I-PAC ಮೇಲೆ ಜಾರಿ ನಿರ್ದೇಶನಾಲಯ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ Vs ED; ಇಲ್ಲಿವರೆಗೆ ಏನೇನಾಯ್ತು?

ಮಮತಾ ಬ್ಯಾನರ್ಜಿ | Photo Credit : PTI
ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯ (ED) ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ರಾಜಕೀಯ ತಂತ್ರಗಾರಿಕೆ ಸಂಸ್ಥೆ I-PAC ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ನಡೆದ ED ದಾಳಿ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
I-PAC ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ED, ಘಟನೆಗಳ ಸಂಪೂರ್ಣ ಅನುಕ್ರಮವನ್ನು ವಿವರಿಸಿದ್ದು, ರಾಜ್ಯ ಸರ್ಕಾರದ ಹಸ್ತಕ್ಷೇಪದಿಂದಾಗಿ ನ್ಯಾಯಯುತ ತನಿಖೆ ನಡೆಸುವ ತನ್ನ ಹಕ್ಕಿಗೆ ತಡೆಯೊಡ್ಡಲಾಗಿದೆ ಎಂದು ಆರೋಪಿಸಿದೆ. ಈಡಿ ಈ ವಿಷಯದ ಕುರಿತು ಕೇಂದ್ರ ತನಿಖಾ ದಳ (CBI) ತನಿಖೆಯನ್ನು ಕೋರಿದೆ.
ಇದೇ ವೇಳೆ, ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಾದವನ್ನು ಆಲಿಸದೇ ಯಾವುದೇ ಪ್ರತಿಕೂಲ ಆದೇಶ ಅಥವಾ ನಿರ್ದೇಶನ ನೀಡಬಾರದು ಎಂದು ಕೋರಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಕೇವಿಯಟ್ ಸಲ್ಲಿಸಿದೆ. ನ್ಯಾಯಾಲಯಗಳಲ್ಲಿ ಪ್ರತಿವಾದಿಯ ಅನುಪಸ್ಥಿತಿಯಲ್ಲಿ ಏಕಪಕ್ಷೀಯ ತೀರ್ಪುಗಳನ್ನು ತಡೆಯಲು ಕೇವಿಯಟ್ ಸಲ್ಲಿಸಲಾಗುತ್ತದೆ.
ರಾಜಕೀಯ ಸಲಹಾ ಸಂಸ್ಥೆ I-PAC ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಗುರುವಾರ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ED ದಾಳಿ ವೇಳೆ ಅಲ್ಲಿಗೆ ಧಾವಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಮುಖ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದರು.
ಆ ವೇಳೆ, I-PAC ಕಚೇರಿಯ ಮುಂದೆ ಮಮತಾ ಬ್ಯಾನರ್ಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಪಕ್ಷದ ಹಾರ್ಡ್ ಡಿಸ್ಕ್ಗಳು, ಅಭ್ಯರ್ಥಿಗಳ ಪಟ್ಟಿಗಳನ್ನು ಸಂಗ್ರಹಿಸುವುದು ED ಮತ್ತು ಅಮಿತ್ ಶಾ ಅವರ ಕರ್ತವ್ಯವೇ? ದೇಶವನ್ನು ರಕ್ಷಿಸಲು ಸಾಧ್ಯವಾಗದ ಮತ್ತು ನನ್ನ ಪಕ್ಷದ ಎಲ್ಲಾ ದಾಖಲೆಗಳನ್ನು ಕಿತ್ತುಕೊಳ್ಳುತ್ತಿರುವ The nasty, naughty ಗೃಹ ಸಚಿವರು. ನಾನು ಬಿಜೆಪಿ ಕಚೇರಿಯ ಮೇಲೆ ದಾಳಿ ಮಾಡಿದರೆ ಫಲಿತಾಂಶ ಏನಾಗುತ್ತದೆ?” ಎಂದು ಪ್ರಶ್ನಿಸಿದರು.
“ಒಂದೆಡೆ, ಅವರು ಪಶ್ಚಿಮ ಬಂಗಾಳದಲ್ಲಿ SIR ನಡೆಸುವ ಮೂಲಕ ಮತದಾರರ ಹೆಸರುಗಳನ್ನು ಅಳಿಸುತ್ತಿದ್ದಾರೆ. ಚುನಾವಣೆಗಳ ನೆಪದಲ್ಲಿ ನನ್ನ ಪಕ್ಷದ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ” ಎಂದು ಅವರು ಗುಡುಗಿದರು.
ಆಡಳಿತ ಪಕ್ಷದ ಆಂತರಿಕ ಕಾರ್ಯತಂತ್ರ, ಅಭ್ಯರ್ಥಿಗಳ ಪಟ್ಟಿಗಳು ಮತ್ತು ಗೌಪ್ಯ ಡಿಜಿಟಲ್ ಸಾಮಗ್ರಿಗಳನ್ನು ಪ್ರವೇಶಿಸಲು ED ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಬ್ಯಾನರ್ಜಿ, ಅಂತಹ ಮಾಹಿತಿಗೆ ಹಣಕಾಸು ತನಿಖೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಬೀದಿಗಿಳಿದು ಪ್ರತಿಭಟನೆ
I-PAC ಕಚೇರಿ ಹಾಗೂ ಅದರ ಮುಖ್ಯಸ್ಥರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಯನ್ನು ಖಂಡಿಸಿ ಶುಕ್ರವಾರ ಬೀದಿಗಿಳಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಪಕ್ಷದ ಆಂತರಿಕ ಕಾರ್ಯತಂತ್ರವನ್ನು ಕದಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳುವ ಮೂಲಕ, ದಾಳಿಯ ಸಮಯದಲ್ಲಿ ತಾವು ಹಸ್ತಕ್ಷೇಪ ಮಾಡಿದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಪ್ರತಿಭಟನಾ ಮೆರವಣಿಗೆಯ ನಂತರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, “ನಿನ್ನೆ (ಗುರುವಾರ) ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ನಾನು ಯಾವುದೇ ತಪ್ಪು ಮಾಡಿಲ್ಲ. ನೀವು ನನ್ನನ್ನು ಕೊಲ್ಲಲು ಬಂದಿದ್ದೀರಿ. ನನಗೆ ನನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿದೆ. ನನ್ನ ಪಕ್ಷವೇ ಅಸ್ತಿತ್ವದಲ್ಲಿಲ್ಲದಿದ್ದರೆ, ನಾನು ಜನರಿಗಾಗಿ ಹೇಗೆ ಹೋರಾಡಲಿ?” ಎಂದು ಪ್ರಶ್ನಿಸಿದರು.
“ಅವರು ಕಲ್ಲಿದ್ದಲು ಹಗರಣದ ಹಣದ ಬಗ್ಗೆ ಮಾತನಾಡುತ್ತಾರೆ. ಆದರೆ ಕಲ್ಲಿದ್ದಲು ಹಣವನ್ನು ಯಾರು ತಿನ್ನುತ್ತಾರೆ? ಅದನ್ನು ಹೇಗೆ ತಿನ್ನಲಾಗುತ್ತದೆ? ಇದು ದೇಶದ್ರೋಹಿಗಳ ಮೂಲಕ ನಡೆಯುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಕಲ್ಲಿದ್ದಲು ಹಗರಣದ ಹಣ ಸುವೇಂದು ಅಧಿಕಾರಿ ಮೂಲಕ ಅಮಿತ್ ಶಾ ಅವರಿಗೆ ಹೋಗಿದೆ” ಎಂದು ಆರೋಪಿಸಿದರು.
ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್ ಸಂಸದರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, “ಚುನಾವಣಾ ಆಯೋಗದಲ್ಲಿ ಯಾರು ಕುಳಿತಿದ್ದಾರೆಂದು ನಿಮಗೆ ಗೊತ್ತಿದೆ. ಅವರು ಅಮಿತ್ ಶಾ ಅವರ ಸಹಕಾರ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಜ್ಞಾನೇಶ್ ಕುಮಾರ್ ಮತಗಳನ್ನು ಕಣ್ಮರೆಯಾಗಿಸುತ್ತಿದ್ದರೆ, ನಾನು ಏಕೆ ಸುಮ್ಮನಿರಬೇಕು? ಮತದಾರರ ಹಕ್ಕುಗಳನ್ನು ಕಸಿದುಕೊಂಡರೆ, ನಾನು ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತೇನೆ” ಎಂದು ಎಚ್ಚರಿಸಿದರು.
“ಹರಿಯಾಣ ಮತ್ತು ಬಿಹಾರದಲ್ಲಿ ಅವರು ಬಲವಂತವಾಗಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಬಂಗಾಳದಲ್ಲೂ ಅದೇ ಪ್ರಯತ್ನ ನಡೆಯುತ್ತಿದೆ. ಕಲ್ಲಿದ್ದಲು ಹಗರಣದ ಹಣವನ್ನು ಯಾರು ಪಡೆಯುತ್ತಾರೆ? ಅಮಿತ್ ಶಾ. ಹಣ ಜಗನ್ನಾಥ್ ಚಟ್ಟೋಪಾಧ್ಯಾಯ ಮೂಲಕ ಸುವೇಂದು ಅಧಿಕಾರಿಗೆ ಹೋಗುತ್ತದೆ. ಸುವೇಂದು ಅಧಿಕಾರಿ ಅದನ್ನು ಅಮಿತ್ ಶಾಗೆ ಕಳುಹಿಸುತ್ತಾರೆ” ಎಂದು ಹೇಳಿದರು.
“ನನ್ನ ಬಳಿ ಪೆನ್ ಡ್ರೈವ್ಗಳಿವೆ. ನನ್ನ ಸ್ಥಾನದ ಗೌರವದಿಂದಾಗಿ ನಾನು ಸುಮ್ಮನಿದ್ದೇನೆ. ಒಂದು ಹಂತದವರೆಗೆ ಮಾತ್ರ ನಾನು ಸಹಿಸುತ್ತೇನೆ. ನೆನಪಿಡಿ, ಲಕ್ಷ್ಮಣ ರೇಖೆ ಇದೆ. ನನ್ನ ಮೇಲೆ ಹೆಚ್ಚು ಒತ್ತಡ ಹೇರಬೇಡಿ. ನಾನು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಇಡೀ ದೇಶವೇ ಆಘಾತಕ್ಕೊಳಗಾಗುತ್ತದೆ” ಎಂದು ಮಮತಾ ಎಚ್ಚರಿಕೆ ನೀಡಿದರು.
BSF ಮತ್ತು CISF ಪಡೆಗಳ ಪಾತ್ರದ ಕುರಿತಾಗಿಯೂ ಗೃಹ ಸಚಿವರನ್ನು ಪ್ರಶ್ನಿಸಿದ ಮಮತಾ, ಅಕ್ರಮ ಕಲ್ಲಿದ್ದಲು ಕಳ್ಳಸಾಗಣೆ ತಡೆಯುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಹೈಕೋರ್ಟ್ ಮೆಟ್ಟಿಲೇರಿದ ED
ತಮ್ಮ ಶೋಧ ಕಾರ್ಯಾಚರಣೆಗೆ “ತಡೆ” ಒಡ್ಡಲಾಗಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ED ಶುಕ್ರವಾರ ಕಲ್ಕತ್ತಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತು. ಇದಕ್ಕೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್ ಮತ್ತು I-PAC ಕಲ್ಕತ್ತಾ ಹೈಕೋರ್ಟ್ನಲ್ಲಿ ಪ್ರತಿ-ಅರ್ಜಿಗಳನ್ನು ಸಲ್ಲಿಸಿವೆ.
ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳು ಚುನಾವಣಾ ಯೋಜನೆ ಮತ್ತು ಪ್ರಚಾರ ತಂತ್ರಕ್ಕೆ ಮಾತ್ರ ಸಂಬಂಧಿಸಿದ್ದಾಗಿವೆ. ಇವು ಹಣ ವರ್ಗಾವಣೆ ತಡೆ ಕಾಯ್ದೆ, 2002ರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಟಿಎಂಸಿ ವಾದಿಸಿದೆ. ವಶಪಡಿಸಿಕೊಂಡ ವಸ್ತುಗಳು “ಮುಂಬರುವ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ” ಸಂಬಂಧಿಸಿದ್ದಾಗಿವೆ ಎಂದು ಪಕ್ಷ ತಿಳಿಸಿದೆ.
ಶೋಧದ ವೇಳೆ ಪ್ರಮುಖ ದಾಖಲೆಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ I-PAC ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕುಟುಂಬವು ಹೆಚ್ಚುವರಿ ದೂರುಗಳನ್ನು ಸಲ್ಲಿಸಿದೆ.
ಈ ಆರೋಪಗಳನ್ನು ED ತಿರಸ್ಕರಿಸಿದ್ದು, ತಮ್ಮ ಕ್ರಮಗಳು ಕಾನೂನುಬದ್ಧವಾಗಿದ್ದು ಸರಿಯಾದ ಪ್ರಕ್ರಿಯೆಯಂತೆ ನಡೆದಿವೆ ಎಂದು ಸ್ಪಷ್ಟಪಡಿಸಿದೆ. ಆದರೆ ನ್ಯಾಯಾಲಯದಲ್ಲಿ ಉಂಟಾದ ಗದ್ದಲದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸುವ್ರಾ ಘೋಷ್ ಅವರು ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿದರು. ಇದರಿಂದ ED ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.
ಮಮತಾಗೆ ಕಾನೂನು ನೋಟಿಸ್ ಕಳುಹಿಸಿದ ಸುವೇಂದು
ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ತಮ್ಮ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶುಕ್ರವಾರ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
72 ಗಂಟೆಗಳೊಳಗೆ ಆರೋಪಗಳನ್ನು ಸಾಬೀತುಪಡಿಸಬೇಕು ಎಂದು ಅವರು ಒತ್ತಾಯಿಸಿದ್ದು, ವಿಫಲವಾದಲ್ಲಿ ಮಾನನಷ್ಟಕ್ಕೆ ಸಂಬಂಧಿಸಿದ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
“ED ತನಿಖೆಯಿಂದ ಗಮನ ಬೇರೆಡೆಗೆ ಸೆಳೆಯುವ ಹತಾಶ ಪ್ರಯತ್ನವಾಗಿ ಸಿಎಂ ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಯಾವುದೇ ಸಾಕ್ಷ್ಯವಿಲ್ಲದೆ ನನ್ನನ್ನು ಹಾಗೂ ಗೌರವಾನ್ವಿತ ಗೃಹ ಸಚಿವರನ್ನು ಕಲ್ಲಿದ್ದಲು ಹಗರಣಕ್ಕೆ ಲಿಂಕ್ ಮಾಡಿದ್ದಾರೆ. ಇಂತಹ ಹೇಳಿಕೆಗಳು ಸಾರ್ವಜನಿಕ ಚರ್ಚೆಯ ಘನತೆಯನ್ನು ಹಾಳುಮಾಡುತ್ತವೆ” ಎಂದು ಸುವೇಂದು ಅಧಿಕಾರಿ Xನಲ್ಲಿ ಬರೆದುಕೊಂಡಿದ್ದಾರೆ.
ED ಅಧಿಕಾರಿಗಳ ವಿರುದ್ಧ ಪೊಲೀಸ್ ತನಿಖೆ
ಅರ್ಜಿ ಮತ್ತು ಪ್ರತಿ-ಅರ್ಜಿಗಳ ನಡುವೆಯೇ, ಚುನಾವಣೆಗೆ ಸಂಬಂಧಿಸಿದ ಡೇಟಾ ಕಳ್ಳತನವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಎಫ್ಐಆರ್ಗಳು ದಾಖಲಾಗಿದ್ದು, ದಾಳಿ ವೇಳೆ ದಾಖಲೆಗಳನ್ನು ಕದ್ದಿದ್ದಾರೆ ಎಂಬ ಆರೋಪದ ಮೇಲೆ ED ಅಧಿಕಾರಿಗಳನ್ನು ಕೋಲ್ಕತ್ತಾ ಪೊಲೀಸರು ಗುರುತಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.
CCTV ದೃಶ್ಯಾವಳಿಗಳು, DVR ದಾಖಲೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಲಾಗಿದೆ. ಗುರುತಿಸುವಿಕೆ ಪೂರ್ಣಗೊಂಡ ಬಳಿಕ ನೋಟಿಸ್ಗಳನ್ನು ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ED ಮತ್ತು CRPF ಸಿಬ್ಬಂದಿ ಸರಿಯಾದ ಮಾಹಿತಿ ಇಲ್ಲದೆ ಶೋಧ ನಡೆಸಿದ್ದಾರೆ. ಸ್ಥಳೀಯ ಅಧಿಕಾರಿಗಳಿಗೆ ಅಡ್ಡಿಪಡಿಸಿದ್ದು, ವಾರಂಟ್ಗಳನ್ನು ತೋರಿಸಲು ವಿಫಲರಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಕ್ರಿಮಿನಲ್, ಅತಿಕ್ರಮಣ ಮತ್ತು ಐಟಿ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಈ ಪ್ರಕರಣ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ED ಮತ್ತು ಮಮತಾ ಬ್ಯಾನರ್ಜಿ ನಡುವಿನ ಕಾನೂನು ಸಂಘರ್ಷ ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ.
ED vs ಮಮತಾ ಬ್ಯಾನರ್ಜಿ ಕಾನೂನು ಸಮರ
I-PAC ಕಲ್ಲಿದ್ದಲು ಹಗರಣ ಪ್ರಕರಣದ ತನಿಖೆಗೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಈಡಿ) ಸುಪ್ರೀಂಕೋರ್ಟ್ ನಲ್ಲಿ ಆರ್ಟಿಕಲ್ 32 ಅರ್ಜಿ ಸಲ್ಲಿಸಿದೆ. ಘಟನೆಯ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಯನ್ನು ಕೋರಿದ ಈಡಿ, ನ್ಯಾಯಯುತ ಮತ್ತು ಸ್ವತಂತ್ರ ತನಿಖೆ ನಡೆಸುವ ಹಕ್ಕಿಗೆ ರಾಜ್ಯ ಸರ್ಕಾರ ತಡೆಯೊಡ್ಡಿದೆ ಎಂದು ಹೇಳಿಕೊಂಡಿದೆ.
ಈಡಿ ಪ್ರಕಾರ, ಕಲ್ಲಿದ್ದಲು ಕಳ್ಳಸಾಗಣೆ ತನಿಖೆಗೆ ಸಂಬಂಧಿಸಿದ ವಸ್ತುಗಳನ್ನು ಕಾನೂನುಬದ್ಧವಾಗಿ ಶೋಧ ನಡೆಸದಂತೆ ಮತ್ತು ವಶಪಡಿಸಿಕೊಳ್ಳದಂತೆ ಅಧಿಕಾರಿಗಳನ್ನು ತಡೆಯಲಾಗಿದೆ. ಶೋಧ ವೇಳೆ ಹಿರಿಯ ರಾಜ್ಯ ಅಧಿಕಾರಿಗಳ ಸಮ್ಮುಖದಲ್ಲಿ ಭೌತಿಕ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಆವರಣದಿಂದ ಬಲವಂತವಾಗಿ ತೆಗೆದುಕೊಂಡು ಹೋಗಲಾಗಿದೆ ಎಂದು ಸಂಸ್ಥೆ ಆರೋಪಿಸಿದೆ. ಪೊಲೀಸ್ ಸಿಬ್ಬಂದಿ ಸೇರಿದಂತೆ ರಾಜ್ಯ ಅಧಿಕಾರಿಗಳ ಹಸ್ತಕ್ಷೇಪವು ನ್ಯಾಯಕ್ಕೆ ಅಡ್ಡಿಪಡಿಸುತ್ತದೆ ಮತ್ತು ಅದರ ತನಿಖೆಯ ಸಮಗ್ರತೆಗೆ ಧಕ್ಕೆ ತರುತ್ತದೆ ಎಂದು ಈಡಿ ವಾದಿಸಿದೆ. ಅದೇ ವೇಳೆ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಕೇವಿಯಟ್ ಸಲ್ಲಿಸಿದೆ.







