ರೋಗಿಗಳಿಗೆ ಸಂಜೀವಿನಿಯಾಗಲಿ ಜೆನೆರಿಕ್ ಔಷಧಿಗಳು

ಭಾರತದಲ್ಲಿ ವೈದ್ಯಕೀಯ ಚಿಕಿತ್ಸಾ ವೆಚ್ಚದ ಶೇ.ಎಪ್ಪತ್ತು ಪ್ರತಿಶತವನ್ನು ಜನರೇ ತಮ್ಮ ಜೇಬಿನಿಂದ ಭರಿಸುತ್ತಿದ್ದಾರೆ. ಹೆಚ್ಚಾಗಿ ವೈದ್ಯರು ಬ್ರಾಂಡೆಡ್ ಔಷಧಿಗಳನ್ನು ಶಿಫಾರಸು ಮಾಡುತ್ತಿದ್ದಾರೆ. ಇದರಿಂದ ರೋಗಿಗಳು ಬ್ರಾಂಡೆಡ್ ಔಷಧಿಗಳ ಖರೀದಿಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಧುಮೇಹ, ಹೃದ್ರೋಗ, ಥೈರಾಯ್ಡ್ ಮತ್ತು ಕಿಡ್ನಿ ರೋಗಗಳ ಜತೆಗೆ ವೃದ್ಧಾಪ್ಯ ಸಮಸ್ಯೆಗಳು ದೇಶದಲ್ಲಿ ಹೆಚ್ಚಾಗುತ್ತಿವೆ. ಜೊತೆಗೆ ಬೊಜ್ಜು ಮತ್ತು ಮಾನಸಿಕ ಅಸ್ವಸ್ಥತೆಗಳಂತಹ ಕಾಯಿಲೆಗಳು ಹೆಚ್ಚುತ್ತಿವೆ. ಇದರಿಂದ ಭವಿಷ್ಯದಲ್ಲಿ ವೈದ್ಯಕೀಯ ವೆಚ್ಚ ಮತ್ತು ಔಷಧಿ ಸೇವನೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ತುರ್ತು ಪಟ್ಟಿಯಲ್ಲಿರುವ ಔಷಧಿಗಳ ಬೆಲೆಯಲ್ಲಿ ಕೇವಲ ಶೇ. 25ರಷ್ಟನ್ನು ಮಾತ್ರ ಕೇಂದ್ರ ಸರಕಾರದಿಂದ ನಿಯಂತ್ರಿಸಲ್ಪಡುತ್ತದೆ. ಉಳಿದ ಶೇ.75ರಷ್ಟು ಔಷಧಿ ಬೆಲೆಯನ್ನು ಆಯಾ ಕಂಪೆನಿಗಳು ನಿರ್ಧರಿಸುತ್ತವೆ. ಈ ಕಾರಣದಿಂದಾಗಿ ಜನರ ಮೇಲೆ ಭಾರೀ ಆರ್ಥಿಕ ಹೊರೆಯಾಗುತ್ತಿದೆ.
ಸಮೀಕ್ಷೆಯೊಂದರ ಪ್ರಕಾರ, ಮುಂದಿನ ದಶಕದಲ್ಲಿ ಔಷಧಿಗಳ ದೇಶೀಯ ಖರೀದಿ ಮೂರು ಪಟ್ಟು ಹೆಚ್ಚಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಔಷಧಿಗಳ ಬೆಲೆಗಳು ಒಂಭತ್ತರಿಂದ ಹನ್ನೆರಡು ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇಂತಹ ಸಂದರ್ಭಗಳಲ್ಲಿ ರೋಗಿಗಳಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರವು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. 2025ರ ಮಾರ್ಚ್ ವೇಳೆಗೆ ದೇಶಾದ್ಯಂತ 10,500 ಜನರಿಕ್ ಔಷಧಿ ಮಳಿಗೆಗಳನ್ನು ಹೊಂದುವ ಗುರಿಯನ್ನು ಸರಕಾರ ಹೊಂದಿದೆ ಎನ್ನಲಾಗುತ್ತಿದೆ.
ಬ್ರಾಂಡೆಡ್ ಔಷಧಿಗಳಿಗಿಂತ ಶೇ.50ರಿಂದ ಶೇ.90ರಷ್ಟು ಕಡಿಮೆ ದರದಲ್ಲಿ ಜೆನೆರಿಕ್ ಔಷಧಿಗಳು ಲಭ್ಯವಿವೆ. ದೇಶೀಯವಾಗಿ ಅವುಗಳ ಬಳಕೆಯನ್ನು ಹೆಚ್ಚಿಸುವ ಆಶಯವನ್ನು ಕೇಂದ್ರ ಸರಕಾರ ಹೊಂದಿದೆ.
ಭಾರತದಲ್ಲಿ ಬ್ರಾಂಡೆಡ್ ಔಷಧಿಗಳಿಂದ ರೋಗಿಗಳ ಮೇಲೆ ಆರ್ಥಿಕ ಹೊರೆಯ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ದುಬಾರಿ ಔಷಧಿಗಳನ್ನು ಬರೆದುಕೊಡುವ ವೈದ್ಯರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ತಿಳಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು.
ವಿಶ್ವದ ರಾಷ್ಟ್ರಗಳಿಗೆ ಅಗ್ಗದ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಪೂರೈಸುವ ಕೆಲವು ಭಾರತೀಯ ಔಷಧಿ ಕಂಪೆನಿಗಳು ದೇಶೀಯವಾಗಿ ಕಳಪೆ ಔಷಧಿಗಳನ್ನು ಮಾರಾಟ ಮಾಡುತ್ತಿವೆ ಎಂಬ ಟೀಕೆಗಳಿವೆ.
ಮಾರುಕಟ್ಟೆಯಲ್ಲಿ ಅನುಮತಿಸುವ ಮೊದಲು ಪ್ರತೀ ಬ್ಯಾಚ್ ಔಷಧಿಗಳ ಗುಣಮಟ್ಟವನ್ನು ಪರಿಶೀಲಿಸಬೇಕು. ಭಾರತದಲ್ಲಿ ಶೇ. 10ಕ್ಕಿಂತ ಕಡಿಮೆ ಗುಣಮಟ್ಟದ ತಪಾಸಣೆ ಮಾಡಲಾಗುತ್ತಿದೆ. ಈ ಲೋಪದೋಷಗಳ ಲಾಭ ಪಡೆದು ಹಲವು ಕಂಪೆನಿಗಳು ಗುಣಮಟ್ಟವಿಲ್ಲದ ಔಷಧಿಗಳನ್ನು ಮುಕ್ತವಾಗಿ ತಯಾರಿಸುತ್ತಿವೆ. ಗುಣಮಟ್ಟದ ಜೆನೆರಿಕ್ ಔಷಧಿಗಳು ದೇಶೀಯ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಾಗುವವರೆಗೆ ತನ್ನ ನಿರ್ಧಾರವನ್ನು ಮುಂದೂಡುವಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಭಾರತೀಯ ವೈದ್ಯಕೀಯ ಮಂಡಳಿಗೆ ಮನವಿ ಮಾಡಿದೆ. ಐಎಂಎ ಪ್ರತಿನಿಧಿಗಳ ಮನವಿಯ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಂದ್ರ ವೈದ್ಯಕೀಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಎನ್‌ಎಂಸಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಅದರೊಂದಿಗೆ, ಎನ್‌ಎಂಸಿ ತನ್ನ ಆದೇಶಗಳನ್ನು ತಡೆಹಿಡಿದಿದೆ.
ಭಾರತದಲ್ಲಿ ಜೆನೆರಿಕ್ ಔಷಧಿಗಳ ಬಳಕೆಯನ್ನು ಹೆಚ್ಚಿಸಲು, ಸರಕಾರವು ಅವುಗಳ ಗುಣಮಟ್ಟ ಮತ್ತು ಪರಿಣಾಮಕಾರಿತ್ವವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ವೈದ್ಯರು ಮತ್ತು ಜನರು ಜೆನೆರಿಕ್ ಔಷಧಿಗಳ ಬಗ್ಗೆ ವಿಶ್ವಾಸ ಹೊಂದುವಂತಾಗಬೇಕು. ಜೆನೆರಿಕ್ ಔಷಧಿಗಳನ್ನು ಮಾರಾಟ ಮಾಡಲು ಜನೌಷಧಿ ಕೇಂದ್ರಗಳನ್ನು ವ್ಯಾಪಕವಾಗಿ ಸ್ಥಾಪಿಸಬೇಕು. ಅಧಿಕೃತ ಅಂಕಿಅಂಶಗಳ ಪ್ರಕಾರ ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರತೀ ಎರಡರಿಂದ ಮೂರು ಲಕ್ಷ ಜನಸಂಖ್ಯೆಗೆ ಒಂದು ಜನೌಷಧಿ ಕೇಂದ್ರವಿದೆ.
ಅವುಗಳ ಸಂಖ್ಯೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆಯಾ ಕೇಂದ್ರಗಳಲ್ಲಿ ಎಲ್ಲ ರೀತಿಯ ಔಷಧಿಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ. ಅದರಲ್ಲೂ ದೇಶಾದ್ಯಂತ ಇರುವ ಎರಡು ಲಕ್ಷ ಸರಕಾರಿ ಚಿಕಿತ್ಸಾಲಯಗಳು, ವಿವಿಧ ರೀತಿಯಲ್ಲಿ ಸರಕಾರದ ಸಹಾಯಧನ ಪಡೆಯುವ ಕಾರ್ಪೊರೇಟ್ ಆಸ್ಪತ್ರೆಗಳು, ಸರಕಾರದ ಆರೋಗ್ಯ ಯೋಜನೆಗಳ ಮೂಲಕ ಆರ್ಥಿಕ ಲಾಭ ಪಡೆಯುವ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಜೆನೆರಿಕ್ ಔಷಧಿಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕು. ಅವುಗಳಿಂದ ಆಗುವ ಆರ್ಥಿಕ ಲಾಭಗಳ ಬಗ್ಗೆ ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು.
ಮತ್ತೊಂದು ಪ್ರಮುಖ ಅಂಶವೆಂದರೆ ಔಷಧೀಯ ಕಂಪೆನಿಗಳಿಗೆ ಪರವಾನಿಗೆ ನೀಡುವಿಕೆ ಮತ್ತು ಗುಣಮಟ್ಟ ನಿಯಂತ್ರಣದಲ್ಲಿ ಯಾವುದೇ ಭ್ರಷ್ಟಾಚಾರ ಅಥವಾ ಪ್ರಲೋಭನೆ ಇಲ್ಲ ಎಂದು ಖಚಿತಪಡಿಸಿಕೊಳ್ಳುವುದು. ಆಗ ಮಾತ್ರ ಜೆನೆ ರಿಕ್ ಔಷಧಿಗಳ ಬಗ್ಗೆ ವೈದ್ಯರು ಮತ್ತು ಜನರ ನಂಬಿಕೆ ಹೆಚ್ಚುತ್ತದೆ ಮತ್ತು ಅವುಗಳ ಬಳಕೆ ಹೆಚ್ಚಾಗುತ್ತದೆ. ಇದರಿಂದ ಜನರ ಮೇಲೆ ಔಷಧಿಗಳ ಆರ್ಥಿಕ ಹೊರೆ ಕಡಿಮೆಯಾಗಲಿದೆ.
ಭಾರತೀಯ ಫಾರ್ಮಾ ವಲಯವು ಔಷಧಿಗಳ ಉತ್ಪಾದನೆಯಲ್ಲಿ ವಿಶ್ವದ ಮೂರನೇ ಸ್ಥಾನದಲ್ಲಿದೆ. ಗಾತ್ರದಲ್ಲಿ 14ನೇ ಸ್ಥಾನದಲ್ಲಿದೆ. ಭಾರತದಲ್ಲಿ ಸುಮಾರು ಮೂರು ಸಾವಿರ ಔಷಧೀಯ ಕಂಪೆನಿಗಳು ಮತ್ತು 10,000ಕ್ಕೂ ಹೆಚ್ಚು ಔಷಧೀಯ ಉತ್ಪಾದನಾ ಘಟಕಗಳಿವೆ. ಅವರು ಅರವತ್ತು ಚಿಕಿತ್ಸಾ ವಿಭಾಗಗಳಲ್ಲಿ ಅಗತ್ಯವಿರುವ 60,000ಕ್ಕೂ ಹೆಚ್ಚು ರೀತಿಯ ಜೆನೆರಿಕ್ ಔಷಧಿಗಳನ್ನು ಉತ್ಪಾದಿಸುತ್ತಾರೆ. ಪ್ರಪಂಚದಾದ್ಯಂತ ಬಳಸಲಾಗುವ 20 ಪ್ರತಿಶತದಷ್ಟು ಜೆನೆರಿಕ್ ಔಷಧಿಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ.
ದಶಕಗಳಿಂದ ಅಮೆರಿಕದಲ್ಲಿ ಬಳಸಲಾಗುತ್ತಿರುವ 40 ಪ್ರತಿಶತ ಜೆನೆರಿಕ್ ಔಷಧಿಗಳನ್ನು ಭಾರತದಿಂದ ರಫ್ತು ಮಾಡಲಾಗುತ್ತಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಬಳಸಲಾಗುವ ಜೆನೆರಿಕ್ ಔಷಧಿಗಳ ನಾಲ್ಕನೇ ಒಂದು ಭಾಗವು ಭಾರತದಿಂದ ಹೋಗುತ್ತದೆ. ಆದರೆ ಭಾರತದಲ್ಲಿ ಜೆನೆರಿಕ್ ಔಷಧಿಗಳ ಬಳಕೆ ಕೇವಲ ಹತ್ತು ಪ್ರತಿಶತ ಮಾತ್ರ. ಪರಿಣಾಮವಾಗಿ, ಬ್ರಾಂಡೆಡ್ ಔಷಧಿಗಳ ಹೊರೆ ಜನರ ಮೇಲೆ ಬಿಳುತ್ತಿದೆ.







