Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಹುತ್ವಭಾರತಿಯ ನಿಜದನಿ ಚಿರಾಯುವಾಗಲಿ

ಬಹುತ್ವಭಾರತಿಯ ನಿಜದನಿ ಚಿರಾಯುವಾಗಲಿ

ಡಾ. ಕುಪ್ಪನಹಳ್ಳಿ ಎಂ. ಭೈರಪ್ಪಡಾ. ಕುಪ್ಪನಹಳ್ಳಿ ಎಂ. ಭೈರಪ್ಪ29 Aug 2025 12:59 PM IST
share
ಬಹುತ್ವಭಾರತಿಯ ನಿಜದನಿ ಚಿರಾಯುವಾಗಲಿ

ವಿಶ್ವಗುರು ಎಂದು ವಿಶ್ವಮಾನ್ಯತೆಗೆ ಒಳಗಾಗುತ್ತಿರುವ ಭಾರತದಲ್ಲಿ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಈಚೆಗೆ ನಡೆಯುತ್ತಿರುವ ವ್ಯಾವಹಾರಿಕ ಹಾಗೂ ಅಧಿಕಾರಶಾಹೀ ಭ್ರಷ್ಟತೆಯು ಮಾಧ್ಯಮಕ್ಷೇತ್ರಕ್ಕೂ ಕಾಲಿಟ್ಟಿರುವುದು ದುರಂತ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆನಿಸಿಕೊಂಡು, ಈ ನೆಲ ಹಾಗೂ ಜನತೆಯ ಪರವಾಗಿ ಸದಾ ಜಾಗೃತ ದನಿಯಾಗಿರಬೇಕಾಗಿದ್ದ ಮಾಧ್ಯಮಗಳು ದೌರ್ಜನ್ಯವೆಸಗುವ ಧನಶಾಹಿ ಹಾಗೂ ಧರ್ಮಶಾಹಿ ಧಣಿಗಳ ಪರವಾಗಿ ನಿಲ್ಲುತ್ತಿರುವುದು ನೈತಿಕ ಅಧಃಪತನವಾಗಿದೆ. ಸದಾ ವಿವಾದಾತ್ಮಕ ಸಂಗತಿಗಳಿಗಾಗಿಯೇ ಕಾಯುವ ಹಾಗೂ ಸದಾಶಯವುಳ್ಳ ಸಂಗತಿಗಳನ್ನೂ ವಿವಾದಾತ್ಮಕಗೊಳಿಸುವ ಮೂಲಕ ಮಾಧ್ಯಮಧರ್ಮಕ್ಕೆ ದ್ರೋಹವೆಸಗುತ್ತಿರುವ ಹಲವಾರು ಮಾಧ್ಯಮಗಳು ರಾರಾಜಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಸತ್ಯಾಸತ್ಯತೆಯನ್ನು ಫ್ಯಾಕ್ಟ್ ಚೆಕ್ ಮಾಡದೆ ನೆಲಘಾತಕವಾದ ಸುದ್ದಿಗಳನ್ನು ವರ್ಣರಂಜಿತವಾಗಿ ಬಿತ್ತುತ್ತಾ ಜನಮತಿಯ ದಿಕ್ಕೆಡಿಸುವ, ಒಡೆದಾಳುವ ನಡೆಯುಳ್ಳ ಮಾಧ್ಯಮಗಳ ಆರ್ಭಟ ಲಜ್ಜೆಗೇಡಿಯಾಗಿದೆ. ಇಂತಹ ಸಂದಿಗ್ಧ ಸಂದರ್ಭದೊಳಗೆ ನಿಜನುಡಿಯ ನಡೆಯಾಗಿ ‘ಜನದನಿಯ ಸಾರಥಿ’ಯಾಗಿ ‘ಅಪರಿಮಿತ ಕತ್ತಲೆಯೊಳಗೆ ಪರಿಮಿತದ ಬೆಳಗು’ ನೀಡುವಂಥ ಕೆಲವೇ ಕೆಲವು ಪತ್ರಿಕೆಗಳಲ್ಲಿ ‘‘ವಾರ್ತಾಭಾರತಿ’’ಯು ಒಂದಾಗಿದೆ.

ಕೋಲಾರದ ಸರಕಾರಿ ಬಾಲಕರ ಪದವಿ ಕಾಲೇಜಿನಲ್ಲಿ ಬಿ.ಎ. ಅಧ್ಯಯನ ಮಾಡುತ್ತಿದ್ದ ಸಂದರ್ಭ(2005)ದಲ್ಲಿ ಜನಪರ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದಾಗ ಪರಿಚಯವಾದ ಪತ್ರಿಕೆ ‘ವಾರ್ತಾಭಾರತಿ’. ಪ್ರಗತಿಪರವಾದ ಆಶಯವುಳ್ಳದ್ದಾಗಿ ಮೊದಲ ಓದಿನಲ್ಲೇ ಪತ್ರಿಕೆಯು ಸೆಳೆದುಕೊಂಡುಬಿಟ್ಟಿತು. ಆ ಸಮಯದಲ್ಲಿ ಒಂದೆರಡು ಅಂಗಡಿಗಳಲ್ಲಿ ಮಾತ್ರ ದೊರೆಯುತ್ತಿತ್ತು. ಅಲ್ಲಿಯೂ ಸಹ ಕಡಿಮೆ ಪ್ರತಿಗಳನ್ನು ತರಿಸುತ್ತಿದ್ದುದರಿಂದ ಕೆಲವೊಮ್ಮೆ ಸಿಗುತ್ತಿರಲಿಲ್ಲ. ಕಾಲೇಜಿನಲ್ಲಿ ಕ್ಲಾಸು ಮುಗಿಸಿಕೊಂಡು ರೈತ ಸಂಘದ ಆಫೀಸಿಗೋ ಅಥವಾ ಸಾರ್ವಜನಿಕ ಗ್ರಂಥಾಲಯಕ್ಕೋ ಹೋಗಿ ಪತ್ರಿಕೆ ಓದುತ್ತಿದ್ದೆ. ಸುಮಾರು ದಿನಗಳ ನಂತರ ಎಲ್ಲಾ ಕಡೆಯೂ ಪತ್ರಿಕೆ ಸಿಗುವಂತಾಗಿ ಬಹಳ ಖುಷಿಯೆನಿಸಿತು. ಅಂದಿನಿಂದ ಇಂದಿಗೂ ನನ್ನ ಪ್ರತಿನಿತ್ಯದ ಓದು-ಚಿಂತನ-ಸಂಶೋಧನ ಯಾನದಲ್ಲಿ ‘ವಾರ್ತಾಭಾರತಿ’ಯೂ ನನ್ನ ಮೆಚ್ಚಿನ ಪತ್ರಿಕೆಯಾಗಿದೆ.

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳೆಂಬಂತೆ ‘ವಾರ್ತಾಭಾರತಿ’ಯೂ ತನ್ನೊಡಲೊಳಗೆ ಪ್ರಜಾಪ್ರಭುತ್ವ ಮತ್ತು ಬಹುತ್ವ ಸಂವೇದನೆಯನ್ನು ಮೈದುಂಬಿಕೊಂಡು ಬಂದಿದೆ. ಪೂರ್ವಾಗ್ರಹಪೀಡಿತವಾದ ಬಹು ಮಾಧ್ಯಮಗಳು ಯಾವುದನ್ನೂ ನಿರ್ಲಕ್ಷ್ಯ ಮಾಡಿದ್ದವೋ ಅಂತಹ ಸಂಗತಿಗಳತ್ತ ಲಕ್ಷ್ಯ ನೀಡುವ ‘ವಾರ್ತಾಭಾರತಿ’ಯು ಅಲಕ್ಷಿತರ ಪರವಾದ ದನಿಯನ್ನು ಬಿತ್ತರಿಸುತ್ತಿದೆ. ‘ವಾರ್ತಾಭಾರತಿ’ಯ ಸಂಪಾದಕೀಯವಾಗಲೀ, ಲೇಖನಗಳಾಗಲೀ, ಜನಾಭಿಪ್ರಾಯಗಳಾಗಲೀ, ಸುದ್ದಿಸಂಗತಿಗಳಾಗಲೀ ನಿಖರತೆ ಹಾಗೂ ಸಮಚಿತ್ತತೆಯಿಂದ ಕೂಡಿದ ಕಾರಣ ಪ್ರತೀ ದಿನವೂ ಪತ್ರಿಕೆಯನ್ನು ಓದಬೇಕೆನಿಸುತ್ತದೆ. ಇತರ ಪತ್ರಿಕೆಗಳಲ್ಲಿ ಚರ್ಚಿತಗೊಳ್ಳದ ಬಹುಮುಖ್ಯ ಸಮಕಾಲೀನ ಸಂಗತಿಗಳಿಗೆ ‘ವಾರ್ತಾಭಾರತಿ’ ನೀಡುತ್ತಿರುವ ಸ್ಪೇಸನ್ನು ಗಮನಿಸಿದರೆ ಬಹುಭಾರತಿಯ ನಿಜದನಿ ಅಂತಸ್ಥಗೊಂಡಿರುವುದು ಕಾಣಸಿಗುತ್ತದೆ. ಪ್ರಾದೇಶಿಕ ಸಂಗತಿಗಳೊಂದಿಗೆ ರಾಜ್ಯ, ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ವಿದ್ಯಮಾನಗಳನ್ನು ಒಳಗೊಳ್ಳುತ್ತ ವೈಶ್ವಿಕ ಚಿಂತನೆಯನ್ನೂ, ಪ್ರಖರವಾದ ವೈಚಾರಿಕೆಯನ್ನೂ ಬಿತ್ತರಿಸುತ್ತಿರುವುದು ‘ವಾರ್ತಾಭಾರತಿ’ಯ ವಿಶ್ವಭಾರತಿ ಯಾನಕ್ಕೆ ಸಾಕ್ಷಿಯಾಗಿದೆ.

ವಿಶ್ವಪ್ರಸಿದ್ಧ ಚಿಂತಕರಾದ ರಾಮಚಂದ್ರ ಗುಹಾ ಅವರ ‘ಕಾಲಮಾನ’, ಸನತ್ ಕುಮಾರ ಬೆಳಗಲಿ ಅವರ ‘ಪ್ರಚಲಿತ’, ನಟರಾಜ್ ಹುಳಿಯಾರರ ‘ಗಾಳಿ ಬೆಳಕು’, ರಾಮಚಂದ್ರ ತಲ್ಲೂರು ಅವರ ‘ಪಿಟ್ಕಾಯಣ’, ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ‘ಅನುಗಾಲ’, ಶಿವಸುಂದರ್ ಅವರ ‘ಕಾಲಂ-9’, ರಾಜಶೇಖರ ಹತಗುಂದಿ ಅವರ ‘ಜವಾರಿ ಮಾತು’, ’ಮಾಧವ ಐತಾಳರ ‘ಬಹುವಚನ’, ಹೊನಕೆರೆ ನಂಜುಂಡೇಗೌಡರ ‘ಜನಮನ’, ಅರುಣ್ ಜೋಳದಕೂಡ್ಲಿಗಿ ಅವರ ‘ಜನಚರಿತ್ರೆ’, ಯೋಗೇಶ್ ಮಾಸ್ಟರ್ ಅವರ ‘ಮನೋಚರಿತ್ರ’, ಕೆ.ಪುಟ್ಟಸ್ವಾಮಿ ಅವರ ‘ತುಂಬಿ ತಂದ ಗಂಧ’, ಶ್ರೀನಿವಾಸ ಜೋಕಟ್ಟೆ ಅವರ ‘ಮುಂಬೈ ಮಾತು’, ನರೇಂದ್ರ ರೈ ದೆರ್ಲ ಅವರ ‘ಮನೋಭೂಮಿಕೆ’ ಮೊದಲಾದ ಅಂಕಣಗಳು ಸ್ಥಳೀಯ ನೆಲೆಯಿಂದ ಹಿಡಿದು ವೈಶ್ವಿಕ ನೆಲೆಯ ವರೆಗಿನ ಅನೇಕ ಸಂಗತಿಗಳ ವಿಶ್ಲೇಷಣೆಯನ್ನು ಬಿತ್ತರಗೊಳಿಸಿವೆ. ಸಂಸ್ಕೃತಿ-ಸಾಹಿತ್ಯ-ಧರ್ಮ-ರಾಜಕಾರಣ ಮೊದಲಾದ ವಲಯಗಳ ವಿಗತಿ ಹಾಗೂ ಸುಗತಿಗಳನ್ನು ಮೌಲ್ಯೀಕರಣಕ್ಕೊಡ್ಡಿವೆ. ಈ ಹೊತ್ತಿಗೆ ಬೇಕಾದ ಆ ಹೊತ್ತು, ಆ ಹೊತ್ತಿನಲ್ಲೇ ಇದ್ದ ಈ ಹೊತ್ತಿನಂಥ ಅಪರೂಪದ ಸಂಗತಿಗಳನ್ನು ನಿರೂಪಿಸುವ ಮೂಲಕ ವ್ಯಕ್ತಿ-ಸಂಘಟನೆ-ಸಮುದಾಯಗಳ ಸ್ಥಗಿತತೆ ಹಾಗೂ ಚಲನಶೀಲತೆಯ ಆಂತರ್ಯಗಳನ್ನು ಬಯಲು ಮಾಡುವ ‘ಸದ್ವಿವೇಕದ ವೈಚಾರಿಕ ಬೆಳಗು’ ಮೂಡಿಸಿವೆ ಎನಿಸುತ್ತದೆ.

ಆನ್ ರೆಕಾರ್ಡ್ ಅಂಕಣದಲ್ಲಿ ಧರಣೀಶ್ ಬೂಕನಕೆರೆ ಅವರು ಮಂಡಿಸುವ ಪ್ರಚಲಿತ ಘಟನೆಗಳ ವಿಶ್ಲೇಷಣೆಯು ರಾಜಕಾರಣದ ಆಳ-ಅಗಲಗಳನ್ನು ಬಯಲುಮಾಡುವ ದಿಟ್ಟತೆಯಿಂದ ಕೂಡಿದೆ. ಚಿಂತನಾಚಾಟಿಯಂತೆಯೂ ಭಾಸವಾಗುತ್ತದೆ. ಯಾವುದೇ ಮುಲಾಜುಗಳಿಲ್ಲದೆ ನಮ್ಮನ್ನಾಳುವ ನಾಯಕರ ನಡಾವಳಿಗಳನ್ನು ನಿಕಷಕ್ಕೆ ಒಡ್ಡುವ ರೀತಿಯು ನಿರ್ಭೀತತೆ ಹಾಗೂ ಸತ್ಯಾಸತ್ಯತೆ ಅರಿವಿಗೆ ಸಾಕ್ಷಿಯಾಗಿದೆ. ತಿಳಿ ವಿಜ್ಞಾನ ಅಂಕಣದೊಳಗೆ ಆರ್.ಬಿ. ಗುರುಬಸವರಾಜ ಅವರು ಪ್ರಚಲಿತದಲ್ಲಿನ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಸಂಬಂಧಿ ಘಟನೆಗಳನ್ನು ವೈಜ್ಞಾನಿಕ ನೆಲೆಯಿಂದ ವಿಶ್ಲೇಷಿಸುವ ಪರಿಯು ಕುರುಡು ನಂಬಿಕೆಗಳ ಆಚೆಗಿನ ವಾಸ್ತವವನ್ನು ದರ್ಶಿಸುತ್ತದೆ. ‘ಜನಜನಿತ’ ಅಂಕಣವು ಭಾರತದ ಸಂವಿಧಾನದ ಆಶಯವಾದ ‘ವೈವಿಧ್ಯತೆಯಲ್ಲಿ ಏಕತೆ’ಗೆ ಅನುರೂಪದಂತಿದೆ. ಬಹುಸಂಗತಿಗಳಿಂದ ಒಡಗೂಡಿದ, ಚಿಂತನವೈವಿಧ್ಯತೆಯುಳ್ಳ, ವಿವಿಧ ಹಿನ್ನೆಲೆಯುಳ್ಳ, ಬಹುಜ್ಞಾನಶಿಸ್ತುಗಳಿಗೆ ಮುಖಾಮುಖಿಯಾದ ಹಲವಾರು ಚಿಂತಕರು-ಹೋರಾಟಗಾರರು-ವಿದ್ವಾಂಸರು ನಡೆಸುವ ಚಿಂತನ-ಮಂಥನವು ಆರೋಗ್ಯಪೂರ್ಣ ಅರಿವಿಗೆ ದ್ಯೋತಕವಾಗಿದೆ.

‘ಭೀಮಚಿಂತನೆ’ ಎಂಬ ಅಂಕಣವು ಭಾರತದ ಸಂವಿಧಾನ ಶಿಲ್ಪಿ ಹಾಗೂ ಮಹಾನಾಯಕರಾದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳನ್ನು ಪ್ರಸರಣ ಮಾಡುತ್ತಿರುವುದು ಔಚಿತ್ಯಪೂರ್ಣವೆನಿಸುತ್ತದೆ. ಅಂಬೇಡ್ಕರ್ ಅವರನ್ನು ಮತಬ್ಯಾಂಕ್ ಮಾಡಿಕೊಳ್ಳುವ ಸನ್ನಾಹದಲ್ಲಿ ವಿವಿಧ ರೂಪಗಳಲ್ಲಿ ನಿರೂಪಿಸಿಕೊಳ್ಳುವ ಗುಟ್ಟನ್ನು ರಟ್ಟು ಮಾಡುವ ನಿಟ್ಟಿನಲ್ಲಿ ಅವರದೇ ಚಿಂತನೆಯನ್ನು ಮರುದರ್ಶನ ಮಾಡಿಸುವುದು ಚಿಕಿತ್ಸಾತ್ಮಕವಾಗಿದೆ. ಛೂ ಭಾಣದಲ್ಲಿ ವ್ಯಂಗ್ಯಚಿತ್ರ ಕಲಾವಿದ ಪಿ. ಮಹಮದ್ ಅವರ ಕಾರ್ಟೂನುಗಳು ಸಮಕಾಲೀನ ವಿದ್ಯಮಾನಗಳ ಒಳ-ಹೊರಗನ್ನು ಸಮರ್ಥವಾಗಿ ಸೆರೆಹಿಡಿಯುವಂತಿವೆ; ಕರಾಳತೆಯ ಕೈಗನ್ನಡಿಯಂತಿವೆ.

‘ವಿಚಾರಭಾರತಿ’ಯಲ್ಲಿ ಪ್ರಕಟಗೊಳ್ಳುವ ಲೇಖನಗಳು ಗತ ಮತ್ತು ವರ್ತಮಾನವನ್ನು ತಮ್ಮದೇ ದೃಷ್ಟಿಕೋನದಲ್ಲಿ ವಿಶ್ಲೇಷಣೆಗೆ ಒಳಗು ಮಾಡುವಂಥವು. ಒಳಮೀಸಲಾತಿಯನ್ನು ಕುರಿತು ಈಚೆಗೆ ಮೂಡಿಬಂದ ಚಿಂತನೆಗಳು ಯಾವುದೋ ಒಂದು ಸಮುದಾಯದ ಪರವಾದ ಏಕಮುಖಿ ತೀರ್ಮಾನವಾಗದೆ ದಲಿತ ಸಮುದಾಯಗಳೊಗಿನ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಮಾಡುವ ಹಾಗೂ ಪರಸ್ಪರ ಸಮುಚಿತ ನ್ಯಾಯವನ್ನು ಹಂಚಿಕೊಳ್ಳುವ ಅರಿವನ್ನು ಬೆಳಗುವಂತಿದ್ದವು. ಇವು ಸಮುದಾಯಗಳ ಆಂತರ್ಯಶಕ್ತಿಯನ್ನು ಮಾತ್ರವೇ ಹೇಳದೆ ಚಾರಿತ್ರಿಕ ಹಾಗೂ ಸಾಮಾಜಿಕ ನೆಲೆಯ ಮಿತಿಗಳನ್ನು ಸಹ ತಿಳಿಯಪಡಿಸಿದವು. ಸರಕಾರಕ್ಕೂ ಒಡೆದಾಳದಂತೆ ಕಿವಿಹಿಂಡಿದವು. ಇದಕ್ಕೆ ಪೂರಕವಾಗಿ ಮೂಡಿಬಂದ ‘ಸಂಪಾದಕೀಯ‘ವೂ ಸಹ ಸಮಚಿತ್ತತೆಯ ಸಾಮಾಜಿಕ ನ್ಯಾಯವನ್ನು ಪ್ರಸ್ತುತ ಪಡಿಸಿದ್ದು ಆಪ್ತವೆನಿಸಿತು. ಹೀಗೆ ವಿಚಾರಭಾರತಿಯು ವಿಶ್ವಾತ್ಮಕ ದೃಷ್ಟಿಕೋನದಲ್ಲಿ ಬೆಳಗುತ್ತಿರುವುದು ಸಿರಿಗನ್ನಡ ಸದ್ವಿವೇಕಕ್ಕೆ ಸೋಪಾನವಾಗಿದೆ.

ಇಂತಹ ಹಲವಾರು ಕಾರಣಗಳಿಂದಾಗಿ, ವರ್ತಮಾನದಲ್ಲಿ ಪ್ರಜಾದನಿಯು ಕುಗ್ಗದಂತೆ ಕಾಪಾಡುತ್ತಾ ನುಡಿಯೋಧನಂತೆ ಕಾಯುತ್ತಿರುವ ‘ವಾರ್ತಾಭಾರತಿ’ ಕುರಿತು ವಿಶೇಷವಾದ ಗೌರವಾಭಿಮಾನಗಳು ಉಂಟಾಗುತ್ತವೆ. ಇದೀಗ ಕಾಲಕ್ಕನುಗುಣವಾಗಿ ಆನ್‌ಲೈನ್‌ನಲ್ಲಿ, ವಾಟ್ಸ್‌ಆ್ಯಪ್‌ನಲ್ಲಿ ಪತ್ರಿಕೆಯು ಜನಪರತೆಯ ಬದ್ಧತೆ ಹಾಗೂ ಪ್ರಬುದ್ಧತೆ ಸಾಧಿಸಿಕೊಂಡಿದೆ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಇಂಗ್ಲಿಷ್ ಭಾಷೆಯಲ್ಲಿಯೂ ಲಭ್ಯವಾಗುವಂತೆ ಪತ್ರಿಕೆಯು ತನ್ನನ್ನು ವಿಶ್ವಾತ್ಮಕಗೊಳಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಬೆಂಕಿ ಹಚ್ಚುವ ವಿಷಕಾರಿಯೂ ದ್ವೇಷಕಾರಿಯೂ ಆದ ಸುದ್ದಿಮಾಧ್ಯಮಗಳು ವಿಕೃತವಾಗಿ ಉಲ್ಬಣವಾಗುತ್ತಿರುವ ಸಂದರ್ಭಕ್ಕೆ ‘ವಾರ್ತಾಭಾರತಿ’ಯಂಥ ವೈಚಾರಿಕ-ವಿಶ್ವಾತ್ಮಕ ನಿಜತ್ವದ ನುಡಿಕಾರ ಪತ್ರಿಕೆಯು ಸಕಾಲಿಕವಾಗಿದ್ದು, ಇದು ಸಮತೆಯ ಕ್ರಾಂತಿಯ ದೊಂದಿ ಹಿಡಿದು ಹೀಗೆ ಸಾರ್ವಕಾಲಿಕವಾಗಿ ಸಾಗಲಿ; ನಿಚ್ಚಂಪೊಸತಾಗಿರಲಿ ಎಂದು ಬಯಸುವೆ.

share
ಡಾ. ಕುಪ್ಪನಹಳ್ಳಿ ಎಂ. ಭೈರಪ್ಪ
ಡಾ. ಕುಪ್ಪನಹಳ್ಳಿ ಎಂ. ಭೈರಪ್ಪ
Next Story
X