ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾದ ನರವಾಣೆ ಅವರ ಅಪ್ರಕಟಿತ ಪುಸ್ತಕದಲ್ಲೇನಿದೆ?

ರಾಜನಾಥ್ ಸಿಂಗ್ , ರಾಹುಲ್ ಗಾಂಧಿ | Photo Credit : PTI
ಕಾರವಾನ್ ಲೇಖನದಲ್ಲಿ ಮುಖ್ಯವಾಗಿ ಉಲ್ಲೇಖಿಸಲಾಗಿರುವ ವಿವಾದಾತ್ಮಕ ಪುಸ್ತಕದ ಕೆಲವು ಭಾಗಗಳಲ್ಲಿ 2020 ಆಗಸ್ಟ್ 31ರಂದು ನರವಾಣೆ ಕರ್ತವ್ಯದಲ್ಲಿರುವಾಗ ಎದುರಿಸಿದ ಹತಾಶ ಚಿತ್ರಣವನ್ನು ವಿವರಿಸಲು ಪ್ರಯತ್ನಿಸಿದೆ.
ಲೋಕಸಭೆಯಲ್ಲಿ ಸೋಮವಾರ ನಡೆದ ಇಡೀ ಚರ್ಚೆಯು ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ” ಎನ್ನುವ ಅಪ್ರಕಟಿತ ಪುಸ್ತಕದ ಸುತ್ತ ತಿರುಗಿದೆ. ಪೆಂಗ್ವಿನ್ ಬುಕ್ಸ್ ಸಂಸ್ಥೆಯ ಪ್ರಕಾಶಿತ ಪ್ರಶ್ನಾರ್ಹ ಆತ್ಮಚರಿತ್ರೆ 2024ರಲ್ಲಿ ಬಿಡುಗಡೆಯಾಗಬೇಕತ್ತು. ಅಮೆಝಾನ್ ಪುಸ್ತಕದ ಪಟ್ಟಿಯಲ್ಲಿದ್ದರೂ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ.
ಫೆ.1ರಂದು ‘ದಿ ಕಾರವಾನ್’ ನಿಯತಕಾಲಿಕೆಯು “ನರವಾಣೆಯ ಸತ್ಯದ ಕ್ಷಣ” ಎನ್ನುವ ಶೀರ್ಷಿಕೆಯಡಿ ಲೇಖನವನ್ನು ಪ್ರಕಟಿಸುವ ಮೂಲಕ ಮರೆತು ಹೋಗಿರುವ ಪುಸ್ತಕದ ಚರ್ಚೆಯನ್ನು ಮತ್ತೆ ಮುಂಚೂಣಿಗೆ ತಂದಿದೆ.
ಲೇಖನದ ಸಾರಾಂಶ ಪಠ್ಯವು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನೇರವಾಗಿ ಉಲ್ಲೇಖಿಸಿರುವುದು ಆರೋಪ- ಪ್ರತ್ಯಾರೋಪಗಳ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. “ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆಯು ಕೇಂದ್ರ ಸರ್ಕಾರವು ಚೀನಾ ಗಡಿ ಬಿಕ್ಕಟ್ಟನ್ನು ಹೇಗೆ ತಿರುಚಿದೆ ಎಂಬುದನ್ನು ಬಹಿರಂಗಪಡಿಸುತ್ತದೆ” ಎಂದು ಸಾರಾಂಶದಲ್ಲಿ ಹೇಳಲಾಗಿದೆ.
ಮನೋಜ್ ಮುಖಂದ್ ನರವಾಣೆಯವರು ತಮ್ಮ ಅನುಭವವನ್ನು ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ ಎಂದು ಲೇಖನ ಹೇಳಿದೆ. ಇದೀಗ ನಿವೃತ್ತ ಭಾರತೀಯ ಸೇನಾ ಜನರಲ್ ಆಗಿರುವ ನರವಾಣೆ 2019ರ ಡಿಸೆಂಬರ್ನಿಂದ 2022 ಎಪ್ರಿಲ್ ನಡುವೆ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿದ್ದರು.
ಕಾರವಾನ್ ಲೇಖನದಲ್ಲಿ ಮುಖ್ಯವಾಗಿ ಉಲ್ಲೇಖಿಸಲಾಗಿರುವ ವಿವಾದಾತ್ಮಕ ಪುಸ್ತಕದ ಕೆಲವು ಭಾಗಗಳಲ್ಲಿ 2020 ಆಗಸ್ಟ್ 31ರಂದು ನರವಾಣೆ ಕರ್ತವ್ಯದಲ್ಲಿರುವಾಗ ಎದುರಿಸಿದ ಹತಾಶ ಚಿತ್ರಣವನ್ನು ವಿವರಿಸಲು ಪ್ರಯತ್ನಿಸಿದೆ. “ಫೂರ್ವ ಲಡಾಖ್ನಲ್ಲಿ ನಾಲ್ಕು ಚೀನೀ ಟ್ಯಾಂಕ್ಗಳು ಪದಾತಿ ಸೈನ್ಯದ ಬೆಂಬಲದೊಂದಿಗೆ ರೆಚಿನ್ ಲಾ ಕಡೆಗೆ ಕಡಿದಾದ ಪರ್ವತದ ಹಾದಿಯಲ್ಲಿ ಮುಂದೆ ಬರಲಾರಂಭಿಸಿದ್ದವು. ವಿವಾದಿತ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಈ ಚಲನವಲನವನ್ನು ಲೆಫ್ರಿನೆಂಟ್ ಜನರಲ್ ಯೋಗೇಶ್ ಜೋಶಿ ಆಗಿನ ಸೇನಾ ಮುಖ್ಯಸ್ಥರಿಗೆ ವರದಿ ಮಾಡಿದ್ದಾರೆ” ಎಂದು ನಿಯತಕಾಲಿಕದ ಲೇಖನ ತಿಳಿಸಿದೆ.
“ಸೇನಾ ಮುಖ್ಯಸ್ಥರು ತಕ್ಷಣ ನಾಯಕರಿಗೆ ಕರೆ ಮಾಡಲಾರಂಭಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮೊದಲಾದವರಿಗೆ ಕರೆ ಮಾಡಿದ್ದಾರೆ” ಎಂದು ಕಾರವಾನ್ ಲೇಖನ ಹೇಳಿದೆ.
ಈ ಮೊದಲು ಇಂಡಿಯನ್ ಎಕ್ಸ್ಪ್ರೆಸ್ ಕೂಡ ವರದಿ ಮಾಡಿರುವಂತೆ ರಾಜನಾಥ್ ಸಿಂಗ್ ಅವರು ಪ್ರಧಾನಿ ಮೋದಿಯವರ ಅನುಮೋದನೆಯನ್ನು ತಿಳಿಸಿದ್ದು, ಆಗಿನ ಸೇನಾ ಮುಖ್ಯಸ್ಥರಿಗೆ “ನಿಮಗೆ ಏನು ಸೂಕ್ತವೆಂದು ಅನಿಸುತ್ತದೆಯೋ ಅದನ್ನು ಮಾಡಿ (Jo ucchit samjho woh karo)” ಎಂದು ಹೇಳಿದ್ದಾರೆ.
#WATCH | Delhi: Lok Sabha LoP and Congress MP Rahul Gandhi says, "This is not me, this is what the Army Chief (former) has written in a book. The book is not being allowed to be published. It is languishing, and this is the Army Chief's perspective. Why are they so scared of the… pic.twitter.com/GnWYRAPYIA
— ANI (@ANI) February 2, 2026
ನರವಾಣೆ ಪುಸ್ತಕ ಪ್ರಕಟವಾಗದೆ ಇರಲು ಕಾರಣವೇನು?
ಅತ್ಯಂತ ಸೂಕ್ಷ್ಮವಾದ ಸೇನಾ ಕಾರ್ಯಾಚರಣೆಗಳು ಮತ್ತು ಅದನ್ನು ಸರ್ಕಾರ ನಿಭಾಯಿಸಿರುವ ರೀತಿಯ ಕುರಿತ ವಿವರಗಳನ್ನು ಬಹಿರಂಗಪಡಿಸಿದ ಕಾರಣದಿಂದ ಪುಸ್ತಕದ ಬಿಡುಗಡೆ ಅನಿಶ್ಚಿತತೆಯಲ್ಲಿರುವುದರಿಂದ ನರವಾಣೆಯ ಮೊದಲ ಪುಸ್ತಕ ವಿವಾದಕ್ಕೆ ಸಿಲುಕಿದೆ. ಒಂದು ಪುಸ್ತಕದಲ್ಲಿ ಸೂಕ್ಷ್ಮ ಮಾಹಿತಿ ಇರುವಾಗ ಅದರ ಸಾರ್ವಜನಿಕ ಬಿಡುಗಡೆಗೆ ಸರ್ಕಾರದ ಅನುಮೋದನೆಗೆ ಕಾಯುವುದು ಸಾಮಾನ್ಯ ಕಾರ್ಯವಿಧಾನವಾಗಿದ್ದರೂ, ಒಂದು ವರ್ಷಕ್ಕೂ ಹೆಚ್ಚು ಅವಧಿ ಕಳೆದರೂ ಪುಸ್ತಕವನ್ನು ಇನ್ನೂ ಪ್ರಕಟಿಸಲಾಗಿಲ್ಲ.
ನರವಾಣೆಯ ಆತ್ಮಚರಿತ್ರೆ ರಕ್ಷಣಾ ಸಚಿವಾಲಯದ ಆದೇಶದ ಮೇರೆಗೆ ಪರಿಶೀಲನೆಗೆ ಒಳಗಾಗುತ್ತಿದೆ ಎಂದು ಹೇಳಲಾಗಿದೆ. ಆತ್ಮಚರಿತ್ರೆಯಲ್ಲಿ 2022ರ ಅಗ್ನಿಪಥ್ ನೇಮಕಾತಿ ಯೋಜನೆಯ ಕುರಿತಂತೆ ಅಭಿಪ್ರಾಯಗಳನ್ನೂ ಸಹ ಒಳಗೊಂಡಿದೆ ಎಂದು ವರದಿಯಾಗಿದೆ.
ತಮ್ಮ ಪುಸ್ತಕ ಪ್ರಕಟವಾಗದೆ ಇರುವ ಬಗ್ಗೆ ನರವಾಣೆ ಬಹಿರಂಗವಾಗಿ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, “ನನ್ನ ಕೆಲಸ ಪುಸ್ತಕ ಬರೆಯವುದು ಮಾತ್ರವಾಗಿದೆ. ಅದನ್ನು ಪ್ರಕಟಿಸುವ ಜವಾಬ್ದಾರಿ ಪ್ರಕಾಶಕರದ್ದು” ಎಂದು ಹೇಳಿದ್ದಾರೆ. “ರಕ್ಷಣಾ ಸಚಿವಾಲಯದ ಬಳಿ ಅನುಮೋದನೆ ಕೇಳುವುದು ನನ್ನ ಕೆಲಸವಲ್ಲ. ಇದೀಗ ಪುಸ್ತಕ ಪ್ರಕಾಶಕರು ಮತ್ತು ರಕ್ಷಣಾ ಸಚಿವಾಲಯದ ಮುಂದೆ ಇದೆ. ಸಚಿವಾಲಯಕ್ಕೆ ಒಪ್ಪಿಗೆಯಾದಾಗ ಅನುಮೋದನೆ ನೀಡಬಹುದು” ಎಂದು ಅವರು ಹೇಳಿದ್ದರು.







