ರಾಜಿ ಪ್ರಸ್ತಾಪ ತಿರಸ್ಕರಿಸಿದ ಲುಲು: ಶಾಜನ್ ಸ್ಕಾರಿಯಾ ವೀಡಿಯೊ ವಿರುದ್ಧ ಯೂಸುಫ್ ಅಲಿ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದೇಕೆ?

ಆರು ವರ್ಷಗಳ ಹಿಂದೆ ಅಬುಧಾಬಿ ಮೂಲದ ಲುಲು ಗ್ರೂಪ್ ಸಂಸ್ಥಾಪಕ ಎಂ.ಎ. ಯೂಸುಫ್ ಅಲಿ ವಿರುದ್ಧ ಮಲಯಾಳಂ ಪ್ರಕಾಶಕ ಶಾಜನ್ ಸ್ಕಾರಿಯಾ ಆರೋಪವೊಂದನ್ನು ಮಾಡಿದ್ದರು. ತಮ್ಮ ಯೂಟ್ಯೂಬ್ ವೀಡಿಯೊದಲ್ಲಿ ಕೇರಳದ ರಾಜತಾಂತ್ರಿಕ ಬ್ಯಾಗೇಜ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಅಲಿಯನ್ನು ತಳುಕುಹಾಕಿ ಮಾತನಾಡಿದ್ದರು. ಸ್ಕಾರಿಯಾ ಅವರು ಅಕ್ಟೋಬರ್ ನಲ್ಲಿ ತಮ್ಮ ಹೇಳಿಕೆಗಳನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದ್ದರೂ, ಕಾನೂನು ಹೋರಾಟ ಮುಂದುವರಿಸುವುದಾಗಿ ಲುಲು ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿ ದಾಖಲಿಸಿರುವ 10 ಕೋಟಿ ರೂ. ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ಡಿ. 14ರಂದು ನಡೆಸಲಿದೆ. ಔಪಚಾರಿಕ ಮಧ್ಯಸ್ಥಿಕೆ ವಿಫಲವಾದ ತಿಂಗಳ ಬಳಿಕವೂ, ಸೆಪ್ಟೆಂಬರ್ ನಲ್ಲಿ ಎರಡೂ ಪಕ್ಷಗಳು ರಾಜಿ ಕುರಿತು ಚರ್ಚಿಸುತ್ತಿದ್ದವು ಎಂಬುದು ನ್ಯಾಯಾಲಯದ ದಾಖಲೆಗಳಿಂದ ತಿಳಿದುಬಂದಿದೆ.
►ಲುಲು ಯಾಕೆ ಕಾನೂನು ಹೋರಾಟ ಮುಂದುವರಿಸುತ್ತಿದೆ?
ವಿವಾದಿತ ಹೇಳಿಕೆಗಳು ಯೂಸುಫ್ ಅಲಿ ಮತ್ತು ಕಂಪೆನಿಯ ಹೆಸರಿಗೆ ಕಳಂಕ ತಂದಿವೆ ಎಂಬುದು ಲುಲು ವಾದ. ಪ್ರಕರಣಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಗುಂಪಿನ ಸಂವಹನ ನಿರ್ದೇಶಕ ವಿ. ನಂದಕುಮಾರ್ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯದ ಹೊರಗೆ ರಾಜಿ ಮಾಡಿಕೊಳ್ಳುವ ಪ್ರಸ್ತಾಪವನ್ನೂ ತಿರಸ್ಕರಿಸುವುದಾಗಿ ಅವರು ನವೆಂಬರ್ 11ರಂದು ಪ್ರಕಟವಾದ ‘ಖಲೀಜ್ ಟೈಮ್ಸ್’ ವರದಿಯಲ್ಲಿ ತಿಳಿಸಿದ್ದಾರೆ.
ದುಬೈನಲ್ಲಿ ನಡೆದ ಹೈಪರ್ಮಾರ್ಕೆಟ್ ಉದ್ಘಾಟನೆಯೊಂದರಲ್ಲಿ ಯೂಸುಫ್ ಅಲಿ ಅವರಿಗೆ ಸ್ಕಾರಿಯಾ ಕುರಿತು ಪ್ರಶ್ನೆ ಕೇಳಲಾಗಿತ್ತು. ಆದರೆ, ಅವರು ಮಾತನ್ನು ಮತ್ತೆ ವ್ಯವಹಾರದತ್ತ ತಿರುಗಿಸಿದರು ಎಂದು ನ. 9ರಂದು ‘ಮಾಧ್ಯಮಂ’ ವರದಿ ಮಾಡಿದೆ.
►ಸ್ಕಾರಿಯಾ ವಾಪಸ್ ಪಡೆದದ್ದು ಏನು?
ಶಾಜನ್ ಸ್ಕಾರಿಯಾ ಅವರು ‘ಮರುನಾಡನ್ ಮಲಯಾಳಿ’ ಎಂಬ ಮಲಯಾಳಂ ಡಿಜಿಟಲ್ ಸುದ್ದಿ ಮಾಧ್ಯಮವನ್ನು ನಡೆಸುತ್ತಿದ್ದಾರೆ. 2020ರ ನವೆಂಬರ್ 21ರಂದು ಪ್ರಕಟಿಸಿದ್ದ ವೀಡಿಯೊದಲ್ಲಿ ಅಲಿ ಅವರನ್ನು ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ತಳುಕುಹಾಕಿ ಮಾತನಾಡಿದ್ದರು.
ಅ. 31ರಂದು ಪ್ರಕಟಿಸಿದ ವೀಡಿಯೊದಲ್ಲಿ ತಮ್ಮ ಹಿಂದಿನ ಹೇಳಿಕೆಗಳು ತಪ್ಪಾಗಿದ್ದವು ಎಂದು ಒಪ್ಪಿಕೊಂಡು ಅವುಗಳನ್ನು ವಾಪಸ್ ಪಡೆದ ಸ್ಕಾರಿಯಾ, ಯಾರನ್ನೂ ವೈಯಕ್ತಿಕವಾಗಿ ನಿಂದಿಸುವ ಉದ್ದೇಶ ತಮಗಿರಲಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ‘ರಿಪೋರ್ಟರ್ ಟಿವಿ’ ಮತ್ತು ‘ಇಂಡಿಯಾ ವೀಕ್ಲಿ’ ವರದಿ ಮಾಡಿವೆ. ಈ ಹೇಳಿಕೆಯನ್ನು ಮಾಧ್ಯಮಗಳು ‘ಕ್ಷಮೆಯಾಚನೆ’ ಎಂದು ಹೇಳಿವೆ.
ಆದರೆ, ತಾವು ಯೂಸುಫ್ ಅಲಿ ಅವರಲ್ಲಿ ಕ್ಷಮೆಯಾಚಿಸಿಲ್ಲ ಎಂದು ಸ್ಕಾರಿಯಾ ಬಳಿಕ ಸ್ಪಷ್ಟಪಡಿಸಿದ್ದಾರೆ. ತಾವು ಕ್ಷಮೆ ಕೋರಿದ್ದನ್ನು ಸಾಬೀತುಪಡಿಸಿದವರಿಗೆ 1 ಕೋಟಿ ರೂ. ನೀಡುವುದಾಗಿಯೂ ಸವಾಲು ಹಾಕಿದ್ದಾರೆ ಎಂದು ‘ಮಾಧ್ಯಮಂ’ ವರದಿ ಮಾಡಿದೆ.
►ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ
2020ರ ಜುಲೈ 5ರಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸುಮಾರು 30 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. UAEಯಿಂದ ರಾಜತಾಂತ್ರಿಕ ಬ್ಯಾಗೇಜ್ ಮೂಲಕ ಬಂದಿದ್ದ ಈ ಚಿನ್ನದ ಪಾರ್ಸೆಲ್, UAE ರಾಯಭಾರ ಕಚೇರಿಯ ಅಧಿಕಾರಿಯೊಬ್ಬರ ಹೆಸರಿನಲ್ಲಿತ್ತು.
ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (NIA) 20 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. ಈ ಕಳ್ಳಸಾಗಣೆ ಪ್ರಕರಣದ ನಂತರದ ತಿಂಗಳುಗಳಲ್ಲಿ, ಪ್ರಕರಣಕ್ಕೂ ಯೂಸುಫ್ ಅಲಿ ಅವರಿಗೂ ಯಾವುದೇ ಸಂಬಂಧವಿದೆಯೇ ಎಂಬ ಕುರಿತು ಹಲವು ವೀಡಿಯೊಗಳು ಹರಿದಾಡಿದ್ದವು.
►ಅಲಿ ಅವರೊಂದಿಗಿನ ನಂಟಿನ ಆರೋಪದ ಬಗ್ಗೆ ಕೇರಳ ನ್ಯಾಯಾಲಯ ಕಂಡುಕೊಂಡಿದ್ದೇನು?
ಮ್ಯಾಜಿಸ್ಟ್ರೇಟ್ ಅವರು ಎರಡು ಇಮೇಲ್ ಗಳ ನಡುವೆ ಗೊಂದಲ ಮಾಡಿಕೊಂಡಿದ್ದರು ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿತ್ತು. ‘ಕ್ರೈಂ ಮ್ಯಾಗಝಿನ್’ ಸಂಪಾದಕ ಟಿ.ಪಿ. ನಂದಕುಮಾರ್ ಅವರು ಈ ಕುರಿತು ತನಿಖೆಗೆ ಆದೇಶಿಸುವಂತೆ ಮ್ಯಾಜಿಸ್ಟ್ರೇಟ್ ಗೆ ಮನವಿ ಮಾಡಿದ್ದರು. ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರು ಜಾಮೀನು ಅರ್ಜಿಗೆ ಪೂರಕವಾಗಿ ಸಲ್ಲಿಸಿದ್ದ ದಾಖಲೆಗಳನ್ನು ನಂದಕುಮಾರ್ ಇದಕ್ಕೆ ಆಧಾರವಾಗಿ ಬಳಸಿಕೊಂಡಿದ್ದರು.
ಅಲಿ ಅವರ ಹೆಸರಿನ ಉಲ್ಲೇಖವಿದ್ದ 2020ರ ಜೂನ್ ತಿಂಗಳ ಇಮೇಲ್, ಪ್ರಯಾಣಿಕರೊಬ್ಬರಿಗೆ UAEಗೆ ಪ್ರಯಾಣಿಸಲು ಅನುಮತಿ ನೀಡುವ ಕುರಿತಾಗಿತ್ತು. ಆದರೆ, ಚಿನ್ನದ ಪಾರ್ಸೆಲ್ ಅನ್ನು ವಾಪಸ್ ಕಳುಹಿಸುವಂತೆ ಕಸ್ಟಮ್ಸ್ ಇಲಾಖೆಗೆ ಮನವಿ ಮಾಡಿದ್ದ ಜುಲೈ ತಿಂಗಳ ಇಮೇಲ್ ಇದಕ್ಕಿಂತ ಭಿನ್ನವಾಗಿತ್ತು.
2025ರ ಎಪ್ರಿಲ್ 8ರಂದು ಕೇರಳ ಹೈಕೋರ್ಟ್ ಮ್ಯಾಜಿಸ್ಟ್ರೇಟ್ ಅವರ ತನಿಖಾ ಆದೇಶವನ್ನು ರದ್ದುಗೊಳಿಸಿತು. ಚಿನ್ನವನ್ನು ವಾಪಸ್ ಕಳುಹಿಸುವಂತೆ ಮಾಡಿದ್ದ ಮನವಿಗೆ ಅಲಿ ಮತ್ತು ಇನ್ನೊಬ್ಬ ಅರ್ಜಿದಾರರನ್ನು ತಳುಕುಹಾಕುವ ಸಂವಹನವು ಜಾಮೀನು ದಾಖಲೆಗಳಲ್ಲಿದೆ ಎಂದು ಮ್ಯಾಜಿಸ್ಟ್ರೇಟ್ ತಪ್ಪಾಗಿ ಭಾವಿಸಿ ಮುಂದುವರಿದಿದ್ದರು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಆದರೆ, ಈ ತೀರ್ಪು ನಿರ್ದಿಷ್ಟ ತನಿಖಾ ಆದೇಶಕ್ಕೆ ಮಾತ್ರ ಸೀಮಿತವಾಗಿತ್ತು. ದಿಲ್ಲಿಯಲ್ಲಿ ಅಲಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯು ಪ್ರತ್ಯೇಕ ವಿಚಾರಣೆಯಾಗಿದೆ.
►ದಿಲ್ಲಿ ಹೈಕೋರ್ಟ್ನಿಂದ ಅಲಿ ಏನು ಬಯಸುತ್ತಿದ್ದಾರೆ?
ಯೂಸುಫ್ ಅಲಿ 10 ಕೋಟಿ ರೂ. ಪರಿಹಾರ ಕೋರಿ ದಾವೆ ಹೂಡಿದ್ದಾರೆ. ಅಲ್ಲದೆ, ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ಪೂರ್ಣ ಪುಟದ ಕ್ಷಮೆಯಾಚನೆ ಮತ್ತು ಹೇಳಿಕೆ ವಾಪಸಾತಿ ಪ್ರಕಟಿಸಬೇಕು, ವಿವಾದಿತ ವೀಡಿಯೊ ಹಾಗೂ ಪೋಸ್ಟ್ ಗಳನ್ನು ತೆಗೆದುಹಾಕಬೇಕು ಮತ್ತು ಅವುಗಳಿಂದ ಸ್ಕಾರಿಯಾ ಗಳಿಸಿರುವ ಆದಾಯದ ಲೆಕ್ಕ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ಯೂಟ್ಯೂಬ್ ನ ಮಾಲೀಕತ್ವ ಹೊಂದಿರುವ ಗೂಗಲ್ ಸಂಸ್ಥೆಯನ್ನೂ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಯೂಟ್ಯೂಬ್ ನಲ್ಲಿರುವ ವೀಡಿಯೊಗಳ ಮೇಲೆ ಪರಿಣಾಮ ಬೀರುವ ಆದೇಶಗಳನ್ನು ಅಲಿ ಕೋರಿರುವುದು ಇದಕ್ಕೆ ಕಾರಣ. 2023ರ ಮೇ ತಿಂಗಳಲ್ಲಿ ಪ್ರಕರಣ ವಿಚಾರಣೆಗೆ ಬಂದಾಗ ದಿಲ್ಲಿ ನ್ಯಾಯಾಲಯದ ವ್ಯಾಪ್ತಿಯನ್ನು ಸ್ಕಾರಿಯಾ ಪರ ವಕೀಲರು ಪ್ರಶ್ನಿಸಿದ್ದರು.
ಫೆಬ್ರವರಿ 19ರ ವೇಳೆಗೆ ಔಪಚಾರಿಕ ಮಧ್ಯಸ್ಥಿಕೆ ವಿಫಲವಾಗಿತ್ತು ಎಂದು ನ್ಯಾಯಾಲಯದ ಸೆಪ್ಟೆಂಬರ್ 24ರ ಆದೇಶದಲ್ಲಿ ದಾಖಲಾಗಿದೆ. 2025ರ ನವೆಂಬರ್ ನಿಂದಲೇ ರಾಜಿ ಪ್ರಸ್ತಾಪವೊಂದು ಚರ್ಚೆಯಲ್ಲಿದೆ ಎಂದು ಸ್ಕಾರಿಯಾ ಪರ ವಕೀಲರು ತಿಳಿಸಿದ್ದಾರೆ.
ಎರಡೂ ಪಕ್ಷಗಳಿಗೆ ರಾಜಿ ಮಾಡಿಕೊಳ್ಳಲು ಕೊನೆಯ ಅವಕಾಶ ನೀಡಿದ ನ್ಯಾಯಾಧೀಶರು, ಪ್ರಕರಣದ ವಿಚಾರಣೆಯನ್ನು ಡಿ. 14ಕ್ಕೆ ನಿಗದಿಪಡಿಸಿದ್ದಾರೆ. ಮಾತುಕತೆ ವಿಫಲವಾದರೆ ವಿಚಾರಣೆ ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶದ ಬಳಿಕವೇ ರಾಜಿಗೆ ಒಪ್ಪುವುದಿಲ್ಲ ಎಂದು ಲುಲು ಬಹಿರಂಗವಾಗಿ ಘೋಷಿಸಿದೆ.
►ವೀಡಿಯೊಗಳನ್ನು ತೆಗೆದುಹಾಕುವಂತೆ ದಿಲ್ಲಿ ಹೈಕೋರ್ಟ್ ಯೂಟ್ಯೂಬ್ ಗೆ ಆದೇಶಿಸಿತ್ತೇ?
2023ರ ಮೇ 26ರಂದು ನ್ಯಾಯಾಲಯವು ನಿರ್ದಿಷ್ಟ ಪೋಸ್ಟ್ ಗಳನ್ನು ತೆಗೆದುಹಾಕಲು ಸ್ಕಾರಿಯಾ ಅವರಿಗೆ 24 ಗಂಟೆಗಳ ಕಾಲಾವಕಾಶ ನೀಡಿತ್ತು. ಅಲ್ಲದೆ, ಅಲಿ ಕುರಿತು ಮುಂದೆ ಯಾವುದೇ ಹೇಳಿಕೆ ನೀಡದಂತೆ ತಾತ್ಕಾಲಿಕ ನಿರ್ಬಂಧವನ್ನೂ ವಿಧಿಸಿತ್ತು.
ಸ್ಕಾರಿಯಾ ಆ ಪೋಸ್ಟ್ ಗಳನ್ನು ತೆಗೆದುಹಾಕಲು ವಿಫಲವಾದರೆ, ಮುಂದಿನ ವಿಚಾರಣೆಯವರೆಗೆ ಅವುಗಳನ್ನು ತೆಗೆದುಹಾಕುವಂತೆ ಮತ್ತು ಅವರ ಚಾನೆಲ್ ಗಳನ್ನು ಅಮಾನತುಗೊಳಿಸುವಂತೆ ಗೂಗಲ್ಗೆ ನ್ಯಾಯಾಲಯ ಆದೇಶಿಸಿತ್ತು.
2023ರ ಸೆಪ್ಟೆಂಬರ್ ನಲ್ಲಿ ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಪಾಲಿಸಲಾಗಿಲ್ಲ ಎಂದು ಅಲಿ ಪರ ವಕೀಲರು ಆರೋಪಿಸಿದ್ದರು. ಒಂದು ವಾರದೊಳಗೆ ಆದೇಶ ಪಾಲಿಸುವುದಾಗಿ ಪ್ರತಿವಾದಿ ಪರ ವಕೀಲರು ಭರವಸೆ ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ನೀಡಲಾದ ತಾತ್ಕಾಲಿಕ ಪರಿಹಾರದ ಭಾಗವಾಗಿ ವೀಡಿಯೊಗಳನ್ನು ತೆಗೆದುಹಾಕುವ ಆದೇಶ ಹೊರಡಿಸಲಾಗಿತ್ತು. ಆದರೆ, 10 ಕೋಟಿ ರೂ. ಪರಿಹಾರದ ಬೇಡಿಕೆ ಕುರಿತು ನ್ಯಾಯಾಲಯ ಇನ್ನೂ ತೀರ್ಪು ನೀಡಿಲ್ಲ.
►ಲುಲು ಪ್ರಕರಣವನ್ನು ಮೀರಿ ಇದು ಯಾಕೆ ಮಹತ್ವದ್ದಾಗಿದೆ?
ಮಾನನಷ್ಟ ವಿವಾದವೊಂದು ವೀಕ್ಷಕರು ಯಾವ ವಿಷಯವನ್ನು ನೋಡಬಹುದು ಎಂಬುದರ ಮೇಲೆ ಎಷ್ಟು ವೇಗವಾಗಿ ಪರಿಣಾಮ ಬೀರಬಹುದು ಎಂಬುದನ್ನು ಈ ಪ್ರಕರಣ ತೋರಿಸುತ್ತದೆ. ಪ್ರಕಾಶಕರು ಪರಿಹಾರ ನೀಡಬೇಕೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುವ ಮೊದಲೇ ವಿವಾದಿತ ವಿಷಯವನ್ನು ತೆಗೆದುಹಾಕುವಂತೆ ಆದೇಶಿಸಬಹುದು.
2024ರಲ್ಲಿ ಬ್ಲೂಮ್ ಬರ್ಗ್ ಮತ್ತು ಝೀ ಎಂಟರ್ ಟೈನ್ಮೆಂಟ್ ನಡುವಿನ ಪ್ರತ್ಯೇಕ ಪ್ರಕರಣದಲ್ಲಿ, ಇಂತಹ ಆದೇಶಗಳನ್ನು ನೀಡುವಾಗ ನ್ಯಾಯಾಧೀಶರು ವಾಕ್ ಸ್ವಾತಂತ್ರ್ಯ, ವ್ಯಕ್ತಿಯ ಗೌರವ ಮತ್ತು ಬಳಿಕ ಸರಿಪಡಿಸಲಾಗದ ಹಾನಿಯ ಸಾಧ್ಯತೆಗಳನ್ನು ತೂಗಿ ನೋಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಹೇಳಿಕೆಗಳನ್ನು ವಾಪಸ್ ಪಡೆಯುವುದು ಸಾರ್ವಜನಿಕ ದಾಖಲೆಯನ್ನು ಸರಿಪಡಿಸಲು ನೆರವಾಗಬಹುದು. ಕ್ಷಮೆಯಾಚನೆಯೂ ರಾಜಿ ಸಂಧಾನದ ಭಾಗವಾಗಬಹುದು. ಸಿವಿಲ್ ಮೊಕದ್ದಮೆಯನ್ನು ಒಪ್ಪಂದದ ಮೂಲಕ ಅಂತ್ಯಗೊಳಿಸಲು ಸಾಮಾನ್ಯವಾಗಿ ಎರಡೂ ಪಕ್ಷಗಳು ಸಹಿ ಮಾಡಿದ ಮತ್ತು ನ್ಯಾಯಾಲಯ ದಾಖಲಿಸಿಕೊಂಡ ಕಾನೂನುಬದ್ಧ ಲಿಖಿತ ರಾಜಿ ಒಪ್ಪಂದದ ಅಗತ್ಯವಿರುತ್ತದೆ.
►ಮೊಕದ್ದಮೆ ಹಿಂಪಡೆಯುವುದಿಲ್ಲ
ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ತಮ್ಮ ನಿರ್ಧಾರಗಳನ್ನು ಪ್ರಶ್ನಿಸುವ ವ್ಯಕ್ತಿಗಳ ಹಕ್ಕನ್ನು ಕಂಪೆನಿ ಗೌರವಿಸುತ್ತದೆ. ಆದರೆ, ಟೀಕೆ ಮತ್ತು ಸುಳ್ಳು ಮಾಹಿತಿಯನ್ನು ಹರಡುವುದರ ನಡುವೆ ವ್ಯತ್ಯಾಸವಿರಬೇಕು ಎಂದು ವಿ. ನಂದಕುಮಾರ್ ಹೇಳಿದ್ದಾರೆ.
“ಲುಲು ಗ್ರೂಪ್ನಲ್ಲಿ ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಲವಾಗಿ ನಂಬುತ್ತೇವೆ. ವಿಭಿನ್ನ ಅಭಿಪ್ರಾಯಗಳನ್ನು ಹೊಂದುವ, ನಮ್ಮ ನಿರ್ಧಾರಗಳನ್ನು ಪ್ರಶ್ನಿಸುವ ಮತ್ತು ನಮ್ಮನ್ನು ಟೀಕಿಸುವ ಪ್ರತಿಯೊಬ್ಬ ವ್ಯಕ್ತಿಯ ಹಕ್ಕನ್ನು ನಾವು ಗೌರವಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.
“ಆದರೆ, ವಾಕ್ ಸ್ವಾತಂತ್ರ್ಯವು ಎಂದಿಗೂ ಕಪೋಲಕಲ್ಪಿತ ಕಥೆಗಳು, ಆಧಾರರಹಿತ ಆರೋಪಗಳು ಅಥವಾ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಹರಡುವ ಪರವಾನಗಿಯಾಗಬಾರದು. ಇಂತಹ ಚಟುವಟಿಕೆಗಳು ಲುಲು ಗ್ರೂಪ್, ನಮ್ಮ ಬ್ರ್ಯಾಂಡ್ ಅಥವಾ ನಮ್ಮ ಅಧ್ಯಕ್ಷರಾದ ಎಂ.ಎ. ಯೂಸುಫ್ ಅಲಿ ಅವರ ವಿಶ್ವಾಸಾರ್ಹತೆ ಮತ್ತು ಘನತೆಯನ್ನು ಗುರಿಯಾಗಿಸಿದಾಗ ನಾವು ಸ್ಪಷ್ಟವಾದ ಗೆರೆ ಎಳೆಯುತ್ತೇವೆ” ಎಂದಿದ್ದಾರೆ.
ಕಂಪೆನಿಯ ಗೌರವವನ್ನು ಕಾಪಾಡಿಕೊಳ್ಳಲು ಲಭ್ಯವಿರುವ ಎಲ್ಲ ಕಾನೂನುಬದ್ಧ ಆಯ್ಕೆಗಳನ್ನು ಬಳಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.
“ನಮ್ಮ ಗೌರವವನ್ನು ರಕ್ಷಿಸಿಕೊಳ್ಳಲು ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಲು ಲಭ್ಯವಿರುವ ಎಲ್ಲಾ ಕಾನೂನುಬದ್ಧ ಮಾರ್ಗಗಳನ್ನು ನಾವು ಅನುಸರಿಸುತ್ತೇವೆ” ಎಂದು ವಿ. ನಂದಕುಮಾರ್ ಸ್ಪಷ್ಟಪಡಿಸಿದ್ದಾರೆ.






