚ್ಚು ಬಹುಧ್ರುವೀಯ ಅಂತರರಾಷ್ಟ್ರೀಯ ವ್ಯವಸ್ಥೆಗೆ ಬ್ರಿಕ್ಸ್ ಒತ್ತು ನೀಡುವ ತತ್ವಕ್ಕೆ ಹೊಂದಿಕೆಯಾಗುತ್ತದೆ.
2023ರಲ್ಲಿ ಸೌದಿ ಅರೇಬಿಯಾವು ಬ್ರಿಕ್ಸ್ ಒಕ್ಕೂಟಕ್ಕೆ ಆಹ್ವಾನಿಸಲ್ಪಟ್ಟಿತು ಮತ್ತು ಒಕ್ಕೂಟವು ತನ್ನ ಸದಸ್ಯರ ಪಟ್ಟಿಯಲ್ಲಿ ಇದನ್ನು ಸೇರಿಸಿದೆ. ಆದರೆ, ತನ್ನ ಬ್ರಿಕ್ಸ್ ಸದಸ್ಯತ್ವದ ಔಪಚಾರಿಕ ಸ್ಥಿತಿಗತಿಯ ಬಗ್ಗೆ ಸೌದಿ ಅರೇಬಿಯಾವು ಇನ್ನೂ ಅಸ್ಪಷ್ಟತೆಯನ್ನು ಕಾಯ್ದುಕೊಂಡಿದೆ. ಹೀಗಾಗಿ, ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅನುಪಸ್ಥಿತಿಯಲ್ಲೂ ಭಾರತದ ಶೃಂಗಸಭೆಗೆ ಪ್ರಿನ್ಸ್ ಫೈಸಲ್ ಅವರ ಹಾಜರಾತಿ ಅತ್ಯಂತ ಮಹತ್ವದ್ದಾಗಿದೆ.
ಭಾರತಕ್ಕೆ ಸೌದಿ ಅರೇಬಿಯಾವು ಕಚ್ಚಾ ತೈಲದ ಪ್ರಮುಖ ಮೂಲವಾಗಿದೆ. ಮತ್ತೊಂದೆಡೆ ಭಾರತೀಯ ವ್ಯಾಪಾರಗಳು ನಿರ್ಮಾಣ, ಮೂಲಸೌಕರ್ಯದಿಂದ ಹಿಡಿದು ತಂತ್ರಜ್ಞಾನ, ಔಷಧಗಳು ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಗಮನಾರ್ಹ ಉಪಸ್ಥಿತಿಯನ್ನು ಹೊಂದಿವೆ. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ನಲ್ಲಿಯೂ ಈ ಎರಡೂ ದೇಶಗಳು ಪ್ರಮುಖ ಪಾಲುದಾರರಾಗಿವೆ. ಸೌದಿ ಅರೇಬಿಯಾದ ಭೇಟಿಯು, ರಿಯಾದ್ ಜೊತೆಗಿನ ನಿಕಟ ದ್ವಿಪಕ್ಷೀಯ ಸಂಬಂಧವನ್ನು ಕಾಪಾಡಿಕೊಳ್ಳುತ್ತಲೇ ಗಲ್ಫ್ ದೇಶಗಳ ಆರ್ಥಿಕ ಹಾಗೂ ಕಾರ್ಯತಂತ್ರದ ಬಲವನ್ನು ಭಾರತದ ಬ್ರಿಕ್ಸ್ ಕಾರ್ಯಸೂಚಿಗೆ ತರಲು ಒಂದು ಮಾರ್ಗವನ್ನು ಕಲ್ಪಿಸುತ್ತದೆ.
ಕೃಪೆ: indianexpress.com






