ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಶೇ.50ಕ್ಕಿಂತಲೂ ಕಡಿಮೆ ಅನುದಾನ ಬಿಡುಗಡೆ

Photo: TOI
ಬೆಂಗಳೂರು : ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು 18 ಇಲಾಖೆಗಳಿಗೆ ಶೇ.50ಕ್ಕಿಂತಲೂ ಕಡಿಮೆ ಅನುದಾನವನ್ನು ಬಿಡುಗಡೆ ಮಾಡಿದೆ. ಅಲ್ಲದೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರವು ಒದಗಿಸಿದ್ದ ಒಟ್ಟು ಅನುದಾನದ ಪೈಕಿ ಶೇ. 56.2ರಷ್ಟು ವೆಚ್ಚ ಮಾಡಿರುವುದು ಇದೀಗ ಬಹಿರಂಗವಾಗಿದೆ.
2026ರ ಅಕ್ಟೋಬರ್ 27ರಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಯಲ್ಲಿ ಕೇಂದ್ರ ಪುರಸ್ಕೃತವಾರು ಯೋಜನೆಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದೆ. ಒಟ್ಟು 28 ಇಲಾಖೆಗಳಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ವಿಶ್ಲೇಷಿಸಿದೆ.
ಕೇಂದ್ರ ಪುರಸ್ಕೃತ ಯೋಜನೆ ಅಡಿಯಲ್ಲಿ ಒದಗಿಸಿದ್ದ ಅನುದಾನ ಮತ್ತು ವೆಚ್ಚದ ಪ್ರಗತಿ ಕುರಿತು ಆಡಳಿತ ಮತ್ತು ಪ್ರತಿಪಕ್ಷ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿರುವ ಬೆನ್ನಲ್ಲೇ 2026-27ನೇ ಸಾಲಿನ ಕೇಂದ್ರ ಪುರಸ್ಕೃತವಾರು ಯೋಜನೆಗಳಿಗೆ ಸಂಬಂಧಿಸಿದ ಆರ್ಥಿಕ ಪ್ರಗತಿಯ ವಾಸ್ತವ ಚಿತ್ರಣವು ಮುನ್ನೆಲೆಗೆ ಬಂದಿದೆ.
ಇಲಾಖೆಗಳು ಈ ಸಭೆಗೆ ಮಂಡಿಸಿರುವ ಅಂಕಿ ಅಂಶಗಳ ಸಮಗ್ರ ವಿವರಗಳು ‘the-file.in’ಗೆ ಲಭ್ಯವಾಗಿವೆ.
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರಕಾರದ ಪಾಲು 2025-26ರಲ್ಲಿ ರೂ. 26,653.33 ಕೋಟಿಯಷ್ಟಿತ್ತು. 2026-27ರಲ್ಲಿ ರೂ. 24,569.14 ಕೋಟಿಯಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ರೂ. 2,084.19 ಕೋಟಿಯಷ್ಟು ಕಡಿಮೆ ಇದೆ. ಹಾಗೆಯೇ ರಾಜ್ಯದ ಪಾಲು 2025-26ರಲ್ಲಿ ರೂ. 21,540.33 ಕೋಟಿಯಷ್ಟಿದ್ದರೆ 2026-27ರಲ್ಲಿ ರೂ. 23,533.61 ಕೋಟಿಯಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ರಾಜ್ಯವು ತನ್ನ ಪಾಲುದಾರಿಕೆಯಲ್ಲಿ ರೂ. 1,993.28 ಕೋಟಿಯಷ್ಟು ಹೆಚ್ಚಳ ಮಾಡಿಕೊಂಡಿದೆ.
2026-27ನೇ ಸಾಲಿಗೆ ಸಂಬಂಧಿಸಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರಕಾರವು 24,569.14 ಕೋಟಿ ರೂ. ಅನುದಾನ ಒದಗಿಸಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯದ ಅನುದಾನವು 23,533.61 ಕೋಟಿ ರೂ. ಸರಕಾರ ಪಾಲು ಹೊಂದಿದೆ. ಪ್ರಾಥಮಿಕ ಶಿಲ್ಕು ಸೇರಿ ಒಟ್ಟಾರೆ 49, 535.69 ಕೋಟಿ ರೂ. ಅನುದಾನ ಲಭ್ಯವಿದೆ. ಇದರಲ್ಲಿ ಕೇಂದ್ರ ಸರಕಾರದ ಪಾಲಿನ 23,533.61 ಕೋಟಿ ರೂ. ಪೈಕಿ ಕೇವಲ 8,782.73 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ರಾಜ್ಯವು ತನ್ನ ಪಾಲಿನ 23,533.61 ಕೋಟಿ ರೂ. ನಲ್ಲಿ 12,327.14 ಕೋಟಿ ರೂ. ಬಿಡುಗಡೆ ಮಾಡಿದೆ.
ರಾಜ್ಯವು ತನ್ನ ಪಾಲುದಾರಿಕೆಯ 23,533.61 ಕೋಟಿ ರೂ. ನಲ್ಲಿ ಇನ್ನೂ 11,206.47 ಕೋಟಿ ರೂ. , ಕೇಂದ್ರವು 15,786.41 ಕೋಟಿ ರೂ.ಗಳನ್ನು ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆ. 2026ರ ಅಕ್ಟೋಬರ್ 19ರ ಅಂತ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರವು ಒಟ್ಟಾರೆ 21,109.87 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಪೈಕಿ 12,677.64 ಕೋಟಿ ರೂ. ಮಾತ್ರ ಖರ್ಚು ಮಾಡಿದೆ. ಇದು ಲಭ್ಯ ಅನುದಾನಕ್ಕೆ ಶೇ.56.2ರಷ್ಟಿರುವುದು ಗೊತ್ತಾಗಿದೆ.
ಅದೇ ರೀತಿ ಅಕ್ಟೋಬರ್ 19ರ ಅಂತ್ಯಕ್ಕೆ 9,865.18 ಕೋಟಿ ರೂ. ವೆಚ್ಚವಾಗದೆ ಬಾಕಿ ಉಳಿಸಿಕೊಂಡಿದೆ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರವು ಘೋಷಿಸಿಕೊಂಡಿದ್ದ 1,706.50 ಕೋಟಿ ರೂ. ಮತ್ತು ವೈದ್ಯಕೀಯ ಶಿಕ್ಷಣದಲ್ಲಿ 19.93 ಕೋಟಿ ರೂ.ನಲ್ಲಿ ಬಿಡಿಗಾಸನ್ನೂ ನೀಡಿಲ್ಲದಿರುವುದು ತಿಳಿದು ಬಂದಿದೆ.
ಗ್ರಾಮೀಣಾಭಿವೃದ್ಧಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಸಮಾಜ ಕಲ್ಯಾಣ, ತೋಟಗಾರಿಕೆ, ಸಣ್ಣ ನೀರಾವರಿ, ಅರಣ್ಯ, ಪಶು ಸಂಗೋಪನೆ, ಹಿಂದುಳಿದ ವರ್ಗ, ವಾಣಿಜ್ಯ ಕೈಗಾರಿಕೆ (ಸಣ್ಣ), ಮೀನುಗಾರಿಕೆ, ಜಲಸಂಪನ್ಮೂಲ, ಮೂಲಭೂತ ಸೌಕರ್ಯ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರಕಾರದ ಬಿಡುಗಡೆ ಪ್ರಮಾಣವು ಶೇ. 50ಕ್ಕಿಂತ ಕಡಿಮೆ ಇದೆ.
ವೈದ್ಯಕೀಯ ಶಿಕ್ಷಣಕ್ಕೆ ರಾಜ್ಯವು 15.06 ಕೋಟಿ ರೂ.ನಲ್ಲಿ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ಕೇಂದ್ರವೂ ಸಹ 19.93 ಕೋಟಿ ರೂ. ಒದಗಿಸಿದೆಯಾದರೂ ಇದರಲ್ಲಿಯೂ ನಯಾಪೈಸೆಯನ್ನೂ ಕೊಟ್ಟಿಲ್ಲ. ಹಿಂದುಳಿದ ವರ್ಗಗಳಿಗೆ ರಾಜ್ಯವು 140.01 ಕೋಟಿ ರೂ. ಪೈಕಿ 63.67 ಕೋಟಿ ರೂ. ಬಿಡುಗಡೆ ಮಾಡಿದ್ದರೆ ಕೇಂದ್ರವು ತನ್ನ ಪಾಲಿನ 210.01 ಕೋಟಿ ರೂ.ನಲ್ಲಿ 96.78 ಕೋಟಿ ರೂ. ನೀಡಿದೆ. ವಾಣಿಜ್ಯ ಕೈಗಾರಿಕೆ (ಸಣ್ಣ) ರಾಜ್ಯವು 20.85 ಕೋಟಿ ರೂ.ನಲ್ಲಿ ಕೇವಲ 4.46 ಕೋಟಿ ರೂ. ಬಿಡುಗಡೆ ಮಾಡಿದ್ದರೆ ಕೇಂದ್ರವು 99.05 ಕೋಟಿ ರೂ.ನಲ್ಲಿ ಬಿಡಿಗಾಸನ್ನೂ ಕೊಟ್ಟಿಲ್ಲ.
ಮೀನುಗಾರಿಕೆಗೆ ರಾಜ್ಯವು 68.34 ಕೋಟಿ ರೂ.ಅನುದಾನ ಒದಗಿಸಿಕೊಂಡಿದೆ. ಈ ಪೈಕಿ 17.48 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. 106.01 ಕೋಟಿ ರೂ. ಒದಗಿಸಿಕೊಂಡಿರುವ ಕೇಂದ್ರವು 24.72 ಕೋಟಿ ರೂ. ನೀಡಿದೆ. ಒಳಾಡಳಿತ ಇಲಾಖೆಗೆ ರಾಜ್ಯವು 15.39 ಕೋಟಿ ರೂ. ಪೈಕಿ 7.28 ಕೋಟಿ ರೂ. ನೀಡಿದ್ದರೆ ಕೇಂದ್ರವು 113.21 ಕೋಟಿ ರೂ. ಪೈಕಿ 22.87 ಕೋಟಿ ರೂ. ಬಿಡುಗಡೆ ಮಾಡಿದೆ.
ಜಲಸಂಪನ್ಮೂಲಕ್ಕೆ ರಾಜ್ಯವು ಒದಗಿಸಿಕೊಂಡಿರುವ 597.89 ಕೋಟಿ ರೂ. ಪೈಕಿ 162.70 ಕೋಟಿ ರೂ., ಕೇಂದ್ರವು ಒದಗಿಸಿಕೊಂಡಿರುವ 1,352.11 ಕೋಟಿ ರೂ. ನಲ್ಲಿ ಕೇವಲ 19.05 ಕೋಟಿ ರೂ. ಕೊಟ್ಟಿದೆ. ಮೂಲಭೂತ ಸೌಕರ್ಯಕ್ಕೆ ರಾಜ್ಯವು 36.15 ಕೋಟಿ ರೂ. ಅನುದಾನ ಒದಗಿಸಿಕೊಂಡಿದೆ. ಈ ಪೈಕಿ ರಾಜ್ಯವು 9.99 ಕೋಟಿ ರೂ. , ಕೇಂದ್ರವು ಒದಗಿಸಿಕೊಂಡಿರುವ 36.15 ಕೋಟಿ ರೂ. ನಲ್ಲಿ ಕೇವಲ 1.59 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿರುವುದು ಗೊತ್ತಾಗಿದೆ.






