ಲೋಕಸಭೆಯಲ್ಲಿ ಸಂಸದರ ಸಂಖ್ಯೆಯನ್ನು 816 ಕ್ಕೆ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ; ರಾಜ್ಯಗಳಲ್ಲಿರುವ ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವ ರೀತಿ ಬದಲಾವಣೆಯಾಗಲಿದೆ?

Photo Credit : PTI
ಮುಂದಿನ ಸಾರ್ವತ್ರಿಕ ಚುನಾವಣೆಯಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಜಾರಿಗೆ ತರಲು ಕೇಂದ್ರವು ಸಾಂವಿಧಾನಿಕ ತಿದ್ದುಪಡಿ ಸೇರಿದಂತೆ ಕನಿಷ್ಠ ಎರಡು ಮಸೂದೆಗಳನ್ನು ಮಂಡಿಸಲು ಸಿದ್ಧತೆ ನಡೆಸುತ್ತಿದೆ.
ಸರ್ಕಾರವು ಲೋಕಸಭೆಯ ಗಾತ್ರವನ್ನು 543 ರಿಂದ 816 ಸ್ಥಾನಗಳಿಗೆ ಗಮನಾರ್ಹವಾಗಿ ವಿಸ್ತರಿಸುವ ಬಗ್ಗೆ ಚಿಂತಿಸುತ್ತಿದ್ದು ಇದು 273 ಹೊಸ ಕ್ಷೇತ್ರಗಳನ್ನು ಸೇರಿಸುತ್ತದೆ. ಇವುಗಳಲ್ಲಿ ಹೆಚ್ಚಿನವು ಮಹಿಳೆಯರಿಗೆ ಮೀಸಲಾಗಿರುತ್ತವೆ. ಇದರಿಂದಾಗಿ ಹಾಲಿ ಸದಸ್ಯರನ್ನು ಸ್ಥಳಾಂತರಿಸದೆ ಪ್ರಾತಿನಿಧ್ಯವನ್ನು ಮರುರೂಪಿಸಲಾಗುತ್ತದೆ.
ಈ ಪ್ರಸ್ತಾವನೆಯು ಪ್ರಧಾನಿ ನರೇಂದ್ರ ಮೋದಿಯವರ ಮಹಿಳಾ ಕೇಂದ್ರಿತ ರಾಜಕೀಯ ಸಂದೇಶವನ್ನು ಬಲಪಡಿಸುವ ಮತ್ತು ಚುನಾವಣಾ ಚಲನಶೀಲತೆ, ಕ್ಷೇತ್ರ ಗಡಿಗಳು ಮತ್ತು ಭವಿಷ್ಯದ ಕ್ಷೇತ್ರ ಮರುವಿಂಗಡಣೆ ಹಾದಿಯಲ್ಲಿ ವ್ಯಾಪಕ ಬದಲಾವಣೆಗಳನ್ನು ಉಂಟುಮಾಡುವ ನಿರೀಕ್ಷೆಯಿದೆ ಎಂದು indianexpress.com ವರದಿ ಮಾಡಿದೆ.
ಪುನರ್ ರಚಿಸಲಾದ ಲೋಕಸಭೆಯು 2029 ರ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಜಾರಿಗೆ ಬರಲಿದೆ.
ʼಇಂಡಿಯನ್ ಎಕ್ಸ್ಪ್ರೆಸ್ʼ ವರದಿ ಪ್ರಕಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಲವು ವಿರೋಧ ಪಕ್ಷಗಳೊಂದಿಗೆ ನಡೆಸಿದ ಸಭೆಯಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆಯಾದ ಸೀಟುಗಳ ಅಸ್ತಿತ್ವದಲ್ಲಿರುವ ಅನುಪಾತವನ್ನು ಉಳಿಸಿಕೊಂಡು, ಸರ್ಕಾರವು ನಾರಿ ಶಕ್ತಿ ವಂದನ ಅಧಿನಿಯಮವನ್ನು ತಿದ್ದುಪಡಿ ಮಾಡಬಹುದು ಮತ್ತು ಲೋಕಸಭೆಯ ಬಲವನ್ನು ಪ್ರತ್ಯೇಕವಾಗಿ ವಿಸ್ತರಿಸಬಹುದು ಎಂದು ಹೇಳಿದ್ದಾರೆ. ಆದಾಗ್ಯೂ, ಕ್ಷೇತ್ರ ಮರುವಿಂಗಡಣೆ ಒಳಗೊಂಡ ಕ್ಷೇತ್ರ ನಿರ್ಣಯದ ಪ್ರಕ್ರಿಯೆ 2011 ರ ಜನಗಣತಿಯನ್ನು ಆಧರಿಸಿರುವ ನಿರೀಕ್ಷೆಯಿದೆ.
►ಅಮಿತ್ ಶಾ ಹೇಳಿದ್ದು ಏನು?
ವಿರೋಧ ಪಕ್ಷದ ನಾಯಕರೊಂದಿಗಿನ ಸಭೆಯಲ್ಲಿ 2029 ರವರೆಗೆ ನಡೆಯುವ ಜನಗಣತಿ ಕಾರ್ಯ ಪೂರ್ಣಗೊಳ್ಳುವವರೆಗೆ ಸರ್ಕಾರ ಕಾಯಲು ಬಯಸುವುದಿಲ್ಲ, ಅದು ಪೂರ್ಣಗೊಳ್ಳಲು ಕಾಯುವುದಾದರೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವುದು ವಿಳಂಬವಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 2023 ರಲ್ಲಿ ನಾರಿ ಶಕ್ತಿ ವಂದನ ಅಧಿನಿಯಮ್ ಅಂಗೀಕಾರದ ಸಮಯದಲ್ಲಿ ಅನೇಕ ವಿರೋಧ ಪಕ್ಷಗಳು ಇದನ್ನೇ ಒತ್ತಾಯಿಸಿದ್ದು ನಡೆಯುತ್ತಿರುವ ಜನಗಣತಿಯ ನಂತರ ಅದನ್ನು ಕ್ಷೇತ್ರ ಮರುವಿಂಗಡಣೆಗೆ ಲಿಂಕ್ ಮಾಡುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದವು.
ಸರ್ಕಾರ ಸೋಮವಾರ ಎಲ್ಲಾ ಪಕ್ಷಗಳನ್ನು ಮಾತುಕತೆಗೆ ಆಹ್ವಾನಿಸಿದ್ದರೂ, ಕಾಂಗ್ರೆಸ್, ಎಡ ಪಕ್ಷಗಳು, ಟಿಎಂಸಿ, ಎಎಪಿ ಮತ್ತು ಡಿಎಂಕೆ ಸೇರಿದಂತೆ ಅನೇಕ ಪಕ್ಷಗಳು ಇದರಿಂದ ದೂರ ಉಳಿದಿದ್ದವು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು INDIA ಬ್ಲಾಕ್ ಮಿತ್ರಪಕ್ಷಗಳ ಪ್ರತ್ಯೇಕ ಸಭೆಯನ್ನು ಕರೆದಿದ್ದು ಅಲ್ಲಿ ಪ್ರಸ್ತಾವಿತ ಬದಲಾವಣೆಗಳ ಕುರಿತು ಸರ್ಕಾರದಿಂದ ವಿವರವಾದ ವರದಿಯನ್ನು ಕೋರಲು ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಬಿಜೆಪಿಯ ಉನ್ನತ ನಾಯಕತ್ವವು ಈ ಪ್ರಸ್ತಾವನೆಯ ಕುರಿತು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚೆ ನಡೆಸಿದೆ ಎಂದು ಟಿಡಿಪಿ ಮೂಲಗಳು ತಿಳಿಸಿವೆ.
ಪ್ರತಿ ರಾಜ್ಯದಲ್ಲಿ ಮಹಿಳೆಯರಿಗೆ ಮೀಸಲಿಡಬೇಕಾದ ಸ್ಥಾನಗಳನ್ನು ನಿರ್ಧರಿಸಲು ಲಾಟರಿ ವ್ಯವಸ್ಥೆಯನ್ನು ಹೊಂದುವ ಸಾಧ್ಯತೆಯನ್ನು ಸಹ ಪ್ರಸ್ತಾಪಿಸಲಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ಸಂಸದರೊಬ್ಬರು ಹೇಳಿದರು. ಈ ಸ್ಥಾನಗಳನ್ನು ಮಹಿಳೆಯರಿಗೆ ನಿಗದಿಪಡಿಸಲಾಗುತ್ತದೆಯೇ ಅಥವಾ ಆವರ್ತನ ಆಧಾರದ ಮೇಲೆ ಮೀಸಲಿಡಲಾಗುತ್ತದೆಯೇ ಎಂಬುದರ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ ಅವರು.
ಸಭೆಯಲ್ಲಿ ಅಮಿತ್ ಶಾ ಮಾಡಿದ ಮತ್ತೊಂದು ನಿರ್ಣಾಯಕ ಸಲಹೆಯೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಸ್ಥಾನಗಳಲ್ಲಿ ಮಹಿಳೆಯರಿಗೆ ಕೋಟಾ. ಸಮಾಜವಾದಿ ಪಕ್ಷ ಮತ್ತು ಆರ್ಜೆಡಿಯಂತಹ ಪಕ್ಷಗಳು ಹಾಗೂ ವಿವಿಧ ಗುಂಪುಗಳ ಹಿಂದುಳಿದ ನಾಯಕರು ಇದನ್ನು ಒತ್ತಾಯಿಸುತ್ತಿದ್ದಾರೆ. ದೇಶದಲ್ಲಿ ಸುಮಾರು 81 ಲಕ್ಷ ಜಾತಿ ಗುಂಪುಗಳಿವೆ. ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳುವುದು ಅಸಾಧ್ಯ ಎಂದು ಶಾ ಹೇಳಿರುವುದಾಗಿ ಸೋಮವಾರದ ಸಭೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ಈ ಬದಲಾವಣೆಗಳನ್ನು ಜಾರಿಗೆ ತರಲು, ಸರ್ಕಾರವು ಕಾಯ್ದೆಗಳ ತಿದ್ದುಪಡಿಗಳನ್ನು ಅಂಗೀಕರಿಸಬೇಕು. ಮೊದಲನೆಯದಾಗಿ, ಮಹಿಳಾ ಮೀಸಲಾತಿ ಕಾಯ್ದೆ. ಮುಂದಿನ ಜನಗಣತಿ ಮತ್ತು ನಂತರದ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಕೋಟಾ ಜಾರಿಗೆ ಬರಬೇಕೆಂದು ಪ್ರಸ್ತುತ ಕಾಯ್ದೆ ಆದೇಶಿಸುತ್ತದೆ . ಎರಡನೆಯದಾಗಿ, ಕ್ಷೇತ್ರ ಮರುವಿಂಗಡಣೆ ಆಯೋಗ ಕಾಯ್ದೆ. 2011 ರ ಜನಗಣತಿಯ ಆಧಾರದ ಮೇಲೆ ಈ ವರ್ಷದ ಜೂನ್ ವೇಳೆಗೆ ಕ್ಷೇತ್ರ ಮರುವಿಂಗಡಣೆ ಆಯೋಗವನ್ನು ರಚಿಸಬಹುದು.ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಉದ್ದೇಶದಿಂದ ಸರ್ಕಾರವು ಅಧಿವೇಶನವನ್ನು ವಿಸ್ತರಿಸಬಹುದು ಅಥವಾ ವಿಶೇಷ ಅಧಿವೇಶನವನ್ನು ಕರೆಯಬಹುದು ಎಂದು ಮೂಲಗಳು ತಿಳಿಸಿವೆ
►ರಾಜ್ಯಗಳ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?
ಪ್ರಸ್ತುತ ಉತ್ತರ ಪ್ರದೇಶವು ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಅಂದರೆ ಸುಮಾರು 15% ಅಥವಾ 543 ರಲ್ಲಿ 80. 816 ಸದಸ್ಯರ ವಿಸ್ತೃತ ಸದನದಲ್ಲಿ ಈ ಅನುಪಾತವನ್ನು ಕಾಯ್ದುಕೊಂಡರೆ, ರಾಜ್ಯದ ಸ್ಥಾನಗಳ ಸಂಖ್ಯೆ ಸುಮಾರು 120 ಕ್ಕೆ ಏರುತ್ತದೆ. ಇದರಲ್ಲಿ ಸರಿಸುಮಾರು 40 ಸ್ಥಾನಗಳು ಪ್ರಸ್ತಾವಿತ ಮೂರನೇ ಒಂದು ಭಾಗದಷ್ಟು ಕೋಟಾದಡಿಯಲ್ಲಿ ಮಹಿಳೆಯರಿಗೆ ಮೀಸಲಾಗಿರುತ್ತವೆ.
ಅದೇ ರೀತಿ, ಮಹಾರಾಷ್ಟ್ರವು ತನ್ನ ಲೋಕಸಭಾ ಪ್ರಾತಿನಿಧ್ಯವನ್ನು 48 ರಿಂದ 72 ಸ್ಥಾನಗಳಿಗೆ ಹೆಚ್ಚಿಸಲಿದೆ, ಇದರಲ್ಲಿ 24 ಮಹಿಳೆಯರಿಗೆ ಮೀಸಲಾಗಿವೆ. ಪಶ್ಚಿಮ ಬಂಗಾಳದಲ್ಲಿ ಸೀಟುಗಳ ಸಂಖ್ಯೆ 42 ರಿಂದ 63ಕ್ಕೆ ಏರಲಿದ್ದು ಮಹಿಳೆಯರಿಗೆ 21 ಸೀಟು ಮೀಸಲಾಗಿರುತ್ತದೆ . ಬಿಹಾರದಲ್ಲಿ 40 ಸೀಟುಗಳಿಂದ ರಿಂದ 60ಕ್ಕೆ ಏರಿಕೆಯಾದರೆ ಮಹಿಳೆಯರಿಗೆ 20 ಸೀಟುಗಳಲ್ಲಿ ಪ್ರಾತಿನಿಧ್ಯ ಸಿಗಲಿದೆ. ಕಡಿಮೆ ಪ್ರಾತಿನಿಧ್ಯದ ಬಗ್ಗೆ ಡಿಎಂಕೆ ಕಳವಳ ವ್ಯಕ್ತಪಡಿಸಿರುವ ತಮಿಳುನಾಡಿನಲ್ಲಿ, ಸ್ಥಾನಗಳು 39 ರಿಂದ 59 ಕ್ಕೆ ಹೆಚ್ಚಾಗಲಿವೆ. ಇಲ್ಲಿ 20 ಮಹಿಳೆಯರಿಗೆ ಮೀಸಲಾಗಿವೆ. ಮಧ್ಯಪ್ರದೇಶದಲ್ಲಿ ಸೀಟುಗಳ ಸಂಖ್ಯೆ 29 ರಿಂದ 44 ಸ್ಥಾನಗಳಿಗೆ ಏರಲಿದೆ, ಇದರಲ್ಲಿ 15 ಮಹಿಳೆಯರಿಗೆ ಮೀಸಲಾಗಿವೆ.
ಅರುಣಾಚಲ ಪ್ರದೇಶ, ಗೋವಾ, ಮಣಿಪುರ, ಮೇಘಾಲಯ, ತ್ರಿಪುರಾ ಮುಂತಾದ ಸಣ್ಣ ರಾಜ್ಯಗಳಲ್ಲಿ ಇದು 2 ಲೋಕಸಭಾ ಸ್ಥಾನಗಳಿಂದ 3 ಕ್ಕೆ ಏರಬಹುದು. ತಲಾ 1 ಸ್ಥಾನವನ್ನು ಹೊಂದಿರುವ ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಹೊಸ ಲೋಕಸಭಾ ವಿಸ್ತರಣೆಯಲ್ಲಿ ತಲಾ 2 ಸ್ಥಾನಗಳನ್ನು ಹೊಂದಬಹುದು.
ಪ್ರಮುಖ ಕೇಂದ್ರಾಡಳಿತ ಪ್ರದೇಶಗಳಲ್ಲಿ, ದೆಹಲಿಯ ಲೋಕಸಭಾ ಪ್ರಾತಿನಿಧ್ಯವು 7 ರಿಂದ 11 ಸ್ಥಾನಗಳಿಗೆ ಏರಿಕೆಯಾಗಬಹುದು ,ಇದರಲ್ಲಿ 4 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೀಟುಗಳ ಸಂಖ್ಯೆ 5 ರಿಂದ 8ಕ್ಕೆ ಏರಬಹುದು, ಇದರಲ್ಲಿ 3 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಆದಾಗ್ಯೂ, ಲಡಾಖ್ ಮತ್ತು ಪುದುಚೇರಿಯಂತಹ ಒಂದೇ ಒಂದು ಸ್ಥಾನವಿರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾನಗಳಲ್ಲಿ ಯಾವುದೇ ಹೆಚ್ಚಳ ಕಂಡುಬರುತ್ತದೆಯೇ ಮತ್ತು ಅಂತಹ ಸಂದರ್ಭಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಹೇಗೆ ಜಾರಿಗೆ ತರಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.







