ನಿಧಾನಗತಿಯ ಗಳಿಕೆಯ ನಂತರ ಸುದ್ದಿಯಲ್ಲಿದೆ ‘ಮೈ ವಾಪಸ್ ಆವುಂಗಾ’

Photo Credit : instagram.com
ಬಹುತೇಕ ಸಿನಿಮಾ ನಿರ್ದೇಶಕರು ದೊಡ್ಡ ಬಾಕ್ಸ್ ಆಫೀಸ್ ಗಳಿಕೆಯನ್ನು ಬೆನ್ನಟ್ಟುತ್ತಿರುವ ಸಂದರ್ಭದಲ್ಲಿ ಇಮ್ತಿಯಾಝ್ ಅಲಿ ಅವರ ನಿರ್ದೇಶನದ ‘ಮೈ ವಾಪಸ್ ಆವುಂಗಾ’ ಸಿನಿಮಾ ಪ್ರೇಕ್ಷಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ.
'ಜಬ್ ವಿ ಮೆಟ್', 'ಲವ್ ಆಜ್ ಕಲ್', 'ರಾಕ್ಸ್ಟಾರ್', 'ಹೈವೇ', 'ತಮಾಶಾ', 'ಜಬ್ ಹ್ಯಾರಿ ಮೆಟ್ ಸೇಜಲ್' ಮತ್ತು 'ಅಮರ್ ಸಿಂಗ್ ಚಮ್ಕಿಲಾ' ಮುಂತಾದ ಚಿತ್ರಗಳ ಮೂಲಕ ಬಾಲಿವುಡ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಇಮ್ತಿಯಾಝ್ ಅಲಿ ಮತ್ತೆ ಸುದ್ದಿಯಲ್ಲಿದ್ದಾರೆ.
ಇಮ್ತಿಯಾಝ್ ಅಲಿ ಅವರ ಇತ್ತೀಚಿನ ಚಿತ್ರ ‘ಮೈ ವಾಪಸ್ ಆವುಂಗಾ’ ತನ್ನ ಹೆಸರಿಗೆ ತಕ್ಕಂತೆ ಬಾಕ್ಸ್ ಆಫೀಸ್ ನಲ್ಲಿ ಎದ್ದು ನಿಂತಿದೆ. ಖಾಲಿ ಚಿತ್ರಮಂದಿರಗಳಿಂದ ಆರಂಭವಾದ ಚಿತ್ರ ಈಗ ಎಲ್ಲರ ಚರ್ಚೆಗೆ ಗ್ರಾಸವಾಗಿದೆ.
ಬಹುತೇಕ ಸಿನಿಮಾ ನಿರ್ದೇಶಕರು ದೊಡ್ಡ ಬಾಕ್ಸ್ ಆಫೀಸ್ ಗಳಿಕೆಯನ್ನು ಬೆನ್ನಟ್ಟುತ್ತಿರುವ ಸಂದರ್ಭದಲ್ಲಿ ಇಮ್ತಿಯಾಝ್ ಅಲಿ ಅವರ ನಿರ್ದೇಶನದ ‘ಮೈ ವಾಪಸ್ ಆವುಂಗಾ’ ಸಿನಿಮಾ ಪ್ರೇಕ್ಷಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಹೀಗಾಗಿ, ಬಿಡುಗಡೆಯ ಸಂದರ್ಭದಲ್ಲಿ ಆರಂಭಿಕ ವಾರದ ಗಳಿಕೆಗೆ ಮಹತ್ವ ನೀಡದೆ, ನಿಧಾನವಾಗಿ ಕಲೆಕ್ಷನ್ ಆಗುವಂತೆ ಮಾಡುವ ಜನಮೆಚ್ಚುಗೆಯ ಮೂಲಕ ಯಶಸ್ಸು ಸಾಧಿಸುವ ಗುರಿ ಹೊಂದಿದ್ದರು.
ಇದೀಗ ದಿಲ್ಲಿ, ಮುಂಬೈ ಮತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿ ಚಿತ್ರವನ್ನು ವೀಕ್ಷಿಸಿ ಹೊರಬರುತ್ತಿರುವ ಪ್ರೇಕ್ಷಕರು ಭಾವುಕರಾಗುತ್ತಿದ್ದಾರೆ. ಚಿತ್ರದ ಕಥಾಹಂದರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಇದೇ ಚಿತ್ರಕ್ಕೆ ಪ್ರಚಾರ ನೀಡಿದೆ.
ಜೂನ್ 12ರಂದು ಬಿಡುಗಡೆಯಾಗಿರುವ ಸಿನಿಮಾ ನಿಧಾನಗತಿಯ ಆರಂಭ ಕಂಡರೂ, ತನ್ನ ಎರಡನೇ ವಾರಾಂತ್ಯದಲ್ಲಿ ಉತ್ತಮ ಬಾಕ್ಸ್ ಆಫೀಸ್ ವಹಿವಾಟನ್ನು ದಾಖಲಿಸಿತು. “ಬೆಂಗಳೂರಿನಂತಹ ನಗರಗಳಲ್ಲಿ ತಮ್ಮ ಸಿನಿಮಾ ನೋಡಲು ಆರು ಗಂಟೆಯ ಶೋಗೆ ಜನರು ಬಂದಿರುವುದು ಕಂಡು ಅಚ್ಚರಿಯಾಗಿತ್ತು” ಎಂದು ಸ್ವತಃ ಇಮ್ತಿಯಾಝ್ ಅಲಿ ಹೇಳಿದ್ದಾರೆ.
ಈ ಸಿನಿಮಾ ಬಿಡುಗಡೆಯಾಗಿ 21ನೇ ದಿನದಂದು ಜಾಗತಿಕವಾಗಿ 77 ಕೋಟಿ ರೂ. ಗಳಿಸಿದೆ. ಪ್ರಸ್ತುತ ಸಿನಿಮಾ ಭಾರತಾದ್ಯಂತ 660 ಶೋಗಳಲ್ಲಿ ಪ್ರದರ್ಶನವಾಗುತ್ತಿದ್ದು, ಈವರೆಗೆ ಒಟ್ಟು 60.85 ಕೋಟಿ ರೂ. ಗಳಿಸಿದೆ.
ಭಾರತದ ವಿಭಜನೆ ಹಾಗೂ ಪ್ರಸ್ತುತ ಕಾಲಘಟ್ಟದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಾಸಿರುದ್ದೀನ್ ಶಾ ಪ್ರಮುಖ ಪಾತ್ರದಲ್ಲಿದ್ದರೆ, ಅವರ ಮೊಮ್ಮಗನಾಗಿ ದಿಲ್ಜಿತ್ ದೋಸಾಂಜ್ ಹಾಗೂ ಅವರ ಯೌವನದ ದಿನಗಳ ಪಾತ್ರದಲ್ಲಿ ವೇದಾಂತ್ ರೈನಾ ನಟಿಸಿದ್ದಾರೆ.
ನಟಿ ಶರ್ವರಿ ಅವರು ವೇದಾಂತ್ ರೈನಾ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ದಿನವಾದ ಶುಕ್ರವಾರ ಕೇವಲ 1.15 ಕೋಟಿ ರೂ. ಗಳಿಸಿದ್ದ ಈ ಚಿತ್ರ, ಶನಿವಾರ ಮತ್ತು ರವಿವಾರ ಕ್ರಮವಾಗಿ 1.85 ಕೋಟಿ ಹಾಗೂ 2.50 ಕೋಟಿ ರೂ.ಗಳನ್ನು ಬಾಚಿಕೊಂಡಿತ್ತು. ಸೋಮವಾರ ಚಿತ್ರದ ಗಳಿಕೆಯಲ್ಲಿ ಕೊಂಚ ಕುಸಿತ ಕಂಡುಬಂದಿದ್ದರೂ, ಮಂಗಳವಾರದ ನಂತರ ಪ್ರೇಕ್ಷಕರಿಂದ ಭಾರಿ ಜನಬೆಂಬಲ ವ್ಯಕ್ತವಾಗಿರುವುದರಿಂದ ಚಿತ್ರದ ಒಟ್ಟಾರೆ ಗಳಿಕೆಯಲ್ಲಿ ಭಾರಿ ಜಿಗಿತ ಕಂಡುಬಂದಿದೆ.
“ಈ ಸಿನಿಮಾ ಜನರ ಹೃದಯದಲ್ಲಿ ಸ್ಥಾನ ಪಡೆಯುತ್ತದೆ ಎಂದು ಮನವರಿಕೆಯಾಗಿತ್ತು. ಬಾಯಿ ಮಾತು ಹರಡುತ್ತಿದ್ದಂತೆ ನಂಬಿಕೆ ದೃಢವಾಯಿತು. ಸಿನಿಮಾದ ಮೇಲೆ ನಂಬಿಕೆ ಇಟ್ಟರೆ ಟೆಂಪ್ಲೇಟ್ಗಳು, ಅಂಕಿಅಂಶಗಳ ಮೇಲೆ ಹೆಚ್ಚು ಗಮನ ಕೊಡಬೇಕಾಗಿಲ್ಲ” ಎಂದು ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ವಿಂಡೋ ಸೀಟ್ ಫಿಲ್ಮ್ಸ್ನ ನಿರ್ಮಾಪಕ ಮೋಹಿತ್ ಚೌಧುರಿ.
https://www.instagram.com/reel/DaQAQJtjj9G/?igsh=MWt2MGxzOXlhZmNzZg==
ಚಿತ್ರ ಬಿಡುಗಡೆಯಾದ ವಾರದ ನಂತರ ಚಿತ್ರದ ಸಹ-ಸಾಹಿತಿಯೂ ಆಗಿರುವ ಇಮ್ತಿಯಾಝ್ ಅಲಿ ಪ್ರದರ್ಶನಗಳಿಗೆ ಹಾಜರಾಗಲು ನಗರದಿಂದ ನಗರಕ್ಕೆ ಪ್ರಯಾಣಿಸಿದರು. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಭೇಟಿಯಾಗಿ ಅಭಿಪ್ರಾಯ ಪಡೆದುಕೊಂಡರು. “ಚಿತ್ರವನ್ನು ಜನರ ಮುಂದಿಟ್ಟು ಅವರೇ ನಿರ್ಧರಿಸಲು ಬಿಡುವುದು ನಮ್ಮ ಉದ್ದೇಶವಾಗಿತ್ತು” ಎನ್ನುತ್ತಾರೆ ಮೋಹಿತ್ ಚೌಧುರಿ.
ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವ ಶಿಬಾಶಿಶ್ ಸರ್ಕಾರ್ ಅವರು ಮಾಧ್ಯಮಗಳಿಗೆ ಹೇಳಿರುವ ಪ್ರಕಾರ, “ಸಾಂಕ್ರಾಮಿಕದ ನಂತರ ಪ್ರೇಕ್ಷಕರ ನಡವಳಿಕೆ ಬದಲಾಗಿದೆ. ಇಂದು ಪ್ರೇಕ್ಷಕರೇ ದೊಡ್ಡ ಮಾರ್ಕೆಟಿಂಗ್ ಸಾಧನ. ಚಿತ್ರದ ಮೇಲೆ ನಂಬಿಕೆ ಇಟ್ಟರೆ ಅವರೇ ಪ್ರಚಾರ ಮಾಡುತ್ತಾರೆ.”






