ಮಲಯಾಳಂ ಭಾಷಾ ಮಸೂದೆ 2025: ಕೇರಳದ ಮಸೂದೆಗೆ ಕನ್ನಡಿಗರಿಂದ ವಿರೋಧ ವ್ಯಕ್ತವಾಗುತ್ತಿರುವುದೇಕೆ?; ಇಲ್ಲಿದೆ ವಿವರ...

ಸಾಂದರ್ಭಿಕ ಚಿತ್ರ (AI)
ಅಕ್ಟೋಬರ್ 6, 2025ರಂದು ಕೇರಳದಲ್ಲಿ ಅಧಿಕಾರದಲ್ಲಿರುವ ಎಲ್ ಡಿಎಫ್ ಸರಕಾರವು ವಿಧಾನಸಭೆಯಲ್ಲಿ ಮಲಯಾಳಂ ಭಾಷಾ ಮಸೂದೆ, 2025 ಅನ್ನು ಮಂಡಿಸಿತು. ಮೂರು ದಿನಗಳ ನಂತರ ವಿಷಯ ಸಮಿತಿಯ ಪರಿಶೀಲನೆಯ ನಂತರ ಮಸೂದೆಯನ್ನು ಅಂಗೀಕರಿಸಲಾಯಿತು. ಮಸೂದೆ ಈಗ ರಾಜ್ಯಪಾಲರ ಅಂಗೀಕಾರಕ್ಕಾಗಿ ಕಾಯುತ್ತಿದೆ.
► ಮಸೂದೆಯಲ್ಲಿ ಏನಿದೆ?
ಮಲಯಾಳಂ ಭಾಷಾ ಮಸೂದೆ 2025 (Malayalam Language Bill, 2025), ಮಲಯಾಳಂ ಅನ್ನು ಕೇರಳದ ಅಧಿಕೃತ ಭಾಷೆಯಾಗಿ ಅಳವಡಿಸಿಕೊಳ್ಳಲು ಮತ್ತು ಸರ್ಕಾರ, ಶಿಕ್ಷಣ, ನ್ಯಾಯಾಂಗ, ಸಾರ್ವಜನಿಕ ಸಂವಹನ, ವಾಣಿಜ್ಯ ಮತ್ತು ಡಿಜಿಟಲ್ ಡೊಮೇನ್ನಾದ್ಯಂತ ಅದರ ಬಳಕೆಯನ್ನು ಕಡ್ಡಾಯಗೊಳಿಸಲು ಪ್ರಯತ್ನಿಸುತ್ತದೆ. ಇದು ಸಾಂವಿಧಾನಿಕ ನಿಬಂಧನೆಗಳಿಗೆ ಒಳಪಟ್ಟಿದ್ದು ಪ್ರಸ್ತುತ ಕೇರಳ ರಾಜ್ಯವು ಇಂಗ್ಲಿಷ್ ಮತ್ತು ಮಲಯಾಳಂ ಎರಡನ್ನೂ ಅಧಿಕೃತ ಭಾಷೆಗಳಾಗಿ ಗುರುತಿಸುತ್ತದೆ. ಕೇರಳದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 10 ನೇ ತರಗತಿಯವರೆಗೆ ಮಲಯಾಳಂ ಕಡ್ಡಾಯವಾಗಿ ಪ್ರಥಮ ಭಾಷೆಯಾಗಲಿದೆ. ಎಲ್ಲಾ ತೀರ್ಪುಗಳು ಮತ್ತು ನ್ಯಾಯಾಲಯದ ವಿಚಾರಣೆಗಳನ್ನು ಹಂತ ಹಂತವಾಗಿ ಮಲಯಾಳಂಗೆ ಭಾಷಾಂತರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇದಲ್ಲದೆ, ಎಲ್ಲಾ ಮಸೂದೆಗಳು ಮತ್ತು ಸುಗ್ರೀವಾಜ್ಞೆಗಳು ಕೂಡಾ ಮಲಯಾಳಂನಲ್ಲಿಯೇ ಇರಲಿವೆ. ಇಂಗ್ಲಿಷ್ನಲ್ಲಿ ಪ್ರಕಟವಾಗುವ ಪ್ರಮುಖ ಕೇಂದ್ರ ಮತ್ತು ರಾಜ್ಯ ಕಾಯ್ದೆಗಳನ್ನು ಮಲಯಾಳಂ ಭಾಷೆಗೆ ಅನುವಾದಿಸಲಾಗುತ್ತದೆ. ಐಟಿ ಕ್ಷೇತ್ರದಲ್ಲಿ ಮಲಯಾಳಂ ಭಾಷೆಯ ಪರಿಣಾಮಕಾರಿ ಬಳಕೆಗಾಗಿ ಮುಕ್ತ ಮೂಲ ಸಾಫ್ಟ್ವೇರ್ ಮತ್ತು ಪರಿಕರಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಮಾಹಿತಿ ತಂತ್ರಜ್ಞಾನ ಇಲಾಖೆಗೆ ವಹಿಸಲಾಗುವುದು.
ಸರ್ಕಾರಿ ಸಚಿವಾಲಯದಲ್ಲಿ ಅಸ್ತಿತ್ವದಲ್ಲಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಅಧಿಕೃತ ಭಾಷೆ) ಇಲಾಖೆಯನ್ನು ಮಲಯಾಳಂ ಭಾಷಾ ಅಭಿವೃದ್ಧಿ ಇಲಾಖೆ ಎಂದು ಮರುನಾಮಕರಣ ಮಾಡಲು ಕರಡು ಕಾನೂನು ಉದ್ದೇಶಿಸಿದೆ. ಸರ್ಕಾರವು ಇದೇ ಇಲಾಖೆಯ ಅಡಿಯಲ್ಲಿ ಮಲಯಾಳಂ ಭಾಷಾ ಅಭಿವೃದ್ಧಿ ನಿರ್ದೇಶನಾಲಯವನ್ನು ಸಹ ರಚಿಸುತ್ತದೆ.
► ಈ ಮಸೂದೆ ಯಾಕಾಗಿ?
ಒಂದು ದಶಕದ ಹಿಂದ ಕೇರಳ ಸರ್ಕಾರವು ಮಲಯಾಳಂ ಭಾಷಾ (Dissemination and Enrichment) ಮಸೂದೆ, 2015 ಪರಿಚಯಿಸಿತ್ತು. ಮಲಯಾಳಂ ಭಾಷೆಯನ್ನು ಅಧಿಕೃತ ಭಾಷೆಯಾಗಿ ಅಳವಡಿಸಿಕೊಳ್ಳಲು ಮತ್ತು ಎಲ್ಲಾ ಅಧಿಕೃತ ಸಂವಹನಕ್ಕಾಗಿ ಬಳಸುವ ಉದ್ದೇಶವನ್ನು ಈ ಮಸೂದೆ ಹೊಂದಿತ್ತು. ಕೇರಳ ವಿಧಾನಸಭೆಯಿಂದ ಅಂಗೀಕರಿಸಲ್ಪಟ್ಟಿದ್ದರೂ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ ಸಿಕ್ಕಿರಲಿಲ್ಲ.
1963 ರ ಅಧಿಕೃತ ಭಾಷಾ ಕಾಯ್ದೆಗೆ ವಿರುದ್ಧವಾದ ನಿಬಂಧನೆಗಳನ್ನು ಒಳಗೊಂಡಿರುವುದರಿಂದ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಲಾಗಿತ್ತು. ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದ ಇತರ ನಿಬಂಧನೆಗಳು, ರಾಷ್ಟ್ರೀಯ ಶೈಕ್ಷಣಿಕ ಪಠ್ಯಕ್ರಮಕ್ಕೆ ಅನುಗುಣವಾಗಿ ತ್ರಿಭಾಷಾ ಸೂತ್ರ ಮತ್ತು 2009 ರ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ನಿಬಂಧನೆಗಳ ಬಗ್ಗೆ ಕೇಂದ್ರ ಸರ್ಕಾರವೂ ಆಕ್ಷೇಪಣೆಗಳನ್ನು ಮಂಡಿಸಿತ್ತು. ಈ ರೀತಿಯ ದೋಷಗಳನ್ನು ತೆಗೆದುಹಾಕಿದ ನಂತರ ಕೇರಳ ಸರ್ಕಾರ ಹೊಸ ಮಸೂದೆಯನ್ನು ತಂದಿದೆ.
► ಕರ್ನಾಟಕ ವಿರೋಧಿಸುತ್ತಿರುವುದೇಕೆ?
ಕೇರಳದಾದ್ಯಂತ ಎಲ್ಲಾ ಶಾಲೆಗಳಲ್ಲಿ ಮಲಯಾಳಂನ್ನು ಕಡ್ಡಾಯ ಪ್ರಥಮ ಭಾಷೆಯನ್ನಾಗಿ ಮಾಡುವ ಪ್ರಸ್ತಾಪದ ಬಗ್ಗೆ ಕರ್ನಾಟಕ ಕಳವಳ ವ್ಯಕ್ತಪಡಿಸಿದೆ. ಕರ್ನಾಟಕ ಸರ್ಕಾರವು ಕೇರಳದ ಈ ಮಸೂದೆಯನ್ನು ವಿರೋಧಿಸಿದ್ದು ಇದು "ಅಸಂವಿಧಾನಿಕ" ಎಂದು ಹೇಳಿದೆ. ಈ ಮಸೂದೆಯು ಕೇರಳದ ಕನ್ನಡ ಮಾತನಾಡುವ ಭಾಷಾ ಅಲ್ಪಸಂಖ್ಯಾತರ ವಿಶೇಷವಾಗಿ ಗಡಿ ಜಿಲ್ಲೆಯ ಕಾಸರಗೋಡಿನಲ್ಲಿ ವಾಸಿಸುವವರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಅಲ್ಲಿನ ಸರ್ಕಾರದ ಪ್ರಸ್ತಾವಿತ ‘ಮಲಯಾಳಿ ಭಾಷಾ ಮಸೂದೆ-2025’ ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ ಎಂದು ಟೀಕಿಸಿದ್ದಾರೆ.
ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ . ಕಾಸರಗೋಡು ಇಂದು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ ಅದು ಭಾವನಾತ್ಮಕವಾಗಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಮಿಳಿತವಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆ ಕನ್ನಡಿಗರೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ಇದೆ. ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
►ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ
ಕೇರಳದ ಕಾಸರಗೋಡು ಮತ್ತು ಇತರ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪ್ರಸ್ತುತ ಶಾಲೆಗಳಲ್ಲಿ ಕನ್ನಡವನ್ನು ತಮ್ಮ ಪ್ರಥಮ ಭಾಷೆಯಾಗಿ ಕಲಿಯುತ್ತಿದ್ದಾರೆ. ಕೇರಳ ಸರಕಾರ ಜಾರಿ ಮಾಡಲಿಚ್ಛಿಸುತ್ತಿರುವ ಮಲಯಾಳಂ ಭಾಷಾ ಮಸೂದೆ ಗಡಿ ಜಿಲ್ಲೆಯಲ್ಲಿ ವಾಸಿಸುವ ಕನ್ನಡ ಮಾತನಾಡುವ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (KBADA) ವಾದಿಸುತ್ತಿದೆ. ಕೇರಳ ಸರ್ಕಾರ ಪ್ರಸ್ತಾಪಿಸಿರುವ ಮಸೂದೆ ಸಂಪೂರ್ಣವಾಗಿ ಸಂವಿಧಾನಬಾಹಿರವಾಗಿದ್ದು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುವ ಹೆಚ್ಚಿನ ಸಂಖ್ಯೆಯ ಕನ್ನಡ ಮಾತನಾಡುವ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಕೆಬಿಎಡಿಎ ಹೇಳಿದೆ.
ಕೆಬಿಎಡಿಎ ನಿಯೋಗವು ಇತ್ತೀಚೆಗೆ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ, ಮಸೂದೆ ತಡೆ ಹಿಡಿಯಲು ಮತ್ತು ಅದರ ಸಮಗ್ರ ಪರಿಶೀಲನೆಗಾಗಿ ಮನವಿ ಸಲ್ಲಿಸಿತು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಶಾಸನವನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗುವುದು ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ.
ಈ ಮಸೂದೆಯು ಭಾರತೀಯ ಸಂವಿಧಾನದ ಅಡಿಯಲ್ಲಿ ರಕ್ಷಿಸಲ್ಪಟ್ಟ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಅಲ್ಪಸಂಖ್ಯಾತ ಭಾಷೆಗಳನ್ನು ಸಂರಕ್ಷಿಸಲು ಮತ್ತು ಮಾತೃಭಾಷೆಯಲ್ಲಿ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು 30, 347, 350, 350A ಮತ್ತು 350B ವಿಧಿಗಳ ಅಡಿಯಲ್ಲಿ ಸುರಕ್ಷತಾ ಕ್ರಮಗಳನ್ನು ಪ್ರಾಧಿಕಾರವು ಸೂಚಿಸಿದೆ ಎಂದು ಪಿಟಿಐ ವರದಿ ಮಾಡಿದೆ.
2017 ರಲ್ಲಿ ರಾಷ್ಟ್ರಪತಿಗಳು ಇದೇ ರೀತಿಯ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದನ್ನು ಮತ್ತು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಹಿಂದೆ ಕೇರಳಕ್ಕೆ ಕಾಸರಗೋಡಿನಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಸಕ್ರಿಯವಾಗಿ ರಕ್ಷಿಸಲು ಸಲಹೆ ನೀಡಿದ್ದನ್ನು ಸಂಸ್ಥೆ ನೆನಪಿಸಿಕೊಂಡಿದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕಾತಿ, ಪೊಲೀಸ್ ಠಾಣೆಗಳು, ರೈಲು ನಿಲ್ದಾಣಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೈನ್ಬೋರ್ಡ್ಗಳಲ್ಲಿ ಕನ್ನಡ ಬಳಕೆ ಮತ್ತು ಕಾಸರಗೋಡಿನಾದ್ಯಂತ ಸಾರ್ವಜನಿಕ ಕಚೇರಿಗಳಲ್ಲಿ ಅಧಿಕೃತ ಸಂವಹನದಲ್ಲಿ ಭಾಷೆಯನ್ನು ಬಳಸುವಂತಹ ಕ್ರಮಗಳನ್ನು ಸಾಂವಿಧಾನಿಕ ನಿಬಂಧನೆಗಳು ಬಯಸುತ್ತವೆ. ಮಲಯಾಳಂ ಅನ್ನು ಕಡ್ಡಾಯ ಪ್ರಥಮ ಭಾಷೆಯಾಗಿ ಜಾರಿಗೊಳಿಸುವುದರಿಂದ ಕನ್ನಡ ಮಾತನಾಡುವ ವಿದ್ಯಾರ್ಥಿಗಳು, ವಿಶೇಷವಾಗಿ ಭಾಷೆಯ ಪರಿಚಯವಿಲ್ಲದವರು ಅನಾನುಕೂಲಕ್ಕೆ ಒಳಗಾಗಬಹುದು . ಇದು ಅವರ ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಭವಿಷ್ಯದ ಅವಕಾಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಕೆಬಿಎಡಿಎ ವಾದಿಸಿದೆ.
ಭಾಷಾ ಅಲ್ಪಸಂಖ್ಯಾತರ ಕಳವಳಗಳನ್ನು ನಿಯಮಿತವಾಗಿ ಪರಿಹರಿಸಲು ಕಾಸರಗೋಡು ಜಿಲ್ಲಾಧಿಕಾರಿಗಳ ಸಮಿತಿಯು ದ್ವೈಮಾಸಿಕ ಸಭೆಗಳನ್ನು ನಡೆಸಬೇಕೆಂದು ನಿಯೋಗವು ಒತ್ತಾಯಿಸಿತು. ಮಸೂದೆಯನ್ನು ಪರಿಶೀಲಿಸಲಾಗುವುದು , ಕಾಸರಗೋಡಿನ ಕನ್ನಡಿಗರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಕೆಬಿಎಡಿಎ ತಿಳಿಸಿದೆ.
►ಕೇರಳ ಸರ್ಕಾರದ ನಿಲುವು ಏನು?
ಈ ಮಸೂದೆಯನ್ನು ಮಂಡಿಸುವಾಗ ಕೇರಳದ ಕಾನೂನು ಸಚಿವ ಪಿ. ರಾಜೀವ್, ತಮಿಳು, ಕನ್ನಡ, ತುಳು ಮತ್ತು ಕೊಂಕಣಿ ಭಾಷೆಗಳನ್ನು ತಮ್ಮ ಮಾತೃಭಾಷೆಯಾಗಿ ಪರಿಗಣಿಸುವ ನಾಗರಿಕರು ಸೇರಿದಂತೆ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಮಸೂದೆ ಪ್ರಯತ್ನಿಸುತ್ತದೆ ಎಂದು ಒತ್ತಿ ಹೇಳಿದ್ದರು. ಭಾಷಾ ಅಲ್ಪಸಂಖ್ಯಾತರಿಗೆ ಇದು ವಿಶೇಷ ನಿಬಂಧನೆಗಳನ್ನು ಒಳಗೊಂಡಿದೆ. ಅವರು ರಾಜ್ಯ ಸರ್ಕಾರದ ಸಚಿವಾಲಯ, ಇಲಾಖಾ ಮುಖ್ಯಸ್ಥರು ಮತ್ತು ಆ ಪ್ರದೇಶಗಳಲ್ಲಿರುವ ರಾಜ್ಯ ಸರ್ಕಾರದ ಎಲ್ಲಾ ಸ್ಥಳೀಯ ಕಚೇರಿಗಳೊಂದಿಗೆ ಪತ್ರವ್ಯವಹಾರಕ್ಕಾಗಿ ತಮ್ಮ ಭಾಷೆಗಳನ್ನು ಬಳಸಲು ಅನುಮತಿಸಲಾಗುತ್ತದೆ . ಇದಲ್ಲದೆ, ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮಕ್ಕೆ ಅನುಗುಣವಾಗಿ ರಾಜ್ಯದ ಶಾಲೆಗಳಲ್ಲಿ ಮಲಯಾಳಂ ಹೊರತುಪಡಿಸಿ ಬೇರೆ ಯಾವುದೇ ಭಾಷೆಯನ್ನು ಮಾತೃಭಾಷೆಯಾಗಿಸಿಕೊಂಡಿರುವ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಭಾಷೆಗಳಲ್ಲಿ ತಮ್ಮ ಶಿಕ್ಷಣ ಮುಂದುವರಿಸಲು ಸಾಧ್ಯವಾಗುತ್ತದೆ. ಮಲಯಾಳಂ ಮಾತೃಭಾಷೆಯಲ್ಲದ ಇತರ ರಾಜ್ಯಗಳು ಮತ್ತು ವಿದೇಶಗಳ ವಿದ್ಯಾರ್ಥಿಗಳಿಗೆ 9, 10 ಮತ್ತು ಹೈಯರ್ ಸೆಕೆಂಡರಿ ಕ್ಲಾಸುಗಳಲ್ಲಿ ಮಲಯಾಳಂ ಭಾಷೆಯಲ್ಲಿ ಪರೀಕ್ಷೆ ಬರೆಯುವುದರಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.







