ತಮ್ಮ ಜಾತಿಯ ಅಸ್ಮಿತೆಗಾಗಿ ಹೋರಾಡುತ್ತಿರುವ ‘ಮನ್ಸ’ರು

ಮನ್ಸ ಎನ್ನುವುದು ಒಂದು ಆದಿವಾಸಿ ಬುಡಕಟ್ಟು. ಆದರೆ ಜಾತಿಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಆದಿಕರ್ನಾಟಕ, ಆದಿದ್ರಾವಿಡ, ಹಸಲರು ಮುಂತಾಗಿ ಇಷ್ಟೂ ಕಾಲ ಜಾತಿ ಪ್ರಮಾಣಪತ್ರ ಪಡೆದು ಅಷ್ಟಿಷ್ಟು ಸವಲತ್ತು ಪಡೆಯುತ್ತಿದ್ದ ಮನ್ಸ ಜಾತಿಯವರು ತಮ್ಮ ಅಸ್ಮಿತೆಗಾಗಿ ಕಳೆದ ಮೂರು ದಶಕಗಳಿಂದ ಹೋರಾಟ ಮಾಡುತಿದ್ದಾರೆ. ‘ಮನ್ಸ’ ಎಂಬ ಜಾತಿಗೆ ಅಸ್ಪಶ್ಯ ಜಾತಿಯ ಕಳಂಕ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇಲ್ಜಾತಿಗಳು ‘ಮನ್ಸ’ರನ್ನು ತೀರಾ ನಿಕೃಷ್ಟವಾಗಿ ಕಾಣುವುದರಿಂದ ಇವರು ಕೆಲವು ಪ್ರದೇಶಗಳಲ್ಲಿ ತಮ್ಮ ಜಾತಿಯ ಗುರುತನ್ನು ಗುಟ್ಟಾಗಿ ಮರೆಮಾಚುವುದರಿಂದ ಈ ಜಾತಿಗೆ ಪ್ರತ್ಯೇಕ ಅಸ್ಮಿತೆ ಸಿಗದಿರುವುದಕ್ಕೆ ಕಾರಣವಾಗಿದೆ.
‘‘ನಮ್ಮ ಹೆಣ್ಣನ್ನು ಸಾಕಿ ಸಲಹಿ ಇಷ್ಟು ಬೆಳೆಸಿದ್ದೇವೆ. ಇನ್ನು ಮುಂದಕ್ಕೆ ಸರಿಯಾಗಿ ನೋಡಿಕೊಳ್ಳುವ ಕೆಲಸ ನಿನ್ನದು, ಇಲ್ಲವಾದರೆ ನಿನ್ನ ಕೈಕಾಲು ಮುರಿದು ಹಾಕಿಯೇವು..’’
ಹೆಣ್ಣಿನ ಕಡೆಯವರು ಗಂಡಿಗೆ ಹೇಳುವ ಎಚ್ಚರಿಕೆಯ ಮಾತುಗಳಿವು! ಧಾರೆಯ ಬಳಿಕ ಹೆಣ್ಣನ್ನು ಗಂಡನ ಮನೆಗೆ ಕಳಿಸುವಾಗ ಎರಡೂ ಕುಟುಂಬಗಳ ನಡುವೆ ಪರಸ್ಪರ ನಡೆಯುವ ದಾಂಪತ್ಯ ಬಗೆಗಿನ, ಶೃಂಗಾರದ, ಮಧುರ ಸಂಭಾಷಣೆಗಳಲ್ಲಿ, ಹಾಸ್ಯೋಕ್ತಿಗಳು, ಹೊಗಳಿಕೆಗಳು, ಸ್ವಾರಸ್ಯಕರ ಬೈಗುಳಗಳು, ನೀತಿ ಮಾತುಗಳ ನಡುವೆ ಇಂತಹ ಎಚ್ಚರಿಕೆಯ ಮಾತುಗಳೂ ಇರುತ್ತವೆ.
‘ಮನ್ಸ’ ಸಮುದಾಯದ ಕುರಿತು ಅಧ್ಯಯನ ಮಾಡುತ್ತಿದ್ದಾಗ ಇಂತಹ ಸ್ವಾರಸ್ಯಕರ ಮತ್ತು ಈ ಸಮುದಾಯದಲ್ಲಿ ಹೆಣ್ಣಿನ ಬಗ್ಗೆ ಇರುವ ವಿಶೇಷ ಕಾಳಜಿಯ ವಿಷಯಗಳು ಗಮನ ಸೆಳೆದವು.
ಬಹುತೇಕ ದಕ್ಷಿಣ ಕನ್ನಡ ಮತ್ತು ಉಡುಪಿ ಜೆಲ್ಲೆಗಳಲ್ಲಿ ನೆಲೆಸಿರುವ ಮನ್ಸರು ಮೂಲತಃ ಅಸ್ಪಶ್ಯರು. ಮನ್ಸ ಎಂದರೆ ತೀರಾ ಕೀಳಾಗಿ ಕಾಣುವುದರಿಂದ ತಮ್ಮನ್ನು ಮನ್ಸ ಎಂದು ಕರೆದುಕೊಳ್ಳಲು ಹಿಂಜರಿದು, ಒಂದು ಹಂತದಲ್ಲಿ ತಮ್ಮನ್ನು ‘ಆದಿದ್ರಾವಿಡ’ ಎಂದು ಕರೆದುಕೊಳ್ಳಲು ಆರಂಭಿಸಿದರು. ಆನಂತರ ಆದಿದ್ರಾವಿಡ ಎನ್ನುವುದು ಒಂದು ಜಾತಿಯ ಅಸ್ಮಿತೆಯಲ್ಲ, ಆದಿದ್ರಾವಿಡ ಎನ್ನುವುದು ಕೆಲ ಜಾತಿಗಳ ಸಮೂಹ ಎಂದು ಮನದಟ್ಟಾದ ಮೇಲೆ ಕೆಲವು ಮಂದಿ ವಿದ್ಯಾವಂತರು ಮತ್ತು ಪ್ರಜ್ಞಾವಂತರು ತಮ್ಮನ್ನು ಮನ್ಸ ಎಂದೇ ಕರೆದುಕೊಳ್ಳತೊಡಗಿದರು. ಇದು ಇಂದು ವ್ಯಾಪಕವಾಗುತ್ತಿದೆ. ‘‘ನಾವು ಮೂಲತಃ ಮನ್ಸರು, ನಮ್ಮ ಜಾತಿಯ ಹೆಸರು ದೊಡ್ಡ ಜಾತಿಗಳ ಬಾಯಲ್ಲಿ ಹೇಯಕರ ಮತ್ತು ನಿಂದನಾತ್ಮಕವಾಯಿತು, ಆದ್ದರಿಂದ ನಮ್ಮಲ್ಲಿ ಕೆಲವರು ಹಿಂಜರಿದು ನಮ್ಮ ಮೂಲ ಜಾತಿಯ ಹೆಸರನ್ನು ಹೇಳಿಕೊಳ್ಳದೆ ಮರೆಮಾಚಿ ‘ಆದಿದ್ರಾವಿಡ’ ಎಂದು ಕರೆದುಕೊಂಡರು. ನಮ್ಮ ಜಾತಿಯಂತೆಯೇ ಕೀಳಾಗಿ ಕರೆಯಲಾಗುವ ಹೊಲೆಯ, ಮಾದಿಗ, ಹಜಾಮ, ದರ್ವೇಸಿ, ಹಲಾಲ್ ಕೋರ್, ದೋಭಿ ಮುಂತಾಗಿ ಕರೆಸಿಕೊಳ್ಳುತ್ತಿದ್ದವರು, ಒಂದು ಕಾಲದಲ್ಲಿ ಹೀಗೇ ತಮ್ಮ ಜಾತಿ ಹೆಸರೇಳಲು ಹಿಂಜರಿದವರು, ಇಂದು ತಮ್ಮ ಜಾತಿಯನ್ನು ಎದೆತಟ್ಟಿ ಹೇಳಿಕೊಳ್ಳುತ್ತಾರೆ. ಈಗೀಗ ಸ್ಪಶ್ಯ ಸಮಾಜದವರು ಈ ಸಮುದಾಯಗಳ ಹೆಸರನ್ನು ಗೌರವದಿಂದ ಸ್ವೀಕರಿಸಲು ತೊಡಗಿದ್ದಾರೆ. ಇದೆಲ್ಲ ಡಾ. ಅಂಬೇಡ್ಕರ್ ಅವರು ಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟದ ಫಲ ಮತ್ತು ಸಂವಿಧಾನ ನೀಡಿದ ಆತ್ಮಗೌರವದಿಂದ ಸಾಧ್ಯವಾಗಿದೆ. ಹೀಗಿದ್ದಾಗ ನಾವೇಕೆ ನಮ್ಮ ಜಾತಿಯ ಬಗ್ಗೆ ನಾವೇ ಕೀಳರಿಮೆ ಬೆಳೆಸಿಕೊಳ್ಳಬೇಕು? ನಮ್ಮ ಜಾತಿಗೂ ಒಂದು ಅಸ್ಮಿತೆ ಸಿಗುವ ಕಡೆ ಬಾಬಾಸಾಹೇಬರು ಹಾಕಿಕೊಟ್ಟ ಅರಿವಿನ ಹಾದಿಯಲ್ಲಿ ಮುನ್ನಡೆಯೋಣ..’’ ಎಂದು ಮನ್ಸ ಸಂಘಟನೆಯ ಮುಖ್ಯಸ್ತರಲ್ಲಿ ಒಬ್ಬರಾದ ಅಚ್ಯುತ ಹೇಳುತ್ತಾರೆ.
ನಾನು ಆಯೋಗದಲ್ಲಿದ್ದಾಗ ಇದೇ ಸಮಸ್ಯೆ ಹೊತ್ತು ಮನ್ಸ ಸಮುದಾಯದವರು ಆಯೋಗಕ್ಕೆ ಬಂದಿದ್ದರು. ಮನ್ಸ ಸಮುದಾಯ ಅಸ್ಪಶ್ಯ ಸಮುದಾಯವಾಗಿದ್ದರಿಂದ ಅದು ನಮ್ಮ ಆಯೋಗದ ವ್ಯಾಪ್ತಿಗೆ ಬರುತ್ತಿರಲಿಲ್ಲ. ಆದರೂ ಮನ್ಸ ಎನ್ನುವ ಹೆಸರೇ ಕುತೂಹಲ ಹುಟ್ಟಿಸಿದರಿಂದ ನಾನು ಅವರನ್ನು ಕೂರಿಸಿ ಮಾತಾಡಿಸಿದ್ದೆ. ‘‘ಮನ್ಸ ಅನ್ನುವುದು ಜಾತಿ ಅಲ್ಲ, ಅದು ಮನುಜ ಕುಲದ ಹೆಸರು.. ಹೀಗಿರುವಾಗ ಮನ್ಸ ಅನ್ನುವುದು ಹೇಗೆ ಕೀಳರಿಮೆಯಾಗುತ್ತೆ..?’’ ಎಂದಿದ್ದೆ. ಅದಕ್ಕವರು ‘‘ನಿಜ ಸಾರ್.. ನಮಗೆ ಜಾತಿಯ ಗೊಡವೆಯೇ ಬೇಡ, ನಾವು ಮನುಷ್ಯರಾಗಿಯೇ ಇದ್ದು ಬಿಡೋಣ ಎಂದು ‘ಮನ್ಸ’ ಅಂತ ಇಟ್ಟುಕೊಂಡರೆ ಜಾತಿಯನ್ನೇ ನೀತಿಯನ್ನಾಗಿ ಮಾಡಿಕೊಂಡ ಜಾತಿಜಾಡ್ಯ ಬಡಿದವರು ಅದನ್ನೇ ಜಾತಿಯ ಹೆಸರಾಗಿ ಮಾಡಿಬಿಟ್ಟರು’’ ಎಂದು ಹೇಳಿ ನಕ್ಕಿದ್ದರು.
ಮನ್ಸ ಎನ್ನುವುದು ಒಂದು ಆದಿವಾಸಿ ಬುಡಕಟ್ಟು. ಆದರೆ ಜಾತಿಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಆದಿಕರ್ನಾಟಕ, ಆದಿದ್ರಾವಿಡ, ಹಸಲರು ಮುಂತಾಗಿ ಇಷ್ಟೂ ಕಾಲ ಜಾತಿ ಪ್ರಮಾಣಪತ್ರ ಪಡೆದು ಅಷ್ಟಿಷ್ಟು ಸವಲತ್ತು ಪಡೆಯುತ್ತಿದ್ದ ಮನ್ಸ ಜಾತಿಯವರು ತಮ್ಮ ಅಸ್ಮಿತೆಗಾಗಿ ಕಳೆದ ಮೂರು ದಶಕಗಳಿಂದ ಹೋರಾಟ ಮಾಡುತಿದ್ದಾರೆ. ‘ಮನ್ಸ’ ಎಂಬ ಜಾತಿಗೆ ಅಸ್ಪಶ್ಯ ಜಾತಿಯ ಕಳಂಕ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇಲ್ಜಾತಿಗಳು ‘ಮನ್ಸ’ರನ್ನು ತೀರಾ ನಿಕೃಷ್ಟವಾಗಿ ಕಾಣುವುದರಿಂದ ಇವರು ಕೆಲವು ಪ್ರದೇಶಗಳಲ್ಲಿ ತಮ್ಮ ಜಾತಿಯ ಗುರುತನ್ನು ಗುಟ್ಟಾಗಿ ಮರೆಮಾಚುವುದರಿಂದ ಈ ಜಾತಿಗೆ ಪ್ರತ್ಯೇಕ ಅಸ್ಮಿತೆ ಸಿಗದಿರುವುದಕ್ಕೆ ಕಾರಣವಾಗಿದೆ.
‘ಮನ್ಸ’ ಜಾತಿಯನ್ನು ಅನೇಕ ಮಂದಿ ಮಾನವಶಾಸ್ತ್ರೀಯ ಸಂಶೋಧಕರು ಗುರುತಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಹೊರತಂದಿರುವ ದಿವಂಗತ ಡೀಕಯ್ಯನವರು ಬರೆದ ‘ತುಳುನಾಡಿನ ಮನ್ಸರು: ಒಂದು ಜನಾಂಗಿಕ ಅಧ್ಯಯನ’ ಎಂಬ ಪುಸ್ತಕದಲ್ಲಿ ಮನ್ಸರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಐತಿಹಾಸಿಕ ವಿವರಗಳಿವೆ. ಅಂತೆಯೇ ಡಾ. ವಾಮನ ನಂದಾವರ ಅವರ ಕರ್ನಾಟಕ ಬುಡಕಟ್ಟುಗಳು, ಪ್ರೊ.ಲಕ್ಕಪ್ಪಗೌಡರು ಸಂಪಾದಿಸಿರುವ ಕರ್ನಾಟಕ ಬುಡಕಟ್ಟುಗಳು ಸಂಪುಟ: ಒಂದು, ಕೆ.ಎಸ್.ಸಿಂಗ್ ಅವರ ಪ್ಯೂಪಿಲ್ಸ್ ಆಫ್ ಇಂಡಿಯಾ ಪ್ರಾಜೆಕ್ಟ್ - 1998, ಆರ್.ಜಿ . ಕಾಕಡೆಯವರ ಡಿಪ್ರೆಸ್ಡ್ ಕ್ಲಾಸಸ್ ಆಫ್ ಸೌತ್ ಕೆನರ, ಎಲ್.ಜೆ.ಹಾವನೂರು ವರದಿ, ಜಸ್ಟಿಸ್ ಸದಾಶಿವ ವರದಿಯಲ್ಲೂ ‘ಮನ್ಸ’ ಸಮುದಾಯದ ಬಗ್ಗೆ ಮಾಹಿತಿಗಳಿವೆ. ಇಷ್ಟಾದರೂ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಮನ್ಸರನ್ನು ಸೇರಿಸದಿರುವುದು ಅಧಿಕಾರಿಗಳು ತಮ್ಮ ಅಜ್ಞಾನದಿಂದ ಮಾಡಿರುವ ಅಚಾತುರ್ಯವಷ್ಟೆ. ಇದರಿಂದಾಗಿ ಸಂಕಷ್ಟ ಅನುಭವಿಸುತ್ತಿರುವವರು ಮಾತ್ರ ಮುಗ್ಧ ಮನ್ಸರು.
ಮೇರರು, ಮುಂಡಾಲರು, ಬಾಕುಡ ಮತ್ತು ಮನ್ಸರು ಹೊಲೆಯರಲ್ಲಿನ ಒಂದು ವರ್ಗ ಎಂದು ಪರಿಗಣಿಸುತ್ತಾರೆ. ಇವರನ್ನೇ ಕೇರಳದಲ್ಲಿ ಪುಲವರು, ಪುಲಯರು, ಪೊಲವರ್ ಎಂತಲೂ ಕರೆಯುತ್ತಾರೆ. ಮನ್ಸರನ್ನು ಧಿಕ್ಕ ಎಂತಲೂ ಅತ್ಯಂತ ನಿಕೃಷ್ಟವಾಗಿ ಕರೆಯುತ್ತಾರೆ. ಮೂಲತಃ ಈ ಸಮುದಾಯವನ್ನು ಜೀತದ ಆಳುಗಳಾಗಿ ಇಟ್ಟುಕೊಂಡು ಕೃಷಿಗೆ ಸಂಬಂಧಿಸಿದ, ಮನೆ ಚಾಕರಿಯ, ದನಕರು ಮೇಯಿಸುವ ಕಷ್ಟದ ಕೆಲಸಗಳಲ್ಲಿ ಕೂಲಿಯಾಳುಗಳಾಗಿಯೂ ಬಳಸುತ್ತಾರೆ.
ಮೂಲದ ಧಿಕ್ಕ ನೀರು ಕುಡಿದ ಅಂಗಳದ ಒಪ್ಪಿಗೆ ಇಲ್ಲದೆ ಮತ್ತೊಂದು ಅಂಗಳದ ಕೆಲಸಕ್ಕೆ ಹೋಗುವಂತಿಲ್ಲ. ಲಾಭವೇ ಆಗಲಿ ನಷ್ಟವೇ ಆಗಲಿ ಧಿಕ್ಕನ ಮಕ್ಕಳು ನೀರು ಕುಡಿದ ಅಂಗಳವನ್ನು ಯಾವ ಕಾರಣಕ್ಕೂ ಮರೆಯುವಂತಿಲ್ಲ. ಅವನ ಒಡೆಯನ ದುಃಖ, ನೋವು, ಕಷ್ಟ ಕಟ್ಟಳೆಗಳಲ್ಲಿ ತಾನೂ ಮೀಯಬೇಕು. ಮೂರೂ ಹೊತ್ತು ಅಲ್ಲೇ ಬಿಟ್ಟಿ ಚಾಕರಿ ಮಾಡುತ್ತಾ ಬದುಕು ಸವೆಸಬೇಕು. ಇಲ್ಲದಿದ್ದಲ್ಲಿ ಒಡೆಯನ ಮನೆಯವರ ಬೈಗುಳ, ಹೊಡೆತಗಳನ್ನು ಕಲ್ಪಿಸಿಕೊಳ್ಳಲಸಾಧ್ಯ. ಈ ವಿಷಯದಲ್ಲಿ ಮನ್ಸರ ಅಸಹಜ ಸಾವುಗಳೂ ಕೂಡ ತೀರಾ ಭೀಕರವಾಗಿರುತ್ತವೆ!
ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಯನ್ನು ಮತ್ತೊಮ್ಮೆ ತಿರುವಿಹಾಕಿ, ಮನ್ಸ ಸಮುದಾಯದ ಚೋಮನ ಬದುಕು ನಿಮ್ಮ ಮುಂದೆ ದಾರುಣವಾಗಿ ತೆರೆದುಕೊಳ್ಳುತ್ತದೆ. ನೀರಿನಲ್ಲಿ ಮುಳುಗುತ್ತಿದ್ದ ಚೋಮನ ಮಗ ನೀಲನನ್ನು ನೋಡಿದ ಬ್ರಾಹ್ಮಣ ಮಾಣಿಯೋರ್ವ ಮರುಕಪಟ್ಟು ನೀರಿನಿಂದ ಮೇಲಕ್ಕೆಳೆದು ಹಾಕಲು ನೋಡಿದರೆ ಎದುರಾದ ಸಮಸ್ಯೆಯಾದರೂ ಏನು..? ಮುಳುಗುವ ಮನ್ಸರ ಕುಟ್ಟಿಯನ್ನು ಮುಟ್ಟಿದರೆ ಬ್ರಾಹ್ಮಣ್ಯಕ್ಕೆ ಮಾಸದ ಮೈಲಿಗೆಯಾದಂತೆ ಎಂದು ಆತನನ್ನು ಹೆದರಿಸಿದರೇ ಹೊರತು ಪ್ರಾಣರಕ್ಷಣೆಯ ಮಾನವೀಯತೆಯನ್ನು ಅಲ್ಲಿನ ವೈದಿಕರು ಮೆರೆಯಲಿಲ್ಲ! ‘‘ಮನ್ಸ ಬಿಟ್ಟು ಇತರ ಯಾವ ಕರಟಿಹೋದ ಜಾತಿಯವನಾಗಿದ್ದರೂ ನನ್ನ ಮಗ ನೀಲ ಬದುಕುಳಿಯುತ್ತಿದ್ದ..’’ ಎಂದು ಚೋಮ ತನ್ನ ಜಾತಿಯನ್ನೇ ಶಪಿಸಿಕೊಳ್ಳುವ ದೃಶ್ಯ ಇಡೀ ಜಾತಿಗ್ರಸ್ಥರ ಮನಸ್ಸಿಗೇ ಬೆಂಕಿ ಇಟ್ಟಂಗಾಗುತ್ತದೆ.
ಇಷ್ಟೆಲ್ಲ ಅಸ್ಪಶ್ಯತೆಯ ನೋವುಗಳನ್ನು ಅನುಭವಿಸಿದರೂ ಈ ಸಮುದಾಯ ಸಾಂಸ್ಕೃತಿಕವಾಗಿ ಒಂದಷ್ಟು ಶ್ರೀಮಂತಿಕೆಯಿಂದ ಕೂಡಿದೆ ಅನ್ನಬಹುದು. ಮನ್ಸರಲ್ಲಿ ಭೂತಾರಾಧನೆ ಅತಿ ಮುಖ್ಯ ಆರಾಧನೆ. ಇವರ ಹಬ್ಬಗಳು, ಅವೈದಿಕ ಪರಂಪರೆಯ ಆಚರಣೆಗಳು ಸಾಂಸ್ಕೃತಿಕವಾಗಿ ಅನನ್ಯವಾಗಿವೆ. ಅಂತೆಯೇ ತುಳುನಾಡಿನ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಹೋರಾಡಿದ ಮನ್ಸ ಕುಲದ ಅವಳಿಗಳಾದ ‘ಕಾನದ-ಕಟದ’ ಎಂಬ ಸಾಂಸ್ಕೃತಿಕ ವೀರರ ಇತಿಹಾಸ ಇಡೀ ತುಳುನಾಡಿನಲ್ಲೇ ಪ್ರಸಿದ್ಧವಾದುದು. ಇಷ್ಟೆಲ್ಲ ಹಿನ್ನೆಲೆಯುಳ್ಳ ಮನ್ಸರು ಇಂದು ಧ್ವನಿ ಇಲ್ಲದವರಾಗಿರುವುದು ದುರಂತ!
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ತಮ್ಮ ಮನ್ಸ ಜಾತಿಯ ಹೆಸರು ಸೇರಿಸಿ ತಮಗೊಂದು ಅಸ್ಮಿತೆ ನೀಡಬೇಕೆಂದು ಅನೇಕ ವರ್ಷಗಳಿಂದ ಬಂದಬಂದ ಸರಕಾರಗಳನ್ನೆಲ್ಲ ಮನ್ಸರು ಅಂಗಲಾಚುತ್ತಿದ್ದಾರೆ. ‘ಅಹಿಂದ’ ನಾಯಕ ಸಿದ್ದರಾಮಯ್ಯನವರನ್ನು ಭೇಟಿಯಾಗಲು ದೂರದ ಮೂಡಬಿದಿರೆಯಿಂದ ಅನೇಕ ಸಲ ಬಂದ ಮನ್ಸ ಸಮುದಾಯದ ನಿಯೋಗಕ್ಕೆ ಸಾಮಾಜಿಕ ನ್ಯಾಯದ ಹರಿಕಾರ, ‘ಜನಪ್ರಿಯ’ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಲೂ ಆಗದೆ ಸೋತು ಬರಿಗೈಯಲ್ಲಿ ವಾಪಸಾಗಿದೆ! ಬರುವ ಸರಕಾರಗಳಾದರೂ ಮನ್ಸರನ್ನು ಕನಿಷ್ಠ ಮನುಷ್ಯರಂತೆ ನೋಡುವ ಹೃದಯ ಹೊಂದಬೇಕಿದೆ.







