ಮಾಚೋಹಳ್ಳಿ ಅರಣ್ಯ ಭೂಮಿ ಸಂಘ, ಸಂಸ್ಥೆಗಳಿಗೆ ಮಂಜೂರು ಮಾಡಲು ಮೂರು ಇಲಾಖೆಗಳಿಂದಲೇ ಅಸಮ್ಮತಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.19: ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಮತ್ತು ಅಂದಾಜು 2,500 ಕೋಟಿ ರೂ. ಬೆಲೆಬಾಳುವ ಮಾಚೋಹಳ್ಳಿ ಅರಣ್ಯ ಭೂಮಿಯನ್ನು ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಆರ್ಥಿಕ, ಕಾನೂನು ಮತ್ತು ಖುದ್ದು ಅರಣ್ಯ ಇಲಾಖೆಯೇ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿಯೇ ಅಸಮ್ಮತಿ ವ್ಯಕ್ತಪಡಿಸಿತ್ತು ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ಮಾಚೋಹಳ್ಳಿ ಅರಣ್ಯ ಜಮೀನನ್ನು ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಿರುವ ಪ್ರಕರಣವು ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಪ್ರಕರಣದ ವಿಚಾರಣೆಯು 2026ರ ಎಪ್ರಿಲ್ 1ಕ್ಕೆ ನಿಗದಿಯಾಗಿದೆ. ಈ ಬೆಳವಣಿಗೆಯ ನಡುವೆಯೇ ಈ ಪ್ರಕರಣದಲ್ಲಿ ಮೂರು ಇಲಾಖೆಗಳ ಅಸಮ್ಮತಿ ವ್ಯಕ್ತಪಡಿಸಿದ್ದವು ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.
22 ಖಾಸಗಿ ಸಂಘ ಸಂಸ್ಥೆಗಳಿಗೆ ಅರಣ್ಯ ಜಮೀನನ್ನು ಮಂಜೂರು ಮಾಡಲು ಪಣ ತೊಟ್ಟಿದ್ದ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಕಂದಾಯ ಇಲಾಖೆಯು ಕಾನೂನು ಮತ್ತು ಅರಣ್ಯ ಇಲಾಖೆಯಿಂದ ಎರಡೆರಡು ಬಾರಿ ಅಭಿಪ್ರಾಯ ಪಡೆದಿತ್ತು. ಈ ಎರಡೂ ಇಲಾಖೆಗಳು ಮೊದಲ ಬಾರಿ ನೀಡಿದ್ದ ಅಭಿಪ್ರಾಯಕ್ಕೆ ಬದ್ಧವಾಗಿತ್ತಾದರೂ ತನ್ನ ನಿಲುವಿನಲ್ಲಿ ತುಸು ಸಡಿಲಿಸಿತ್ತು.
ಎರಡನೇ ಬಾರಿ ಅಭಿಪ್ರಾಯ ಪಡೆದಿದ್ದ ಸಂದರ್ಭದಲ್ಲಿ ಅರಣ್ಯ ಜಮೀನು ಬದಲಿಗೆ ಇದನ್ನು ಗೋಮಾಳ ಎಂದು ಹೇಳಲಾರಂಭಿಸಿತ್ತು. ನಂತರ ಗೋಮಾಳವನ್ನು ಗೋಮಾಳ ಶೀರ್ಷಿಕೆಯಿಂದಲೇ ತಗ್ಗಿಸಿ ಮಂಜೂರು ಮಾಡಲು ಸಚಿವ ಸಂಪುಟದ ಮುಂದೆ ಕಡತ ಮಂಡಿಸಿರುವುದು ಕಂಡು ಬಂದಿದೆ.
ಅರಣ್ಯ ಜಮೀನನ್ನು ಹಿಂದುಳಿದ ವರ್ಗಗಳಿಗೆ ಸೇರಿದ 22 ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಕಂದಾಯ ಇಲಾಖೆಯು ಕೋರಿತ್ತು. ಇದಕ್ಕೆ ಕಾನೂನು, ಆರ್ಥಿಕ ಮತ್ತು ಅರಣ್ಯ ಇಲಾಖೆಯು 2016ರಲ್ಲಿಯೇ ಅಸಮ್ಮತಿ ವ್ಯಕ್ತಪಡಿಸಿದ್ದವು. ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ರಹಸ್ಯ ಹಾಳೆಗಳು "ಣhe-ಜಿiಟe.iಟಿ"ಗೆ ಲಭ್ಯವಾಗಿವೆ.
ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಗ್ರಾಮದ ಸರ್ವೇ ನಂಬರ್ 81ರಲ್ಲಿನ ಜಮೀನನ್ನು ವಿವಿಧ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಿರುವ ಸರಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ (ಸಂಖ್ಯೆ 3799/2018 ಪಿಐಎಲ್) ದಾಖಲಾಗಿದೆ. ಇದಕ್ಕೆ ಸಂಬಂಧಿಸಿ ಕಂದಾಯ ಇಲಾಖೆಯಲ್ಲಿ ಲಭ್ಯವಿರುವ ಕೆಲವು ದಾಖಲೆಗಳನ್ನು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿಗೆ 2025ರ ಜೂನ್ 10ರಂದೇ ದಾಖಲೆಗಳನ್ನು ಒದಗಿಸಿದೆ. ಇದರಲ್ಲಿ ಸಚಿವ ಸಂಪುಟಕ್ಕೆ ಕಳಿಸಿದ್ದ ಟಿಪ್ಪಣಿಯೂ ಒಳಗೊಂಡಿದೆ.
22 ಖಾಸಗಿ ಸಂಘ ಸಂಸ್ಥೆಗಳು ಗುತ್ತಿಗೆ ಆಧಾರದ ಮೇಲೆ ಕೋರಿರುವ 20-40 ಎಕರೆ ಜಮೀನನ್ನು ಬಹುತೇಕ ಒಂದೇ ತೆರನಾದ ಉದ್ದೇಶಕ್ಕೆ ಅಂದರೇ ಶೈಕ್ಷಣಿಕ, ವಿದ್ಯಾರ್ಥಿ ನಿಲಯ, ಸಭಾ ಭವನ ಹಾಗೂ ಒಂದೆರಡು ಪ್ರಕರಣಗಳಲ್ಲಿ ಮಾತ್ರ ದೇವಸ್ಥಾನ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೋರಿದ್ದವು. ಒಂದೇ ಪ್ರದೇಶದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಇಷ್ಟೆಲ್ಲಾ ಖಾಸಗಿ ಸಂಸ್ಥೆಗಳಿಗೆ ಜಮೀನನ್ನು ನೀಡಿದರೇ ಅಂತಹ ಉದ್ದೇಶ ಸಫಲವಾಗುವುದಿಲ್ಲ. ಹಾಗೂ ನೀಡಲಾಗುವ ಸರಕಾರಿ ಜಮೀನು ನಿರರ್ಥಕವಾಗುತ್ತದೆ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿಯೇ ವಿವರಿಸಿತ್ತು.
ಅಲ್ಲದೇ ಈ ಜಮೀನು ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಕೇವಲ 2 ಕಿ ಮೀ ವ್ಯಾಪ್ತಿಯಲ್ಲಿ ಬರಲಿದೆ. ಹೀಗಾಗಿ ಇಂತಹ ಜಮೀನನ್ನು ಖಾಸಗಿ ವ್ಯಕ್ತಿ, ಸಂಸ್ಥೆಗಳಿಗೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಮತ್ತು ಅದರಡಿ ರಚಿಸಿರುವ ನಿಯಮಗಳಡಿಯಲ್ಲಿ ಮಂಜೂರು ಮಾಡಲು ಅವಕಾಶವೇ ಇಲ್ಲ. ಹೀಗಾಗಿ 22 ಖಾಸಗಿ ಸಂಘ ಸಂಸ್ಥೆಗಳಿಗೆ ಅಸಾಧಾರಣ ಆದ್ಯತೆ ಪರಿಮಿತಿಯಲ್ಲಿ ಬರುತ್ತಿಲ್ಲ. ಅತ್ಯಂತ ಬೆಲೆಬಾಳುವ ಈ ಜಮೀನನ್ನು ಕೋರಿರುವಂತೆ ಗುತ್ತಿಗೆ ಆಧಾರದ ಮೇಲೆ ನೀಡುವುದು ಸಮಂಜಸವಲ್ಲ ಎಂದೂ ಇಲಾಖೆಗಳು ಅಭಿಪ್ರಾಯಿಸಿದ್ದವು.
ಪ್ರಸ್ತುತ ಬೆಂಗಳೂರು ನಗರದಲ್ಲಿ ಸುಮಾರು 1 ಲಕ್ಷ ದುರ್ಬಲ ವರ್ಗಕ್ಕೆ ಸೇರಿದ ಜನರು ವಸತಿ ರಹಿತರಾಗಿದ್ದಾರೆ. ಅವರಿಗೆ ವಸತಿಯನ್ನು ಕಲ್ಪಿಸಲು ಫ್ಲಾಟ್ಗಳನ್ನು ನಿರ್ಮಿಸುವ ಅವಶ್ಯಕತೆ ಇದೆ. ಆದ್ದರಿಂದ ಪ್ರಸ್ತಾವದಲ್ಲಿ ಒಳಗೊಂಡಿರುವ ಈ ಸಾರ್ವಜನಿಕ ಉದ್ದೇಶಗಳ ಜೊತೆಗೆ ಉಳಿದ ಜಮೀನನ್ನು ವಸತಿ ಉದ್ದೇಶಕ್ಕೆ ಮಂಜೂರು ಮಾಡುವುದಕ್ಕೆ ಪರಿಶೀಲಿಸಬಹುದು ಎಂದು ಅಭಿಪ್ರಾಯಿಸಿದ್ದವು.
2016ರಲ್ಲೇ 340 ಕೋಟಿ ರೂ. ಬೆಲೆ :
ಅಲ್ಲದೇ ಪ್ರಸ್ತಾವಿತ 69 ಎಕರೆ ಜಮೀನಿನ ಪೈಕಿ 42 ಎಕರೆ ಜಮೀನಿನ ಬೆಲೆಯು ಅಂದಾಜು 340 ಕೋಟಿ ರೂ. ಆಗಲಿದೆ ಎಂದು 2016ರಲ್ಲೇ ಅಂದಾಜಿಸಿತ್ತು. ಹಾಗೆಯೇ ಒಂದೊಮ್ಮೆ ಖಾಸಗಿ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಿದಲ್ಲಿ ಇದರಿಂದ 340 ಕೋಟಿ ರೂ. ಆದಾಯವನ್ನು ಬಿಟ್ಟುಕೊಡಬೇಕಾಗುತ್ತದೆ ಎಂದೂ ಎಚ್ಚರಿಸಿತ್ತು.
ಇಂತಹ ಬೆಲೆ ಬಾಳುವ ಜಮೀನನ್ನು ಸಾರ್ವಜನಿಕ ಚಟುವಟಿಕೆಗಳ ಬಳಕೆಗೆ ಮಾತ್ರ ಮೀಸಲಿಡಬೇಕು. ಅಥವಾ ಒಂದು ವೇಳೆ ವಿಲೇವಾರಿ ಮಾಡಲೇಬೇಕಾದಲ್ಲಿ ಎಲ್ಲಾ ಸಾರ್ವಜನಿಕ ಚಟುವಟಿಕೆಗಳಿಗೆ ಮೀಸಲಿರಿಸಿದ ನಂತರ ಅದನ್ನು ಪಾರದರ್ಶಕ ಹರಾಜು ಪ್ರಕ್ರಿಯೆ ಮೂಲಕವೇ ವಿಲೇಗೊಳಿಸಿದರೆ ಸರಕಾರಕ್ಕೆ ಹೆಚ್ಚಿನ ಆದಾಯ ಬರಲಿದೆ. ಆರ್ಥಿಕ ಕೊರತೆಯನ್ನು ನೀಗಿಸಲು ಹಾಗೂ ಹೆಚ್ಚುವರಿ ವೆಚ್ಚಗಳನ್ನು ಸರಿದೂಗಿಸಲು ಇಂತಹ ಹೆಚ್ಚುವರಿ ಸರಕಾರಿ ಜಮೀನನ್ನು ಸರಕಾರಕ್ಕೆ ಆದಾಯ ಬರುವಂತಹ ನಿಟ್ಟಿನಲ್ಲಿ ವಿಲೇವಾರಿ ಮಾಡುವುದು ಸೂಕ್ತ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಸ್ಪಷ್ಟವಾಗಿ ಹೇಳಿತ್ತು.
‘ಆದ್ದರಿಂದ ಈ ಅಂಶಗಳ ಹಿನ್ನೆಲೆಯಲ್ಲಿ ಮಾಚೋಹಳ್ಳಿಯಲ್ಲಿ ಲಭ್ಯವಿರುವ ಈ ಬೆಲೆಬಾಳುವಂತಹ 42 ಎಕರೆ ಜಮೀನನ್ನು ಖಾಸಗಿಯವರಿಗೆ ಹಂಚಿಕೆ ಮಾಡಿದಲ್ಲಿ ಸುಮಾರು 340 ಕೋಟಿ ರೂ..ಗಳಷ್ಟು ಆದಾಯವನ್ನು ಬಿಟ್ಟುಕೊಡಬೇಕಾಗಿರುವುದರಿಂದ ಆಡಳಿತ ಇಲಾಖೆಯ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ಸಹಮತಿಸುತ್ತಿಲ್ಲ,’ ಎಂದು ಹೇಳಿತ್ತು.
ಅರಣ್ಯ ಇಲಾಖೆಯಿಂದಲೂ ಅಸಮ್ಮತಿ :
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯೊಡನೆಯೂ ಕಂದಾಯ ಇಲಾಖೆಯು (ಟಿಪ್ಪಣಿ ಸಂಖ್ಯೆ; ಅಪಜೀ 113 ಎಫ್ಜಿಎಲ್ 2016 2016 ದಿನಾಂಕ 11-11-2016) ಎರಡು ಬಾರಿ ಸಮಾಲೋಚಿಸಿತ್ತು.
4 ಅವಕಾಶಗಳ ಬಾಗಿಲು ತೆರೆದಿದ್ದ ಕಂದಾಯ ಇಲಾಖೆ: ಎರಡೆರಡು ಬಾರಿ ಅಭಿಪ್ರಾಯ ಪಡೆದಿದ್ದ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ 4 ಅವಕಾಶಗಳ ಬಾಗಿಲನ್ನು ತೆರೆದಿತ್ತು. ಪ್ರಸ್ತಾವಿತ ಜಮೀನುಗಳನ್ನು ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ ಸಾರ್ವಜನಿಕ ಉದ್ದೇಶಗಳ ಹೆಸರಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 71ರಡಿಯಲ್ಲಿ ಕಾಯ್ದಿರಿಸುವ ಆಯ್ಕೆಯನ್ನು ಮುಂದಿಟ್ಟಿತ್ತು. ಅದೇ ರೀತಿ ಸರಕಾರದ ಆರ್ಥಿಕ ಹಿತದೃಷ್ಟಿಯಿಂದ ಜಮೀನುಗಳನ್ನು ಸಾರ್ವಜನಿಕ ಹರಾಜು ಮೂಲಕ ವಿಲೇ ಮಾಡಬಹುದು ಎಂದು ದಾರಿ ತೋರಿಸಿತ್ತು.
ಹಾಗೆಯೇ ಬೆಂಗಳೂರು ನಗರದ ದುರ್ಬಲ ವರ್ಗಕ್ಕೆ ಸೇರಿದ ವಸತಿ ರಹಿತ ಜನರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ವೇ ನಂಬರ್ 81ರಲ್ಲಿನ ಜಮೀನಿನ ಪೈಕಿ 20-40 ಎಕರೆ ಜಮೀನನ್ನು ವಸತಿ ಇಲಾಖೆಗೆ ಮಂಜೂರು ಮಾಡಲು ಸಹ ಸಲಹೆ ನೀಡಿತ್ತು.
ಕಡೆಯದಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22 ಮತ್ತು ನಿಯಮ 22 ಎ(1)(1)ರ ಕ್ರಮ ಸಂಖ್ಯೆ 02ರ ಪ್ರಕಾರ ಪ್ರಚಲಿತ ಕೃಷಿಯೇತರ ಜಮೀನಿಗೆ ಮಾರುಕಟ್ಟೆ ದರದ ಶೇ.10ರಷ್ಟು ವಾರ್ಷಿಕ ಗುತ್ತಿಗೆ ದರ ನಿಗದಿಪಡಿಸಿ ಪ್ರತಿ 2 ವರ್ಷಗಳಿಗೊಮ್ಮೆ ಶೇ.8ರಷ್ಟು ಗುತ್ತಿಗೆ ದರ ಹೆಚ್ಚಿಸುವ ಷರತ್ತುಗಳಿಗೆ ಒಳಪಡಿಸಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಬಹುದು ಎಂದು ಕಂದಾಯ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಇ ವಿ ರಮಣರೆಡ್ಡಿ ಅವರು ಸಲಹೆ ನೀಡಿದ್ದರು.
ಆರ್ಥಿಕ ಇಲಾಖೆಯ ಅಭಿಪ್ರಾಯದಲ್ಲೇನಿತ್ತು? :
ಈ ಪ್ರಕರಣಕ್ಕೆ ಸಂಬಂಧಿಸಿ ಆರ್ಥಿಕ ಇಲಾಖೆಯು 2016ರ ನವೆಂಬರ್ 11ರಂದು ಅಭಿಪ್ರಾಯ (ಆಇ 661 ವೆಚ್ಚ-7/2016) ನೀಡಿತ್ತು. ಆಡಳಿತ ಇಲಾಖೆಯ ಪ್ರಸ್ತಾವವನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಕಂದಾಯ ಇಲಾಖೆಯ ಸುತ್ತೋಲೆಯನ್ನು ಉಲ್ಲೇಖಿಸಿತ್ತು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 18 ಕಿ.ಮೀ. ವ್ಯಾಪ್ತಿ ಎಂದು ನಿಗದಿಪಡಿಸಿದೆ. ಪ್ರಸ್ತಾವಿತ ಜಮೀನು ಬೆಂಗಳೂರು ಮಹಾಗರ ಪಾಲಿಕೆಯ ವ್ಯಾಪ್ತಿಯಿಂದ ಸುಮಾರು 2ರಿಂದ 3 ಕಿ.ಮೀ. ದೂರದಲ್ಲಿದೆ. ಆದ್ದರಿಂದ ಉಲ್ಲೇಖಿತ ಸುತ್ತೋಲೆ ಅನ್ವಯ ಈ ಜಮೀನಿನಲ್ಲಿ ಮಂಜೂರು ಮಾಡಲು ಅವಕಾಶವಿಲ್ಲ. ಅಲ್ಲದೇ 42 ಎಕರೆ ಜಮೀನು ಮಂಜೂರಾತಿಗೆ ಅರ್ಹವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.
ಅಲ್ಲದೇ ಈ ಜಮೀನುಗಳು ಅತ್ಯಂತ ಹೆಚ್ಚಿನ ಬೆಲೆಬಾಳಲಿದೆ. ಈ ಸಂಸ್ಥೆಗಳು ಜಮೀನನ್ನು ಕೃಷಿಯೇತರ ಚಟುವಟಿಕೆಗಳಿಗೆ ಮಾತ್ರ ಬಳಸಲು ಸಾಧ್ಯ. ಆದ್ದರಿಂದ ಈ ಜಮೀನಿನ ಬೆಲೆ ನಿರ್ಧರಿಸುವಾಗ ಕೃಷಿ ಜಮೀನಿನ ಬೆಲೆಯನ್ನು ಗಣನೆಗೆ ತೆಗೆದುಕೊಳ್ಳದೇ ಕೃಷಿಯೇತರ ಜಮೀನಿನ ಬೆಲೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಮಾಚೋಹಳ್ಳಿಗೆ ಸಂಬಂಧಿಸಿ ಕೃಷಿಯೇತರ ಜಮೀನಿನ ಬೆಲೆಗಳನ್ನು ಅಂದಾಜಿಸಿದಲ್ಲಿ ಪ್ರತಿ ಚದರ ಮೀಟರ್ಗೆ ಸರಾಸರಿ 20,000 ರೂ. ಇದೆ. ಒಂದು ಎಕರೆಗೆ 8 ಕೋಟಿ ರೂ. ಅಗಲಿದೆ ಎಂದು ಹೇಳಿತ್ತು.







