ಮಂಡ್ಯ | 30 ವರ್ಷಗಳ ನಂತರ ದಾಖಲಾದ ಎಲ್‌ಎಸಿ ಪ್ರಕರಣ : 80 ಕೋಟಿ ರೂ.ಗೂ ಹೆಚ್ಚು ಪರಿಹಾರ ಪಾವತಿಸಲು ಸರಕಾರಕ್ಕೆ ಹೊರೆ

ಬೆಂಗಳೂರು : ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿಯ ಗುತ್ತಲು ಗ್ರಾಮದಲ್ಲಿ 30 ವರ್ಷಗಳ ನಂತರ ಎಲ್‌ಎಸಿ ಪ್ರಕರಣಗಳನ್ನು ದಾಖಲಿಸಿರುವ ಪರಿಣಾಮ ಸುಮಾರು 80 ಕೋಟಿ ರೂ.ಗೂ ಹೆಚ್ಚು ಪರಿಹಾರ ಪಾವತಿಸುವ ಸಂದರ್ಭ ಎದುರಾಗಿದೆ.
ವಿಶೇಷವೆಂದರೆ ಈ ಪ್ರಕರಣವು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ ಒಳಪಡದೇ ಇದ್ದರೂ ಪರಿಹಾರ ಪಾವತಿಸಬೇಕು ಎಂದು ನ್ಯಾಯಾಲಯವು ಹೇಳಿತ್ತು. ವಾಸ್ತವದಲ್ಲಿ ಈ ಪ್ರಕರಣದಲ್ಲಿನ ಜಮೀನನ್ನು ಕೆಐಎಡಿಬಿಯು ಸ್ವಾಧೀನಕ್ಕೆ ಪಡೆದಿರಲಿಲ್ಲ. ಆದರೂ ಪರಿಹಾರ ಪಾವತಿಸಬೇಕು ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಕೆಐಎಡಿಬಿಯು, ಸರಕಾರದ ವಿರುದ್ಧವೇ ಪ್ರಕರಣ ದಾಖಲಿಸಿತ್ತು. ಹೀಗಾಗಿ 80 ಕೋಟಿ ರೂ. ಪರಿಹಾರವನ್ನು ಯಾರು ಪಾವತಿಸಬೇಕು ಎಂಬ ಬಗ್ಗೆ ಸರಕಾರದ ಮಟ್ಟದಲ್ಲೇ ಚರ್ಚೆಗಳು ನಡೆದಿವೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕಂದಾಯ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರ ಅಧ್ಯಕ್ಷತೆಯಲ್ಲಿ 2026ರ ಮಾರ್ಚ್ 5ರಂದು ನಡೆದಿದ್ದ ವಿವಾದ ಪರಿಹಾರ ಮಂಡಳಿಯ ಸಭೆಯಲ್ಲಿ ಈ ಸಂಗತಿ ಕುರಿತು ಚರ್ಚೆಯಾಗಿದೆ. ಈ ಸಭೆಯ ನಡಾವಳಿಗಳು ‘the-file.in’ಗೆ ಲಭ್ಯವಾಗಿವೆ.
ಏನಿದು ಪ್ರಕರಣ?: ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿಯ ಗುತ್ತಲು ಗ್ರಾಮದ ಸರ್ವೇ ನಂಬರ್ 514/16ರ ಹಾಗೂ ಇತರೆಡೆಯಲ್ಲಿ 4-20 ಎಕರೆ ಜಮೀನನ್ನು ಕೈಗಾರಿಕೆ ಅಭಿವೃದ್ಧಿ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿತ್ತು. ಅಧಿಕಾರಿ, ನೌಕರರ ಕರ್ತವ್ಯಲೋಪದಿಂದಾಗಿ 30 ವರ್ಷಗಳ ನಂತರ 09 ಎಲ್‌ಎಸಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಹೀಗಾಗಿ ಈ ಪ್ರಕರಣಗಳಲ್ಲಿ ಸುಮಾರು 80 ಕೋಟಿ ರೂ.ಗೂ ಅಧಿಕ ಪರಿಹಾರ ಪಾವತಿಸುವ ಸಂದರ್ಭ ಎದುರಾಗಿದೆ ಎಂದು ನಡಾವಳಿಯಲ್ಲಿ ವಿವರಿಸಲಾಗಿದೆ.
ಈ 09 ಎಲ್‌ಎಸಿ ಪ್ರಕರಣಗಳನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯೂ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ( ಸಂಖ್ಯೆ 48368/2018, 48369/2018, 48370/2018, 48371/2018, 48372/2018, 48373/2018, 48373/2018, 48375/2018) ದಾಖಲಿಸಿತ್ತು. ಈ ಪ್ರಕರಣಗಳಲ್ಲಿ ಸರಕಾರದಿಂದಲೇ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು.
ಈ ಸಂಬಂಧ 2025ರ ಸೆ.24ರಂದು ಡಿಆರ್‌ಸಿ ಸಭೆ ನಡೆದಿತ್ತು. ಕೆಐಎಡಿಬಿಯು ದಾಖಲಿಸಿದ್ದ ರಿಟ್ ಅರ್ಜಿ ಪ್ರಕರಣಗಳಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮತ್ತು ಈ ಮೇಲ್ಮನವಿಗಳಲ್ಲಿ ಕೆಎಸ್‌ಎಸ್‌ಐಡಿಸಿ ಹಾಗೂ ಸ್ಥಳೀಯ ಪ್ರತಿನಿಧಿಗಳನ್ನು ಪಕ್ಷಕಾರರನ್ನಾಗಿ ಸೇರ್ಪಡೆ ಮಾಡಲು ನಿರ್ಧರಿಸಿತ್ತು. ಈ ನಿರ್ಧಾರವನ್ನು ಅನುಷ್ಠಾನಗೊಳಿಸಲು ಮಂಡ್ಯ ಜಿಲ್ಲಾಧಿಕಾರಿ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿಗೆ ನಿರ್ದೇಶನ ನೀಡಿರುವುದು ನಡಾವಳಿಯಿಂದ ಗೊತ್ತಾಗಿದೆ.
ಹಾಗೆಯೇ ಈ ಪ್ರಕರಣಗಳು ಸರಕಾರದ ಇಲಾಖೆ ಮತ್ತು ಸರಕಾರದ ಸಂಸ್ಥೆಗಳ ಮಧ್ಯೆ ಇರುವ ವ್ಯಾಜ್ಯಗಳಾಗಿವೆ. ಹೀಗಾಗಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಈ ಪ್ರಕರಣವನ್ನು ಮಂಡಿಸಿ ಇತ್ಯರ್ಥಿಪಡಿಸಲು ಸೂಚಿಸಬೇಕು ಎಂದು ರಾಜ್ಯ ಅಡ್ವೋಕೇಟ್ ಜನರಲ್ ಕೂಡ ಸರಕಾರಕ್ಕೆ ಪತ್ರ ಬರೆದಿದ್ದರು.
ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ: ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಅಧಿಕಾರಿ, ನೌಕರರ ವಿರುದ್ಧ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ದೋಷಾರೋಪ ಪಟ್ಟಿ (ಅನುಬಂಧ 1-4) ಸಲ್ಲಿಸಿದ್ದರು. ಈ ಆರೋಪಗಳನ್ನು ಸಮರ್ಥನೆಗೊಳಿಸಲು ಸೂಕ್ತ ದಾಖಲೆಗಳೊಂದಿಗೆ ಜಂಟಿ ಇಲಾಖೆ ವಿಚಾರಣೆ ನಡೆಸಲು ಕಂದಾಯ ಸಚಿವರು ಅನುಮೋದಿಸಿದ್ದರು. ಇದನ್ನಾಧರಿಸಿ ಜಂಟಿ ಇಲಾಖೆ ವಿಚಾರಣೆ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮುಂದಾಗಿದೆಯಾದರೂ ಕೆಲವೊಂದು ಸ್ಪಷ್ಟನೆ ಕೋರಿ ಈ ಕಡತವು ಕಂದಾಯ ಇಲಾಖೆಗೆ ಹಿಂದಿರುಗಿರುವುದು ತಿಳಿದು ಬಂದಿದೆ.
ಈ ಸಭೆಯಲ್ಲಿ ಭಾಗವಹಿಸಿದ್ದ ಮಂಡ್ಯ ಜಿಲ್ಲಾಧಿಕಾರಿ ಭೂ ಸ್ವಾಧೀನಕ್ಕೆ ಸಂಬಂಧಿಸಿ ಕೆಐಡಿಬಿ ಆದೇಶಕ್ಕೆ ರಿಟ್ ಅಪೀಲು ದಾಖಲಿಸಲು ಹೋದಂತಹ ಸಂದರ್ಭದಲ್ಲಿ ಉಚ್ಛ ನ್ಯಾಯಾಲಯವು ಇದು ಎರಡು ಇಲಾಖೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ವಿಲೇ ಮಾಡಿದೆ ಎಂದು ವಿವರಿಸಿದ್ದಾರೆ.
ಸರ್ವೇ ನಂಬರ್ 510 ಮತ್ತು 514ಕ್ಕೆ ಸಂಬಂಧಿಸಿ 4 ಎಕರೆ 20 ಗುಂಟೆ ಜಮೀನನ್ನು 1970ರಲ್ಲಿ ಕಲಂ 4(1)ರಡಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 1973ರಲ್ಲಿ ಕಲಂ 6(1)ರಡಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. 1975ರಲ್ಲಿ ಐ ತೀರ್ಪು ಕೂಡ ಅನುಮೋದನೆಯಾಗಿತ್ತು. ಭೂ ಕೋರಿಕೆ ಇಲಾಖೆಯು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಾಗಿದ್ದು ಕೆಐಎಡಿಬಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಜಿಲ್ಲಾಧಿಕಾರಿಯು ಸಭೆಗೆ ಮಾಹಿತಿ ಒದಗಿಸಿದ್ದರು.
1977ರಲ್ಲೇ ಐ ತೀರ್ಪಿನ ಮೊತ್ತ ಪಾವತಿ- ಪರಿಹಾರ ಮೊತ್ತ ಪಡೆಯದ ಭೂ ಮಾಲಕರು: ಈ ಪ್ರಕರಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 1977ರಲ್ಲಿಯೇ ಐ ತೀರ್ಪಿನ ಮೊತ್ತವನ್ನು ಪಾವತಿಸಿತ್ತು. ಆಧರೆ ಸ್ವಾಧೀನಗೊಂಡ ಜಮೀನಿಗೆ ಸಂಬಂಧಿಸಿ ಭೂ ಮಾಲಕರಿಗೆ ನೋಟೀಸ್ ಕೂಡ ಜಾರಿಗೊಳಿಸಿತ್ತು. ಆದರೆ ಯಾವುದೇ ಭೂ ಮಾಲಕರು ಐ ತೀರ್ಪಿನ ಮೊತ್ತವನ್ನು ಪಡೆದಿರಲಿಲ್ಲ. ಎಕರೆಗೆ 2,025 ರೂ.ಗಳಂತೆ ಮೊತ್ತವನ್ನು ನಿಗದಿಪಡಿಸಿತ್ತು. ಒಟ್ಟು 11,000 ರೂ. ಗಳ ಐ ತೀರ್ಪಿನ ಮೊತ್ತವನ್ನು ಯಾರೂ ಪಡೆದಿರಲಿಲ್ಲ. ಹೀಗಾಗಿ ಈ ಮೊತ್ತವನ್ನು ಖಜಾನೆಗೆ ಜಮೆ ಮಾಡಲಾಗಿತ್ತು. ಹೀಗಾಗಿ ಈ ಸ್ವಾಧೀನ ಪ್ರಕರಣವು ಮುಕ್ತಾಯವಾಗಿತ್ತು ಎಂಬುದು ನಡಾವಳಿಯಿಂದ ತಿಳಿದು ಬಂದಿದೆ.
ಭೂ ಸ್ವಾಧೀನಗೊಂಡ ಜಮೀನನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಎಸ್ಟೇಟ್ ಮ್ಯಾನೇಜರ್ ಗೆ ಹಸ್ತಾಂತರ ಮಾಡಲಾಗಿತ್ತು. ಪ್ರಸ್ತುತ ಈ ಜಮೀನು ಕೆಎಸ್‌ಎಸ್‌ಐಡಿಸಿ ಇಲಾಖೆ ವ್ಯಾಪ್ತಿಯಲ್ಲಿದೆ.
ಈ ಜಮೀನಿನ ಪ್ರಕರಣವು 30 ವರ್ಷಗಳ ಹಳೆಯದು. ಆದರೆ ಈ ಜಮೀನಿಗೆ ಸಂಬಂಧಿಸಿದ ಮಾಲಕರು 30 ವರ್ಷಗಳ ನಂತರ ತಮ್ಮ ಜಮೀನಿಗೆ ಯಾವುದೇ ಪರಿಹಾರ ಪಾವತಿಸಿಲ್ಲ. ಹೀಗಾಗಿ ಪರಿಹಾರ ನೀಡಬೇಕು ಎಂದು ಸರಕಾರಕ್ಕೆ ಕೋರಿದ್ದರು. ಅದರಂತೆ ಉಪ ವಿಭಾಗಾಧಿಕಾರಿಯವರ ಕಚೇರಿಯಲ್ಲಿ ಈ ಹಿಂದೆ ಜರುಗಿದ್ದ ಘಟನಾವಳಿಗಳನ್ನು ಪರಿಶೀಲಿಸದೆಯೇ 2ನೇ ಬಾರಿ ಐ ತೀರ್ಪು ನೋಟೀಸ್ ನೀಡಲಾಗಿತ್ತು. ಎರಡನೇ ಬಾರಿ ನೀಡಿದ್ದ ಐ ತೀರ್ಪಿನ ನೋಟೀಸನ್ನು ಸಿವಿಲ್ ನ್ಯಾಯಾಲಯದಲ್ಲಿ ಕಲಂ 18ರಡಿ ಪ್ರಕರಣವು ದಾಖಲಾಗಿರುವುದು ಗೊತ್ತಾಗಿದೆ. ಉಪ ವಿಭಾಗಾಧಿಕಾರಿಯವರು ಕಲಂ 17 ಎ ರಡಿ ನೀಡಿರುವ ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿರಲಿಲ್ಲ. ಹೀಗಾಗಿ 2009ರಲ್ಲಿ ನ್ಯಾಯಾಲಯದ ಕಟಕಟೆ ಏರಿತ್ತು. 2016ರಲ್ಲಿ ನ್ಯಾಯಾಲಯವು ಆದೇಶ ಹೊರಡಿಸಿತ್ತು.
ಪ್ರಕರಣ ದಾಖಲಾಗಿರುವುದೇ ಅಸಮಂಜಸ: ಈ ಪ್ರಕರಣದಲ್ಲಿ ಭೂ ಸ್ವಾಧೀನದ ಐ ತೀರ್ಪಿನ ಮೊತ್ತವನ್ನು ಯಾರೂ ಪಡೆಯದೇ ನೇರವಾಗಿ ನ್ಯಾಯಾಲಯಕ್ಕೆ ಹೆಚ್ಚುವರಿ ಪರಿಹಾರ ಕೋರಿ ಪ್ರಕರಣ ದಾಖಲಿಸಿರುವುದೇ ಅಸಮಂಜಸವಾಗಿದೆ.
ಅಲ್ಲದೇ ಸಿವಿಲ್ ನ್ಯಾಯಾಲಯದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆಎಸ್‌ಎಸ್‌ಐಡಿಸಿಯನ್ನು ಪಕ್ಷಕಾರರನ್ನಾಗಿ ಮಾಡದೇ ಕೆಐಎಡಿಬಿಯವರನ್ನು ತಪ್ಪಾಗಿ ಪಕ್ಷಕಾರರನ್ನಾಗಿ ಮಾಡಿದೆ. ಅಲ್ಲದೇ ಸಿವಿಲ್ ನ್ಯಾಯಾಲಯದ ಆದೇಶದಲ್ಲಿ ಕೃಷಿ ಜಮೀನನ್ನು ಪರಿವರ್ತಿತಗೊಂಡಿರುವ ಜಮೀನೆಂದು ಪರಿಗಣಿಸಿ ಚದರ ಅಡಿಗೆ 250 ರೂ. ಎಂದು ನಿಗದಿಪಡಿಸಿತ್ತು.
ಸರಕಾರದ ವಿರುದ್ಧವೇ ಪ್ರಕರಣ ದಾಖಲಿಸಿದ ಕೆಐಎಡಿಬಿ
ಈವಿಚಾರವಾಗಿ ವಿಶೇಷ ಭೂ ಸ್ವಾಧೀನಾಧಿಕಾರಿ ಮತ್ತು ಸರಕಾರವೂ ಆಕ್ಷೇಪಗಳನ್ನು ಸಲ್ಲಿಸಿರಲಿಲ್ಲ. ಹೀಗಾಗಿ ನ್ಯಾಯಾಲಯವು ನೀಡಿರುವ ತೀರ್ಪಿನ ಆಧಾರದ ಮೇಲೆ ವಿಶೇಷ ಭೂ ಸ್ವಾಧೀನಾಧಿಕಾರಿಯವರು ಕೆಐಎಡಿಬಿಯವರಿಗೆ ಪರಿಹಾರ ಧನ ಪಾವತಿಸಲು ಪ್ರಸ್ತಾವಿಸಿದೆ. ಕೆಐಎಡಿಬಿಯವರು ಯಾವುದೇ ಜಮೀನನ್ನು ಸ್ವಾಧೀನಪಡಿಸಿಕೊಳ್ಳದೇ ಇರುವ ಕಾರಣ ಯಾವುದೇ ಪರಿಹಾರ ಮೊತ್ತವನ್ನು ನೀಡುವುದಿಲ್ಲ. ಮತ್ತು ಜಮೀನು ಕೂಡ ಹಸ್ತಾಂತರ
ವಾಗಿಲ್ಲ ಎಂದು ಸರಕಾರದ ವಿರುದ್ಧವೇ ಕೆಐಎಡಿಬಿಯು ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್, ಸರಕಾರದಿಂದಲೇ ಪರಿಹಾರ ನೀಡಬೇಕು ಎಂದು 2021ರಲ್ಲಿ ಆದೇಶಿಸಿತ್ತು. ಈ ಪ್ರಕರಣಗಳಲ್ಲಿ ಎಲ್‌ಎಸಿ ಆದೇಶಗಳ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ಎಂಎಫ್‌ಎ ಪ್ರಕರಣಗಳನ್ನೂ ದಾಖಲಿಸಿತ್ತು. ಈ ಪ್ರಕರಣಗಳ ಮೌಲ್ಯ 10 ಲಕ್ಷಕ್ಕಿಂತ ಕಡಿಮೆ ಇದ್ದು ಸಿವಿಲ್ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಬೇಕು ಎಂದು ಆದೇಶಿಸಿತ್ತು. ಅದರಂತೆ ಸಿವಿಲ್ ನ್ಯಾಯಾಲಯದಲ್ಲಿ ಅಪೀಲು ಪ್ರಕರಣಗಳನ್ನು ದಾಖಲಿಸಿತ್ತು.
ಈ ಪ್ರಕರಣಗಳಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆಎಸ್‌ಎಸ್‌ಐಡಿಯನ್ನು ಪಕ್ಷಕಾರರನ್ನಾಗಿ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆಯು 2026ರ ಮಾರ್ಚ್ 16ಕ್ಕೆ ನಿಗದಿಯಾಗಿತ್ತು. ಈ ಕುರಿತು ವರದಿ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಸೂಚಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.






